ದೆವ್ವದ ಮನೆಯಲ್ಲಿ...!
ಈ ಪ್ರಕರಣದ ಬಗ್ಗೆ ಯಾರಿಗಾದರೂ ಹೇಳಬೇಕು ಎಂಬ ಯೋಚನೆ ನನಗೆ ಅದೆಷ್ಟೋ ಸಲ ಬಂದದ್ದುಂಟು. ಆದರೆ ಪ್ರತಿಸಲವೂ ಯಾವುದೋ ಅವ್ಯಕ್ತ ಶಕ್ತಿಯೊಂದು ನನ್ನ ನಾಲಿಗೆಯನ್ನು ಹಿಂದಕ್ಕೆ ಹಿಡಿದೆಳೆದಂತಾಗಿ ಹೇಳಲಾರದೇ ಇಷ್ಟು ದಿನಗಳವರೆಗೆ ಇದನ್ನು ನನ್ನೊಳಗೇ ಇಟ್ಟುಕೊಂಡಿದ್ದೆ. ಅದನ್ನು ಹೇಳಲೂ ಆಗದೇ ಒಳಗೆ ಇಟ್ಟುಕೊಳ್ಳಲೂ ಆಗದೆ ಸತತ ಏಳು ವರ್ಷಗಳ ಒದ್ದಾಟದ ನಂತರ ಈಗ ಬರವಣಿಗೆಯ ಮೂಲಕ ಹೊರಹಾಕಿ ನನ್ನೆದೆಯನ್ನು ಹಗುರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ನನಗಾದ ಅನುಭವ ನಿಮಗೆಂದೂ ಆಗಿರಲಾರದು. ನೀವ್ಯಾರೂ ಇದನ್ನು ನಂಬಲಾರಿರಿ ಎಂಬ ಅಳುಕೂ ಸಹ ಇಷ್ಟು ದಿನಗಳವರೆಗೆ ಇದನ್ನು ನನ್ನೆದೆಯಲ್ಲೇ ಇಟ್ಟುಕೊಳ್ಳಲು ಕಾರಣವಾಗಿರಬಹುದು ಎಂದೂ ಒಮ್ಮೊಮ್ಮೆ ಅನಿಸುತ್ತದೆ.
ಇದು ನಡೆದದ್ದು ಏಳು ವರ್ಷಗಳ ಹಿಂದೆ- ತೊಂಬತ್ತೊಂಬತ್ತರ ಮೇ ತಿಂಗಳಲ್ಲಿ, ಹಿಂದೊಮ್ಮೆ ಸಹೋದ್ಯೋಗಿಯಾಗಿದ್ದ ಮನೋಹರನ ತಮ್ಮನ ಮದುವೆಗೆಂದು ಗೆಳೆಯ ಮೂರ್ತಿಯೊಡನೆ ಮೈಸೂರಿಗೆ ಹೋಗಿದ್ದಾಗ.
ಮೈಸೂರು ತಲುಪಿದಾಗ ಕತ್ತಲಾಗುತ್ತಿತ್ತು. ಬಸ್ಸ್ಟ್ಯಾಂಡಿನಲ್ಲೇ ಎದುರಾದ ಬಾಲ್ಯದ ಗೆಳೆಯ ದಿವಾಕರ ನಮ್ಮನ್ನು ತನ್ನ ಮನೆಗೆ ಕರೆದುಕೊಂಡು ಹೋದ. ಅವನ ಹೆಂಡತಿ ಸುಮತಿ ನೀಡಿದ ಬಿಸಿಬಿಸಿ ಕಾಫಿ ಹೀರಿ ಬಿಸಿನೀರಿನಲ್ಲಿ ಸ್ನಾನ ಮಾಡಿದ ನಂತರ ಆರಾಮವೆನಿಸಿತು. ನಮಗಾಗಿ ರಾತ್ರಿಯ ಊಟಕ್ಕಾಗಿ ವಿಶೇಷವನ್ನೇನಾದರೂ ಮಾಡುತ್ತೇನೆ ಎಂದು ಹೊರಟ ಹೆಂಡತಿಯನ್ನು ದಿವಾಕರ ತಡೆದ.
''ತುಂಬಾ ದಿನಗಳ ನಂತರ ಇವರಿಬ್ಬರೂ ಇಲ್ಲಿಗೆ ಬಂದಿದ್ದಾರೆ. ಮೂವರೂ ಹೊರಗೆ ಹೋಗಿ ಒಂದೆರಡು ಬಾಟಲು ಏರಿಸಿ ಗಡದ್ದಾಗಿ ಬಿರಿಯಾನಿ ಹೊಡೆದು ಬರುತ್ತೇವೆ. ಇಂಥಾ ಅವಕಾಶಗಳು ಮತ್ತೆ ಮತ್ತೆ ಸಿಗೋದಿಲ್ಲ.""
ಅವನು ನಗುತ್ತಾ ಹೇಳಿದುದಕ್ಕೆ ಅವನ ಹೆಂಡತಿ ಒಂದುಕ್ಷಣ ಮುಖ ಸಿಂಡರಿಸಿದರೂ ಮರುಕ್ಷಣ ''ಆಯ್ತು ನಿಮ್ಮಿಷ್ಟ"" ಎಂದಳು.
ವಾಸ್ತವವಾಗಿ ದಿವಾಕರನ ಸಲಹೆ ನನಗೆ ಅಪ್ಯಾಯಮಾನವಾಗಿ ಕಂಡಿತ್ತು. ಹನ್ನೆರಡು ಗಂಟೆಗಳ ಬಸ್ ಪ್ರಯಾಣದ ಆಯಾಸ ದೂರಾಗಬೇಕಾದರೆ ಸ್ವಲ್ಪ 'ಪರಮಾತ್ಮ"ನನ್ನು ಏರಿಸುವ ಅಗತ್ಯ ನನಗೂ ಕಂಡಿತ್ತು. ಪಟ್ಟಾಗಿ ಎರಡು ಮೂರು ಪೆಗ್ ಏರಿಸಿ ಹೊಟ್ಟೆತುಂಬಾ ಬಿರಿಯಾನಿ ಬಾರಿಸಿದರೆ ಭರ್ಜರಿ ನಿದ್ದೆ ಗ್ಯಾರಂಟಿ! ಬೆಳಿಗ್ಗೆ ನಿಧಾನವಾಗಿ ಎದ್ದು ಛತ್ರಕ್ಕೆ ಹೋದರಾಯಿತು. ಹೇಗೂ ರಿಸೆಪ್ಷನ್ ಇರುವುದು ಹನ್ನೆರಡೂವರೆಗೆ.
ಮನೆಗೆ ಹತ್ತಿರದಲ್ಲೇ ಇದ್ದ ಬಾರಿನ ಮೂಲೆಯ ಕ್ಯೂಬಿಕಲ್ನೊಳಗೆ ಕುಡಿತದ ನಡುವೆ ನಮ್ಮ ಮಾತುಕಥೆ ಸಾಗಿತು. ಯಾವುಯಾವುದೋ ವಿಷಯಗಳನ್ನೆತ್ತಿಕೊಂಡು ಸಾಕಷ್ಟು ಹೊತ್ತು ಮಾತಾಡಿದೆವು. ಅವೆಲ್ಲವನ್ನೂ ನಿಮಗೆ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಯಾಕೆಂದರೆ ಅವು ಯಾವುವೂ ನಾನು ಮುಂದೆ ಹೇಳಲಿರುವ ಘಟನೆಗೆ ಪೂರಕವಲ್ಲ. ಸುಮ್ಮನೆ ನಿಮ್ಮ ಸಮಯ ಹಾಳು ಮಾಡಿದಂತಾಗುತ್ತದೆ ಅಷ್ಟೇ. ಹೀಗಾಗಿ ನೇರವಾಗಿ ವಿಷಯಕ್ಕೆ ಬರುತ್ತೇನೆ.
''ನಿಮಗೊಂದು ವಿಲಕ್ಷಣ ಸುದ್ದಿ ಹೇಳಬೇಕು."" ಲೋಟವನ್ನು ಕೆಳಗಿಡುತ್ತಾ ಮೆಲ್ಲಗೆ ದನಿ ಹೊರಡಿಸಿದ ದಿವಾಕರ.
'ಏನದು?" ಎಂಬಂತೆ ನಾನೂ ಮೂರ್ತಿಯೂ ಅವನತ್ತ ನೋಡಿದೆವು.
ಕೆಲಕ್ಷಣ ತಡೆದು ಹೇಳಲೋ ಬೇಡವೋ ಎಂಬಂತೆ ದಿವಾಕರ ಬಾಯಿ ತೆರೆದ.
''ಇದೊಂದು ದೆವ್ವದ ಸಮಾಚಾರ. ನಿಮಗಿಬ್ಬರಿಗೂ ದೆವ್ವ ಭೂತಗಳಲ್ಲಿ ನಂಬಿಕೆಯಿಲ್ಲ ಎಂದು ನನಗೆ ಗೊತ್ತು. ಆದರೂ ನನ್ನ ಗಮನಕ್ಕೆ ಬಂದ ಈ ಸಂಗತಿಯನ್ನು ನಿಮಗೆ ಹೇಳಬೇಕೆನಿಸುತ್ತದೆ.""
ನಾನೂ ಮೂರ್ತಿಯೂ ಪರಸ್ಪರ ಮುಖ ನೋಡಿಕೊಂಡೆವು. ನಮ್ಮಿಬ್ಬರ ಮುಖಗಳಲ್ಲಿ ನಸುನಗೆಯ ಎಳೆ ಸುಳಿದದ್ದು ಬಹುಷಃ ದಿವಾಕರನಿಗೆ ಗೊತ್ತಾಗಲಿಲ್ಲವೆನಿಸುತ್ತದೆ, ಮಾತು ಮುಂದುವರೆಸಿದ:
''ಕಳೆದ ತಿಂಗಳು ನಮ್ಮ ಮಾವನವರು ಇಲ್ಲೇ ಜೆ ಪಿ ನಗರದ ಫಸ್ಟ್ ಸ್ಟೇಜ್ನಲ್ಲಿ ಹಳೆಯ ಒಂದಂತಸ್ತಿನ ದೊಡ್ಡ ಮನೆಯೊಂದನ್ನು ಕೊಂಡರು. ಹಲವಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಮನೆ ಅದು. ಅಗತ್ಯವಿದ್ದ ಸಣ್ಣಪುಟ್ಟ ರಿಪೇರಿಗಳನ್ನು ಮಾಡಿಸಿ ಕಳೆದ ಬುಧವಾರ ಗೃಹಪ್ರವೇಶವನ್ನೂ ಮಾಡಿದೆವು. ಹೋಮ ಮಾಡಿಸಿ, ಭರ್ಜರಿಯಾಗಿ ಸತ್ಯನಾರಾಯಣ ಪೂಜೆಯನ್ನೂ ಮಾಡಿದೆವು. ಗೃಹಪ್ರವೇಶವಾದ ರಾತ್ರಿ ಯಾರಾದರೂ ಅಲ್ಲಿ ಮಲಗಬೇಕೆಂಬ ರೂಢಿಯಿರುವುದರಿಂದ ಆ ರಾತ್ರಿ ನಾನೂ ನನ್ನ ದೊಡ್ಡ ಭಾವಮೈದುನ ನಾಗೇಶನೂ ಅಲ್ಲಿ ಮಲಗಿದೆವು. ಆದರೆ ಆ ರಾತ್ರಿಯನ್ನು ಅಲ್ಲಿ ಪೂರ್ತಿಯಾಗಿ ಕಳೆಯಲು ನಮಗೆ ಆಗಲೇ ಇಲ್ಲ."" ಮಾತು ನಿಲ್ಲಿಸಿದ ದಿವಾಕರ.
''ಯಾಕೆ ಏನಾಯ್ತು?"" ಮೂರ್ತಿ ಪ್ರಶ್ನಿಸಿದ. ನಾನೂ ಮೌನವಾಗಿ ದಿವಾಕರನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದೆ.
ಎರಡು ಗುಟುಕು ಪಾನೀಯ ಹೀರಿ ದಿವಾಕರ ಒಮ್ಮೆ ಬಾಗಿಲತ್ತ ನೋಡಿ ಅದೇ ತಗ್ಗಿದ ದನಿಯಲ್ಲಿ ಮಾತು ಮುಂದುವರೆಸಿದ:
''ನಿಜ ಹೇಳಬೇಕೆಂದರೆ ಅಲ್ಲಿ ಏನು ನಡೆಯಿತು ಅಂತ ನಂಗಿನ್ನೂ ಸರಿಯಾಗಿ ಅರ್ಥವಾಗಿಲ್ಲ. ನಾವಿಬ್ಬರೂ ಸುಮಾರು ಹತ್ತು ಗಂಟೆಗೆ ನಿದ್ದೆ ಹೋದೆವು. ಮಧ್ಯರಾತ್ರಿಯ ಹೊತ್ತಿಗೆ ಇಬ್ಬರಿಗೂ ಏಕಕಾಲದಲ್ಲಿ ಎಚ್ಚರವಾಯಿತು. ಯಾರೋ ನಡೆದಾಡುತ್ತಿರುವಂತಹ ಹೆಜ್ಜೆ ಸಪ್ಪಳ ಹಾಲ್ನಿಂದ ಕೇಳಿಬಂತು. ಕಳ್ಳರಿರಬಹುದೇನೋ ಎಂದುಕೊಂಡು ಎದ್ದು ದೀಪ ಹಾಕಿ ಹಾಲ್ಗೆ ಬಂದೆವು. ಅಲ್ಲಿ ಯಾರೂ ಇರಲಿಲ್ಲ. ಮುಂಬಾಗಿಲು, ಹಿಂಬಾಗಿಲು ಎರಡೂ ಭದ್ರವಾಗಿ ಮುಚ್ಚಿದ್ದವು. ಏನೂ ಅರ್ಥವಾಗದೆ ನಾವು ನಿಂತಾಗ ನಮ್ಮ ಪಕ್ಕದಲ್ಲೇ ಯಾರೊ ನಡೆದುಹೋದಂತಾಯಿತು! ಹಾಗೇ ನೋಡುತ್ತಿದ್ದಂತೇ ನಾವು ಮಲಗಿದ್ದ ಕೋಣೆಯ ಬಾಗಿಲು ತನಗೆ ತಾನೇ ಮುಚ್ಚಿಕೊಂಡಿತು. ಹಿಂದೆಯೇ ಯಾರೋ ಒಳಗಿನಿಂದ ಅಗುಳಿ ಹಾಕಿದ ಶಬ್ಧ. ನಮ್ಮಿಬ್ಬರಿಗೂ ವಿಪರೀತ ಹೆದರಿಕೆಯಾಗಿ ಮೈಯೆಲ್ಲಾ ಜಳಜಳನೆ ಬೆವತುಹೋಯಿತು. ನಾಗೇಶನಂತೂ ಗಡಗಡನೆ ನಡುಗುತ್ತಿದ್ದ. ವಾಸ್ತವವಾಗಿ ಹೇಳಬೇಕೆಂದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹೆದರಿದ್ದೆ. ಇನ್ನೊಂದು ಕ್ಷಣವೂ ಅಲ್ಲಿ ಉಳಿಯುವ ಧೈರ್ಯ ನಮಗಿರಲಿಲ್ಲ. ಮೈಮೇಲಿದ್ದ ಪಂಚೆ ಬನಿಯನ್ನಲ್ಲೇ ಅಲ್ಲಿಂದ ಹೊರಟು ಮನೆ ಸೇರಿ ಎಲ್ಲ ಕಥೆಯನ್ನೂ ಮಾವನವರಿಗೆ ಹೇಳಿದೆವು. ಅವರಂತೂ ನಮ್ಮ ಯಾವ ಮಾತನ್ನೂ ನಂಬಲು ತಯಾರಿರಲಿಲ್ಲ. 'ಗಂಡಸರಾ ನೀವು?" ಎಂದು ನಮ್ಮನ್ನು ಹೀಯಾಳಿಸಿ ನಕ್ಕುಬಿಟ್ಟರು. ಅವರಿಗಂತೂ ದೆವ್ವ ಭೂತಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ. 'ನಾಳೆ ನಾನೊಬ್ಬನೇ ಹೋಗಿ ಅಲ್ಲಿ ಮಲಗಿದ್ದು ಬರುತ್ತೇನೆ. ನೀವ್ಯಾರೂ ಬರುವುದು ಬೇಡ. ಆ ದೆವ್ವವೇನಾದರೂ ಎದುರು ಸಿಕ್ಕಿದರೆ ಮನೆ ಕಾಯಲು ನೇಮಿಸಿಕೊಳ್ಳುತ್ತೇನೆ" ಎಂದರು.""
ಈಗ ದಿವಾಕರನ ಕಥೆಯಲ್ಲಿ ನನಗೆ ಸ್ವಲ್ಪ ಕುತೂಹಲವುಂಟಾಗಿತ್ತು.
''ಮಾರನೆಯ ರಾತ್ರಿ ಅವರು ಅಲ್ಲಿಗೆ ಹೋದರೇನು?"" ಕೇಳಿದೆ.
''ಹ್ಞೂಂ ಹೋದರು. ಆದರೆ...""
''ಏನು ಆದರೆ...?""
''ಹೋದ ಒಂದು ಗಂಟೆಯಲ್ಲಿ ಆಟೋ ಮಾಡಿಕೊಂಡು ಮನೆಗೆ ಬಂದುಬಿಟ್ಟರು.""
''ಯಾಕೆ ಏನಾಯಿತು? ಭೂತ ಅವರಿಗೂ ದರ್ಶನ ಕೊಟ್ಟಿತೇ?"" ನಗುತ್ತಾ ಪ್ರಶ್ನಿಸಿದ ಮೂರ್ತಿ. ದಿವಾಕರನ ಕಥೆಯನ್ನು ಅವನು ಸ್ವಲ್ಪವೂ ನಂಬಿದಂತಿರಲಿಲ್ಲ.
ಅವನ ಕೀಟಲೆಯ ನಗುವನ್ನು ನಿರ್ಲಕ್ಷಿಸಿ ಹೇಳಿದ ದಿವಾಕರ:
''ತಿರುಗಿ ಬಂದವರು ಆ ರಾತ್ರಿ ಯಾರೊಂದಿಗೂ ಮಾತಾಡಲಿಲ್ಲ. ಹೊಸ ಮನೆಯಲ್ಲಿ ಏನು ನಡೆಯಿತೆಂದು ಯಾರಿಗೂ ಹೇಳಲಿಲ್ಲ. ಕಂಬಳಿ ಹೊದ್ದು ಮಲಗಿಬಿಟ್ಟರು. ಮಾರನೆಯ ಬೆಳಿಗ್ಗೆ ಎದ್ದವರೇ ಆ ಮನೆಗೆ ಯಾರೂ ಹೋಗುವುದು ಬೇಡ, ಎಷ್ಟಕ್ಕೆ ಹೋಗುತ್ತದೋ ಅಷ್ಟಕ್ಕೆ ಅದನ್ನ ಮಾರಿಬಿಡೋಣ ಅಂದರು. ಆ ಗಳಿಗೆಯಿಂದ ಅವರದ್ದು ಅದೊಂದೇ ರಾಗ."
ನಮ್ಮ ನಡುವೆ ಕೆಲಕ್ಷಣಗಳವರೆಗೆ ಮೌನ ಮುಸುಕಿತು. ದಿವಾಕರನ ಕಥೆಯ ಸತ್ಯಾಸತ್ಯತೆಯ ಬಗ್ಗೆ ನಾನು ಯೋಚಿಸುತ್ತಿರುವಂತೇ ಮೂರ್ತಿ ದಿವಾಕರನತ್ತ ನೋಡುತ್ತಾ ಪ್ರಶ್ನಿಸಿದ:
''ಅಂದರೆ ಈಗ ಅಲ್ಲಿ ಯಾರೂ ಇಲ್ಲ?""
''ಇಲ್ಲ.""
''ಅಲ್ಲಿ ದೀಪ, ನೀರು ಇದೆ ತಾನೆ?""
''ಹ್ಞೂಂ ಇದೆ. ಹೊಸದಾಗಿ ಕಾಪರ್ ವಯರಿಂಗ್ ಮಾಡಿಸಿ ಎಲ್ಲ ಕೋಣೆಗಳಲ್ಲೂ ಟ್ಯೂಬ್ ಲೈಟ್ ಹಾಕಿಸಿದ್ದೇವೆ.""
ನಾನು ಕುತೂಹಲಗೊಂಡು ಆಲಿಸುತ್ತಿದ್ದಂತೇ ಮೂರ್ತಿಯ ಮುಂದಿನ ಪ್ರಶ್ನೆ ಬಂತು.
''ಅಲ್ಲಿ ಮಲಗಲಿಕ್ಕೆ ಚಾಪೆ ದಿಂಬುಗಳೇನಾದರೂ ಇವೆಯೇ?""
ದಿವಾಕರನ ಉತ್ತರ ಕ್ಷಣ ತಡೆದು ಬಂತು.
''ಚಾಪೆ ಯಾಕೆ? ಹೊಸಾ ಮಂಚ ಹಾಸಿಗೆಗಳೇ ಇವೆ. ಅವಷ್ಟೇ ಅಲ್ಲ, ಹೊಚ್ಚಹೊಸಾ ಸೋಫಾ ಸೆಟ್, ಕುರ್ಚಿ ಮೇಜುಗಳೆಲ್ಲಾ ಇವೆ. ಹೊಸ ಮನೆಗೆಂದೇ ಮಾವನವರು ಎಲ್ಲವನ್ನೂ ಹೊಸದಾಗಿ ಮಾಡಿಸಿದರು. ಗೃಹಪ್ರವೇಶವಾದ ಒಂದೆರದು ದಿನಗಳಳಿಂದಲೇ ಅಲ್ಲಿ ವಾಸಿಸುವ ಉದ್ದೇಶ ಅವರಿಗಿತ್ತು. ಅದಿರಲಿ, ಇದೆಲ್ಲವನ್ನೂ ನೀನು ಯಾಕೆ ಕೇಳುತ್ತಿದ್ದೀಯ?""
ಅವನ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದೇ ಮೂರ್ತಿ ನನ್ನ ಕಡೆ ತಿರುಗಿದ.
''ನೋಡಯ್ಯ, ಹಾಂಟೆಡ್ ಹೌಸ್ನಲ್ಲಿ ಒಂದು ರಾತ್ರಿ ಕಳೆಯೋ ಅವಕಾಶ! ಇವನು ಹೇಳೋದನ್ನ ಕೇಳಿದ್ರೆ ಆ ಮನೇಲಿ ಏನಾದ್ರೂ ಇರಬೋದೇನೋ ಅನ್ನೋ ಅನುಮಾನ ನಂಗೂ ಬರ್ತಾ ಇದೆ. ದೆವ್ವವೊಂದನ್ನ ನೋಡ್ಬೇಕು ಅನ್ನೋ ನಮ್ಮ ಆಸೆ ಈವತ್ತು ನೆರವೇರಬೋದೇನೋ. ಏನಂತೀ?""
ಒಂದು ಕಾಲದಲ್ಲಿ ದೆವ್ವ ಭೂತಗಳಲ್ಲಿ ನನಗೆ ನಂಬಿಕೆ ಇತ್ತು. ಆದರೆ ಅವು ಜನ ಹೇಳುವಷ್ಟು ಅಪಾಯಕಾರಿಯಾಗಿರಲಾರವು ಎಂಬ ಅನುಮಾನವೂ ನನ್ನಲ್ಲಿತ್ತು. ದೆವ್ವಗಳ ಬಗ್ಗೆ ಪ್ರಚಲಿತವಿರುವ ಕಥೆಗಳೆಲ್ಲವೂ ಕೇವಲ ಕಲ್ಪನೆ, ಅವ್ಯಾವುವೂ ಸತ್ಯಸಂಗತಿಗಳಲ್ಲ ಎಂಬುದು ನನ್ನ ಭಾವನೆ. ಮೂರ್ತಿಗೆ ದೇವರು, ದೆವ್ವ ಎರಡರ ಅಸ್ತಿತ್ವದಲ್ಲೂ ನಂಬಿಕೆ ಇರಲಿಲ್ಲ. ನಾವಿಬ್ಬರೂ ಸೇರಿ ದೆವ್ವವನ್ನು ಭೇಟಿಯಾಗಬೇಕು ಎಂದು ತಿರುಗದ ಜಾಗವಿಲ್ಲ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿನ ಸ್ಮಶಾನದಲ್ಲಿ ಕುಳಿತು ದೆವ್ವದ ನಿರೀಕ್ಷೆಯಲ್ಲಿ ಹಲವು ಅಮಾವಾಸ್ಯೆಯ ರಾತ್ರಿಗಳನ್ನು ಕಳೆದಿದ್ದೆವು! ಇದೇ ಕೆಲಸವನ್ನು ಪಾಂಡಿಚೆರಿಯ ಹೊರವಲಯದ ಸಮುದ್ರತೀರದಲ್ಲಿನ ಸುಡುಗಾಡಿನಲ್ಲೂ ಮಾಡಿದ್ದೆವು. ದೆವ್ವವಿದೆ ಎಂದು ಜನ ಹೇಳುತ್ತಿದ್ದ ಹಳೆಯ ಫ್ರೆಂಚ್ ಕಟ್ಟಡವೊಂದರಲ್ಲಿ ವಾರಗಟ್ಟಲೆ ಇಬ್ಬರೂ ಕಳೆದಿದ್ದೆವು. ಆದರೆ ಯಾವ ದೆವ್ವವೂ ನಮಗೆ ಕಾಣಿಸಿಕೊಂಡಿರಲಿಲ್ಲ. ಕೊನೆಗೆ ಬೇಸತ್ತು ದೆವ್ವ ಭೂತಗಳೆ ಇಲ್ಲ, ಅದೆಲ್ಲವೂ ಭೀತ ಮನಸ್ಸಿನ ಕಲ್ಪನೆಯ ಅತಿರೇಕಗಳು ಎಂಬ ನಿರ್ಧಾರಕ್ಕೆ ಬಂದಿದ್ದೆವು. ಆ ವಿಷಯದ ಬಗ್ಗೆ ಮಾತಾಡುವುದನ್ನು ನಾವು ಸರಿಸುಮಾರು ನಿಲ್ಲಿಸಿಯೇ ಬಿಟ್ಟಿದ್ದೆವು. ಈಗ ದಿವಾಕರನ ಮಾತು ಕೇಳಿ ನನ್ನಲ್ಲಿ ಮತ್ತೆ ಕುತೂಹಲದ ಅಲೆಯೆದ್ದಿತು. ಹೀಗಾಗಿ ಮೂರ್ತಿಯ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ''ಹ್ಞೂಂ"" ಎನ್ನುವಂತೆ ಮುಗಳ್ನಕ್ಕೆ.
ನನ್ನ ಸಮ್ಮತಿ ದೊರೆತೊಡನೆ ಮೂರ್ತಿಯ ಮುಖ ಅರಳಿತು. ನಮ್ಮಿಬ್ಬರನ್ನೇ ಬೆರಗಿನಿಂದ ನಿರುಕಿಸುತ್ತಿದ್ದ ದಿವಾಕರನತ್ತ ತಿರುಗಿ ಹೇಳಿದ:
''ನೋಡು ದಿವೂ, ನಾವು ಮೈಸೂರಿಗೆ ಬಂದಿರೋದಕ್ಕೆ ಮನೋಜನ ಮದುವೆ ಒಂದು ನೆಪ ಅಷ್ಟೇ. ಹುಟ್ಟಿ ಬೆಳೆದ ಊರಿನಲ್ಲಿ ನಾಲ್ಕು ದಿನ ಇದ್ದು ಹಳೆಯ ಪರಿಚಯದವರನ್ನೆಲ್ಲ ಒಮ್ಮೆ ನೋಡಿ ಹೋಗೋಣ ಅನ್ನೋದು ಮುಖ್ಯ ಉದ್ದೇಶ. ಒಂದು ವಾರ ಇಲ್ಲೇ ಕ್ಯಾಂಪ್ ಹಾಕೋ ಪ್ಲಾನ್ ನಮ್ಮದು, ಅಷ್ಟು ದಿನಗಳನ್ನೂ ನಿನ್ನ ಮನೆಯಲ್ಲಿ ನಿನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಟ್ಟುಕೊಂಡು ಹೇಗಪ್ಪಾ ಕಳೆಯೋದು ಅನ್ನೋ ಯೋಚನೆ ಇತ್ತು. ಈಗ ಈ ದೆವ್ವದ ಮನೆಯ ವಿಚಾರ ಕೇಳಿದೊಡನೆ ನನಗೆ ಸಮಾಧಾನವೇ ಆಯ್ತು. ಹೇಗೂ ಅದೀಗ ಖಾಲಿಯಾಗೇ ಇದೆ. ಇನ್ನೊಂದು ವಾರದಲ್ಲಿ ಅದಕ್ಕೆ ಗಿರಾಕಿ ಸಿಕ್ಕಿ ನೀವದನ್ನ ಮಾರೋದು ಅಸಂಭವ ಅಲ್ಲವೇ? ಒಂದುವಾರ ನಾವಿಬ್ಬರೂ ಅಲ್ಲಿ ಆರಾಮವಾಗಿ ಇರುತ್ತೇವೆ. ನಮಗೆ ಹೇಳಿಮಾಡಿಸಿದ ಜಾಗ ಅದು.""
ದಿವಾಕರ ಒಂದುಕ್ಷಣ ಬೆಚ್ಚಿದ. ''ಮೂರ್ತಿ ನಿನಗೆ ತಲೆಕೆಟ್ಟಿದೆಯೇನು?"" ಹೆಚ್ಚುಕಡಿಮೆ ಅರಚಿದ. ''ಅದು ದೆವ್ವದ ಮನೆ ಕಣೋ. ಅಲ್ಲಿ ಒಂದುವಾರ ಇರ್ತೀನಿ ಅಂತೀಯಲ್ಲ?""
ಮೂರ್ತಿ ನಕ್ಕುಬಿಟ್ಟ.
''ನೋಡು ದಿವೂ, ಅಲ್ಲಿ ದೆವ್ವವಿದೆ ಎಂದೇ ತಿಳಿಯೋಣ, ನಿನ್ನ ಮಾತನ್ನ ನಂಬೋದಾದ್ರೆ ಅದರ ಅನುಭವ ನಿನಗೆ, ನಿನ್ನ ಭಾವಮೈದುನನಿಗೆ ಹಾಗೂ ನಿಮ್ಮ ಮಾವನವರಿಗೆ- ಮೂವರಿಗೂ ಆಗಿದೆ. ಆದರೆ ಆ ದೆವ್ವದಿಂದ ನೀವು ಮೂವರಿಗೂ ಏನೂ ಅಪಾಯವಾಗಿಲ್ಲ ಅನ್ನೋದು ನಿಜ ತಾನೆ? ನಿಮಗೆ ಹಾನಿ ಮಾಡದ ಅದು ನಮಗೂ ಯಾವ ಹಾನೀನೂ ಮಾಡೋದಿಲ್ಲ ಅಂತ ನಂಬಬೋದು ಅಲ್ಲವಾ?""
ಅವನನ್ನೇ ಬೆರಗು ಹತ್ತಿದದವನಂತೆ ನೋಡಿದ ದಿವಾಕರನ ಮುಂಗೈ ತಟ್ಟಿ ಹೇಳಿದ ಮೂರ್ತಿ: ''ನೋಡಯ್ಯ, ನೀನಿಷ್ಟು ಗಾಬರಿಯಾಗೋದು ಬೇಡ. ಈ ಒಂದು ರಾತ್ರೀನ ಅಲ್ಲಿ ಕಳೀತೀವಿ. ಅಲ್ಲಿ ಇರೋದಿಕ್ಕೆ ಆಗೋದಿಲ್ಲ ಅಂತ ಕಂಡುಬಂದ್ರೆ ನೇರವಾಗಿ ನಿನ್ನ ಮನೆಗೆ ಬಂದುಬಿಡ್ತೀವಿ. ಸರಿ ತಾನೆ?"" ಹಾಗೆಂದವನೇ ಗಡಿಯಾರದತ್ತ ನೋಡಿ ''ಹ್ಞೂಂ, ಹತ್ತುಗಂಟೆಯಾಗಿಹೋಗಿದೆ. ನನಗಂತೂ ಜೋರು ನಿದ್ದೆ ಬರ್ತಾ ಇದೆ. ಆ ಮನೆ ಎಲ್ಲಿದೆ ಅಂತ ಸ್ವಲ್ಪ ತೋರಿಸಿಬಿಡು ನಡೆ"" ಎಂದವನೆ ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ಎದ್ದು ನಿಂತ.
ದಿವಾಕರನ ಹೆಂಡತಿಗೆ ಬಿಡಿಬಿಡಿ ಪದಗಳಲ್ಲಿ ನಮ್ಮ ನಿರ್ಧಾರವನ್ನು ಅರುಹಿ ಅವಳ ಮುಖದಲ್ಲಿ ಮೂಡಿದ ಭಯಾಶ್ಚರ್ಯಗಳನ್ನು ಅಲಕ್ಷಿಸಿ ನಮ್ಮ ಸೂಟ್ಕೇಸು ಮತ್ತು ಬ್ಯಾಗುಗಳನ್ನು ದಿವಾಕರನ ಕಾರಿಗೆ ಹಾಕಿ ದೆವ್ವದ ಮನೆಯತ್ತ ಹೊರಟೆವು.
ಸ್ಟರ್ಲಿಂಗ್ ಥಿಯೇಟರಿನಿಂದ ನೇರವಾಗಿ ದಕ್ಷಿಣಕ್ಕೆ ಸಾಗಿದ ರಸ್ತೆಯಲ್ಲಿ ವಾಹನ ನಿಧಾನವಾಗಿ ಚಲಿಸಿತು. ಗೊಬ್ಬಳಿ ಮರದ ಬಳಿ ಬಲಕ್ಕೆ ಹೊರಳಿ ಎರಡು ನಿಮಿಷ ಸಾಗಿ ನಿಂತಿತು. ಮೂವರೂ ಕೆಳಗಿಳಿದೆವು.
ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು, ಹೆಚ್ಚಿನ ಮನೆಗಳು ಕತ್ತಲಲ್ಲಿ ಮುಳುಗಿದ್ದವು. ಸ್ವಲ್ಪ ದೂರದಲ್ಲಿ ಬಾರಿನಂತೆ ಕಂಡ ಅಂಗಡಿಯೊಂದರ ಮುಂದೆ ನಿಂತಿದ್ದ ಎರಡು ಮೂರು ಜನರನ್ನು ಬಿಟ್ಟರೆ ಇಡೀ ರಸ್ತೆ ನಿರ್ಜನವಾಗಿತ್ತು.
ಈ ಪ್ರದೇಶ ನನಗೆ ಅಪರಿಚಿತವೇನೂ ಆಗಿರಲಿಲ್ಲ. ನಾನು ಚಿಕ್ಕವನಾಗಿದ್ದಾಗ ಈ ಜಾಗವೆಲ್ಲಾ ರಾಗಿ, ಜೋಳ ಬೆಳೆಯುವ ಹೊಲಗಳಾಗಿದ್ದುದು ನನಗಿನ್ನೂ ನೆನಪಿದೆ. ಆಗ ಸ್ಟರ್ಲಿಂಗ್ ಥಿಯೇಟರ್ನಿಂದ ನೂರಿನ್ನೂರು ಗಜಗಳವರೆಗೆ ಮಾತ್ರ ಮನೆಗಳಿದ್ದವು. ಅದರಾಚೆ ಹೊಲಗಳು. ವಿದ್ಯಾರಣ್ಯಪುರಂನಲ್ಲಿದ್ದ ನಮ್ಮ ಮನೆಯಿಂದ ಹೊರಟು ಕೈಲಿ ಕ್ಯಾಟರ ಬಿಲ್ಲು ಹಿಡಿದು ಗೆಳೆಯರ ಜತೆ ಸೇರಿ ಹಕ್ಕಿಗಳ ಬೇಟೆಗೆಂದು ಇಲ್ಲೆಲ್ಲಾ ಅಲೆದಾಡಿದ್ದು ಇನ್ನೂ ನೆನಪಿದೆ. ಈಗ ಆ ಹೊಲಗಳೆಲ್ಲವೂ ಮಾಯವಾಗಿ ಮೂರು ನಾಲ್ಕು ಕಿಲೋಮೀಟರ್ಗಳಾಚೆಯ ಕೊಪ್ಪಲೂರಿನವರೆಗೂ ಮನೆಗಳು ಎದ್ದುಬಿಟ್ಟಿರುವುದನ್ನು ಎರಡು ವರ್ಷಗಳ ಹಿಂದೊಮ್ಮೆ ಇತ್ತ ಬಂದಾಗ ನೋಡಿದ್ದೆ. ಮೈಸೂರು ನಗರ ಬೆಳೆಯುತ್ತಿರುವ ವೇಗ ನನ್ನನ್ನು ಬೆರಗುಗೊಳಿಸಿತ್ತು. ವ್ಯವಸಾಯದ ಜಮೀನುಗಳೆಲ್ಲ ಹೀಗೆ ಸೈಟುಗಳಾಗಿ ಮನೆಗಳೆದ್ದುಬಿಟ್ಟರೆ ಬೆಳೆ ಬೆಳೆಯುವುದೆಲ್ಲಿ ಎಂಬ ಯೋಚನೆ ನನಗೆ ಆಗ ಬಂದದ್ದುಂಟು.
''ಅದೇ ಮನೆ.""ದಿವಾಕರನ ದನಿ ಕೇಳಿ ನನ್ನ ನೆನಪಿನ ಲೋಕದಿಂದ ಹೊರಬಂದು ಮುಂದೆ ನೋಡಿದೆ. ರಸ್ತೆಯ ಒಂದು ಪಕ್ಕ ಎತ್ತರದ ದಿಣ್ಣೆಯೊಂದರ ಮೇಲೆ ನಿಂತ ಒಂಟಿ ಮನೆ ಅದು. ಆ ದಿಣ್ಣೆ ನನಗೆ ಚೆನ್ನಾಗಿ ನೆನಪಿದೆ. ಹಿಂದೆ ಅದರ ನಟ್ಟ ನಡುವೆ ಒಂದು ಬೃಹದಾಕಾರದ ನೇರಳೇ ಮರವಿತ್ತು. ಅದರ ಹಣ್ಣುಗಳನ್ನು ತಿನ್ನಲು ಬರುತ್ತಿದ್ದ ಹಕ್ಕಿಗಳನ್ನು ಹೊಡೆಯಲು ನಾವು ಅಲ್ಲಿ ಗಂಟೆಗಟ್ಟಲೆ ಕೂತದ್ದುಂಟು. ಸಮತಟ್ಟಾದ ಹೊಲಗಳ ನಡುವೆ ಈ ದಿಣ್ಣೆ ಹೇಗೆ ಮೂಡಿತು ಎಂದು ನಾವು ಆಗ ತಲೆ ಕೆಡಿಸಿಕೊಂಡಿದ್ದೆವು. ಅದರ ಬಗ್ಗೆ ನಮ್ಮ ಊಹಾಪೋಹಗಳು ಲಂಗುಲಗಾಮಿಲ್ಲದೇ ಹರಿಯುತ್ತಿದ್ದವು. ಅದರಡಿಯಲ್ಲಿ ಭಾರಿ ನಿಧಿ ಹೂತಿರಬೇಕೆಂದು ಒಬ್ಬ ಹೇಳಿದರೆ ನೂರಾರು ವರ್ಷಗಳ ಹಿಂದೆ ಅಲ್ಲಿ ನಡೆದ ದೊಡ್ಡ ಯುದ್ದವೊಂದರಲ್ಲಿ ಮಡಿದ ಸಾವಿರಾರು ಸೈನಿಕರನ್ನು ಅಲ್ಲಿ ಒಟ್ಟಿಗೆ ಸಮಾಧಿ ಮಾಡಿದ್ದಾರೆ ಎಂದು ನಮ್ಮ ತಾತ ಹೇಳಿದ ಎಂದು ಮತ್ತೊಬ್ಬ ರೈಲು ಬಿಡುತ್ತಿದ್ದ.ಹಿಂದೆ ಅಲ್ಲಿದ್ದ ಭಾರೀ ನೇರಳೆ ಮರ ಈಗಿರಲಿಲ್ಲ. ಅದಿದ್ದ ಸ್ಥಳದಲ್ಲಿ ಈ ಭೂತ ಬಂಗಲೆ ಎದ್ದು ನಿಂತಿತ್ತು.
ಮೂವರೂ ನಿಧಾನವಾಗಿ ದಿಣ್ಣೆಯನ್ನೇರಿ ಮನೆಯನ್ನು ಸಮೀಪಿಸಿದೆವು. ಅದರ ಮುಂಬಾಗಿಲಲ್ಲಿ ನಿಂತು ತಲೆಯೆತ್ತಿ ನೋಡಿದಾಗ ಒಂದಂತಸ್ತಿನ ಆ ಮನೆ ರಸ್ತೆಯಿಂದ ಕಂಡದ್ದಕ್ಕಿಂತಲೂ ಎತ್ತರವಾಗಿದೆಯೆಂದು ನನಗನಿಸಿತು.
ನೀಳವಾದ ಬೀಗದ ಕೈಯನ್ನು ಹೊರತೆಗೆದ ದಿವಾಕರ ಮೂರ್ತಿಯತ್ತ ನೋಡಿ ಗಂಭೀರ ದನಿಯಲ್ಲಿ ಕೇಳಿದ:''ಮತ್ತೊಮ್ಮೆ ಹೇಳುತ್ತಿದ್ದೇನೆ, ನೀವಿಬ್ಬರೂ ಇಲ್ಲಿರುವುದು ಬೇಡ. ಮನೆಗೆ ಹೊರಟುಬಿಡೋಣ,""
''ಅಯ್? ತೆಗೆಯಯ್ಯ ಬಾಗಿಲನ್ನ"" ಎನ್ನುತ್ತಾ ಮೂರ್ತಿ ದಿವಾಕರನ ಕೈಯಿಂದ ಬೀಗದ ಕೈಯನ್ನು ಕಿತ್ತುಕೊಂಡು ತಾನೇ ಬೀಗ ತೆರೆದ.
ಮೂವರೂ ಒಳಗೆ ಪ್ರವೇಶಿಸಿದವು.ವಿಶಾಲವಾದ ಹಜಾರ, ಅದರ ಎಡಕ್ಕೆ ಎರಡು ದೊಡ್ಡ ದೊಡ್ಡ ಕೋಣೆಗಳು, ಹಜಾರದ ಬಲಕ್ಕೆ ಊಟದ ಮನೆ, ಅಡಿಗೆ ಮನೆಗಳಿದ್ದವು. ಹಜಾರದ ಆಚೆಬದಿಯಲ್ಲಿ ಅಂದರೆ ಮುಂಬಾಗಿಲಿಗೆ ನೇರವಾಗಿ ಎದುರಿಗೆ ಅಗಲದ ಪರದೆ ಇತ್ತು. ಅದರ ಹಿಂದಿರುವುದೇ ಮಾಸ್ಟರ್ ಬೆಡ್ರೂಂ ಎಂದು ದಿವಾಕರ ಹೇಳಿದ. ಊಟದ ಮನೆಯ ಬಲಕ್ಕೆ ಮಹಡಿಗೆ ಏರಿಹೋಗಲು ಮೆಟ್ಟಲುಗಳಿದ್ದವು. ಅದಕ್ಕೆ ಹೊಂದಿಕೊಂಡಂತೆ ನಾಲ್ಕಡಿ ಅಗಲದ ಕತ್ತಲುಗಟ್ಟಿದ ಪ್ಯಾಸೇಜ್. ಅದು ಬಾತ್ರೂಂ ಮತ್ತು ಟಾಯ್ಲೆಟ್ಗೆ ಹೋಗುವ ಹಾದಿ ಎಂದು ದಿವಾಕರ ಹೇಳಿದ. ''ಸೊಗಸಾದ ಮನೆ ಕಣಯ್ಯ"" ಮನೆಯೊಳಗೆ ಒಂದು ಸುತ್ತು ಹಾಕಿ ಮಹಡಿಯ ಮೇಲೂ ಏರಿಹೋಗಿ ಬಂದ ಮೂರ್ತಿ ಮೆಚ್ಚಿಕೆಯ ಮಾತಾಡಿದ.''ನೀನೂ ಒಮ್ಮೆ ಮೇಲೆಲ್ಲಾ ಹೋಗಿ ನೋಡಿ ಬಾ"" ಎಂದ ದಿವಾಕರ. ನನಗೆ ಆಸಕ್ತಿಯಿರಲಿಲ್ಲ. ''ನಾಳೆ ನೋಡಿದರಾಯಿತು ಬಿಡು"" ಎನ್ನುತ್ತಾ ಅಲ್ಲೇ ಸೋಫಾದಲ್ಲಿ ಕುಳಿತೆ. ನನ್ನ ಪಕ್ಕದಲ್ಲೇ ಅವನೂ ಕುಳಿತ.
''ನಿನಗೆ ನಿದ್ದೆ ಬರುತ್ತಿಲ್ಲವಾದರೆ ಒಂದೆರಡು ವಿಷಯ ಹೇಳಬಯಸುತ್ತೇನೆ"" ಎಂದ ದಿವಾಕರ. ಅವನು ಯಾವುದೋ ಗಾಢ ಯೋಚನೆಯಲ್ಲಿರುವುದು ಅವನ ಮುಖಭಾವದಿಂದ ನನಗೆ ಅರಿವಾಯಿತು. ''ಅದೇನು ಹೇಳು. ನನಗಿನ್ನೂ ನಿದ್ದೆ ಬರುತ್ತಿಲ್ಲ"" ಎಂದು ಅವನನ್ನು ಉತ್ತೇಜಿಸುವ ದನಿಯಲ್ಲಿ ಹೇಳಿದೆ. ಅದಕ್ಕೇ ಕಾದಿದ್ದವನಂತೆ ಅವನು ಹೇಳತೊಡಗಿದ. ''ನೋಡು, ತಲೆ ಗಟ್ಟಿಯಿದೆ ಎಂದು ಬಂಡೆಗೆ ಗುದ್ದಿಕೊಳ್ಳೋ ಬುದ್ದಿ ಮೂರ್ತಿಯದು. ನನ್ನ ಮಾತುಗಳನ್ನ ಸರಿಯಾಗಿ ಕೇಳೋ ತಾಳ್ಮೆಯೇ ಅವನಿಗಿಲ್ಲ. ನೀನು ಅವನಂತಲ್ಲ. ಹೀಗಾಗಿ ನಿನಗೆ ಒಂದೆರಡು ಮಾತು ಹೇಳ್ತೀನಿ. ವಾರದ ಹಿಂದೆ ಈ ವಿಚಿತ್ರ ಅನುಭವವಾದ ನಂತರ ನಾನು ದೆವ್ವ ಭೂತಗಳ ಬಗ್ಗೆ ಸಾಕಷ್ಟು ಪುಸ್ತಕ ತಿರುವಿ ಹಾಕ್ದೆ. ನನಗೆ ತಿಳಿದ ವಿಷಯಗಳು ನನ್ನನ್ನ ಗಾಬರಿಗೊಳಿಸ್ತಾ ಇವೆ. ದೆವ್ವ ಅಥವಾ ಮನುಷ್ಯನ ಪ್ರೇತ ರೂಪಗಳು ಕಲ್ಪನೆಗಳಲ್ಲ. ಅವು ನಿಜವಾಗಿಯೂ ಇವೆ. ಮತ್ತೂ ಯಾವಾಗಲೂ, ಎಲ್ಲೆಲ್ಲಿಯೂ ಇವೆ. ನಮ್ಮ ಕಣ್ಣಿಗೆ ಕಾಣಿಸದೇ ಅವು ನಮ್ಮ ಸುತ್ತಮುತ್ತಲೆಲ್ಲ ತಿರುಗಾಡುತ್ತಿರುತ್ತವೆ.ಅವುಗಳ ದಾರಿಗೆ ನಾವೇನಾದರೂ ಅಡ್ಡ ಬಂದರೆ ಅವು ಪಕ್ಕಕ್ಕೆ ಸರಿದು ಹೋಗೋದಿಲ್ಲ. ಬದಲಾಗಿ ನೇರವಾಗಿ ನಮ್ಮ ಶರೀರದೊಳಗೆ ಒಂದು ಕಡೆ ಪ್ರವೇಶಿಸಿ ಇನ್ನೊಂದು ಕಡೆಯಿಂದ ಹೊರಬರುತ್ತವೆ. ಅವು ನಮ್ಮ ದೇಹದೊಳಗಿದ್ದ ಅರೆಕ್ಷಣದಲ್ಲಿ ನಮಗೆ ಎದೆಯಾಳದಲ್ಲಿ ಛಳಿಯ ಅನುಭವವಾಗುತ್ತದೆ. ಇದನ್ನು ಓದಿದ ಮೇಲೆ ಇಂಥಾ ಛಳಿಯ ಅನುಭವಗಳು ನನಗೆ ಅನೇಕ ಬಾರಿ ಆಗಿರುವುದು ನೆನಪಿಗೆ ಬಂದು ಬೆವತುಹೋದೆ. ಮತ್ತೆ ಯಾವುದೇ ಸ್ಥಳದಲ್ಲಿ ಅಂದರೆ ಮನೆಯ ಯಾವ ಕೋಣೆಯಲ್ಲಿ ದೆವ್ವ ಇರುತ್ತದೋ ಅಲ್ಲಿ ತಾಪಮಾನ ಬೇರೆ ಕಡೆಗಿಂತ ಬಹಳ ಕೆಳಗಿದ್ದು ಅಲ್ಲಿರುವವರಿಗೆ ಛಳಿಯ ಅನುಭವ ಆಗುತ್ತೆ. ಇದನ್ನೆಲ್ಲ ನಿನಗೆ ಯಾಕೆ ಹೇಳುತ್ತಿದ್ದೇನೆ ಅಂದರೆ ಈ ಮನೆಯಲ್ಲಿನ ಯಾವುದೇ ಸ್ಥಳದಲ್ಲಿ ನಿನಗೆ ಛಳಿಯ ಅನುಭವವಾದರೆ ತಕ್ಷಣ ಅಲ್ಲಿಂದ ಬೇರೆ ಕಡೆ ಹೋಗಿಬಿಡು.""
ಅವನು ಹೇಳಿದ ವಿಷಯಗಳನ್ನು ನಾನೂ ಓದಿದ್ದೆ. ಆದರೆ ಅವುಗಳ ಬಗ್ಗೆ ನನಗೆ ನಂಬಿಕೆಯಾಗಿರಲಿಲ್ಲ. ಓಮ್ಮೆ ಓರೆನೋಟದಿಂದ ಮೂರ್ತಿಯ ಕಡೆ ನೋಡಿದೆ. ಅವನ ಮುಖದಲ್ಲಿ ನಸುನಗೆ ಹರಡಿತ್ತು. ನಾನು ಒಮ್ಮೆ ಆಕಳಿಸಿದೆ. ಅದನ್ನು ಗಮನಕ್ಕೆ ತೆಗೆದುಕೊಳ್ಳದೆ ದಿವಾಕರ ಹೇಳುತ್ತಲೇ ಹೋದ.
''ನೋಡು, ಎಲ್ಲ ದೆವ್ವಗಳು ಕೆಟ್ಟವಲ್ಲ. ಹೆಚ್ಚಿನವು ತಮ್ಮ ಇರುವಿಕೆ ನಮ್ಮ ಅರಿವಿಗೆ ಬಾರದಂತೆಯೇ ಇದ್ದುಬಿಟ್ಟಿರುತ್ತವೆ ಹಾಗೂ ತಮ್ಮ ಕರ್ಮ ಕಳೆದ ನಂತರ ಪ್ರೇತರೂಪ ತ್ಯಜಿಸಿ ಮತ್ತೆಲ್ಲೋ ಒಂದುಕಡೆ ಮನುಷ್ಯಯೋನಿಯಲ್ಲಿ ಜನ್ಮ ತಾಳುತ್ತವೆ. ಕೆಲವೇ ಕೆಲವು ಪ್ರೇತಗಳು, ಬದುಕಿದ್ದಾಗ ಅಥವಾ ಸಾಯುವ ಗಳಿಗೆಯಲ್ಲಿ ನೋವು ಹಿಂಸೆ ಅನುಭವಿಸಿದಂಥವು ಮಾತ್ರ ನಮಗೆ ತೊಂದರೆ ಕಾಟ ಕೊಡಲು ಪ್ರಯತ್ನಿಸುತ್ತವೆ. ಯಾವುದೇ ದೆವ್ವ ಒಳ್ಳೆಯದೋ ಕೆಟ್ಟದ್ದೋ ಎಂದು ತಿಳಿಯಲು ಒಂದು ಸರಳ ಮಾರ್ಗ ಇದೆ. ಅದು ನಮಗೆ ಬಿಳಿಯದಾಗಿ ಕಾಣಿಸಿದರೆ ಅದು ಒಳ್ಳೆಯ ದೆವ್ವ, ಕಪ್ಪಾಗಿ ಕಂಡರೆ ಅದು ನಿಜಕ್ಕೂ ಕೆಟ್ಟ ದೆವ್ವ,..""
ನನಗೆ ಅವನ ಮಾತುಗಳು ಸಾಕೆನಿಸಿಬಿಟ್ಟವು. ಕೈಯನ್ನು ಅಡ್ಡ ತಂದು ಅವನ ಮಾತನ್ನು ತಡೆದೆ.
''ಇಲ್ಲಿ ಕೇಳು ದಿವೂ, ಇದೆಲ್ಲಾ ಯೂರೋಪಿಯನ್ನರು ಕಟ್ಟಿದ ಕಥೆಗಳು. ತಮ್ಮ ಮೈಬಣ್ಣ ಮಾತ್ರ ಶ್ರೇಷ್ಠತೆಯ ಸಾಕಾರರೂಪ; ಆಫ್ರಿಕನ್ನರ, ನಮ್ಮವರ ಕಪ್ಪು ಕಂದು ಬಣ್ಣಗಳು ಕೀಳು, ಕೆಟ್ಟದ್ದರ ಸಂಕೇತ ಎಂಬ ವಸಾಹತುಶಾಹಿ ವಿಚಾರಧಾರೆವನ್ನು ದೆವ್ವಗಳಿಗೂ ವಿಸ್ತರಿಸುವ ಅವರ ಪ್ರಯತ್ನ ಇದು"" ಎಂದೆ. ನನ್ನ ದನಿ ತುಸು ಏರಿತ್ತೆನಿಸುತ್ತದೆ, ದಿವಾಕರ ಅಪ್ರತಿಭನಾದ. ನನ್ನನ್ನೇ ಒಂದುಕ್ಷಣ ಮಿಕಿಮಿಕಿ ನೋಡಿದ. ಮರುಕ್ಷಣ ಸಾವರಿಸಿಕೊಂಡು ''ಸರಿ ನಿನಗೆ ನಿದ್ದೆ ಬರುತ್ತಿದೆ ಅಲ್ಲವೇ? ನೀನು ಮಲಗು. ಒಂದು ಮಾತು, ಇಲ್ಲಿರುವುದು ಸಾಧ್ಯವಿಲ್ಲ ಎಂದು ಅನಿಸಿದ ಕ್ಷಣ ಮನೆಗೆ ಬಂದುಬಿಡಿ. ಇಲ್ಲೇ ಪಕ್ಕದ ಕವಿತಾ ಬೇಕರಿಯ ಬಳಿ ರಾತ್ರಿಯಿಡೀ ಆಟೋಗಳು ಸಿಗುತ್ತವೆ"" ಎಂದು ಹೇಳಿ ಅವನು ಬಾಗಿಲತ್ತ ನಡೆದ. ನಾನು ಅವನ ಹಿಂದೆಯೇ ಹೋದೆ. ದಿವಾಕರ ಬಾಗಿಲು ತೆರೆಯುವಷ್ಟರಲ್ಲಿ ಹಿಂದಿನಿಂದ ಮೂರ್ತಿ ಕರೆದದ್ದು ಕೇಳೆ ಗಕ್ಕನೆ ನಿಂತ. ನಾನೂ ಮೂರ್ತಿಯ ಕಡೆ ತಿರುಗಿದೆ. ಆಗಿನಿಂದ ಮೌನವಾಗಿ ಕುಳಿತಿದ್ದ ಅವನು ಈಗೇನು ಹೇಳಬಹುದೆಂದು ನಾನೂ ಕುತೂಹಲಗೊಂಡೆ.
ಪಾಯಿಜಾಮದ ಲಾಡಿಯನ್ನು ಸಡಿಲ ಮಾಡಿಕೊಳ್ಳುತ್ತ ಮೂರ್ತಿ ಬಾಯಿ ತೆರೆದ.
''ಇಂಥಾ ಭರ್ಜರಿ ಮನೆಯನ್ನ ಮಾರಹೊರಟಿದ್ದಾರಲ್ಲಯ್ಯ ನಿಮ್ಮ ಮಾವ? ಒಂದು ಕೆಲಸ ಮಾಡೋಣ. ನಿನ್ನ ಹೆಂಡತಿಗೆ ಒಬ್ಬಳು ತಂಗಿ ಇದ್ದಾಳೆ ಅಲ್ಲವಾ? ಹೇಗಾದರೂ ಮಾಡಿ ಅವಳನ್ನ ನನಗೆ ಕೊಡಿಸಿಬಿಡು ಮಾರಾಯ. ಜತೆಗೆ ವರದಕ್ಷಿಣೆ ಅಂತ ಈ ಮನೇನೂ ನನಗೆ ಕೊಡಿಸಿಬಿಡಪ್ಪ. ನೆಮ್ಮದಿಯಾಗಿ ಬದುಕು ಕಳೆದುಬಿಡ್ತೀನಿ.""
ಅವನ ಮಾತು ಕೇಳಿ ನನಗೆ ನಗು ಬಂತು. ನಕ್ಕುಬಿಟ್ಟೆ. ಆದರೆ ದಿವಾಕರ ನಗಲಿಲ್ಲ. ಮೂರ್ತಿಯತ್ತ ನೇರವಾಗಿ ನೋಡುತ್ತಾ ಹೇಳಿದ:
''ಈ ಮನೆಯ ಬಗ್ಗೆ ಇದೇ ಮೋಹ ಬೆಳಗಿನವರೆಗೂ ನಿನ್ನಲ್ಲಿ ಉಳಿದರೆ ಆಗ ಖಂಡಿತಾ ನಾನೇ ನಿಂತು ನಿನಗೂ ಕಸ್ತೂರಿಗೂ ಮದುವೆ ಮಾಡಿಸಿ ನಿನ್ನನ್ನು ನನ್ನ ಷಡ್ಡಕನನ್ನಾಗಿ ಮಾಡಿಕೊಳ್ಳುತ್ತೇನೆ. ಈ ಮನೆಯೂ ನಿನಗೇ.""
ದಿವಾಕರ ಹೊರಟುಹೋದ ನಂತರ ನಾವಿಬ್ಬರೂ ಮಾಸ್ಟರ್ ಬೆಡ್ರೂಮ್ಗೆ ಹೋದೆವು. ಇಪ್ಪತ್ತಡಿ ಉದ್ದ, ಹದಿನೈದಡಿ ಅಗಲದ ವಿಶಾಲವಾದ ಕೋಣೆ ಅದು. ಒಂದು ಪಕ್ಕ ಜೋಡಿ ಮಂಚ, ಹಾಸಿಗೆ. ಮತ್ತೊಂದು ಪಕ್ಕ ಒಂದು ಮೇಜು, ಕುರ್ಚಿ. ಅಷ್ಟರ ಹೊರತಾಗಿ ಬೇರೇನೂ ಇರಲಿಲ್ಲ.
''ಇನ್ನು ಮಲಗೋಣ. ನನಗಂತೂ ಆಯಾಸವಾಗಿಹೋಗಿದೆ. ದೆವ್ವವೇನಾದರೂ ಬಂದರೆ ನನ್ನನ್ನು ಎಬ್ಬಿಸಯ್ಯ"" ಎನ್ನುತ್ತಾ ಮೂರ್ತಿ ಹಾಸಿಗೆಯಲ್ಲುರುಳಿದ. ನಾನು ಬಟ್ಟೆ ಬದಲಿಸಿ ಟಾಯ್ಲೆಟ್ಟಿಗೆ ಹೋಗಿ ಬರುವಷ್ಟರಲ್ಲಿ ಅವನು ಸಣ್ಣಗೆ ಗೊರಕೆ ಹೊಡೆಯಲಾರಂಭಿಸಿದ್ದ.
ದೀಪವಾರಿಸಿ ಹಾಸಿಗೆಯಲ್ಲುರುಳಿದೆ.
ಸುಮಾರು ಹೊತ್ತು ನನಗೆ ನಿದ್ದೆಯೇ ಬರಲಿಲ್ಲ. ಏನೇನೋ ಯೋಚನೆಗಳು. ಹೆಚ್ಚಿನವು ದೆವ್ವಗಳಿಗೆ ಸಂಬಂಧಿಸಿದಂತಹವೇ. ಕೆಲವರ್ಷಗಳ ಹಿಂದೆ ಒಂದು ರಾತ್ರಿ ನಾನೂ ಮೂರ್ತಿಯೂ ಅಮಾವಾಸ್ಯೆಯ ರಾತ್ರಿಯಲ್ಲಿ ಪಾಂಡಿಚೆರಿಯ ಪಕ್ಕದ ಸಮುದ್ರ ತೀರದ ಸುಡುಗಾಡಿನಲ್ಲಿ ಇನ್ನೂ ಉರಿಯುತ್ತಿದ್ದ ಚಿತೆಯೊಂದರ ಪಕ್ಕ ದೆವ್ವಗಳಿಗಾಗಿ ಕಾದು ಕುಳಿತದ್ದೇ ಬೇಡಬೇಡವೆಂದರೂ ಮತ್ತೆ ಮತ್ತೆ ನೆನಪಿಗೆ ಬರುತ್ತಿತ್ತು. ''ಥತ್"" ಎಂದುಕೊಂಡು ಮಗ್ಗಲು ಬದಲಿಸಿದೆ.
ಇಡೀ ಮನೆ ಮೌನದಲ್ಲಿ ಮುಳುಗಿತ್ತು. ತೆರೆದಿದ್ದ ಕಿಟಕಿಯಿಂದ ಜೀರುಂಡೆಗಳ ''ರಿಞ??"" ನಾದ ಒಂದೇ ಸಮನೆ ಕೇಳಿಬರುತ್ತಿತ್ತು. ದೂರದಲ್ಲೆಲ್ಲೋ ಒಂದು ಕಡೆ ಯಾವುದೋ ವಾಹನವೊಂದರ ಕ್ಷೀಣ ಮೊರೆತ.... ಹತ್ತಿರದಲ್ಲೇ ಒಂದು ಕಡೆ ನಾಯಿಯೊಂದು ವಿಕಾರವಾಗಿ ಊಳಿಟ್ಟಿತು... ಹಿಂದೆಯೇ ಯಾವುದೋ ಇರುಳ್ವಕ್ಕಿಯ ರೆಕ್ಕೆಗಳ ಪಟಪಟ ಬಡಿತ... ಮರುಕ್ಷಣ ಎಲ್ಲೆಡೆ ನಿಶ್ಶಬ್ದ. ನಾನು ಮತ್ತೊಮ್ಮೆ ಮಗ್ಗಲು ಬದಲಿಸಿದೆ. ನಿಧಾನವಾಗಿ ಜೋಂಪು ಹತ್ತಿತು.
ರಾತ್ರಿ ಒಂದುಹೊತ್ತಿನಲ್ಲಿ ಗಕ್ಕನೆ ಎಚ್ಚರವಾಯಿತು. ಕಣ್ಣುಬಿಟ್ಟೆ. ಕತ್ತಲಲ್ಲಿ ಹತ್ತಿರದಲ್ಲೇ ಹೆಜ್ಜೆಗಳ ಸಪ್ಪಳ ಕೇಳಿಬಂತು. ಪಕ್ಕಕ್ಕೆ ಹೊರಳಿ ನೋಡಿದೆ. ಮೂರ್ತಿ ಹಾಸಿಗೆಯಲ್ಲಿರಲಿಲ್ಲ. ಓಡಾಡುತ್ತಿರುವವನು ಇವನೇ, ಭೂತವಲ್ಲ ಎಂದು ಅರಿವಾಗಿ ನಗು ಬಂತು. ಅದೇ ಸಮಯಕ್ಕೆ ಸರಿಯಾಗಿ ಅವನ ದನಿ ಕೋಣೆಯ ಬಾಗಿಲ ಬಳಿಯಿಂದ ಕೇಳಿಬಂತು.
''ಓಹ್, ನಿನಗೆ ಎಚ್ಚರವಾಗಿಬಿಟ್ಟಿತೇನು? ಸಾರೀ ಕಣಯ್ಯ.""
''ಯಾಕೆ ಎದ್ದದ್ದು?"" ಕೇಳಿದೆ.
''ಏನಿಲ್ಲ, ಸ್ವಲ್ಪ ಬಾತ್ರೂಮಿಗೆ ಹೋಗಬೇಕೆನಿಸುತ್ತಿದೆ. ಬಿಯರ್ ಕುಡಿದದ್ದು ಅತಿಯಾಯಿತು ಅಂತ ಕಾಣುತ್ತೆ"" ಎನ್ನುತ್ತಾ ಸ್ವಿಚ್ಚೊಂದನ್ನು ಒತ್ತಿ ಡ್ರಾಯಿಂಗ್ ರೂಂನಲ್ಲಿ ಬೆಳಕು ಮಾಡಿದ. ಬೆಳಕನ್ನು ತಪ್ಪಿಸಲು ನಾನು ಗೋಡೆಯ ಕಡೆ ತಿರುಗಿದೆ.
ಅವನು ಯಾವುಯವುದೋ ಸ್ವಿಚ್ಗಳನ್ನು ಒತ್ತಿದ ಪಟಪಟ ಸದ್ದು ಆ ನೀರವತೆಯಲ್ಲಿ ಸ್ಪಷ್ಟವಾಗಿ ಕೇಳಿಸಿತು. ನಾನೂ ಒಮ್ಮೆ ದೇಹ ಹಗುರ ಮಾಡಿಕೊಂಡರೆ ಒಳ್ಳೆಯದು ಎಂಬ ಯೋಚನೆ ಬಂದು ಮೇಲೇಳುವಷ್ಟರಲ್ಲಿ ಹೊರಗೆ ಹಾಲ್ನಿಂದ ಮೂರ್ತಿಯ ವಿಕಾರ ಚೀತ್ಕಾರ ಕೇಳಿಬಂತು!
ಮೂಳೆಯ ಆಳದವರೆಗೆ ಬೆಚ್ಚಿದ ನಾನು ಗಡಬಡಿಸಿ ಮೇಲೆದ್ದೆ. ಕಣ್ಣವೆ ತೆರೆಯುವುದರೊಳಗೆ ಹಾಲ್ನಲ್ಲಿದ್ದೆ.
ಹಾಲ್ನ ಎಡಪಕ್ಕದಿಂದ ಮೂರ್ತಿ ಓಡಿಬರುತ್ತಿದ್ದ. ಬೆಳ್ಳಗೆ ಬಿಳಿಚಿಹೋಗಿದ್ದ ಅವನ ಮುಖ ನನಗೆ ಗುರುತು ಹಿಡಿಯಲಾರದಷ್ಟು ಅಪರಿಚಿತವಾಗಿತ್ತು. ಅವನ ಕಣ್ಣುಗಳಲ್ಲಿ ಅತೀವ ಹೆದರಿಕೆ ಹೆಪ್ಪುಗಟ್ಟಿತ್ತು. ಹೆದರಿದ ಮನುಷ್ಯನಷ್ಟು ಭಯಂಕರ ವಸ್ತು ಪ್ರಪಂಚದಲ್ಲಿ ಬೇರೊಂದಿಲ್ಲ. ಅವನ ಹೆದರಿಕೆಗೆ ಕಾರಣ ತಿಳಿಯದಿದ್ದರೂ ಹೆದರಿದ್ದ ಅವನನ್ನು ನೋಡಿಯೇ ನಾನೂ ಹೆದರಿಹೋದೆ. ಅವನು ನನ್ನನ್ನು ನೋಡಿದವನೇ ಮತೊಮ್ಮೆ ಚೀರಿದ. ಮತಿಗೆಟ್ಟವನಂತೆ ಹಾಲ್ನಲ್ಲಿ ಒಂದೆರಡು ಸುತ್ತು ಹಾಕಿದ. ನಾನು ದಂಗಾಗಿ ನೋಡುತ್ತಿದ್ದಂತೇ ಮುಂಬಾಗಿಲು ತೆರೆದು ಹೊರಗೆ ಓಡಿಹೋದ.
ನಾನು ದಿಕ್ಕೆಟ್ಟವನಂತೆ ಅವನ ಹಿಂದೆಯೇ ಓಡಿ ಬಾಗಿಲು ದಾಟಿ ಮೆಟ್ಟಲಿಳಿದು ನಿಂತು ಸುತ್ತಲೂ ನೋಡಿದೆ. ಅವನು ಎತ್ತ ಹೋದನೆಂದು ಗೊತ್ತಾಗಲಿಲ್ಲ. ಎದುರಿನ ರಸ್ತೆಯವರೆಗೆ ನಡೆದುಹೋಗಿ ಅತ್ತಿತ್ತ ನೋಡಿದೆ. ಅವನೆಲ್ಲಿ ಮಾಯವಾದನೋ. ಏನೂ ಗೊತ್ತಾಗಲಿಲ್ಲ. ದಿವಾಕರನಿಗೆ ವಿಷಯ ತಿಳಿಸಬೇಕೆಂಬ ಯೋಚನೆ ಬಂತು. ಮರುಕ್ಷಣ ಆ ಮನೆಯಲ್ಲಿ ಫೋನ್ ಇಲ್ಲದುದರ ಅರಿವಾಗಿ ಸ್ಟರ್ಲಿಂಗ್ ಥಿಯೇಟರ್ಗೆ ಸನಿಹದಲ್ಲಿದ್ದ ಅವನ ಮನೆಯವರೆಗೆ ನಡೆದೇ ಹೋಗೋಣ ಎಂದು ನಿರ್ಧರಿಸಿದೆ. ಶರ್ಟ್ ತೊಟ್ಟುಕೊಂಡು ಹೊರಡೋಣವೆಂದುಕೊಳ್ಳುತ್ತಾ ನಿಧಾನವಾಗಿ ಹಿಂತಿರುಗಿ ಮೆಟ್ಟಲೇರಿದೆ.
ಇಷ್ಟಕ್ಕೂ ಮೂರ್ತಿ ಹೆದರಿದ್ದು ಯಾಕೆ? ಯಾತಕ್ಕೂ ಹೆದರದ ಅವನು ಈಗ ಇಷ್ಟು ಹೆದರಿದ್ದು ಏನನ್ನು ಕಂಡು?
ಹೊರಡುವ ಮೊದಲು ಮೂರ್ತಿ ಹೆದರಿದ್ದು ಯಾತಕ್ಕೆ ನೋಡೋಣವೆಂದುಕೊಂಡು ಹಾಲ್ನಲ್ಲಿ ಸುತ್ತಲೂ ನೋಡಿದೆ. ಒಂದು ಸೋಫಾ ಸೆಟ್, ಟೀಪಾಯ್?, ಒಂದೆರಡು ಕುರ್ಚಿಗಳು ಮಾತ್ರವಿದ್ದು ಖಾಲಿಖಾಲಿಯಾಗಿ ಕಾಣುತ್ತಿದ್ದ ಆ ವಿಶಾಲ ಕೋಣೆಯಲ್ಲಿ ಭಯ ಹುಟ್ಟಿಸುವಂತಹದೇನೂ ಇರಲಿಲ್ಲ.
ಮುಚ್ಚಿದ್ದ ಕೋಣೆಗಳ ಬಾಗಿಲುಗಳತ್ತ ಒಮ್ಮೆ ನೋಡಿ ನಂತರ ಬಲಕ್ಕಿದ್ದ ಬಾತ್ರೂಮಿಗೆ ಹೋಗುವ ಪ್ಯಾಸೇಜ್ನತ್ತ ತಿರುಗಿದವನು ಮರಗಟ್ಟಿ ನಿಂತುಬಿಟ್ಟೆ.
ಆ ನೀರವ ರಾತ್ರಿಯಲ್ಲಿ ಒಂಟಿಯಾಗಿ ನಿಂತ ಆ mಠಿ;#೩೨೪೦;?ನು ಕಂಡದ್ದು...
ಓಹ್, ನಾನದನ್ನು ಹೇಗೆ... ಓಹ್ ಹೇಗೆ ತಾನೆ ಹೇಳಲಿ?... ನೀವು ಅಳ್ಳೆದೆಯವರಾಗಿದ್ದರೆ ದಯವಿಟ್ಟು... ದಯವಿಟ್ಟು... ಮುಂದೆ ಓದಬೇಡಿ.
ಅಲ್ಲಿ... ಕಿರಿದಾದ ಪ್ಯಾಸೇಜ್ನ ಎರಡೂ ಗೋಡೆಗಳಿಗೆ ಕೈಗಳನ್ನಿಟ್ಟು ನಿಂತಿದ್ದದ್ದು... ಹಳೆಯ ಮಾಸಲು ಹಸಿರು ಸೀರೆಯೊಂದನ್ನು ಅಸ್ತವ್ಯಸ್ತವಾಗಿ ಸುತ್ತಿಕೊಂಡ ಒಂದು ಅಸ್ಥಿಪಂಜರ!
ಅದು ನೆಟ್ಟಗೆ ನನ್ನನ್ನೇ ನೋಡುತ್ತಿರುವಂತೆ ನಿಂತಿತ್ತು. ಗೋಡೆಗಳಿಗೆ ಅಂಟಿದ್ದ ಅದರ ಉದ್ದುದ್ದನೆಯ ಮೂಳೆ ಬೆರಳುಗಳು ಯಾವುದೋ ವಿಕಾರ ಹಕ್ಕಿಯೊಂದರ ಕಾಲುಗಳಂತಿದ್ದವು. ತುಟಿಗಳಿಲ್ಲದ ಬಾಯಿಯಲ್ಲಿನ ಪ್ರತಿಯೊಂದು ಹಲ್ಲೂ ಇರಿಯುವ ಬಾಚಿಗಳಂತಿದ್ದವು. ಮೂಗಿನ ಜಾಗದಲ್ಲಿ ತ್ರಿಕೋನಾಕಾರದ ಕಪ್ಪು ರಂದ್ರ. ಅದರ ಮೇಲಿದ್ದ ಅಗಲವಾಗಿದ್ದ ಕಣ್ಣಿನ ರಂಧ್ರಗಳು ಕತ್ತಲೆಯೇ ಮಡುಗಟ್ಟಿದಂತಿದ್ದವು... ಎದೆಗೂಡನ್ನು ಮುಚ್ಚಿದ್ದುದು ಒಂದು ಮಾಸಿದ ಕೆಂಪು ರವಿಕೆ.
ಅದನ್ನು ನೋಡಿದೊಡನೆ ಒಂದುಕ್ಷಣ ರಿಞ?ಲ್ಲನೆ ಬೆವತುಹೋದ ನಾನು ಮರುಕ್ಷಣ ಗಕ್ಕನೆ ಕೆಳಗೆ ಕೂತುಬಿಟ್ಟೆ. ಎದುರಿನ ಭೀಬತ್ಸ ನೋಟವನ್ನು ನೋಡಲಾರದೇ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡೆ. ಮರುಕ್ಷಣ ಕಣ್ಣ ರೆಪ್ಪೆಗಳು ಅಂಕೆತಪ್ಪಿದಂತೆ ತಾವೇ ತೆರೆದುಕೊಂಡು ಆ ಕರಾಳ ದೃಶ್ಯವನ್ನು ಮತ್ತೆ ನನ್ನೆದೆಯೊಳಗೆ ತುರುಕಿದವು.
ಮೂರ್ತಿಗೆ ಓಡಲಾದರೂ ಸಾಧ್ಯವಾಯಿತು. ಆದರೆ ನನ್ನ ಕಾಲುಗಳು ಶಕ್ತಿ ಕಳೆದುಕೊಂಡು ನೆಲಕ್ಕೆ ಅಂಟಿಕೊಂಡಿದ್ದವು. ನನ್ನ ಶರೀರದ ಯಾವ ಅಂಗವೂ ನನ್ನ ಸ್ವಾಧೀನದಲ್ಲಿರುವಂತೆ ಕಾಣಲಿಲ್ಲ. ಕುಕ್ಕರಗಾಲಿನಲ್ಲಿ ಕುಳಿತು ಎರಡೂ ಕೈಗಳನ್ನು ತಲೆಗೆ ಒತ್ತಿ ಎದುರಿನ ಆ ಕರಾಳ ರೂಪವನ್ನೇ ನೋಡಿದೆ...
ಆ ಸ್ಥಿತಿಯಲ್ಲಿ ನಾನಿದ್ದದ್ದು ಒಂದು ಕ್ಷಣವೋ, ಒಂದು ನಿಮಿಷವೋ, ಒಂದು ಗಂಟೆಯೋ ನನಗೆ ಗೊತ್ತಿಲ್ಲ. ಕಾಲದ ಅರಿವನ್ನೇ ನಾನು ಕಳೆದುಕೊಂಡಿದ್ದೆ.
ನನಗೆ ಏಕಾಏಕಿ ಆಯಾಸವಾದಂತೆನಿಸಿತು. ಮೊಣಕಾಲುಗಳಲ್ಲಿ ಅತೀವ ನೋವು ಕಾಣಿಸಿಕೊಂಡಿತು. ಕೈಗಳನ್ನು ನೆಲಕ್ಕೆ ಊರಿದೆ. ನನ್ನ ನೋಟ ಮಾತ್ರ ಆ ಅಸ್ಥಿಪಂಜರದ ಮೇಲೇ ಕೀಲಿಸಿತ್ತು.
ಅದೂ ಸಹ ನನ್ನನ್ನೇ ನೋಡುತ್ತಿರುವಂತೆ ನಿಶ್ಚಲವಾಗಿ ನಿಂತಿತ್ತು.
ಅದರಲ್ಲಿ ಯಾವ ಚಲನೆಯೂ ಇಲ್ಲ!
ಅದೆಷ್ಟೋ ಯುಗಗಳ ನಂತರ ನನ್ನ ಮನಸ್ಸು ಏಕಾಏಕಿ ಜಾಗೃತವಾದಂತೆನಿಸಿತು. ಛಳಕು ಹತ್ತಿದಂತೆ ಪ್ರಶ್ನೆ ಮೇಲೆದ್ದಿತು.
ಅದೇಕೆ ಹಾಗೆ ನಿಶ್ಚಲವಾಗಿ ನಿಂತಿದೆ?
ನನ್ನ ಮೇಲೇಕೆ ಅದು ಆಕ್ರಮಣ ಮಾಡುತ್ತಿಲ್ಲ?
ಏನೋ ಅನುಮಾನವಾಯಿತು. ಅದರ ಮೇಲಿಂದ ನೋಟ ಕೀಳದೇ ನಿಧಾನವಾಗಿ ಮೇಲೆದ್ದು ನಿಂತೆ.
ಅದರಿಂದ ಯಾವ ಪ್ರತಿಕ್ರಿಯೆಯೂ ಇಲ್ಲ!
ಒಂದು ಹೆಜ್ಜೆ ಮುಂದಿಟ್ಟೆ.
ಅಸ್ಥಿಪಂಜರಕ್ಕೆ ಅದೇ ನಿಶ್ಚಲತೆ!
ಒಮ್ಮೆ ನಿರಾಳವಾಗಿ ಉಸಿರಾಡಿದೆ. ಸರಸರನೆ ನಡೆದುಹೋಗಿ ಅದರ ಮುಂದೆ ನಿಂತೆ. ನಿಧಾನವಾಗಿ ಬಲಗೈಯನ್ನೆತ್ತಿ ಅದರ ಕೆನ್ನೆಯ ಮೂಳೆಯನ್ನು ಸ್ಪರ್ಶಿಸಿದೆ.
ಅದು ಸುಮ್ಮನೆ ನಿಂತಿತ್ತು. ಖಾಲಿಯಾದ ಅದರ ಕಣ್ಣಗೂಡುಗಳಲ್ಲಿ ಮಡುಗಟ್ಟಿದ ಶೂನ್ಯತೆ!
ಅಂದರೆ ಇದು ದೆವ್ವವೂ ಅಲ್ಲ, ಭೂತವೂ ಅಲ್ಲ! ಯಾರೋ ಉದ್ದೇಶಪೂರ್ವಕವಾಗಿ ತಂದು ಇಲ್ಲಿರಿಸಿದ ಒಂದು ಸಾಮಾನ್ಯ ಅಸ್ಥಿಪಂಜರ ಅಷ್ಟೇ!
ಅದರರ್ಥ ಇದು ಯಾರದೋ ಕೀಟಲೆ! ಇದರ ಹಿಂದಿರುವ ಕಿಡಿಗೇಡಿ ದಿವಾಕರನೇ ಇರಬೇಕು.
ಬಾಲ್ಯದಲ್ಲಿ ಅವನು ಮಾಡಿದ್ದ ಹಲವಾರು ಕೀಟಲೆಗಳು ಏಕಾಏಕಿ ನೆನಪಿಗೆ ಬಂದವು. ಅವನು ಮಧ್ಯಾಹ್ನದ ಹೊತ್ತಿನಲ್ಲಿ ಇದೇ ಈ ಹೊಲಗಳ ಬೇಲಿಯಲ್ಲಿ ಅಡಗಿ ದೆವ್ವದಂತೆ ಕೂಗಿ ನಮ್ಮನ್ನು ಹೆದರಿಸಿದ್ದ. ಹಾವಿನ ಚರ್ಮಕ್ಕೆ ಬತ್ತದ ಹೊಟ್ಟು ತುಂಬಿ ಇದೇ ಈ ಮನೆಯಿರುವ ದಿಣ್ಣೆಯ ಮೇಲೆ ಮೊದಲಿದ್ದ ನೇರಳೇ ಮರದ ಬುಡದಲ್ಲಿಟ್ಟು ನಮ್ಮನ್ನು ಗಾಬರಿಗೊಳಿಸಿದ್ದ.
ತನ್ನ ಕೀಟಲೆಸ್ವಭಾವವನ್ನು ಅವನಿನ್ನೂ ಬಿಟ್ಟಿಲ್ಲ!
ನಾವು ನಿದ್ದೆಹೋದ ನಂತರ ಒಳಬಂದು ಈ ಅಸ್ಥಿಪಂಜರವನ್ನು ಇಲ್ಲಿಟ್ಟುಹೋಗಿದ್ದಾನೆ!
ನನಗೆ ಸಾಮಾನ್ಯವಾಗಿ ಕೋಪ ಬರುವುದಿಲ್ಲ, ಬಂದರೆ ಮಾತ್ರ ಅದು ಪ್ರಳಯಾಂತಕ ಕೋಪ ಎನ್ನುವುದು ನನ್ನನ್ನು ಹತ್ತಿರದಿಂದ ಬಲ್ಲವರಿಗೆಲ್ಲ ತಿಳಿದಿರುವ ವಿಷಯ. ಹಿಂದೊಮ್ಮೆ ಇದೇ ದಿವಾಕರನ ಕೀಟಲೆಗಳಿಂದ ಅತಿಯಾಗಿ ರೋಸಿಹೋದ ನಾನು ಉಕ್ಕಿದ ಕೋಪದಲ್ಲಿ ನೇರಳೇ ಮರದ ಕೆಳಗೆ ಅವನನ್ನು ಹುಚ್ಚುನಾಯಿಯನ್ನು ಬಡಿಯುವಂತೆ ಬಡಿದಿದ್ದೆ.
ನನಗೀಗ ಅವನ ಮೇಲೆ ಅದಕ್ಕಿಂತಲೂ ಉಗ್ರ ಕೋಪ ಬಂತು. ಮೂರ್ತಿ ಹಾಗೆ ಮತಿಗೆಟ್ಟು ಓಡಿಹೋದದ್ದು, ಕ್ಷಣಗಳ ಹಿಂದೆ ನಾನೂ ಬೆನ್ನಹುರಿಯ ಆಳದವರೆಗೆ ಹೆದರಿಹೋದದ್ದು- ಎಲ್ಲವೂ ಸೇರಿ ಕೋಪದ ಜ್ವಾಲೆಯಲ್ಲಿ ಕುದಿದುಹೋದೆ. ಅವನು ಇಲ್ಲೆಲ್ಲಾದರೂ ಅಡಗಿದ್ದರೆ ಹೊರಗೆಳೆದು ಅವನ ಕುತ್ತಿಗೆ ಮುರಿಯಬೇಕೆಂದು ಮನೆಯ ಅಂಗುಲ ಅಂಗುಲವನ್ನೂ ಶೋಧಿಸಿದೆ. ದಢದಢನೆ ಮಹಡಿಯ ಮೆಟ್ಟಲು ಏರಿಹೋಗಿ ಕಂಡ ಸ್ವಿಚ್ಚುಗಳನ್ನೆಲ್ಲಾ ಒತ್ತಿ ಬೆಳಕು ಮಾಡಿ ಎಲ್ಲ ಕೋಣೆಗಳಲ್ಲೂ ಹುಡುಕಿದೆ. ಅವನು ಅಲ್ಲೆಲ್ಲೂ ಸಿಗಲಿಲ್ಲ. ಕಾಲುಗಳನ್ನು ನೆಲಕ್ಕೆ ಅಪ್ಪಳಿಸುತ್ತಾ ಕೆಳಗೆ ಬಂದೆ.
ಅಸ್ಥಿಪಂಜರ ಹಾಗೇ ನಿಂತಿತ್ತು.
ದಿವಾಕರನ ಮೇಲಿದ್ದ ನನ್ನ ಕೋಪ ಅದರ ಮೇಲೆ ತಿರುಗಿತು. ಅದನ್ನು ಪುಡಿಪುಡಿ ಮಾಡುವಷ್ಟು ರೋಷವುಕ್ಕಿತು. ಮುಷ್ಠಿ ಬಿಗಿಸಿ ಅದರತ್ತ ರಭಸವಾಗಿ ಮುನ್ನುಗ್ಗಿದೆ.
ನನ್ನ ಪ್ರಹಾರಕ್ಕೆ ಸಿಕ್ಕಿದ ಅದರ ಕೊರಳ ಮೂಳೆ ಮುರಿದು ತಲೆ ಸಶಬ್ದವಾಗಿ ಕೆಳಗೆ ಬಿತ್ತು. ಅದನ್ನು ಫುಟ್ಬಾಲ್ ಒದೆಯುವಂತೆ ಒದ್ದೆ. ಅಸ್ಥಿಪಂಜರದ ಸೊಂಟದ ಮೂಳೆಗೆ ಕೈಹಾಕಿ ಅದನ್ನು ದರದರನೆ ಎಳೆದುಕೊಂಡು ಹಾಲ್ಗೆ ಬಂದೆ. ಅದಕ್ಕೆ ತೊಡಿಸಿದ್ದ ಸೀರೆ ರವಿಕೆಗಳನ್ನು ಕಿತ್ತೊಗೆದೆ. ಅವೆರಡೂ ಸಾಕಷ್ಟು ಹಳೆಯದಾಗಿದ್ದಿರಬೇಕು, ಕೈ ಹಾಕಿದೆಡೆ ಕಿತ್ತುಬಂದವು. ಅವನ್ನು ಚಿಂದಿಚಿಂದಿಗೊಳಿಸಿ ಅಸ್ಥಿಪಂಜರಕ್ಕೆ ಕೈ ಹಾಕಿದೆ.
ಬಾಗಿಲ ಬಳಿಯಿದ್ದ ನನ್ನ ಬೂಟುಗಳನ್ನು ಕಾಲಿಗೇರಿಸಿ ಅಸ್ಥಿಪಂಜರದ ಎದೆಗೂಡಿನ ಮೇಲೆ ತುಳಿದೆ. ನಾನು ತುಳಿದ ರಭಸಕ್ಕೆ ಅವು ಲಟಲಟನೆ ಮುರಿದುಹೋದವು. ಒಂದೇ ಹೊಡೆತಕ್ಕೆ ಅದರ ಬೆನ್ನುಮೂಳೆ ಎರಡು ತುಂಡಾಯಿತು. ತೊಡೆಯ ಮೂಳೆಯೊಂದನ್ನು ಎತ್ತಿ ಎರಡು ತುದಿಗಳನ್ನು ಕೈಗಳಲ್ಲಿ ಹಿಡಿದು ಮಂಡಿಗೆ ಒತ್ತಿ ಹಳ್ಳಿಗರು ಸೌದೆ ಮುರಿಯುವಂತೆ ಮುರಿದುಹಾಕಿದೆ. ಇನ್ನೊಂದಕ್ಕೂ ಅದೇ ಗತಿ ಕಾಣಿಸಿದೆ. ಕಾಲುಗಳ ಮೂಳೆಗಳನ್ನು ಎತ್ತಿ ಹಿಡಿದು ಕಬ್ಬು ಮುರಿಯುವಂತೆ ಮುರಿದೆ. ಬೆರಳುಗಳ ಮೇಲೆ ಬೂಟುಗಾಲಿಂದ ತುಳಿದು ಅವನ್ನು ಪುಡಿಪುಡಿಗೊಳಿಸಿದೆ. ಹತ್ತು ನಿಮಿಷಗಳ ನಂತರ ನಾನು ಏದುಸಿರು ಬಿಡುತ್ತಾ ನಿಂತಾಗ ಅಸ್ಥಿಪಂಜರದ ಸಣ್ಣಸಣ್ಣ ತುಂಡುಗಳು ಇಡೀ ಹಾಲ್ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿಹೋಗಿದ್ದವು.
ನನಗೀಗ ಸಮಾಧಾನವಾಯಿತು.
ಬೂಟುಗಳನ್ನು ಕಾಲುಗಳಿಂದ ಕಿತ್ತೊಗೆದು ಮೂಲೆಯತ್ತ ಒದ್ದು ಸರಿಸಿದೆ. ವಾಷ್ಬೇಸಿನ್ಗೆ ಹೋಗಿ ಮುಖ ತೊಳೆದೆ. ಬೆಡ್ರೂಂನತ್ತ ತಿರುಗಿದಾಗ ಪ್ಯಾಸೇಜ್ನಲ್ಲಿ ಬಿದ್ದಿದ್ದ ತಲೆಬುರುಡೆ ಕಾಣಿಸಿತು. ಅದನ್ನು ನೋಡುತ್ತಿದ್ದಂತೇ ನನಗೊಂದು ಯೋಚನೆ ಬಂತು.
?ಇದನ್ನು ಎತ್ತಿಕೊಂಡು ಹೋಗಿ ನಾಳೆ ದಿವಾಕರನ ಮನೆಯ ಡ್ರಾಯಿಂಗ್ ರೂಮ್ನ ಷೋಕೇಸಿನಲ್ಲಿಟ್ಟು ಅವನಿಗೆ ಅವಮಾನವಾಗುವಂತೆ ಮಾಡಿದರೆ ಹೇಗೆ??
ಆ ಯೋಚನೆ ಬಂದದ್ದೇ ತಡ ಸರಸರನೆ ನಡೆದುಹೋಗಿ ತಲೆಬುರುಡೆಯನ್ನು ಕೈಗೆತ್ತಿಕೊಂಡೆ. ಒಮ್ಮೆ ಅದನ್ನು ತಿರುಗಿಸಿ ತಿರುಗಿಸಿ ನೋಡಿ ತೆಗೆದುಕೊಂಡು ಹೋಗಿ ಬೆಡ್ ರೂಮ್ನ ಮೂಲೆಯಲ್ಲಿದ್ದ ಮೇಜಿನ ಮೇಲಿಟ್ಟೆ. ಏನೋ ಒಂದು ರೀತಿಯ ಸಮಾಧಾನವಾದಂತೆನಿಸಿತು. ದೀಪವಾರಿಸಿ ಹಾಸಿಗೆಯಲ್ಲಿ ಧೊಪ್ಪನೆ ಉರುಳಿದೆ.
ನನ್ನ ಆಲೋಚನೆ ಮೂರ್ತಿಯತ್ತ ತಿರುಗಿತು.
ಮಾಸಲು ಸೀರೆ ಸುತ್ತಿ ನಿಲ್ಲಿಸಿದ್ದ ಒಂದು ಅಸ್ಥಿಪಂಜರಕ್ಕೆ ಅವನೇಕೆ ಅಷ್ಟು ಹೆದರಿದ?
ಸ್ವಭಾವತಃ ನನಗಿಂತಲೂ ಧೈರ್ಯಶಾಲಿಯಾದ ಅವನು ಇಂದು ಇಷ್ಟು ಹೆದರಿ ತಲೆ ಕೆಟ್ಟವನಂತೆ ಕೋಣೆ ಸುತ್ತ ಕುಣಿದು ಹೊರಗೆ ಓಡಿಹೋದದ್ದು ನನಗೆ ಅಸಹ್ಯವೆನಿಸತೊಡಗಿತು. ಅಮಾವಾಸ್ಯೆಯ ರಾತ್ರಿಗಳಲ್ಲಿ ಸ್ಮಶಾನಗಳಲ್ಲಿ ನನ್ನ ಜತೆ ದೆವ್ವಗಳಿಗಾಗಿ ಕಾದು ಕುಳಿತವನು ಇವನೇನಾ ಎಂದು ಆಶ್ಚರ್ಯವಾಯಿತು.
ಈಗವನು ಓಡಿರುವುದಾದರೂ ಎಲ್ಲಿಗೆ? ಬಹುಷಃ ಅವನು ಒಂದು-ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ದಿವಾಕರನ ಮನೆಗೇ ಓಡಿರಬೇಕು. ಅಲ್ಲಿಗೆ ಹೋದಾಗ ನಿಜಸಂಗತಿ ಅವನಿಗೆ ಗೊತ್ತಾಗಿಯೇ ಇರುತ್ತದೆ. ಅವನೀಗಾಗಲೇ ದಿವಾಕರನಿಗೆ ಮಂಗಳಾರತಿ ಎತ್ತಿ ಆಗಿರುತ್ತದೆ...
ನನ್ನ ಆಲೋಚನೆ ಥಟ್ಟನೆ ತುಂಡಾಯಿತು.
ಹೊರಗೆ ಹಾಲ್ನಲ್ಲಿ ಹೆಜ್ಜೆಯ ಸಪ್ಪಳಗಳು ಕೇಳಿಬಂದವು!
ನಾನು ಕಿವಿಗೊಟ್ಟು ಆಲಿಸಿದೆ. ಶಬ್ದಗಳು ಹತ್ತಿರವಾದಂತೆನಿಸಿತು. ಮಲಗಿದ್ದಂತೇ ಕೈಚಾಚಿ ದೀಪದ ಸ್ವಿಚ್ ಒತ್ತಿದೆ. ಶಬ್ದಗಳು ಥಟ್ಟನೆ ನಿಂತುಹೋದವು.
ಶಬ್ದ ಕೇಳಿದ್ದು ನನ್ನ ಭ್ರಮೆಯಿರಬೇಕು.
ದೀಪವಾರಿಸಲು ಕೈ ಚಾಚಿದೆ.
ಚಾಚಿದ ಕೈ ಹಾಗೆಯೇ ನಿಂತಿತು. ಹೆಜ್ಜೆಯ ಶಬ್ದಗಳು ಮತ್ತೆ ಕೇಳಿಬಂದಿದ್ದವು! ಈಗ ಅವು ಹೆಚ್ಚು ಸ್ಪಷ್ಟವಾಗಿ, ಬೆಡ್ ರೂಮಿನ ಬಾಗಿಲಲ್ಲೇ ಕೇಳಿದಂತೆನಿಸಿತು. ಅಚ್ಚರಿಯಿಂದ ಅತ್ತ ನೋಡಿದೆ.
ಬಾಗಿಲು ಸಣ್ಣಗೆ ಕಿರುಗುಟ್ಟಿತು!
ಮನೆಯೊಳಗೆ ಯಾರೋ ಇದ್ದಾರೆ! ಕಾಲುಗಂಟೆಯ ಹಿಂದೆ ನಾನು ಇಡೀ ಮನೆಯನ್ನು ಜಾಲಾಡಿದಾಗ ಯಾರೂ ಕಣ್ಣಿಗೆ ಬಿದ್ದಿರಲಿಲ್ಲವಲ್ಲ? ಬಹುಷಃ ನಾನು ಆತುರದಲ್ಲಿ ಸರಿಯಾಗಿ ನೋಡಲಿಲ್ಲವೇನೋ. .ಆಗ ನನಗೆ ಸಿಗದ ವ್ಯಕ್ತಿ ಈಗ ಬೆಡ್ ರೂಮ್ನ ಬಾಗಿಲಲ್ಲಿ ನಿಂತಿದೆ! ಅದೀಗ ಒಳಗೆ ಬರಬಹುದು. ಎದ್ದು ಕುಳಿತು ಬಾಗಿಲತ್ತಲೇ ದೃಷ್ಟಿ ಕೇಂದ್ರೀಕರಿಸಿದೆ.
ನಾನು ನೋಡುತ್ತಿದ್ದಂತೇ ನಿಧಾನವಾಗಿ ಬಾಗಿಲು ತೆರೆದುಕೊಂಡಿತು.
ತೆರೆದ ಬಾಗಿಲಲ್ಲಿ ಯಾರೂ ಇರಲಿಲ್ಲ!
?ಇದೇನಿದು?? ಎಂದು ನಾನು ಅಚ್ಚರಿಗೊಳ್ಳುವಷ್ಟರಲ್ಲಿ ಕೋಣೆಯಲ್ಲಿನ ಉಷ್ಣತೆ ಇದ್ದಕ್ಕಿದ್ದಂತೆ ಕುಸಿದಂತೆನಿಸಿತು. ಏಕಾಏಕಿ ಕಾಣಿಸಿಕೊಂಡ ಛಳಿಯಿಂದಾಗಿ ನನ್ನ ಮೈ ನವಿರಾಗಿ ಕಂಪಿಸಿತು. ಎದೆಯಲ್ಲಿ ಏನೋ ಅವ್ಯಕ್ತ ಭಯದ ಸೆಲೆ ಚಿಮ್ಮಿತು.
ನಾನು ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದಂತೇ ಬಾಗಿಲಲ್ಲಿ ಮಸುಕುಮಸುಕಾಗಿ ನೆರಳೊಂದು ಕಾಣಿಸಿಕೊಂಡಿತು. ನಿಧಾನವಾಗಿ ಅದು ಸ್ಪಷ್ಟವಾಗುತ್ತಾ ಹೋಗಿ ಹಸಿರು ಸೀರೆ ಸುತ್ತಿದ್ದ ಅಸ್ಥಿಪಂಜರದ ರೂಪ ತಾಳಿ ನಿಂತಿತು!
ನಾನು ನೋಡಿಯೇ ನೋಡಿದೆ.
ಹದಿನೈದು ಇಪ್ಪತ್ತು ನಿಮಿಷಗಳ ಹಿಂದೆ ನಾನು ಪುಡಿಪುಡಿಗೊಳಿಸಿದ್ದ ಅಸ್ಥಿಪಂಜರ ಈಗ ಏನೂ ಆಗಿಲ್ಲವೆಂಬಂತೆ ನನ್ನೆದುರು ನಿಂತಿತ್ತು! ನಾನು ಚಿಂದಿಚಿಂದಿಯಾಗಿ ಹರಿದು ಹಾಕಿದ್ದ ಸೀರೆ ರವಿಕೆಗಳು ಹರಿದ ಕುರುಹೂ ಇಲ್ಲದೆ ಮೊದಲಿನಂತೇ ಆ ಅಸ್ಥಿಪಂಜರಕ್ಕೆ ಸುತ್ತಿಕೊಂಡಿದ್ದವು!
ಸ್ವಲ್ಪ ಹೊತ್ತಿನ ಹಿಂದೆ ಪ್ಯಾಸೇಜ್ನಲ್ಲಿ ನಿಂತಿದ್ದಂತೇ ಬಾಗಿಲ ಎರಡೂ ಪಕ್ಕಗಳಿಗೆ ಕೈಗಳನ್ನು ಚಾಚಿ ನಿಂತಿತ್ತು ಅದು. ಆದರೆ ಒಂದೇ ವ್ಯತ್ಯಾಸ- ಈಗ ಅದಕ್ಕೆ ತಲೆ ಇರಲಿಲ್ಲ!
ನಾನು ನೋಡುತ್ತಿರುವುದೇನು? ನನಗೊಂದೂ ಅರ್ಥವಾಗಲಿಲ್ಲ. ಮನಸ್ಸಿಗೆ ಮಂಕು ಕವಿದಂತಾಯಿತು.
ಏಕಾಏಕಿ ಅದರಲ್ಲಿ ಚಲನೆ ಕಂಡಿತು. ಅದು ಒಂದು ಹೆಜ್ಜೆ ಮುಂದಿಟ್ಟಿತು. ನಾನು ಬೆವತುಹೋದೆ. ಅದು ಮತ್ತೂ ಒಂದು ಹೆಜ್ಜೆ ಮುಂದಿಟ್ಟಿತು. ಅದರ ಕಾಲುಗಳನ್ನೇ ದಿಗ್ಭ್ರಮೆ ಹಿಡಿದು ನೋಡುತ್ತಿದ್ದ ನನಗೆ ಅದು ಮೂಲೆಯಲ್ಲಿದ್ದ ಮೇಜಿನ ಕಡೆ ಹೋಗುತ್ತಿರುವಂತೆನಿಸಿತು. ಹೌದು, ಅದು ಅತ್ತಲೇ ಹೋಗುತ್ತಿತ್ತು. ಶಂಖಗಳ ಹಾರವನ್ನು ಅಲುಗಿಸಿದಂತೆ ಶಬ್ದ ಹೊರಡಿಸುತ್ತಾ ನಡೆದು ಅದು ಮೇಜನ್ನು ಸಮೀಪಿಸಿತು.
ಇಂಥಾ ದೃಶ್ಯವೊಂದನ್ನು ನೋಡುತ್ತೇನೆ ಎಂದು ನಾನು ಕನಸಿನಲ್ಲಿಯೂ ನೆನಸಿರಲಿಲ್ಲ!
ನನ್ನ ಮೈ ಮರಗಟ್ಟಿಹೋಗಿತ್ತು. ನಾಲಿಗೆಯ ಪಸೆ ಆರಿಹೋಗಿ ಗಂಟಲಿನಲ್ಲೇನೋ ಸಿಕ್ಕಿಕೊಂಡ ಅನುಭವ.
ನನ್ನ ಕಣ್ಣುಗಳು ಅದರ ಮೇಲೆ ಕೀಲಿಸಿದ್ದವು.
ನಾನು ನೋಡುತ್ತಿದ್ದಂತೇ ಅದು ಮೇಜನ್ನು ಸಮೀಪಿಸಿ ನಾನಲ್ಲಿ ತಂದಿಟ್ಟಿದ್ದ ತಲೆಬುರುಡೆಯನ್ನು ಕೈಗೆತ್ತಿಕೊಂಡಿತು. ಮುಂಡ ಮಾತ್ರವಿದ್ದ ಅಸ್ಥಿಪಂಜರವೊಂದು ಮೂಳೆಬೆರಳುಗಳಲ್ಲಿ ತಲೆಬುರುಡೆಯನ್ನು ಹಿಡಿದ ದೃಶ್ಯ! ನನ್ನ ಬದುಕಿನಲ್ಲಿ ಕಂಡ ಅತೀವ ಭಯಾನಕ ನೋಟ ಅದು.
ಅದೊಮ್ಮೆ ತಲೆಬುರುಡೆಯನ್ನು ಮೇಲಕ್ಕೆತ್ತಿ ಹಿಡಿಯಿತು. ನಂತರ ಅದನ್ನು ನಿಧಾನವಾಗಿ ತನ್ನ ಕುತ್ತಿಗೆಯ ಮೇಲಿಟ್ಟುಕೊಂಡಿತು. ಮರುಕ್ಷಣ ಥಟ್ಟನೆ ನನ್ನೆಡೆ ತಿರುಗಿತು.
ಈಗ ಅದು ಪ್ಯಾಸೇಜ್ನಲ್ಲಿ ಕಂಡಂತೆಯೇ ಇಡಿಯಾಗಿ ನನ್ನಿಂದ ಸುಮಾರು ಹತ್ತು ಅಡಿಗಳ ದೂರದಲ್ಲಿ ನಿಂತಿತ್ತು.
ನಾನು ಕೂಗಲೂ ಅಗದೆ ನಡುಗುತ್ತ ಹಾಸಿಗೆಯ ಮೇಲೆ ಮುದುರಿ ಕುಳಿತಿರುವಂತೇ ಅದರ ಶೂನ್ಯಗಟ್ಟಿದ ಕಣ್ಣಗೂಡುಗಳಲ್ಲಿ ಫಕ್ಕನೆ ಕೆಂಪು ಗೋಲಿಗಳಂತೆ ಕಣ್ಣುಗಳು ಹೊಳೆದವು! ಅವುಗಳಿಂದ ಹೊರಟ ಭೀಬತ್ಸ ಬೆಳಕು ನನ್ನ ಕಣ್ಣುಗಳನ್ನು ಇರಿದಂತಾಗಿ ನಾನು ಕುಸಿಯತೊಡಗಿದೆ. ಮುಂದಿನ ಕ್ಷಣದಲ್ಲಿ ಅದು ಮೂಳೆ ಕೈಗಳನ್ನು ಅತ್ತಿತ್ತ ಬೀಸುತ್ತ ನನ್ನೆಡೆ ಬರತೊಡಗಿತು.
ಈಗಂತೂ ಅತೀವ ಭಯ ನನ್ನ ಮೂಳೆಗಳ ಮಜ್ಜೆಯ ಅಣುಅಣುಗಳಲ್ಲೂ ಪ್ರವಹಿಸಿತು.
ಅದು ಹತ್ತಿರಾದಂತೆ ಆ ಗಳಿಗೆ ನನ್ನ ಬದುಕಿನ ಅಂತಿಮ ಗಳಿಗೆ ಎಂದೆನಿಸಿ ನಾನು ಗಕ್ಕನೆ ಮೇಲೆದ್ದೆ. ಏನು ಮಾಡಲೂ ತೋಚದೆ ಹಾಸಿಗೆಯ ಮೇಲೆ ಧಪಧಪ ಓಡಾಡಿದೆ. ಮರುಕ್ಷಣ ದೊಪ್ಪನೆ ಕುಸಿದೆ. ಕೈಗಳನ್ನು ಕಿಳಗೆ ಊರಿ ಹಾಸಿಗೆಯ ಉದ್ದಗಲಕ್ಕೂ ಮೂರು ನಾಲ್ಕು ಸುತ್ತು ತಿರುಗಿದೆ. ತಲೆಯನ್ನು ಅತ್ತಿತ್ತ ರಭಸವಾಗಿ ಓಲಾಡಿಸುತ್ತಾ ??ಓಹ್ ನೋ, ಓಹ್ ನೋ?? ಎಂದು ಒರಲಿದೆ. ಅಂಗೈಗಳಿಂದ ಹಾಸಿಗೆಯನ್ನು ಹುಚ್ಚು ಹಿಡಿದವನಂತೆ ರಪರಪ ಬಡಿದೆ...
ಅದು ಹಾಸಿಗೆಯನ್ನು ಸಮೀಪಿಸಿತು...
ಅದರ ಮೂಳೆ ಕೈಗಳು ನನ್ನತ್ತ ಬಂದವು...
ಮುಂದಿನ ಘಟನೆ ನನಗರಿವಿಲ್ಲದಂತೆಯೇ ನಡೆದುಹೋಯಿತು.
ಅದರ ಕೈಗಳು ಗಾಳಿಯಲ್ಲಿ ಏನನ್ನೋ ಹಿಡಿಯುವಂತೆ ನನ್ನೆಡೆಗೆ ಬರುತ್ತಿರುವಂತೇ ನಾನು ಅತೀವ ಭೀತಿಯಲ್ಲಿ ??ಯೀ...?? ಎಂದು ಚೀರುತ್ತಾ ಹಾಸಿಗೆಯಿಂದ ಧೊಪ್ಪನೆ ಕೆಳಗೆ ಹಾರಿ ಮಿಂಚಿನಂತೆ ಓಡಿ ಹಾಲ್ ಸೇರಿ ಮುಂಬಾಗಿಲು ತೆರೆದು ಹೊರಗೆ ಓಡಿದೆ.
** ** **
Comments
ಉ: ದೆವ್ವದ ಮನೆಯಲ್ಲಿ...!
In reply to ಉ: ದೆವ್ವದ ಮನೆಯಲ್ಲಿ...! by partha1059
ಉ: ದೆವ್ವದ ಮನೆಯಲ್ಲಿ...!
In reply to ಉ: ದೆವ್ವದ ಮನೆಯಲ್ಲಿ...! by partha1059
ಉ: ದೆವ್ವದ ಮನೆಯಲ್ಲಿ...!
In reply to ಉ: ದೆವ್ವದ ಮನೆಯಲ್ಲಿ...! by ಗಣೇಶ
ಉ: ದೆವ್ವದ ಮನೆಯಲ್ಲಿ...!
In reply to ಉ: ದೆವ್ವದ ಮನೆಯಲ್ಲಿ...! by partha1059
ಉ: ದೆವ್ವದ ಮನೆಯಲ್ಲಿ...!
ಉ: ದೆವ್ವದ ಮನೆಯಲ್ಲಿ...!
In reply to ಉ: ದೆವ್ವದ ಮನೆಯಲ್ಲಿ...! by Jayanth Ramachar
ಉ: ದೆವ್ವದ ಮನೆಯಲ್ಲಿ...!
In reply to ಉ: ದೆವ್ವದ ಮನೆಯಲ್ಲಿ...! by manju787
ಉ: ದೆವ್ವದ ಮನೆಯಲ್ಲಿ...!
ಉ: ದೆವ್ವದ ಮನೆಯಲ್ಲಿ...!
ಉ: ದೆವ್ವದ ಮನೆಯಲ್ಲಿ...!
ಉ: ದೆವ್ವದ ಮನೆಯಲ್ಲಿ...!
In reply to ಉ: ದೆವ್ವದ ಮನೆಯಲ್ಲಿ...! by cherryprem
ಉ: ದೆವ್ವದ ಮನೆಯಲ್ಲಿ...!
ಉ: ದೆವ್ವದ ಮನೆಯಲ್ಲಿ...!