ಭಾರತೀಯರ ವರ್ಣವೇಕೆ ಹೀಗೆ?

ಭಾರತೀಯರ ವರ್ಣವೇಕೆ ಹೀಗೆ?

ಡಾ! ಸರ್ವೇಪಲ್ಲಿ ರಾಧಾಕೃಷ್ಣನ್

ಚಿತ್ರಕೃಪೆ: ವಿಕಿಪೀಡಿಯ

    ಭಾರತ ದೇಶದ ಅಧ್ಯಕ್ಷರಾಗಿದ್ದ ಡಾ! ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಒಮ್ಮೆ ಯೂರೋಪು ಪ್ರವಾಸದಲ್ಲಿದ್ದಾಗ ಅಲ್ಲಿಯ ಕುಹಕಿಯೊಬ್ಬ  ಭಾರತೀಯರೇಕೆ ಕಪ್ಪು ಬಣ್ಣದವರೆಂದು ಅವರನ್ನು ಕೇಳಿದನಂತೆ. ಅದಕ್ಕೆ ರಾಧಾಕೃಷ್ಣನ್ ಅವರು ಕೊಟ್ಟ ಉತ್ತರ ಬಹು ಮಾರ್ಮಿಕವಾಗಿದೆ. ಆ ವಿದೇಶೀಯನಿಗೆ ಒಂದು ಕಥೆಯ ಮೂಲಕ ಅವನ ಪ್ರಶ್ನೆಗೆ ಉತ್ತರಿಸುವುದಾಗಿ ತಿಳಿಸಿ ಈ ಕೆಳಗಿನ ಕಥೆಯನ್ನು ಹೇಳಿದರಂತೆ.
    ಒಮ್ಮೆ ದೇವರ ಹೆಂಡತಿ ಊರಿಗೆ ಹೋಗಿದ್ದರಿಂದ ದೇವರಿಗೆ ರೊಟ್ಟಿ (ಬ್ರೆಡ್ ಅಥವಾ ಚಪಾತಿ ಅಂತ ಕೂಡ  ಇಟ್ಟುಕೊಳ್ಳ ಬಹುದು) ಮಾಡುವ ಕಾಯಕ ಬಿದ್ದಿತಂತೆ. ಅದರಂತೆ ಹಿಟ್ಟನ್ನು ನಾದಿದ ಮೇಲೆ ರೊಟ್ಟಿಯಾಕಾರಕ್ಕೆ ತಂದು ಅದನ್ನು ಸುಡಬೇಕೆಂದು ಒಲೆಯನ್ನು (ಸ್ಟೌವನ್ನು) ಹೊತ್ತಿಸಿದನಂತೆ. ಆದರೆ ಅವನಿಗೆ ಸರಿಯಾದ ಶಾಖ ಎಷ್ಟಿರಬೇಕೆಂದು ಗೊತ್ತಿರದಿದ್ದರಿಂದ ಬೆಂಕಿಯ ಉಷ್ಣತೆಯನ್ನು ಗರಿಷ್ಟ ಮಟ್ಟಕ್ಕೆ ಇಟ್ಟುಬಿಟ್ಟನಂತೆ. ಆಗ ರೊಟ್ಟಿಯೆಲ್ಲಾ ಸುಟ್ಟು ಕರಕಲಾಗಿತಂತೆ. ಅದನ್ನು ತಿನ್ನಲಾಗದೇ ಇದ್ದುದರಿಂದ ಅದನ್ನು ಭೂಮಿಯ ಮೇಲೆ ಎಸೆದನಂತೆ ಅದು ಆಫ್ರಿಕಾ ಎನ್ನುವ ಪ್ರದೇಶದ ಮೇಲೆ ಬಿತ್ತಂತೆ ಹಾಗಾಗಿ ಅಲ್ಲಿರುವವರೆಲ್ಲಾ ಕರಕಲಾದ ರೊಟ್ಟಿಯಂತೆ ಕಪ್ಪಾಗಿ ಹುಟ್ಟಿದರಂತೆ.
    ತನ್ನ ಒಲೆಯನ್ನು ಬಹಳ ತೀಕ್ಷ್ಣವಾಗಿ ಉರಿಸಿದ್ದರಿಂದ ರೊಟ್ಟಿ ಕರಕಲಾದದ್ದನ್ನು ತಿಳಿದುಕೊಂಡ ಭಗವಂತ ಈ ಸಾರಿ ಬೆಂಕಿಯ ತೀಕ್ಷ್ಣತೆಯನ್ನು ಬಹಳ ಕಡಿಮೆಯಾಗಿ ಮಾಡಿ ರೊಟ್ಟಿಯನ್ನು ಬೇಯಿಸಿದನಂತೆ. ಆಗ ರೊಟ್ಟಿಯು ಹಸಿ-ಬಿಸಿಯಾಗಿ ಸುಡಲ್ಪಟ್ಟು ಅದೂ ತಿನ್ನುವುದಕ್ಕೆ ಯೋಗ್ಯವಿಲ್ಲದಂತಾಯಿತಂತೆ. ಅದನ್ನು ಕೂಡ ದೇವರು ಭೂಮಿಯ ಮೇಲೆ ಬಿಸಾಕಿದನಂತೆ, ಅದು ಯೂರೋಪ್ ಎನ್ನುವ ಪ್ರದೇಶದ ಮೇಲೆ ಬಿತ್ತಂತೆ ಹಾಗಾಗಿ ಅವರು ಹಸಿ-ಬಿಸಿ ಸುಟ್ಟ ರೊಟ್ಟಿಯಂತೆ ಕೆಂಪಾಗಿರುತ್ತಾರೆ.
    ತನ್ನ ಅತಿ ತೀಕ್ಷ್ಣ ಮತ್ತು ಬಹಳ ಕಡಿಮೆ ಉರಿಯ ಅನುಭವಗಳಿಂದ ಪಾಠ ಕಲಿತ ದೇವರು ಈ ಬಾರಿ ಸರಿಯಾದ ಉಷ್ಣತೆಯಲ್ಲಿ ರೊಟ್ಟಿಯನ್ನು ಬೇಯಿಸಿದನಂತೆ ಹಾಗಾಗಿ ಆ ರೊಟ್ಟಿ ಬಹಳ ರುಚಿಯಾಗಿತ್ತಂತೆ. ಅವನ್ನು ತಿಂದು ಭಗವಂತ ಸಂತೃಪ್ತನಾದನಂತೆ. ಸರಿಯಾಗಿ ಸುಟ್ಟಿದ್ದ ರೊಟ್ಟಿಗಳಲ್ಲಿ ಇನ್ನೂ ಕೆಲವು ಹಾಗೆಯೇ ಉಳಿದಿದ್ದವಂತೆ ಅವನ್ನೂ ಭಗವಂತ ಮತ್ತೆ  ಭೂಮಿಗೆ ಬಿಸಾಡಿದನಂತೆ, ಅವು ಈಗ ಭಾರತ ಎನ್ನುವ ಪ್ರದೇಶದಲ್ಲಿ ಬಂದು ಬಿದ್ದುವಂತೆ. ಹಾಗಾಗಿ ಭಾರತೀಯರು ಸರಿಯಾಗಿ ಸುಟ್ಟ ರೊಟ್ಟಿಯ ಬಣ್ಣದಲ್ಲಿದ್ದಾರಂತೆ.
    ಇದನ್ನು ಕೇಳಿದ ಆ ಪರಂಗಿಯವನು "ಇಂಗು ತಿಂದ ಮಂಗ"ನಂತಾದನು ಎಂದು ಪ್ರತ್ಯೇಕಿಸಿ ಹೇಳಬೇಕಿಲ್ಲವಲ್ಲವೆ?

(ವಿ.ಸೂ: ಈ ಕಥೆ ನಮ್ಮ ಶಾಲಾ ಶಿಕ್ಷಕರೊಬ್ಬರು ಹೇಳಿದ್ದು)

 

Comments