ಚಿತ್ರ ಕವನ
ಕವನ
ಹಸಿರು ಹುಲ್ಲ ಮೇಯುವ ಹುಲ್ಲೆ ನಾ
ಎನ್ನ ಸೊಲ್ಲಡಗಿ ಶರಣಾಗಿಹೆನು ನಾ
ಇಬ್ಬರಿದಿರು ಒಬ್ಬನೇನು ಮಾಡಬಲ್ಲೆ.
ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ
ಕಾಯುತಿಹರು ಎನ್ನಮ್ಮ ಅಕ್ಕ ತಂಗಿಯರು
ಹಿಂಡಲ್ಲೆನ್ನ ಕಾತರದಿ ಇದಿರು ನೋಡುತಿಹರು
ಹೋದರೆ ನಾ ಅವರಿಗೆ ಸಂತಸವೆಂದು ಬಲ್ಲೆ
ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ
ನೋಡಲೇನೋ ಪ್ರೀತಿ ತೋರಿದಂತೆ ಕಾಣುವುದು
ಒಳಗಿನ ಮರ್ಮವ ನಾ ಹೇಗೆ ಅರಿಯುವುದು
ಸಾಧು ನಾ ದುಷ್ಟನಾ ಮನವನೆನಿತು ಬಲ್ಲೆ
ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ
ರವಿ ತಿರುಮಲೈ