ಮಡೆಸ್ನಾನ ಹೊಸ ತಿರುವು

ಮಡೆಸ್ನಾನ ಹೊಸ ತಿರುವು

ಸಂತೋಷ್ ಕುಮಾರ್

ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧವನ್ನು ರದ್ದುಪಡಿಸುವ ಆದೇಶವನ್ನೂ ಸಹ ನೀಡಲಾಯಿತು. ಇದನ್ನು ರಾಜಕೀಯ ವ್ಯವಸ್ಥೆಯ ಲೋಪದೋಷ ಅಥವಾ ದೌರ್ಬಲ್ಯ ಹಾಗೂ ಆಚರಣೆಯ ಅಥವಾ ಅದನ್ನು ಆಚರಿಸುವವರ ಸಂಸ್ಕೃತಿಯ ವಿಶಿಷ್ಟತೆ ಎಂಬ ಎರಡೂ ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಇಲ್ಲಿ ಎರಡನೇ ಆಯಾಮದಿಂದ ಈ ಘಟನೆಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗುವುದು.

ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಹೊರಡಿಸುತ್ತಿದ್ದಂತೆ ವಿಶೇಷವಾಗಿ ನಮಗೆ ಆ ಆಚರಣೆಯಲ್ಲಿ ಭಾಗವಹಿಸುವ ಭಕ್ತರು ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬ ಕುತೂಹಲವಿತ್ತು. ಏಕೆಂದರೆ ಇದೇ ಮಡೆಸ್ನಾದ ಕುರಿತು ಹಿಂದೊಮ್ಮೆ ಸಂಪದ ಬ್ಲಾಗ್ ನಲ್ಲಿಧೀರ್ಘವಾದ ಚರ್ಚೆಯನ್ನು ಮಾಡಿದ್ದೆವು. ಆ ಚರ್ಚೆಯಲ್ಲಿ ಮಡೆಸ್ನಾನದ ಮೇಲೆ ನಿಷೇಧವನ್ನು ಹೇರಲು ಭಕ್ತರುಗಳಿಗಿಂತ ಬೇರೆಯವರು ಒತ್ತಾಯ ಮಾಡಿರುವುದು ಇದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಲು ಆಸ್ಪದ ಮಾಡಿಕೊಡುತ್ತದೆ. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಬಂದ ಕೂಡಲೆ ದೇವಾಳಯದ ತೇರನ್ನು (ಬ್ರಹ್ಮರಥ) ಸಿಂಗರಿಸುವ ಮಲೆಕುಡಿಯ ಸಮುದಾಯದವರು ತಮ್ಮ ಕಾರ್ಯವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತನ್ನ ಆದೇಶವನ್ನು ಹಿಂಪಡೆಯಬೇಕಾಯಿತು. ಮಲೆಕುಡಿಯ ಸಮುದಾಯವು ಮಡೆಸ್ನಾನವನ್ನು ನಿಲ್ಲಿಸಿದರೆ ರಥವನ್ನು ತಾವು ಸಿಂಗರಿಸುವುದಿಲ್ಲ ಎಂಬುದಾಗಿ ಹಾಗೂ ನಮ್ಮ ಸಂಪ್ರದಾಯಗಳಲ್ಲಿ ಇತರರು ಮಧ್ಯಪ್ರವೇಶ ಮಾಡುವುದು ಅಥವಾ ಅದನ್ನು ಮುರಿಯುವುದು ತರವಲ್ಲ ಎಂಬುದು ಅವರ ನಿಲುವಾಗಿತ್ತು. ಹೀಗೆ ಹೇಳುವ ಮೂಲಕ ಆಚರಣೆಗಳನ್ನು ನಿಷೇಧಿಸುವ ಅಥವಾ ರದ್ದುಗೊಳಿಸುವ ಹಕ್ಕು ಅದನ್ನು ಆಚರಿಸುವವರಿಗೆ ಇರುತ್ತದೆಯೇ ಹೊರತು ಆಡಳಿತ ನಿರ್ವಹಿಸುವ ಸಂಸ್ಥೆಗಳಿಗಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದಂತಿದೆ. ಎಲ್ಲಿಯವರೆಗೆ ಆಚರಣೆಗಳಲ್ಲಿ ಅವರಿಗೆ ದೋಷಗಳು ಕಂಡುಬರುವುದಿಲ್ಲವೋ ಅಲ್ಲಿಯವರೆಗೆ ಅದನ್ನು ನಿಲ್ಲಿಸಲು ಅವರಿಗೆ ಸಕಾರಣಗಳು ದೊರಕುವುದಿಲ್ಲ. ಈಗಲೂ ಅದನ್ನೇ ಆ ಸಮುದಾಯದವರು ಮಾಡಿದ್ದಾರೆ. ಹಾಗಾದರೆ ಇಲ್ಲಿ ನಮಗೆ ಒಂದು ಪ್ರಶ್ನೆ ಏಳುತ್ತದೆ ಅದನ್ನು ಕೇಳುವ ಮೂಲಕ ನನ್ನ ಅನಿಸಿಕೆಯನ್ನು ಮುಗಿಸುತ್ತೇನೆ. ಮಡೆಸ್ನಾನದಂತಹ ಆಚರಣೆಯಲ್ಲಿ ದಲಿತ ಸಂಘಟನೆಗಳಿಗೆ ಹಾಗೂ ಆಡಳಿತಾತ್ಮಕ ಸಂಸ್ಥೆಗಳಿಗೆ ಗೋಚರಿಸುವ ಅನ್ಯಾಯ, ಅಕ್ರಮ, ಶೋಷಣೆಗಳು ಅದನ್ನು ಆಚರಿಸುವವರಿಗೆ ಏಕೆ ಕಾಣುವುದಿಲ್ಲ?

*Image Mahesh Pucchapdy