ಸ್ರೋತ

ಸ್ರೋತ


ಅವನಿನ್ನೂ ಸುಮ್ಮನೆ ಕೂತಿದ್ದ. ಹೊರಗೇನೋ ಗಿಜಿಗಿಜಿ ಸದ್ದು, ಪೆಪೆ ಹಾರ್ನು, ಯಾವುದೋ ಮೈಕಿನಲ್ಲಿ ಯಾರೋ ಹಾಕಿರುವ ಹಾಡು... ಪೂಲ್ ಗೇಟಿನ ನಸೀಬಿನಲ್ಲಿ ಇದಕ್ಕಿಂತ ಮಿಗಿಲಾದದ್ದೇನೂ ಕಾಣಲಾರದು ಎಂದು ಕಿಟಕಿಯಿಂದ ಇಣುಕಿ ಮತ್ತೊಮ್ಮೆ ಅಂದುಕೊಂಡ. ಪೆಪೆ ಹಾರ್ನುಗಳೂ ಸಾಮಾನ್ಯ ಕಾರುಗಳ ಹಾರ್ನುಗಳಲ್ಲ! ಮರ್ಸಿಡೀಸು, ಬಿಎಂಡಬ್ಲು... ಮೊನ್ನೆ ಮೊನ್ನೆ ಬೆಂಟ್ಲಿ ಕೂಡ ಇದೇ ಸಾಲಿಸ್ಬರಿ ಪಾರ್ಕಿನ ಬಳಿ ಅವತಾರವೆತ್ತಿದಾಗ ವಿಶ್ವದ ಪ್ರತಿರೂಪದಂತೆ  ಪುಣೆ ಅದರಲ್ಲೂ ಪೂಲ್ ಗೇಟ್ ಆಸುಪಾಸಿನ ಸ್ಥಳಗಳೆಲ್ಲಾ ಅವನಿಗೆ ಕಾಣತೊಡಗಿತ್ತು. ಆದರೆ ಅದೆಲ್ಲಾ ಪೂಲ್ ಗೇಟಿನ ಅಸ್ತಿತ್ವಕ್ಕೆ ಅಗತ್ಯವೇ! ಇಲ್ಲವಾದಲ್ಲಿ ಎಂಜಿ ರೋಡು, ಈಸ್ಟ್ ಸ್ಟ್ರೀಟ್, ರೇಸ್ ಕೋರ್ಸ್, ಟರ್ಫ್ ಕ್ಲಬ್, ಸಾಲಿಸ್ಬರಿ ಪಾರ್ಕ್ ಇವುಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಪುಣೆಯ ನಿಜವಾದ ದರ್ಶನವಾಗಬೇಕಾದರೆ ಒಂದೇ ಪೂಲ್ ಗೇಟ್ ಇಲ್ಲಾಂದ್ರೆ ಲಕ್ಷ್ಮಿ ರೋಡನ್ನು ಒಳಗೊಳ್ಳುವ (ಪುಣೆಯ ಹೃದಯ) ಪೇಠ್ ಗಳಿಗೆ ಬರಬೇಕು. ಉಳಿದ ಸ್ಥಳಗಳು ಇದಕ್ಕಿಂತ ಹೆಚ್ಚು ಅಭಿವೃದ್ದಿ ಪಡೆದಿದ್ದರೂ ಅದೆಲ್ಲಾ ಎರವಲು ಪಡೆದಿದ್ದು. ಎಲ್ಲಾ ಮಹಾನಗರಿಗಳಲ್ಲಿ ಇಂತದೇ ಸ್ಥಳಗಳು, ದೃಶ್ಯಗಳನ್ನು ಕಾಣಬಹುದು. ಆದರೆ ಪುಣೆಯ ಪ್ರತ್ಯೇಕವಾದ ಛಾಪನ್ನು ಕಾಣಲು ಸಾಧ್ಯ ಇಲ್ಲಿ ಮಾತ್ರ, ಆದರೆ ತನಗೇನು? ಇದು ಎಷ್ಟು ಉದ್ಧಾರವಾದರೂ ಆಗದಿದ್ದರೂ ತನ್ನ ಬದುಕು ಒಂಚೂರೂ ಬದಲಾಗಲ್ಲ ಎಂದೆನಿಸಿದಾಗ ಆತನಿಗೆ ತಾನು ತೆಗೆದುಕೊಳ್ಳುವ ನಿರ್ಧಾರ ಸರಿಯೆಂದು ಪುನಃ ಅನಿಸಿತ್ತು.   

ಬದುಕಿನ ಎಲ್ಲಾ ಸಮಸ್ಯೆಗಳಿಗೆ ಸಾವು ಪರಿಹಾರವಲ್ಲದಿದ್ದರೂ ತನ್ನ ಬದುಕಿನ ಗುರಿ ಎಂದು ಏನೂ ಇಲ್ಲದುದರಿಂದ ನಾನು ಸತ್ತರೆ ಏನೂ ನಷ್ಟವಿಲ್ಲ. ಇದ್ದರೆ ಕಂಪನಿಗೆ ಮಾತ್ರ ಎಂದು ಅಂದುಕೊಂಡ. ಆದರೆ ಮರುಕ್ಷಣವೇ ಅದೂ  ಇಲ್ಲವೆಂದೆನಿಸಿತು. ಇಟರೇಶನ್ ಪಟ್ಟಿಯಲ್ಲಿ ತನ್ನ ಹೆಸರೂ ಶಾಮೀಲಾಗಿ ಅದು ಕೊನೆಗೆ ನಗಣ್ಯವಾದ ಯಾವುದೋ ಪರ್ಸಂಟೇಜಿನ ಡೆಸಿಮಲ್ ಭಾಗವಾಗಿ ತನ್ನ ಸಾವು ಪಾಯಿಂಟ್ ಝೀರೋ ಝೀರೋ ವನ್ ವ್ಯತ್ಯಾಸ ತಂದರೂ ಇನ್ಯಾರೋ ಒಬ್ಬ ತನ್ನ ಕಂಪನಿಗೆ ಸೇರಿ ಆ ವ್ಯತ್ಯಾಸವನ್ನೂ ಅಳಿಸಿ ಹಾಕುತ್ತಾನೆ. ಆದ್ದರಿಂದ ಈ ನನ್ನ ಸಾವಿನಿಂದ ನಷ್ಟ, ಲಾಭ ಏನಿದ್ದರೂ ನನಗೆ ಮಾತ್ರ. ನಾನು ಸತ್ತರೆ ಕಂಪನಿಯ ಕತ್ತೆ ಕೆಲಸದಿಂದ, ಅದೇ ಯುಟಿಲೈಸೇಶನ್ ನಾಟಕಗಳಿಂದ, ತಲೆ ತಿಂದು ಎಸ್ಕಲೇಟ್ ಮಾಡುವ ಕ್ಲೈಂಟುಗಳಿಂದ, ಚಿತ್ರ ವಿಚಿತ್ರ ವರ್ತನೆಯ ಮ್ಯಾನೇಜರಿನಿಂದ, ಏನೇನೋ ಮಾಡಲು ಹೋಗಿ ಕೊನೆಗೆ ಏನೂ ಮಾಡಲಾಗದೆ ಕೇವಲ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಉಳಿದ ತನ್ನ ಅದೇ ಪಥೆಟಿಕ್ ಬದುಕಿನಿಂದ ತನಗೊಂದು ಮುಕ್ತಿ ಸಿಗುವುದು ಎಂಬುದು ಅವನ ಈ ಆತ್ಮಹತ್ಯೆ.. ಅಲ್ಲ.. ವಿಷ ಸೇವನೆಯ ಕಾರಣವಾಗಿತ್ತು. ಆತ್ಮದ ಹತ್ಯೆ ಎಂದಿಗೂ ಸಾಧ್ಯವಿಲ್ಲ ಎಂದು ನಂಬಿದ್ದ ಕಟ್ಟಾಳು ಆತ. ಎಲ್ಲರೂ ಉದ್ಧಾರವಾದರೂ ತನಗೇಕೆ ಇನ್ನೂ ಐಟಿ ಜಗತ್ತು ಒಗ್ಗುತ್ತಿಲ್ಲ? ಈ ಪ್ರಶ್ನೆ ಆತನನ್ನು ಇಲ್ಲಿಯವರೆಗೆ ಕಾಡಿದ ಅತಿ ದೊಡ್ಡ ಪ್ರಶ್ನೆಯಾಗಿತ್ತು, ದೊಡ್ಡ ಪ್ರಶ್ನೆ ಏಕೆಂದರೆ ಅದಕ್ಕೆ ಉತ್ತರವನ್ನು ಇನ್ನೂ ಆತ ಹುಡುಕಿರಲಿಲ್ಲ. 

ಮತ್ತೊಮ್ಮೆ, ಹೇಗೋ ವ್ಯವಸ್ಥೆ ಮಾಡಿಸಿ ತರಿಸಿದ್ದ ಬ್ಯೂಟಾಬಾರ್ಬಿಟಾಲ್ ಮಾತ್ರೆಗಳನ್ನು ನೋಡಿದ. ಕೆಮಿಸ್ಟುಗಳ ಬಳಿ ಒದ್ದಾಡಿ, ಎಲ್ಲೆಲ್ಲೋ ಯಾರು ಯಾರನ್ನೋ ಸಂಪರ್ಕಿಸಿ ಸಿಕ್ಕಿದ್ದ ಮಾತ್ರೆಗಳಿವು. ಸಾಯಲೂ ಕಷ್ಟ ಪಡಬೇಕಾದ ಪರಿಸ್ಥಿತಿ! ಸಾಯಲು ಎಷ್ಟೋ ಆಯ್ಕೆಗಳು ಅವನ ಮುಂದಿದ್ದರೂ ಈ ಮಾತ್ರೆಗಳ ಸೇವನೆಯಿಂದ ಬರುವ ಸಾವು ಆತನಿಗೆ ವೀರೋಚಿತ ಸಾವು ತರಲಿದೆ ಎಂದು ಆತ ಭ್ರಮಿಸಿದ್ದ. ಮೊದಲು ಪ್ಯಾರಾಸೆಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳುವ ಯೋಚನೆ ಮಾಡಿದ್ದರೂ ಅದರ ಸಾಮರ್ಥ್ಯದ ಮೇಲೆ ಅವನಿಗೆ ನಂಬಿಕೆಯಿರಲಿಲ್ಲ. ಅದು ಒಂದು ವಿಷ. ಆ ವಿಷವೇ ಬದುಕಿಸುವ ಔಷಧಿಯಾಗಿಯೂ, ಸಾವಿನ ಮಾರ್ಗವಾಗಿಯೂ ಪರಿವರ್ತಿತವಾಗುವ ಪರಿ ಆತನಿಗೆ ವಿಚಿತ್ರವೆನಿಸುತ್ತಿತ್ತು. ಆದರೆ ಸದ್ಯಕ್ಕೆ ಈ ಸಾಯಂಕಾಲ, ದಿನವು ಕವಿಯುತ್ತಿದ್ದಂತೆ ತನ್ನ ಬದುಕಿಗೂ ಸಾವು ಕವಿಯಲಿ, ಕತ್ತಲಾಗುತ್ತಿದ್ದಂತೆ ತಾನೂ ಸಾಯಬೇಕು ಎಂದು ಕಾಯುತ್ತಿದ್ದ. ಐದು ಘಂಟೆಗೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳಬೇಕು ಎಂದು ಆತ ಯೋಚಿಸಿದ್ದ. ಅದಕ್ಕಾಗಿ ಆತನಿಗೆ ಸುಮಾರು ನಾಲ್ಕು ಗ್ರಾಮುಗಳಷ್ಟಿದ್ದ ಮಾತ್ರೆಗಳನ್ನೆಲ್ಲವನ್ನೂ ಸೇವಿಸಿಬಿಡಬೇಕು. ಅದನ್ನೂ ಬದಿಯಲ್ಲಿದ್ದ ಮಿನೆರಲ್ ವಾಟರ್ ಬಾಟಲಿಯತ್ತ ಕಣ್ಣು ಹಾಯಿಸಿದ. ಸಮಯ ನೋಡಿದರೆ ನಾಲ್ಕು ಐವತ್ತೆಂಟು. ಈ ಕಾಯುವಿಕೆ ಇನ್ನು ಸಾಕು ಎರಡು ನಿಮಿಷಗಳಿಂದ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಮೊದಲ ಮಾತ್ರೆಯನ್ನು ಎತ್ತಿಕೊಂಡು ಬಾಯೊಳಗೆ ಹಾಕಿಕೊಂಡ. ಇವನಿಗೆ ಮಾತ್ರ ಅವಸರವಾದದ್ದಲ್ಲ, ಮತ್ತೆ ಯಾರಿಗೋ ಅವಸರವಾಗಿ ಎರಡು ನಿಮಿಷ ಮೊದಲೇ, ಮಾಡಲ್ಪಟ್ಟ ಪ್ಲಾನುಗಳಿಗೆ ವಿರುದ್ಧವಾಗಿ ಪೂಲ್ ಗೇಟ್ ಅದುರಿತು. ಕಿವಿಗಡಕ್ಕುವ ಶಬ್ದದೊಂದಿಗೆ ಉಂಟಾದ ಕಂಪನಕ್ಕೆ ನೀರು ಕುಡಿಯಲು ತಯಾರಾಗಿದ್ದ ಇವನ ರೂಮೆಲ್ಲಾ ನಡುಗಿ, ಇವನ ಕೈಯಲ್ಲಿದ್ದ ಬಾಟಲಿನಿಂದ ನೀರು ಮುಖದ ಮೇಲೆಲ್ಲಾ ಚಿಮ್ಮಲ್ಪಟ್ಟು ಮೂಗಿನೊಳಗೆಲ್ಲಾ ನೀರು ಹೋಗಿ ಇವನು ಕೆಮ್ಮತೊಡಗಿದ.

ಪೂಲ್ ಗೇಟಿಗೆ ಪೂಲ್ ಗೇಟೇ ಒಮ್ಮೆ ಸ್ತಬ್ಧವಾದಂತೆ ಸಾಯಲು ಅವಸರ ಪಟ್ಟಿದ್ದ ಇವನ ಮನಸ್ಸೂ ಸ್ತಬ್ಧವಾಯಿತು. ಏನಾಯಿತು ಹೊರಗೆ ಎಂದು ಪುನಃ ಕಿಟಕಿಯಿಂದ ಇಣುಕಿದರೆ ಎಲ್ಲಾ ಕಡೆ ಧೂಳು, ಎಲ್ಲೋ ಯಾರೋ ಬೊಬ್ಬಿಡುತ್ತಿರುವ ದನಿ, ಒಂದೊಂದೇ ಪ್ರಾರಂಭವಾಗಿ ಜನರು ಉಂಟಾದ ಶಾಕಿನಿಂದ ಚೇತರಿಸಿದಂತೆ ಅಲ್ಲಿಂದ ಓಡತೊಡಗಿದರು. ಏನಾಗಿದೆ ಎಂದು ಅರಿವಾದಂತೆ ಇವನ ಬೆನ್ನು ಮೂಳೆಯ ಕೆಳಗಿನ ಮೂಳೆಗೆ ಹತ್ತಿದಂತೆ ಭಾಸವಾದ ಮಂಜುಗಡ್ಡೆಯ ತುಂಡೊಂದು ಮೇಲಕ್ಕೇರುತ್ತಾ ಇಡೀ ಬೆನ್ನನ್ನಾವರಿಸಿ ಮೆದುಳಿಗೂ ಹೊಕ್ಕಿ ಇವನನ್ನು ಶೀತಲ ಮರಣಕ್ಕೆ ಉಂಟು ಮಾಡುವ ಪರಿಸ್ಥಿತಿ ಉಂಟಾಗುತ್ತಿದ್ದಂತೆ ಕೆಳಗಿನಿಂದ ಯಾರೋ ಕರೆದಂತಾಗಿ ಕವಿದಂತಾಗಿದ್ದ  ಕತ್ತಲೆಯಿಂದ ಹೊರಗೆ ಬಂದ. ಯಾವಾಗಲೋ ಆಚೀಚೆ ಹೊಗುತ್ತಿದ್ದಾಗ ಕಂಡ ಮುಖಗಳು, ಅವನ್ನು ಗುರುತಿಸಲೆತ್ನಿಸಿದರೂ ಗುರುತಿಸಲಾರದಾದ. ಕತ್ತಲು ಕವಿಯುತ್ತಿದ್ದ ಕಾರಣವೋ, ಮಾತ್ರೆಯ ಪ್ರಭಾವವೋ, ಸ್ಫೋಟದ ಸದ್ದೋ...  ಮಾತ್ರೆಯ ಪ್ರಭಾವವಿರಬೇಕು ಎಂದುಕೊಂಡ. ಆದರೆ ಅವನನ್ನು ಆವರಿಸಿದ ಭಯದ ಪ್ರತಿರೂಪ ಇದೆಂದು ಅವನಿಗೆ ಅರ್ಥವಾಗಲಿಲ್ಲ. ಕೆಳಗೆ ನಿಂತವರೆಲ್ಲಾ ಸ್ಫೋಟದ ಸ್ಥಳಕ್ಕೆ ಓಡಿದುದನ್ನು ನೋಡಿ ಅವನ ಪ್ರಜ್ಞೆಯೆನ್ನುವುದು ಜಾಗೃತಗೊಂಡು ತಾನೂ ಕೈಗೆ ಸಿಕ್ಕ ಟಿ ಶರ್ಟನ್ನೊಂದು ಸಿಕ್ಕಿಸಿಕೊಂಡು ಕೆಳಗೆ ಓಡಿದ. 

ಬಸ್ಸಿನೊಳಗೆ ಸ್ಫೋಟಗೊಂಡ ಬಾಂಬು ಹೆಚ್ಚೇನನ್ನೂ ಉಳಿಸಿರಲಿಲ್ಲ. ಟ್ಯಾಂಕು ಒಡೆದಿದ್ದರಿಂದಲೋ ಏನೋ ಬೆಂಕಿ ಹಚ್ಚಿತ್ತು. ಸುಟ್ಟ ವಾಸನೆ, ಹಸಿ ಮಾಂಸದ ವಾಸನೆ, ರಕ್ತದ ವಾಸನೆ!! ತುಂಬಿ ತುಳುಕಿದ್ದ ಬಸ್ಸಿನ ಮಧ್ಯಕ್ಕೆ ಅಥವಾ ಎದುರಿನಲ್ಲಿ ಸ್ಫೋಟಿಸಿದ್ದಿರಬೇಕು. ನಾಲ್ಕಾರು ಕಾರುಗಳು, ಟ್ಯಾಕ್ಸಿಗಳು ಬಂದು ಸೇರಿದವು. ಆಂಬುಲೆನ್ಸ್ ಕೂಡ ಬರುವ ಸೈರನ್ ಕೇಳುತ್ತಿತ್ತು. ತನ್ನನ್ನು ಕರೆದಿದ್ದ ಯುವಕರು ಮತ್ತು ಕೆಲವು ಹಿರಿಯರು ಬದುಕಿದ್ದವರನ್ನು ಹೊರಗೆ ತರಲು ಯತ್ನಿಸುತ್ತಿದ್ದರು. ಹಾಗೆಯೇ ಅವರನ್ನು ಕಾರುಗಳಲ್ಲಿ ತುಂಬಿಸುತ್ತಾ ತಕ್ಷಣವೇ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ನಡೆಯುತ್ತಿತ್ತು. ಯಾರು ಇವರು ಎಂಬುದು ಕೂಡ ಮುಖ್ಯವಾಗಿರಲಿಲ್ಲ. ಉಳಿದವರಂತೆ ತಾನೂ ಮುಖಕ್ಕೆ ಬಟ್ಟೆಯೊಂದನ್ನು ಕಟ್ಟಿಕೊಂಡು ಎಲ್ಲರೊಂದಿಗೆ ಬೆರೆತ. ಬಸ್ ಸ್ಟಾಂಡಿನಲ್ಲಿ ಸರಿಯಿದ್ದ ಕೆಲವರು ಬೆದರುಬೊಂಬೆಗಳಂತೆ ನಿಂತು ನೋಡುತ್ತಿದ್ದರು. ಇನ್ನು ಸ್ವಲ್ಪ ಹೊತ್ತಿಗೆ ಇಲ್ಲಿ ಪೋಲೀಸು ಬರುತ್ತದೆ, ಮೀಡಿಯಾ ಚಾನಲ್ಲುಗಳು ಬರುತ್ತವೆ, ಒಂದೇ ಸಮನೆ ಪೂಲ್ ಗೇಟ್ ರಾಷ್ಟ್ರಾದ್ಯಂತ ಹೆಸರು ಮಾಡುತ್ತದೆ. ಇಲ್ಲಿ ಸಾಯುವ ಪ್ರತಿಯೊಬ್ಬನಿಗೂ ಲಕ್ಷ ಸಂತ್ರಸ್ತ ಪರಿಹಾರ ನಿಧಿ ಸಿಗುತ್ತದೆ. ಇಲ್ಲಿ ಬಾಂಬು ಹಾಕಿದವರ ಮೇಲೆ ಕೇಸು ನಡೆಯುತ್ತದೆ. ಪಾರ್ಟಿಯವರು ಒಬ್ಬರೊಬ್ಬರ ಮೇಲೆ ಕೆಸರನ್ನು ಎರಚಲು ಇದನ್ನು ಬಳಸಿಕೊಳ್ಳುತ್ತಾರೆ. ಯಾವುದೋ ಆತಂಕವಾದಿ ಗುಂಪು ಇದರ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ವರುಷಗಳ ನಡುವೆ ಕಾರ್ಯಾಚರಣೆ ನಡೆಯುತ್ತದೆ. ಏನೆಂದರೂ ಎಲ್ಲಾ ಮುಗಿಯುತ್ತಾ ಜನರಿಗೆ ಇದರ ಪರಿಣಾಮ ಕೂಡ ಮರೆತು ಹೋಗಿರುತ್ತದೆ. ಆದರೆ ನೆನಪಿರುವುದು ಇಲ್ಲಿ ನೋಡುತ್ತಿದ್ದಾರಲ್ಲ, ಬದುಕಿದವರಿದ್ದಾರಲ್ಲ, ಬದುಕಿಸಲು ಯತ್ನಿಸುತ್ತಿದ್ದಾರಲ್ಲ...ಅವರಿಗೆ!!

ಆಸ್ಪತ್ರೆಯಲ್ಲೇ ಸುಮಾರು ಹೊತ್ತು ಕಳೆದು ಎಲ್ಲಾ ಮುಗಿಯುತ್ತಿದ್ದಂತೆ ತನ್ನ ರೂಮಿಗೆ ಬರುವಾಗ ರಾತ್ರಿ ಹತ್ತೂವರೆ. ಅಲ್ಲಿದ್ದವರ ಭಯ ತುಂಬಿದ ಮುಖಗಳು ಅವನನ್ನು ಕಾಡುತ್ತಿದ್ದವು. ಇವನೊಂದಿಗೆ ಗಾಯಗೊಂಡವರನ್ನು ಉಳಿಸಲು ಯತ್ನಿಸಿದ ಹೆಚ್ಚಿನವರು ಅಳುತ್ತಿದ್ದರು. ಯಾಕೋ ತಲೆ ನೋಯುತ್ತಿತ್ತು. ಮಾತ್ರೆಯ ಪ್ರಭಾವವಿರಬೇಕು ಎಂದು ಪುನಃ ಅಂದುಕೊಂಡ. ಅವನ ಕೈಗಳಿನ್ನೂ ನಡುಗುತ್ತಿದ್ದವು. ಕಣ್ಣೆಲ್ಲಾ ಕೆಂಪಗಾಗಿತ್ತು. ಅವನು ಹೆದರಿದ್ದ. ಸಿಗರೇಟೊಂದನ್ನು ಹಚ್ಚಿಕೊಂಡ. ಆ ಕ್ಷಣದಲ್ಲಿ ತನ್ನನ್ನು ಮತ್ತು ಉಳಿದವರನ್ನು ಮುಂದೂಡಿದ ಶಕ್ತಿ ಏನು ಎಂದು ಆತನಿಗೆ ಅರ್ಥವಾಗಲಿಲ್ಲ. ಮಾತ್ರೆಗಳು ಇನ್ನೂ ಬೆಡ್ಡಿನ ಮೇಲೆ ಬಿದ್ದಿದ್ದವು. ಅಲ್ಲಿ ಸತ್ತಿರುವ ಎಷ್ಟು ಜನರು ಬದುಕಿನಿಂದ ಖುಷಿಯಲ್ಲಿದ್ದರು, ಸಾಯುತ್ತಿರುವವರನ್ನು ಬದುಕಲು ಯತ್ನಿಸಿದ ಎಷ್ಟು ಜನ ಖುಷಿಯಿಂದಿದ್ದಾರೆ, ಸುಮ್ಮನೆ ಬೆದರುಬೊಂಬೆಯಂತೆ ನೋಡುತ್ತಿರುವ ಜನರಿಗೆ ಆನಂದವಿದೆಯೆ? ಎಂಬ ಪ್ರಶ್ನೆಗಳು ಸುಳಿದಾಡತೊಡಗಿದವು. ಒಂದು ಕ್ಷಣ ಅವನಿಗೆ ಎಲ್ಲರೂ ಭಗ್ನ ಬದುಕಿನ ನಗ್ನ ಪ್ರತಿಮೆಗಳಂತೆ ಮತ್ತೊಮ್ಮೆ ಅದನ್ನು ಮೀರಿ ನಿಂತ ಮಹಾಪುರುಷರಂತೆ ಕಾಣತೊಡಗಿದರು. ಸಿಗರೇಟಿನಿಂದ ಅವನ ಸೆನ್ಸುಗಳೆಲ್ಲಾ ಪುನಃ ಕೆಲಸ ಮಾಡತೊಡಗಿತು. ಮೈಯಲ್ಲೆಲ್ಲಾ ಅಂಟಿದ ರಕ್ತದಿಂದ ವಾಕರಿಕೆ ಬರೋ ವಾಸನೆ ಬರ್ತಾ ಇತ್ತು. ಇದು ಇನ್ನು ಎಷ್ಟು ತಿಕ್ಕಿದರೂ ಹೋಗುವುದು ಕಷ್ಟ, ಈ ಅಂಗಿ ಇನ್ನು ರದ್ದಿ ಮಾತ್ರ ಎಂದು ಅದನ್ನು ತೆಗೆದ. ಮೈಯಲ್ಲೂ ರಕ್ತ ರಕ್ತ. ಮಾತ್ರೆಗಳನ್ನು ತೆಗೆದು ಡ್ರಾವರಿನ ಒಳಗೆ ಹಾಕಿದ. ಇನ್ನೊಂದು ಸಿಗರೇಟನ್ನು ಹಚ್ಚಿಕೊಂಡ. ಬದುಕು, ಧರ್ಮ, ಗುರಿ ಮುಂತಾದ ಯೋಚನೆಗಳು ಮತ್ತೆ ಅವನ ಮನದಲ್ಲಿ ಮೂಡತೊಡಗಿದವು. ಯಾವುದಕ್ಕೂ ಮೊದಲು ಸ್ನಾನ ಮಾಡಬೇಕೆಂದುಕೊಂಡ.

                                                                                                     ****
                                                                          ಕತ್ತಲ ಭರಾಟೆಯಲ್ಲಿ ಸೋತವರ ನಿಟ್ಟುಸಿರಿನಲ್ಲಿ
                                                                        ಮರುಗಿದವರ ಮುರಿದ ಕನಸುಗಳಿಗಿಲ್ಲಿ ಕೊನೆಯಿಲ್ಲ
                                                                                    ಪ್ರತಿ ಕ್ಷಣದ ಬದುಕೊಂದು ಆಯ್ಕೆ
                                                                            ಎಲ್ಲಾ ಸೋಲುಗಳಿಗೆ ಗೆಲುವುಗಳಿಗೆ ಮೀರಿ

                                                                            ಮುನ್ನಡೆಸುವ ಶಕ್ತಿ ಬದುಕೆನ್ನುವ ಸ್ರೋತ!!!

Rating
No votes yet

Comments