ಏಕ ದೂರವಾಣಿ ಸಂಖ್ಯೆ ವ್ರತ ಈಗ ಸಾಧ್ಯ!

ಏಕ ದೂರವಾಣಿ ಸಂಖ್ಯೆ ವ್ರತ ಈಗ ಸಾಧ್ಯ!

ಬರಹ

ಇ-ಲೋಕ-14 ( 16/3/2007)

ಏಕ ದೂರವಾಣಿ ಸಂಖ್ಯೆ ವ್ರತ ಈಗ ಸಾಧ್ಯ!
ನಿಮಗೆ ಲ್ಯಾಂಡ್‌ಲೈನ್ ಜತೆಗೆ ಎರಡು ಮೊಬೈಲ್ ಸಂಖ್ಯೆಗಳೂ ಇವೆ ಎಂದಿಟ್ಟುಕೊಂಡರೆ, ಈ ಎಲ್ಲಾ ದೂರವಾಣಿಗಳಿಗೆ ಬರುವ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಿರಬಹುದು. ಕಚೇರಿ ಪ್ರಯಾಣಿಸುವ ವೇಳೆ ಮನೆಯ ದೂರವಾಣಿಗೆ ಬಂದ ಕರೆಗಳನ್ನು ನೀವು ಸ್ವೀಕರಿಸಲಾರಿರಿ. ಒಂದು ಮೊಬೈಲ್ ಮರೆತು ಬಂದರೆ ಅದಕ್ಕೆ ಬಂದ ಕರೆಯೂ ಸ್ವೀಕರಿಸಲಾಗದು.ಈ ಎಲ್ಲಾ ದೂರವಾಣಿಗಳಿಗೂ ಒಂದೇ ಸಂಖ್ಯೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ನಿಮಗನಿಸದೆ ಇರದು. ಗ್ರಾಂಡ್‌ಸೆಂಟ್ರಲ್.ಕಾಮ್ ಎಂಬ ಅಂತರ್ಜಾಲ ತಾಣ ಈ ಸೇವೆ ಒದಗಿಸಲಾರಂಭಿಸಿದೆ. ಈ ತಾಣಕ್ಕೆ ಹೋಗಿ ನೋಂದಾಯಿಸಿಕೊಂಡು,ಒಂದು ಸಂಖ್ಯೆಯನ್ನು ಆಯ್ದುಕೊಂಡರೆ ಸರಿ. ನಿಮ್ಮ ಎಲ್ಲಾ ದೂರವಾಣಿಗಳೂ ಏಕಸಂಖ್ಯೆಯನ್ನು ಹೊಂದುತ್ತವೆ. ಯಾವ ದೂರವಾಣಿಗೆ ಕರೆ ಬಂದರೂ, ಎಲ್ಲಾ ದೂರವಾಣಿಗಳೂ ಕಿರುಗುಡುತ್ತವೆ. ನೀವು ಉತ್ತರಿಸದಿದ್ದರೆ, ಧ್ವನಿಸಂದೇಶ ಸ್ವೀಕೃತವಾಗಿ, ಅದನ್ನೂ ಯಾವುದೇ ದೂರವಾಣಿಯಿಂದ ಸ್ವೀಕರಿಸಬಹುದು. ಅಂತರ್ಜಾಲ ತಾಣದಲ್ಲೂ ಈ ಮುದ್ರಿಕೆಗಳನ್ನು ಆಲಿಸುವ ಸೌಲಭ್ಯ ಸಿಗುತ್ತದೆ.ದೂರವಾಣಿಯ ಕಾಲರ್‌ಐಡಿಯಲ್ಲಿ ದಾಖಲಾದ ಸಂಖ್ಯೆಗಳಿಂದ ಕರೆ ಬಂದರೆ, ಅದು ಯಾರ ಕರೆ ಎಂದು ಉಲಿತವೂ ಕೇಳುತ್ತದೆ.ಸದ್ಯ ಸೇವೆ ಅಮೆರಿಕಾದಲ್ಲಿ ಮಾತ್ರಾ ಲಭ್ಯ.

ಕನ್ನಡದಲ್ಲಿ ಅಂತರ್ಜಾಲ ಶೋಧಿಸಿ
ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಕನ್ನಡದ ಪುಟಗಳು ಹೆಚ್ಚುತ್ತಿವೆ. ಕನ್ನಡದ ಪುಟಗಳ ಮಾಹಿತಿಯನ್ನು ಹುಡುಕಲು ಕನ್ನಡ ಶೋಧನ ಯಂತ್ರ ಇದ್ದರೆ ಅನುಕೂಲವಷ್ಟೇ? www.guruji.com ಅಂತಹ ಶೋಧನ ಯಂತ್ರದ ಪರೀಕ್ಷಾರ್ಥ ಪುಟವನ್ನು ಒದಗಿಸಿದೆ. ಇಲ್ಲಿ ಶೋಧ ಮಾಡಬೇಕಾದ ಕನ್ನಡ ಪದಗುಚ್ಛವನ್ನು ಟೈಪಿಸಲು ಬರಹದಂತಹ ತಂತ್ರಾಂಶ ಬೇಕಿಲ್ಲ ಎನ್ನುವ ಅನುಕೂಲವಿದೆ. ಪುಟದಲ್ಲಿ ಕೀಲಿಮಣೆಯ ಚಿತ್ರವಿದೆ. ಇದರ ಕೀಲಿಗಳನ್ನು ಅದುಮಿದಾಗ ಅಕ್ಷರಗಳು ಮೂಡುತ್ತವೆ.ಪರೀಕ್ಷಾರ್ಥ "ಉದಯವಾಣಿ" ಎಂದು ಟೈಪಿಸಿದಾಗ,ಪತ್ರಿಕೆಯ ಅಂತರ್ಜಾಲ ತಾಣವೇ ಮೊದಲಾಗಿ ಕಾಣಿಸಿಕೊಂಡಿತು.
http://karnataka.110mb.com/google.html ಎನ್ನುವ ಅಂತರ್ಜಾಲ ಪುಟದಲ್ಲಿ ಗೋಗಲ್ ಶೋಧನ ಯಂತ್ರದ ಮೂಲಕ ಕನ್ನಡ ಪುಟಗಳನ್ನು ಹುಡುಕುವ ಸೌಲಭ್ಯವನ್ನು ಕನ್ನಡಿಗ ಅನಂತ್ ಎನ್ನುವವರು ಒದಗಿಸಿದ್ದಾರೆ. ಇಲ್ಲಿಯೂ ಕೀಲಿಮಣೆಯ ಚಿತ್ರವಿದ್ದು, ಯಾವ ಕೀಲಿ ಒತ್ತಿದರೆ,ಯಾವ ಕನ್ನಡ ಅಕ್ಷರ ಮೂಡುತ್ತದೆ ಎನ್ನುವ ಬಗ್ಗೆ ಮಾಹಿತಿಯಿದೆ.ಜನಪ್ರಿಯ ಗೂಗಲ್ ಶೋಧನ ಯಂತ್ರವೇ ಬೇಕೆನ್ನುವವರಿಗೆ ಇದು ಉಪಯುಕ್ತ ತಾಣ.

ಸಿದ್ಧ ಉಡುಪಿನ ಅಳತೆ ಯಾವುದಿರಬೇಕು?
ಸಿದ್ಧ ಉಡುಪಿನ ಅಂಗಡಿಗಳಲ್ಲಿ ಸಿಗುವ ಉಡುಪು ನಿಮ್ಮ ದೇಹಕ್ಕೆ ಸರಿಯಾಗಿ ಹೊಂದುತ್ತದೆಯೇ?ಅಲ್ಲ ಅದನ್ನು ತುಸು ಬಿಗಿಯೋ ಸಡಿಲವಾಗಿಸಬೇಕಾದ ಅವಶ್ಯಕತೆ ಹೆಚ್ಚೋ? ಈಗ ಭಾರತದಲ್ಲಿ ಸಿಗುವ ಸಿದ್ಧ ಉಡುಪಿನ ಅಳತೆಗಳು ವಿದೇಶಿಯರ ಮೈಕಟ್ಟಿಗೆ ಸರಿಹೊಂದುವ ಅಳತೆಗೆ ಹೊಲಿಯಲ್ಪಟ್ಟಿರುವುದೇ ಸಾಮಾನ್ಯ. ಹೀಗಾಗಿ ಈ ಉಡುಪುಗಳು ನಮ್ಮ ಮೈಕಟ್ಟಿಗೆ ಸರಿಹೊಂದದಿದ್ದರೆ ಅಚ್ಚರಿಯಿಲ್ಲ. ದೆಹಲಿಯ ಐಐಟಿಯ ಸಂಶೋಧಕರು ಸೈಜ್‌ಫೈಂಡರ್‍ ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದಕ್ಕೆ ಸಾವಿರೈದುನೂರಕ್ಕೂ ಆಧಿಕ ಭಾರತೀಯ ಪುರುಷ ಮತ್ತು ಸ್ತ್ರೀಯರ ಶರೀರದ ಅಳತೆಯನ್ನು ನೀಡಿ, ಸರಾಸರಿ ಯಾವ ಮೈಕಟ್ಟಿನ ಅಳತೆಗೆ ಸಿದ್ಧ ಉಡುಪು ಹೊಲಿಯಬೇಕು ಎಂದು ನಿರ್ಧರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ಯಾವ ಅಳತೆಯ ಉಡುಪಿಗೆ ಎಷ್ಟು ಬೇಡಿಕೆಯಿರಬಹುದು ಎಮದು ನಿರ್ಧರಿಸಲೂ,ತಂತ್ರಾಂಶ ಸಹಾಯ ಮಾಡುತ್ತದೆ.

ಲ್ಯಾಪ್‌ಟಾಪ್ ಕಳವಾದರೂ ಮಾಹಿತಿ ಭದ್ರ!
ಕಚೇರಿಯ ಲ್ಯಾಪ್‌ಟಾಪ್‌ಗಳನ್ನು ಬಳಸುವಾಗ ತುಸು ಎಚ್ಚರ ತಪ್ಪಿದರೂ, ಅದಕ್ಕೆ ಕೈಕೊಡುವ ಕಳ್ಳರು ಎಲ್ಲಡೆ ಇರುತ್ತಾರೆ.ಕಳವಾದ ಲ್ಯಾಪ್‌ಟಾಪ್‌ನ ನಷ್ಟದ ಜತೆಗೆ,ಅದರಲ್ಲಿ ಹುದುಗಿರುವ ಕಚೇರಿಯ ಅಮೂಲ್ಯ ಮಾಹಿತಿ ಸೋರಿಹೋಗುವ ಭಯ ಕಂಪೆನಿಗಳನ್ನು ಕಾಡುವುದಿದೆ. ಈಗ ಕಂಪ್ಯೂಟರ್‍ ಹಾರ್ಡ್‌‌ಡ್ರೈವ್ ತಯಾರಕ ಸಂಸ್ಥೆ ಸಿಗೇಟ್ ಹೊಸ ತಂತ್ರಜ್ಞಾನದ ಡಿಸ್ಕ್‌ಗಳನ್ನು ತಂದಿದೆ. ಇದರಲ್ಲಿ ಹೊಸ ಯಂತ್ರಾಂಶ ಸಾಧನ ಅಳವಡಿಸಲಾಗಿದ್ದು, ಬಳಕೆದಾರ ತನ್ನ ಗುಪ್ತಪದ ಅಥವಾ ಇತರೇ ಭದ್ರತಾ ಗುರುತನ್ನು ನೀಡದೆ, ಲ್ಯಾಪ್‌ಟಾಪ್‌ ಬಳಸಲು ಸಾಧ್ಯವಿಲ್ಲ. ಮಾಹಿತಿಯನ್ನು ಗೂಢಲಿಪಿಗೆ ಪರಿವರ್ತಿಸಿ ದಾಸ್ತಾನು ಮಾಡಿರುವ ಕಾರಣ,ಕದ್ದವನಿಗೆ ಹಾರ್ಡ್‌ಡಿಸ್ಕಿನಲ್ಲಿ ಹುದುಗಿರುವ ಮಾಹಿತಿಯನ್ನು ಓದಲು ಸಾಧ್ಯವಾಗದು. ಬೇರೆ ಹಾರ್ಡ್‌ಡಿಸ್ಕ್ ಹಾಕಿ ಲ್ಯಾಪ್‌ಟಾಪ್ ಬಳಸುವುದು ಸಾಧ್ಯವಿದ್ದರೂ, ಮಾಹಿತಿಯು ಸೋರಿ ಹೋಗಲು ಬಿಡುವುದಿಲ್ಲ ಎನ್ನುವ ಅನುಕೂಲ ಇಲ್ಲಿದೆ.

ಅಶೋಕ್‌ಕುಮಾರ್‍ ಎ