ಕನ್ನಡಕ್ಕೆ ಮೊದಲ ' ಸರಸ್ವತಿ ಸಮ್ಮಾನ '

ಕನ್ನಡಕ್ಕೆ ಮೊದಲ ' ಸರಸ್ವತಿ ಸಮ್ಮಾನ '

2011 ನೇ ನವಂಬರ್ 16 ಗುರುವಾರ ಕನ್ನಡ ಸಾಹಿತ್ಯಾಭಿಮಾನಿಗಳು ಸಂತಸಪಡುವ ಮತ್ತೊಂದು ಅವಕಾಶ ಒದಗಿ ಬಂತು. ' ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ ' ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಅವರ ' ಮಂದ್ರ ' ಕಾದಂಬರಿಗೆ 2010 ನೇ ಸಾಲಿನ
' ಸರಸ್ವತಿ ಸಮ್ಮಾನ ' ಪ್ರಶಸ್ತಿ ಕೊಡಲ್ಪಟ್ಟಿತು. ಇದು ಭಾರತೀಯ ಭಾಷೆಗಳ ಉತ್ಕೃಷ್ಟ ಸಾಹಿತಿಗಳನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿ. ಕುವೆಂಪು ಜ್ಞಾನ ಪೀಠ ಪ್ರಶಸ್ತಿ ಪಡಸೆದ ಮೊದಲ ಕನ್ನಡ ಸಾಹಿತಿಯಾದರೆ, ಭೈರಪ್ಪ ಮೊದಲ  ' ಸರಸ್ವತಿ ಸಮ್ಮಾನ ' ಪಡೆದ ಕನ್ನಡ ಸಾಹಿತಿ.
    ಈ ವರ್ಷ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ಮನ್ನಣೆಯ ಸುರಿಮಳೆ. ಕಳೆದ ತಿಂಗಳು ಕನ್ನಡದ ಪ್ರತಿಷ್ಟಿತ ಜಾನಪದ ಕವಿ ಚಂದ್ರಶೇಖರ ಕಂಬಾರರಿಗೆ ಕನ್ನಡದ ಎಂಟನೇ ' ಜ್ಞಾನಪೀಠ ಪ್ರಶಸ್ತಿ ' ಸಂದರೆ, ಕನ್ನಡದ ರಾಜ್ಯೋತ್ಸವ ಮಾಸ ನವಂಬರ್ನಲ್ಲಿ ಭೈರಪ್ಪನವರಿಗೆ ' ಸರಸ್ವತಿ ಸಮ್ಮಾನ ' ಲಭಿಸಿದೆ. ಈ ಎರಡೂ ದೈತ್ಯ ಪ್ರತಿಭೆಗಳಿಗೆ ನಮ್ಮ ಅಭಿನಂದನೆ ಸಲ್ಲಿಸೋಣ. ಪ್ರಶಸ್ತಿಗೆ ಕೊಡ ಮಾಡುವ ಬೃಹತ್ ಮೊತ್ತದ ಹಣದಿಂದ ಪ್ರಶಸ್ತಿಯ ತುಲನೆ ಮಾಡುವುದು ಬೇಡ. ಪ್ರಶಸ್ತಿ ಕೊಡ ಮಾಡುವ ಸಂಸ್ಥೆಗಳು ರಾಷ್ಟೀಯ ಮಟ್ಟದವು ಮತ್ತು ಇವು ಸರಕಾರಿ ಸ್ವಾಮ್ಯಕ್ಕೆ ಒಳ ಪಟ್ಟವುಗಳಲ್ಲ. ಈ ಪ್ರಶಸ್ತಿಗಳು ಬೇರಾರಿಗೋ ಸಲ್ಲಬೇಕಿತ್ತು ಇವರಿಗೆ ಸಲ್ಲಬಾರದಿತ್ತು ಪ್ರಶಸ್ತಿ ಪಡೆಯುವಲ್ಲಿ ಲಾಬಿ ನಡೆದಿದೆ ಎಂಬ ಕ್ಷುಲ್ಲಕ ಊಹೆ ಬೇಡ. ಇವರಿಬ್ಬರಿಗೂ ಸಂದಿದೆ ಸಂತಸ ಪಡೋಣ. ಮುಂದೆ ಉಳಿದವರಿಗೆ ಸಲ್ಲಲಿ ಆಗಲೂ ಸಂಭ್ರಮಿಸೊಣ.


     ಈ ಶುಭ ಸಂಧರ್ಭದಲ್ಲಿ ಭೈರಪ್ಪನವರು ಪಟ್ಟ ಪರಿಶ್ರಮ, ಅವರು ನಡೆದು ಬಂದ ದಾರಿ ಅಷ್ಟು ಸುಲಭದ್ದಾಗಿರಲಿಲ್ಲ. ಈ ಬಗ್ಗೆ ಅವರು ತಮ್ಮ ಭಿತ್ತಿ ಆತ್ಮ ಚರಿತ್ರಯಲ್ಲಿ ಸಮಗ್ರವಾಗಿ ನಿರೂಪಿಸಿದ್ದಾರೆ. ಅವರ ಕಷ್ಟದ ಬದುಕು ಅವರನ್ನು ಅಂತಮರ್ುಖಿ ಯನ್ನಾಗಿಸುತ್ತದೆ. ಅವರು ಯಾವುದೆ ಗುಂಪುಗಾರಿಕೆ ಮಾಡಿದವರಲ್ಲ. ತಾವಾಯಿತು ತಮ್ಮ ಬರವಣಿಗೆಯಾಯಿತು ಎಂದು ನಿಲರ್ಪ್ತ ವಾಗಿರುತ್ತ ಜೀವನದುದ್ದಕ್ಕೂ ನಡೆದು ಬಂದವರು. ಭೈರಪ್ಪ ತತ್ವಶಾಸ್ತ್ರದಲ್ಲಿ ಎಂ.ಎ.ಮಾಡು ತ್ತಾರೆ. ನಂತರ ಅವರು ಹುಬ್ಬಳ್ಳಿಯ ಕೆ.ಎಲ್.ಇ.ಸಂಸ್ಥೆಯ ಕಾಡ ಸಿದ್ದೇಶ್ವರ ಕಲಾ ಕಾಲೇಜಿನಲ್ಲಿ ರೀಡರ್ ಆಗಿ ತಮ್ಮ ಕರ್ತವ್ಯ ಪ್ರಾರಂಭಿಸುತ್ತಾರೆ. ಆಗ ಅವರಿಗೆ ಅಮೇರಿಕಾದ ಯುನಿವರ್ಸಿಟಿ ಯೊಂದರಿಂದ ಫುಲ್ ಬ್ರೈಟ್ ಸ್ಕಾಲರಶಿಪ್ ದೊರೆಯುತ್ತದೆ. ಆದರೆ ಅವರಿಗೆ ಅನುಮತಿ ಸಿಗುವುದಿಲ್ಲ. ಮನನೊಂದ ಅವರು ಅಲ್ಲಿಯ ವೃತ್ತಿಯನ್ನು ಬಿಟ್ಟು ಗುಜರಾತಿಗೆ ತೆರಳುತ್ತಾರೆ. ಅಲ್ಲಿ ಅವರ ' ಟ್ರೂತ್ ಎಂಡ್ ಬ್ಯೂಟಿ ' ಕೃತಿಗೆ ಬರೋಡಾದ ಸಯ್ಯಾಜಿರಾವ್ ಯುನಿವರ್ಸಿಟಿಯಿಂದ ಪಿ.ಹೆಚ್.ಡಿ. ದೊರೆಯುತ್ತದೆ. 1967 ರಲ್ಲಿ ದೆಹಲಿಯ ಎನ್.ಸಿ.ಇ ಸೇರಿ ಸೇವೆ ಸಲ್ಲಿಸಿ 1971 ರಲ್ಲಿ ಮೈಸೂರಿಗೆ ಬಂದು ರೀಜನಲ್ ಕಾಲೇಜ್ ಸೇರಿ 1991 ರಲ್ಲಿ ನಿವೃತ್ತಿ ಹೊಂದುತ್ತಾರೆ.
     ಅವರು ತಮ್ಮ ವಿದ್ಯಾರ್ಥಿ ಜೀವನದ ಕಾಲದಲ್ಲಿ ಎ.ಎನ್.ಮೂರ್ತಿರಾವ, ಎಸ.ವಿ.ರಂಗಣ್ಣ, ವಿ.ಸೀತಾರಾಮಯ್ಯ, ಶಿವರಾಮ ಕಾರಂತ, ವಿ.ಕೃ.ಗೋಕಾಕ, ಅನಕೃ ವಿಶೇಷವಾಗಿ ತತ್ವಶಾಸ್ತ್ರದ ಪೊಫೆಸರ್ ಯಮುನಾ ಮೂರ್ತಿಯವರ ಉಪನ್ಯಾಸಗಳಿಂದ ಪ್ರಭಾವಿತರಾಗುತ್ತಾರೆ. ಓ ಹೆನ್ರಿ,
ಮೊಪಾಸಾ, ಸ್ಯಾಮುವೆಲ್ ಬೆಕೆಟ್, ಜೀನ ಪಾಲ್ ಸಾರ್ತರ್, ಅಲ್ಬರ್ಟ ಕಮೂ, ಜೇಮ್ಸ್ ಜಾಯ್ಸ್ ಮತ್ತು ಡಿ.ಹೆಚ್.ಲಾರೆನ್ಸ್ ಮುಂತಾದ ನವ್ಯ ಪ್ರತಿಪಾದಕರ ಹಾಗೂ ರಶಿಯಾದ ಲಿಯೋ ಟಾಲ್ ಸ್ಟಾಯ್, ಬೋರಿಸ್ ಪ್ಯಾಸ್ಟರ್ ನಾಕ್ ಮತ್ತು ದಾಸ್ತೋವಸ್ಕಿ ಯಂತಹವರ ಕೃತಿಗಳನ್ನು ಓದಿ ಮೆಚ್ಚಿ  ಕೊಳ್ಳುತ್ತಾರೆ. ಜಗತ್ಪ್ರಸಿದ್ಧ ಚಲನಚಿತ್ರ ನಿದರ್ಶಕರಾದ ಭಾರತದ ಸತ್ಯಜೀತ ರಾಯ್, ಸ್ವೀಡನ್ನಿನ ಇಂಗಮಾರ್ ಬರ್ಗಮನ್, ಜಪಾನಿನ ಅಕಿರಾ ಕೋರುಸಾವಾ ಮಂತಾದವರ ಚಿತ್ರಗಳಿಂದ ಪ್ರಭಾವಿತ ರಾಗುತ್ತಾರೆ.
    ಇವರು ಒಂದು ಆತ್ಮ ಚರಿತ್ರೆ, ನಾಲ್ಕು ಚಿಂತನ ಗ್ರಂಥಗಳು ಮತ್ತು ಅನೇಕ ಕಾದಂಬರಿ ಗಳನ್ನು ಬರೆದಿದ್ದಾರೆ.ಅವರ ಗ್ರಹಭಂಗ ಮತ್ತೂ ದಾಟು ಕೃತಿಗಳು ಭಾರತೀಯ 14 ಭಾಷೆಗಳಲ್ಲಿ ಪ್ರಕಟ ಗೊಂಡಿವೆ. ವಂಶವೃಕ್ಷ, ಪರ್ವ, ಸಾಕ್ಷಿ  ಮತ್ತು ದಾಟು ಕಾದಂಬರಿಗಳು ಇಂಗ್ಲೀಷ್ ಭಾಷೆಗೆ ತಜರ್ುಮೆ ಗೊಂಡಿವೆ.ಇನ್ನೂ ಹಲವು ಕೃತಿಗಳು ಮರಾಠಿ, ಹಿಂದಿ, ಉರ್ದು ಮತ್ತು ತೆಲುಗು ಭಾಷೆಗಳಿಗೆ ಭಾಷಾಂತರಗೊಂಡಿವೆ. ಭೈರಪ್ಪ ನವರಷ್ಟು ವಿವಾದಕ್ಕೊಳಗಾದ ಲೇಖಕ ಬೇರೊಬ್ಬರಿಲ್ಲ. ಭೈರಪ್ಪನವರು ಪುರೋಗಾಮಿ ಧೋರಣೆಯ ಲೇಖಕ ಎಂದು ಅನೇಕರ ಆಪಾದನೆ. ಅವರು ಎಷ್ಟು ಪುರೋಗಾಮಿ ಧೋರಣೆಯ, ಜನ ವಿರೋಧಿ ಮತ್ತು ವೈದಿಕ ಮೌಲ್ಯಗಳ ಪ್ರತಿಪಾದಕ ಎನ್ನುವು ದನ್ನು ತಿಳಿಯಲಾದರೂ ಅವರ ಕೃತಿಗಳನ್ನು ಓದಬೇಕು. ಭೈರಪ್ಪನವರ ಜಲಪಾತ ಮತ್ತು ಮತದಾನ ಕಾದಂಬರಿಗಳು ಸುಲಭವಾಗಿ ಓದಿಸಿಕೊಂಡು ಹೋಗುವ ಕೃತಿಗಳು. ಉಳಿದವು ಅಷ್ಟು ಸುಲಭ ಓದಿಗೆ ದಕ್ಕುವುದಿಲ್ಲ. ಅವು ಓದುಗನ ತಾದ್ಯಾತ್ಮತೆಯನ್ನು ನಿರೀಕ್ಷಿಸುತ್ತವೆ. ಅವರ ಕೃತಿಗಳು ಒಂದೊಂದೂ ವಿಶಿಷ್ಟ ಮತ್ತು ವೈವಿಧ್ಯಪೂರ್ಣ.
     ' ಸರಸ್ವತಿ ಸಮ್ಮಾನ ' ಪಡೆದ " ಮಂದ್ರ " ಕಾದಂಬರಿಯ ಮೂಲ ದ್ರವ್ಯ ಸಂಗೀತ. ಇದರಲ್ಲಿ ಸಂಗೀತ ಸಾಧಕನ ಕಲಾ ಬದುಕು ಮತ್ತು ವೈಯಕ್ತಿಕ ಬದುಕು ಗಳನ್ನು ಕೇಂದ್ರ ವಾಗಿಸಿಕೊಂಡು ಬರೆದ ಕೃತಿ. ಆತನ ಶಕ್ತಿ ಮತ್ತು ದೌರ್ಬಲ್ಯಗಳು ಅತನ ಬದುಕಿನುದ್ದಕ್ಕೂ ಸಾಗಿ ಬಂದು ಆತನ  ಜೀವನದ ಎಲ್ಲ ಮೌಲ್ಯಗಳ ಜೊತೆ ತಾಕಲಾಟ ನಡೆಸುತ್ತವೆ. ಕಲೆ ಮತ್ತು ಜೀವನ ಮೌಲ್ಯಗಳ ಸಂಘರ್ಷ ಕೃತಿಯುದ್ದಕ್ಕೂ ನಡೆಯುತ್ತದೆ. ಕೊನೆಗೂ ಓದುಗನ ಮನದಾಳ ದಲ್ಲುಳಿಯುವುದು ಸಂಗೀತದ ಸೃಷ್ಟಿ ನಾದದ ಆದಮ್ಯ ಲೋಕ. ಅದೊಂದು ಓದುಗನನ್ನು ಧ್ಯಾನಾವಸ್ಥೆಗೆ ತಲುಪಿಸುವ ಕೃತಿ. ಅವರ ಎಲ್ಲ ಕಾದಂಬರಿಗಳಲ್ಲಿ ಕಂಡು ಬರುವ ಸ್ಥೂಲ ಅಂಶಗಳೆಂದರೆ ಅನ್ವೇಷಣಾ ಪ್ರವೃತ್ತಿ, ಸ್ವತಂತ್ರ ನಿಲುವು, ವೈಚಾರಿಕತೆ ಮತ್ತು ಎಲ್ಲ ಸಿದ್ಧಾಂತಗಳನ್ನು ಮೀರಿದ ಅಧ್ಯಯನ ಮತ್ತು ಚಿಂತನೆ ಹಾಗೂ ಲೋಕಾನುಭವಗಳು. ಅವರಿಂದ ಇನ್ನೂ ಅನೇಕಕೃತಿಗಳು ಹೊರ ಬರಲಿ. ಮತ್ತೊಮ್ಮೆ ಅವರನ್ನು ಅಭಿನಂದಿಸೋಣ.

ಚಿತ್ರ : Uday Shankar

Comments