ಗೋಡೆಯ ಆಚೆಯಿಂದ ಈಚಿನ ಕಥೆ
ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ ಪುರಾವೆಗಳು. ದಕ್ಷ ಪೊಲೀಸರು, ಗೌರವಾನ್ವಿತ ಸಮಾಜ, ನಿಷ್ಟಾವಂತ ಅಧಿಕಾರಿಗಳು ಇವೆಲ್ಲಾ ಸೇರಿ ಸಂಶಯಕ್ಕೆಡೆಯಿಲ್ಲದಂತೆ ಆನ್ಡಿ ಡುಫ್ರ್ರೆನ್ಸನನ್ನು ೧೯೪೭ರಲ್ಲಿ ಸ್ವಶಾಂಕ್ ಎಂಬ ಅಮೇರಿಕಾದ ಜೈಲಿಗೆ ತಳ್ಳಿತು. ಸಮಾಜ ತನ್ನೊಳಗಿನೊಂದು ಮುಳ್ಳನ್ನು ಕಳೆಯಿತೆಂದು ಅಂದುಕೊಂಡು ನಿಟ್ಟುಸಿರಿಟ್ಟಿತು. ಇಲ್ಲಿಂದ ಆರಂಭವಾಗುತ್ತೆ ಒಂದು ಮಹಾಪಲಾಯನ ಕಥನ ಸ್ವಶಾಂಕ್ ರಿಡೆಂಪ್ಶನ್ ಎನ್ನುವ ಚಿತ್ರದ್ದು. (೧೯೯೪) Shawshank Redemption (1994)
ಡರಬೌನ್ಟ್ ನಿರ್ದೇಶಿತ ಮೊದಲ ಚಿತ್ರವಾದ ಇದು ಆತನ ಆಗಲೇ ಪ್ರಸಿದ್ಧವಾಗಿದ್ದ ಬರವಣಿಗೆ ಹಾಗೂ ಇತರ ಚಿತ್ರನಿರ್ಮಾಣ ಸಂಬಂಧೀ ಕುಶಲತೆಗಳ ಪಟ್ಟಿಗೆ ಇನ್ನೊಂದು ಗರಿಯನ್ನಿಟ್ಟಿತು. ಮಾನವನ ಮೂಲಭೂತ ಭಾವನೆಗಳು ಪರೀಕ್ಷೆಗಿಟ್ಟಾಗ ಹೇಗೆ ಬೇರೆ ಬೇರೆ ರೂಪಗಳಿಂದ ಚಿಮ್ಮಿ ಹೊರಹೊಮ್ಮುತ್ತದೆ ಎನ್ನುವುದು ಈ ಕಥೆಯ ಕಥನ. ನಮ್ಮ ಮನಸ್ಸನ್ನಾವರಿಸಿ ಮುದಕೊಡುವ ಕಥೆಗಳು ಶ್ರೀಸಾಮಾನ್ಯರಿಂದಲ್ಲ (ಸ್ಟೀರಿಯೋ ಟೈಪ್) ಅವರೊಳಗಿನ ಒಬ್ಬೊಬ್ಬ ವಿಶೇಷ ವ್ಯಕ್ತಿಯಿಂದ (ಆರ್ಖಿಟೈಪ್) ಹುಟ್ಟುತ್ತವೆ ಎಂದು ಒಮ್ಮೆ ಓದಿದ್ದೆ. ಆನ್ಡಿ ಡುಫ್ರ್ರೆನ್ಸ್ ಅಂಥಾ ಒಬ್ಬ ಕಥಾನಾಯಕ. ಆತ ತೀರಾ ಸರಳ, ಸಾಮಾನ್ಯ ಸಜ್ಜನ. ಮೇಲ್ನೋಟಕ್ಕೆ ತೀರಾ ಸಾಧಾರಣ ವ್ಯಕ್ತಿ. ಆದರೆ ಪರಿಸ್ಥಿತಿ ಕೂಡಿಬಂದಾಗ ಆವರೆಗೆ ಅಡಗಿದ್ದ ಒಂದು ಅದಮ್ಯ ಶಕ್ತಿ ಹೊರಬಂದು ಪವಾಡಗಳನ್ನು ಆತ ಸಾಧಿಸುತ್ತಾನೆ.
ಪ್ರಪಂಚದಾದ್ಯಂತ ಇರುವ ಅನೇಕ ಬಂದೀಖಾನೆಗಳಂತೆ ಶ್ವಶಾಂಕ್ ಬಂದೀಖಾನೆಯೂ ಒಂದು. ಇಲ್ಲಿನ ವಾರ್ಡನ್ ಮುಂಗೋಪಿ, ಅತಿ ಉಗ್ರ ಶಿಕ್ಷೆಗಳನ್ನು ನಾಲಗೆಯ ತುದಿಯಲ್ಲೇ ಇಟ್ಟುಕೊಂಡು ತಿರುಗುವಾತ. ಅಲ್ಲಿನ ಸಿಬ್ಬಂದಿಗಳೆಲ್ಲರೂ ಖೈದಿಗಳನ್ನು ಹುಳಗಳಂತೆ ನೋಡುವವರು. ಇಲ್ಲಿ ದೇಶದ ಮೂಲೆ ಮೂಲೆಗಳಿಂದ ಖೈದಿಗಳು ಬಂದು ಸೇರಿದ್ದಾರೆ. ನರಕಕ್ಕೇ ಇನ್ನೊಂದು ಹೆಸರೇ ಆಗಿರುವ ಜಾಗ ಇದು. ಸಲಿಂಗಕಾಮಿಗಳ, ಕೊಲೆಪಾತಕಿಗಳ ಪ್ರಪಂಚ ಇದು. ಅಂತೆಯೇ ತಪ್ಪಿ ಬಂದ ಅನೇಕ ನಿರ್ದೋಶಿ, ಅಮಾಯಕರು ಇರುವ ಜಾಗ! ಚಿತ್ರದುದ್ದಕ್ಕೂ ಬರುವ ಖೈದಿಗಳ ಮೆಚ್ಚಿನ ಹಾಸ್ಯವೆಂದರೆ, “ಇಲ್ಲಿ ಎಲ್ಲರೂ ನಿರಪರಾಧಿಗಳು!” ಆಂಡಿ ಡುಫ್ರ್ರೆನ್ಸ್ ಒಂದೆಡೆ ಚಿತ್ರದಲ್ಲಿ ಹೇಳುವಂತೆ ನಾನು ಹೊರಗಿದ್ದಷ್ಟು ದಿನ ಒಳ್ಳೆಯವನಾಗಿದ್ದೆ. ಕೆಟ್ಟವನಾಗಲು ಜೈಲು ಸೇರಬೇಕಾಯಿತು ಎಂನ್ನುವಂಥಾ ಪರಿಸ್ಥಿತಿ. ಇಲ್ಲಿ ಬದುಕಬೇಕಾದರೆ ಅನೈತಿಕ ಮಾರ್ಗಹಿಡಿಯುವುದು ಅನಿವಾರ್ಯ ಎಂಬ ಸ್ಥಿತಿ. ಇಂಥದ್ದರಲ್ಲಿ ಸಿಲುಕಿ ಹಾಕಿಕೊಂಡ ಸಂದರ್ಭದಲ್ಲಿ ಎಂಥವರಾದರೂ ಧ್ರಿತಿ ಕಳೆದುಕೊಳ್ಳುತ್ತಾರೆ. ಆದರೆ ಆಂಡೀ ಡುಫ್ರ್ರೆನ್ಸ್ ಎಲ್ಲರಂತಲ್ಲ!
ಜೈಲಿನೊಳಗಿದ್ದೂ ಹೊರಗಿನಿಂದ ಸಣ್ಣಪುಟ್ಟ ಸಾಮಾನುಗಳನ್ನು ತರಿಸುವ ಚಾಣಾಕ್ಷ `ರೆಡ್' ಆಂಡೀ ಡುಫ್ರ್ರೆನ್ಸ್ ಹತ್ತಿರದ ಗೆಳೆಯನಾಗುತ್ತಾನೆ. ಈತನಿಂದ ಡುಫ್ರ್ರೆನ್ಸ್ ಒಂದು ಸಣ್ಣ ಸುತ್ತಿಗೆಯನ್ನು ತರಿಸುತ್ತಾನೆ. ಯಾರಿಗೂ ತಿಳಿಯದಂತೆ ಇಲ್ಲಿಂದ ಡುಫ್ರ್ರೆನ್ಸನ ಪಲಯನ ಉಪಾಯ ನಿಧಾನಕ್ಕೆ ಆರಂಭವಾಗುತ್ತದೆ. ಜೈಲಿನ ಎಲ್ಲಾ ಕಟ್ಟು-ನಿಟ್ಟಿನ ನಡುವೆ ಮಾನವ ಮನಸ್ಸಿನ ಹುಳುಕುಗಳನ್ನು ಹುಡುಕುವುದು ಡುಫ್ರ್ರೆನ್ಸಗೆ ಸಾಧ್ಯವಾಗುತ್ತದೆ. ಇದರಿಂದ ಚತುರ ಬ್ಯಾಂಕ್ ಉದ್ಯೋಗಿಯಾಗಿದ್ದ ಆತ ತನ್ನ ಬ್ಯಾಂಕಿಂಗ್ ಚತುರತೆಯಿಂದಲೇ ಬಂದೀಖಾನೆ ಉದ್ಯೋಗಿಗಳ ಗೌರವಕ್ಕೆ ಒಳಗಾಗುತ್ತಾನೆ, ಅವರ ಬ್ಯಾಂಕಿಂಗ್ ಅಗತ್ಯಗಳನ್ನು ಆಗಿಂದಾಗ್ಗೆ ಪೂರೈಸುತ್ತಾ ಅವರ ಹಣಕಾಸು ಸಂಬಂಧೀ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾ ಹೋಗುತ್ತಾನೆ. ಇನ್ನೊಂದೆಡೆ ತನ್ನ ಸರಳತೆ, ಹಠಮಾರಿತನಗಳಿಂದ ಅನೇಕ ವರ್ಷಗಳಿಂದ ಧೂಳು ಹಿಡಿದಿದ್ದ ಬಂದೀಖಾನೆಯ ಗ್ರಂಥಾಲಯವನ್ನು ಸ್ವಪ್ರಯತ್ನದಿಂದ ಪುನರುಜ್ಜೀವಿತಗೊಳಿಸುತ್ತಾನೆ. ಇದರಿಂದ ತನ್ನ ಸಹ ಖೈದಿಗಳ ಮನಸ್ಸನ್ನೂ ಗೆಲ್ಲುತ್ತಾನೆ. ಗ್ರಂಥಾಲಯ ನಿಧಾನಕ್ಕೆ ಬಂದೀಖಾನೆಯ ಜೀವನದ ಆಶಾಕಿರಣವಾಗಿ ರೂಪಗೊಳ್ಳುತ್ತಾ ಹೋಗುತ್ತದೆ. ಬಂದೀಖಾನೆ ಉದ್ಯೋಗಿಗಳ ಗೌರವವನ್ನು ತನ್ನ ಪಲಾಯನಕ್ಕೆ ಬಳಸುವ, ತಾನು ಹೊರಬರುತ್ತಿದ್ದಂತೆಯೇ ಬಂದೀಖಾನೆಯ ಒಳಗಿನ ಆಗುಹೋಗುಗಳನ್ನು ಹೊರಗೆಳೆಯುತ್ತಾನೆ. ದೇಶದಾದ್ಯಂತ ಈ ಬಂದೀಖಾನೆಯಲ್ಲಿನ ಅವ್ಯವಹಾರಗಳ ಬಗ್ಗೆ ಗಲಭೆ ಉಂಟಾಗುತ್ತದೆ. ಬಂದೀಖಾನೆ ವಾರ್ಡನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಆಂಡೀ ಡುಫ್ರ್ರೆನ್ಸ್ ಸ್ವತಂತ್ರವಾಗಿ ಹಾರಿಹೋಗುತ್ತಾನೆ.
ಇದಾಗಿ ಅನೇಕ ವರುಷಗಳ ನಂತರ ಬಿಡುಗಡೆಗೊಂಡ ರೆಡ್ ತನ್ನ ಗೆಳೆಯನ ಊರಿನೆಡೆಗೆ ಹೋಗುತ್ತಾನೆ. ದಾರಿಯಲ್ಲಿ ಆಂಡೀ ಡುಫ್ರ್ರೆನ್ಸ್ ಬಗ್ಗೆ ಯೋಚಿಸುತ್ತಾ ಕೆಲವು “ಹಕ್ಕಿಗಳ ರೆಕ್ಕೆಯನ್ನು ತಡೆಯುವುದು ಸಾಧ್ಯವೇ ಇಲ್ಲ” ಎನ್ನುವಾಗ ಚಿತ್ರ ವೀಕ್ಷಿಸುತ್ತಿರುವ ನಮ್ಮ ಕಣ್ಣುಗಳಲ್ಲಿ ಇಡೀ ಚಿತ್ರವನ್ನು ಮತ್ತೊಮ್ಮೆ ತೋರಿಸಿಬಿಡುತ್ತದೆ. ಶ್ವಶಾಂಕ್‌ನ ಒಂದೊಂದು ಕ್ಷಣವೂ, ಒಂದೊಂದು ಮೂಲೆಯೂ ನಮಗೆ ಕಂಡುಬರುತ್ತದೆ.
ಈ ಚಿತ್ರವನ್ನು ಬಂದೀಖಾನೆ ಪಲಾಯನ ಚಿತ್ರ ಎಂದು ವರ್ಗೀಕರಿಸುವಷ್ಟು ಈ ವಿಷಯದಲ್ಲಿ ಚಿತ್ರಗಳು ನಿರ್ಮಾಣವಾಗಿವೆ. ಆದರೆ ಶ್ವಶಾಂಕ್ ಇತರ ಅನೇಕ ಕಾರಣಗಳಿಂದಾಗಿ ನನಗೆ ಆಪ್ತವಾಯಿತು. ಬಂದೀಖಾನೆಯಲ್ಲಿ ಐವತ್ತು ವರುಷಗಳಿಗೂ ಮೊದಲಿನಿಂದ ಬರದೇ ಇದ್ದ ಪುಸ್ತಕಗಳನ್ನು ಬರುವಂತೆ ಮಾಡುವ ಛಲದಿಂದ ಆಂಡೀ ಡುಫ್ರ್ರೆನ್ಸ್ ಸರಕಾರಕ್ಕೆ ದಿನಕ್ಕೊಂದು ಕಾಗದ ಬರೆಯಲಾರಂಭಿಸುತ್ತಾನೆ. ಆರು ವರುಷಗಳ ನಂತರ ೨೦೦ ಡಾಲರ್ ಚೆಕ್ ಹಾಗೂ ಒಂದಷ್ಟು ಹಳೆಯ ಪುಸ್ತಕಗಳು ಬರುತ್ತವೆ. ಪಟ್ಟ ಪ್ರಯತ್ನಕ್ಕೆ ತಕ್ಕ ಫಲ ಇದಲ್ಲದಿದ್ದರೂ, ಪ್ರಯತ್ನಕ್ಕೆ ಫಲವಿದೆ ಎಂದು ಇದು ಸಾಧಿಸುತ್ತದೆ. ಇದರಿಂದ ಪ್ರೇರಿತನಾದ ಆಂಡೀ ಡುಫ್ರ್ರೆನ್ಸ್ ದಿನಕ್ಕೆ ಎರಡು ಪತ್ರ ಬರೆಯಲಾರಂಭಿಸುತ್ತಾನೆ. ಈತನ ಒತ್ತಡೆ ತಡೆಯಲಾಗದ ಸರಕಾರ ಬಂದೀಖಾನೆಗೆ ಒಂದು ಗ್ರಂಥಾಲಯವನ್ನೂ ವಾರ್ಷಿಕ ಅನುದಾನವನ್ನೂ ಮಂಜೂರು ಮಾಡುತ್ತದೆ! ಪುಡಿಗಳ್ಳನಾಗಿ ತನ್ನ ೧೩ನೇ ವಯಸ್ಸಿನಿಂದ ಬಂದೀಖಾನೆಯ ಒಳಗೆ-ಹೊರಗೆ ತಿರುಗಾಡುತ್ತಿದ್ದ ಬಾಲಕನೊಬ್ಬ ಆಂಡೀ ಡುಫ್ರ್ರೆನ್ಸ್ ಸಂಪರ್ಕದಿಂದಾಗಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿ ಬಂದೀಖಾನೆಯಿಂದಲೇ ಪರೀಕ್ಷೆಬರೆದು ಉತ್ತೀರ್ಣನಾಗುತ್ತಾನೆ. ರೆಡ್ ಹಾಗೂ ಅವನಂಥಾ ಅನೇಕ ಸಹ ಖೈದಿಗಳಲ್ಲಿ ತನ್ನ ಸರಳ, ಮೌನ ವಿಧಾನಗಳಿಂದ ಬದುಕುವ ಹೊಸ ಆಸೆಯನ್ನು ಆಂಡಿ ಡುಫ್ರ್ರೆನ್ಸ್ ಮೂಡಿಸುತ್ತಾನೆ. ಇಷ್ಟೆಲ್ಲಾ ಆದರೂ ಆಂಡೀ ಡುಫ್ರ್ರೆನ್ಸನ್ನು ಒಬ್ಬ ಅತಿಮಾನವನಾಗಿ ಚಿತ್ರ ಎಲ್ಲೂ ತೋರಿಸುವುದಿಲ್ಲ. ಆಂಡೀ ಡುಫ್ರ್ರೆನ್ಸ್ಯ ಮಾತಿನಲ್ಲೇ ಹೇಳುವುದಾದರೆ, ಆತ ಒಬ್ಬ ಸರಳ ಆದರೆ ಚಾಣಾಕ್ಷ ಚೆಸ್ ಆಟಗಾರ ಅಷ್ಟೆ. ಇದರಿಂದ ಚಿತ್ರ ಉದ್ದಕ್ಕೂ ವಾಸ್ತವತೆಯ ಛಾಯೆಯನ್ನು ಉಳಿಸಿಕೊಂಡೇ ಹೋಗುತ್ತದೆ. ನಿಜ ಜೀವನದಲ್ಲೂ ನೈಜ ನಾಯಕರು ಹೀಗೇ ಅಲ್ಲವೇ?
ಬಂದೀಖಾನೆಯ ಗೋಡೆಗಳು ವಿಚಿತ್ರ. ಇದರ ಒಳಗಡೆ ನಮಗೆ ಬೆಲೆ ಇದೆ. ಇದರಿಂದ ಹೊರಗಡೆ ಹೋದೊಡನೆ ನಾವು ಯಾರೂ ಗುರುತಿಸದ, ಗುರುತಿಸಿದರೂ ಮಾಜೀ ಖೈದಿ ಎಂದು ಗುರುತಿಸುವ ಸಮಾಜ ಕಾದಿದೆ ಎಂದು ಶ್ವಶಾಂಕ್ ಖೈದಿಗಳಿಗೆಲ್ಲಾ ತಿಳಿದಿದೆ. ಐವತ್ತು ವರ್ಷಗಳನ್ನು ಇಲ್ಲೇ ಕಳೆದ ಬ್ರೂಕ್ ಎಂಬ ವೃದ್ಧ ಬಂದೀಖಾನೆಯಿಂದ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಹೊರಗಿನ ಬದುಕಿಗೆ ಹೊಂದಲಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ರೆಡ್ ಬಿಡುಗಡೆ ಹೊಂದಿದಾಗಲೂ ಅದೇ ತರಹದ ಭಾವನೆಗಳಿಂದ ಹಾದು ಹೋಗುತ್ತಾನೆ. ೪೦ ವರ್ಷ ತನ್ನ ಪ್ರತಿಯೊಂದು ಕೆಲಸಕ್ಕೂ ಅನುಮತಿ ಪಡೆದು ಅಭ್ಯಾಸವಾಗಿದ್ದ ರೆಡ್ ಹೊರಜಗತ್ತಿನಲ್ಲಿ ಮೂತ್ರವಿಸರ್ಜಿಸಲು ಅನುಮತಿಪಡೆಯುವಾಗ ನಮಗೆ ಅದು ನಗೆ ತರಿಸಬಹುದಾದರೂ, ಅದರ ಹಿಂದಿನ ಕ್ರೌರ್ಯ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಬಂದೀಖಾನೆಯಿಂದ ಹೊರಗಿನ ಜೀವನದಲ್ಲಿ ರೆಡ್ ತೀವ್ರ ನಿರಾಸೆ ಅನುಭವಿಸುತ್ತಾನೆ. ಆದರೆ ಆತ ಗೆಳೆಯ ಆಂಡೀ ಡುಫ್ರ್ರೆನ್ಸಗೆ ನೀಡಿದ ಮಾತು ಉಳಿಸಲಿಕ್ಕಾಗಿ ಅವನನ್ನು ಹುಡುಕಿಕೊಂಡು ಹೋಗುತ್ತಾನೆ.
ರೆಡ್ ತಾನು ಕನಸಿನಲ್ಲಿ ಕಂಡ ನೀಲ ಸಾಗರದ ದಂಡೆಯಲ್ಲೇ ಡುಫ್ರ್ರೆನ್ಸನ್ನು ಮತ್ತೆ ಭೇಟಿಮಾಡುತ್ತಾನೆ. ಬಂದೀಖಾನೆಯ ಗೆಳೆಯರು ಬಂದೀಖಾನೆಯ ಹೊರಗೆ ಭೇಟಿಯಾಗುತ್ತಾರೆ. ಇಲ್ಲಿ ರೆಡ್ ಸ್ವಾತಂತ್ರ್ಯದ ಸವಿಯನ್ನು ಸ್ವತಂತ್ರ ಮನುಷ್ಯನಷ್ಟೇ ಅರಿಯುತ್ತಾನೆ ಎನ್ನುವಾಗ ಸ್ವಾತಂತ್ರಕ್ಕೆ ಒಂದು ಹೊಸ ಅರ್ಥ ಮೂಡುತ್ತದೆ.
ಬಂದೀಖಾನೆ ಎಂಬ ಕಲ್ಪನೆ ಸಮಾಜದ ನಿರ್ಮಾಣದೊಂದಿಗೇ ರೂಪಿತವಾದ ಒಂದು ವ್ಯವಸ್ಥೆ. ಮಾನವನು ಮಾನವನಿಗೆ ಕೊಡುವ ಶಿಕ್ಷೆಯ ಬಗ್ಗೆ ಬಹಳ ಕಾಲದಿಂದ ಚರ್ಚೆಗಳು ನಡೆದೇ ಇವೆ. ಈ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತೋರಿಸುವ ಅನೇಕ ಕಾದಂಬರಿಗಳು, ಕಥೆಗಳು ಬಹುಕಾಲದಿಂದ ನಡೆಯುತ್ತಾ ಬಂದಿವೆ. ಹಿಂದಿಯ ಕಾಲಾಪಾನಿ ಚಿತ್ರವಾಗಲೀ ೧೯೭೩ರಲ್ಲಿ ತಯಾರಾದ ಪ್ಯಾಪಿಲಾನ್ ಚಿತ್ರವಾಗಲೀ ಒಂದಲ್ಲ ಒಂದು ರೀತಿಯಲ್ಲಿ ಬಂದೀಖಾನೆಯೊಳಗಿನ ಬೇನೆಯನ್ನು ಹೊರಸಮಾಜಕ್ಕೆ ಪರಿಚಯಿಸಿವೆ. ಶ್ವಶಾಂಕ್ ರಿಡೆಂಪ್ಶನ್ ಇಂಥದ್ದೇ ಇನ್ನೊಂದು ಚಿತ್ರ. ಈ ರೀತಿಯಲ್ಲಿ ವಿಷಯದಲ್ಲಿ ತೀರಾ ಹೊಸತನವನ್ನು ಇದು ಹೊಂದಿಲ್ಲ ಎಂದು ನಾವು ಹೇಳಬಹುದಾದರೂ, ಅಮೇರಿಕನ್ ಸಿನೆಮಾದ ಪ್ರತೀಕವಾದ ನಯವಾಗಿ ದೃಶ್ಯದಿಂದ ದೃಶ್ಯಕ್ಕೆ ಹರಿದುಕೊಂಡು ಹೋಗುವ ಸಂಕಲನ, ಎಲ್ಲವೂ ಬಿಡಿಸಿಟ್ಟ ಚಿತ್ರದಂತೆ ಕಾಣುವ ಚಿತ್ರೀಕರಣ, ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಅದನ್ನೇ ಅನುಸರಿಸುತ್ತಾ ಸಾಗುವ ಸಿನೆಮಾ ತಂತ್ರಜ್ಞಾನ ಇವೆಲ್ಲವೂ ಶ್ವಶಾಂಕ್ ರಿಡೆಂಪ್ಶನ್ ಚಿತ್ರವನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.
ಚಿತ್ರ ಮುಗಿಯುತ್ತಿದ್ದಂತೆ ಈ ಚಿತ್ರ ಆಲನ್ ಗ್ರೀನ್‌ಗೆ ಅರ್ಪಣೆ ಎಂದು ಓದಿದ ನಾನು ಈ ಆಲನ್ ಗ್ರೀನ್ ಯಾರು ಎಂದು ಹೊಳೆಯದೇ ಅದರ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಡಿದೆ. ಬಹಳ ಹುಡುಕಾಟದ ನಂತರ ತಿಳಿಯಿತು ಆತ ನಿರ್ದೇಶಕ ಡೆರಬೌನ್ಟ್‌ನ ಏಜೆಂಟ್ ಹಾಗೂ ಆತನ ಗೆಳೆಯನಾಗಿದ್ದ. ಬಹುಕಾಲ ಇವರಿಬ್ಬರು ಒಟ್ಟಿಗಿದ್ದು ಡೆರಬೌನ್ಟನ ಮೊದಲ ಚಿತ್ರ ಶ್ವಶಾಂಕ್ ಮುಗಿಯುವ ಮುನ್ನವೇ ಗ್ರೀನ್ ತೀರಿಕೊಂಡಿದ್ದನು. ಹಾಗಾಗಿ ಆತನ ನೆನಪಿಗೆ ಈ ಚಿತ್ರ ಅರ್ಪಿತವಾಯಿತು. ಈ ಚಿತ್ರವೂ ವಿಚಿತ್ರ ಪರಿಸ್ಥಿತಿಯಲ್ಲಿ ಭೇಟಿಯಾಗಿ ಮಿತ್ರತ್ವವನ್ನೇ ಜೀವಿಸುವ ಆಸರೆಯನ್ನಾಗಿಸಿಕೊಳ್ಳುವ ಇಬ್ಬರ ಕಥೆಯಲ್ಲವೇ! ಮಹಾ ಪಲಾಯನ ಚಿತ್ರಗಳಲ್ಲಿ ಇದು ನನಗೆ ಮುದನೀಡಿದ ಒಂದು ಚಿತ್ರ. ನೀವೂ ನೋಡಿ ಆನಂದಿಸಿ.