ಪುಟ್ಟಪ್ಪ ಸತ್ತು ಹೋದ; ನಾನು ವಿವೇಕಾನಂದ!

ಪುಟ್ಟಪ್ಪ ಸತ್ತು ಹೋದ; ನಾನು ವಿವೇಕಾನಂದ!

 ಕುವೆಂಪು ಅವರಿಗೆ ಇಪ್ಪತ್ತೈದು ವರ್ಷಗಳಾಗುವಷ್ಟರಲ್ಲಿ, ಅವರ ಬದುಕಿನಲ್ಲಿ ಹಲವಾರು ಪ್ರಮುಖ ಹಾಗೂ ಅನಿರೀಕ್ಷಿತ ಘಟನೆಗಳು ಘಟಿಸಿಬಿಟ್ಟವು. ಅವುಗಳಲ್ಲಿ, ಹೊಸಮನೆ ಮಂಜಪ್ಪಗೌಡರು ಕಾಡಿನ ಹಾದಿಯಲ್ಲಿ ಲಾಂಗ್ ಫೆಲೊ ಕವಿಯ ದಿ ಸಾಮ್ ಆಫ್ ಲೈಫ್ ಕವನವನ್ನು ಹೇಳಿ ವಿವರಿಸಿದಾಗ ’ಜಗತ್ತು ಮತ್ತು ಜೀವನ ಬರಿಯ ಒಂದು ಶೂನ್ಯವಲ್ಲ’ ಎಂದು ಬಾಲಕ ಪುಟ್ಟಪ್ಪನ ಆತ್ಮಕ್ಕೆ ಸಿಕ್ಕಿದ ಚೈತನ್ಯಪೂರ್ಣವಾದ ಮಂತ್ರದೀಕ್ಷೆ ಮೊದಲನೆಯದು. ಎರಡನೆಯದು, ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದು, ರಾಬಿನ್‌ಸನ್ ಕ್ರೂಸೋ ಪುಸ್ತಕವನ್ನು ಹುಡುಕಿ ಹೊರಟ ಯುವಕ ಪುಟ್ಟಪ್ಪನಿಗೆ ಗ್ರಂಥಾಲಯದಲ್ಲಿ ಇಂಗ್ಲಿಷ್ ಭಾಷೆಯ ಕೃತಿ ಸಂಪತ್ತಿನಿಂದ ದೊರೆತ ಜ್ಞಾನ. ಅಷ್ಟೊತ್ತಿಗಾಗಲೇ ’ಅಮಲನ ಕಥೆ’ ಎಂಬ ದೀರ್ಘ ಕವಿತೆಯನ್ನು ಕನ್ನಡದಲ್ಲಿ ಬರೆದಿದ್ದರೂ, ಐರಿಷ್ ಕವಿ ಜೇಮ್ಸ್ ಎಚ್ ಕಸಿನ್ಸ್ ಅವರಿಂದ ಕನ್ನಡದಲ್ಲಿ ಬರೆಯುವ ಮಾರ್ಗದರ್ಶನ, ದೀಕ್ಷೆ ದೊರೆತಿದ್ದುದು ಮೂರನೆಯದು. ಸಿದ್ಧೇಶ್ವರಾನಂದ ಸ್ವಾಮೀಜಿಯವರ ಪ್ರಯತ್ನದಿಂದಾಗಿ, ಸಂತೆ ಪೇಟೆಯ ಗದ್ದಲದ ಗೂಡಿನಿಂದ ರಾಮಕೃಷ್ಣಾಶ್ರಮಕ್ಕೆ ಬಂದು ನೆಲೆಸಿದ್ದು ನಾಲ್ಕನೆಯದು.

ಇಷ್ಟೆಲ್ಲಾ ಘಟನೆಗಳನ್ನು ನಾನಿಲ್ಲಿ ಒಟ್ಟಿಗೆ ನೆನಪಿಸಿಕೊಳ್ಳಲು ಕಾರಣ, ಮತ್ತೊಂದು ಅತ್ಯಂತ ಪ್ರಮುಖ ಘಟನೆಯೊಂದನ್ನು, ಅದರಿಂದಾಗಿ ಕವಿಗಾದ ಅತೀಂದ್ರಿಯ ಅನುಭವವನ್ನು ಮತ್ತು ಅದರ ಹಿನ್ನೆಲೆಯಲ್ಲಿ ಮೂಡಿದ ಒಂದಷ್ಟು ಅಪ್ರಕಟಿತ ಕವಿತೆಗಳ ಬಗ್ಗೆ ಅರಿಯುವುದೇ ಆಗಿದೆ. ಎ.ಆರ್. ಕೃಷ್ಣಶಾಸ್ತ್ರಿಗಳ ಒತ್ತಾಸೆಯಂತೆ, ತತ್ವಶಾಸ್ತ್ರದ ತರಗತಿಗೆ ವಿದಾಯ ಹೇಳಿ, ಆ ವರ್ಷವೇ ಆರಂಭವಾಗಿದ್ದ ಕನ್ನಡ ಎಂ.ಎ. ತರಗತಿಗೆ ಸೇರಿದ್ದು, ಕನ್ನಡದ ಸುದೈವ ಕವಿಯನ್ನು ಹಾಗೂ ಹೀಗೂ ಎಳೆದು ತಂದು ಕನ್ನಡದ ಪುನುರುತ್ಥಾನದ ಮತ್ತು ನವೋದಯದ ಕೇಂದ್ರಾನುಗ ಶಕ್ತಿವಲಯಕ್ಕೇ ನೂಕಿಬಿಟ್ಟಿತ್ತು, ಕಸಿನ್ಸ್ ನಿಮಿತ್ತದಿಂದ ಇಂಗ್ಲಿಷಿನಿಂದ ಕನ್ನಡಕ್ಕೆ ತಳ್ಳಿದಂತೆ, ಸಿದ್ಧೇಶ್ವರಾನಂದರ ನಿಮಿತ್ತದಿಂದ ರಾಮಕೃಷ್ಣಾಶ್ರಮಕ್ಕೆ ನೂಕಿದಂತೆ! ಅಲ್ಲಿಯವರೆಗೆ ಇಂಗ್ಲಿಷ್ ಸಾಹಿತ್ಯವನ್ನು ಶಾಸ್ತ್ರಬದ್ಧವಾಗಿಯೂ, ಕನ್ನಡವ ಸಾಹಿತ್ಯವನ್ನು ಐಚ್ಛಿಕವಾಗಿಯೂ ಓದುತ್ತಿದ್ದ ಕವಿಗೆ ಮುಂದೆ ಕನ್ನಡ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವ ಅವಕಾಶ ದೊರೆಯಿತಷ್ಟೆ. ೧೯೨೭ ಒಂದೇ ವರ್ಷದಲ್ಲಿ ೭೦ ಭಾವಗೀತೆಗಳು, ಮೂರು ನಾಟಕಗಳು ಕವಿಯಿಂದ ರಚಿತವಾಗಿವೆ ಎಂಬುದನ್ನು ಗಮನಿಸಿದಾಗ ಆಗಿನ ಕನ್ನಡ ಎಂ.ಎ. ತರಗತಿಯ ಮಹತ್ವ ಮನದಟ್ಟಾಗುತ್ತದೆ.


ಮೊದಲ ಎಂ.ಎ. ತರಗತಿಯಲ್ಲಿದ್ದಾಗ ಕ್ರಿಸ್ ಮಸ್ ರಜಾ ದಿನಗಳಲ್ಲಿ ಸ್ವಾಮಿ ಸಿದ್ಧೇಶ್ವರಾನಂದರು ಜೋಗದ ಜಲಪಾತವನ್ನು ನೋಡಿ ಬರುವ ಕಾರ್ಯಕ್ರಮ ಹಾಕಿದರು. ಗಣಿತದ ಪ್ರೊ. ಮಾಧ್ವ ಅವರೂ ಜೊತೆಗೂಡಿದ್ದರು. ಭದ್ರಾವತಿಯಲ್ಲಿ ಡಾ. ಚೊಕ್ಕಂ ಮತ್ತು ಶಿವಮೊಗ್ಗದಲ್ಲಿ ಮಾನಪ್ಪ ಇವರ ಜೊತೆಗೂಡಿದರು. ಬಿ.ಎ. ಡಿಗ್ರಿಯ ಸ್ವೀಕಾರ ಸಮಾರಂಭಕ್ಕೆಂದು ನಿಗಧಿಯಾಗಿದ್ದ ಸಮವಸ್ತ್ರವನ್ನು - ಕರಿ ಖಾದಿ ನಿಲುವಂಗಿ, ಬಿಳಿ ಖಾದಿ ಷರಾಯಿ ಮತ್ತು ಖಾದಿಯ ಜರಿಪೇಟ - ಮತ್ತೆಲ್ಲೂ ಬಳಸದೇ ಇದ್ದುದರಿಂದ ಈ ಪ್ರವಾಸದಲ್ಲಿ - ಜರಿಪೇಟವೊಂದನ್ನುಳಿದು ಉಳಿದವುಗಳನ್ನು ಉಪಯೋಗಿಸಲು ನಿರ್ಧರಿಸುತ್ತಾರೆ. ಕಾನ್ವೊಕೇಷನ್ ಮುಗಿದ ತಕ್ಷಣ ಡೋಬಿಗೆ ಕೊಟ್ಟು ಒಗೆಸಿ ಇಸ್ತ್ರಿ ಮಾಡಿಸಿ ಟ್ರಂಕಿನಲ್ಲಿ ಹಾಕಿಟ್ಟಿದ್ದರಂತೆ. ಪ್ರವಾಸಕ್ಕೆ ಅದನ್ನು ಧರಿಸಿ ಟಾಕೂಠೀಕಾಗಿ ಹೊರಟಿದ್ದ ಕವಿಗೆ ಜೋಗವನ್ನು ಸೇರುವಷ್ಟರಲ್ಲಿ ಮೈ ತುರಿಕೆ, ಅಸಾಧ್ಯ ಜ್ವರ ಬರಲಾರಂಬಿಸಿತು. ರಾತ್ರಿ ಉಳಿದುಕೊಂಡಿದ್ದ ಟೆಂಟಿನಲ್ಲಿ ಮಂಕಾಗಿದ್ದ ಕವಿಯನ್ನು ಪರೀಕ್ಷಿಸಿದ ಡಾ. ಚೊಕ್ಕಂ ಅವರು ರೆಸ್ಟ್ ತೆಗೆದುಕೊಳ್ಳುವಂತೆ ತಿಳಿಸಿ, ಉಳಿದವರೊಂದಿಗೆ ಬೆಳದಿಂಗಳಲ್ಲಿ ಜೋಗದ ಸೌಂದರ್ಯವನ್ನು ಸವಿಯಲು ಹೊರಟರು. ಅಲ್ಲಿಂದ ಬಂದ ಮೇಲೆ, ಆಗಾಗ ಪ್ರಜ್ಞೆ ತಪ್ಪುವಷ್ಟು ಜ್ವರವೇರಿದ್ದ ಕವಿಯನ್ನು ಪರೀಕ್ಷಿಸಿದಾಗ ಡಾ. ಚೊಕ್ಕಂ ಅವರಿಗೆ ಇನ್ನು ತಡಮಾಡಿದರೆ ಅಪಾಯ ಅನ್ನಿಸಿ, ತಕ್ಷಣ ಹಿಂದಕ್ಕೆ ಹೊರಡಲು ಅವಸರಿಸುತ್ತಾರೆ. ರೋಗಿಯ ಸ್ಥಿತಿಯನ್ನು ಗಮನಿಸಿದ ಉಳಿದವರೂ ಸಮ್ಮತಿಸುತ್ತಾರೆ. ರಾತ್ರಿಯಡೀ ಪ್ರಯಾಣಿಸಿ ಬೆಳಗಿನ ಹೊತ್ತಿಗೆ ಭದ್ರಾವತಿ ತಲುಪುತ್ತಾರೆ. ಕವಿಗೆ ಪ್ರಜ್ಞೆ ಬಂದು ಕಣ್ಣುತೆರೆದಾಗ ಬೆಳಗಾಗಿದ್ದುದು ತಿಳಿಯುತ್ತದೆ. ದಾರಿಯಲ್ಲಿ ವಾಕಿಂಗ್ ಹೋಗುತ್ತಿದ್ದ ವಿಶ್ವೇಶ್ವರಯ್ಯನವರನ್ನು ಗುರುತಿಸಿ ಗೆಳೆಯರು ಮಾತನಾಡಿಕೊಳ್ಳುತ್ತಿದ್ದು ಗಮನಕ್ಕೆ ಬರುತ್ತದೆ. ಡಾ. ಚೊಕ್ಕಂ ಅವರ ಸಲಹೆಯಂತೆ ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭವಾಗುತ್ತದೆ. ನಂತರದ ಘಟನೆಯ ತೀವ್ರತೆಯನ್ನು ಕವಿಯ ಮಾತಿನಲ್ಲಿ ತಿಳಿಯಬೇಕು: ಮುಂದೆ ನಡೆದುದನ್ನು ನೆನಪಿನಿಂದ ಬರೆಯಲಾರೆ. ಅದನ್ನೆಲ್ಲ ತರುವಾಯ ಪಡೆದ ಇತರರು ನೀಡಿದ, ತಿಳುವಳಿಕೆಯಿಂದಷ್ಟೆ ಬರೆಯುತ್ತೇನೆ. ಏಕೆಂದರೆ, ಮತ್ತೆ ನನಗೆ ಬಾಹ್ಯಪ್ರಪಂಚವನ್ನು ಬುದ್ಧಿಪೂರ್ವಕವಾಗಿ ಗ್ರಹಿಸುವಷ್ಟರ ಪ್ರಜ್ಞೆ ಉಂಟಾದಾಗ ನಾನು, ಎಲ್ಲಿಯೆಂದು ಗೊತ್ತಿಲ್ಲದ, ಏಕೆ ಎಂದು ಅರಿಯಲಾರದ, ತಲೆತಗುಲುವಷರ ಮಟ್ಟಿನ ಕೆಳಮಟ್ಟದ, ಒಂದು ಸಣ್ಣ ಹಳೇ ಹುಲು ಜೋಪಡಿಯಲ್ಲಿ ಬಂಧಿತನಾದಂತೆ ಇದ್ದೆ!

ಕವಿಗೆ ಮೈಲಿ (ಸಿಡುಬು) ತಗುಲಿತ್ತು. ಬಹುಶಃ ದೋಬಿ ಅಂಗಡಿಯಿಂದ ಶುಭ್ರವಾಗಿ ಬಂದಿದ್ದ ಘಟಿಕೋತ್ಸವದ ವಿಶೇಷ ಧಿರಿಸಿನ ಮುಖಾಂತರ ಸಿಡುಬಿನ ರೋಗಾಣುಗಳು ಕವಿಗೆ ತಗುಲಿರಬಹುದು. ಆಗಿನ ಪದ್ಧತಿಯಂತೆ ಪ್ರತ್ಯೇಕ ಸ್ಥಳಕ್ಕೆ ಸಾಗಿಸಿ ಶೂಶ್ರೂಷೆಗೆ ಏರ್ಪಾಟು ಮಾಡಲಾಗಿತ್ತು, ಶಿವಮೊಗ್ಗೆಯ ದೇವಂಗಿ ರಾಮಣ್ಣಗೌಡರ ಮನೆಯ ಹತ್ತಿರದ ಒಂದು ಜೋಪಡಿಯಲ್ಲಿ. ನೋಡಿಕೊಳ್ಳಲು ಆಗಲೇ ಮೈಲಿ ಬೇನೆಯಿಂದ ಬಚಾವಾಗಿದ್ದ ಒಬ್ಬ ಮುದುಕ ಇದ್ದ.

ಅತಿಯಾದ ಮೈಲಿ ಬೇನೆಯ ತೀವ್ರತೆಯಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದರೂ ಕೆಲವೊಂದು ವಿಚಾರಗಳನ್ನು ಮತ್ತೆ ಮತ್ತೆ ಪ್ರಸ್ತಾಪ ಮಾಡುತ್ತಿದ್ದರು. ವಿಶೇಷವಾಗಿ ಶ್ರೀರಾಮಕೃಷ್ಣ ಮತ್ತು ವಿವೇಕನಂದರನ್ನು ಕುರಿತು! ತಮ್ಮ ಬಳಿಯಿದ್ದ ಅವರ ಪುಟ್ಟ ಚಿತ್ರಪಟ್ಟಿಕೆಯನ್ನು ಹಿಡಿದು ಉನ್ಮತ್ತತೆಯಿಂದ ವರ್ತಿಸುತ್ತಿದ್ದರು. ಮೈಲಿ ಬೊಕ್ಕೆಗಳು ಕಾಣಿಸಿಕೊಂಡಾಗ ಅನಿವಾರ್ಯವಾಗಿ ಕೆಲವು ದಿನ ನಗ್ನರಾಗಿಯೂ ಜೋಪಡಿಯಲ್ಲಿರಬೇಕಾಯಿತು. ಆಗಲೂ ಆ ಚಿತ್ರಪಟ್ಟಿಕೆಯನ್ನು ಕಂಕುಳಲ್ಲಿ ಇಟ್ಟುಕೊಂಡು ಕಾಪಾಡಿಕೊಂಡರಂತೆ! ಸ್ವತಃ ಅವರ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರೇ ಬಂದು ಇವರನ್ನು ನೋಡಿಕೊಳ್ಳುವ ಕಾಯಕಕ್ಕೆ ನಿಲ್ಲುತ್ತಾರೆ. ಆಗ ಅವರೊಮ್ಮೆ, ಏನಾದರೂ ಭೂತಚೇಷ್ಟೆ ಇರಬಹುದೆಂದು ತಿರುಪತಿ ಧರ್ಮಸ್ಥಳಗಳಿಗೆಲ್ಲಾ ಹರಕೆ ಕಟ್ಟಿಕೊಂಡಿದ್ದಲ್ಲದೆ, ಕೋಳಿಯೊಂದನ್ನು ಬಲಿಕೊಡುವ ಯೋಚನೆ ಮಾಡಿ, ಅದರಂತೆ ಅದನ್ನು ರೋಗಿಗೆ ಸುಳಿಸಲು ಬಂದ ಅವರ ಕಪಾಳಕ್ಕೆ ಹೊಡೆದುಬಿಟ್ಟರಂತೆ! (ಅವರಿಗೂ ಮೈಲಿ ಬೇನೆ ತಗುಲಿ, ಕವಿಗೆ ಪೂರ್ಣ ಹುಷಾರಾಗುವಷ್ಟರಲ್ಲಿ ತೀರಿ ಹೋಗುತ್ತಾರೆ, ಕುಪ್ಪಳಿ ರಾಮಣ್ಣಗೌಡರು) ಯಾರಾದರೂ ’ಪುಟ್ಟಪ್ಪ’ ಎಂದು ಮಾತನಾಡಿಸಿದರೆ ’ಪುಟ್ಟಪ್ಪ ಸತ್ತು ಹೋದ; ನಾನು ವಿವೇಕಾನಂದ!’ ಎಂದು ಜೋರಾಗಿ ಹೇಳುತ್ತಿದ್ದರು. ಪುಟ್ಟಪ್ಪ ಎಂದು ಕರೆದವರನ್ನು ಕಂಡರೆ ತಿರಸ್ಕಾರ! ಜೊತೆಗೆ ಅಗಾಧವಾದ ಹಸಿವು. ಐದಾರು ಜನ ತಿನ್ನಬಹುದಾದಷ್ಟನ್ನು ತಿನ್ನುತ್ತಿದ್ದರೂ, ಮತ್ತೆ ಒಂದೆರಡು ಗಂಟೆಯಲ್ಲಿ ತಾಳಲಾದ ಹಸಿವಿನಿಂದ ನರಳುತ್ತಿದ್ದರಂತೆ! ಪ್ರಜ್ಞೆ ಬಂದಾಗ ’ನಾನು ಯಾಕೆ ಇಲ್ಲಿದ್ದೇನೆ? ಯಾರು ನನ್ನನ್ನು ಇಲ್ಲಿಗೆ ತಂದು ಬಂಧಿಸಿಟ್ಟರು? ನನ್ನ ಅಂಗಾಲುಗಳನ್ನು ಏಕೆ ಹೀಗೆ ಸುಟ್ಟಿದ್ದಾರೆ? ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಂಡು ಹೋಗಬೇಕು’ ಎಂದುಕೊಳ್ಳುತ್ತಿದ್ದರಂತೆ. ಉನ್ಮತ್ತತೆ ಮಿತಿಮೀರಿದಾಗ ಒಮ್ಮೆ, ಆ ಮುದುಕನೂ ಹೊರಗಿದ್ದಾಗ, ಕೈಗೆ ಸಿಕ್ಕ ಬೆಂಕಿಪೊಟ್ಟಣದಿಂದ ಗುಡಿಸಿಲಿಗೆ ಬೆಂಕಿ ಹಚ್ಚಿ ಸಾಯುವುದರ ಮುಖಾಂತರ ತನ್ನ ಆತ್ಮವನ್ನು ಸ್ವತಂತ್ರವಾಗಿ ಬಿಡುಗಡೆ ಗೊಳಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾರೆ. ಆದರೆ ಸಕಾಲಿಕವಾಗಿ ಅಲ್ಲಿಗೆ ಬಂದ ಮುದುಕನ ಆರ್ತನಾದ, ಪ್ರಾರ್ಥನೆ, ಧೈನ್ಯತೆ ಆ ಅವಘಡವನ್ನು ತಪ್ಪಿಸುತ್ತದೆ.

ಇದು ಮೈಲಿ ಮಾತ್ರವಲ್ಲ ಹುಚ್ಚೂ ಇರಬಹುದು ಎಂಬ ಗುಮಾನಿಯಿಂದ, ಅದರ ಪರೀಕ್ಷೆಗಾಗಿ ಒಬ್ಬ ವೈದ್ಯರನ್ನು ಹೊಸಮನೆ ಮಂಜಪ್ಪಗೌಡರು ಕರೆತಂದಿದ್ದರು. ಅವರು ’Good morning Mr. Puttapa. How are you?’ ಎಂದು ನಗುಮೊಗದಿಂದ ಕೇಳಿದಾಗ, ಇವರು ಉತ್ತರಿಸಿದ್ದು, I am not Mr. Puttappa. Puttappa is dead and gone! ಎಂದು. And who are you?’  ಎಂಬ ಮರುಪ್ರಶ್ನೆಗೆ I am Swami Vivekanada! ಎಂಬ ಖಚಿತ ಉತ್ತರ. ಕೊನೆಗೆ ಡಾಕ್ಟರ್ ಉನ್ಮತ್ತತೆಯನ್ನು ಕಡಿಮೆ ಮಾಡುವ ಮಾತ್ರೆಗಳನ್ನಷ್ಟೆ ಕೊಡಲು ಸಲಹೆ ನೀಡುತ್ತಾರೆ. Lunacy Pills ಮಾತ್ರೆಗಳನ್ನು ನೀಡಲಾಯಿತು.

ಮೈಲಿ ಬೇನೆಯಿಂದ ಗುಣಮುಖರಾಗುತ್ತಾ ಹೋದಂತೆ ಉನ್ಮತ್ತತೆಯೂ ಕ್ಷೀಣಿಸತೊಡಗುತ್ತದೆ. ನೋಡಲು ಬಂದಿದ್ದ ಅವರ ಇನ್ನೊಬ್ಬ ಚಿಕ್ಕಪ್ಪ, ಕುಪ್ಪಳಿ ಐಯ್ಯಪ್ಪಗೌಡರು ’ಮನೆಗೆ ಬರುತ್ತೀಯಾ?’ ಎಂದು ಕರೆದಾಗ ಸಂತೋಷದಿಂದ ಹೊರಡುತ್ತಾರೆ. ಆದರೆ ಅವರು ಕುಪ್ಪಳಿಯ ಬದಲು, ತಂಗಿ ಪುಟ್ಟಮ್ಮನನ್ನು ಮದುವೆ ಮಾಡಿಕೊಟ್ಟಿದ್ದ (ಕುವೆಂಪು ಅವರ ತಂದೆಯ ತಂಗಿಯ ಮಗನಿಗೇ ಪುಟ್ಟಮ್ಮಳನ್ನು ಮದುವೆ ಮಾಡಿಕೊಡಲಾಗಿತ್ತು) ’ಮಾದಲು’ ಎಂಬ ಊರಿಗೆ ಕರೆದೊಯ್ಯುತ್ತಾರೆ. ಪುಟ್ಟಮ್ಮ ಕಾಯಿಲೆಯಾಗಿ ಹಾಸಿಗೆ ಹಿಡಿದಿದ್ದೇ ಮಾದಲಿಗೆ ಹೋಗಲು ಕಾರಣವಾಗಿತ್ತು. ಇನ್ನೊಬ್ಬ ತಂಗಿ ದಾನಮ್ಮ ತನ್ನ ತಂಗಿಯನ್ನೂ, ಅಲ್ಲಿಗೆ ಬಂದಿದ್ದ ಅಣ್ಣನನ್ನು ನೋಡಲು ಬರುತ್ತಾರೆ. ಒಂದು ದಿನ ಸಂಜೆ ತಂಗಿಯ ಹಾಸಿಗೆಯ ಪಕ್ಕದಲ್ಲಿ ಕುಳಿತು. ಆಕೆಯ ಹಣೆಯ ಮೇಲೆ ಕೈಯಿಟ್ಟು ’ಜೈ ಗುರುಮಹಾರಾಜ್! ಜಯ್ ಮಹಾಕಾಲಿ!’ ಎಂದು ಭಯಂಕರವಾಗಿ ಕೂಗಲಾರಂಭಿಸಿದರು. ಪಾಪ ತಂಗಿಯರಿಬ್ಬರೂ ಎಷ್ಟು ಗಾಬರಿಗೊಂಡರೋ! ಮಾರನೆಯ ದಿನವೇ ಐಯ್ಯಪ್ಪಗೌಡರು ಅಲಿಗೆ ಪುಟ್ಟಯ್ಯನಾಯಕರು ಸೇರಿ ತೀರ್ಮಾನಿಸಿ ಕುಪ್ಪಳಿಗೆ ಕರೆದುಕೊಂಡು ಹೊರಡುತ್ತಾರೆ.

ಆ ದಿನಗಳ ತಮ್ಮ ನಡುವಳಿಕೆ ಅನುಭವಗಳನ್ನು ಕವಿಯ ಮಾತಿನಲ್ಲೇ ನೋಡಬಹುದು.'ಆಗ ನನಗೆ ಉಂಟಾಗಿದ್ದ ಅನುಭವಗಳಲ್ಲಿ ಕೆಲವು ಅತೀಂದ್ರಿಯ ಲಕ್ಷಣದವೂ ಆಧ್ಯಾತ್ಮಿಕ ಸ್ವರೂಪದವೂ ಆಗಿದ್ದುವು ಎಂದು ಭಾವಿಸುತ್ತೇನೆ. ಅವುಗಳಲ್ಲಿ ಎರಡು ಮೂರನ್ನು ನೆನಪಿಗೆ ಬರುವಷ್ಟರ ಮಟ್ಟಿಗೆ ವಿವರಿಸಲು ಪ್ರಯತ್ನಿಸುತ್ತೇನೆ:

೧. ನನ್ನ ಎಂದರೆ ಪುಟ್ಟಪ್ಪನ ವ್ಯಕ್ತಿತ್ವದ ಸಸಂಪೂರ್ಣ ವಿಸ್ಮೃತಿ ಮತ್ತು ವಿನಾಶ
೨. ಸ್ವಾಮಿ ವಿವೇಕಾನಂದರ ಆವಾಹನೆ
೩. ಎಲ್ಲ ಬೌದ್ಧಿಕ ಸಮಸ್ಯೆಗಳ ಪರಿಹಾರ
೪. ಸರ್ವಜ್ಞತಾ ಮತ್ತು ಸರ್ವಶಕ್ತತಾ ಭಾವನೆ
೫. ನನ್ನ ದೈಹಿಕ ವ್ಯಾಪಾರಗಳನ್ನೆಲ್ಲ ಯಾವುದೋ ಶಕ್ತಿ ನಿಯಂತ್ರಿಸುತ್ತಿದ್ದ ಪ್ರತ್ಯಕ್ಷಾನುಭವ
೬. ಎಲ್ಲ ಹೊರೆ ಹೊಣೆಗಳಿಂದ ನಾನು ವಿಮುಕ್ತನಾಗಿ ನನ್ನನ್ನು ಆಕ್ರಮಿಸಿ ನಿಯಂತ್ರಿಸುತ್ತಿರುವ ಶಕ್ತಿಯದೇ ಪೂರ್ತಿ     ಜವಾಬುದಾರಿಯಾಗಿದೆ ಎಂಬ ಅನುಭವದಿಂದ ಉಂಟಾದ ಹಗುರ-ಗರಿಹಗುರ-ಸ್ಥಿತಿ
೭. ಆನಂದಮಯತೆ!
೮. ಎಷ್ಟು ತಿಂದರೂ ಸಾಕಾಗದ ಅಸಾಮಾನ್ಯ ಹಸಿವೆ
೯ ಜಗತ್ತು ತನ್ನ ಸ್ಥೂಲತೆಯನ್ನು ವಿಸರ್ಜಿಸಿ ಛಾಯಾಮಾತ್ರ ಸೂಕ್ಷ್ಮತೆಯನ್ನು ಧರಿಸಿದಂತೆ ತೋರುತ್ತಿತ್ತು.

ಆಗಿನ ಅನುಭವಗಳಲ್ಲೆಲ್ಲ ಮುಖ್ಯವಾದುದೂ ಸ್ಥಾಯಿಯಾದುದೂ ಎಂದರೆ ’ಸಚ್ಚದಾನಂದ ಜಗನ್ಮಾತೆ ಎಲ್ಲೆಲ್ಲಿಯೂ ಇದ್ದಾಳೆ; ಎಲ್ಲವೂ ಆಗಿದ್ದಾಳೆ; ಸರ್ವಸ್ವವನ್ನೂ ಸರ್ವದಾ ಸೃಷ್ಟಿಸುತ್ತಿರುವವಳೂ ನಿಯಂತ್ರಿಸುತ್ತಿರುವವಳೂ ಅವಳೆ’ ಎಂಬುದು. ಆ ಹುಚ್ಚಿನ ಕಾಲದಲ್ಲಿ ರಚಿತವಾದ ಮೂರು ಕವಿತೆಗಳಲ್ಲಿ ೨೩.೨.೧೯೨೮ರಂದು ರಚಿತವಾಗಿರುವ ’ತಾಯಿ’ ಎಂಬುದು ಕವಿಯ ಅಂದಿನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ! ೩ ೩ ೩ ೩ ಮಾತ್ರಾಗಣಗಳ ಪಂಕ್ತಿಗಳು ಗಮನಸೆಳೆಯುತ್ತವೆ.

ಎಲ್ಲಿ ನೋಡಲಲ್ಲಿ ತಾಯಿ
ಎನ್ನ ತಾಯಿಯು  ||ಪಲ್ಲವಿ||

ಕಲ್ಲು ಮರಗಳಲ್ಲಿ ತಾಯಿ
ಹಕ್ಕಿ ಹಾವುಗಳಲ್ಲಿ ತಾಯಿ
ಸಜ್ಜನರೆದೆಗಳಲ್ಲಿ ತಾಯಿ
ದುಷ್ಟರೆದೆಗಳಲ್ಲಿ ತಾಯಿ  ||೧||

ಯುದ್ಧರಂಗಗಳಲ್ಲಿ ಸಿಡಿವ
ಮದ್ದುಗುಂಡುಗಳಲಿ ತಾಯಿ,
ಬೆಟ್ಟ ಗುಡ್ಡಗಳಲಿ ಇರುವ
ಸಿದ್ಧರೊಡಲುಗಳಲಿ ತಾಯಿ  ||೨||

ಮಂಜುನಾದದಿಂದ ಹರಿವ
ಚೆಲುವು ತೊರೆಯ ಜಲದಿ ತಾಯಿ
ನಲಿದು ಮೆರೆವ, ಕವಿಯ ಕರೆವ
ಸುಮದ ಸೊಬಗಿನಲ್ಲಿ ತಾಯಿ  ||೩||

ನೀಲಗಗನತಳದಿ ಹೊಳೆವ
ರವಿಯು ಶಶಿಯು ತಾರೆಗಳಲಿ,
ದಿನವು ಬಂದು ತಿರುಗುತಿರುವ
ಹಗಲು ರಾತ್ರಿ ಎರಡರಲ್ಲಿ  ||೪||

ಗಾನದಲ್ಲಿ ಎನ್ನ ತಾಯಿ
ಮೇಣ್ ವಿನೋದದಲ್ಲಿ ತಾಯಿ,
ತತ್ತ್ವವೇತ್ತರಲ್ಲಿ ತಾಯಿ
ತತ್ತ್ವವಿಲ್ಲದರೊಳು ತಾಯಿ  ||೫||

ಕಾರಮಿಂಚಿನಲ್ಲಿ ತಾಯಿ,
ಕಾರ ಮಿಂಚೆ ಎನ್ನ ತಾಯಿ;
ವರ ವಸಂತನಲ್ಲಿ ತಾಯಿ
ಜಗದೊಳೆಲ್ಲ ಎನ್ನ ತಾಯಿ  ||೬||

ದುಃಖ ಸುಖದೊಳೆನ್ನ ತಾಯಿ,
ವಿಶ್ವರೂಪಿ ಎನ್ನ ತಾಯಿ;
ತಾಯಿ ಅಲ್ಲದೊಂದು ಇಲ್ಲ,
ಎಲ್ಲ ತಾಯಿ ತಾಯಿ ಎಲ್ಲ.  ||೭||

’ತಾಯಿ’ ಕವಿತೆಯುದಿಸಿದ ಮಾರನೆಯದಿನವೇ ರಚಿತವಾಗಿರುವ ’ನಾನರಿಯೆ ಎನಲಾರೆ’ ಎಂಬ ಕವಿತೆಯೂ ’ಜಗನ್ಮಾತೆಯೇ ಸರ್ವಸ್ವ’ ಎಂಬ ಅದ್ವೈತಭಾವವನ್ನು ಸ್ಫುರಿಸುತ್ತದೆ.


ನಾನರಿಯೆ ಎನಲಾರೆ, ನಾನರಿಯೆ ಎನಲಾರೆ,
ನಾನೆಲ್ಲವರಿತವನು ಎನಲಾರೆ, ತಾಯಿ;
ಒಂದ ನಾ ಬಲ್ಲೆ ನಾ ಎಂದಿಗದ ನಾ ಮರೆಯೆ:
ಎಲ್ಲ ನೀನೆ ಎಂದು, ಎನ್ನ ಮಾತಾಯಿ.

ಬನಗಳಲಿ ಸಂಚರಿಸೆ ಮರಗಳೆನ್ನುವುವೆನಗೆ
’ನೀನೆ ಅವನಲ್ಲವೇ? ಅವನಲ್ಲವೇ?’ ಎಂದು.
ತೊರೆಗಳಲಿ ನಾನಿಳಿಯೆ ತೊರೆಯ ಜಲ ಗುಟ್ಟಾಗಿ
’ನೀನೆ ನಾನಲ್ಲವೇ?’ ಎನ್ನುವುದು, ತಾಯಿ.

ಎಲ್ಲಿ ಕಣ್ಣಿಡಲಲ್ಲಿ ನೀನು ನಾನೊಂದಾಗಿ
ತೋರುವುದು ಕಂಗಳಿಗೆ, ಅನುಭವಕೆ, ಮನಕೆ;
ಎಲ್ಲ ನಿನ್ನಯ ಮಾಯೆ, ಎಲ್ಲ ನಿನ್ನಯ ಲೀಲೆ,
ಎನಗಾಗಿ ನೀ ಮಾಡಿದೀ ವಿಶ್ವ ನೀನೆ!

ಈ ಎರಡೂ ಕವಿತೆಗಳು ರಚನೆಯಾದ ಒಂದೆರಡು ದಿನಗಳ ಅಂತರದಲ್ಲಿ ರಚನೆಯಾಗಿರುವ ಇನ್ನೊಂದು ಕವಿತೆಗೆ ಶಿರ್ಷಿಕೆಯಿಲ್ಲ; ಎಲ್ಲಿಯೂ ಪ್ರಕಟವಾಗಿಲ್ಲ. ಇನ್ನೂ ಆಶ್ಚರ್ಯವೆಂದರೆ, ನೆನಪಿನ ದೋಣಿಯಲ್ಲಿ ಅದು ದಾಖಲಾಗುವವರೆಗೂ, ಅದನ್ನು ಒಮ್ಮೆ ಮಾತ್ರ ಕೇಳಿದ್ದ ಏಕೈಕ ವ್ಯಕ್ತಿಯೆಂದರೆ ಸ್ವಾಮಿ ಸಿದ್ಧೇಶ್ವರಾನಂದರು! ಮೈಲಿ ಬೇನೆಯ ದಿನಗಳಲ್ಲಿ ಕವಿಗಾದ ಅನುಭವವನ್ನು ಯಥಾವತ್ ಕಟ್ಟಿಕೊಡುವ ಕವಿತೆ ಎನ್ನಬಹುದು ಇದನ್ನು.


ಪರಬ್ರಹ್ಮ ಎನಗೆ ತಂದೆ,
ಮಹಾಕಾಳಿ ಎನ್ನ ತಾಯಿ;
ರಾಮಕೃಷ್ಣರೆನಗೆ ಗುರುವು,
ಶ್ರೀ ವಿವೇಕಾನಂದರೆನಗೆ ಗುರುಭಾಯಿ!

ಪುಣ್ಯ ಭೂಮಿ ತೊಟ್ಟಿಲೆನಗೆ
ತೂಗುವವನು ಸೂರ‍್ಯದೇವ;
ಗಗನ ತಳವೆ ನೀಲಿಕೊಡೆಯು,
ತಾರೆಯಾಳಿ ತಾಯಿಯಿತ್ತ ಹೊಳೆವ ಮಣಿಗಳು!

ಕಾಡುಬೆಟ್ಟ ಹೊಳೆಯು ಕಡಲು
ಮಳೆಯು ಚಳಿಯು ಬೆಂಕಿ ಗಾಳಿ
ಹಗಲು ಇರುಳು ಮಾಸ ಋತುವು
ಎನ್ನ ಕೂಡಿಯಾಡುತಿರುವ ಗೆಳೆಯರಾವಳಿ!

ರಾಮಕೃಷ್ಣದೇವರೆಮದು
ಎನ್ನ ಕರೆಯುವರೋ ಅಂದು
ಗೆಳೆಯ ಮೃತ್ಯವೊಡನೆ ಕೂಡಿ
ನಲಿದು ಹಾಡಿ ಬಾಲನಂತೆ ನಗುತ ತೆರಳುವೆ!

’ನಾನು ವಿವೇಕಾನಂದ’ ಎಂಬ ಅನುಭವದಂತೆಯೇ ಮತ್ತು ’ಪುಟ್ಟಪ್ಪ ಸತ್ತುಹೋದ.’ ಎಂಬ ಅನುಭವದಂತೆಯೆ ಅದೂ ತತ್‌ಕಾಲದ ಅನುಭವ ರೂಪದ್ದಾಗಿಯೇ ಹೊರಹೊಮ್ಮಿದೆ. ಕವಿಯ ಅನುಭಾವದಿಂದ ಮೂಡಿದ ಈ ಕವಿತೆ ಸುಮಾರು ಅರ್ಧ ಶತಮಾನದ ಕಾಲ ಕತ್ತಲಲ್ಲಿದ್ದು ಏಕೆ ಎಂಬುದೇ ಆಶ್ಚರ್ಯ! ನೆನಪಿನ ದೋಣಿಯಲ್ಲಿ ಕವಿ ಕೊಡುವ ಕಾರಣ ಹೀಗಿದೆ. ಈ ಕವಿತೆಯನ್ನು ಮೊದಲ ಬಾರಿಗೆ ಕೇಳಿದ್ದ ಸ್ವಾಮೀಜಿಗೆ ಈ ಅದರ ಒಂದೆರಡು ಸಾಲುಗಳು ಅತಿಯೆಂದು ತೋರಿ, ಅವರು No, no; That is too much’ ಎಂದಿರುತ್ತಾರೆ. ಸ್ವಾಮೀಜಿಗೆ ಅತಿಯೆಂದು ತೋರಿದ ಸಾಲು ’ಶ್ರೀ ವಿವೇಕಾನಂದರೆನಗೆ ಗುರುಭಾಯಿ’ ಎಂಬುದು. ಏಕೆಂದರೆ ಗುರುಬಾಯಿ ಎಂಬುದು ರಾಮಕೃಷ್ಣರ ಅಂತರಂಗ ಶಿಷ್ಯವರ್ಗಕ್ಕೆ ಸೇರಿದವರು ಮಾತ್ರ, ತಮ್ಮ ಸೋದರ ಸಂನ್ಯಾಸಿಗಳನ್ನು ಕರೆಯುತ್ತಿದ್ದ ರೀತಿ ಅದಾಗಿತ್ತು. ಆ ಕಾರಣದಿಂದ ಸ್ವಾಮೀಜಿಗೆ ಅದು ಅಸಮ್ಮತವಾಗಿತ್ತೋ ಏನೋ. ಆದರೆ ಕವಿಗೆ? ತಾನು ಅನುಭವಿಸಿದ್ದ ಉನ್ಮಾದ ಪ್ರಜ್ಞೆಗೆ ’ಪುಟ್ಟಪ್ಪ ಸತ್ತುಹೋದ. ನಾನು ವಿವೇಕಾನಂದ!’ ಎಂಬುದು ಎಷ್ಟು ಸಹಜವಾಗಿದ್ದಿತೋ ಅಷ್ಟೇ ಸ್ವಾಭಾವಿಕವಾಗಿತ್ತು ಎಂದು ತೋರುತ್ತದೆ, ಶ್ರೀ ವಿವೇಕಾನಂದರು ’ಗುರುಭಾಯಿ’ಯಾಗಿ ಇದ್ದುದ್ದು! ಕವಿಗೆ ವಿವೇಕಾನಂದತ್ವ ತಿರೋಹಿತವಾಗಿ ಪುಟ್ಟಪ್ಪತ್ವ ಪ್ರತಿಸ್ಥಾಪನೆಗೊಂಡ ತರುವಾಯ ಸ್ವಾಮೀಜಿ ಹೇಳಿದಂತೆಯೇ ಅನ್ನಿಸಿ, ಕವಿತೆ ಬೆಳಕಿಗೆ ಬಂದಿರಲಿಲ್ಲ, ಅಷ್ಟೆ!

ಕೊನೆಯಲ್ಲಿ, ಕವಿಯ ಮಾತುಗಳನ್ನೇ ಉಲ್ಲೇಖಿಸಿ ಈ ದೀರ್ಘ ಲೇಖನವನ್ನು ಮುಗಿಸಬಹುದು. "ಹಿಂದೆ ಯಾವ ಭಾವಾನುಭವಗಳನ್ನು ಕಂಡಕಂಡವರ ಮುಂದೆ ಹೇಳಿಕೊಳ್ಳದೆ ಪ್ರದರ್ಶಿಸದೆ ಸಂಯಮನ ಮಾಡಿ ಗೋಪ್ಯವಾಗಿಟ್ಟುಕೊಳ್ಳಲು ಸಮರ್ಥನಾಗಿದ್ದೆನೋ ಆ ಸಾಮರ್ಥ್ಯ ಕಾಯಿಲೆ ಬಿದ್ದು ಉಂಟಾದ ದೇಹದ ನರದೌರ್ಬಲ್ಯದ ದೆಸೆಯಿಂದ ಶಿಥಿಲವಾಗಿ, ಭಾವಗಳು ವಿಸೃಂಖಲವಾಗಿ ಅಭಿವ್ಯಕ್ತಗೊಂಡು ಘೋಷಿತವಾಗುತ್ತಿದ್ದುದು! ಈಗಲೂ ಕೂಡ (೧೯೭೩) ನನ್ನ ಕವಿಚೇತನದ ಭಾವಾನುಭವಗಳನ್ನೂ ಚಿಂತನೆಗಳನ್ನೂ ಮುಚ್ಚುಮರೆಯಿಲ್ಲದೆ ಲೋಕರಂಗದಲ್ಲಿ ಬಿಚ್ಚಿದೆನಾದರೆ ನಾನು ಅಂದಿಗಿಂತಲೂ ಹೆಚ್ಚಾಗಿ ಹುಚ್ಚನಾಗಿ ಕಾಣುವುದರಲ್ಲಿ ಸಂಶಯವಿಲ್ಲ! ಅದನ್ನೇ ಕಲೆಯ ಮತ್ತು ಕಾವ್ಯದ ರಂಗದಲ್ಲಿ ಬಿಚ್ಚಿ ಬರೆದು ನಾನು ಮಹಾಕವಿಯೆಂದೂ ರಸಋಷಿಯೆಂದೂ ಏನೇನೋ ವಿಶೇಷಣಗಳಿಂದ ಸುಪ್ರಸಿದ್ಧನೂ ಕೆಲವರಿಗೆ ಪೂಜ್ಯನೂ ಆಗಿಬಿಟ್ಟಿದ್ದೇನೆ. ಆದರೆ ಅದನ್ನೇನಾದರೂ ಲೋಕರಂಗಕ್ಕೆ ತಂದೆನಾದರೆ ಎಲ್ಲರಿಂದಲೂ ದೂರವಾಗಬೇಕಾಗುತ್ತದೆ; ಜೈಲಿನಲ್ಲಿ, ತಪ್ಪಿದರೆ ಹುಚ್ಚಾಸ್ಪತ್ರೆಯಲ್ಲಿ ನನ್ನ ಜೀವಮಾನವನ್ನು ಕಳೆಯಬೇಕಾಗುತ್ತದೆ! ಲೋಕರಂಗದ ಹುಚ್ಚನ್ನು ಕಲಾರಂಗಕ್ಕೆ ವರ್ಗಾಯಿಸುವುದೇ ಕಾವ್ಯರಂಗದ ಯಶಸ್ಸಿದ್ಧಿ!"