ಆತ್ಮವಿಶ್ವಾಸದ ಮಕ್ಕಳಿಗೆ ಹೆತ್ತವರು ಮಾದರಿ

ಆತ್ಮವಿಶ್ವಾಸದ ಮಕ್ಕಳಿಗೆ ಹೆತ್ತವರು ಮಾದರಿ

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲಿಕ್ಕಾಗಿ ಹೆತ್ತವರು ಏನು ಮಾಡಬೇಕು? ಮಕ್ಕಳಿಗೆ ತಾವೇ ಮಾದರಿ ಆಗಬೇಕು. ಇದು ಹೇಗೆ ಸಾಧ್ಯ? ಎಂಬುದನ್ನು ತಿಳಿಯಲಿಕ್ಕಾಗಿ ಕೆಲವು ಪ್ರಕರಣಗಳನ್ನು ಗಮನಿಸೋಣ.

ತಪ್ಪುಗಳಿಂದ ಕಲಿಯುವುದು:      ಆರು ವರುಷಗಳ ಪುಟ್ಟ ಹುಡುಗಿ ಫ್ರಿಜ್‍ನಿಂದ ಜ್ಯೂಸಿನ ಬಾಟಲಿ ಹೊರ ತೆಗೆಯುತ್ತಿದ್ದಳು. ಅದು ಕೈಜಾರಿ ಬಿದ್ದು ಒಡೆಯಿತು. ಜ್ಯೂಸ್ ನೆಲಕ್ಕೆ ಚೆಲ್ಲಿತು. ಅಮ್ಮನಿಂದ ಬಯ್ಗುಳದ ಸುರಿಮಳೆ ನಿರೀಕ್ಷಿಸುತ್ತ ನಿಂತಿದ್ದ ಆ ಬಾಲಕಿಗೆ ಅಚ್ಚರಿ ಕಾದಿತ್ತು.

ಅವಳ ಅಮ್ಮ ಮಗಳ ಮೈದಡವಿ ಶಾಂತಚಿತ್ತದಿಂದ ಕೇಳಿದಳು, "ಜ್ಯೂಸ್ ಚೆಲ್ಲಿ ಹೋಯಿತಾ? ಹೋಗಲಿ ಬಿಡು, ಈಗ ಏನು ಮಾಡೋಣ?" ("ಈಗ ಏನು ಮಾಡುತ್ತೀ?" ಎಂದು ಅಮ್ಮ ಕೇಳಲಿಲ್ಲ) "ನೀನೀಗ ಒಂದು ಹೊಸ ಆಡಬಹುದು. ಒಂದು ಕಡ್ಡಿ ತಗೋ. ನೆಲಕ್ಕೆ ಚೆಲ್ಲಿದ ಜ್ಯೂಸಿನಲ್ಲಿ ಕಡ್ಡಿ ಆಡಿಸ್ತಾ ಒಂದಷ್ಟು ಹೊತ್ತು ಆಡಿಕೋ" ಎನ್ನುತಾ ಅಮ್ಮ ಅತ್ತ ಹೋದಳು.

ಪುಟ್ಟ ಹುಡುಗಿ ಉಸಿರೆಳೆದು ಕೊಂಡಳು. ಅಮ್ಮ ಹೇಳಿದ್ದನ್ನು ನಂಬಲು ಅವಳಿಗೆ ಕೆಲವು ನಿಮಿಷಗಳೇ ತಗಲಿದವು. ಒಂದು ಕಡ್ಡಿ ತಂದು ನಿಧಾನವಾಗಿ ಹೊಸ ಆಟಕ್ಕಿಳಿದಳು. ಹತ್ತು ನಿಮಿಷಗಳಲ್ಲಿ ಇತ್ತ ಬಂದ ಅಮ್ಮ ಕೇಳಿದಳು, "ಹೇಗಿತ್ತು ಹೊಸ ಆಟ? ಚೆನ್ನಾಗಿತ್ತು ಅಲ್ಲವೇ? " ಈಗ ಮಗಳ ಆತಂಕವೆಲ್ಲ ಮಾಯ.


ಮಗಳು ಮುಗುಳ್ನಗುತ್ತಿದ್ದಂತೆ ಅಮ್ಮ ಹೇಳಿದಳು, "ಇದನ್ನೆಲ್ಲ ತೆಗೆಯೋಣ ಬಾ. ನಂಗೆ ಸ್ವಲ್ಪ ಸಹಾಯ ಮಾಡು. ಕಸಬರಿಕೆ ತಾ. ನೆಲ ಒರಸುವ ಬಟ್ಟೆ ತಾ. ಕಸಬರಿಕೆಯಿಂದ ಮೊದಲು ಜೋಪಾನವಾಗಿ ಗ್ಲಾಸಿನ ಚೂರು ತೆಗೆಯೋಣ. ಅನಂತರ ಚೆಲ್ಲಿದ ಜ್ಯೂಸನ್ನು ಬಟ್ಟೆಯಿಂದ ಒರಸೋಣ". ಅದೇ ರೀತಿಯಲ್ಲಿ, ಅಮ್ಮ-ಮಗಳು ಸೇರಿ ನೆಲ ಶುಚಿ ಮಾಡಿದರು. ("ಬಾಟಲಿ ಒಡೆದು ಹಾಕಿದ್ದೀಯಲ್ಲಾ, ನೀನೇ ಶುಚಿ ಮಾಡು" ಎನ್ನಲಿಲ್ಲ ಅಮ್ಮ.)

ಈಗ ಪುಟ್ಟ ಮಗಳ ಕೈ ಹಿಡಿದು ಫ್ರಿಜ್ಜಿನ ಹತ್ತಿರ ಅಮ್ಮ ಬಂದಳು. ಒಂದು ಪ್ಲಾಸ್ಟಿಕ್ ಸೀಸೆಯಲ್ಲಿ ನೀರು ತುಂಬಿ ಮಗಳ ಕೈಗೆ ಕೊಟ್ಟಳು. "ಇದನ್ನು ಫ್ರಿಜ್‍ನಲ್ಲಿಡು. ಇಟ್ಟ ಕೂಡಲೇ ನಿಧಾನವಾಗಿ ಹೊರಗೆ ತೆಗಿ. ಇದು ನಿನ್ನ ಕೈಯಿಂದ ಜಾರಿ ಬಿದ್ದರೂ ಒಡೆಯೋದಿಲ್ಲ" ಎಂದಳು. ಮಗಳು ಹಾಗೆಯೇ ಮಾಡಿದಳು. ಆದರೆ ಆ ಸೀಸೆ ಅವಳ ಪುಟ್ಟ ಕೈಗಳಿಂದ ಜಾರಿ ಬಿತ್ತು. "ಹಾಗಲ್ಲ, ಹೀಗೆ ಹಿಡಿ. ಎರಡು ಕೈಗಳ ಬೆರಳುಗಳಿಂದ ಸೀಸೆಯ ಕತ್ತು ಬಲವಾಗಿ ಹಿಡಿದು ಎತ್ತು" ಎನ್ನುತ್ತಾ ಅಮ್ಮ ಮಗಳಿಗೆ ತೋರಿಸಿ ಕೊಟ್ಟಳು.

ಎರಡನೇ ಸಲ ಕೈಗಳಿಂದ ಸೀಸೆ ಜಾರುತ್ತಿದ್ದಂತೆ ಮಗಳು ಸಂಭಾಳಿಸಿಕೊಂಡಳು. ಇನ್ನೆರಡು ಸಲ ಅದನ್ನೇ ಅಭ್ಯಾಸ ಮಾಡಿದಳು. ಕೆಲವೇ ನಿಮಿಷಗಳಲ್ಲಿ ಫ್ರಿಜ್‍ನಿಂದ ಸೀಸೆಯನ್ನು ಕೈಜಾರದಂತೆ ಹೊರ ತೆಗೆಯುವ ವಿಧಾನ ಕಲಿತು ಬಿಟ್ಟಳು ಆ ಪುಟ್ಟ ಬಾಲಕಿ.

ಅಂದು ಆ ಮಮತೆಯ ತಾಯಿ ತನ್ನ ಮಗಳಿಗೆ ಆ ಸನ್ನಿವೇಶದಲ್ಲಿ ಬದುಕಿನ ಪಾಠವನ್ನೇ ಕಲಿಸಿದಳಲ್ಲವೇ? ಮಕ್ಕಳು ತಪ್ಪು ಮಾಡಿದಾಗ ಮಕ್ಕಳ ಮೇಲೆ ಎಗರಾಡುವ, ಮಕ್ಕಳನ್ನು ಬಡಿದು ಹಾಕುವ ಹೆತ್ತವರು ಮಕ್ಕಳಿಗೆ ಎಂತಹ ಮಾದರಿ ಆಗುತ್ತಾರೆ? ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ ಎಂಬುದನ್ನು ಹೆತ್ತವರು ಈ ಘಟನೆಯಿಂದ ಕಲಿಯಬಹುದು.

ಪಕ್ಷಿಯ ಹೆಸರೇನು?     ನನ್ನ ಮಗಳಿಗೆ ೩ ವರುಷ ತುಂಬಿದಾಗ ನಾನು ಮಾಡಿದ ಕೆಲಸ ಮಂಗಳೂರಿನ ಪುಸ್ತಕದಂಗಡಿಯಿಂದ ಚಿತ್ರಗಳಿರುವ ನೂರು ಪುಸ್ತಕಗಳನ್ನು ಖರೀದಿಸಿ ಮನೆಗೆ ತಂದದ್ದು. (ಯಾಕೆಂದರೆ ಮಕ್ಕಳಿಗೆ ಭಾಷೆ ಮತ್ತು ವಿಷಯ ಕಲಿಸಲು ಪುಸ್ತಕಗಳು ಸಹಕಾರಿ. ಚಿತ್ರಗಳನ್ನು ತೋರಿಸುತ್ತ ಕತೆ ಹೇಳುತ್ತಿದ್ದರೆ ಮಕ್ಕಳ ನೆನಪಿನಲ್ಲಿ ತುಂಬಿಕೊಳ್ಳುತ್ತವೆ ಚಿತ್ರಗಳು ಮತ್ತು ಅವುಗಳ ಹೆಸರುಗಳು.)

ಅನಂತರ ನಮ್ಮ ಮನೆಯಲ್ಲಿ ಪ್ರತಿದಿನ ಸಂಜೆ ಆ ಪುಸ್ತಕಗಳ "ಓದು". ನಾನು ಆಫೀಸಿನಿಂದ ಬರುವುದು, ಮಗಳು ಒಂದು ಪುಸ್ತಕ ತರುವುದು, ನಾನು ಅದರಲ್ಲಿದ್ದ ಚಿತ್ರಗಳನ್ನು ತೋರಿಸುತ್ತ ಅವಳೊಂದಿಗೆ ಮಾತನಾಡುವುದು.

ಅದೊಂದು ದಿನ ಪುಟ್ಟ ಮಗಳು ತಂದ ಪುಸ್ತಕದಲ್ಲಿ ಇದ್ದದ್ದು ಪಕ್ಷಿಗಳ ಚಿತ್ರಗಳು. ಅವಳು ಒಂದೊಂದೇ ಪುಟ ತಿರುವಿ ಹಾಕಲು ತೊಡಗಿದಳು. ಆಯಾ ಪುಟದಲ್ಲಿದ್ದ ಚಿತ್ರದ ಪಕ್ಷಿಯ ಬಗ್ಗೆ ನಾನು ಹೇಳತೊಡಗಿದೆ: ಗಿಡುಗ, ಗುಬ್ಬಚ್ಚಿ, ಕಾಗೆ, ಕೋಗಿಲೆ, ಕೋಳಿ, ಬಾತುಕೋಳಿ, ಪಾರಿವಾಳ, ಮಿಂಚುಳ್ಳಿ ಇತ್ಯಾದಿ. ಮುಂದಿನ ಪುಟವನ್ನು ಮಗಳು ತೆರೆದಾಗ ನಾನು ಮಾತಿಲ್ಲದೆ ಕೂತೆ. ಯಾಕೆಂದರೆ ಆ ಪಕ್ಷಿಯ ಹೆಸರು ನನಗೆ ಗೊತ್ತಿರಲಿಲ್ಲ. ನನ್ನ ಮೌನ ಗಮನಿಸಿದ ಮಗಳು ಕೇಳಿದಳು, "ಇದ್ಯಾವ ಪಕ್ಷಿ?" ಒಂದು ಪಕ್ಷಿಯ ಹೆಸರು ಗೊತ್ತಿಲ್ಲವಲ್ಲ ಎಂದು ನನಗೆ ನನ್ನ ಬಗ್ಗೆ ಅಸಮಾಧಾನ. ಮಗಳು ಮತ್ತೆಮತ್ತೆ ಅದೇ ಪ್ರಶ್ನೆ ಕೇಳಿದಾಗ ಕಿರಿಕಿರಿ. ಪುಟದ ಕೆಳಗಿನ ವಿವರಣೆ ಓದಿ ತಿಳಿಯಲಾಗದ ಅಸಹಾಯಕತೆ. (ಯಾಕೆಂದರೆ ಅದು ರಷ್ಯನ್ ಭಾಷೆಯ ಪುಸ್ತಕ.) "ಗೊತ್ತಿಲ್ಲ" ಎಂದು ಮಗುವಿನೊಂದಿಗೆ ಒಪ್ಪಿಕೊಳ್ಳಲು ನನ್ನ ದೊಡ್ಡತನ ಅಡ್ಡಿ.

ಈ ಸಂಕಟದಿಂದ ಪಾರಾಗಲು ದೊಡ್ಡವರ ಬುದ್ಧಿವಂತಿಕೆ ಬಳಸಿದೆ. "ಮುಂದಿನ ಪುಟ ತೆಗಿ" ಎಂದೆ. "ಇದೇನು ಹೇಳಿ" ಮಗುವಿನ ಆಗ್ರಹದ ಪ್ರಶ್ನೆ. "ಅದು ಇರಲಿ ಬಿಡು, ಆಚೆ ಪುಟದ್ದು ನೋಡೋಣ" ಎಂದೆ. ನನ್ನ ಪುಸಲಾಯಿಸುವಿಕೆ ಅರ್ಥವಾಗದೆ, ಪುಟ್ಟ ಮಗಳು ಒಂದು ಕ್ಷಣ ನನ್ನನ್ನು ದಿಟ್ಟಿಸಿ ನೋಡಿದಳು. ಏನನ್ನಿಸಿತೋ, ಆ ಪುಸ್ತಕವನ್ನು ಮಡಿಚಿಟ್ಟು ಎದ್ದು ಹೋದಳು.

ಇಂತಹ ಸಂಧರ್ಭಗಳಲ್ಲಿ ಹೆತ್ತವರು ಮಕ್ಕಳನ್ನು ಬೇರೆಬೇರೆ ರೀತಿಗಳಲ್ಲಿ ಮ್ಯಾನಿಪುಲೇಟ್ ಮಾಡಬಹುದು. "ಬಾ, ಟಿವಿ ನೋಡುವಾ", "ಆ ಬಾಲ್ ತಾ, ಆಟವಾಡೋಣ" ಇತ್ಯಾದಿ. ಅದರ ಬದಲಾಗಿ ಮಕ್ಕಳೆದುರು ತಪ್ಪು ಒಪ್ಪಿಕೊಂಡರೆ, ಮಕ್ಕಳಿಗೆ ಹೆತ್ತವರ ಬಗ್ಗೆ ಸದಭಿಪ್ರಾಯ ಬೆಳೆದೀತು ಅಲ್ಲವೇ?

ವಿವಿಧ ವಿಷಯಗಳಲ್ಲಿ ಮಕ್ಕಳ ಆಸಕ್ತಿ ಕುದುರಿಸಬೇಕಾದರೆ ಅವುಗಳ ಬಗ್ಗೆ ಹೆತ್ತವರೂ ಒಂದಷ್ಟು ಕಲಿಯ ಬೇಕಾಗುತ್ತದೆ. ಹೆತ್ತವರು ಈ ಜವಾಬ್ದಾರಿ ನಿರ್ವಹಿಸದೆ, ಕೊನೆಗೆ ಶಿಕ್ಷಕರು ಅಥವಾ ಸಿಲೆಬಸ್‍ನ ಮೇಲೆ ತಪ್ಪು ಹೊರಿಸುತ್ತಾರೆ ಅನಿಸುವುದಿಲ್ಲವೇ? ಹೆತ್ತವರಲ್ಲಿ ಓದಿ-ಬರೆಯುವ ಅಭ್ಯಾಸ ಇಲ್ಲದಿದ್ದರೆ, ಮಕ್ಕಳಲ್ಲಿ ಇದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?

ಅದು ಮಾಡಬೇಡ, ಇದು ಮಾಡಬೇಡ:     ಬೆಳಿಗ್ಗೆ ನಿದ್ದೆಯಿಂದೇಳುವ ಮಗು ಹೆತ್ತವರಿಂದ ಎಂತಹ ಮಾತುಗಳನ್ನು ಕೇಳುತ್ತದೆ? ಮುಖ ತೊಳೆಯಲಿಕ್ಕಾಗಿ ಮಗ್‍ನಲ್ಲಿ ನೀರೆತ್ತಲು ಹೋದರೆ "ನೀನು ನೀರು ತೆಗೀಬೇಡ, ಚೆಲ್ಲುತ್ತಿ, ನಾನೇ ಕೊಡ್ತೇನೆ" ಎಂಬ ಮಾತು. ಕುಡಿಯಲಿಕ್ಕಾಗಿ ಲೋಟದಲ್ಲಿ ನೀರು ತೆಗೆಯಲು ಹೋದರೆ, "ಅದೆಲ್ಲ ನಿನ್ನಿಂದ ಆಗೋದಿಲ್ಲ, ನಾನೇ ಕೊಡ್ತೇನೆ" ಎಂಬ ಹೇಳಿಕೆ. ರಾತ್ರಿ ಮಲಗುವ ವರೆಗೂ ಇಂತಹ ಮಾತುಗಳನ್ನೇ ಹೆತ್ತವರಿಂದ ಮಗು ಕೇಳುವುದು ಜಾಸ್ತಿ. ಪುಟ್ಟ ಮಗು ಮೆಟ್ಟಲು ಇಳಿಯಲು ಹೋದಾಗ, "ಬೇಡಬೇಡ, ಬೀಳ್ತೀಯಾ" ಎನ್ನುವ ಹೆತ್ತವರು, ಆ ಮಗು ಮೆಟ್ಟಲು ಹತ್ತಲು ಹೋದಾಗಲೂ ಅದೇ ಮಾತು ಹೇಳ್ತಾರೆ. ಇದರಿಂದ ಮಗುವಿಗೆ ಗೊಂದಲ.

ಇಂಥ ಮಾತುಗಳು, ಅದೂ ಹೆತ್ತವರಿಂದ , ಮಗುವಿನ ಆತ್ಮವಿಶ್ವಾಸವನ್ನೇ ಅದುಮುತ್ತವೆ. ತನ್ನಿಂದ ಯಾವ ಕೆಲಸವನ್ನೂ ಸರಿಯಾಗಿ ಮಾಡಲಿಕ್ಕಾಗದು ಎಂಬ ನಕಾರಾತ್ಮಕ ಭಾವನೆಯನ್ನು ಮಗುವಿನಲ್ಲಿ ಬೆಳೆಸುತ್ತವೆ. ಇದರ ಬದಲಾಗಿ ಹೆತ್ತವರು ಸಕಾರಾತ್ಮಕವಾಗಿ ಅದನ್ನೇ ಹೇಳತೊಡಗಿದರೆ..... ಉದಾಹರಣೆಗೆ, ಮಗು ಮೆಟ್ಟಲು ಇಳಿಯುವಾಗ, "ಮೆಟ್ಟಲು ನೋಡ್ಕೊಂಡು ಇಳಿ, ಒಂದೊಂದೇ ಮೆಟ್ಟಲು ಇಳಿದು ಬಾ, ನಿನಗೆ ಇಳೀಲಿಕ್ಕೆ ಆಗ್ತದೆ" ಎನ್ನುತ್ತಾ ಪ್ರೋತ್ಸಾಹಿಸಿದರೆ ..... ಬಾಲ್ಯದಲ್ಲಿ ಕೇಳಿದ ಇಂತಹ ಮಾತುಗಳು ಬದುಕಿನುದ್ದಕ್ಕೂ ವ್ಯಕ್ತಿಗೆ ಧನಾತ್ಮಕ ಸಂದೇಶ ನೀಡಬಲ್ಲವು.

ಅದೇನು, ಇದೇನು?     ಪ್ರಶ್ನೆ ಕೇಳುವುದು ಮಗುವಿನ ಸಹಜ ಗುಣ. ಆದರೆ ತನ್ನದೇ ಮಗು ಮುಗ್ಧ ಪ್ರಶ್ನೆಗಳನ್ನು ಕೇಳಿದಾಗ ಹೆತ್ತವರ ಪ್ರತಿಕ್ರಿಯೆ ಹೇಗಿರುತ್ತದೆ?

ಐದು ವರುಷಗಳ ಒಂದು ಮಗು ಮತ್ತು ಮಗುವಿನ ತಂದೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ರಸ್ತೆ ಪಕ್ಕದ ಮರಗಿಡಗಳನ್ನು ಗಮನಿಸುತ್ತಿದ್ದ ಮಗು ಕೇಳಿತು, "ಅಪ್ಪ, ಅದ್ಯಾವ ಮರ?" "ಅದು ಮಾವಿನ ಮರ, ಬೇಗ ನಡಿ" ಎಂಬ ಉತ್ತರ ಅಪ್ಪನಿಂದ. ತುಸು ಮುಂದೆ ನಡೆದಾಗ, ಮಗುವಿನ ಎರಡನೇ ಪ್ರಶ್ನೆ, "ಅಪ್ಪ, ಇದ್ಯಾವ ಮರ?" ಈಗ ಗದರಿಕೆಯೇ ಅಪ್ಪನ ಉತ್ತರ.

"ಏನೋ ಒಂದು ಮರ, ನಿಂಗೆ ಮಾತಾಡದೆ ಬರೋಕಾಗಲ್ವ?" ಅದಾಗಿ ಸ್ವಲ್ಪ ಹೊತ್ತಿನಲ್ಲಿ ಅಂಜುತ್ತಲೇ ೩ನೇ ಪ್ರಶ್ನೆ ಕೇಳಿತು ಮಗು, "ಅಪ್ಪ, ಅದೆಂಥ ಮರ?"

ಈಗ ಅಪ್ಪನ ಸಿಟ್ಟು ಕೆರಳಿತು. ’ಬಾಯಿ ಮುಚ್ಕೊಂಡು ಬಾರದಿದ್ರೆ ಎರಡು ಬಿಗಿತೇನೆ ನೋಡು" ಎಂದು ಅಪ್ಪ ಅಬ್ಬರಿಸಿದಾಗ, ಮಗುವಿನ ಪ್ರಶ್ನೆಗಳೆಲ್ಲ ಗಂಟಲಿನಲ್ಲೇ ಉಳಿದವು. ಹೀಗೆ ಮುದುಡಿ ಹೋದ ಮಕ್ಕಳ "ಪ್ರಶ್ನಿಸುವ ಹೂಮನಸ್ಸು" ಮತ್ತೆ ಅರಳೀತೇ? ಮಕ್ಕಳ ಪ್ರಶ್ನೆಗಳನ್ನು ಎದುರಿಸುವ ತಾಳ್ಮೆ ಹಾಗೂ ಉತ್ತರಿಸುವ ಕೌಶಲ್ಯ ಹೆತ್ತವರು ಕಲಿಯಬೇಡವೇ? ಇಲ್ಲವಾದರೆ ಮಕ್ಕಳ ಕುತೂಹಲ ಕಮರಿ ಹೋಗಲು, ಆತ್ಮವಿಶ್ವಾಸ ನಾಶವಾಗಲು ಹೆತ್ತವರು ಕಾರಣ ಆಗೋದಿಲ್ಲವೇ?    
 

Comments