ನಿಮಗೆ ಹಿಂದಿ ಬರುವುದಿಲ್ಲವಾ?

ನಿಮಗೆ ಹಿಂದಿ ಬರುವುದಿಲ್ಲವಾ?

ಅಪರಿಚಿತ ವ್ಯಕ್ತಿಯೊಬ್ಬ ಕೇಳಿದ ವಿಷಯವನ್ನು ನಾನು ಕನ್ನಡದಲ್ಲಿ ವಿವರಿಸಿ ಹೇಳುತ್ತಿದ್ದೆ. ಆ ಸಮಯದಲ್ಲಿ ಅಲ್ಲಿದ್ದ "ಭಾಷಾತಜ್ಞ"ನೊಬ್ಬ ನಾನು ಹೇಳಿದ್ದನ್ನು ಆತನಿಗೆ ಹಿಂದಿಯಲ್ಲಿ ವಿವರಿಸಿ ಹೇಳಿದನು. ಕನ್ನಡ ಬರುತ್ತಿದ್ದ ಅಪರಿಚಿತ ವ್ಯಕ್ತಿಗೆ ಹಿಂದಿಯಲ್ಲಿ ಹೇಳುವ ಅಗತ್ಯವೇ ಇರಲಿಲ್ಲ. ನಾನು ಸುಮ್ಮನಿದ್ದೆ.


ಈ "ಭಾಷಾತಜ್ಞ" ನಂತರ ಸುಮ್ಮನೆ ಇರುವುದು ಬಿಟ್ಟು "ನಿಮಗೆ ಹಿಂದಿ ಬರುವುದಿಲ್ಲವಾ?" ಎಂದು ನನ್ನ ಕೇಳಿದ! ಕೋಪ ನೆತ್ತಿಗೇರಿದರೂ ತೋರಿಸಿಕೊಳ್ಳದೇ, ಕಿಸೆಯಿಂದ ಕಾಗದ ತೆಗೆದು ಉರ್ದುವಿನಲ್ಲಿ ಎರಡು ಶಬ್ದಗಳನ್ನು ಬರೆದು, "ಹಿಂದಿಯೇನು? ಉರ್ದು ಸಹ ಮಾತನಾಡಲು, ಬರೆಯಲು ಬರುತ್ತದೆ...ನೀವು ಕನ್ನಡಿಗರಾಗಿದ್ದರೆ ಕನ್ನಡ ಮಾತನಾಡಲು ಬರುವವನೊಂದಿಗೆ ಕನ್ನಡದಲ್ಲಿಯೇ ಮಾತನಾಡಿ" ಎಂದು ಅಲ್ಲಿಂದ ಹೊರಟು ಬಂದೆ.


ತಮಾಷೆಯಲ್ಲಾ..ನಾನು ಉರ್ದುವಿನಲ್ಲೇ ಬರೆದಿದ್ದೆ- "ಅನಾರ್,ಟಮಾಟರ್" ಎಂದು! ಕನ್ನಡದಲ್ಲಿ "ಇವನು ಬಸವ" ಬರೆದಂತೆ. :) ಅಷ್ಟನ್ನೂ ಬರೆಯಲು ಕಲಿತದ್ದು-೨೫ ವರ್ಷಗಳ ಹಿಂದೆ....


ಫ್ಲಾಶ್‌ಬ್ಯಾಕ್........


ಸೋಪೋ ಏನೋ ಪರ್ಚೇಸ್ ಮಾಡಲು ಹೋಗಿದ್ದಾಗ ಅಂಗಡಿಯವ ಉರ್ದು ಪತ್ರಿಕೆ ಓದುತ್ತಿದ್ದ. ಪತ್ರಿಕೆಯಲ್ಲಿದ್ದ ಕ್ರಿಕೆಟ್ ಆಟದ ಚಿತ್ರ ನೋಡಿ ಅಲ್ಲಿ ಬರೆದ ಹೆಡ್ಡಿಂಗ್‌ನ್ನು ಊಹಿಸಿ ಹೇಳಿದೆ.(ಆ ಕಾಲದಲ್ಲಿ ರೇಡಿಯೋದಲ್ಲಿ ಹಿಂದಿ ಕ್ರಿಕೆಟ್ ಕಾಮೆಂಟರಿ ಕೇಳುತ್ತಿದ್ದವರಿಗೆ ಇದು ಬಹಳ ಸುಲಭ.)


"ಹೇಳಿದ್ದು ಸರಿ. ಓದಿದ್ದು ಉಲ್ಟಾ" ಎಂದ ಅಂಗಡಿಯಾತ. ಅಲ್ಲಿಂದ ನಂತರ ಸಮಯವಿದ್ದಾಗ ಆತನ ಬಳಿ ಹೋಗಿ ಸ್ವಲ್ಪ ಸ್ವಲ್ಪ ಉರ್ದು ಅಕ್ಷರಗಳನ್ನು ಕಲಿಯುತ್ತಾ ಬಂದೆ. ಕ್ರಮಪ್ರಕಾರ ಕಲಿತದ್ದಲ್ಲ. ಅದನ್ನು ಮನೆಗೆ ಬಂದು ಬರೆದಿಟ್ಟುಕೊಂಡೆ. ನಂತರ ಮನೆ ಬದಲಾಯಿಸಿದ ಮೇಲೆ ಕಲಿಕೆನೂ ಬಿಟ್ಟುಹೋಯಿತು. ಈಗ ಈ "ಭಾಷಾತಜ್ಞ"ನಿಂದಾಗಿ ನೆನಪಾಗಿ ಆ ಪುಸ್ತಕ ಹುಡುಕಿ ತೆಗೆದು-ನಿಮಗಾಗಿ ಕೆಲ ಮೊಬೈಲ್ ಫೋಟೋಗಳನ್ನು ಹಾಕಿರುವೆ.



ಉರ್ದು ಬರೆಯಲು ಕಲಿಯುವುದು ಕಷ್ಟವೇನಿಲ್ಲ. ಕಲಿಯುವ ವಿಷಯದಲ್ಲಿ ಈ ಕಾಲದವರು ಬಹಳ ಚುರುಕು.ಕೆಲವೇ ದಿನದಲ್ಲಿ ಕಲಿಯಬಲ್ಲಿರಿ. ಈಗ "ಅನಾರ್" ಶಬ್ದವನ್ನೇ ತೆಗೆದುಕೊಳ್ಳಿ-


ಕನ್ನಡದಲ್ಲಿ -----------ಅ+ನ್+ಆ+ರ್=ಅನಾರ್.


ಹೀಗೇ ಉರ್ದುವಿನಲ್ಲೂ--ಅಲೀಫ್+ನೂನ್+ಅಲೀಫ್+ರೇ=ಅನಾರ್.


ಅರ್ಥವಾಗಲಿಲ್ಲ ಅಲ್ಲವಾ? ಯಾಕೆಂದರೆ ಉರ್ದುವಿನ ಅ ಆ ಇ ಈ ಮೊದಲು ಕಲಿಯಬೇಕು.


ಕನ್ನಡದಲ್ಲಿ " ಅ" ಇದ್ದ ಹಾಗೇ ಉರ್ದುವಿನಲ್ಲಿ "ಅಲೀಫ್"


ಕನ್ನಡದಲ್ಲಿ "ನ್" ಇದ್ದ ಹಾಗೇ ಉರ್ದುವಿನಲ್ಲಿ "ನೂನ್"


ಕನ್ನಡದಲ್ಲಿ "ರ್" ಇದ್ದ ಹಾಗೇ ಉರ್ದುವಿನಲ್ಲಿ "ರೇ"


ಉರ್ದುವಿನಲ್ಲಿ ಬರೀ ೩೭ ಅಕ್ಷರಗಳು ಅಷ್ಟೇ...ಕಲಿಯಲು ಸುಲಭ.


 

Rating
No votes yet

Comments