ನಾನಾಡಿದ ಮೊದಲ ಪದ....!

ನಾನಾಡಿದ ಮೊದಲ ಪದ....!

ಕವನ

 

 

ತನ್ನದೆ ದೇಹದ ಭಾಗವ ನೀಡಿ

ನನ್ನಯ ಸೃಷ್ಟಿಗೆ ಕಾರಣಳೀಕೆ.

ಭುವಿಗೆ ಬಂದ ಹರುಷದಿ ಅಂದು

ನಾನಾಡಿದ ಮೊದಲನೆ ಪದವೂ ಈಕೆ.

ರಕ್ತವ ಬಸಿದು ನೋವನು ಮರೆತು,

ನನ್ನನು ಮುದ್ದಿಸಿ ನಲಿದಾಕೆ...!!!

 

 

ಶಶಿತಾರೆಯ ತೋರಿಸಿ ಹುಸಿನುಡಿಯ ಸೇರಿಸಿ,

ನನ್ನಯ ಹಸಿವನು ನೀಗಿಸಿದಾಕೆ.

ಓಡುವ ಭರದಲಿ ಎಡವಿ ಬಿದ್ದರೆ,

ಭುವಿಯನೆ ಜಾಡಿಸಿ ಸಂತೈಸುವಳಾಕೆ.

ಅಪ್ಪನು ಕೊಟ್ಟ ಪೆಟ್ಟಿಗೆ ಅಳುತಿರೆ,

ಬಿಗಿದಪ್ಪಿ ನನ್ನನು ಮುದ್ದಿಸಿದಾಕೆ...!!

 

 

ಯಾವುದೆ ಕ್ಷಣದಲಿ ಯಾವುದೆ ಸ್ಥಿತಿಯಲಿ

ನನ್ನದೆ ಪಕ್ಷವ ವಹಿಸುವಳೀಕೆ

ನನ್ನಯ ಸೋಲನು ತನ್ನದು ಎಂದು

ದಿನವಿಡಿ ಮಮ್ಮಲ ಮರುಗುವಳಾಕೆ.

ನನ್ನಯ ಗೆಲುವಲಿ ನೆಮ್ಮದಿ ಕಾಣುತ

ಹರುಷದಿ ಹಿರಿಹಿರಿ ಹಿಗ್ಗುವಳಾಕೆ...!!!

 

 

ನೆನಪಿಸಿ ಕರೆದರೆ ಕಂದಾ ಎನ್ನುತ,

ದಿನದಾ ಬಳಲಿಕೆ ಮರೆಯುವಳಾಕೆ.

ತನ್ನ ಪಾಲಿನ ಸಿಹಿತಿನಿಸುಗಳಾ

ನನಗೇ ಮೀಸಲು ಇಟ್ಟಿರುವಾಕೆ

ನಾನೆಷ್ಟೆ ಬೈದರು ಸಹಿಸುತ ಎಲ್ಲವ,

ನನ್ನಯ ಏಳ್ಗೆಯ ಬಯಸುವಳಾಕೆ..!!!

 

 

ಅವಳೆ ನನ್ನ ಪ್ರೀತಿಯ ಅಮ್ಮ, ಅವಳೇ ನನ್ನ ಮುದ್ದಿನ ಅಮ್ಮ!!!

 

 

Comments