ಸೇಡು ತೀರಿಸಿದ ಕರ್ನಾಟಕ
ಧರ್ಮಶಾಲಾದಲ್ಲಿ ಇಂದು ನಡೆದ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಬಂಗಾಲವನ್ನು ೩೨ ಓಟಗಳಿಂದ ಸೋಲಿಸಿ ಕರ್ನಾಟಕ ಕ್ವಾರ್ಟರ್ ಫೈನಲ್ ತಲುಪಿದೆ. ಈ ವಿಜಯದೊಂದಿಗೆ, ರಣಜಿ ಟ್ರೋಫಿ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಲದ ಕೈಯಲ್ಲಿ ಅನುಭವಿಸಿದ ಸೋಲಿಗೆ ಸ್ವಲ್ಪ ಮಟ್ಟಿಗಾದರೂ ಪ್ರತೀಕಾರ ತೀರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕ ೩೬ ಓಟಗಳಾಗುವಷ್ಟರಲ್ಲಿ ೫ ಹುದ್ದರಿಗಳನ್ನು ಕಳಕೊಂಡಿತ್ತು. ಆಗ ಜತೆಗೂಡಿದ ನಾಯಕ ಯೆರೆ ಗೌಡ ಮತ್ತು ತಿಲಕ್ ನಾಯ್ಡು ೭೭ ಓಟಗಳ ಜತೆಯಾಟ ನಡೆಸಿ ಸ್ವಲ್ಪ ಮಟ್ಟಿಗೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಗೌಡರು ಮತ್ತೆ ತನ್ನ ಸ್ಕಿಲ್ ತೋರ್ಪಡಿಸಿ ನೆಲಕಚ್ಚಿ ನಿಂತು ಆಡಿ ಅಮೂಲ್ಯ ೬೬ ಓಟಗಳನ್ನು ಗಳಿಸಿ ಒಂಬತ್ತೆನೆಯವರಾಗಿ ತಂಡದ ಮೊತ್ತ ೧೯೬ ಆದಾಗ ಔಟಾದರು. ೫೦ ಓವರುಗಳಲ್ಲಿ ಕರ್ನಾಟಕ ಗಳಿಸಿದ್ದು ೯ ಹುದ್ದರಿಗಳನ್ನು ಕಳಕೊಂಡು ೨೧೬ ಓಟಗಳನ್ನು.ಇದಕ್ಕುತ್ತರವಾಗಿ ಬಂಗಾಲ ೪೮ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ಗಳಿಸಿದ್ದು ೧೮೪ ಓಟಗಳನ್ನು. ಉತ್ತಮ ಬೌಲಿಂಗ್ ನಡೆಸಿದ ಜೋಶಿ ಮತ್ತು ಅಖಿಲ್ ಕ್ರಮವಾಗಿ ೪ ಮತ್ತು ೩ ಹುದ್ದರಿಗಳನ್ನು ಕೆಡವಿದರು.
ಮಾರ್ಚ್ ೨೧ರಂದು ದೆಹಲಿಯಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಎದುರಾಳಿ ರಾಜಸ್ಥಾನ.
ಬಂಗಾಲ ವಿರುದ್ಧದ ಪಂದ್ಯದ ಕ್ರಿಕ್ ಇನ್ಫೊ ವರದಿಯನ್ನು [http://content-www.cricinfo.com/india/content/story/285909.html|ಇಲ್ಲಿ] ಓದಬಹುದು ಮತ್ತು ಸ್ಕೋರು ಪಟ್ಟಿಯನ್ನು [http://content-www.cricinfo.com/india/engine/match/281388.html|ಇಲ್ಲಿ] ನೋಡಬಹುದು.
ಕನ್ನಡಿಗ ಅರುಣ್ ಕುಮಾರ್ ನೇತೃತ್ವದ ಅಸ್ಸಾಮ್ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ೪ ಹುದ್ದರಿಗಳಿಂದ ಸೋಲನ್ನು ಅನುಭವಿಸಿದೆ. ಅರುಣ್ ಕೇವಲ ೮ ಓಟಗಳನ್ನು ಗಳಿಸಿ ವಿಫಲರಾದರು.
Comments
ಕರ್ನಾಟಕಕ್ಕೆ ಸೋಲು