ನೆನಪಿನ ಚಿತ್ರಕಲಾ ಶಾಲೆ: ಭಾಗ ೨೬ -- ’ಒಂದು ವಿಕ್ಷಿಪ್ತ ಪ್ರೇಮ ಕಥೆ-೧’

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೬ -- ’ಒಂದು ವಿಕ್ಷಿಪ್ತ ಪ್ರೇಮ ಕಥೆ-೧’

 

(೭೫)
    
     ಮಾರನೇ ದಿನ ಪಾಂಡು, ಅಂದರೆ ಪರಿಷತ್ತಿನ ಕ್ಯಾಂಟೀನಿನ ಒಡೆಯ ಬಂದು ಅದರ ಬಾಗಿಲು ತೆರೆದನಷ್ಟೇ. ಅದಕ್ಕಿಂತಲೂ ಮುಂಚೆ ರಾತ್ರಿ ಅಲ್ಲಿ ಕಳ್ಳತನ ಮಾಡಿದ್ದ ಹುಡುಗರ‍್ಯಾರೂ ಬಂದಿರಲಿಲ್ಲ. ಏಕೆಂದರೆ ಅವರುಗಳು ಅಲ್ಲಿಂದ ಕದಲಿ ಹೋಗಿರಲೇ ಇಲ್ಲವಲ್ಲ. ಆಗಷ್ಟೇ ಕಾಲೇಜಿಗೆ ಬರುತ್ತಿದ್ದ ಗಾಂಧಿಗಳು ಮತ್ತು ಗಾಂಧಿನಿಯರುಗಳು ಕ್ಯಾಂಟೀನಿನ ’ನಿಯರ್’ಆಗಿ ನಿಂತು ಚಾಯ್ ಕೇಳುತ್ತಿದ್ದರು. ಎಂದೂ ಇಲ್ಲದಷ್ಟು ಗುಂಪು ಬೆಳಿಗ್ಗೆ ಬೆಳಿಗ್ಗೆಯೇ ಅಲ್ಲಿ ಜಮಾಯಿಸಿದ್ದು ಕಂಡು ವ್ಯಾಪಾರ ಕುದುರಿದ ಪಾಂಡು ಸಂತಸಗೊಂಡ, ತದನಂತರ ಅನುಮಾನಗೊಂಡ. 
 
     ಎಲ್ಲರೂ ಎಲ್ಲರನ್ನೂ ಹೊಗಳುವವರೇ ಆಗಿಬಿಟ್ಟಿದ್ದರು. ಕಳ್ಳತನ ಮಾಡಿದವರೆಲ್ಲರನ್ನೂ ಆಗಷ್ಟೇ ಬಂದಿದ್ದ ಎಲ್ಲರೂ ಹೊಗಳತೊಡಗಿದ್ದರು. ಅದರ ಸ್ಯಾಂಪಲ್ ಹೀಗಿದೆ: "ಏನ್ ನನ್ ಮಕ್ಳು ಸಿವಾ ನೀವ್ಗಳೆಲ್ಲಾ. ಮಸ್ತು ಕಳ್ತನ ಮಾಡಿದ್ದೀರಂತೆ, ಕಳ್‌ನನ್‌ಮಕ್ಳಾ. ಹೀಗೇ ಕನ್ನ ಹಾಕುವುದನ್ನು ಶ್ರದ್ಧಾಭಕ್ತಿಯಿಂದ ಮುಂದುವರೆಸಿ, ಯಾರಿಗ್ಗೊತ್ತು. ಕಲಾವಿದರಾಗಿ ಎಲ್ಲರೂ ಕಾಸು ಮಾಡಲಾಗದಾದರೆ ಇಂತಹ ಒಂದು ಹೆಚ್ಚಿನ ತರಬೇತಿ ಅಗತ್ಯವೇ ಬಿಡಿ" ಎನ್ನುತ್ತಿದ್ದರು, ಮುಸಿ ಮುಸಿ ನಗುತ್ತಿದ್ದರು. ಎಂದೂ ಇಲ್ಲದ್ದು ಇಂದು ರಷ್ ಜಾಸ್ತಿಯಾಗಿದ್ದನ್ನು ಕಂಡು ಪಾಂಡು ಸ್ವಲ್ಪ ಗಾಭರಿಯಾದ. ಕ್ಯಾಂಟೀನನ್ನು ಸರಿಯಾಗಿ ದಿಟ್ಟಿಸಿನೋಡಿ ಮತ್ತೂ ಗಾಭರಿಯಾದ. 'ಯಾರೋ ರಾತ್ರಿ ಕಳ್ತನ ಮಾಡಿದ್ದಾರೆ' ಎಂದು ಸುತ್ತಲಿದ್ದವರೆಲ್ಲರೆದುರಿಗೆ ಉದ್ಘರಿಸಿದ. ಎಲ್ಲರಿಗೂ ಕೇಳಿಸುವಂತೆ ತನ್ನೊಳಗೆ ತಾನೇ ಮಾತನಾಡುವುದನ್ನು ಸಾಲಿಲೋಕ್ ಅನ್ನುತ್ತೇವಲ್ಲ, ಆ ಲೋಕ್‌ದಲ್ಲಿದ್ದ ಆತ. "ಅಷ್ಟೇ ಅಲ್ಲ, ಕಳ್ತನ ಮಾಡಿರೋ ಸಾಕ್ಷ್ಸೀನೂ ಬಿಟ್ಟೋಗಿದ್ದಾರೆ" ಎಂದ ಸಮೀಪದಲ್ಲೇ ಇದ್ದ ವಾಚ್‌ಮನ್ ದೊಡ್ಡಯ್ಯ, ಬೆಳಿಗ್ಗೆ ಮನೆಗೆ ಹೋಗುವ ಮುನ್ನ ಒಂದು ಬಿಟ್ಟಿ ಟೀ ಸಿಕ್ಕೀತು ಪಾಂಡು ಕಡೆಯಿಂದೆಂಬ ಆಶಾವಾದದಲ್ಲಿ. 
 
     ಕಳ್ಳತನ ಮಾಡಿದವರು ಯಾರು ಎಂದು ಎಲ್ಲರಿಗೂ ಗೊತ್ತಿತ್ತು. ಎಲ್ಲರಿಗೂ ಗೊತ್ತಿದೆ ಎಂದು ಮಾಡಿದವರಿಗೂ ಗೊತ್ತಿತ್ತು. ಆದರೆ ಈಗ ಆ ಕಂಪ್ಲೇಂಟ್ ಮೇಷ್ಟ್ರ ಹತ್ತಿರ ಹೋಗೋದೊಂದೇ ಬಾಕಿ. "ಆರೋಪ ಮೇಷ್ಟ್ರು ತನಕ ಹೋಗಲ್ಲ ನೋಡ್ತಿರು ಅನೇಖ," ಎಂದು ಬೆಟ್ ಕಟ್ಟಿ, ಅಪರೂಪಕ್ಕೆ ಕಾಸು ಕೊಟ್ಟು ಕ್ಯಾಂಟೀನಿನಿಂದ ತಂದ ಟೀ ಕುಡಿಯುತ್ತ ಮಮಾ. "ಅದ್ಯಾಕೋಗಲ್ಲ, ನಾನೇ ಯೋಳ್ತೀನಿ ತಡಿ," ಎಂದು ಜೋರು ಮಾಡಿದ ದೊಡ್ಡಯ್ಯ. ಅಷ್ಟರಲ್ಲಿ ಪಾಂಡು ತಾನು ಅಲ್ಲಿಯವರೆಗೂ ಕಲಿತಿದ್ದ, ತನಗೆ ಗೊತ್ತಿದ್ದ ಎಲ್ಲಾ ಭಾಷೆಯಲ್ಲಿನ ಪದಗಳನ್ನು ಸ್ಮರಿಸಿಕೊಂಡು ಕಳ್ಳತನ ಮಾಡಿದವರನ್ನು ಮಾತ್ರ ಹೊರತುಪಡಿಸಿ, ಅವರುಗಳ ಅಮ್ಮ, ಅಕ್ಕ, ಅಜ್ಜಿ, ಅವರುಗಳ ವಿಸರ್ಜನಾಕ್ರಿಯಾಬದ್ಧವಾದ ದೈಹಿಕ ಅಂಗಗಳು, ಅವುಗಳನ್ನು ತಾನು ಹೇಗೆ ಬಳಸಿಕೊಳ್ಳಬಲ್ಲೆ-ಇವಿಷ್ಟನ್ನು ಮಾತ್ರ ಮಂತ್ರೋಚ್ಛಾರಣೆಯಂತೆ ಉಚ್ಛರಿಸತೊಡಗಿದ್ದ. ದೊಡ್ಡಯ್ಯ ಹೆಚ್ಚೂ ಕಡಿಮೆ ಪ್ರಾಂಶುಪಾಲರ ಬಾಗಿಲಿನವರೆಗೂ ಹೋಗಿಬಿಟ್ಟಿರುವುದನ್ನು ನೋಡಿ ಮಮಾ ಆತನ ಬಳಿ ಓಡಿದ. ಆತನನ್ನು ಭೇಟಿ ಮಾಡಿ ತಡೆದು, "ಲೇಯ್ ದೊಡ್ದಯ್ಯ, ಏನಂತ ಕಂಪ್ಲೇಂಟ್ ಮಾಡ್ತೀಯಪ್ಪ?"
"ಕಳ್ತನ ಆಗಿದೆ ಅಂತ."
"ಯಾರೂಂತ ಹೇಳ್ತಿಯೇನಪ್ಪಾ?"
"ನೀವೆಲ್ಲ ಇದ್ರಲ್ಲ."
"ಜೊತೆಗೆ ನೀನೂ ಇರ್ಲಿಲ್ವೇ?"
"ಇದ್ರೆ? ಅದು ನನ್ ಕೆಲ್ಸ"
"ಏನು ಕಳ್ತನ ಮಾಡದ?"
"ಅಲ್ಲ, ವಾಚ್‌ಮನ್ ಕೆಲ್ಸ. ನೀವೇನ್ ಕಿಸೀತಿದ್ರಿ ಹುಡುಗ್ರು ಅಷ್ಟೊತ್ತಿನ ರಾತ್ರೀಲಿ." "ಕ್ಯಾಂಟೀನ್ ಹತ್ರಾವ?"
"ನಾವ್ ಮಾಡೋ ಘನಂದಾರಿ ಕೆಲ್ಸಾನಾ ನೀನೂ ನೋಡ್ಕಂಡೂ ಸುಮ್ನೆ ಕುಂತಿದ್ದುದ್ದನ್ನು ನಾವ್ ನೋಡ್ತಿದಿ."
"ಅಂದ್ರೆ?"
"ಯೋವ್, ಕಾವಲಿರೋದು ನಿನ್ ಕೆಲ್ಸ ಅಲ್ವೆ? ನೀನೇನ್ಮಾಡ್ತಿದ್ದೆ ಸುಮ್ನೆ ನೋಡ್ಕೊಂಡು ಅಂತ ಮೇಷ್ಟ್ರು ನಿನ್ನ ತಿರುಗ್ಸಿ ಕೇಳಿದ್ರೆ ಏನೇಳ್ತಿಯಯ್ಯಾ?"
"ನಾನು ನೋಡ್ಲಿಲ್ಲ ಅಂತೀನಿ."
"ಅಂಗಾದ್ರೆ ಯಾವ ಸಾಕ್ಷಿ ಇಟ್ಕೊಂಡು ನಮ್ಮ ಬಗ್ಗೆ ಕಂಪ್ಲೇಂಟ್ ಮಾಡೀಯ ಹೇಳು?"
"ಔದಲ್ವ?" ಎಂದು ದೊಡ್ಡಯ್ಯ ಅಭ್ಯಾಸವಿಲ್ಲದಿದ್ದರೂ ಯೋಚಿಸತೊಡಗಿದ. 
"ಈಗ ನೀನು ಮಾಡ್ಬೇಕಾಗಿರೋ ಕೆಲ್ಸ ಒಂದೇ."
"ಏನಪ್ಪಾ ಅದು. ಅದೂವೇ ನೀನೇ ಯೋಳ್ಬಿಡು."
"ಅದೇ, ನಿನ್ ಕೆಲ್ಸ ಎಂಗೆ ಉಳಿಸ್ಕಳದು ಅನ್ನೋ ಕೆಲ್ಸ ಅಷ್ಟೇಯ ನೀನು ಮಾಡ್ಬೇಕಾಗಿರದು."
"ಅಂದ್ರೆ, ಇಂಗೇ ಸುಮ್ಗೆ ಇವತ್ಗೆ ಸುಮ್ಗೆ ಮನೆಗೋಗ್ಬಿಡ್ಲಾ?"
"ಇಲ್ಲಿಂದ ನೀನು ಸುಮ್ಗೆ ನಿನ್ ಬಾಡೀಲಿರೋ ಎಲ್ಡೂ ಮುಖ್ಯ ರಂದ್ರಗಳನ್ನು ತೆರೆಯದೆ ಹೋದ್ರೆ ನಿನ್ನ ಕೆಲ್ಸ ಉಳೀತದೆ, ಮೇಷ್ಟ್ರ ಹತ್ರ ಬಾಯ್ ಬಿಟ್ಯೋ, ನೆನ್ನೆ ರಾತ್ರಿ ಪಾಳೀನೇ ನಿನ್ನ ಮತ್ತು ಪರಿಷತ್ತಿನ ಋಣದ ಕೊನೆಯ ದಿನ ಅಂದ್ಕೊಂಬಿಡು. ಅಲ್ಲಿ ಪಾಂಡೂ ಕೂಡ ಮೇಷ್ಟಿಗೆ ಏನೂ ಆರೋಪ ತರ್ದೇ ಇರೋ ಹಾಗೆ ಅದೇನ್ ಮಾಡ್ತೀಯೋ ಅದ್ನ ಮಾಡಿ ಓಗ್ಬೇಕು ನೋಡು," ಎಂದು ಮುಕ್ತಾಯ ಹಾಡಿದ ಮಮಾ.
 
     ದೊಡ್ಡಯ್ಯ ನೇರವಾಗಿ ಅಲ್ಲಿಂದ ಹೊರಟುಬಿಟ್ಟ. ಪಾಂಡುವನ್ನು ಅದ್ಯಾವ ಮಾಯದಿಂದಲೋ ಸಮಾಧಾನ ಮಾಡಿದ. ’ವೀರಾ ವೇಷ’ದ ಪ್ರಸಂಗದಲ್ಲಿನ ಕಳ್ಳತನದ ಅಧ್ಯಾಯ ಅಲ್ಲಿಗೆ ಮುಗಿಯದಿದ್ದರೂ ಇತ್ಯರ್ಥವಾದಂತಾಯ್ತು. ಆಮೇಲೆ ಎಲ್ಲವೂ ತೆಳುವಾದಾಗ ಕದ್ದ ಹುಡುಗರಾದ ವೀರಾ, ತರುಣ, ಅನೇಖ, ಪ್ರಶ್ನೆ, ಕಾಜು ರಟೇಲ್, ಮಮಾ ಮುಂತಾದವರೆಲ್ಲರೂ, "ಎಂಗಿದ್ರೂ ಯಾರೂ ಕೊಂಡ್ಕೊಳ್ದೆ ಎಷ್ಟೋ ದಿನಗಳಿಂದ ಬೂಸ್ಕೆ ಬಂದಿದ್ದ ತಿಂಡಿ ಡ್ರಿಂಕು ಅಲ್ವ ಪಾಂಡು ಅವೆಲ್ಲಾ, ಅದನ್ನು ಎಂಗಿದ್ರೂ ಬಿಸಾಕಬೇಕಿತ್ತು. ಅದ್ನ ನಾವ್ಗಳು ಹೊಟ್ಟೆಗೆ ಬಿಸಾಕಿಕೊಂಡೆವು, ನೀನೂ ಈ ವಿಷಯವನ್ನು ಹೊಟ್ಟೆಗಾಕಿಕೊಳ್ಳಪ್ಪ ಮಾರಾಯ," ಎಂದು ಪಾಂಡುವಿನ ಮಾಲನ್ನು ಕದ್ದು ಆತನಿಗೇ ಉಪಕಾರ ಮಾಡಿದ ತರ್ಕವನ್ನು ಆತನೇ ಒಪ್ಪುವಂತೆ ಮಾಡಿಬಿಟ್ಟರು.
(೭೬) 
    ಆದರೆ ಅದೇ ಪ್ರಸಂಗದೊಳಗಿನ ಉಪಕಥೆಯಾದ ರೋಚಕ ಪ್ರೇಮಪ್ರಕರಣವೊಂದು ಆಗಷ್ಟೇ ಆರಂಭಗೊಂಡಿತ್ತು. ಅದು ಇಂದಿಗೂ ಅಂದರೆ ಇಪ್ಪತ್ತೆರಡು ವರ್ಷಗಳ ನಂತರವೂ ಮುಗಿದಿದೆಯೋ ಇಲ್ಲವೋ ಹೇಳಲು ಬರುವುದಿಲ್ಲ. ಏಕೆಂದರೆ ’ಕಾಲದ ಸಮಸ್ಯೆ’ಯಿಂದಾಗಿಯೇ ಈ ಘಟನೆ ನಡೆದುದು ಮತ್ತು ಅಂತ್ಯಗೊಂಡದ್ದು. ಅದನ್ನು ಪ್ರೇಮಕಥೆ ಎಂದು ಕರೆಯುವುದಕ್ಕೆ ಕಾರಣ ಅದನ್ನು ಮತ್ಯಾವ ವರ್ಗಕ್ಕೂ ವರ್ಗೀಕರಿಸಲಾಗದಿರುವುದರಿಂದ, ಮತ್ತು ಅದರಲ್ಲಿ ಎಲ್ಲ ಪ್ರೇಮಕಥೆಗಳ ಮುಖ್ಯ ಅವಶ್ಯಕ ಅಂಶ ಇರುವುದರಿಂದ:
 
    ವೀರಾ ನೆಲ ಒರೆಸುವ ವೇಷಿಯಾಗಿ ಕ್ಯಾಂಟೀನಿನಲ್ಲಿ ಆ ರಾತ್ರಿ ಸಿಕ್ಕಿಕೊಂಡಿದ್ದಾಗ, ಎಲ್ಲರೂ ತನ್ನ ಹೆಸರನ್ನು ಕೂಗುವಾಗ ಈತ ಸೋಡಾ ಮುಚ್ಚಳಗಳನ್ನು ಹೊರಕ್ಕೆಸೆಯುತ್ತಿದ್ದಾಗ, ಯಾರಿಗೂ ಅದು ತಲುಪದೆ ರಮಾನಾಥೆಸ್ಸೆಮ್ಮೆಸ್ ಅಲ್ಲಿಗೆ ಸ್ಕೆಚ್ ಮಾಡಲು ಬಂದಾಗ, ಆತನ ವಾಚಾಳಿತನದಿಂದ ತನ್ನ ಕಳ್ಳತನವು ಎಲ್ಲರಿಗೂ ಮುಂದೆ ಗೊತ್ತಾಗಿಬಿಡುತ್ತದೆಂದು ಹೆದರಿ ಸುಮ್ಮನೆ ಯೋಚಿಸುತ್ತ ನೆಲ ಒರೆಸುವ ಬಟ್ಟೆಯನ್ನು ಗುಬರಾಕಿಕೊಂಡು ಒಳಗೇ ಕುಳಿತ. ಹೀಗೇ ಕುಳಿತರೆ ಆತನಿಗೆ ಇದ್ದದ್ದು ಎರಡೇ ಆಪ್ಶನ್ನು: ಬೆಳಗಿನವರೆಗೂ ಕುಳಿತು ನಿದ್ರಿಸಬೇಕು ಇಲ್ಲವೆ ಖಾಲಿ ನೆಲದ ಮೇಲೆಯೇ ಮಲಗಿ ನಿದ್ರಿಸಬೇಕು. ಕೂಗುವಂತಿಲ್ಲ, ಏಕೆಂದರೆ ದೊಡ್ಡಯ್ಯನ ಕಿವುಡು ಕಿವಿಗೂ ಅದು ಬೀಳುವ ಸಾಧ್ಯತೆ ಇತ್ತು.
 
     ರಮಾನಾಥೆಸ್ಸೆಮ್ಮೆಸ್ ಸುಮಾರು ಅರ್ಧ ಗಂಟೆ ಆ ಅರೆಬರೆ ಕತ್ತಲಲ್ಲೂ ಸ್ಕೆಚ್ ಮಾಡಿ ಹೊರಟುಹೋಗಿದ್ದ. ಮದ್ಯರಾತ್ರಿ ದಾಟುವ ಹೊತ್ತಿನಲ್ಲಿ ಎಲ್ಲರೂ ಗ್ರಾಫಿಕ್ ರೂಮಿನಲ್ಲಿ ಸೆಟ್ಲ್ ಆಗಿಬಿಟ್ಟಿದ್ದರು. ಕೆಲವರು ವೀರಾನ ಹೆಸರನ್ನು ಕೂಗಿ ಕೂಗಿ, ತಾಳ್ಮೆ ಕಳೆದುಕೊಂಡು ಆತನ ಅಡ್ಡ ಹೆಸರು, ಉದ್ದನೆ ಹೆಸರು-ಎಲ್ಲವನ್ನೂ ಕೂಗಿ, ಮೌನವಾಗಿಬಿಟ್ಟಿದ್ದರು. ವೀರಾನಿಗೆ ಜಗತ್ತೇ ವಿಭಿನ್ನವಾಗಿ ಕಾಣತೊಡಗಿತ್ತು. ಇಡೀ ವಿಶ್ವವೇ ಉದ್ದುದ್ದ ಅಡ್ಡಡ್ಡವಾಗಿ ವಿಭಾಗೀಕರಣಕ್ಕೊಳಗಾಗಿಬಿಟ್ಟುತ್ತು. ಕ್ಯಾಂಟೀನಿನ ಗ್ರಿಲ್‌ಗಳಿಂದಾದ ಪರಿಣಾಮವದು ಎಂದು ಆತ ಅರಿತುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ತತ್ವಶಾಸ್ತ್ರಕ್ಕೂ ಗ್ರಹಿಕೆಯ ಎಡವಟ್ಟಿಗೂ ಅದೆಷ್ಟೂ ಸಾಮೀಪ್ಯವಿದೆ ಎಂದು ಆ ಗ್ರಿಲ್‌ಗಳು (ಉದ್ದುದ್ದ, ಅಡ್ಡಡ್ಡಲಾದ ಕಂಬಿಗಳು) ಆತನಿಗೆ ಪಾಠ ಹೇಳಿತ್ತು. ಜೀವನಪೂರ್ತಿ ನಾನು ಗಂಭೀರವಾಗಿ ಯೋಚಿಸಲಾರೆನೇನೋ ಎಂಬ ಸೀರಿಯಸ್ ಯೋಚನೆ ಹತ್ತಿಕೊಂಡುಬಿಟ್ಟಿತು ವೀರಾನಿಗೆ.
 
     ಹೀಗೆ ಅಸಹಾಯಕನಾಗಿ ವೀರಾ ಕ್ಯಾಂಟೀನೆಂಬ ಜೈಲಿನಲ್ಲಿ ಬಂಧಿಯಾಗಿರಲು ಆತನಿಗೆ ಮೊಸಳೆ ಬಾಯಿಗೆ ಸಿಕ್ಕಿಕೊಂಡು ನಾರಾಯಣನಿಗೆ ಮೊರೆ ಹೋಗುವ ಆನೆಯ ಕಥೆಯ ನೆನಪಾಯಿತು. 'ನಾಸ್ತಿಕನಾದ ನನಗೆ ದೇವರನ್ನು ನೆನವ ಛಾನ್ಸೇ ತಪ್ಪಿಹೋಯಿತಲ್ಲ' ಎಂದಾತ ಪರಿತಪಿಸುವಂತಾಯಿತು. ಅದೇ ಕಾರ್ಗತ್ತಲ ಕಾಲಕ್ಕೆ ಅಚಾನಕ್ಕಾಗಿ ಕ್ಯಾಂಟೀನ್ ಆಸುಪಾಸಿನ ಹುಲ್ಲುಹಾಸಿನ ಕಗ್ಗತ್ತಲ ಪೊದೆಯಲ್ಲಿ, ಬೆಳದಿಂಗಳಲ್ಲಿ ಬಿಳಿಯ ವಸ್ತ್ರ ಧರಿಸಿದ ಚಾರ್ವಾಕಿ ಆಕಾಶದಿಂದ ಧರೆಗಿಳಿಯುತ್ತಿರುವಂತೆ ನಡೆದುಬರುತ್ತಿದ್ದಳು ವೀರಾನ ಕಡೆ. ಕ್ಯಾಂಟೀನಿನ ಹತ್ತಿರ ಹತ್ತಿರಕ್ಕೆ ಆಕೆ ಬರುತ್ತಿದ್ದರೆ ನೆಲದಿಂದ ಒಂದಡಿ ಮೇಲೆ ತೇಲುವಂತಿದ್ದಳು. ಆಕೆಯನ್ನು ಕಂಡ ಸ್ವತಃ ವೀರಾನಿಗೇ ನೆಲದಿಂದ ಮೇಲಕ್ಕೆ ಒಂದಡಿ ಏರಿದಂತಾಯಿತು, ಏಕೆಂದರೆ ಮೊದಲಿಂದಲೂ ಆಕೆಯನ್ನು ಕಂಡರೆ ಮತ್ತು ಕಂಡಾಗಲೆಲ್ಲ ವೀರಾನಿಗೆ ಕುಚ್ ಕುಚ್ ಮತ್ತು ಸಬ್ ಕುಚ್ ಆಗುತ್ತಿತ್ತು. ಅದ್ಯಾವ ಮಾಯದಲ್ಲೋ ಚಾರ್ವಾಕಿ ಕೈಚಾಚಿದಾಗ, ವೀರಾ ಅದನ್ನು ಹಿಡಿದಾಗ, ಕಣ್ಮುಚ್ಚಿ ಕಣ್ತೆಗೆಯುವಷ್ಟರಲ್ಲಿ ಕ್ಯಾಂಟೀನ್ ಕಟ್ಟಡ ಆತನ ಎದುರಿಗಿತ್ತು ಅಥವ ಆತ ಅದರ ಹೊರಗಿದ್ದ! ಅದನ್ನು ಒಂದು ಸುತ್ತುಹಾಕಿ ಬರುವಷ್ತರಲ್ಲಿ ಆತನನ್ನು ಅದರಿಂದ ಬೇರ್ಪಡಿಸಿದಾಕೆ ಅಲ್ಲಿರಲಿಲ್ಲ! ಹೊತ್ತಲ್ಲದ ಹೊತ್ತಲ್ಲಿ ಚಾರ್ವಾಕಿ ಪರಿಷತ್ತಿನ ಸುತ್ತಮುತ್ತಲೂ ಮತ್ತು ಒಳಗೆಲ್ಲಾ ಕಾಣಿಸಿಕೊಳ್ಳುವುದು ಸಹಜವೇ ಆಗಿದ್ದರಿಂದ, ಆಕೆಯ ಇರುವಿಕೆಯೇ ಒಂದು ನಿಗೂಢವಾದ್ದರಿಂದ, ನಿಗೂಢಕ್ಕೆ ನಿಗೂಢವನ್ನು ಸೇರಿಸಿದರೆ ಏನೂ ಪರಿಣಾಮವಾಗುವುದಿಲ್ಲವಾದ್ದರಿಂದ, ಯಾರಿಗೂ ಅಚ್ಚರಿಯಾಗುತ್ತಿರಲಿಲ್ಲ! ಆದ್ದರಿಂದ ವೀರಾ ಹೊರಗೆ ಬಂದಾಕ್ಷಣ, ಗ್ರಾಫಿಕ್ ವಿಭಾಗದಲ್ಲಿದ್ದ ಎಲ್ಲರಿಗೂ ನಡೆದದ್ದೆಲ್ಲವನ್ನೂ ಹೇಳಿದಾಗಲೂ, ಚಾರ್ವಾಕಿಯನ್ನು ಆಕೆಯ ಕ್ರಿಯೆಯನ್ನೂ ಯಾರೂ ನಂಬಲಿಲ್ಲವಾದ್ದರಿಂದ ವೀರಾ ಕ್ಯಾಂಟೀನಿನ ಒಳಗೆ ಸಿಕ್ಕಿಹಾಕಿಕೊಂಡದ್ದನ್ನೂ ಯಾರೂ ನಂಬಲಿಲ್ಲ!
 
     ಕನ್ನಡ ಸಿನೆಮದಲ್ಲಿ ತಾನು ಮಾಡದ ತಪ್ಪಿಗಾಗಿ, ಎಲ್ಲರ ಒಳಿತಿಗಾಗಿ ಜೈಲುವಾಸಿಯಾದ ನಾಯಕನಂತೆ ತನ್ನನ್ನೂ, ಎದುರಿಗಿನ ಚಾರ್ವಾಕಿ ಆತನಿಗೆ ಸಹಾನುಭೂತಿ ವ್ಯಕ್ತಪಡಿಸಲು ಬರುವ ನಾಯಕಿಯಂತೆಯೂ ವೀರಾ ಭಾವಿಸಿಕೊಂಡುಬಿಟ್ಟ. ಚಾರ್ವಕಿ ಸುಮಾರು ಮುವತ್ತು ವಯಸ್ಸಿನ, ಬಾಯ್ಸ್ ಶಾಲೆಯಲ್ಲಿ ಕಲಾಇತಿಹಾಸವನ್ನು ಬೋಧಿಸುತ್ತಿದ್ದ ಉಪನ್ಯಾಸಕಿ. ವೀರ ಪರಿಷತ್ತಿನಲ್ಲಿ ಡಿಗ್ರಿಯ ನಾಲ್ಕನೇ ವರ್ಷದ, ಇಪ್ಪತ್ತು ವರ್ಷ ವಯಸ್ಸಿನ ವಿದ್ಯಾರ್ಥಿ. ಒಂದೆರೆಡು ವರ್ಷದಿಂದಲೂ ಆಕೆಯ ಕಡೆ ಆಕರ್ಷಿತನಾಗಿದ್ದು ಈಗ ಆ ಆಕರ್ಷಣೆಯು ಗುರುತ್ವಾಕರ್ಷಣೆಯಾಗಿ ಬದಲಾಗಿತ್ತು. ಈ ಆಕರ್ಷಣೆಯು ಅದೆಷ್ಟೂ ತೀವ್ರವಾಗಿತ್ತೆಂದರೆ, ’ನೀನು ಕ್ಯಾನ್ವಾಸಾದರೆ ನಾನು ತೈಲವರ್ಣ. ಈ ಮಾಧ್ಯಮದಲ್ಲಿ ಬಳಿದ ಬಣ್ಣವು ಒಣಗುವುದು ಸುಲಭವಲ್ಲ, ತೈಲವರ್ಣವನ್ನು ಕ್ಯಾನ್ವಾಸಿನಿಂದ ಬೇರ್ಪಡಿಸುವುದೂ ಸಾಧ್ಯವಲ್ಲ. ರೆಂಬ್ರಾಂಟ್ ಎಂಬ ಕಲಾವಿದ ಬಳಿದ ಅರ್ಧ ಇಂಚಿನಷ್ಟು ದಪ್ಪವಾದ ತೈಲವರ್ಣವು ಒಣಗಲೇ ಅರವತ್ತೈದು ವರ್ಷ ಹಿಡಿಯಿತಂತೆ’ ಎಂಬೆಲ್ಲಾ ತರ್ಕವನ್ನು ಹುಟ್ಟುಹಾಕಿದ. ’ನೀನು ಬ್ರೌನ್ ರ‍್ಯಾಪರ್ ಶೀಟು ನಾನು ಡ್ರೈ ಪೇಸ್ಟೆಲ್ಲು ಆಗದಿರಲಿ, ಏಕೆಂದರೆ ಪೇಸ್ಟೆಲ್ ಬಣ್ಣವು ಉಫ್ ಎಂದರೆ ಉದುರಿ ಹೋಗುವಂತಹದ್ದು’ ಎಂದು ತನ್ನೊಳಗೇ ಬಡಬಡಿಸಿದ. ಆಕೆಯ ಬಗೆಗಿದ್ದ ಈತನ ಆಕರ್ಷಣೆಯು ಎಂತಹುದೆಂದು ಗೆಳೆಯರೆಲ್ಲಾ ಆತನನ್ನು ಕೇಳಿದ್ದಾಗ, ಆತನೂ ಅದೇ ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಳ್ಳಲು ನಿರ್ಧರಿಸಿದ್ದ. ಇದೆಲ್ಲಾ ವಿಕ್ಷಿಪ್ತ ಆಕರ್ಷಣೆ ಎಂದು ಮಮಾ ಹೇಳಿದಾಗ ಅದನ್ನು ’ಈಡಿಪಸ್ ಕಾಂಪ್ಲೆಕ್ಸ್’ ಎಂದಿದ್ದ ಅನೇಖ. ಚಾರ್ವಾಕಿ ಮುವತ್ತು ವೀರ ಇಪ್ಪತ್ತು, ಇದು ’ಬಯಲುದಾರಿ’ ಎಂದು ಕೆಲವರು ಲೇವಡಿ ಮಾಡಿದ್ದರು. 
(೭೭) 
     ಚಾರ್ವಾಕಿಯ ಕೆಲವು ಭಾಷಣಗಳನ್ನು ಕೇಳಿ, ಆಕೆಯ ತರಗತಿಗಳನ್ನು ಅಟೆಂಡ್ ಮಾಡಿದ್ದ ವೀರಾ, ಕಳೆದೊಂದು ವರ್ಷದಿಂದ ಆಕೆ ಕುಂತ ಕಡೆ ನಿಂತಕಡೆಗಳನ್ನೆಲ್ಲಾ ತನ್ನ ಕ್ಯಾಮರಾದಿಂದ ಚಿತ್ರೀಕರಿಸತೊಡಗಿದ್ದ. ಉದಾಹರಣೆಗೆ ಪರಿಷತ್ತಿನ ಕ್ಯಾಂಟೀನಿನಲ್ಲಿ ಟೀ ಕುಡಿದು ಬಾಯ್ಸ್ ಕಲಾಶಾಲೆಗೆ ಆಕೆ ಹಿಂದಿರುಗಿದ ನಂತರ ವೀರಾ, ಆಕೆ ಕುಳಿತಿದ್ದ ಬೆಂಚಿನ ಚಿತ್ರ ತೆಗೆಯುತ್ತಿದ್ದ, ಆಕೆ ಕುಡಿದು ಇರಿಸಿದ್ದ ಖಾಲಿ ಕಪ್ಪಿನ ಛಾಯಾಚಿತ್ರ ತೆಗೆಯುತ್ತಿದ್ದ, ಆಕೆ ಪಾದದ ಗುರುತು ಇದ್ದ ನೆಲದ ಗುರ್ತನ್ನೂ ಚಿತ್ರಿಸುತ್ತಿದ್ದ. ಕೊನೆಗೊಂದು ದಿನ ’ಚಾರ್ವಾಕಿಯನ್ನು ಈಗಷ್ಟೇ ನೋಡಿದೆ’ ಎಂದು ಹೇಳಿದ ಸಹವಿದ್ಯಾರ್ಥಿಯ ಫೋಟೋವನ್ನು ಕ್ಲಿಕ್ಕಿಸಿದ್ದ ವೀರಾ.  ’ಇದೇನು ಗೊತ್ತಾ, ಗುರ್ತು ಹಿಡೀತೀರಾ?’ ಎಂದು ಅವುಗಳ ಪ್ರಿಂಟ್‌ಗಳನ್ನು ತನ್ನ ಸಹಪಾಠಿ ಹುಡುಗಿಯರಿಗೆ ತೋರಿಸುತ್ತಿದ್ದು, ಅವರುಗಳೆಲ್ಲಾ ಗೊತ್ತಿಲ್ಲ ಎಂದು ಒಕ್ಕೋರಲಿನಿಂದ ಹೇಳಿದಾಗ, ’ನಿಮ್ ತಲೆ, ಕಣ್ಣಿಗೆ ಕಾಣೋ ಚಿತ್ರವು ಯಾವಾಗಲೂ ಏನೋ ನಡೀತಿರೋ ಘಟನೇನ ಹಿಡಿಯೋದಿಲ್ಲ, ಆಗಿ ಹೋದ ಘಟನೆಗಳೂ ಅವುಗಳಲ್ಲಿ ದಾಖಲಾಗಿರುತ್ತವೆ’ ಎನ್ನುತ್ತಿದ್ದ-ಅನೇಖ ಹೇಳಿಕೊಟ್ಟ ರೊಲಾಂಡ್ ಬಾಥನ ಪಾಠವನ್ನು ಸರಿಯಾಗಿ ಒಪ್ಪಿಸಿದ್ದೇನೆ ಈ ಹುಡುಗಿಯರಿಗೆ ಎಂಬ ಸಮಾಧಾನದಲ್ಲಿ. ಹುಡುಗಿಯರು ಇದನ್ನೆಲ್ಲಾ ಹೋಗಿ ಚಾರ್ವಾಕಿಗೆ ತಿಳಿಸಲಿ ಎಂಬುದು ಆತನ ಆಸೆಯಾಗಿತ್ತು. ಸೂಕ್ಷ್ಮಮತಿಯಾದ ಚಾರ್ವಾಕಿಗೆ ಪರಿಷತ್ತಿನ ಅನೌಪಚಾರಿಕ ಛಾಯಾಗ್ರಾಹಕನಾಗಿದ್ದ ವೀರಾನ ವಿಚಿತ್ರ ನಡವಳಿಕೆಯು ರಂಜಕವಾಗಿ ಕಾಣುತ್ತಿದ್ದರೂ ಅದರಾಚೆಗಿನ ಆಕೆಯ ಭಾವನೆಗಳನ್ನು ಯಾರಿಗೂ ಓದಲು ಸಾಧ್ಯವಾಗಿರಲಿಲ್ಲ. 
 
     "ನೀನು ಅವ್ಳ ಬಗ್ಗೆ ತೆಗೆದಿರೋ ಚಿತ್ರಗಳ ಒಂದು ಸೆಟ್ ಕೊಡು ಗುರುವೆ ಆಕೆಗೆ" ಎಂಬ ಮಮಾನ ಆದೇಶದಂತೆ, ನೂರಾರು ರೂಗಳನ್ನು ವ್ಯಯಿಸಿ ಎ೪ ಅಳತೆಯ ಪ್ರಿಂಟ್‌ಗಳನ್ನು ಹಾಕಿಸಿ, ಒಳ್ಳೆಯ ಗಿಫ್ಟ್ ರ‍್ಯಾಪರ್ ಮಾಡಿ ಆಕೆಗೆ ಕೊಡುವ ಪೆನಲ್ಟಿಮೇಟ್ ಹಂತದಲ್ಲಿದ್ದ ವೀರಾ. ಆಕೆಗೆ ಕೊಡುವ ಕ್ರಿಯೆಯನ್ನು ಮಾತ್ರ ಇನ್ನೂ ಯೋಚನೆಯ ರೂಪದಲ್ಲಿರಿಸಿದ್ದ ಆತ ಸಾಲ ಮಾಡಿದ ಕಾಸು ಖರ್ಚು ಮಾಡಿ ಪ್ರಿಂಟ್ ಹಾಕಿಸಿದ್ದಾಗಿತ್ತು. "ಆಕೆಯ ಹುಟ್ಟುಹಬ್ಬದ ದಿನ ಅದನ್ನು ಕೊಡು. ಆದರೆ ಆಕೆಯ ಹುಟ್ಟಿದ ದಿನಾಂಕವನ್ನು ಮೊದಲು ಪತ್ತೆ ಮಾಡು, ಇಲ್ಲದಿದ್ದಲ್ಲಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಬಾರದು ನೋಡು ಈ ಫೋಟೋಗಳು," ಎಂದು ಬುದ್ಧಿವಾದ ಹೇಳಿದ್ದ ಅನೇಖ. ಅದೂ ಸರಿ ಎನ್ನಿಸಿತ್ತು ವೀರಾನಿಗೆ ಏಕೆಂದರೆ ಅನೇಖ ಕೊಟ್ಟ ಉಪಾಯವದಾದ್ದರಿಂದ. ಎಲ್ಲರಂತೆ ಸೈಕಲ್ಲಿನಲ್ಲೇ ಓಡಾಡುತ್ತಿದ್ದ ಆತ ತನ್ನ ಚಿಕ್ಕಪ್ಪನ ಸ್ಕೂಟರನ್ನು ಕಡ ತೆಗೆದುಕೊಂಡಿದ್ದ. "ಎಂತ ದಿನಾಲು ಕಾವಾಲಿ ರಾ ಸ್ಕೂಟರ್?" ಎಷ್ಟು ದಿನ ಸ್ಕೂಟರ್ ಬೇಕಾಗಿರೋದು ಎಂದವರು ಕೇಳಿದ್ದಕ್ಕೆ ’ಫೋಟೋ ಫ್ರೇಮ್ ಹಾಕಿಸುವವರೆಗೂ’ ಎಂದಿದ್ದ. ’ಯಾವ ಫೋಟೋ?’ ಎಂದೇನೂ ಕೇಳಲಿಲ್ಲ ಅನುಭವಿಯಾಗಿದ್ದ ಚಿಕ್ಕಪ್ಪ. ಬದಲಿಗೆ ನೆಗೆಟಿವ್ ಪ್ರಿಂಟ್ ಹಾಕಲೋ ಎಂಬಂತೆ ಗೊಣಗಿಕೊಳ್ಳುತ್ತ ತಮ್ಮ ಸ್ಟುಡಿಯೋದ ಡಾರ್ಕ್‌ರೂಮಿನ ಒಳಹೊಕ್ಕಿದ್ದರು.    
 
     ಚಾರ್ವಾಕಿಯ ಮನೆ ಯಾರಿಗೂ ಗೊತ್ತಿರಲಿಲ್ಲ. ಅಥವ ಗೊತ್ತಿದ್ದವರು ಯಾರೂ ಇನ್ನೂ ವೀರಾನಿಗೆ ಸಿಕ್ಕಿರಲಿಲ್ಲ. ಲಕ್ಷಣವಾಗಿ ಸೀರೆ ಉಟ್ಟು ಕಲಾಶಾಲೆಗೆ ಬರುತ್ತಿದ್ದ ಆಕೆ ಜೀನ್ಸ್ ಪ್ಯಾಂಟು-ಟೀ ಶರ್ಟು ತೊಟ್ಟು ಎಂ.ಜಿ.ರೋಡಿನಲ್ಲಿ ಓಡಾಡುತ್ತಿದ್ದುದನ್ನು ಸೀನಿಯರ್ ವಿದ್ಯಾರ್ಥಿಗಳು ಅಷ್ಟೇನೂ ನಿಯರ್-ನಿಂದ ನೋಡಿಲ್ಲವೆಂಬಂತೆ ವರದಿ ಮಾಡಿದ್ದರು. ’ಯಾರಿದ್ದರು ಜೊತೆಗೆ’ ಎಂಬ ವೀರಾನ ಪ್ರಶ್ನೆಯಲ್ಲಿ ’ಯಾರೂ ಇರಲಿಲ್ಲವೆನ್ನಿ’ ಎಂಬ ಬೇಡಿಕೆಯೂ ಇತ್ತು. ಇದನ್ನು ಮಾತನಾಡುವಾಗ ವೀರಾ, ಅನೇಖ ಜೊತೆಯಲ್ಲಿದ್ದು, ಅನೇಖ ಆ ಹಿರಿಯ ವಿದ್ಯಾರ್ಥಿಗೆ ಏನೋ ಸಂಜ್ಞೆ ಮಾಡಿದಂತೆನಿಸಿತ್ತು ವೀರಾನಿಗೆ. ಸದಾ ಹಸನ್ಮುಖಿಯಾದ ಅನೇಖನಿಗೆ, ಚಾರ್ವಾಕಿಯ ಜೊತೆಗೆ ಎಂ.ಜಿ.ರೋಡಿನಲ್ಲಿ ಹುಡುಗನಿದ್ದಿದ್ದಲ್ಲಿ ಅದನ್ನು ಹೇಳುವ ಅವಶ್ಯಕತೆ ಇಲ್ಲ ಎಂಬಂತೆ ನುಡಿಯಲು ಯಾವುದೋ ಅಗೋಚರ ಆದೇಶ ಸಿಕ್ಕಂತಿತ್ತು. 
 
     ಚಾರ್ವಾಕಿ ಕಲಾಶಾಲೆಯ ಪಾಠ ಹೇಳುವ ಕೆಲಸ ಮುಗಿಸಿದ ನಂತರ ಒಮ್ಮೆ ಉತ್ತರದ ಹೆಬ್ಬಾಳದ ಕಡೆ ಹೋದರೆ ಮತ್ತೊಮ್ಮೆ ದಕ್ಷಿಣದ ಜೆ.ಪಿ.ನಗರದ ಕಡೆ, ಮಗದೊಮ್ಮೆ ಪೂರ್ವದ ನಾಗರಭಾವಿಯ ಕಡೆ, ಮತ್ತೂ ಒಮ್ಮೆ ಪಶ್ಚಿಮದ ನಾಗವಾರದ ಕಡೆಗೂ ಬಸ್ ಹತ್ತಿ ಹೋಗುತ್ತಿದ್ದಳು. ಮುವತ್ತರ ಆಸುಪಾಸಿನಲ್ಲಿದ್ದ ಆಕೆಯ ವಯಸ್ಸು ಇಪ್ಪತ್ತರಿಂದ ಮುವತ್ತರವರೆಗೂ ಎಷ್ಟಾದರೂ ಆಗಿರಬಹುದೆಂದು ಎಲ್ಲರೂ ಅಂದಾಜಿಸುತ್ತಿದ್ದರು. ಆಕೆ ಕಲೆಯನ್ನು ಓದಿದ್ದೆಲ್ಲಿ ಎಂಬುದು ಯಾರಿಗೂ ತಿಳಿದಿರಲಿಲ್ಲ, ಗಂಡೆದೆಯು ಸ್ತ್ರೀಯರೇ ತುಂಬಿದ್ದ ಬಾಯ್ಸ್ ಕಲಾಶಾಲೆಯ ಫ್ಯಾಕಲ್ಟಿಯಲ್ಲಿ ಆಕೆಯ ಹಿನ್ನೆಲೆನ್ನು ವಿಚಾರಿಸುವ ದಮ್ ಯಾರಿಗೂ ಇರಲಿಲ್ಲ. ಚಾರ್ವಾಕಿ ಎಂಬ ಹೆಸರು ಎಷ್ಟು ವಿಕ್ಷಿಪ್ತವೋ ಅಷ್ಟೇ ವಿಚಿತ್ರವಾಗಿರುತ್ತಿತ್ತು ಆಕೆ ನಡೆಸುತ್ತಿದ್ದ ಕಲಾಇತಿಹಾಸದ ತರಗತಿಗಳು. ಒನಾಮಿ ಕುಟ್ಟಿ ಅಡಿಯಾರ್, ಶೃತಿ ಮೆಹತಾ ಎಂಬಿಬ್ಬರು ಅಷ್ಟೇ ವಿಕ್ಷಿಪ್ತರು ಕಲಾಇತಿಹಾಸದ ವಿಭಾಗದಲ್ಲಿ ಚಾರ್ವಾಕಿಯ ನೆಚ್ಚಿನ ವಿದ್ಯಾರ್ಥಿಗಳಾಗಿದ್ದರು. ಅವರಿಬ್ಬರೂ ತಮ್ಮ ಗುರುವನ್ನು ತಾದ್ಯಾತ್ಮವಾಗಿ ಅನುಕರಿಸುವಂತಿತ್ತು ಅವರುಗಳ ನಡವಳಿಗೆ. ಅವರುಗಳು ಮಾತನಾಡಿಸಿದಾಗ ಮಾತ್ರ ಇತರರು ಮಾತನಾಡಬೇಕಿತ್ತು. ಇತಿಮಿತಿ ಮೀರಿದ ಸಲುಗೆ ಅವರೊಂದಿಗೆ ಸಾಧ್ಯವೇ ಇರುತ್ತಿರಲಿಲ್ಲ. ದೆವ್ವವನ್ನು ಕಂಡರೆ ಯಾಕೆ ಹೆದರುತ್ತೇವೆ ಎಂದು ಹೇಗೆ ಯಾರಿಗೂ ಗೊತ್ತಿಲ್ಲವೋ ಹಾಗೆಯೇ ಇವರುಗಳನ್ನು ಕಂಡರೆ ಎಲ್ಲರೂ ಹೆದರುವುದು ಯಾಕೆ ಎಂದು ಹೆದರಿದವರಲ್ಲಿ ಕೆಲವರು ಯೋಚಿಸುತ್ತಿದ್ದುದುಂಟು. ಅವರಿಬ್ಬರ ಹೆಸರುಗಳನ್ನು ಕೇಳಿದಾಗ ಅನೇಖನ ಮನಸ್ಸಿನ ಮೂಲೆಯಲ್ಲೊಂದು ಮಿಂಚು ಸರಿದಂತಾಯ್ತು, ಎಲ್ಲೋ ಕೇಳಿದ್ದೇನೆ ಈ ಹೆಸರುಗಳನ್ನ ಎಂದು. ಆದರೆ ಅದೇ ಕೊನೆ, ಆ ಮಿಂಚಿದ್ದೂ ಸಹ ಕ್ರಮೇಣ ಆತನ ಮನಸ್ಸಿನಿಂದ ಶಾಶ್ವತವಾಗಿ ಅಳಿಸಿಹೋಯಿತು. ’ದೇಹವನ್ನು ಕಬ್ಬಿಣವನ್ನಾಗಿಸಿಕೊಳ್ಳುವ ಬದಲಿಗೆ ಅಲ್ಲಮನ ಆಶಯದಂತೆ ಇಲ್ಲವಾಗಿಸಿಕೊಂಡುಬಿಡುವುದೇ ಉತ್ತಮ’ ಎಂದು ಅವರಿಬ್ಬರೂ ಒಮ್ಮೆ ಅನೇಖ-ವೀರಾನೊಂದಿಗೆ ವಾದಿಸಿದ್ದರ ಹಿಂದೆ ಅದೆಷ್ಟೂ ಆಳವಿತ್ತೋ ಇಲ್ಲವೋ ತಿಳಿಯದು ಆದರೆ ಒಂದು ತೆರನಾದ ಪಾರದರ್ಶಕತೆಯಂತೂ ಇದ್ದೇ ಇದ್ದಿತು! 
 
     ಚಾರ್ವಾಕಿಗೆ ಹತ್ತಿರವಾಗಬೇಕಾದರೆ ಅವರ ಶಿಷ್ಯೋತ್ತಮೆಯರನ್ನು ಮೊದಲು ಸಂಪರ್ಕಿಸು ಎಂದು ಅನೇಖ, ಮಮಾ ಮತ್ತು ಬಿಡಾರು ಬಿಟ್ಟಿ ಸಲಹೆ ಕೊಟ್ಟರು. ಚಾರ್ವಾಕಿಯ ನಿಶ್ಚಿತ ದೈನಂದಿನ ಚಟುವಟಿಕೆಯ ಕ್ರಿಯೆಗಳ ನಂತರದ ದೃಶ್ಯಾವಳಿಗಳಾದ ಖಾಲಿ ತಟ್ಟೆ, ಒಣ ಲೋಟ, ಮರೆತ ಕರವಸ್ತ್ರ, ಉದುರಿಬಿದ್ದ ಸಿಗರೇಟು ಬಟ್‌ಗಳು, ಗೀಚಿಕೊಟ್ಟ ಕಲಾಇತಿಹಾಸದ ಪುಸ್ತಕದ ಕೆಲವು ಹೆಸರುಗಳಿದ್ದ ತುಂಡು ಕಾಗದಗಳು, ವೀರಾ ಸ್ವತಃ ಸಣ್ಣದಾಗಿ ಕದ್ದಿದ್ದ ಆಕೆಯ ಉಗುರುಗಳ ಚೂರುಗಳು (ಕ್ಯಾಂಟೀನಿನ ಸಮೀಪ ಆಕೆ ಕತ್ತರಿಸಿ ಎಸೆದದ್ದು), ಕೊನೆಗೆ ಆಕೆಯು ಆಕಸ್ಮಿಕವಾಗಿ ಸವರಿದ್ದ ಬಳ್ಳಿಯ ಎಲೆಗಳನ್ನೂ ಸಹ ಆತ ಫೋಟೋ ತೆಗೆಯುವುದನ್ನು ಮುಂದುವರೆಸಿದ್ದ. ಅವುಗಳನ್ನೆಲ್ಲ ತನ್ನ ಮನೆಯ ತನ್ನ ರೂಮಿನಲ್ಲಿ ಸಾಪ್ಟ್ ಬೋರ್ಡಿಗೆ ಅಂಟಿಸಿ ಗಂಟೆಗಟ್ಟಲೆ ಅದನ್ನು ನೋಡುತ್ತ, ಛಾಯಾಚಿತ್ರಗಳನ್ನು ಅತ್ತಿಂದಿತ್ತ ಸರಿಸುತ್ತ, ಅನೇಖ ಹೇಳಿದಂತೆ ತನಗನ್ನಿಸಿದ್ದನ್ನು ನೋಟ್ಸ್ ಮಾಡುತ್ತ, ಆ ಟಿಪ್ಪಣಿಗಳನ್ನೂ ಅಂಟಿಸುತ್ತ ಕುಳಿತುಬಿಡುತ್ತಿದ್ದ. ಚಾರ್ವಾಕಿಯ ಗುರುತ್ವಾಕರ್ಷಣೆಯಲ್ಲಿ ಸಿಲುಕಿದ ನಂತರ ವೀರಾ ಮೊದಲ ಬಾರಿಗೆ ಸಮಯ ಹಾಳುಮಾಡುವುದನ್ನು ಕಡಿಮೆಗೊಳಿಸಿ, ಯೋಚಿಸುವುದನ್ನು ಆರಂಭಿಸಿದ್ದ. "ಏನು, ಎಲ್ಲಾ ಕೆಟ್ಟ ಫೋಕಸಿಂಗಿನಿಂದ ಉಂಟಾದ ಚಿತ್ರಗಳನ್ನೆಲ್ಲ ಗೋಡೆಗಂಟಿಸಿ ಅದನ್ನೇ ನೋಡುತ್ತ ಕುಳಿತಿದ್ದೀಯ?" ಎಂದು ವೀರಾನ ಅಕ್ಕ ವನಿತೆ ಕೇಳಿದ್ದಕ್ಕೆ, "ನಿನ್ ತಲೆ. ನಿನ್ ಫೋಟೋ ತೆಗೆಯೋದಾದ್ರೆ ನೂರು ಖಾಲಿಹಾಳೆಗಳ ಫೋಟೋ ಕ್ಲಿಕ್ಕಿಸಬೇಕು, ಹೋಗೆಲೇ," ಎಂದು ಸಿಡುಕಿದ್ದ ವೀರಾ.
(೭೮)
      ಒಮ್ಮೆ ಆತ ತೋರಿಸಿದ ತನ್ನ ಸಂಗ್ರಹದ ಅವುಗಳನ್ನೆಲ್ಲಾ ಸುದೀರ್ಘವಾಗಿ ನೋಡಿ ಶ್ರುತಿ ಮತ್ತು ಒನಾಮಿಯರು ಒಬ್ಬರ ಮುಖವನ್ನೊಬ್ಬರು ಅರ್ಥಪೂರ್ಣವಾಗಿ ನೋಡಿಕೊಂಡಿದ್ದರು. ’ಇಟ್ ಈಸ್ ಲೈಕ್ ಅ ಫೇಲ್ಡ್ ಲವ್ ಸ್ಟೋರಿ’ ಎಂದಿದ್ದ ಬಿಡಾ ಕುಳಿತಿದ್ದ ತನ್ನ ತೊಡೆಗಳನ್ನು ನೂರೊಂದು ಬಾರ ಅಲುಗಿಸುತ್ತ. ’ಇಟ್ ಈಜ್ ಎ ಫ್ಯೂರ್ ಲವ್‌ಅಪೇರ್’ ಎಂದಿದ್ದ ಸೋಸ್. "ಎಂದಿಗೂ ಯಾರನ್ನೋ ಮುಟ್ಟಲಾಗದ ಅಸಹಾಯಕತೆಯ ವಸ್ತುಗಳಿವೆ ಈ ಫೋಟೋಗಳಲ್ಲಿ," ಎಂದಿದ್ದ ನಲ್ಲಸಿವನ್. ಸಿಟ್ಟಾದ ವೀರಾನನ್ನು ಸಮಾಧಾನ ಮಾಡುತ್ತ, "ಅವ್ನು ತನ್ನ ಕಥೆ ಹೇಳ್ತಿದ್ದಾನೆ, ನಿನ್ನ ಫೋಟೋ ಬಗ್ಗೆ ಮಾತನಾಡುತ್ತಿಲ್ಲ," ಎಂದು ಸಮಾಧಾನ ಮಾಡಿದ್ದ.   
 
     "ಇದು ವ್ಯಕ್ತಿಯೊಬ್ಬರನ್ನು ತಲುಪಲು ಇರುವ ಅಸಹಾಯಕತೆಯನ್ನು ಸೂಚಿಸುತ್ತ, ಆಕೆಯನ್ನು ಭಾವನಾತ್ಮಕವಾಗಿ ಮುಟ್ಟುವ ಆಸೆಯ ಸಂಕೇತವಾಗಿದೆ ಈ ವಸ್ತುಗಳ ಚಿತ್ರಗಳ ಹಿಂದಿನ ಉದ್ದೇಶ," ಎಂದಿದ್ದ ವೀರಾ ಗಾಭರಿಯಾಗಿ, ನಲ್ಲಸಿವನ್ ಹೇಳಿದ್ದನ್ನೇ ಸಂಕೀರ್ಣವಾಗಿಸುತ್ತ. ನಾನ್ಸೆನ್ಸ್. ಇದು ವಾಯರ್, ವಾಯರಿಸ್ಟಿಕ್. ಕದ್ದುಮುಚ್ಚಿ ನೋಡ್ತಾರಲ್ಲ, ಹುಡುಗರು ಹುಡುಗಿಯರನ್ನ ಬಸ್ ಸ್ಟಾಪ್‌ಗಳಲ್ಲಿ, ಅದರ ಮುಂದುವರಿದ ಸ್ಥಿತಿ ಆಕೆಯ ವಸ್ತುಗಳನ್ನು ಆಕೆ ಇಲ್ಲದಾಗ ಚಿತ್ರಿಸುವುದು, ಎಂದು ವೀರಾನ ಬೌದ್ಧಿಕ ಕಾಯದ ಮೇಲೆ ಮುಗಿಬಿದ್ದಿದ್ದರು ಶೃತಿ-ಒನಾಮಿ ಜೋಡಿ. ಶಿಷ್ಯೆಯರನ್ನು ಒಲಿಸಿಕೊಂಡು ಗುರುವಿನ ಪಾದ ಸೇವಿಸುವ ಆಸೆಯಿಂದಿದ್ದ ವೀರಾನಿಗೆ ಬಾರಿ ಗಲಿಬಿಲಿಯಾಗಿಬಿಟ್ಟಿತ್ತು. ಅನೇಖ ಹಸನ್ಮುಖಿಯಾಗಿದ್ದರೂ ಅದರ ಹಿಂದೆ, ಅದರ ಹಿಂದಿನ ಭಾವವೇನೋ ನುಲಿದಾಡುತ್ತಿರುವಂತಿತ್ತು.
 
     ಅನೇಖ, ಮಮಾ, ಬಿಡಾ, ನಲ್ಲಸಿವ-ಈ ನಾಲ್ವರನ್ನೂ ತನ್ನ ಗಾಡ್ ಫಾದರ್‌ಗಳು, ತನ್ನ ಅನುಭವ ಜಗತ್ತಿನ ನಾಲ್ಕು ದಿಕ್ಕುಗಳು ಎಂದು ಭಾವಿಸಿದ್ದೇನೆಂದು ವೀರಾ ಹೇಳಲು ಕಾರಣ ಆತನಿಗೆ ತುರ್ತಾಗಿ ತನ್ನ ಹಾಗೂ ಚಾರ್ವಾಕಿಯ ನಡುವಣ ಹುಟ್ಟಿಕೊಂಡಿದ್ದ ನಿಗೂಢ ಸಂಬಂಧವನ್ನು ಬಗೆಹರಿಸುವುದು ಅಥವ ಪರಿಹರಿಸುವುದು ಮುಖ್ಯವಾಗಿತ್ತು. ಚಾರ್ವಾಕಿಗೆ ಕ್ಲೋಸ್ ಆಗಬೇಕೆಂದರೆ ಅದು ಯಾವ ತೆರನಾದ ಕ್ಲೋಜು, ಹತ್ತು ವರ್ಷ ವಯಸ್ಸಿನ ವ್ಯತ್ಯಾಸ ಈಗ ಇರುವುದರಿಂದ, ಮುಂದೆ ಈತ ಯೌವನಿಗನಾದಾಗ ಆಕೆ ಮುದುಕಿಯಾಗಿರುತ್ತಾಳೆ ಎಂದೂ, ಆತನ ಸಂಬಂಧಿಕರು ಏನು ಹೇಳುತ್ತಾರೆ ಎಂದು, ಆಕೆಯ ವ್ಯಕ್ತಿತ್ವವಿರಲಿ ಆಕೆಯ ಮನೆಯ ವಿಳಾಸವೇ ಯಾರಿಗೂ ಗೊತ್ತಿಲ್ಲವೆನ್ನುವುದು-ಈ ತೆರನಾದ ಪ್ರಶ್ನೆಗಳು ಹಾಗೂ ಸಮಸ್ಯೆಗಳನ್ನು  ಎಲ್ಲರೂ ಎದುರಿಗಿರಿಸಿದ್ದರಿಂದ ವೀರಾನಿಗೆ ವೀರತ್ವವೇ ಕ್ಷೀಣವಾಗತೊಡಗಿತ್ತು. ಎಷ್ಟೇ ತರಲೆಗಳಿದ್ದರೂ ಪರಿಷತ್ತಿನ ಗುಂಪಿನಲ್ಲಿ ಹೆಂಗಸರ ಬಗ್ಗೆ ನೈಪುಣ್ಯತೆ ಸಾಧಿಸಿದ್ದವರು ಇಲ್ಲವೆ ಇಲ್ಲವೆನ್ನಿಸುವಷ್ಟು ಮಂದಿಯಿದ್ದರು, ಮಮಾನನ್ನು ಹೊರತುಪಡಿಸಿ (ಅದೂ ಆತನದ್ದೇ ವರ್ಗೀಕರಣವಾದ್ದರಿಂದ ಅದರ ಸತ್ಯಾಸತ್ಯತೆಗೆ ಆತನೇ ಮಾನದಂಡವಾಗಿದ್ದ ಕೂಡ). ಆದ್ದರಿಂದಲೇ ಅವರುಗಳೆಲ್ಲಾ ಬೀಚಿಯವರ ’ಹೆಂಕಾಗಂ’ಗಳು (ಹೆಣ್ಣು ಕಾಣದ ಗಂಡುಗಳು) ಎಂದು ತಮ್ಮತಮ್ಮೊಳಗೇ ತಮ್ಮನ್ನು ವರ್ಗೀಕರಿಸಿಕೊಂಡುಬಿಟ್ಟಿದ್ದರು. 
 
     ಆದ್ದರಿಂದ ವೀರಾನ ಈ ಹೊಸ ಗುರು-ತ್ವಾಕರ್ಷಣೆಯನ್ನು ಅವರ‍್ಯಾರೂ ಪರಿಹರಿಸದೆ ಹೋದರು. ಅನೇಖ ಮಾತ್ರ ಆತನ ಜೊತೆಗೆ ಮೊದಲಿನಿಂದಲೇ ಇದ್ದ, ತನ್ನ ಸ್ವಭಾವವೇ ಹಾಗೆ ಎಂಬಂತೆ. "'ಮೇರಾ ನಾಮ್ ಜೋಕರ್’ ಕಥೆಯಾಯಿತಿದು," ಎಂದು ಹಿಂದಿ ಬಲ್ಲವರು ಆಡಿಕೊಂಡರು. ಒಮ್ಮೆ ಚಾರ್ವಾಕಿ ಆಟೋರಿಕ್ಷಾದಲ್ಲಿ ಸಂಜೆ ಅಲಸೂರಿನ ಕಡೆ ಹೋಗುವಾಗ ಆಕೆಗೆ ಹತ್ತಿರವಾಗಿ ಹಿಂದು ಮುಂದೆಲ್ಲಾ ಸೈಕಲ್ಲಿನಲ್ಲಿ ಫಾಲೋ ಮಾಡುತ್ತಿದ್ದ ವೀರಾ, ಒಮ್ಮೆಲೆ ಆವೇಷ ಬಂದವನಂತೆ ಆಟೋದ ಎಡದಿಂದ ಬಂದು, ವೇಗವಾಗಿ ಹೋಗುತ್ತಿದ್ದ ಅದರ ಮುಂದಕ್ಕೆ ಬಲಕ್ಕೆ ಯುಟರ್ನ್ ಮಾಡಿ, ವಿರುದ್ಧ ದಿಕ್ಕಿಗೆ ಮುಖ ಮಾಡಿ, ಅವಾಕ್ಕಾಗಿ ನೋಡುತ್ತಿದ್ದ ಚಾರ್ವಾಕಿಗೆ ’ಹಲೋ ಮೇಡಂ’ ಎಂದು ಸೈಕಲ್ಲಿನ ಮೇಲಿದ್ದ ವೀರಾ ಗ್ರೀಟ್ ಮಾಡಿ, ಅದೇ ವೇಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗಿ ಹೋಗಿದ್ದ. 
 
     ಯಂಡಮೂರಿ ವೀರೇಂದ್ರನಾಥರ ’ದುಡ್ಡು ದುಡ್ಡು’ ಪುಸ್ತಕವನ್ನು ಕನ್ನಡದಲ್ಲಿ ವಾರಪತ್ರಿಕೆಯೊಂದು ಧಾರಾವಾಹಿಯಾಗಿ ಪ್ರಕಟಿಸುತ್ತಿದ್ದಾಗ, ಅದನ್ನು ಪ್ರತಿನಿತ್ಯ ಆಸಕ್ತ ಸಹಪಾಠಿಗಳಿಗೆ ಅನೇಖ ಓದಿ ಹೇಳುತ್ತಿದ್ದ. ಅದರಿಂದ ಪ್ರಭಾವಿತನಾದ ಡಬ್ರಿ ಆಕಾಲಕ್ಕೇ ಎರಡು ಲಕ್ಷ ರೂಪಾಯಿಗಳನ್ನು ಆರು ತಿಂಗಳಲ್ಲಿ ಸಂಪಾದಿಸಿಬಿಟ್ಟಿದ್ದ. ಚಾರ್ವಾಕಿಯೊಂದಿಗಿನ ವೀರಾನ ಗುರು-ತ್ವಾಕರ್ಷಣೆಯನ್ನು ಗುರುತಿಸಿದ ಡಬ್ರಿ, ’ಎಂತ ಕಾವಲ ತೀಸ್ಕೋ ರಾ’ ಎಂದು ತನ್ನ ಖಜಾನೆಯ ಬೀಗವನ್ನು ಸಾಂಕೇತಿಕವಾಗಿ ಆ ’ಆಕರ್ಷಣೆ’ಯ ಸಾಫಲ್ಯತೆಗಾಗಿ ತೆರೆದಿರಿಸಿಬಿಟ್ಟಿದ್ದ. ಅಷ್ಟೇ ಸಲೀಸಾಗಿ ಚಾರ್ವಾಕಿ ವೀರಾನಿಗೆ ತನ್ನನ್ನು ತೆರೆದುಕೊಳ್ಳಬಾರದೆ ಎಂದು ಹಲವರು ಹಲುಬಿದ್ದರು. ಕಾರಣ, ಚಾರ್ವಾಕಿ ಅಷ್ಟು ಆಕರ್ಷಕವಾಗಿದ್ದಳು ಎಂದಲ್ಲ, ವೀರಾನ ಪ್ರಯತ್ನದಲ್ಲಿನ ತೊಡಗಿಸಿಕೊಳ್ಳುವಿಕೆಯ ಶಾಖವು ಎಲ್ಲರನ್ನೂ ಒಂದಲ್ಲಾ ಒಂದು ರೀತಿ ಸುಡುತ್ತಿತ್ತು. ಎಲ್ಲರಿಗೂ ಚಾರ್ವಾಕಿಯ ಬಗ್ಗೆ ಇದ್ದ ನಿಗೂಢತೆಯು ವೀರಾನಿಗೆ ಆಕರ್ಷಣೆಯಾಗಿತ್ತು. ಒಬ್ಬರು ಸೈಕಲ್ಲೋ ಸ್ಕೂಟರ್ರೋ ಇಲ್ಲವೆನ್ನದೆ ಕೊಡುತ್ತಿದ್ದರು, ಮತ್ತೊಬ್ಬ ಒಳ್ಳೆಯ ಶರ್ಟನ್ನು, ಮಗದೊಬ್ಬ ಫೋಟೋ ರೀಲನ್ನು-ಇತ್ಯಾದಿ ಗುರುತ್ವಕ್ಕೆ ಆಕರ್ಷಕವಾಗಬಲ್ಲ ವಸ್ತುಗಳನ್ನು ವೀರಾನಿಗೆ, ಆತ ಕೇಳಿದ ಕೂಡಲೆ ತಂದುಕೊಡಬೇಕಿತ್ತು. ಬೇರೆ ಸಂದರ್ಭಗಳಲ್ಲಿ ತಾನು ತೊಟ್ಟಿದ್ದ ಒಳ್ಳೆಯ ವಾಚ್ ಕೊಡಲಿಲ್ಲವೆಂದರೆ ಕೇವಲ ಅಂದಿಗೆ ವಾಚ್ ನೀಡಲಿಲ್ಲವೆಂದಷ್ಟೇ ಅರ್ಥ. ಆದರೆ ವೀರಾ ಸಿಲುಕಿದ್ದ ಮಾನಸಿಕ ಇಕ್ಕಳದ ಅರ್ಥಕೋಶದಲ್ಲಿ ಆ ಸಂದರ್ಭದಲ್ಲಿ ಆತನಿಗೆ ಅವಶ್ಯಕ ಸಾಮಗ್ರಿಯನ್ನು ದೊರಕಿಸಿಕೊಡದವರು ಇಡೀ ಒಂದು ಜೈವಿಕ, ಬೌದ್ಧಿಕ, ಸಾಂಸ್ಕೃತಿಕ (ಮತ್ತೂ ಒಂದಷ್ಟು) ದಿವ್ಯ ಸಮಾಗಮದ ಕ್ರಿಯೆಗೇ ಅಂತಹವರು ಕಲ್ಲಾಕಿದವರು ಮತ್ತು ಗುರುತ್ವದ ಪಲ್ಲಟಕ್ಕೆ ಕಾರಣರಾದವರು ಎಂದೇ ಬ್ರಾಂಡ್ ಆಗಿಬಿಡುವ ಅಪಾಯವನ್ನೆದುರಿಸುತ್ತಿದ್ದರು. "ನಿನ್ನ ಗುರುತ್ವಾಕರ್ಷಣೆಯು ಸಫಲವಾಗದಿದ್ದಲ್ಲಿ ನಾನು ಸಂಪಾದಿಸಿದ್ದಿರುವುದನ್ನೆಲ್ಲ ಯಂಡಮೂರಿ ಕಾದಂಬರಿಯಂತೆ ಸುಟ್ಟಿಬಿಡುತ್ತೇನೆ" ಎಂದು ಆಣೆ ಬೇರೆ ಮಾಡಿದ್ದ ಡಬ್ರಿ.//