ಡರ್ಟಿ ಇಲ್ಲದಿದ್ದರೂ ಮನ ಮುಟ್ಟದ ಡರ್ಟಿ ಪಿಕ್ಚರ್

ಡರ್ಟಿ ಇಲ್ಲದಿದ್ದರೂ ಮನ ಮುಟ್ಟದ ಡರ್ಟಿ ಪಿಕ್ಚರ್

ಡರ್ಟಿ ಪಿಕ್ಚರ್ - ಸಿಲ್ಕ್ ಸ್ಮಿತಾಳ ಕಥೆ ಆಧಾರಿಸಿದಂತಹ ಚಿತ್ರವೆಂದು, ವಿದ್ಯಾಬಾಲನ್ ‘ಸಿಲ್ಕ್’ ಪಾತ್ರದಲ್ಲಿ ನಟಿಸುತ್ತಿರುವಳೆಂದು! ಶೂಟಿಂಗ್ ಶುರುವಾದಾಗಿನಿಂದಲೂ ಎಲ್ಲರ ಕುತೂಹಲ ಕೆರಳಿಸಿದ ಚಿತ್ರ.

ಬಡತನದಿಂದಾಗಿ ೪ ನೇ ತರಗತಿಗೆ ಓದನ್ನು ಬಿಟ್ಟ ‘ವಿಜಯ ಲಕ್ಷ್ಮಿ’ ಗೆ ಆಕೆಯ ಸೌಂದರ್ಯವೇ ಮುಳ್ಳಾಯಿತು.  ಹಾಗಾಗಿ, ಸಣ್ಣ ವಯಸ್ಸಿನಲ್ಲೇ ಆಕೆಗೆ, ಆಕೆಯ ತಂದೆ ತಾಯಿ ಮದುವೆ ಮಾಡಿಸಿಬಿಟ್ಟರು.  ಗಂಡನ ಮನೆಯ ದೌರ್ಜನ್ಯ ತಾಳಲಾಗದೇ, ಅಲ್ಲಿಂದ ರಾತ್ರೋ ರಾತ್ರಿ ಚೆನ್ನೈಗೆ ಓಡಿಬಂದವಳು ಆಶ್ರಯ ಪಡೆದದ್ದು ನೆಂಟರೊಬ್ಬರ ಮನೆಯಲ್ಲಿ.  ಈಕೆಗೆ ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ.  ಆದರೆ ಇಲ್ಲೂ ದುರಾದೃಷ್ಟ ಕೈಕೊಟ್ಟಿತು. ನಟಿಯಾಗಲು ಬಂದವಳು, ತನ್ನ ದೇಹ ಸಿರಿಯನ್ನೇ ಬಂಡವಾಳವಾಗಿಸಿಕೊಂಡು ಸುಮಾರು ೧೭ ವರ್ಷಗಳ ಕಾಲ ಇಡೀ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕ್ಯಾಬರೇ ನರ್ತಕಿಯಾಗಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ಸರಿ ಸುಮಾರು ೪೫೦ ಚಿತ್ರಗಳಲ್ಲಿ ನಟಿಸಿ ‘ಸಿಲ್ಕ್’ ಸ್ಮಿತಾ ಆದದ್ದು ದಂತ ಕಥೆ! ಎಲ್ಲೋ ಅಲ್ಲೊಂದು, ಇಲ್ಲೊಂದು ಬಿಟ್ಟರೆ, ಬಹುತೇಕ ಸಿನೆಮಾಗಳಲ್ಲಿ ಒಂದೇ ತರಹದ ಪಾತ್ರಗಳು.  ಅಶ್ಲೀಲತೆಯಿಂದ ಕೂಡಿದ ಲೈಂಗಿಕ ಪ್ರಚೋದನಕಾರಿಯಾದಂತಹ ಪಾತ್ರಗಳಲ್ಲಿಯೇ ಈಕೆ ನಟಿಸಬೇಕಾಯಿತು. ೧೯೮೦ರ ಕಾಲದಲ್ಲಿ ಪ್ರದರ್ಶಿತವಾಗದೇ, ಡಬ್ಬದಲ್ಲೇ ಉಳಿದಿದ್ದ ಅನೇಕ ಸಿನೆಮಾಗಳು ಈಕೆಯದೊಂದು ಸೆಕ್ಸೀ ನೃತ್ಯವನ್ನು ತುರುಕಿಸಿದ್ದಕ್ಕಾಗಿಯೇ ಪ್ರದರ್ಶನಗೊಳ್ಳುವ ಭಾಗ್ಯವನ್ನು ಕಂಡಿದ್ದವಂತೆ. ವೀಕ್ಷಕರು ಚಿತ್ರದಲ್ಲಿ ಈಕೆಯ ನೃತ್ಯ ಬರುವ ಸಮಯಕ್ಕೆ ಸರಿಯಾಗಿ, ಅದನ್ನು ನೋಡಲಿಕ್ಕಾಗಿಯೆ ಥಿಯೇಟರ್ ಗೆ ಬರುತ್ತಿದ್ದರಂತೆ. ನಟಿಯಾಗಲು ಬಂದವಳು ‘ಸ್ಟಾರ್’ ಆದರೂ ಕೂಡ ಮಾಧ್ಯಮಗಳಿಂದಾಗಿ (ಈಕೆಯನ್ನು ಸಾಫ್ಟ್ ಪೊರ್ನ್ ನಟಿಯೆಂದು ಬಹುತೇಕ ಪತ್ರಕರ್ತರು ಅಭಿಪ್ರಾಯ ಪಟ್ಟಿದ್ದರು), ಸಿನೆಮಾ ಮಂದಿಯ ನಡುವೆ (ಈಕೆಯ ನಟನೆಗಿಂತಲೂ, ಇವಳ ದೇಹವನ್ನು ಬಿಡಿಸಿ, ಬಿಡಿಸಿ ತೋರಿಸುವುದರಲ್ಲಿಯೇ ಇವರಿಗಿದ್ದ ಆಸಕ್ತಿ), ಪ್ರೇಮದಲ್ಲೂ ವೈಫಲ್ಯ ಕಂಡ ‘ಸಿಲ್ಕ್’ ಸ್ಮಿತಾ ತನಗಂಟಿದ್ದ ಇಮೇಜನ್ನು ತೊಳೆಯಲು ತಾನೇ ನಿರ್ಮಾಪಕಿಯಾಗಲು ನಿರ್ಧರಿಸಿದರೂ, ಹಣದ ಮುಗ್ಗಟ್ಟಿನಿಂದ, ಕುಡಿತದಿಂದ ಯಾವುದೂ ಸಾಧ್ಯವಾಗದೇ ಹತಾಶಳಾಗಿ, ಆತ್ಮಹತ್ಯೆ ಮಾಡಿಕೊಂಡ ‘ಸಿಲ್ಕ್’ ಸ್ಮಿತಾಳದ್ದು ದುರಂತ ಕಥೆ.


ಇನ್ನೂ ‘ಡರ್ಟಿ ಪಿಕ್ಚರ್’ ಚಿತ್ರದ ಬಗ್ಗೆ ಹೇಳುವುದಾದರೆ, ಈ ಮೇಲಿನ ಕಥೆಯಲ್ಲಿಯೇ ಸಣ್ಣ ಪುಟ್ಟ ಮಾರ್ಪಾಡು ಮಾಡಿ, ಒಂದಿಷ್ಟು ಬಾಲಿವುಡ್ ಮಸಾಲೆ ತುರುಕಿ, ಶುರು ಶುರುಗೆ ಆಸಕ್ತಿ ಮೂಡಿಸಿ (‘ಸಿಲ್ಕ್’ ಸ್ಮಿತಾಳ ಹಾಗೆಯೇ), ನಂತರ ಚಿತ್ರವೂ ಯಾಕೋ ಬೋರ್ ಹೊಡೆಸುತ್ತಿದೆಯೆಲ್ಲಾ ಎಂಬ ಭಾವನೆ ಮೂಡಿಸಿ, ಕೊನೆಗೊಂದು ಚೆಂದದ, ಮನ ಮುಟ್ಟುವಂತಹ, ಭಾವುಕತೆಯಿಂದ ಕೂಡಿದಂತಹ ಅಂತ್ಯ (ಅಂತ್ಯ ಮೊದಲೇ ಗೊತ್ತಿದ್ದರೂ) ಕಾಣುವ ಚಿತ್ರಕಥೆ ಈ ‘ಡರ್ಟಿ ಪಿಕ್ಚರ್’.  ದುರಂತವೆಂದರೆ ಚಿತ್ರ ಕಥೆಯಲ್ಲಿಯೂ ಕೂಡ ‘ಸಿಲ್ಕ್’ ಳ ದೇಹ ಸಿರಿ ಪ್ರಾಮುಖ್ಯತೆ ಕಂಡಷ್ಟು ಆಕೆಯ ಮನಸ್ಥಿತಿ ಎಲ್ಲೂ ಹೈಲೈಟ್ ಆಗುವುದಿಲ್ಲ.  ಚಿತ್ರ ಎಲ್ಲೂ ಕೂಡ ‘ಸಿಲ್ಕ್’ ಳ ಮನಸ್ಸನ್ನು ಹೊಕ್ಕು ನೋಡುವುದಿಲ್ಲ. ಅವಳ ಭಾವನೆಗಳು ಚಿತ್ರಿತಗೊಂಡಿಲ್ಲ.  ಇದು ಚಿತ್ರದ ಅತಿ ದೊಡ್ಡ ಮೈನಸ್ ಪಾಯಿಂಟ್.  ವಿದ್ಯಾಬಾಲನ್ ತನ್ನ ದೇಹದಲ್ಲಿ ಬಹಳಷ್ಟು ಮಾರ್ಪಾಡು ಮಾಡಿಕೊಂಡು, ಸೆಕ್ಸೀ ಇಮೇಜ್ (‘ಸಿಲ್ಕ್’ ನಂತೇ) ಬೆಳೆಸಿಕೊಳ್ಳಲು ಸಾಕಷ್ಟು ತಯಾರಿ ನಡೆಸಿ, ಕೆಚ್ಚೆದೆಯಿಂದ, ‘ಬಿಚ್ಚು’ಗಾರ್ತಿ ಯಾಗಿ ಚೆಂದ ನಟಿಸಿದ್ದರೂ, ಅದು ನಟನೆಯಾಗಿಯೇ ಕಾಣುತ್ತದೆ.  ಚಿತ್ರದಲ್ಲೊಂದು ಡೈಲಾಗ್ - ‘ಸಿಲ್ಕ್’ ಳಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಳ್ಳುತ್ತಿದ್ದ ‘ಶಕೀಲಾ’ ಳಿಗೆ, ‘ಸಿಲ್ಕ್’ ಹೇಳುತ್ತಾಳೆ. ‘ಮನೆಯಲ್ಲಿರುವ ಕನ್ನಡಿಯನ್ನು ಒಡೆದು ಹಾಕು’, ನೀನು ‘ಸಿಲ್ಕ್’  ಆಗಬಹುದೆಂದು ಅದು ಸುಳ್ಳು ಹೇಳುತ್ತಿದೆ!’. ಇದು ವಿದ್ಯಾಬಾಲನ್ ಗೆ ಕೂಡ ಸೂಕ್ತವೇ. ವಿದ್ಯಾ ಮೋಹಕವಾಗಿ ಕಾಣುತ್ತಾಳೆಯೇ ಹೊರತು ಸಿಲ್ಕ್ ಳ ಸೆಕ್ಸಿ ಫೀಲ್ ಆಕೆಗೆ ಬಂದಿಲ್ಲ. ‘ಸಿಲ್ಕ್’ ಳಿಗೆ ‘ಸಿಲ್ಕ್’ ಳೇ ಸಾಟಿ! ಇನ್ಯಾರೂ ಆಕೆಯ ಪಾತ್ರ ಮಾಡಲಾರರು.   ಇನ್ನುಳಿದಂತೆ ನಸಿರುದ್ದೀನ್ ಶಾ ನಟನೆ ಚೆನ್ನಾಗಿದ್ದರೂ, ಆ ಪಾತ್ರಕ್ಕೆ ಹೊಂದುವುದಿಲ್ಲ.  ಬಹುಶಃ ಆಗ ಎಷ್ಟೇ ವಯಸ್ಸಾಗಿದ್ದರೂ, ನಾಯಕನ ಪಾತ್ರಕ್ಕೆ ಪ್ರಾಮುಖ್ಯತೆ ಹೆಚ್ಚು, ಅವರು ನಡೆದದ್ದೇ ದಾರಿ ಎಂಬುದನ್ನು ಬಿಂಬಿಸಲು ಅವರನ್ನು ಆಯ್ಕೆ ಮಾಡಿಕೊಂಡಿರಬಹುದು. ಪತ್ರಕರ್ತೆಯ ಪಾತ್ರಧಾರಿ ಬಹಳ ಚೆನ್ನಾಗಿ ನಟಿಸಿದ್ದಾರೆ.  ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಚಿತ್ರದುದ್ದಕ್ಕೂ ‘ಸಿಲ್ಕ್’ ಳನ್ನು ಚಿತ್ರಿಸಿರುವ ನಿರ್ದೇಶಕನ ಜಾಣ್ಮೆಯನ್ನು ಮೆಚ್ಚಲೇ ಬೇಕು.  ಎಲ್ಲೂ ಅಶ್ಲೀಲತೆಯ ಸೋಂಕಿಲ್ಲದೆ, ಎಷ್ಟು ಬೇಕೋ ಅಷ್ಟನ್ನೇ ಚಿತ್ರಿತಗೊಳಿಸಿರುವ ರೀತಿ ವೀಕ್ಷಕನ ಮೆಚ್ಚುಗೆ ಗಳಿಸುತ್ತದೆ.  ಹಾಗಾದ್ರೆ ಚಿತ್ರ ಚೆನ್ನಾಗಿದೆಯೋ? ಇಲ್ಲವೋ? ಚೆನ್ನಾಗಿದೆ. ಆದರೆ! ಏನೋ ಕೊರತೆ ಕಾಣುತ್ತದೆ.  ಏನು? ಎಂಬುದು ಕೊನೆಯವರೆಗೂ ಗೊತ್ತಾಗುವುದೇ ಇಲ್ಲ.  ಒಮ್ಮೆ ನೋಡಲಡ್ಡಿಯಿಲ್ಲ.
 

Rating
No votes yet

Comments