ಕಥೆ: ಹುತ್ತ

ಕಥೆ: ಹುತ್ತ

 

ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಈ ಮನೆ ಅನುಕೂಲಕರವಾಗಿರುವಂತೆ ಕಂಡುಬಂದು ನೆಮ್ಮದಿಯೆನಿಸಿದೆ.  ಮೊನ್ನೆಯಷ್ಟೇ ಟ್ರ್ಯಾನ್ಸ್‌ಫರ್ ಆಗಿ ಒಂಟಿಯಾಗಿ ಈ ಊರಿಗೆ ಬಂದಿರುವ ಅವರ ಹೆಂಡತಿ ಹಾಗೂ ಹೈಸ್ಕೂಲಿಗೆ ಹೋಗುವ ಇಬ್ಬರು ಗಂಡುಮಕ್ಕಳಿರುವ ಸಂಸಾರ ಮೈಸೂರಿನಲ್ಲೇ ಇದೆ.  ಮೂರುಮೂರುವರ್ಷಗಳಿಗೊಮ್ಮೆ ಊರೂರಿಗೆ ಎಸೆಯಲ್ಪಡುವ ಪ್ರೊಫೆಸರರು ಸಂಸಾರವನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವುದನ್ನು ಮಕ್ಕಳು ಶಾಲೆ ಸೇರಿದಾಗಿನಿಂದಲೇ ನಿಲ್ಲಿಸಿಬಿಟ್ಟಿದ್ದಾರೆ.  ಮಕ್ಕಳ ವಿದ್ಯಾಭ್ಯಾಸ ಹಾಳಾಗಬಾರದು.  ಕೊಪ್ಪ, ಸಿರಗುಪ್ಪ, ಮಳವಳ್ಳಿ, ಚಿಕ್ಕನಾಯಕನಹಳ್ಳಿ, ತಿಪ್ಪಸಂದ್ರ, ಹನೂರುಗಳ ಶಾಲೆಗಳನ್ನು ಮೈಸೂರಿನ ಶಾಲೆಗಳಿಗೆ ಹೋಲಿಸಲಾಗುತ್ತದೆಯೇ?  ಈಗ ಕನಸಿನಲ್ಲೆಂಬಂತೆ ಬೆಂಗಳೂರಿಗೆ ಬಂದಿದ್ದರೂ ಎಸ್ಸೆಸ್ಸೆಲಿಯಲ್ಲಿರುವ ಮೊದಲ ಮಗನಿಗೆ ತೊಂದರೆ ಆಗಕೂಡದೆಂದು ತಾವೊಬ್ಬರೇ ಇಲ್ಲಿಗೆ ಬಂದಿದ್ದಾರೆ.  ಅವರಿಗೆ ಮಕ್ಕಳ ಭವಿಷ್ಯ ತುಂಬಾ ಮುಖ್ಯ.  "ನಮ್ಮದೇನು ಬಿಡಿ.  ಎಲ್ಲಾ ಮುಗೀತಾ ಬಂತು.  ಇನ್ನು ಮಕ್ಕಳ ಅನುಕೂಲ ನೋಡಬೇಕು" ಎಂದು ಗೆಳೆಯರೊಂದಿಗೆ ಆಗಾಗ ಹೇಳುತ್ತಿರುತ್ತಾರೆ.  ಪ್ರತೀ ವಾರಾಂತ್ಯದಲ್ಲಿ ಮೈಸೂರಿಗೆ ಹೋಗಿಬರುತ್ತಾರೆ.

ಈ ಟ್ರ್ಯಾನ್ಸ್‌ಫರ್ ಸೀಜ಼ನ್‌ನಲ್ಲಿ ಈ ಊರಿನಿಂದ ಜಾಗ ಖಾಲಿ ಮಾಡಿ ಬೇರೆತ್ತಲೋ ಗುಳೆಹೋದ ಪ್ರೊಫೆಸರರೊಬ್ಬರಿದ್ದ ಮನೆಯನ್ನೇ ನಾಗೇಂದ್ರಸ್ವಾಮಿಯವರಿಗೆ ಇಲ್ಲಿ ಹೊಸದಾಗಿ ದೊರೆತಿದ್ದ ಪರೋಪಕಾರೀ ಸಹೋದ್ಯೋಗಿಗಳು ಕೊಡಿಸಿಕೊಟ್ಟು ಉಪಕರಿಸಿದ್ದರು.  ಕಾಲೇಜಿಗೆ ನಡೆದೇ ಹೋಗುವಷ್ಟು ಹತ್ತಿರ.  ದಿಕ್ಕು ಬದಲಿಸಿ ನಾಲ್ಕು ಹೆಜ್ಜೆ ನಡೆದರೆ ದಿನಸಿ ಸಾಮಾನುಗಳು, ತರಕಾರಿಗಳು- ಏನು ಬೇಕಾದರೂ ಸಿಗುತ್ತದೆ.  ಸಿಟಿಬಸ್ಸುಗಳಂತೂ ಕಾಸಿಗೊಂದು ಕೊಸರಿಗೊಂದು ಎನ್ನುವಷ್ಟು ಧಂಡಿಯಾಗಿ ಸಿಗುತ್ತವೆ.  ಮನೆ ಮಾಲೀಕ ತುಂಬಾ ಒಳ್ಳೆಯವನು ಎಂದು ಎಲ್ಲರೂ ಶಿಫಾರಸು ಮಾಡಿದ್ದಾರೆ.  ಅದು ನಿಜ ಎಂದು ಅನುಭವಕ್ಕೂ ಬಂಡಿದೆ.  ಅಡ್ವಾನ್ಸ್ ಎಂದು ಅವನು ತೆಗೆದುಕೊಂಡಿರುವುದು ಕೇವಲ ಐದೇ ತಿಂಗಲ ಬಾಡಿಗೆ.  ಅಲ್ಲದೇ ಬಾಡಿಗೆಯಲ್ಲಿ ಅವನು ಮಾಡಿರುವ ಹೆಚ್ಚಳ ಹಿಂದಿನವರು ಕೊಡುತ್ತಿದ್ದಕ್ಕಿಂತಾ ಇನ್ನೂರು ರೂಪಾಯಿಗಳು ಮಾತ್ರ.  ಅವನ ಹೆಂಡತಿ ಅವನಷ್ಟು ಒಳ್ಳೆಯವಳಲ್ಲದಿದ್ದರೂ ಕೆಟ್ಟವಳೇನಲ್ಲ.  ಪ್ರೊಫೆಸರರ ಹೊಸ ಬಿಡಾರವನ್ನು ಶುಚಿಯಾಗಿರಿಸಲು, ಅವರ ಬಟ್ಟೆಬರೆಗಳನ್ನು ಒಗೆದುಕೊಡಲು- ಹೀಗೇ ಒಂಟಿ ಮನುಷ್ಯನ ಸಣ್ಣಪುಟ್ಟ ಕೆಲಸಗಳಿಗೆಂದು ತಮ್ಮ ಮನೆಗೆಲಸದಾಕೆಯ ಅತ್ತಿಗೆಯನ್ನೇ ಗುರುತುಮಾಡಿಕೊಟ್ಟಿದ್ದಾರೆ.  "ನಾನೂರಕ್ಕಿಂತ ಒಂದು ಪೈಸೆಯನ್ನೂ ಹೆಚ್ಚಿಗೆ ಕೊಡಬೇಡಿ, ಅವಳಿಗೇನು ಮಹಾ ಕೆಲಸವಿದೆ ಇಲ್ಲಿ" ಎಂದು ವ್ಯವಹಾರದ ಸಲಹೆ ನೀಡಿದ್ದಲ್ಲದೇ ಅಷ್ಟಕ್ಕೇ ತೃಪ್ತಳಾಗುವಂತೆ ಕೆಲಸದವಳನ್ನು ಹತ್ತೇ ನಿಮಿಷದಲ್ಲಿ ಒಪ್ಪಿಸಿಯೂಬಿಟ್ಟಿದ್ದಾರೆ.  ಕೆಲಸದವಳೂ ಒಳ್ಳೆಯವಳಂತೇ ಕಾಣುತ್ತಾಳೆ.  ದಿನಾ ಬೆಳಿಗ್ಗೆ ಹೊತ್ತಿಗೆ ಸರಿಯಾಗಿ ಬಂದು ಸದ್ದಿಲ್ಲದೇ ತನ್ನ ಕೆಲಸ ಮಾಡಿ ಮುಗಿಸಿ ಹೋಗುತ್ತಾಳೆ.  ಅಪರೂಪಕ್ಕೊಮ್ಮೆ ಪ್ರೊಫೆಸರರ ಜತೆ ಮಾತಿಗೆ ನಿಲ್ಲುತ್ತಾಳೆ.  ಗಾರೆ ಕೆಲಸದ ತನ್ನ ಗಂಡನ ಬಗ್ಗೆ, ಮೂರು ಪುಟ್ಟಪುಟ್ಟ ಮಕ್ಕಳ ಬಗ್ಗೆ ಹೇಳುತ್ತಾಳೆ.  `ಅಕ್ಕಾವ್ರ' ಬಗ್ಗೆ ವಿಚಾರಿಸುತ್ತಾಳೆ.  `ಮೈಸೂರಿಗೆ ಹೋದಾಗ ನಾ ಕೇಳಿದೆ ಅಂತ ಅಕ್ಕಾವ್ರಿಗೆ ಹೇಳಿ' ಎಂಬ ಬೇಡಿಕೆ ಮುಂದಿರಿಸುತ್ತಾಳೆ.  ಇತ್ತೀಚೆಗೆ ಆ ಬೇಡಿಕೆಯಲ್ಲಿ ಸ್ವಲ್ಪ ಸಲಿಗೆಯೂ ಸೇರಿಕೊಂಡಂತಿದೆ.

ಎರಡನೇ ಮಹಡಿಯಲ್ಲಿದ್ದ ಆ ಪುಟ್ಟ ಅಪಾರ್ಟ್‌ಮೆಂಟ್‌ನಲ್ಲಿ ಬೆಡ್‌ರೂಮಿಗೆ ಹೊಂದಿಕೊಂಡಂತೆ ದಕ್ಷಿಣಕ್ಕೆ ಮುಖ ಮಾಡಿದ ಮೂರು ಅಡಿ ಅಗಲ ಹತ್ತಡಿ ಉದ್ದದ ಒಂದು ಬಾಲ್ಕನಿಯಿದೆ.  ಪ್ರೊಫೆಸರರು ಅಲ್ಲಿ ದಿನಾ ಬೆಳಿಗ್ಗೆ ಹತ್ತು ನಿಮಿಷ ಹಾಗೂ ಸಂಜೆ ಹತ್ತರಿಂದ ನೂರಾಹತ್ತು ಅಥವಾ ನೂರಾ ಇಪ್ಪತ್ತು ನಿಮಿಷಗಳವರೆಗೆ ಕೂರುತ್ತಾರೆ.  ಕೂತು ಕಾಫಿ ಸೇವಿಸುತ್ತಾರೆ.  ಒಂದು ಲೋಟ ನೀರು ಕುದಿಸಿ ಅದರಲ್ಲಿ ಕಾಲುಲೋಟ ತೆಗೆದುಕೊಂಡು ಅದಕ್ಕೆ ನೆಸ್ಲೆ ಎವೆರಿಡೇ ಮಿಲ್ಕ್ ಪೌಡರನ್ನು ಚಮಚೆಯಲ್ಲಿ ಗೋಪುರದಂತೆ ಮೂರು ಸಲ ಎತ್ತಿಹಾಕಿ ಕಲಕಿ ಉಳಿದ ಮುಕ್ಕಾಲುಲೋಟ ಬಿಸಿನೀರಿಗೆ ಬೆರೆಸಿ ಒಂದುಲೋಟ ಭರ್ತಿ ಭರ್ಜರಿ ಹಾಲು ತಯಾರಿಸಿ ಅದಕ್ಕೆ ಒಂದು ಚಮಚ ಸಕ್ಕರೆಯನ್ನೂ, ಅರ್ಧ ಚಮಚೆ ಬ್ರೂ ಇನ್ಸ್‌ಟಂಟ್ ಕಾಫಿ ಪೌಡರನ್ನೂ ಬೆರೆಸಿ ಕಲಕಿಬಿಟ್ಟರೆ ಅದ್ಭುತ ಕಾಫಿ ತಯಾರಾಗಿಬಿಡುವ ಪರಿಯನ್ನು ಪ್ರೊಫೆಸರರು ಅರಿತು ಬಹಳ ವರ್ಷಗಳೇ ಆಗಿಹೋದವು.  ಕಲಿತ ವಿದ್ಯೆಯನ್ನು ದಿನಾ ಬೆಳಿಗ್ಗೆ ಹಾಗೂ ಸಂಜೆ ಒಂದು ಪುರಾತನ ಸಂಪ್ರದಾಯದಂತೆ ಆಚರಿಸುತ್ತಿದ್ದಾರೆ.

ಬೆಳಿಗ್ಗೆ ಕಾಫಿ ಕುಡಿದಾದ ತಕ್ಷಣ ಮೇಲೆದ್ದು ಬಾಲ್ಕನಿ ತೊರೆದು ಬಾತ್‌ರೂಮಿನತ್ತ ನಡೆಯುತ್ತಾರೆ.  ಜಳಕ, ಬಳಿಕ "ಕೌಸಲ್ಯಾ ಸುಪ್ರಜಾ...", ತಿಂಡಿ.  ಆಮೇಲೆ ಕಾಲೇಜು...  ಪ್ರೊಫೆಸರನ್ನು ತನ್ನಲ್ಲಿಗೆ ಕರೆಯಲು ಬಾಲ್ಕನಿಗೆ ದಿನಪೂರ್ತಿ ಬಿಡುವೇ ಸಿಗುವುದಿಲ್ಲ.

ತನ್ನ ಮೈನ ಉದ್ದಗಲಕ್ಕೂ ಹರಡಿಕೊಂಡ ಬಿಸಿಲಿನೊಡನೆ ಅದು ಉಭಯಕುಶಲೋಪರಿ ನಡೆಸುತ್ತದೆ, ನಗುತ್ತದೆ, ಜಗಳಾಡುತ್ತದೆ.  ಸುತ್ತಲೂ ಮೇಲಿನಿಂದ ಕೆಳಗಿನವರೆಗೂ ಹಾರಾಡುವ ರಂಗುರಂಗಿನ ವಸ್ತ್ರ ವಸನಗಳನ್ನು ಆಸಕ್ತಿಯಿಂದ ನೋಡುತ್ತಿದ್ದರೆ ದಿನ ಹೋಗುವುದೇ ಅದಕ್ಕೆ ಗೊತ್ತಾಗುವುದಿಲ್ಲ.  ಅದರಲ್ಲೂ ನೀಳ ಸೀರೆಗಳು, ದುಪಟ್ಟಾಗಳು ಗಾಳಿಯಲ್ಲಿ ಪಲ್ಟಿ ಹೊಡೆಯುತ್ತಾ ಹೊಳೆಯುವ ಬಿಸಿಲಿನ ಮುಖಕ್ಕೇ ಬಣ್ಣಗಳನ್ನು ಚೆಲ್ಲಾಡಿಕೊಂಡು ಗಳಿಗೆಗೊಂದು ಭಂಗಿಯಲ್ಲಿ ನರ್ತಿಸಿ ನಲಿಯುವುದನ್ನು ನೋಡುವುದಂತೂ ಕಣ್ಣಿಗೆ ಹಬ್ಬ.  ಇಷ್ಟೋಂದು ಉದ್ದಗಲದ ವಸ್ತ್ರಗಳು ಅದ್ಹೇಗೆ ತಾನೆ ತಮ್ಮೆಲ್ಲಾ ಸ್ವಾತಂತ್ರ್ಯವನ್ನು ಕಳೆದುಕೊಂಡು ಭಯದಿಂದಲೋ ನಾಚಿಕೆಯಿಂದಲೋ ಎಂಬಂತೆ ಅಷ್ಟೋಂದು ಚಿಕ್ಕದಾಗಿ ಮುದುರಿ ಸುರುಳಿ ಸುತ್ತಿಕೊಂಡು ಕೆಳಗಿನ ರಸ್ತೆಯಲ್ಲಿ ನಡೆದುಹೋಗುತ್ತವೆ ಎಂದು ಅಚ್ಚರಿಪಡುತ್ತದೆ.  ಜಗ್ಗದೇ ಬಗ್ಗದೇ ಒಂದಿನಿತೂ ಕುಗ್ಗದೇ ಹುಟ್ಟಿದಾರಭ್ಯದಿಂದ ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ತಾನೇ ತಾನಾಗಿ ಉಳಿದಿರುವ ತನ್ನ ಬಗ್ಗೆ ಅದಕ್ಕೆ ತುಂಬಾ ಹೆಮ್ಮೆ ಇದೆ.

ಸಂಜೆ ಪೂರ್ತಿ ಅದಕ್ಕೆ ಬಿಡುವು.  ಮಾತಾಡಲು ಜಗಳಾಡಲು ಬಿಸಿಲಿರುವುದಿಲ್ಲ.  ಹೊರಗೆ ಹಾರಾಡುವ ಸೀರೆ ದುಪಟ್ಟಾಗಳೆಲ್ಲವೂ ಹೊತ್ತಿಳಿಯುತ್ತಿದ್ದಂತೇ ಒಳನಡೆದುಬಿಡುತ್ತವೆ.  ಕತ್ತಲು ದಟ್ಟವಾಗುತ್ತಿದ್ದಂತೆ ರಸ್ತೆಯಲ್ಲೂ ಅವು ಕಾಣಸಿಗುವುದಿಲ್ಲ.  ಆಗ ಬಾಲ್ಕನಿಗೆ ಪ್ರೊಫೆಸರ್ ನಾಗೇಂದ್ರಸ್ವಾಮಿಯವರ ನೆನಪಾಗುತ್ತದೆ.  ಅವರನ್ನು ಕರೆಯುತ್ತದೆ.

ಸಂಜೆ ಐದು - ಐದೂವರೆಗೆ ಕಾಲೇಜಿನಿಂದ ಹಿಂತಿರುಗಿದ ಮೇಲೆ ಪ್ರೊಫೆಸರರಿಗೂ ಬಿಡುವು.  ಏನಾದರೂ ಕೊಂಡುತರುವ ಕೆಲಸವಿದ್ದ ದಿನ ಬರುವ ದಾರಿಯಲ್ಲೇ ಅದನ್ನೂ ಮುಗಿಸಿಕೊಂಡು ಆರುಗಂಟೆಗೆಲ್ಲಾ ಮನೆಗೆ ಹಿಂತಿರುಗಿಬಿಡುತ್ತಾರೆ.  ಮುಂಬಾಗಿಲ ಬೀಗ ತೆರೆಯುವ ಸದ್ದು ಕಿವಿಗಳಿಗೆ ಬೀಳುತ್ತಿದ್ದಂತೇ ಬಾಲ್ಕನಿ ಅವರನ್ನು ನಿರೀಕ್ಷಿಸತೊಡಗುತ್ತದೆ.  ಅವರು ಬಟ್ಟೆ ಬದಲಿಸಿ ಬಾತ್‌ರೂಮಿಗೆ ಹೋಗಿಬರುವುದನ್ನೇ ಆಸೆಯಿಂದ ನೋಡುತ್ತದೆ.  ಅವರೇನಾದರೂ ಬಾತ್‌ರೂಮಿನಲ್ಲಿ ಹೆಚ್ಚು ಹೊತ್ತು ಕಳೆದರಂತೂ ಬಾಲ್ಕನಿ ಚಡಪಡಿಸತೊಡಗುತ್ತದೆ.  ಬಾತ್‌ರೂಮಿನಿಂದವರು ಹೊರಬರುವುದನ್ನೇ ಕಾದಿದ್ದು ಕಿಟಕಿಯ ಮೂಲಕ ಅರೆಬರೆ ಇಣುಕಿ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತದೆ.  ಕೊನೆಗೆ ಪ್ರೊಫೆಸರ್ ಸಾಹೇಬರು ಕಾಫಿ ತಯಾರಿಕೆಯ ಪುರಾತನ ಸಂಪ್ರದಾಯವನ್ನು ಕಿಂಚಿತ್ತೂ ಚ್ಯುತಿಯಿಲ್ಲದಂತೆ ಸಾಂಗವಾಗಿ ನೆರವೇರಿಸಿ ಲೋಟ ಕೈಲಿಡಿದು ತನ್ನತ್ತ ನಡೆದುಬರುತ್ತಿದ್ದಂತೇ ಅದರ ಎದೆಬಡಿತ ತಾರುಮಾರಾಗಿರುತ್ತದೆ.  ಉದ್ವೇಗದಲ್ಲಿ "ಹಾಯ್ ಮ್ಯಾನ್!  ಹೌ ಆರ್ ಯು ದಿಸ್ ಈವ್‌ನಿಂಗ್?" ಎಂದು ಪ್ರಶ್ನೆ ಹಾಕುತ್ತದೆ.  ಮೂರುವರ್ಷಗಳ ಹಿಂದೆ ಇಲ್ಲಿ ಒಟ್ಟಿಗಿದ್ದ ಇಬ್ಬರು ಕಾಲ್ ಸೆಂಟರ್ ಯುವತಿಯರಿಂದ ಅದು ಅಮೆರಿಕನ್ ಉಚ್ಛಾರಣೆಯನ್ನು ಬಲು ಸೊಗಸಾಗಿ ಕಲಿತುಕೊಂಡುಬಿಟ್ಟಿದೆ.  ಪ್ರೊಫೆಸರರು ಮುಗುಳುನಗುತ್ತಾ ಆರಾಮಕುರ್ಚಿಯಲ್ಲಿ ಆರಾಮವಾಗಿ ಒರಗಿ ಕಾಫಿಯ ಲೋಟಕ್ಕೆ ತುಟಿಯೊತ್ತುತ್ತಾರೆ.  ಸಂಭಾಷಣೆ ಆರಂಭವಾಗುತ್ತದೆ.

ಬಾಲ್ಕನಿ ಬಾಯಿ ತೆರೆಯುವುದಕ್ಕೂ ಅವಕಾಶ ಕೊಡದೇ ಪ್ರೊಫೆಸರರು ತಮ್ಮ ಪ್ರವರ ಶುರು ಮಾಡುತ್ತಾರೆ.  ಕಾಲೇಜಿನ ಬಗ್ಗೆ ಹೇಳಿಕೊಂಡು ನಿಟ್ಟುಸಿರಿಡುತ್ತಾರೆ.  ಬುಲ್‌ಡಾಗ್ ಪ್ರಿನ್ಸಿಪಾಲರನ್ನು ಕೆಟ್ಟದಾಗಿ ಬೈಯುತ್ತಾರೆ.  ಸರ್ವಋತು ಸಹೋದ್ಯೋಗಿಗಳ ಬಗ್ಗೆ ಹೇಳುತ್ತಾ ಗೊಂದಲಕ್ಕೆ ಬಿದ್ದು ಮಾತನ್ನೇ ಬದಲಿಸಿಬಿಡುತ್ತಾರೆ.  ನಮ್ಮ ಪೂರ್ವಜರಾದ ವಿದ್ಯಾರ್ಥಿಗಳ ಚೇಷ್ಟೆಗಳ ಬಗ್ಗೆ ಹೇಳಿಕೊಂಡು ನಗುತ್ತಾರೆ, ನಗಿಸುತ್ತಾರೆ.  ಕೊನೆಯಲ್ಲಿ ತಮ್ಮ ಮಡದಿ ಮಕ್ಕಳ ಬಗ್ಗೆ ಮುಗಿಯದ ಕಥೆಯೊಂದನ್ನು ಹೇಳುವಂತೆ ಹೇಳಿದ್ದನ್ನೇ ಹೇಳಿ ಚಿಟ್ಟು ಹಿಡಿಸುತ್ತಾರೆ.  ಬಾಲ್ಕನಿ ಬೇಸರಿಸದೇ ಕೇಳುತ್ತಾ ಕೂರುತ್ತದೆ.  ಹೊಟ್ಟೆಪಾಡಿಗೆ ಅಂತ ಸರಕಾರೀ ತ್ಯಾಪೇದಾರಿ ಹಿಡಿಯುವ ದುರ್ದೈವಿಗಳ ಪಾಡೆಲ್ಲಾ ಹೀಗೆ ಎಂದು ಅದಕ್ಕೆ ಅರ್ಥವಾಗಿಹೋಗಿದೆ.  ಹೋದೆಡೆಗೆಲ್ಲಾ ಕೈಹಿಡಿದವಳನ್ನೂ ಮುದ್ದು ಕಂದಮ್ಮಗಳನ್ನೂ ಕರೆದೊಯ್ಯಲಾಗದ ಅವರ ಒಂಟಿಬದುಕು ಕಂಡು ಅದು ಮರುಕಪಡುತ್ತದೆ.  ವಯಸ್ಸಿರುವಾಗ ಮುದ್ದುಮಡದಿಯನ್ನು ಮುದ್ದಿಸುವ ಹಾಗೂ ಆಡಾಡುತ್ತಾ ಬೆಳೆಯುವ  ಮಕ್ಕಳ ತುಂಟಾಟಗಳನ್ನು ನೋಡಿ ನಲಿಯುವ ಅವಕಾಶವನ್ನು ತನ್ನದೇ ಪ್ರಜೆಗಳಿಂದ ಕಸಿದುಕೊಂಡು ಅವರೆದೆಯಲ್ಲಿ ಸದಾ ಚಿಂತೆ, ಕಳವಳ, ವ್ಯಾಕುಲ, ಅನಾಥಪ್ರಜ್ಞೆಗಳನ್ನು ತುಂಬಿಸುವ ಈ ಸರಕಾರ ಒಂದು ಕೊಳಕು ಸ್ಯಾಡಿಸ್ಟ್ ಎಂದು ಬಾಲ್ಕನಿಗೆ ಎಂದೋ ಮನವರಿಕೆಯಾಗಿಹೋಗಿದೆ.

ಹೀಗೆ ಪ್ರೊಫೆಸರ್ ನಾಗೇಂದ್ರಸ್ವಾಮಿ ಮತ್ತು ವಿಶಾಲಹೃದಯೀ ಬಾಲ್ಕನಿಯ ಸಂಜೆಗಳು ಧೀರ್ಘವಾಗುತ್ತವೆ...

ಪ್ರೊಫೆಸರ್ ಸಾಹೇಬರು ಕಾಫಿಲೋಟ ಖಾಲಿಯಾದ ಮೇಲೂ ಅಲ್ಲೇ ಗಂಟೆಗಟ್ಟಲೆ ಕೂತುಕೊಳ್ಳುವುದಕ್ಕೆ ಬಾಲ್ಕನಿಯ ಸಾಂಗತ್ಯವಲ್ಲದೇ ಬೇರೊಂದು ಆಕರ್ಷಣೆಯೂ ಇದೆ.  ಅದು ತೆಂಕಣ ಗಾಳಿ.

ಸಂಜೆಯಾಗುತ್ತಿದ್ದಂತೇ ಬೀಸತೊಡಗುವ ಅದು ಸ್ನೇಹಜೀವಿ ಹಾಗೂ ತುಂಬಾ ಧಾರಾಳಿ.  ದಯಾಳುವೂ ಸಹಾ.  ಪ್ರೊಫೆಸರರ ಆಯಾಸವನ್ನದು ಚಣದಲ್ಲಿ ಪರಿಹರಿಸಿಬಿಡುತ್ತದೆ.  ತೋಳಿಲ್ಲದ ಬನಿಯನ್‌ನ ಹೊರಗೆ ಮತ್ತು ಪಟ್ಟೆಪಟ್ಟೆ ಲುಂಗಿಯ ಒಳಗೆ ಒಂದು ದಾರವೂ ಇಲ್ಲ ಎಂದು ಚೆನ್ನಾಗಿ ಅರಿತಿರುವ ಅದು ಅವೆರಡರ ಒಳಗೆಲ್ಲಾ ನುಗ್ಗಿ ಕಚಗುಳಿಯಿಟ್ಟು ಅವರ ಮನಸ್ಸನ್ನು ಮುದಗೊಳಿಸುತ್ತದೆ.  ಮೈಯನ್ನು ಹಗುರಾಗಿಸಿಬಿಡುತ್ತದೆ.  ತನ್ನ ವಿಶೇಷ ಬಯಕೆಗಳನ್ನೂ ಪೂರೈಸಲು ಅದು ತುದಿಗಾಲಲ್ಲಿ ನಿಂತಿರುತ್ತದೆ ಎಂಬುದನ್ನು ಕಂಡುಕೊಂಡಾಗಿನಿಂದ ಪ್ರೊಫೆಸರರು ಆಗಾಗ ಸಣ್ಣಪುಟ್ಟ ಕೆಲಸಗಳನ್ನು ಅದರಿಂದ ಮಾಡಿಸಿಕೊಳ್ಳುತ್ತಾರೆ.  ತೋಳನ್ನು ಮೇಲೆತ್ತಿ ಪಿಚಿಪಿಚಿ ಕೆಸರುಕಂಕುಳನ್ನು ಅದರ ನಾಲಿಗೆಗೆ ನೇರವಾಗಿ ಒಡ್ಡಿಬಿಡುತ್ತಾರೆ.  ಅದನ್ನದು ನೆಕ್ಕಿ ಎರಡೇ ನಿಮಿಷಗಳಲ್ಲಿ, ಹೌದು ಕೇವಲ ಎರಡೇ ಎರಡು ನಿಮಿಷಗಳಲ್ಲಿ ಒಣಗಿಸಿ ಗರಿಗರಿಗೊಳಿಸಿಬಿಡುತ್ತದೆ.  ಸ್ವಲ್ಪ ಅನುಮಾನ ಪ್ರವೃತ್ತಿಯವರಾದ ಪ್ರೊಫೆಸರರು ತೋರು ಬೆರಳನ್ನು ಕಂಕುಳ ಹಳ್ಳದಲ್ಲಿಳಿಸಿ ಅಲ್ಲೇನೂ ಕೆಸರಿಲ್ಲ ಎಂದು ಖಾತ್ರಿ ಮಾಡಿಕೊಂಡೇ ತೋಳುಗಳನ್ನು ಕೆಳಗಿಳಿಸುವುದು.  ಒಮ್ಮೊಮ್ಮೆ ಸುತ್ತಮುತ್ತಲಿನ ಕಿಟಕಿಗಳೇನಾದರೂ ಕರೀಗವಸುಗಳಲ್ಲಿ ಮುಖ ಮರೆಸಿಕೊಂಡಿದ್ದರೆ ಜತೆಗೆ ಬೆಳದಿಂಗಳೂ ಇಲ್ಲದೇ ರಾತ್ರಿಗಳು ಕತ್ತಲುಗಟ್ಟಿದ್ದರೆ ಪ್ರೊಫೆಸರರು ಗಂಟು ಸಡಿಲಿಸಿ ಲುಂಗಿಯ ಎರಡೂ ಅಂಚುಗಳನ್ನು ದೂರದೂರ ಒಯ್ದು ರೆಕ್ಕೆಗಳಂತೆ ಹಾರಾಡಿಸುತ್ತಾರೆ.  ಆಗಂತೂ ಗಾಳಿಗೆ ಖುಶಿಯೋ ಖುಶಿ.  ಓಡಿಬಂದು ಒಳನುಗ್ಗಿ ಅರಮನೆ ಕಿರುಮನೆಗಳೊಂದನ್ನೂ ಬಿಡದೇ ಎಲ್ಲೆಡೆ ಸುತ್ತಿ ಸುಳಿದು ಎಲ್ಲವನ್ನೂ ಮುಟ್ಟಿ ಮೂಸಿ ಸಂದುಗಳಲ್ಲಿ ಶಿಳ್ಳೆ ಹೊಡೆಯುತ್ತಾ ಓಡಾಡುತ್ತದೆ.  ಪ್ರೊಫೆಸರರು "ಹಹಹಾ ಹಹಹಾ" ಎಂದು ಮುದದಿಂದ ಮುಲುಗುತ್ತಾ ಕಣ್ಣುಗಳನ್ನು ಅರೆಮುಚ್ಚಿ ಹಿಂದಕ್ಕೆ ಒರಗಿಬಿಡುತ್ತಾರೆ.

ಅದು ಮೂವರಿಗೂ ಆನಂದದ ಸಮಯ.

ಆ ಗಾಳಿ ತುಂಬಾ ದಯಾಮಯಿ ಎಂದು ಹೇಳಿದ್ದೆ ಅಲ್ಲವೇ?  ಅದು ಪ್ರೊಫೆಸರರ ಚರ್ಮವನ್ನಷ್ಟೇ ಅಲ್ಲ ಕಿವಿ ನೇತ್ರ ನಾಸಿಕಗಳ ಕಡೆಗೂ ಗಮನ ಕೊಡುತ್ತದೆ.  ಮೇಲೆ ಕೆಳಗೆ ಎಡಬಲ ಮುಂದುಗಡೆಯ ಅಪಾರ್ಟ್‌ಮೆಂಟ್‌ಗಳ ಕಿಟಕಿ ಬಾಗಿಲುಗಳಿಂದ ಕಿಲಕಿಲನಗೆಗಳನ್ನೂ, ಹಾಡುಗಳನ್ನೂ ಕೈಹಿಡಿದು ಕರೆತಂದು ಅವರ ಕಿವಿಯೊಳಗೆ ಬಿಡುತ್ತದೆ.  ಜತೆಗೇ ಎದುರಿನ ಕಟ್ಟಡದ ಒಂದು ಪಕ್ಕಕ್ಕೆ ಮೆತ್ತಿಕೊಂಡಿರುವ ಹಚ್ಚಹಸಿರಿನಿಂದ ಮಂದಾರಮಲ್ಲಿಗೆ ಪರಿಮಳವನ್ನು ಹೊತ್ತುತಂದು ಅವರ ಮೂಗಿಗೆ ಸವರುತ್ತದೆ.

ಹೀಗೆ ಒಂಟಿಯಾದ ಪ್ರೊಫೆಸರರ ಬೇಸರ ಬೇಗುದಿಗಳನ್ನು ತೊಡೆಯಲು ತನ್ನಿಂದಾದಷ್ಟು ಪ್ರಾಮಾಣಿಕ ಪ್ರಯತ್ನ ನಡೆಸುವ ಆ ದಯಾರ್ದ್ರ ತೆಂಕಣಗಾಳಿ ಒಂದು ಸಂಜೆ ಅವರೆಂದೂ ಊಹಿಸಿರಲಾರದಂತಹ ಉಡುಗೊರೆಯೊಂದನ್ನು ತಂದು ಅವರ ಕಾಲಬಳಿ ಹಾಕಿಬಿಟ್ಟಿತು.  ಆ ಗಳಿಗೆಯಿಂದ ಪ್ರೊಫೆಸರ್ ನಾಗೇಂದ್ರಸ್ವಾಮಿಯವರ ಬದುಕುಬಯಕೆಗಳು ಸಂಪೂರ್ಣವಾಗಿ ಬದಲಾಗಿಹೋದವು.

ಪ್ರಿಯ ಓದುಗರೇ, ಪುಸ್ತಕವನ್ನು ಎಡಗೈಯಲ್ಲಿ ಹಿಡಿದಂತೇ ಎದ್ದು ಸೀದಾ ಅಡಿಗೆಮನೆಗೆ ಹೋಗಿ ಒಂದೆರಡು ಲೋಟ ನೀರು ಕುಡಿದು ಬನ್ನಿ.  ನೀರಿನ ತಂಬಿಗೆಯನ್ನು ತಂದು ಪಕ್ಕದಲ್ಲಿಟ್ಟುಕೊಂಡರೆ ಇನ್ನೂ ಒಳ್ಳೆಯದೇ.  ಮುಂದಿನ ವಾಕ್ಯಗಳನ್ನು ಓದುವಾಗ ಅದರ ಅಗತ್ಯ ನಿಮಗೆ ಮತ್ತೆ ಮತ್ತೆ ಬೀಳುತ್ತದೆ.  ನಿಮ್ಮ ಮನಸ್ಸು, ಹೃದಯ, ಧಮನಿಗಳು ಹಾಗೂ ನರಮಂಡಲಗಳ ಕ್ಷೇಮದ ಬಗ್ಗೆ ನನಗೆ ಕಾಳಜಿ ಇದೆ.  ನನ್ನ ಸಲಹೆಯನ್ನು ನಿರ್ಲಕ್ಷಿಸಬೇಡಿ ಪ್ಲೀಸ್.

ಆ ಸಂಜೆ ಪ್ರೊಫೆಸರರು ಸ್ವಲ್ಪ ತಡವಾಗಿ ಮನೆಗೆ ಬಂದರು.  ಅವರು ಕಾಫಿಯ ಲೋಟ ಹಿಡಿದು ಬಾಲ್ಕನಿಗೆ ಬರುವ ಹೊತ್ತಿಗೆ ಕತ್ತಲೆಯಾವರಿಸತೊಡಗಿತ್ತು.  ಮಾಮೂಲಿನಂತೆ ಲೈಟ್ ಹಾಕದೇ ಕೂತು ಕಾಫಿ ಹೀರುತ್ತಾ ತಮ್ಮ ಎಂದಿನ ಸಂಗಾತಿಗಳೊಡನೆ ವ್ಯವಹಾರ ಶುರುಮಾಡಿ ಒಂದೆರಡು ಗಂಟೆಗಳ ನಂತರ ಅದಕ್ಕೆ ಮಂಗಳ ಹಾಡಿ ಒಳಗೆದ್ದು ಹೋಗಿ ಫ್ರಿಜ್‌ನಲ್ಲಿದ್ದ ಅನ್ನ ಹುಳಿ ಎಟ್ಸೆಟೆರಾಗಳನ್ನು ಹೊರತೆಗೆದು ಬಿಸಿಮಾಡಿ ಉಂಡರು.  ಅರ್ಧಗಂಟೆ ಟಿ ವಿ ನೋಡಿದರು, ಎರಡುನಿಮಿಷ ಒಂದು ಪುಸ್ತಕದ ಪುಟ ತಿರುವಿದರು.  ಮಲಗಲೆಂದು ಎದ್ದವರು ಮಾಮೂಲಿನಂತೆ ಬಾಲ್ಕನಿಯ ಬಾಗಿಲು ಮುಚ್ಚಲು ಕೈಚಾಚಿದರು.  ಅಷ್ಟೇ...

ಅವರ ಕೈ ಹಾಗೇ ನಿಂತುಬಿಟ್ಟಿತು.

ಹಾಲುಚೆಲ್ಲಿದಂಥ ಬೆಳದಿಂಗಳಿನಲ್ಲಿ ಮನದುಂಬಿ ಮೀಯುತ್ತಿದ್ದ ಬಾಲ್ಕನಿಯ ಮೂಲೆಯಲ್ಲಿ ಎಂಥದೋ ಕಡುಗೆಂಪನೆಯ ಗುಪ್ಪೆ.

ಅದೇನದು?

ಪ್ರೊಫೆಸರರು ಹಾಗೇ ನಿಂತು ನಿಮಿಷಗಳವರೆಗೆ ಅವಲೋಕಿಸಿದರು.

ಏನೋ ಬಟ್ಟೆಯಂತಿದೆಯಲ್ಲ!

ಕೆಂಪುಗುಪ್ಪೆಯ ಮೇಲೆ ಕಣ್ಣಿಟ್ಟೇ ಒಂದೊಂದೇ ಹೆಜ್ಜೆ ಇಡುತ್ತಾ ಬಾಲ್ಕನಿಯೊಳಗೆ ಕಾಲಿರಿಸಿದರು.  ಬಟ್ಟೆಯೆಂಬುದು ಸ್ಪಷ್ಟವಾಯಿತು.  ಅದೆಂಥಾ ಬಟ್ಟೆ?  ನನ್ನದ್ಯಾವುದರಂತೆಯೂ ಕಾಣುವುದಿಲ್ಲವಲ್ಲ ಎಂದುಕೊಳ್ಳುತ್ತಾ ಬಾಗಿದರು.  ಕೆಂಪುವಸ್ತ್ರದಲ್ಲಿ ಅಲ್ಲಲ್ಲಿ ಬಿಳೀ ಮಚ್ಚೆಗಳೂ ಕಂಡವು.

ಆ ಒಂದು ನಿರ್ಣಾಯಕ ಗಳಿಗೆಯಲ್ಲಿ ಆದಿಅಂತ್ಯಗಳಿಲ್ಲದ ಸುವಿಶಾಲ ಗಗನಸಾಗರದಲ್ಲಿ ಯಾನಗೈಯುತ್ತಿದ್ದ ಚಂದ್ರನ ಸಾಕ್ಷಿಯಲ್ಲಿ ಪ್ರೊಫೆಸರ್ ನಾಗೇಂದ್ರಸ್ವಾಮಿಯವರ ಬಲಗೈನ ತೋರುಬೆರಳು ಆ ಕೆಂಪುವಸ್ತ್ರವನ್ನು ಹಿಂಜರಿಯುತ್ತ ಹಿಂಜರಿಯುತ್ತಲೇ ಸ್ಪರ್ಶಿಸಿಬಿಟ್ಟಿತು.

ಮುಂದಿನ ಮೂರು ಸೆಕೆಂಡುಗಳಲ್ಲಿ ಆ ಕೆಂಪುವಸ್ತ್ರ ಇಡಿಯಾಗಿ ಮೇಲೆದ್ದು ಪ್ರೊಫೆಸರರ ಕಣ್ಣ ಹತ್ತಿರ ಬಂತು.  ಆಗ ಅದೇನೆಂದು ಅವರಿಗೆ ಗೊತ್ತಾಗಿಬಿಟ್ಟಿತು.

ಅದೊಂದು ರವಿಕೆ.

ಬೆಳದಿಂಗಳ ರಾತ್ರಿಗಳಲ್ಲಿ ಮೋಹಿನಿಯರು ಬರುತ್ತಾರಂತೆ.  ಅದು ನಿಜ.  ಪ್ರೊಫೆಸರರ ಬಾಲ್ಕನಿಗೆ ಇಂದು ಒಬ್ಬಳು ಮೋಹಿನಿ ಬಂದಿದ್ದಳು.  ಬಂದವಳು ತನ್ನ ರವಿಕೆಯನ್ನು ಬಿಚ್ಚಿಟ್ಟು ನಡೆದುಬಿಟ್ಟಿದ್ದಳು.

ರಕ್ತಕೆಂಪು ಬಣ್ಣ,  ಅಲ್ಲಲ್ಲಿ ಪುಟ್ಟ ಪುಟ್ಟ ಬಿಳೀ ಚುಕ್ಕಿಗಳು, ಬೆಳದಿಂಗಳಿನಲ್ಲಿ ಮಿಂಚಿದ ನಾಲ್ಕು ಹೊಚ್ಚ ಹೊಸ ಹುಕ್ಕುಗಳು, ತೋಳುಗಳ ಅಂಚು ಹಾಗೂ ಹಿಂದೆ ಮುಂದೆ ಕೆಳಭಾಗದಲ್ಲಿ ಮೂರಿಂಚು ಅಗಲಕ್ಕೆ ಕಪ್ಪು ಬಿಳುಪು ಹಳದೀ ಚಿತ್ತಾರ...  ಚಂದ್ರನತ್ತ ನಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ಫಳಕ್ಕೆಂದು ಕಣ್ಣುಮಿಟುಕಿಸಿದ ಕನ್ನಡಿ ಚೂರುಗಳು...  ಮೋಹಿನಿಯ ಮೋಹಕ ಅರಿವೆ!

ಅದೀಗ ಅರೆಬೋಳು ತಲೆಯ, ತುಸು ಡೊಳ್ಳುಹೊಟ್ಟೆಯ, ಆಗಾಗ "ಡುರ್ ಡುರಕ್ ಢುಸ್ ಢೊಂಯ್" ಎಂದು ಹಿಂಬಾಗಿಲಿನಿಂದಲೂ "ಅವ್ವೂ ಅವ್ವೂ ವೂ ವೂ" ಎಂದು ಮುಂಬಾಗಿಲಿನಿಂದಲೂ ಗ್ಯಾಸ್ ಲೀಕ್ ಮಾಡುವ ನಮ್ಮ ನಲವತ್ತೈದರ ಪ್ರೊಫೆಸರ್ ನಾಗೇಂದ್ರಸ್ವಾಮಿಯವರ ಎರಡೂ ಕೈಗಳಲ್ಲಿ!

ಇದ್ಯಾರದು ಇದು?  ಎಲ್ಲಿಂದ ಬಂತು?  ಇದನ್ನೇನು ಮಾಡಲಿ?

ಕೆಲಸದವಳದೇ?

ಅವಳೇಕೆ ತನ್ನ ರವಿಕೆಯನ್ನು ಇಲ್ಲಿಟ್ಟುಹೋಗುತ್ತಾಳೆ?

ಇದು ಖಂಡಿತಾ ಅವಳದಲ್ಲ.  ಅವಳ ಬಳಿ ಇಂಥಾ ಚಂದದ ರವಿಕೆ ಇರುವ ಸಾಧ್ಯತೆ ಇಲ್ಲ.  ಸುತ್ತಲಿನ ಕಟ್ಟಡಗಳ ಯಾವುದೋ ಒಂದು ಬಾಲ್ಕನಿಯ ಹಗ್ಗದಿಂದ ತಪ್ಪಿಸಿಕೊಂಡು ಇದಿಲ್ಲಿಗೆ ಹಾರಿ ಬಂದಿರಬೇಕು.  ಇದರ ಒಡತಿ ಯಾರೆಂದು ಪತ್ತೆ ಮಾಡಿ ಅವಳಿಗಿದನ್ನು ತಲುಪಿಸುವಂತೆ ಬೆಳಿಗ್ಗೆ ಕೆಲಸದವಳಿಗೆ ಹೇಳಬೇಕು.

ಪ್ರಬುದ್ಧ ತೀರ್ಮಾನಕ್ಕೆ ಬಂದ ಪ್ರೊಫೆಸರರು ಮರುಕ್ಷಣ ವಿಲಕ್ಷಣ ಗೊಂದಲಕ್ಕೆ ಬಿದ್ದರು.

ಬೆಳಗಿನವರೆಗೆ ಇದು ಇಲ್ಲೇ ಬಿದ್ದಿರಲಿ ಎಂದು ಬಾಲ್ಕನಿಯ ಮೂಲೆಯಲ್ಲೇ ಹಾಕಿಬಿಡುವುದೇ ಅಥವಾ ಒಳಗಿಡುಡುವುದೇ?

ಇಲ್ಲೇ ಬಿಸಾಕುವುದು ಬೇಡ.  ಬೆಕ್ಕೇನಾದರೂ ಬಂದು ಮೇಲೆ ಮಲಗಿ ಗಲೀಜು ಮಾಡಿಬಿಡಬಹುದು.  ಇಂಥಾ ಚೆಂದೊಳ್ಳಿ ರವಿಕೆಗೆ ಆ ಗತಿ ಬರಬಾರದು.

ಪ್ರೊಫೆಸರರ ಎದೆಯಲ್ಲಿ ಆ ಗಳಿಗೆಯಲ್ಲಿ ಉಕ್ಕಿದ ಕರುಣೆಯ ಪರಿಣಾಮವಾಗಿ ಆ ಕೆಂಪು ರವಿಕೆ ಅವರ ಬೊಗಸೆಯೆಂಬ ಪಲ್ಲಕ್ಕಿಯಲ್ಲಿ ಕುಳಿತು ಬೆಡ್‌ರೂಮಿನೊಳಗೆ ಬಿಜಯಂಗೈದಿತು.

ಮೊದಲು ಕಂಡ ಕುರ್ಚಿಯೊಂದರ ತೋಳಿನ ಮೇಲೆ ಅದನ್ನಿಳಿಸಿದ ಪ್ರೊಫೆಸರರು ಮಲಗುವ ಮೊದಲ ಸಂಪ್ರದಾಯದಂತೆ ಬಾತ್‌ರೂಮಿಗೆ ಹೋಗಿಬಂದು ಒಂದು ಲೋಟ ನೀರು ಕುಡಿದು ದೀಪವಾರಿಸಿ ಹಾಸಿಗೆಯಲ್ಲುರುಳಿದರು.

ನಿದ್ದೆ ಬರಲಿಲ್ಲ.  ಬರುವುದಾದರೂ ಹೇಗೆ?  ಮೋಹಿನಿಯ ಕೆಂಪು ರವಿಕೆ ಮನದ ಉದ್ದಗಲಕ್ಕೂ ಫಡಫಡಿಸುತ್ತಿರುವಾಗ!  "ಏರುತಿಹುದು ಹಾರುತಿಹುದು ನೋಡು ನನ್ನ ಕುಪ್ಪಸ, ತೋರುತಿಹುದು ಹೊಡೆದು ಹೊಡೆದು ಮನಸಿನಗಲ ಧಸಭಸ..." ಎಂದು ಮೋಹಿನಿ ಹಾಡುತ್ತಾ ಕೆಣಕುತ್ತಿರುವಾಗ!

ಅದು ಯಾರದ್ದು, ಅದಿಲ್ಲಿಗೆ ಹೇಗೆ ಬಂತು ಎಂಬೆಲ್ಲಾ ಪ್ರಶ್ನೆಗಳು ಅರ್ಧತಾಸಿನಲ್ಲಿ ಅರ್ಥ ಕಳೆದುಕೊಂಡು, ಅದೆಷ್ಟು ಚಂದ ಇದೆ!  ಆ ನವುರು ನವುರು ವಸ್ತ್ರವನ್ನು ಸ್ಪರ್ಶಿಸುತ್ತಿದ್ದರೆ ಅದೆಷ್ಟು ರೋಮಾಂಚನ!- ಎಂಬಿತ್ಯಾದಿ ತೀರಾ ಎಡವಟ್ಟು ಆಲೋಚನೆಗಳು ಪ್ರೊಫೆಸರರ ಹಾಸಿಗೆಯಡಿಯಲ್ಲಿ ಮೊಳೆತು ಚಣದಲ್ಲಿ ಹೆಮ್ಮರವಾಗಿ ಬೆಳೆದು ನಿಂತು ಅವರನ್ನು ಹಾಸಿಗೆಯ ಸಮೇತ ಅನಾಮತ್ತಾಗಿ ಮೇಲೆತ್ತಿ ಆಕಾಶಕ್ಕೆ, ಗಂಧರ್ವಲೋಕದ ತೀರಾ ಸನಿಹಕ್ಕೆ ಕೊಂಡೊಯ್ದುಬಿಟ್ಟವು.  ಅದೆಷ್ಟು ಸನಿಹ ಅಂದರೆ ಗಂಧರ್ವರ ಮೈಮರೆಸುವ ಗಾಯನ, ವಾದ್ಯಮೇಳ, ಅವರ ಗೆಜ್ಜೆಗಳ ಉಲಿತ, ಅವರ ಮೋಹಕ ನಗೆ, ಪ್ರೇಮಲ ಪಿಸುಮಾತುಗಳು, ಕಾಮೋನ್ಮತ್ತ ಬಿಸಿಯುಸಿರುಗಳೆಲ್ಲವೂ ನಮ್ಮ ಪ್ರೊಫೆಸರರ ಕಿವಿಗೆ ಸ್ಪಷ್ಟವಾಗಿ ಕೇಳುವಷ್ಟು!

ಬಡಪಾಯಿ ಪ್ರೊಫೆಸರರು ದೇಶ ಕಾಲಗಳ ಪರಿವೆಯನ್ನು ಕಳೆದುಕೊಂಡುಬಿಟ್ಟರು.

ರವಿಕೆಯಾಗಿ ಕಾಡಿತ್ತು ಮಾಯೆ.

ವಾಸ್ತವಕ್ಕೆ ಬಂದಾಗ ಅವರು ಕಾಲುಗಳನ್ನು ಕೆಳಗೆ ಇಳಿಬಿಟ್ಟು ತಲೆಯನ್ನು ಮೇಲೆತ್ತಿ ಕಣ್ಣುಗಳನ್ನು ಮುಚ್ಚಿ ಧ್ಯಾನಸ್ಥರಾಗಿ ಮಂಚದ ಮೇಲೆ ಕುಳಿತಿದ್ದರು.  ಅವರ ಶರೀರಸ್ಪರ್ಶದ ಪುಣ್ಯ ಲಭಿಸಿದ್ದುದು ಎರಡೇ ವಸ್ತ್ರಗಳಿಗೆ.  ಒಂದು- ನಡುವಿನಲ್ಲಿದ್ದ, ಮೈಸೂರಿನ ಚಾಮುಂಡಿಪುರಂನ ಮಧ್ಯದ ಗಲ್ಲಿಯ ಮೂಲೆಯ ಮಾಡರ್ನ್ ಫ್ಯಾಷನ್ಸ್‌ನ, ಕಳೆದ ಇಪ್ಪತ್ತು ವರ್ಷಗಳಿಂದ ಪ್ರೊಫೆಸರರದ್ದು ಹೊಲಿಯಬೇಕಾದ್ದು ಏನೇನಿರುತ್ತವೆಯೋ ಅವೆಲ್ಲವನ್ನೂ ಹೊಲಿಯುತ್ತಾ ಬಂದಿರುವ ಟೈಲರ್ ಚಿಕ್ಕಣ್ಣ ಕಳೆದ ಯುಗಾದಿಯಲ್ಲಿ ಹೊಲಿದುಕೊಟ್ಟಿದ್ದ ಪಟ್ಟೆಪಟ್ಟೆ ಒಳಚಡ್ಡಿ.  ಎರಡು- ಎರಡೂ ಅಂಗೈಗಳು ಹಾಗೂ ಎದೆಯ ನಡುವೆ ಸಿಕ್ಕಿಹೋಗಿ ಉಸಿರು ಕಟ್ಟಿ ಚಡಪಡಿಸುತ್ತಿದ್ದ ಕೆಂಪು ರವಿಕೆ.  ಚಡ್ಡಿಯೇನೋ ಮಲಗುವ ಮೊದಲು ಲುಂಗಿ ಕಿತ್ತೆಸೆದು ಅದನ್ನೇರಿಸಿಕೊಂಡಾಗಿನಿಂದಲೂ ಅವರ ಮೈಮೇಲಿತ್ತು.

ರವಿಕೆ?

ಪ್ರೊಫೆಸರ್ ಸಾಹೇಬರು ಅದ್ಯಾವಾಗ ಹಾಸಿಗೆಯಿಂದೆದ್ದು ನಡೆದು ಬಾಲ್ಕನಿಯ ಬಾಗಿಲ ಪಕ್ಕದಲ್ಲಿದ್ದ ಕುರ್ಚಿಯ ತೋಳಿನಲ್ಲಿ ತನ್ನ ಪಾಡಿಗೆ ತಾನು ಸೊಂಪಾಗಿ ನಿದ್ರಿಸುತ್ತಿದ್ದ ರವಿಕೆಯನ್ನೆಬ್ಬಿಸಿ ತಮ್ಮ ಎದೆಗೊತ್ತಿಕೊಂಡರೋ ನನಗೆ ಗೊತ್ತಿಲ್ಲ.  ಬಹುಷಃ ಈ ಚಮತ್ಕಾರಕ್ಕೆ ಏಕೈಕ ಸಾಕ್ಷಿ ಎಲ್ಲವನ್ನೂ ತೆರೆದ ಕಿಟಕಿಯ ಮೂಲಕ ಇಣುಕಿ ನೋಡುತ್ತಿದ್ದ ಆ ಬಾಲ್ಕನಿ.  ಆದರದು ನನಗದನ್ನು ಹೇಳುತ್ತಿಲ್ಲ.  ಸುಮ್ಮನೆ ಮುಸಿಮುಸಿ ನಗುತ್ತದೆ, ಕಿಲಾಡಿ ಹೆಣ್ಣಿನಂತೆ.  ಆ ನೀರವ ರಾತ್ರಿಯ ಆ ನಿರ್ಣಾಯಕ ಗಳಿಗೆಯಲ್ಲಿ ಅದೇನು ನಡೆಯಿತೆಂದು ನನಗೆ ತಿಳಿಯಬೇಕಾದರೆ ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಈ ಊರಿನಿಂದ ಎತ್ತಂಗಡಿಯಾಗಿ ಆ ಮನೆಗೆ ನಾನು ಬಾಡಿಗೆದಾರನಾಗಿ ಹೋಗಿ ಬಾಲ್ಕನಿಯೊಡನೆ ಸಾಕಷ್ಟು ಆತ್ಮೀಯತೆ ಬೆಳೆಸಿಕೊಂಡರೆ ಮಾತ್ರ.  ನನಗೂ ಮೊದಲೇ ನಿಮ್ಮಲ್ಲೊಬ್ಬರು ಆ ಮನೆ ಸೇರಿಕೊಂಡು ಬಾಲ್ಕನಿಯ ವಿಶ್ವಾಸ ಗಳಿಸಿಕೊಂಡುಬಿಟ್ಟರೆ ಅದರಿಂದ ವಿಷಯ ತಿಳಿದು ನನಗೆ ಹೇಳಿ.

ಪ್ರೊಫೆಸರರು ಕಣ್ಣು ತೆರೆದರು.  ತಲೆಯನ್ನು ತುಸು ಕೆಳಗೆ ತಂದು ರವಿಕೆಯನ್ನು ನಸು ಮೇಲೆತ್ತಿ ಮೂಗಿಗೆ ಹಿಡಿದರು.  ಮೂಗು ಸಹಿತವಾಗಿ ಇಡೀ ಮುಖಕ್ಕೆ ರವಿಕೆಯನ್ನು ಒತ್ತಿ, ಕಳೆದ ಹತ್ತು-ಹನ್ನೆರಡು ನಿಮಿಷಗಳಲ್ಲಿ ಅಷ್ಟೇ ಬಾರಿ ಮಾಡಿದ್ದಂತೆ ಮತ್ತೊಮ್ಮೆ ಧೀರ್ಘವಾಗಿ ಉಸಿರೆಳೆದುಕೊಂಡರು.  ಸ್ವಚ್ಛವಾಗಿ ಒಗೆಯಲ್ಪಟ್ಟು ತನ್ನೊಡತಿಯ ಬೆವರನ್ನೆಲ್ಲಾ ಕಳೆದುಕೊಂಡು ನಿಸ್ಸಾರವಾಗಿದ್ದ ಆ ರವಿಕೆಯಲ್ಲಿ ಯಾವುಯಾವುದೋ ವಾಸನೆಯನ್ನರಸಿ, ಅದು ಸಿಕ್ಕೇಬಿಟ್ಟಿತು ಎಂದು ಭ್ರಮಿಸಿ ಪ್ರೊಫೆಸರರು ಮತ್ತೆ ಮತ್ತೆ ಆಘ್ರಾಣಿಸಿದರು...

ಆ ಮೋಹಿನಿಯ ಕೆಂಪು ಅರಿವೆಯನ್ನು ಎದೆಗೊಮ್ಮೆ ಮೂಗಿಗೊಮ್ಮೆ ಒತ್ತಿಕೊಳ್ಳುತ್ತಾ, ಇದುವರೆಗೆ ಸುತ್ತಲಿನ ಕಟ್ಟಡಗಳ ಕಿಟಕಿಗಳಲ್ಲಿ ಇಣುಕಿ ಮರೆಯಾಗಿದ್ದ, ಬಾಲ್ಕನಿಗಳಲ್ಲಿ ಇಡಿಯಾಗಿ ಅನಾವರಣಗೊಂಡಿದ್ದ ಲಲನೆಯರನ್ನೆಲ್ಲಾ ಒಬ್ಬೊಬ್ಬರಾಗಿ ನೆನೆಯುತ್ತಾ, ಒಬ್ಬೊಬ್ಬರಿಗೂ ರವಿಕೆಯನ್ನು ತೊಡಿಸುತ್ತಾ ಬಿಚ್ಚುತ್ತಾ ಮತ್ತೆ ತೊ...ಡಿ...ಸು...ತ್ತಾ... ಮತ್ತೆ ಬಿ...ಚ್ಚು...ತ್ತಾ... ಪ್ರೊಫೆಸರರು ರಾತ್ರಿಯ ಬಹುಭಾಗವನ್ನು ಕಳೆದುಬಿಟ್ಟರು.  ಬೆಳಗಾಗುವ ಹೊತ್ತಿಗೆ ಆ ಕೆಂಪು ರವಿಕೆ ಅವರಿಗೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಿಯವಾದ ವಸ್ತುವಾಗಿಬಿಟ್ಟಿತ್ತು.

ತೆಂಕಣ ಗಾಳಿ ಆ ಕೆಂಪು ರವಿಕೆಯನ್ನು ತಂದು ಬಾಲ್ಕನಿಯಲ್ಲಿ ಹಾಕಿಹೋದ ಗಳಿಗೆಯಿಂದ ಪ್ರೊಫೆಸರ್ ನಾಗೇಂದ್ರಸ್ವಾಮಿಯವರ ಬದುಕುಬಯಕೆಗಳು ಸಂಪೂರ್ಣವಾಗಿ ಬದಲಾಗಿಹೋದವು ಎಂದು ನಾನು ಮೊದಲೇ ಹೇಳಿರಲಿಲ್ಲವೇ?

ಕೆಲಸದವಳು ಬಂದಳು, ಹೋದಳು.  ಕೆಂಪುರವಿಕೆಯ ಬಗ್ಗೆ, ಅದರ ನಿಜವಾದ ಒಡತಿಯನ್ನು ಹುಡುಕಿ ಅದನ್ನವಳಿಗೆ ಒಪ್ಪಿಸುವ ಬಗ್ಗೆ ಪ್ರೊಫೆಸರರು ಅವಳಿಗೆ ಏನೂ ಹೇಳಲಿಲ್ಲ.  ಬದಲಾಗಿ ಅವಳು ಕಂಡುಬಿಡುತ್ತಾಳೇನೋ ಎಂದು ಹೆದರಿ ರವಿಕೆಯನ್ನು ಬೀರುವಿನಲ್ಲಿ ಅವಿಸಿಟ್ಟರು.  ಅವಳೇನಾದರೂ ಅಕಸ್ಮಾತ್ತಾಗಿ ಬೀರು ತೆರೆದುಬಿಟ್ಟರೆ...?- ಎಂಬ ಆತಂಕ ಮೂಡಿ ಅದನ್ನೆತ್ತಿ ಸೂಟ್‌ಕೇಸಿನೊಳಗಿಟ್ಟು ಬೀಗ ಹಾಕಿ ಬೀಗದ ಕೈಯನ್ನು ಒಳಚಡ್ಡಿಯ ಜೇಬಿನೊಳಗೆ ಭದ್ರವಾಗಿಟ್ಟುಕೊಂಡರು.

ಇಡೀ ದಿನ ಅವರು ಅವರಾಗಿರಲಿಲ್ಲ.  ರಸ್ತೆಯಲ್ಲಿ ನಡೆಯುವಾಗ ಕೆಂಪುರವಿಕೆಯನ್ನರಸಿ ಕಣ್ಣುಗಳು ಚಂಚಲವಾಗಿ ಸುತ್ತುತ್ತಿದ್ದವು.  ತರಗತಿಯಲ್ಲಿ ಪಾಠಗಳನ್ನು ಸರಿಯಾಗಿ ಮಾಡಲಾಗಲಿಲ್ಲ.  ಕೆಂಪು ರವಿಕೆ ಬಾರಿಬಾರಿಗೆ ಕಣ್ಣಮುಂದೆ ಸುಳಿದು ನವಿರಾಗಿ ಉದ್ರೇಕಗೋಳ್ಳುತ್ತಿದ್ದರು.  ಅವರ ದುರಾದೃಷ್ಟಕ್ಕೆ ವಿದ್ಯಾರ್ಥಿನಿಯೊಬ್ಬಳು ಅಂದು ಕೆಂಪು ಸೀರೆ ರವಿಕೆಯಲ್ಲಿದ್ದಳು.  ಪ್ರೊಫೆಸರರಿಗೆ ಪದೇಪದೇ ಅವಳತ್ತಲೇ ನೋಡುವಂತಾಗುತ್ತಿತ್ತು.  "ಎಲೇ ಕೆಂಪು ತಾರೇ, ನನ್ ಮನೇ ತನ್ಕ ಬಾರೇ..." ಎಂದು ಬೆಳ್ಳಂಬೆಳಗ್ಗೇ ಹುಡುಗರಿಂದ ಚುಡಾಯಿಸಿಕೊಂಡು ನಾಚಿ ಮೊಗ್ಗಾಗಿಹೋಗಿದ್ದ ಆ ಚೆಲುವೆ ಪ್ರೊಫೆಸರರ ನೋಟ ಪದೇಪದೇ ತನ್ನತ್ತಲೇ ಹರಿಯುತ್ತಿರುವುದನ್ನು ಕಂಡು ಮತ್ತಷ್ಟು ಮುದುರಿಹೋಗಿದ್ದಳು.  ಒಂದೆರಡು ಸಲ ಪ್ರೊಫೆಸರರೂ ಪಾಠದ ನಡುವೆ ಆ ಹಾಡು ಹೇಳಿದಂತೆನಿಸಿ ತೊಟ್ಟ ಸೀರೆರವಿಕೆಗಿಂತಲೂ ಕೆಂಪುಕೆಂಪಾಗಿಹೋದಳು.  ಪ್ರೊಫೆಸರರ ಕಣ್ಣುಗಳು ಬೇರೆಡೆಗಿದ್ದಾಗ ಅವರತ್ತ ಕಳ್ಳನೋಟ ಬೀರಿದಳು.

ದಿನವಿಡೀ ಕೆಂಪು ರವಿಕೆ ಪ್ರೊಫೆಸರರನ್ನು ಅದೆಷ್ಟು ಕಾಡಿಸಿಬಿಟ್ಟಿತೆಂದರೆ ಸಂಜೆಯ ಹೊತ್ತಿಗೆ ಅವರು ತಮಗೆ ತಾವೇ "ಥತ್ ಇದೇನಿದು ಈ ರವಿಕೆ ನನ್ನನ್ನಿಷ್ಟು ಕಾಡಿಸುತ್ತಿದೆ!" ಅಂದುಕೊಂಡರು.  ಕೆಲಸದವಳಿಗೊಪ್ಪಿಸಿ ಅದಕ್ಕೊಂದು ಗತಿ ಕಾಣಿಸು ಅಂದುಬಿಡಬೇಕು, ಅಥವಾ ಆ ಹಾಳಾದ್ದನ್ನೆತ್ತಿ ಹೊರಗೆಸೆದುಬಿಡಬೇಕು ಎಂದೂ ಅವರಿಗೆ ಅನಿಸಿಬಿಟ್ಟಿತು.

ಮನೆಗೆ ಬಂದವರು ಮತ್ತೆ ಮತ್ತೆ ಕೈ ಬೀಸಿ ಕರೆದ ರವಿಕೆಯತ್ತ ಮುಖ ತಿರುಗಿಸಿಕೊಂಡು ಸಂಜೆಯ ಸಂಗಾತಿ ಬಾಲ್ಕನಿಯ ಜತೆ ಹೆಚ್ಚು ಹೊತ್ತು ಕಳೆದರು.  ಆದರವರು ಅನ್ಯಮನಸ್ಕರಾಗಿದ್ದಂತೆ ಬಾಲ್ಕನಿಗನಿಸಿತು.  ಕಾಫಿ ಕುಡಿಯುವಾಗ ಅವರು ಕಣ್ಣುಗಳನ್ನು ಅರೆಮುಚ್ಚುವುದು, ಕುಡಿದು ಮಾತಿಗಾರಂಭಿಸಿದಾಗ ಹೇಳುತ್ತಿದ್ದ ವಿಷಯವನ್ನು ಥಟಕ್ಕನೆ ಮರೆತುಬಿಟ್ಟು ತಲೆ ಮೇಲೆತ್ತಿ ಕೆಳತುಟಿ ಜೋಲಿಸಿ ಕಣ್ಣರೆಪ್ಪೆಗಳನ್ನು ಅರೆಮುಚ್ಚಿಬಿಡುತ್ತಿದ್ದುದು ಯಾಕೆಂದು ಅದು ನೆಮ್ಮದಿಗೆಟ್ಟು ಯೋಚಿಸಿತು.  ಮಕ್ಕಳಿಗೇನಾದರೂ ಹುಷಾರಿಲ್ಲ ಎಂದು ಹೆಂಡತಿಯಿಂದ ಫೋನೇನಾದರೂ ಬಂದಿರಬಹುದೇನೋ ಅಂದುಕೊಂಡಿತು.  ಪ್ರೊಫೆಸರರ ಬಗ್ಗೆ ಮರುಕಪಟ್ಟಿತು.

ಮಾರನೆಯ ಬೆಳಿಗ್ಗೆ ಎದ್ದಾಗ ಪ್ರೊಫೆಸರರು ಅನ್ಯಮನಸ್ಕರಾಗಿಯೇ ಇದ್ದರು.  ನಿದ್ದೆಯಲ್ಲಿ ಮತ್ತೆ ಮತ್ತೆ ಕಾಡಿದ್ದ ರವಿಕೆ ಈಗ ಅವರ ಇಡೀ ಮನಸ್ಸನ್ನಾವರಿಸಿಕೊಂಡುಬಿಟ್ಟಿತ್ತು.  ಕುಣಿದು ಕೆಣಕಿ ಸೋತ ಅದು ಕೊನೆಗೆ ಅಪ್ಪಟ ಭಾರತೀಯ ನಾರಿಯಂತೆ ಸೋತು ಶರಣಾಗತವಾಗಿ ತನ್ನ ಮುಂದೆ ಸೆರಗೊಡ್ಡಿ ಕಣ್ಣೀರುಗರೆದರೂ ಇಡೀ ರಾತ್ರಿ ತಾನದನ್ನು ಒಮ್ಮೆಯೂ ಮುಟ್ಟದೆಹೋದದ್ದು ತಪ್ಪೆನಿಸತೊಡಗಿ ಪಶ್ಛಾತ್ತಾಪಾಗ್ನಿ ಅವರನ್ನು ದಹಿಸತೊಡಗಿತು.  ಜತೆಗೇ ಕೈಗೆ ದಕ್ಕಿರುವ ರೋಮಾಂಚನವನ್ನು ಹೀಗೆ ಕಾಲಕಸದಂತೆ ಕಂಡ ತಾನೊಬ್ಬ ಕಡುಮೂರ್ಖ ಎಂದೂ ತಮ್ಮ ಬಗ್ಗೇ ಬೇಸರ ಪಟ್ಟುಕೊಂಡರು.  ಆದರೆ ಯಾವುದೇ ತಪ್ಪನ್ನು ಸರಿಪಡಿಸಿಕೊಳ್ಳಲು ಅದು ಸಮಯವಾಗಿರಲಿಲ್ಲ.  ಕೆಲಸದಾಕೆ ಬಂದಿದ್ದಳು.

ಸಮಯದೊಡನೆ ರಾಜಿ ಮಾಡಿಕೊಂಡ ಪ್ರೊಫೆಸರರು ಪ್ರಾತರ್ವಿಧಿಗಳತ್ತ ಗಮನ ಕೊಟ್ಟರು.  ಅವರು ಸ್ನಾನದ ಮನೆಯಿಂದ ಹೊರಬರುವ ಹೊತ್ತಿಗೆ ಕೆಲಸದಾಕೆ ಖಾಲೀ ಕಸದ ಬುಟ್ಟಿ ಹಿಡಿದು ಮನೆಯೊಳಗೆ ಬರುತ್ತಿದ್ದಳು.  ಅವರನ್ನು ನೋಡಿ ಏನೋ ಹೇಳಲೆಂಬಂತೆ ನಿಂತಳು.  ಪ್ರೊಫೆಸರರೂ ನಿಂತು `ಏನು?' ಎಂಬಂತೆ ಕಣ್ಣರಳಿಸಿದಾಗ ಹೇಳಿದಳು:

"ಮೇಲಿನ ಮನೆಯ ಅಕ್ಕ ಮೊನ್ನೆ ಬಾಲ್ಕನಿಯಲ್ಲಿ ಒಣಗಲು ಹಾಕಿದ್ದ ರವಿಕೆ ಗಾಳಿಯಲ್ಲಿ ಎಲ್ಲೋ ಹಾರಿಹೋಗಿದೆಯಂತೆ.  ನಿಮ್ಮ ಬಾಲ್ಕನಿಗೇನಾದರೂ ಬಂದು ಬಿದ್ದಿದೆಯಾ ನೋಡಿ ಇದ್ದರೆ ತಂದುಕೊಡು ಅಂತ ಹೇಳಿದರು."

ಪ್ರೊಫೆಸರರ ಎದೆಗೆ ಸಿಡಿಲೆರಗಿದಂತಾಯಿತು.

ಮೋಹಿನಿ ಅಂದರೆ ಮೇಲಿನ ಮನೆಯ ಮೂವತ್ತರ ಅಸುಪಾಸಿನ ದಢೂತಿ ಬಾಣಂತಿ!  ತನ್ನ ಮನಸ್ಸು ಕದ್ದ ಕೆಂಪು ರವಿಕೆ ಅವಳದು!

ಕೆಲಸದಾಕೆ ಹೇಳುತ್ತಲೇ ಇದ್ದಳು: "...ಕೆಂಪು ಬಣ್ಣದ್ದಂತೆ.  ಬಿಳೀ ಚುಕ್ಕಿ ಇವೆಯಂತೆ.  ಅಂಚಿನಲ್ಲಿ ಎಂಬ್ರಾಯ್ಡರಿ ಇದೆಯಂತೆ.  ಹೊಸದಂತೆ.  ಒಂದೇ ಸಲ ಅಂತೆ ನೀರಿಗೆ ಹಾಕಿದ್ದು.  ಎಲ್ಲೋಯ್ತೋ ಅಂತ ಪೇಚಾಡ್ತಿದಾರೆ..."

ಪ್ರೊಫೆಸರರಿಗೆ ಉಸಿರು ಸಿಕ್ಕಿಕೊಂಡಿತು.  ಮನದಲ್ಲಿ ಕೋಲಾಹಲ.

"...ಅಂಥಾದ್ದೇನೂ ಕಂಡಹಾಗೆ ಇಲ್ಲ ಅಂತ ಹೇಳ್ದೆ.  `ಇನ್ನೊಂದ್ಸಲ ನೋಡು' ಅಂದ್ರು."  ಹೇಳುತ್ತಾ ಕೆಲಸದಾಕೆ ಬಾಲ್ಕನಿಯತ್ತ ನಡೆದಳು.  ಪ್ರೊಫೆಸರರಿಗೆ ಉಸಿರು ತೆಗೆದುಕೊಳ್ಳುವುದಕ್ಕೆ ಅವಕಾಶವಾಯಿತು.  ಅವರ ಮನಸ್ಸು ಮಿಂಚಿನಂತೆ ಯೋಚಿಸಿತು...

ಯಾವುದಕ್ಕೂ ಮುಹೂರ್ತವಿರಬೇಕು.  ಕಾಣೆಯಾದ ತನ್ನ ರವಿಕೆಯ ಬಗ್ಗೆ ಕಾಳಜಿ ದಢೂತಿ ಬಾಣಂತಿಗೆ ನಿನ್ನೆಯೇ ಮೂಡಿರಬೇಕಾಗಿತ್ತು.  ಅದರಲ್ಲೂ ನಿನ್ನೆ ಸಂಜೆ ಅತ್ಯಂತ ಪ್ರಶಸ್ತ ಸಮಯವಾಗಿತ್ತು.  ಸಂಜೆ ಆರರಿಂದ ರಾತ್ರಿ ಎಂಟೂವರೆಯ ಒಳಗಿನ ಶುಭಮುಹೂರ್ತದಲ್ಲಿ ಅವಳೇನಾದರೂ ತನ್ನ ರವಿಕೆಯ ಬಗ್ಗೆ ಪ್ರೊಫೆಸರರನ್ನು ಕೇಳಿದ್ದರೆ... ತಾನು ನೇರವಾಗಿ ಕೇಳಲಾಗದಿದ್ದರೆ ಬೇರಾರ ಮೂಲಕವೋ, ಕೊನೇಪಕ್ಷ ಒಂದು ಹದ್ದಿನ ಕೈಲಿ ಸುದ್ಧಿ ಕೊಟ್ಟು ಕಳಿಸಿದ್ದರೂ ಆಗುತ್ತಿತ್ತು.  ಆ ಗಳಿಗೆಯಲ್ಲಿ ರವಿಕೆಯ ವ್ಯಾಮೋಹದಿಂದ ಕಳಚಿಕೊಳ್ಳುವ ದಾರಿ ಹುಡುಕುತ್ತಿದ್ದ ಪ್ರೊಫೆಸರರು ಸಂತೋಷದಿಂದ ಅದನ್ನು ಮನೆ ದಾಟಿಸಿಬಿಡುತ್ತಿದ್ದರು.

ಯುಗಕ್ಕೊಮ್ಮೆ ಬರುವ ಆ ಮುಹೂರ್ತ ಸರಿದುಹೋಗಿತ್ತು.

"ಅಲ್ಲೇನೂ ಇಲ್ಲ.  ಇದ್ದಿದ್ರೆ ನಿನ್ನೇನೇ ನನ್ನ ಕಣ್ಣಿಗೆ ಬೀಳ್ತಾ ಇತ್ತು."  ಕೆಲಸದಾಕೆ ಗೊಣಗಿಕೊಳ್ಳುತ್ತಾ ಒಳಬರುತ್ತಿದ್ದಂತೇ ಪ್ರೊಫೆಸರರು ಅವಳ ಮುಂದೆ ಸುಳಿದರು.  "ಅದೆಲ್ಲಿ ಹಾರಿಹೋಯ್ತೋ.  ನಮ್ಮ ಬಾಲ್ಕನಿಗಂತೂ ಬಂದು ಬಿದ್ದಿಲ್ಲ.  ಹಾಗಂತ ಹೇಳಿಬಿಡು."  ಸ್ಪಷ್ಟವಾಗಿ ಹೇಳಿದರು.  "ಹ್ಞೂ ಅಷ್ಟೇಯೆ.  ಹೋಗೋವಾಗ ಹೇಳಿಹೋಗ್ತೀನಿ ಬಿಡಿ" ಎಂದು ನಿರಾಸಕ್ತಿಯಿಂದ ಉತ್ತರಿಸಿ ಕೆಲಸದಾಕೆ ಅಡಿಗೆ ಮನೆಯತ್ತ ನಡೆದಳು.

ಆ ಬೆಳಿಗ್ಗೆ "ಕೌಸಲ್ಯಾ ಸುಪ್ರಜಾ..." ಜತೆ "ಅನಿಸುತಿದೆ ಯಾಕೋ ಇಂದು...", "ಗಂಡೂ ಎಂದರೆ ಗಂಡೂ... ಬಹದ್ದೂರ್ ಗಂಡು..."ಗಳೂ ಸೇರಿಕೊಂಡವು.  ಅಷ್ಟೇ ಅಲ್ಲ, ಪ್ರೊಫೆಸರರ ಗಂಟಲಿನಲ್ಲಿ ಹೊಚ್ಚ ಹೊಸಾ ಬ್ಯಾಟರಿ ಜೋಡಿಸಿದಂತೆ ದನಿ ಢಣಢಣಿಸುತ್ತಿತ್ತು.

ಕೆಲಸದಾಕೆ ಹೊರಟುಹೋದಳು.  ಬಾಲ್ಕನಿಯನ್ನು ಬಿಸಿಲಲ್ಲಿ ಮಲಗಿಸಿ ಪ್ರೊಫೆಸರರೂ ಕಾಲೇಜಿಗೆ ನಡೆದರು.  ಆದರೇಕೋ ಆ ದಿನ ನಿನ್ನೆಯಂತೆಯೇ ಅವರನ್ನು ಹಿಂದುಮುಂದಕ್ಕೆ, ಎಡಬಲಕ್ಕೆ ಎಳೆದಾಡಿ ಹಣ್ಣು ಮಾಡಿತು.  ಸಂಜೆ ಮನೆಗೆ ಹಿಂತಿರುಗಿದಾಗ ಅವರ ಮನಸ್ಸಿನಲ್ಲಿ ರವಿಕೆಯ ಬಗ್ಗೆ ಗೋಜಲುಗೋಜಲು ಚಿಂತನೆಗಳಿದ್ದವು.  "ಮನೆ ಬಿಟ್ಟು ನಡೆ.  ಇನ್ನು ನಂಗೂ ನಿಂಗೂ ಯಾವ ಸಂಬಂಧಾನೂ ಇಲ್ಲ" ಎಂದು ನಿರ್ದಾಕ್ಷಿಣ್ಯವಾಗಿ ಒದರಿ ರವಿಕೆಯನ್ನು ಹೊರತಳ್ಳಿ ಬಾಗಿಲು ಹಾಕಿಕೊಳ್ಳಲೂ ಆಗದೇ, ಅದನ್ನು ಬರಸೆಳೆದು ಎದೆಗೊತ್ತಿಕೊಂಡು ಅಪ್ಪಿ ಮುದ್ದಾಡಲೂ ಆಗದೇ ತೊಳಲಿದರು.  ರವಿಕೆಯಿದ್ದ ಸೂಟ್‌ಕೇಸಿನ ಹತ್ತಿರ ಹೋಗದಷ್ಟು ಸಂಯಮವನ್ನು ಕೂಡಿಸಿಕೊಳ್ಳುವುದಕ್ಕೆ ಸಾಧ್ಯವಾದುದಕ್ಕಾಗಿ ಚೂರು ಹಗುರಾದರು.  ಬಾಲ್ಕನಿಯ ಜತೆ ಹೆಚ್ಚೇನೂ ಮಾತಾಡಲಿಲ್ಲ.  ಅವರು ಮಾತಾಡಿದ್ದೇನೂ ಸರಿಯಾಗಿ ಅರ್ಥವಾಗದೇ "ಸಧ್ಯ ಈ ಮನುಷ್ಯ ಸುಮ್ಮನೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕುಳಿತರೇ ವಾಸಿ" ಅಂದುಕೊಂಡಿತು ಬಾಲ್ಕನಿ.  ತೆಂಕಣ ಗಾಳಿ ಮಾತ್ರ ಪುಟ್ಟ ಪೊಮೆರಾನಿಯನ್ ನಾಯಿಮರಿಯಾಗಿ ಅವರ ಮೈಮೇಲೆ ಹತ್ತಿ ಕುಣಿಯಿತು.

ಊಟದ ಶಾಸ್ತ್ರವೂ ಮುಗಿದು ಇನ್ನು ಆ ದಿನ ಮಾಡಲು ಬೇರೇನೂ ಕೆಲಸ ಉಳಿದಿಲ್ಲದಂಥ ಪರಿಸ್ಥಿತಿ ಸೃಷ್ಟಿಯಾಗಿ ಹಾಸಿಗೆಯೇ ಗತಿ ಎನಿಸುತ್ತಿದ್ದಂತೇ ಅದೇ ಅವಕಾಶಕ್ಕಾಗಿ ಕಾಯುತ್ತಿದ್ದ ಮೋಹಿನಿಯ ರವಿಕೆ ಧುತ್ತನೆ ಮೇಲೆದ್ದು ಬಂದು ಕೆಣಕುತ್ತಾ ಕರೆಯುತ್ತಾ ಅವರ ಮನಸ್ಸಿನಾಗಸದಲ್ಲಿ ಕುಣಿದು ಕುಪ್ಪಳಿಸತೊಡಗಿತು.  ಪ್ರೊಫೆಸರ್ ಸಾಹೇಬರು ಸಂಜೆಯಿಂದಾ ಬಲವಂತವಾಗಿ ಕೂಡಿಸಿಟ್ಟುಕೊಂಡಿದ್ದ ಸಂಯಮದ ಕಂತೆಯೆಲ್ಲವೂ ಬೊಂತೆಯಾಗಿ ಹಿಂಜಿಹೋಗಿ, ಮೋಹಿನಿಯೀಗ ಬಾಣಂತಿಯಾಗಿದ್ದಾಳೆ ಎಂಬ ಹಸೀ ಹಸೀ ವಾಸನೆಯೂ ಅದೆತ್ತಲೋ ಹಾರಿಹೋಗಿ ಕೆಂಪುರವಿಕೆ ಅವರ ಎದೆಗೇರಿಬಿಟ್ಟಿತು.  ಏರಿ ಅವರನ್ನು ತನ್ನಿಚ್ಚೆಯಂತೆ ಕಿರುಬೆರಳಿನಲ್ಲಿ ಆಡಿಸತೊಡಗಿತು.

ಮುಟ್ಟಿ ಮೂಸಿ ನೋಡುವುದೆಲ್ಲವೂ ಹಳೆಯದಾಗಿ ಈವತ್ತು ಪ್ರೊಫೆಸರರು ಹೊಸ ಸಾಹಸಕ್ಕಿಳಿದರು.  ರವಿಕೆಯನ್ನು ಹಾಸಿಗೆಯ ಮೇಲೆ ಅಗಲವಾಗಿ ಹರಡಿದರು.  ಮೇಲೆತ್ತಿ ತಮ್ಮ ಎಡಗೈಯನ್ನು ಮೆಲ್ಲಗೆ... ಬಲು ಮೆಲ್ಲಗೆ ಅದರ ಎಡತೋಳಿನೊಳಗೆ ನುಗ್ಗಿಸಿದರು.  ಮೊಳಕೈವರೆಗೆ ಸಲೀಸಾಗಿ ಹೋದ ಅದು ನಂತರ ಕೊಸರಾಡತೊಡಗಿತು.  ಆದರೆ ಪ್ರೊಫೆಸರರು ಬಿಡಬೇಕಲ್ಲ?  ಅರೆಪ್ರವೇಶ ಹುಟ್ಟಿಸಿದ್ದ ಉತ್ಸಾಹ, ಉಮೇದು, ಬಯಕೆಗಳಲ್ಲಿ ಅವರು ಉನ್ಮತ್ತರಾಗಿದ್ದರು...  ಬಲಗೈಯೂ ತನ್ನ ಗುರಿಯನ್ನರಸಿ ಮುನ್ನುಗ್ಗಿತು.  ಎರಡು ಕ್ಷಣಗಳಲ್ಲಿ ರವಿಕೆ ಪ್ರೊಫೆಸರರ ಮೈಮೇಲಿತ್ತು.

ನಾಗೇಂದ್ರಸ್ವಾಮಿಯವರ ಮೈ ಅರೆಕ್ಷಣ ಜುಮ್ಮೆಂದಿತು.  ನವಿರಾಗಿ ಹಿತವಾಗಿ ಬೆವರಿತು.  ಕಂಕುಳಿನ ಬಳಿ ಹಿಡಿದುಕೊಂಡಂತೆನಿಸಿದರೂ ಆ ಬಿಗಿತವೇ ಹಿತವಾದ ಯಾತನೆಯಾಗಿ ಸುಖವೇದನೆಯಾಗಿ ಕೆಂಪು ರವಿಕೆಯ ಆಕರ್ಷಣೆಯ ರೋಮಾಂಚಕತೆ ಉತ್ತುಂಗಕ್ಕೇರಿತು.  ಗಡಿಯಾರದ ಮುಳ್ಳುಗಳು ಅತಿವೇಗದಲ್ಲಿ ಮುಂದೆ ಸಾಗಿದವು.

ಪ್ರೊಫೆಸರರು ನೆಟ್ಟಗೆ ನಿಂತಂತೇ ಕತ್ತನ್ನು ಕೆಳಗೆ ಬಾಗಿಸಿ ರವಿಕೆಯ ಹುಕ್ಕುಗಳನ್ನು ಎರಡೂ ಕಣ್ಣುಗಳಲ್ಲಿ ತುಂಬಿಕೊಂಡರು.  ಮೇಲಿನ ಹುಕ್ಕನ್ನು ಹಿಡಿದೆಳೆದು ಸಿಕ್ಕಿಸಿದರು.  ಅದು ಅವರ ಮಾತನ್ನು ವಿಧೇಯ ಹೆಣ್ಣಿನಂತೆ ಕೇಳಿತು.  ಎರಡನೆಯದೂ ತಕರಾರು ತೆಗೆಯಲಿಲ್ಲ.  ಆದರೆ ಮೂರನೆಯದು ಮಾತ್ರ ಅರ್ಧ ದಾರಿಯವರೆಗೆ ಬಂದು ಇನ್ನು ಮುಂದೆ ಒಂದು ಹೆಜ್ಜೆಯೂ ಇಡಲಾರೆ ಎಂದು ಚಂಡಿಯಂತೆ ಮೊಂಡಾಟ ಮಾಡುತ್ತಾ ನಿಂತುಬಿಟ್ಟಿತು.  ಅದನ್ನು ಬಿಟ್ಟು ನಾಲ್ಕನೆಯ ಹುಕ್ಕಿಗೆ ಕೈ ಹಾಕಿದರೆ ಅದಂತೂ "ಈ ರಾತ್ರಿ ಬೇಡ, ಪ್ಲೀಸ್" ಎಂದು ಗೋಗರೆಯುತ್ತಾ ರವಿಕೆಯಂಚಿನ ಮಂದ ಮೂಲೆಯಲ್ಲಿ ಮುದುರಿ ಕೊಸರಾಡಿತು.  ಅವೆರಡನ್ನೂ ಅನುನಯಿಸಿ ಸೋತ ಪ್ರೊಫೆಸರರು ವಿಧಿಯಿಲ್ಲದೇ ಆ ದಾರಿ ತೊರೆದರು.  ರೋಮಾಂಚನದ ಶಿಖರವನ್ನು ಹಾರಿ ಹಾರಿ ಏರಲು ಬೇರೆ ದಾರಿ ಹುಡುಕಿದರು.

ನವುರು ನವುರು ಸ್ಪರ್ಶಕ್ಕಾಗಿ ಇಡೀ ದೇಹ ಕಾತರಿಸುತ್ತಿತ್ತು.

ಅಲಮಾರಿಯ ಬಾಗಿಲು ತೆರೆದು ಎರಡು ವಾರಗಳ ಹಿಂದೆ ಮಕ್ಕಳೊಡನೆ ಬಂದಿದ್ದ ಹೆಂಡತಿ ಉಟ್ಟು ಬಿಚ್ಚಿಟ್ಟು `ಇಲ್ಲೇ ಇರಲಿ, ಮುಂದಿನ ಸಲ ಬಂದಾಗ ಉಟ್ಟುಕೊಳ್ಳೋದಕ್ಕೆ' ಎಂದು ಹೇಳಿ ಹೋಗಿದ್ದ, ಕೆಲಸದಾಕೆ ಒಗೆದು ಒಣಗಿಸಿ ನೀಟಾಗಿ ಮಡಿಸಿಟ್ಟಿದ್ದ ಹಚ್ಚಹಸಿರು ಸೀರೆ ರವಿಕೆ ಲಂಗಗಳನ್ನು ಹೊರತೆಗೆದರು.  ಹಸಿರು ರವಿಕೆಯಿಂದ ಈಗ ಯಾವ ಉಪಯೋಗವೂ ಇಲ್ಲದ್ದರಿಂದ ಅದನ್ನು ಅಲಮಾರಿಯೊಳಗೇ ಎಸೆದು ಲಂಗವನ್ನು ಕೈಗೆತ್ತಿಕೊಂಡರು.  ನಡುವಿನಲ್ಲಿ ತೂಕಡಿಸುತ್ತಿದ್ದ ಪಟ್ಟೆಪಟ್ಟೆ ಒಳಚಡ್ಡಿಯ ಲಾಡಿಯನ್ನು ಸರ್ರನೆ ಸೆಳೆದುಹಾಕಿದರು.  ಇದ್ದಕ್ಕಿದ್ದಂತೆ ಆಸರೆ ತಪ್ಪಿ ಕಂಗೆಟ್ಟುಹೋದ ಅದು ಕುಸಿದು ಕೆಳಗುರುಳಿ "ಸ್ವಾಮೀ ನಿನ್ನ ಪಾದವೇ ಗತಿ" ಎನ್ನುತ್ತಾ ಪ್ರೊಫೆಸರರ ಪಾದಗಳನ್ನು ಅವಚಿ ದಯನೀಯವಾಗಿ ಬಿದ್ದುಕೊಂಡಿತು.  ಕಿಂಚಿತ್ತೂ ಕರುಣೆ ತೋರದೆ ಪ್ರೊಫೆಸರರು ಅದನ್ನು ಎಡಗಾಲಿಂದ ಒದ್ದು ದೂರತಳ್ಳಿ ಅದೇ ಕಾಲನ್ನು ಆತುರಾತುರವಾಗಿ ಲಂಗದೊಳಗೆ ಇಳಿಬಿಟ್ಟರು.  ಬಲಗಾಲೂ ಒಳಗಿಳಿದು ಲಂಗ ಸೊಂಟಕ್ಕೇರಿತು.  ಚಡ್ಡಿಯ ಲಾಡಿ ಹಾಗೂ ಲಂಗದ ಲಾಡಿಗಳ ಕಾರ್ಯತಂತ್ರಗಳ ನಡುವಣ ಸಾಮ್ಯತೆ ಅವೆರಡೂ ಅವಳಿ ಜವಳಿ ಎಂಬ ಐತಿಹಾಸಿಕ ಸತ್ಯವನ್ನು ಪ್ರೊಫೆಸರರಿಗೆ ಮನಗಾಣಿಸಿ ಅವರ ಕೆಲಸವನ್ನು ಹಗುರಾಗಿಸಿತು.  ಯಶಸ್ಸಿನ ಹಮ್ಮಿನಲ್ಲಿ ಬೀಗಿದ ಪ್ರೊಫೆಸರರು ಸೀರೆಯ ಮಡಿಕೆ ಬಿಡಿಸಿದರು.  ಆದರೀಗ ಅವರ ಹಾದಿಗಡ್ಡವಾಗಿ ಕೋಡುಗಲ್ಲೊಂದು ಎದುರಾಗಿಬಿಟ್ಟಿತು.

ಮೈನ ಒಂದು ಕಿರು ಮೂಲೆಯಲ್ಲಿ ಮುದುರಿ ಕೂತ ಒಂಚೂರು ಮಾನವಿರುವ ಗಂಡಸು ಅಸಡ್ಡೆಯಿಂದ ಸುತ್ತಿಕೊಳ್ಳುವ ಎತ್ತಿಕೊಳ್ಳುವ ಬಿಡುಬೀಸಾಗಿ ಬೀಸಿಕೊಳ್ಳುವ ಲುಂಗಿಗೂ, ದೇಹದ ಉದ್ದೋಉದ್ದಕ್ಕೆ ಎಲ್ಲೆಂದರಲ್ಲಿ ಚಿಮ್ಮುವ ಮಾನವನ್ನೇ ತುಂಬಿಕೊಂಡು ಅದೆಲ್ಲಿ ತುಳುಕಿ ಚೆಲ್ಲಿಹೋಗುತ್ತದೋ ಎಂಬ ನಿರಂತರ ಭಯದಲ್ಲಿ ಅನುಕ್ಷಣವೂ ಹದ್ದುಗಣ್ಣಿನಿಂದ ಕಾಯುವ ಕಾಪಾಡುವ ಹೆಣ್ಣಿನ ಸೀರೆಗೂ...

ಎಲ್ಲಿಯ ಹೋಲಿಕೆ!

ಆ ಜಾಗತಿಕ ಸತ್ಯ ಅಂದು ಪ್ರೊಫೆಸರ್ ನಾಗೇಂದ್ರಸ್ವಾಮಿಯವರ ಮುಂದೆ ಅನಾವರಣಗೊಂಡು ಅವರನ್ನು ದಿಕ್ಕೆಡಿಸಿಬಿಟ್ಟಿತು.

ಆದರೆ ಆ ಗಳಿಗೆಯಲ್ಲಿ ಪ್ರೊಫೆಸರರು ಸೋಲೊಪ್ಪಿಕೊಳ್ಳಲು ತಯಾರಾಗಿರಲಿಲ್ಲ.  ಅವರು ಅವರಾಗಿರಲಿಲ್ಲ.

ಆ ಅಂಚು ಹಿಡಿದು, ಈ ಅಂಚು ಎತ್ತಿ, ಅದನ್ನು ಅತ್ತ ತಳ್ಳಿ, ಇದನ್ನು ಇತ್ತ ಎಳೆದು... ಮುಂದೆ ನಿರಿಗೆ ಬಿಗಿ ಹಿಡಿದು, ಹಿಂದೆ ಸೆರಗು ಸಡಿಲ ಬಿಟ್ಟು...

ಅರ್ಧಗಂಟೆಯ ನಂತರ ಪ್ರೊಫೆಸರರು ತೃಪ್ತಿಯ ಉಸಿರು ಬಿಡುತ್ತಾ ನಿಂತರು.  ಆಗವರು ಹಿಂದಿನಿಂದ ನೋಡಿದರೆ ಮಧ್ಯರಾತ್ರಿಯ ನಡುವಿನಲ್ಲಿ ಸಿಕ್ಕ ಬಿಡುವಿನಲ್ಲಿ ಆತುರಾತುರವಾಗಿ ಬಚ್ಚಲ ಮನೆಗೆ ಹೋಗಿದ್ದು ಬರುವ ಕಾಮಾಟಿಪುರದ ಬಲುಬೇಡಿಕೆಯ ಕಾಮಾಟಿ ಹೆಂಗಸಿನಂತೆ ಕಾಣುತ್ತಿದ್ದರು.  ಅವಳಿಗಿಂತ ತುಸುವಾದರೂ ಮೇಲೇರಲು ಅವರು ಆ ಗಳಿಗೆಯಲ್ಲಿ ಅಸಮರ್ಥರಾಗಿದ್ದರು.

ಅದರೆ ತಾನು ಹೇಗೆ ಕಾಣುತ್ತಿದ್ದೇನೆಂಬುದರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಕೇವಲ ಈ ಹೊಚ್ಚ ಹೊಸಾ ಅನುಭವ ತನಗೆ ಹೇಗೆ ಕಾಣುತ್ತಿದೆ ಎಂಬುದನ್ನಷ್ಟೇ ಮನಸ್ಸಿಡೀ ತುಂಬಿಕೊಂಡಿದ್ದ ಪ್ರೊಫೆಸರ್ ನಾಗೇಂದ್ರಸ್ವಾಮಿಯವರು ಸುತ್ತಲಿನ ಪರಿವೆಯನ್ನು ಕಳೆದುಕೊಂಡು ತಮ್ಮ ಹೊಸ ಉಡುಪಿನೊಡನೆ ಇನ್ನಿಲ್ಲದ ಉತ್ಸಾಹದಿಂದ ಆಟವಾಡತೊಡಗಿದರು.  ಮೈಚರ್ಮಕ್ಕೆ ನವುರು ನವುರಾಗಿ ಕಚಗುಳಿಯಿಡುತ್ತಿದ್ದ ನೈಲೆಕ್ಸ್ ಸೀರೆಯನ್ನು ಮುಟ್ಟಿಮುಟ್ಟಿ ಆನಂದಿಸಿದರು.  ಸೆರಗನ್ನು ಒಮ್ಮೆ ಹೊದ್ದುಕೊಂಡರೆ ಮತ್ತೊಮ್ಮೆ ಬೆನ್ನ ಹಿಂದೆ ಗಾಳಿಯಲ್ಲಿ ಹಾರಾಡಲು ಬಿಟ್ಟು ಬೆಡ್‌ರೂಮಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಭಸವಾಗಿ ಹೆಜ್ಜೆ ಹಾಕಿದರು.  ಅಲ್ಲಿ ನಿಂತು ಅದನ್ನು ಸೊಂಟಕ್ಕೆ ಬಿಗಿದು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ಇತ್ತ ನಡೆದುಬಂದರು...  ಬಾತ್‌ರೂಮಿಗೆ ಹೋಗಿ ಸೀರೆ ಮೇಲೆತ್ತಿ ಕೆಳಗೆ ಕುಳಿತು ಒಂದಕ್ಕೆ ಮಾಡಿದರು.  ಚಂದ ಅನಿಸಿತು.  ಏನೋ ಅನಿರ್ವಚನೀಯ ರೋಮಾಂಚನಕ್ಕೆ ಒಳಗಾಗಿ ಅವರ ಮೈಯಿಡೀ ನವಿರಾಗಿ ಜುಮ್ಮೆಂದಿತು.  ಕನಸಿನಲ್ಲೆಂಬಂತೆ ಮಂಚ ಸಮೀಪಿಸಿ ಹಾಸಿಗೆಯಲ್ಲಿ ಅಂಗಾತ ಮಲಗಿದರು.  ಎಡಬಲ ಉರುಳಾಡಿದರು.  ಹೆಣ್ಣಿನ ವಸ್ತ್ರದೊಳಗೆ ಹುದುಗಿ ಚಣಚಣಕ್ಕೂ ನವುರು ನವುರು ಸ್ಪರ್ಶಕ್ಕೆ ಒಳಗಾಗುತ್ತಿದ್ದ ಶರೀರದ ವಿವಿಧ ಅಂಗಗಳು ಅನಿರ್ವಚನೀಯ ಸುಖವನ್ನು ಅನುಭವಿಸಿದವು.  ಇಂಥದೇ ಅನುಭವ ತನಗೆ ಹಿಂದೊಮ್ಮೆ ಆಗಿತ್ತೆಂದೆನಿಸಿ ನೆನಪಿನ ರಾಕೆಟ್ ಸರ್ರನೆ ಹಿಂದಕ್ಕೆ ಚಲಿಸಿ ಹದಿನೇಳು ವರ್ಷ ಹಿಂದೆ ಘಟಿಸಿದ ಅವರ ಪ್ರಥಮ ರಾತ್ರಿಗೆ ತಲುಪಿ ನಿಂತುಬಿಟ್ಟಿತು.  ಹೆಣ್ಣಿನೊಳಗೆ ಪ್ರಪ್ರಥಮ ಪ್ರಸ್ಥಾನ, ಹೆಣ್ಣಿನ ವಸ್ತ್ರದೊಳಗೆ ಮೊತ್ತಮೊದಲ ಪ್ರವೇಶ- ಎರಡೂ ತರುವ ಅತ್ಯದ್ಭುತ ರೋಮಾಂಚನಗಳ ನಡುವಿನ ಅಸದಳ ಸಾಮ್ಯತೆ ಪ್ರೊಫೆಸರರ ಅರಿವಿಗೆ ನಿಲುಕಿ ಅವರು ಉದ್ರೇಕಗೊಂಡರು.  ಒಮ್ಮೆ ಮುಲುಗಿ ಉರುಳಿ ಬೋರಲಾದರು.

ಹದಿನೇಳು ಧೀರ್ಘ ವರ್ಷಗಳಷ್ಟು ಹಳೆಯದಾದ ಸುಖದ ನೆನಪಿನ ಬಯಕೆಯು ಮೆದುಳಿಬಳ್ಳಿಯ ಉದ್ದಕ್ಕೂ ಉಕ್ಕಿ ಹರಿದು ಸೊಂಟದ ಸುತ್ತ ಕಚಗುಳಿಯಿಟ್ಟು ನಾಭಿಯಲ್ಲಿ ಸುಳಿಯಾಗಿ ಸುತ್ತಿ ಕೆಳಗಿಳಿದು ನೆಲೆನಿಂತು ಪ್ರೊಫೆಸರರನ್ನು ಉಯ್ಯಾಲೆಯಲ್ಲಿಟ್ಟು ತೂಗಿತು.  ಅವರು ನವುರು ಅರಿವೆಯೊಳಗೆ ನವುರು ಬೆವರಿನಲ್ಲಿ ಮಿಂದರು.  ಸುಖ ಒರತೆಯಾಗಿ ಚಿಮ್ಮಿ ಝರಿಯಾಗಿ ಹರಿದು ಅವರನ್ನು ಕೊಚ್ಚಿಕೊಂಡುಹೋಗಿಬಿಟ್ಟಿತು.  ಮೋಹಿನಿ ನಾಗೇಂದ್ರಸ್ವಾಮಿಯವರನ್ನು ಕೈಹಿಡಿದು ಕನಸಿನಲೋಕಕ್ಕೆ ಕರೆದೊಯ್ದಳು...

 

*     *     *

 

ಕಾಲಿಂಗ್ ಬೆಲ್ ಮೊಳಗಿ ಪ್ರೊಫೆಸರ್ ನಾಗೇಂದ್ರಸ್ವಾಮಿಯವರನ್ನು ಎಬ್ಬಿಸಿತು.  ಅವರು ಗಡಬಡಿಸಿ ಎದ್ದು ಕೂರುವಷ್ಟರಲ್ಲಿ ಅದು ಮತ್ತೊಮ್ಮೆ ಮೊಳಗಿತು.  ಕಣ್ಣುಜ್ಜಿಕೊಂಡು ಸುತ್ತಲೂ ನೋಡಿದ ಅವರಿಗೆ ಪರಿಸ್ಥಿತಿಯ ಅರಿವಾಗಲು ಹಲವು ನಿಮಿಷಗಳೇ ಬೇಕಾದವು.

ಬೆಳಗಾಗಿಹೋಗಿತ್ತು.  ಗಡಿಯಾರದ ಮುಳ್ಳುಗಳು ಕೆಲಸದಾಕೆ ಬರುವ ಹೊತ್ತನ್ನು ನಿರ್ಭಾವುಕವಾಗಿ ಹೇಳಿದವು.

ರಾತ್ರಿಯ ಇಡೀ ಪ್ರಕರಣ ಚಣದಲ್ಲಿ ಮನಸ್ಸಿಡೀ ಆವರಿಸಿ ಅದನ್ನು ಹಸಿರಾಗಿಸುವಂತೆ ಮೈಮೇಲಿದ್ದ ಸೀರೆ ರವಿಕೆಗಳು ಫ್ಯಾನಿನ ಗಾಳಿಯಲ್ಲಿ ಹಗುರಾಗಿ ಅಲುಗಿದವು.  ಕಾಲಿಂಗ್ ಬೆಲ್ ಮತ್ತೊಮ್ಮೆ ಕರೆಯಿತು.

ಪ್ರೊಫೆಸರರು ಗಾಬರಿಯಲ್ಲಿ ಗಡಬಡಿಸಿ ಮೇಲೆದ್ದರು.  ಸೀರೆ ರವಿಕೆ ಲಂಗಗಳನ್ನು ಕ್ಷಣದಲ್ಲಿ ಸೆಳೆದುಹಾಕಿ ಅತ್ತಿತ್ತ ನೋಡಿ ಅವೆಲ್ಲವನ್ನೂ ಮಂಚದ ಅಡಿಗೆ ತಳ್ಳಿದರು.  ಟೇಬಲ್ ಕೆಳಗೆ ಅನಾಥವಾಗಿ ಬಿದ್ದಿದ್ದ ಪಟ್ಟೆಪಟ್ಟೆ ಚಡ್ಡಿಯನ್ನೆತ್ತಿ ಆತುರಾತುರವಾಗಿ ಸೊಂಟಕ್ಕೇರಿಸಿದರು.  ಹಗ್ಗದ ಮೇಲಿದ್ದ ಲುಂಗಿಯನ್ನು ಸೆಳೆದುಕೊಂಡು ಸುತ್ತಿಕೊಳ್ಳುತ್ತಲೇ ಬಾಗಿಲತ್ತ ಧಾವಿಸಿದರು.

ಒಳಬಂದ ಕೆಲಸದಾಕೆ ಪೊರಕೆ ಕೈಗೆತ್ತಿಕೊಂಡು ಬೆಡ್‌ರೂಮಿಗೆ ನುಗ್ಗದಿರಲಿ ಎಂದು ಅದರ ಬಾಗಿಲಿಗೆ ಅಡ್ಡವಾಗಿ ನಿಂತರು.  "ಕಸಾ ಆಮೇಲೆ ಗುಡಿಸೋವಂತೆ.  ಮೊದಲು ಬಟ್ಟೆ ಒಗೆದುಬಿಡಮ್ಮಾ.  ಬೆಡ್‌ಶೀಟೆಲ್ಲಾ ಇವೆ" ಅಂದರು.  "ಹಂಗೇ ಮಾಡ್ತೀನೇಳಿ" ಅಂದವಳು ಅಡಿಗೆ ಮನೆಯತ್ತ ನಡೆದಳು.  ಪ್ರೊಫೆಸರರು ಅವಳ ಹಿಂದೆಯೇ ಹೋದರು.  ಬೋನಿನಲ್ಲಿ ಸಿಕ್ಕಿಬಿದ್ದ ಹಸಿದ ಹುಲಿಯಂತೆ ಹೊರಬರಲು ದಾರಿ ಹುಡುಕುತ್ತಾ ಕೆಳಹೊಟ್ಟೆಯ ಕಗ್ಗತ್ತಲ ಕಾಡಿನಲ್ಲಿ ದಿಕ್ಕೆಟ್ಟು ಗುರುಗುಡುತ್ತಾ ಓಡಾಡುತ್ತಿದ್ದ ಹೂಸನ್ನು ತಡೆಯುವ ಯಮಸಾಹಸದಲ್ಲಿ ಚಡಪಡಿಸುತ್ತಾ ಬಡಪಾಯಿ ಪ್ರೊಫೆಸರರು ಕೆಲಸದಾಕೆ ಫಿಲ್ಟರ್‌ನಿಂದ ಲೋಟಕ್ಕೆ ನೀರು ತುಂಬಿಸಿಕೊಂಡು ಆರಾಮವಾಗಿ ಕುಡಿಯುವುದನ್ನೇ ನಿಸ್ಸಹಾಯಕವಾಗಿ ನೋಡಿದರು.  ಅವಳು ಕೊನೆಗೂ ಬಾತ್‌ರೂಮಿನೊಳಹೊಕ್ಕು ಬಾಗಿಲು ಮುಚ್ಚಿಕೊಂಡದ್ದನ್ನು ಖಾತ್ರಿ ಪಡಿಸಿಕೊಂಡು ತಾವು ಟಾಯ್ಲೆಟ್ಟಿನತ್ತ ನಡೆಯುತ್ತಿದ್ದಂತೇ ಚಡ್ಡಿಯೊಳಗೆ ಯಾರೋ ಬೆಂಕಿ ಕಡ್ಡಿ ಗೀರಿದಂತಾಗಿ "ಅಂಯ್" ಎಂದು ಚೀರಿದರು.  ಹಿಂದೆಯೇ "ಢೊಂಯ್" ಎಂದು ಹೂಸು ಬಿಟ್ಟರು.  ಮುಂದಿನ ಎರಡು ಕ್ಷಣ ತೊಡೆಸಂದಿಯಲ್ಲಿ ಮತ್ತೆರಡು ಬೆಂಕಿ ಕಡ್ಡಿಗಳು ಉರಿ ಹೊತ್ತಿಸಿದವು.  ಪ್ರೊಫೆಸರರು ಗಾಬರಿಗೊಂಡರು.  ಟಾಯ್ಲೆಟ್ಟಿನೊಳಗೆ ನುಗ್ಗಿ ದಢಾರನೆ ಬಾಗಿಲು ಮುಚ್ಚಿ ಲುಂಗಿಯನ್ನು ಕಿತ್ತೆಸೆದು ಚಡ್ಡಿಯನ್ನು ಸೆಳೆದೆಸೆದರು.  ತೊಡೆಸಂದಿಗೆ ಕೈಹಾಕಿ ಸವರಿದರು.  ಇರುವೆಯೊಂದು ಕೈಬೆರಳ ತುದಿಗೇ ಕಚ್ಚಿತು.

ಇದುವರೆಗೆ ಅಡಿಗೆ ಮನೆಯ ಸಕ್ಕರೆಯ ಡಬ್ಬದ ಹಿಂದು ಮುಂದಷ್ಟೇ ಠಳಾಯಿಸುತ್ತಿದ್ದ ಕೆಂಪಿರುವೆಗಳು ಇಂದು ಬೆಡ್‌ರೂಮಿಗೂ ದಾರಿ ಕಂಡುಕೊಂಡುಬಿಟ್ಟಿದ್ದವು.  ಪ್ರೊಫೆಸರರು ಯಾರಿಗೂ ಕಾಣದಂತೆ ತಮ್ಮ ಒಳಚಡ್ಡಿಯೊಳಗೆ ಬೆಲ್ಲವನ್ನು ಅಡಗಿಸಿಟ್ಟುಕೊಂಡಿದ್ದಾರೇನೋ ಎಂದು ಅನುಮಾನ ಪಟ್ಟು ಅಲ್ಲಿಗೆ ನುಗ್ಗಿದ್ದವು.  ಮನುಷ್ಯನ ಮನಸ್ಸಿನ ಆಟಗಳನ್ನೇ ಅರ್ಥಮಾಡಿಕೊಳ್ಳಲಾಗುವುದಿಲ್ಲ, ಇನ್ನು ಆ ಕ್ಷುದ್ರಜೀವಿಗಳದ್ದೇನು ಬಿಡಿ.

ದೀಪವನ್ನೂ ಹಾಕದೇ ಅವಸರದಲ್ಲಿ ಟಾಯ್ಲೆಟ್ಟಿಗೆ ನುಗ್ಗಿದ್ದ ಪ್ರೊಫೆಸರರು ಆ ಪುಟ್ಟ ಕೋಣೆಯ ನಸುಗತ್ತಲಿನಲ್ಲಿ ಹುಚ್ಚು ಹಿಡಿದವರಂತೆ ತೊಡೆ, ತರಡು, ಕುಂಡೆಯ ದಿಂಡು ದರಿಗಳನ್ನೆಲ್ಲಾ ಪರಪರ ಕೆರೆದುಕೊಳ್ಳತೊಡಗಿದರು.  ಕೈಹಾಕಿದಲ್ಲಿ ಇರುವೆಗಳೋ ಇಲ್ಲಾ ಅವು ಕಚ್ಚಿ ಎಬ್ಬಿಸಿದ ಉಬ್ಬಿದ ಗದ್ದುಗಳೋ ಸಿಗುತ್ತಿದ್ದವು.  ಕೆಲವು ಇರುವೆಗಳು ಮೇಲೇರಿ ಹೊಟ್ಟೆ, ಎದೆಯ ಕೂದಲ ಕಾಡಿನಲ್ಲಿ ಅಲೆದು ಮುಲುಮುಲುಗುಟ್ಟಿಸತೊಡಗಿದ್ದವು.  ಒಂದು ಚೆಂಗುಲಿ ಇರುವೆಯಂತೂ "ಇಲ್ಲಿರಬಹುದೇನೋ ಬೆಲ್ಲ" ಎಂದುಕೊಂಡು ಹೊಕ್ಕಳ ತೂತಿನೊಳಗೇ ನುಗ್ಗಿ ಅಲ್ಲೇನೂ ಸಿಕ್ಕದೇ ಉಕ್ಕಿದ ಕೋಪದಲ್ಲಿ ಚುರಕ್ಕನೆ ಕಚ್ಚಿಬಿಟ್ಟಿತು...

ಈ ರಾಕ್ಷಸರಿಂದ ಪಾರಾಗುವ ಒಂದೇ ದಾರಿ ಮೈಮೇಲೆ ನೀರು ಸುರಿದುಕೊಳ್ಳುವುದು.  ಆದರೆ ಅದು ಸಾಧ್ಯವಿರಲಿಲ್ಲ.  ಕೆಲಸದಾಕೆ ಬಾತ್‌ರೂಮಿನಲ್ಲಿ ಬಟ್ಟೆ ಒಗೆಯುತ್ತಿದ್ದಳು.  ಪ್ರೊಫೆಸರರೇ ಅಲ್ಲವೇ ಅವಳನ್ನು ಆತುರಾತುರವಾಗಿ ಅಲ್ಲಿಗೆ ಕಳಿಸಿದ್ದು?

ಪ್ರೊಫೆಸರ್ ನಾಗೇಂದ್ರಸ್ವಾಮಿಯವರು ಟಾಯ್ಲೆಟ್ಟಿನ ಪುಟ್ಟ ಕೊಳಕು ಬಕೆಟ್‌ನಲ್ಲಿದ್ದ ನೀರಿನಲ್ಲಿ ಲುಂಗಿಯನ್ನು ಅದ್ದಿ ಮೈಯನ್ನೆಲ್ಲಾ ಒರೆಸಿಕೊಂಡರು.  ಚೂರೇ ನೆಮ್ಮದಿಯೆನಿಸಿತು.  ಟಾಯ್ಲೆಟ್ ಕಟ್ಟೆಯೇರಿ ಕುಳಿತರು.  ಅವರು ಮುಲುಕುತ್ತಿದ್ದರೋ ಅಳುತ್ತಿದ್ದರೋ ತಿಳಿಯುವಂತಿರಲಿಲ್ಲ.

ಚಡ್ಡಿಯನ್ನು ಮತ್ತೊಮ್ಮೆ ಮೈಗೇರಿಸುವ ಸಾಹಸಕ್ಕಿಳಿಯದ ಪ್ರೊಫೆಸರರು ಒದ್ದೆ ಲುಂಗಿಯನ್ನು ಸುತ್ತಿಕೊಂಡು ಸದ್ದಾಗದಂತೆ ಬಾಗಿಲು ತೆರೆದು ಹೊರಗಿಣುಕಿದರು.  ಬಾತ್‌ರೂಮಿನತ್ತ ನೋಡಿದರೆ ಅದು ತೆರೆದಿತ್ತು.  ಒಳಗೆ ದೀಪ ಉರಿಯುತ್ತಿತ್ತು.  ಆದರೆ ಯಾವ ಶಬ್ದವೂ ಬರುತ್ತಿರಲಿಲ್ಲ.  ಕೆಲಸದಾಕೆ ಬಟ್ಟೆ ಒಗೆದಾಗಿತ್ತು.

ಅತೀವ ಸಮಾಧಾನದಲ್ಲಿ ಪ್ರೊಫೆಸರರು ಅತ್ತ ನಡೆದರು.  ಬಾಗಿಲು ಮುಚ್ಚಿ ಲುಂಗಿ ಕಿತ್ತೆಸೆದು ಶವರ್‌ನ ನಲ್ಲಿ ತಿರುಗಿಸಲೆಂದು ಬಲಗೈ ಮುಂದೆ ಚಾಚುತ್ತಿದ್ದಂತೇ ಕಣ್ಣುಗಳು ಛಕ್ಕನೆ ಅಗಲವಾದವು.  ಗೋಧಿ ಬಣ್ಣದ ತುಂಬಿದ ತೋಳಿನಲ್ಲಿ ಒಂದು ಗಾಢ ಕೆಂಪು ಗೆರೆ!

ಮುಟ್ಟಿ ನೋಡಿದರು.  ಗೆರೆ ಆಳವಾಗಿತ್ತು, ದಾರದಲ್ಲಿ ಕೊರೆದಂತೆ.  ಅವರ ಕಣ್ಣುಗಳು ಅಯಾಚಿತವಾಗಿ ಎಡತೋಳಿನತ್ತ ಹರಿದವು.  ಅಲ್ಲೂ ಅಂಥದೇ ಜಾಗದಲ್ಲಿ ಅಂಥದೇ ಕೆಂಪು ಗೆರೆ!

ಕೆಂಪುರವಿಕೆಯ ಬಿಗಿಯಾದ ತೋಳಂಚುಗಳು ರಾತ್ರಿಯಿಡೀ ತನ್ನೊಳಗೆ ಅಡಗಿದ್ದ ಪ್ರೊಫೆಸರರ ತೋಳುಗಳ ಮೇಲೆ ಆಳಗೆರೆಗಳನ್ನು ಮೂಡಿಸಿದ್ದವು.  ದೀಪದ ಬೆಳಕಿನಲ್ಲಿ ಎದ್ದುಕಂಡ ಆ ಕೆಂಪು ಗೆರೆಗಳು ರಾತ್ರಿಯ ನೆನಪನ್ನು ಹಸಿರಾಗಿಸಿದವು.

ಎಲ್ಲೆಡೆ ಸೋಪು ಹಚ್ಚಿಕೊಂಡು ಮನಸೋ ಇಚ್ಚೆ ಸ್ನಾನ ಮಾಡಿದರು.  ಇರುವೆಗಳನ್ನಷ್ಟೇ ಅಲ್ಲ, ಕೊಳಕು ಟಾಯ್ಲೆಟ್ ಬಕೆಟ್ ಸ್ನಾನದ ನೆನಪನ್ನೂ ತೊಳೆದುಹಾಕಿಬಿಡುವಂತೆ ನೀರನ್ನು ಎತ್ತಿಎತ್ತಿ ಸುರಿದುಕೊಂಡರು.  ಇರುವೆಗಳು ಸತ್ತವು.  ಕೊಳೆ ತೊಳೆದುಹೋಯಿತು.  ಆದರೆ ಕೆಂಪುಗೆರೆಗಳು ತುಸು ಮಸುಕಾದವಷ್ಟೇ.  ಪೂರ್ತಿ ಹೋಗಲಿಲ್ಲ.

ಹಗ್ಗದ ಮೇಲಿನ ಒಣ ಟವಲ್ ಎಳೆದುಕೊಂಡು ಮೈ ಒರೆಸಿಕೊಂಡು ಮತ್ತೊಮ್ಮೆ ಲುಂಗಿ ಮುಟ್ಟಲು ಅಸಹ್ಯವೆನಿಸಿ ಟವಲನ್ನೇ ಸೊಂಟಕ್ಕೆ ಸುತ್ತಿಕೊಂಡು ಒಂದೊಂದೇ ಹೆಜ್ಜೆ ಇಡುತ್ತಾ ಬೆಡ್‌ರೂಂ ಪ್ರವೇಶಿಸಿದರು.  ಬಾಲ್ಕನಿಯ ಉದ್ದೋಉದ್ದಕ್ಕೆ, ಮೇಲಿಂದ ಕೆಳಕ್ಕೆ ಮಂದ ಬೆಡ್‌ಶೀಟ್‌ಗಳನ್ನು ಒಣಗಲು ಹರವಿ ಇಡೀ ಬಾಲ್ಕನಿಯನ್ನು ಕತ್ತಲುಗಟ್ಟಿಸಿ ಅದರ ಬಾಗಿಲಲ್ಲಿ ಪೊರಕೆ ಹಿಡಿದು ನಿಂತಿದ್ದ ಕೆಲಸದಾಕೆ ಕಾಣಿಸಿದಳು.  ಇವರನ್ನು ಕಂಡೊಡನೇ "ಸ್ವಲ್ಪ ಹೊರಗೇ ಇರಿ.  ಕಸಾ ಗುಡಿಸಿಬಿಡ್ತೀನಿ" ಎನ್ನುತ್ತಾ ನಡು ಬಾಗಿಸಿದಳು.

ಪ್ರೊಫೆಸರರ ಹೃದಯ ಬಾಯಿಗೆ ಬಂತು.  "ಅದನ್ನ... ಅದನ್ನ... ಆಮೇಲೆ ಮಾಡು" ಅಂದರು.  ಒಂದೇ ನೆಗೆತಕ್ಕೆ ಕೋಣೆಯ ನಡುಮಧ್ಯದಲ್ಲಿ ನಿಂತರು.  ಮಂಚದ ಕೆಳಗೆ ಭೀತಿಯ ನೋಟ ಹೂಡಿದರು.  "ಎಲ್ಲಾ ಕಡೆ ಆಯ್ತು.  ಇದೊಂದೇ ಉಳಿದಿರೋದು.  ಅದೆಷ್ಟು ಹೊತ್ತು?  ಚಣದಲ್ಲಿ ಮುಗಿಸಿಬಿಡ್ತೀನಿ.  ನೀವು ಸ್ವಲ್ಪ ಈ ಕಡೆ ನಿಲ್ಲಿ" ಎಂದು ನಿರ್ಭಾವುಕವಾಗಿ ಹೇಳಿ ಬಾಲ್ಕನಿಯತ್ತ ಎಡಗೈ ತೋರುತ್ತಾ ಪೊರಕೆಯನ್ನು ಅವರ ಕಾಲ ಬಳಿಯೇ ಆಡಿಸಿದಳು.  ಚೈತನ್ಯವೆಲ್ಲಾ ಉಡುಗಿಹೋಗಿದ್ದ ಪ್ರೊಫೆಸರರು ಮಂಚದ ಕೆಳಗೆ ಅವಳ ಪೊರಕೆ ಇಣುಕದಿರಲಿ ಎಂದು ದೇವದೇವರುಗಳಿಗೆಲ್ಲಾ ಮೊರೆಯಿಡುತ್ತಾ ಬಾಲ್ಕನಿಯ ಬಾಗಿಲತ್ತ ಸರಿದರು.  ಇನ್ನೂ ಅಡಗಿದ್ದು ಚುರುಕು ಮುಟ್ಟಿಸಿದ ಕಳ್ಳ ಇರುವೆಯನ್ನರಸಿ ಸೊಂಟದ ಕೆಳಗಿನ ಕಣಿವೆಯಲ್ಲಿ ಪರಪರ ಕೈಯಾಡಿಸಿದರು.  ಕಣ್ಣುಗಳು ಕತ್ತಲುಗಟ್ಟಿದಂತೆನಿಸಿತು.

"ಇದು ಅಕ್ಕಾವ್ರ ಸೀರೆ ಅಲ್ವಾ?  ಇದನ್ನ್ಯಾಕೆ ಹೀಗೆ ಬಿಸಾಕಿದ್ದೀರಿ?" ಎಂಬ ಪ್ರಶ್ನೆಯ ಸಿಡಿಲು ಬಡಿದು ಪ್ರೊಫೆಸರರು ಕಣ್ಣರಳಿಸಿ ನೋಡಿದಾಗ ಕೆಲಸದಾಕೆ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕುಳಿತು ಮಂಚದ ಕೆಳಗಿದ್ದ ಸೀರೆಯನ್ನು ಹೊರಗೆಳೆಯುತ್ತಿದ್ದಳು.

ಪ್ರೊಫೆಸರರು ಬೆವತುಹೋದರು.  "ಬಿದ್‌ಹೋಯ್ತು... ಅಲ್ಮಿರಾದಿಂದ ಬಿದ್‌ಹೋಯ್ತು...  ನನ್ ಬಟ್ಟೆ... ನನ್ ಬಟ್ಟೆ ತಗೊಳೋವಾಗ."  ತೊದಲಿದರು.  "ಮಡಿಸೋಕೆ ಆಗ್ಲಿಲ್ಲ...  ಆಗ್ಲೇ ಇಲ್ಲಾ."  ಸೇರಿಸಿದರು.

ಕೆಲಸದಾಕೆ ಮೃದುವಾಗಿ ನಕ್ಕಳು.  "ಸೀರೆ ಮಡಿಸೋದು ಗಂಡಸರಿಗೆ ಕಷ್ಟಾನೇ ಬಿಡಿ.  ನಾ ಮಡಿಸಿಡ್ತೀನಿ.  ಆವತ್ತು ನಾನೇ ಅಲ್ವಾ ಒಗೆದು ಮಡಿಸಿಟ್ಟೋಳು" ಎನ್ನುತ್ತಾ ಹಸಿರು ಸೀರೆಯನ್ನು ಇಡಿಯಾಗಿ ಮೇಲೆತ್ತಿ ಮಂಚದ ಮೇಲೆ ಹಾಕಿದಳು.  "ಇದೇನು?" ಎನ್ನುತ್ತಾ ಲಂಗವನ್ನು ಎತ್ತಿ ಹಿಡಿದು ಕಣ್ಣರಳಿಸಿದಳು.  ಅದರೊಳಗೆ ಮುದುರಿ ಅಡಗಿದ್ದ ಕೆಂಪು ವಸ್ತ್ರವನ್ನು ಎರಡು ಬೆರಳುಗಳಲ್ಲಿ ಹಿಡಿದೆಳೆದಳು.  ಏನಾಗುತ್ತಿದೆಯೆಂದು ಪ್ರೊಫೆಸರರ ಅರಿವಿಗೆ ಬರುವಷ್ಟರಲ್ಲಿ ಮೋಹಿನಿಯ ಕೆಂಪು ರವಿಕೆ ಕೆಲಸದಾಕೆಯ ಕೈಯಲ್ಲಿತ್ತು.  ಎಲ್ಲವೂ ಕ್ಷಣದಲ್ಲಿ ನಡೆದುಹೋಗಿತ್ತು.

"ಅವಳ್ದೇ... ಅವಳ್ದೇ... ನನ್ ಹೆಂಡ್ತೀದು...  ಸೀರೆ ಒಳಗಿತ್ತು.  ಸೀರೆ ಜೊತೆ ಅದೂ... ಅದೂ ಬಿದ್‌ಹೋಯ್ತು."  ಕಂಪಿಸುವ ದನಿಯಲ್ಲಿ ಒದರಿದರು.

ಅವಳು ತಲೆ ಅಲುಗಿಸಿದಳು.  "ಅಕ್ಕಾವ್ರ ರವಕೇನೂ ಹಸುರ್‍ದು.  ಸೀರೆ ಹಂಗೇ.  ನಾನೇ ಮಡಿಸಿಟ್ಟಿದ್ದೆ."  ಮೆಲ್ಲಗೆ ಗೊಣಗಿದಳು.  ಕೆಂಪುರವಿಕೆಯನ್ನು ಮೇಲೆತ್ತಿ ಬೆಳಕಿಗೆ ಹಿಡಿದಳು...  ನ್ಯಾಯಾಧೀಶರ ತೀರ್ಪನ್ನು ಕಾದು ಕಟಕಟೆಯಲ್ಲಿ ನಿಂತ ಕೊಲೆಗಾರನಂತೆ ಪ್ರೊಫೆಸರರು ವಿಹ್ವಲ ಚಡಪಡಿಕೆಯಲ್ಲಿ ಕುಸಿಯತೊಡಗಿದರು.

ಯುಗವೊಂದು ಕಳೆಯಿತು.  ಕೆಲಸದಾಕೆ ಅವರತ್ತ ತಿರುಗಿದಳು.  ಕೆಂಪುರವಿಕೆಯನ್ನು ಕೈಯಲ್ಲಿ ಹಿಡಿದು ಪ್ರೊಫೆಸರತ್ತ ನೇರವಾಗಿ ನೋಡಿದಳು.  "ಇದು... ಇದು..." ತುಟಿ ಕಚ್ಚಿಕೊಂಡಳು.

ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಗರ ಬಡಿದಿತ್ತು.  ಬಿಳಿಚಿಹೋದ ಮುಖವನ್ನು ಬಾಗಿಸಿದರು.  ತೋಳ ಮೇಲಿನ ಕೆಂಪು ಗೆರೆ ಕಣ್ಣಿಗೆ ರಾಚಿತು.  ಹಾವು ಕಂಡವರಂತೆ ಬೆಚ್ಚಿ ತಲೆ ಮೇಲೆತ್ತಿ ಕೆಲಸದಾಕೆಯತ್ತ ಭೀತ ನೋಟ ಹೂಡಿದರು.

ಅವಳ ಕಣ್ಣುಗಳು ಪ್ರೊಫೆಸರರ ಎಡತೋಳಿನ ಮೇಲೊಮ್ಮೆ ಬಲತೋಳಿನ ಮೇಲೊಮ್ಮೆ ಚಕಚಕನೆ ಸುಳಿದಾಡಿ ಸೋತಂತೆ ನಿಂತುಬಿಟ್ಟವು.  ಕೋಣೆಯಲ್ಲಿ ಮೌನ ಆವರಿಸಿತು.  ಅವಳು ಅವರನ್ನೇ ನೆಟ್ಟನೋಟದಲ್ಲಿ ನೋಡುತ್ತಾ ಮೌನವಾಗಿ ನಿಂತಿದ್ದಳು.  ಎಡಗೈಯಲ್ಲಿ ಪ್ರೊಫೆಸರರ ಹೆಂಡತಿಯ ಹಸಿರು ಲಂಗ.  ಬಲಗೈಯಲ್ಲಿ ಮೋಹಿನಿಯ ಕೆಂಪು ರವಿಕೆ.

ಪ್ರೊಫೆಸರ್ ನಾಗೇಂದ್ರಸ್ವಾಮಿಯವರ ಮೈಯಿಡೀ ಬೇಗೆಗೆ ಸಿಕ್ಕಿ ಹುರುಪೆಗಳೆದ್ದವು.  ಒಣಗಿಹೋಗಿದ್ದ ತುಟಿಗಳನ್ನು ಸವರಿಕೊಳ್ಳಲು ಹೋದರೆ ನಾಲಿಗೆ ಎರಡಾಗಿ ಸೀಳಿದಂತೆನಿಸಿ ಬೆಚ್ಚಿದ ಪರಿಗೆ ನಿಯಂತ್ರಣ ತಪ್ಪಿ ಹೊರಬಂದ ಉಸಿರು ಸೀಳುಗಳ ನಡುವೆ ನುಸುಳಿ "ಹಿಸ್ ಹಿಸ್ಸ್" ಶಬ್ಧ ಹೊರಡಿಸಿತು.  ಕಣ್ಣುಗಳು ಪೊರೆಗಟ್ಟಿ ಮಂಜಾದವು.  ಕೆಲಸದಾಕೆ ಅಕರಾಳ ವಿಕರಾಳವಾಗಿ ಕ್ಷಣಕ್ಕೊಂದು ರೂಪ ತಾಳುತ್ತಾ ಮಸುಕಾಗಿಹೋಗಿ ಅವಳ ಇಡೀ ಮುಖ ಒಂದು ತೆರೆದ ಜೋಡಿ ಕಣ್ಣುಗಳಾಗಿ ಬೆಳೆದು ನಿಂತಿತು.  ಆ ಕಣ್ಣಗೂಡುಗಳಿಂದ ಹೊರಬಂದ ಕಣ್ಣಗುಡ್ಡೆಗಳು ತಮ್ಮ ಕಣ್ಣುಗಳತ್ತ ಬಂದೂಕಿನ ಗುಂಡಿನಂತೆ ವೇಗವಾಗಿ ಸಾಗಿಬರುತ್ತಿರುವುದನ್ನು ಕಂಡ ಪ್ರೊಫೆಸರರು ಅಧೀರರಾದರು.  ಎರಗಿ ಬರುತ್ತಿದ್ದ ಕಣ್ಣಾಸ್ತ್ರಗಳ ಮೇಲೆ ದೃಷ್ಟಿ ಕೀಲಿಸಿಯೇ ಹಿಂದುಹಿಂದಕ್ಕೆ ಒಂದೊಂದೇ ಹೆಜ್ಜೆ ಇಡುತ್ತಾ... ಇಡುತ್ತಾ... ಹಿಮ್ಮುಖವಾಗಿ ಬಾಲ್ಕನಿಯೊಳಗೆ... ಅದರ ಕತ್ತಲಿನೊಳಗೆ ನುಸುಳತೊಡಗಿದರು.

 

--***೦೦೦***--

 

ಅಕ್ಟೋಬರ್ ೨೦೦೭

Rating
No votes yet

Comments