ಅನುವಾದದಲ್ಲಿ 'ಆಹಾ!' - wildcard ಗೆ ಕನ್ನಡ ಪದ
ನನ್ನ ಪಾಂಡಿತ್ಯ ಅಷ್ಟಕ್ಕಷ್ಟೇ - ಹೆಚ್ಚು ಹೊಸಗನ್ನಡ ಓದಿದ್ದೇನೆ. ಕನ್ನಡ ವ್ಯಾಕರಣ ಗೊತ್ತಿಲ್ಲ . ಹಳೆಗನ್ನಡ ಓದಿಲ್ಲ . ಸಂಸ್ಕೃತ ಜ್ಞಾನ ಸ್ವಲ್ಪ ಇದೆ.
ಭಾಷೆಯ(ಗಳ) ಕುರಿತು ಸಿಕ್ಕ ಮಾಹಿತಿ ಓದುತ್ತೇನೆ. ಏನಾದರೂ ಮಾಡಬೇಕೆಂಬ ಹಂಬಲ ನನ್ನಲ್ಲಿದೆ. ( ಯಾರಾದರೂ ನನ್ನನ್ನು ಕನ್ನಡಕ್ಕೆ ನೀನು ಏನಪ್ಪಾ ಮಾಡಿದ್ದೀಯಾ ? ಎಂದು ಕೇಳಿದರೆ ? ಆಗ ಹೇಳಲಿಕ್ಕೆ ಬೇಕಲ್ಲ? )
ಸದ್ಯ ಲೀನಕ್ಸ್ ಅನುವಾದ ಮಾಡುತ್ತಿರುವೆ.
ತಾಂತ್ರಿಕ ಶಬ್ದಗಳ ಅನುವಾದ ಹೇಗೆ ? ಮೊದಲು ಅದರ ಅರ್ಥ ತಿಳಿಯಬೇಕು . ( ಅದಕ್ಕಾಗಿ ಇರುವ webopedia ತಾಣವನ್ನು ಪವನಜ ಅವರು ನನ್ನ ಗಮನಕ್ಕೆ ತಂದರು .) ಅರ್ಥ ತಿಳಿದ ನಂತರ ಸೂಕ್ತ ಕನ್ನಡಪದ ಹುಡುಕಬೇಕು . ಕೆಲವೆಡೆ ಇಂಗ್ಲೀಷನ್ನೇ ಇಟ್ಟುಕೊಳ್ಳಬಹುದು. ( ಇಂಗ್ಲೀಷ್ ಶಬ್ದವೇ ಈಗಾಗಲೇ ಬಳಕೆಯಲ್ಲಿದ್ದರೆ , ಅಥವಾ ಅನುವಾದ ಕಷ್ಟವಾದರೆ (!) ) ಸಂಸ್ಕೃತವನ್ನು ಸಾಧ್ಯವಾದಷ್ಟು ತಪ್ಪಿಸಬೇಕಂತೆ. ಹಳೆಗನ್ನಡ ದಲ್ಲಿ ಸರಿಯಾದ ಪದ ಹುಡುಕಬೇಕಂತೆ. ಅಯ್ಯೋ , ನಾನೇನು ಮಾಡಲಿ , ಹಳಗನ್ನಡ ಗೊತ್ತಿಲ್ಲವಲ್ಲ .
ಇರಲಿ ಬಂದ ಹಾಗೆ , ಸಾಧ್ಯವಿದ್ದಷ್ಟು ಸಹಜವಾಗಿ ಇರುವಂತೆ ಮಾಡುತ್ತಿರುವೆ .
ಉದಾಹರಣೆಗೆ , ಇದೀಗ wildcard ಅನುವಾದಿಸಬೇಕಿತ್ತು .
ವೆಬೋಪೀಡಿಯ ನೋಡಿದೆ ಅಲ್ಲಿ ' A special symbol that stands for one or more characters. ' ಎಂದಿದೆ.
ಅದಕ್ಕೆ ಮೊದಲು ಬಹುಅಕ್ಷರಸೂಚಿ ಪರಿಗಣಿಸಿದೆ. ಬಹು ಸಂಸ್ಕೃತ ಅಲ್ವೇ? ಸಂಧಿ ಸಮಾಸ ? ಬಹ್ವಕ್ಷರಸೂಚಿ ಎನ್ನಬೇಕೇನೋ? 'ಬಹು' ಬದಲಾಗಿ ಕನ್ನಡದ 'ಹಲ/ಹಲವು' ಬಳಸಬೇಕೆಂದು ಶಂಕರಭಟ್ಟರ ಪುಸ್ತಕದಲ್ಲಿ ಓದಿದ್ದೆ . ಹಲ ಅಕ್ಷರ ಜೋಡಿಸಿದರೆ - ಬರಹದಲ್ಲಿ ಹಲಾಕ್ಷರ ಆಗುತ್ತದೆ . ಅದಕ್ಕೆ ಹಲವಕ್ಷರ ಮಾಡಿದೆ. ( ಕನ್ನಡ ಮತ್ತು ಸಂಸ್ಕೃತ ಶಬ್ದಗಳನ್ನು ಜೋಡಿಸುವ ಹಾಗಿಲ್ಲವೇನೋ? :-( ) ಅಕ್ಷರವನ್ನು ಅಕ್ಕರ ಮಾಡಬಹುದೇನೋ ? ಇದು ಸ್ವಲ್ಪ ಅತಿಯಾಯಿತೇನೋ ? ನಾವು ಹಳಗನ್ನಡದಿಂದ ಹೊಸಗನ್ನಡಕ್ಕೆ ಬಂದಿರುವಾಗ ಹಿಂದಕ್ಕೆ ಹೋಗಬೇಕೇ ?
ಹಾಗಾಗಿ ಹಲವಕ್ಷರಸೂಚಿ ಎಂದೇ ಇಟ್ಟುಕೊಂಡಿದ್ದೇನೆ. ನಿಮ್ಮ ಪ್ರತಿಕ್ರಿಯೆ ಕಾಯುವೆ.
ಇಲ್ಲಿ ಈಗಾಗಲೇ (ಇತರರ ಬದಲಾಗಿ ಕನ್ನಡ ಪದ) ಉಳಿದವರು ಮಾಡಿದ ಅನುವಾದ (ನುಡಿಬದಲು ಅನ್ನಲೇ?- ಹೀಗೆಲ್ಲ ಹೋದರೆ ಕಟಿಣ-ಕಷ್ಟವಾಗುತ್ತದೆ - ನಾನಾದರೂ ಹುಚ್ಚಾದೇನು . ಅಥವಾ ಓದುವವರು ಹುಚ್ಚರಾದಾರು! ಈಗ ನಾನು ಬಳಸುತ್ತಿರುವ ಕನ್ನಡವೇ ಸರಿ ಏನೋ ?
ಜೋ ಭೀ ಹೈ ವೋ ಠೀಕ ಹೈ , ಫಿಕ್ರ ಕ್ಯೂಂ ಕರೇ ?
ಹಮ್ ಹೀ ಇಸ್ ಜಹಾನ್ ಕೀ ಜಿಕ್ರ ಕ್ಯೂಂ ಕರೇ? - ಅಂತ ಹಾಡಿಕೊಳ್ಳುವದೇ ಸರಿ ಏನೋ )
ನೋಡುತ್ತಿರುವಾಗ ಒಳ್ಳೊಳ್ಳೇ ಅನುವಾದಗಳು ಕಂಡು ಬಂದವು .
ಕರ್ಸರ್ ಗೆ ತೋರುಗ !
ಫುಲ್‌ಸ್ಕ್ರೀನ್ ಗೆ ತುಂಬುತೆರೆ! ... ತುಂಬು ಬಸಿರಿ , ತುಂಬು ಚಂದಿರ , ತುಂಬುತೋಳು ...... ಇತ್ಯಾದಿಯಂತೆ! ತುಂ೦೦೦೦೦ಬುತೆರೆ ಅಂದಿದ್ರೆ ಚನ್ನಾಗಿತ್ತು! ಅಡ್ಬಿದ್ದೇ ಗುರುಗಳೇ ! ಎದುರಿಗಿಲ್ಲದ ದ್ರೋಣಾಚಾರ್ರಿಗೆ ಏಕಲವ್ಯನ ತೆರದಿ! - ಯಾರಪ್ಪಾ ಅದು ಮಹಾನುಭಾವರು ಹೆಸರು ತಿಳಿಸುವಿರಾ?)
ಈವರೆಗೆ ಇದನ್ನೆಲ್ಲ ಓದಿದಿರಿ . ತುಂಬ ಉಪಕಾರವಾಯಿತು. ( ಥ್ಯಾಂಕ್ಸ್ ಅನ್ನು ನಮ್ಮ ಕನ್ನಡ ಜನ ಹೇಳುವ ರೀತಿ ಇದು)
Comments
Re: ಅನುವಾದದಲ್ಲಿ 'ಆಹಾ!' - wildcard ಗೆ ಕನ್ನಡ ಪದ