ದುಂಬಿಯೊಂದರ ಅಂತರಾಳ!

ದುಂಬಿಯೊಂದರ ಅಂತರಾಳ!

ಜಗವೊಂದು ಸುಂದರ ಹೂದೋಟ ನಾನೊಂದು ದುಂಬಿ, ಬರೀ ಒಂದೇ ಹೂವಿಗೇ ಏಕೆ ಮುಡಿಪಾಗಬೇಕು? ಗುಲಾಬಿಗೆ ಒಂದು ಗುಣ, ಒಂದು ಬಣ್ಣ, ಒಂದು ಪರಿಮಳ, ಒಂದು ಗುಣವಾದರೆ, ಮಲ್ಲಿಗೆ ಏನು ಕಡಿಮೆಯೇ? ಈ ಎರಡು ಹೂಗಳು ಏನೆ ಹೇಳಿದರೂ ಸೇವಂತಿಯೂ ಸೆಳೆಯದೇ ಬಿಡುವುದೇ? ಒಂದೇ ಎರಡೇ? ಎಷ್ಟೊಂದು ಹೂಗಳು! ಹಿಮಾಲಯದ ತಪ್ಪಲಿನಲ್ಲಿ, ತಂಪು ಕಂಪು ವಾತಾವರಣದಲ್ಲಿಯೇ ಒಂದು ಅಮೋಘ ಆಕರ್ಷಣೆ, ಇನ್ನು ಅಲ್ಲಿಯ ಹೂವುಗಳು ಹೇಗಿದ್ದಾವು ಯೋಚಿಸಿ! ನಮ್ಮದೇ ಕರಾವಳಿಯ ಸೊಬಗಿನಲ್ಲಿ ಅರಳಿದ ಸುಮಗಳೇನು ಕಡಿಮೆಯೇ? ಬಯಲು ಸೀಮೆಯ ಹಳ್ಳಿಯ ಹಳ್ಳದ ದಂಡೆಯ ಮೇಲೆ ಸ್ಚಚ್ಛಂದವಾಗಿ ಅರಳಿನಿಂತ ಹೂವುಗಳ ಸೊಬಗನ್ನು ವರ್ಣಿಸಲು ಸಾಧ್ಯವೇ? ಅಬ್ಬಾ ಎಷ್ಟೊಂದು ಹೂವುಗಳು! ಅಂದೆಲ್ಲ ಏನೆನೋ ಯೋಚಿಸಿದರೂ, ಎಷ್ಟೊಂದು ಹೂವುಗಳು ಕಣ್ಣಿಗೆ ಬಿದ್ದರೂ, ಮೊದಲು ಸೆಳೆದ ಹೂವೇ ಏಕೆ ಕಾಡುವುದು ಇಷ್ಟೊಂದು? ಸಂತೋಷದ ಘಳಿಗೆಯಲ್ಲಿ ತೇಲುತ್ತಿದ್ದಾಗ, ಒಮ್ಮೆಲೆ ಎದೆ ಆಳದಲ್ಲಿ ಆ ಹೂವಿನ ಕಂಪೇ ಸೊಂಪಾಗಿ ಕಾಡುವುದು ಏತಕೆ? ಎಷ್ಟೊಂದು ಹೂವುಗಳು ತಾವಾಗೇ ಪರಿಮಳ ಬೀರಲು, ಸೆಳೆಯಲು ಹತ್ತಿರ ಬಂದರೂ, ಆ ಹೂವು ಹತ್ತಿರ ಸೇರಿಸದೇ ಯಾವುದೋ ಮನೆಯ ಹೂ ಕುಂಡದಲ್ಲಿ ಭದ್ರವಾಗಿ, ನಾಲ್ಕು ಗೋಡೆಯ ಭದ್ರತೆಯಲ್ಲಿ ಇದ್ದರೂ, ಅದೇ ಬೇಕು ಎಂದು ಮನ ಬೇಡುವುದಾದರೂ ಏಕೆ, ಆ ನೆನಪು ಕಾಡುವುದಾದರೂ ಏಕೆ?
 
 


 

Rating
No votes yet