ಚುಕು ಬುಕು ಚುಕು ಬುಕು ರೈಲೇ - ಪ್ರಬಂಧ
ಆ ರೈಲು ಓಡುತ್ತಿರುವಾಗ ಬುಸು ಬುಸು ಹೊಗೆ! ಕಿಟಿಕಿಯ ಮೂಲಕ ಬೋಗಿಯ ಒಳಗೆ ನುಗ್ಗಿ ಬರುವ ಹೊಗೆಯಿಂದ ಒಳಗೆಲ್ಲಾ ಕಪ್ಪನೆಯ ಮಸಿ. ಅರ್ಧ ದಿನಕ್ಕಿಂತ ಜಾಸ್ತಿ ರೈಲು ಪ್ರಯಾಣ ಮಾಡಿದರೆ, ಧರಿಸಿರುವ ಬಟ್ಟೆ ಮಾತ್ರವಲ್ಲ, ಕೈ, ಮುಖ, ಮೈ ಸಹಾ ಮಸಿಯಿಂದ ಆವೃತ. ರಾತ್ರಿಯ ಪ್ರಯಾಣವಾದರೆ, ಕಿಟಿಕಿಯಿಂದ ಹೊರಗೆ ನೋಡಿದರೆ, ಬೆಂಕಿಯ ಕಿಡಿಗಳು ಗಾಳಿಗೆ ಹಾರುತ್ತಾ ಸಾಗುವುದನ್ನು ಸಹಾ ಕಾಣಬಹುದು! ೧೯೮೦ರ ದಶಕದ ತನಕ ನಮ್ಮ ದೇಶದಲ್ಲಿ ಓಡುತ್ತಿದ್ದ ರೈಲುಗಳಲ್ಲಿ ಸಂಚರಿಸಿದರೆ, ಇವೆಲ್ಲಾ ಅನುಭವಗಳು ಅನಿವಾರ್ಯ. "ಕೂ" ಎಂದು ಕೂಗುತ್ತಾ, "ಚುಕು ಬುಕು ಚುಕು ಬುಕು" ಸದ್ದು ಮಾಡುತ್ತಾ, ಧಡ ಧಡ ಸಂಚರಿಸುವ ಆ ರೈಲು ಪ್ರಯಾಣವನ್ನು ನೆನಪಿಸಿಕೊಂಡರೆ, ಏನೋ ಒಂದು ರೀತಿಯ ನೋಸ್ಟಾಲ್ಜಿಕ್ ಭಾವನೆ.ಉಗಿಬಂಡಿ" ಎಂದು ಕರೆಯಿಸಿಕೊಳ್ಳುತ್ತಿದ್ದ ಆ ಕಪ್ಪನೆಯ ರೈಲುಬಂಡಿಯು ಆಗಿನ ಕಾಲದಲ್ಲಿ ಒಂದು ಅದ್ಭುತ ಯಂತ್ರ. ಮೊದಲಬಾರಿಗೆ ಉಗಿಬಂಡಿಯನ್ನು ನೋಡಿದ ಹಳ್ಳಿಜನರು ಅದರ ಕಾರ್ಯವೈಖರಿಯನ್ನು ಕಂಡು ನಿಬ್ಬೆರಗಾಗುತ್ತಿದ್ದರು. ಚುಕು ಬುಕು ಎಂದು ಸದ್ದು ಮಾಡುತ್ತಾ, ಪ್ರತಿ ಸದ್ದಿಗೂ ಚಲಿಸುವ ಕಬ್ಬಿಣದ ಸಲಾಕೆಯ ಸಹಾಯದಿಂದ ಚಲಿಸುವ ದೊಡ್ಡ ಚಕ್ರಗಳನ್ನು ಹೊಂದಿದ್ದ ಆಗಿನ ಉಗಿಬಂಡಿಯು ಅಂದಿನ ಕಾಲದ ದೈತ್ಯ ಮಾಯಾವಿ ಯಂತ್ರ. ಈಗಲೂ ಅದರ ಕಾರ್ಯ ವೈಖರಿಯನ್ನು ನೆನಪಿಸಿಕೊಂಡರೆ ಸೋಜಿಗವಾದೀತು. ಕೇವಲ ನೀರು ಮತ್ತು ಬೆಂಕಿಯ ಸಹಾಯದಿಂದ, ಆ ಉಗಿಬಂಡಿಯು ಸಾವಿರಾರು ಜನರನ್ನು ಸಾವಿರಾರು ಕಿ.ಮೀ. ದೂರ ಕರೆದೊಯ್ಯಬಲ್ಲದು ಎಂಬ ವಾಸ್ತವವೇ ೨೦ನೆಯ ಶತಮಾನದ ಒಂದು ರೋಚಕ ವಿಷಯವಾಗಿತ್ತು.
ಆ ಉಗಿಬಂಡಿಯು ದೂರದ ಊರಿಗೆ ಚಲಿಸುವಾಗ ಎಲ್ಲಾದರೂ ಒಂದು ಕಡೆ ಅರ್ಧ ಗಂಟೆ ನಿಂತಿತು ಎಂದರೆ, ಅದು "ವಾಟರಿಂಗ್ ಸ್ಟೇಶನ್" ಎಂದೇ ಅರ್ಥ. ಅಂದರೆ, ಉಗಿ ಬಂಡಿಯಲ್ಲಿರುವ ದೊಡ್ಡ ಟ್ಯಾಂಕ್ ಗೆ ನೀರನ್ನು ತುಂಬುವ ಜಾಗ. ಜೊತೆಗೆನೇ, ಅಗತ್ಯವಾದ ಕಲ್ಲಿದ್ದಲನ್ನೂ ಸಹಾ ಆ ಉಗಿಬಂಡಿಯಲ್ಲಿ ಸಂಗ್ರಹಿಸಿಡಬೇಕಾಗುತ್ತಿತ್ತು. ಕಲ್ಲಿದ್ದಲು ಬಳಕೆ ವ್ಯಾಪಕವಾಗುವ ಮುಂಚೆ, ಮರ ಮಟ್ಟುಗಳನ್ನು ಬಳಸಿ ಬೆಂಕಿ ಉರಿಸುತ್ತಿದ್ದರಂತೆ. ಕಲ್ಲಿದ್ದಲು ಬಳಸಿ ಬೆಂಕಿ ಉರಿಸಿ, ನೀರನ್ನು ಕುದಿಸಿದಾಗ ಹೊರಬರುವ ಉಗಿ ಅಥವಾ ಆವಿಯಿಂದಲೇ ಚಕ್ರ ತಿರುಗಿಸುವ ಆ ರೈಲು ೨೦ನೆಯ ಶತಮಾನದ ಹೆಚ್ಚಿನ ಭಾಗದಲ್ಲಿ ಭಾರತದಾದ್ಯಂತ ಎಕೈಕ ಸಂಪರ್ಕ ಸಾಧನವಾಗಿತ್ತು. ಕೊನೆಕೊನೆಗೆ ಹೆಚ್ಚು ಬಳಕೆಗೆ ಬಂದ ಡೀಸಲ್ ಯಂತ್ರಗಳ ಆಧಿಪತ್ಯದಿಂದಾಗಿ, "ಉಗಿ ಬಂಡಿ"ಗಳು ನೇಪಥ್ಯಕ್ಕೆ ಸರಿದವು.
ಹಿಂದೆ ಮಂಗಳೂರು- ಸುಬ್ರಹ್ಮಣ್ಯದ ಮೂಲಕ ಒಂದು ಉಗಿಬಂಡಿ ಚಲಿಸುತ್ತಿತ್ತು. ನಾವು ಗೆಳೆಯರು ಒಮ್ಮೆ ಆ ರೈಲಿನಲ್ಲಿ ಹೊರಟು ವಿಳಂಬ ಯಾತ್ರೆಗೆ ಒಳಗಾದದ್ದು ನೆನಪಾಗುತ್ತಿದೆ. ೧೯೮೦ನೇ ಇಸವಿ ಇರಬೇಕು - ಮಂಗಳೂರಿನಿಂದ ಸಕಲೇಶಪುರಕ್ಕೆ ಟಿಕೀಟು ಪಡೆದು ಮಟ ಮಟ ಮಧ್ಯಾಹ್ನ ಆ ರೈಲಿನಲ್ಲಿ ಕುಳಿತೆವು. ಒಂದು ಗಂಟೆ ಚಲಿಸಿದ ನಂತರ, ಆ ಉಗಿಬಂಡಿಯ ರೈಲು ನಿಧಾನವಾಗಿ ಚಲಿಸುತ್ತಾ, ಒಂದು ಹಳ್ಳಿಯ ಹತ್ತಿರ ನಿಂತೇ ಹೋಯಿತು. ಕಾರಣ ತಿಳಿಯಲೆಂದು, ಕೆಳಗಿಳಿದು ಹೋಗಿ ನೋಡಿದರೆ, ನೀರನ್ನು ಕುದಿಸಿ ಉಗಿಯನ್ನು ತಯಾರಿಸಲು ಸಾಕಷ್ಟು ಶಾಖ ಉತ್ಪತ್ತಿಯಾಗುತ್ತಿರಲಿಲ್ಲವಂತೆ. ಏಕೆಂದರೆ, ಅಂದು ಉಗಿಬಂಡಿಯಲ್ಲಿ ಬಳಸುತ್ತಿದ್ದ ಕಲ್ಲಿದ್ದಲು ಕಲಬೆರಕೆಯಾಗಿತ್ತಂತೆ! ಅರ್ಧ ಸುಟ್ಟ ಒಂದು ರಾಶಿ ಕಲ್ಲಿದ್ದಲನ್ನು ಹೊರಚೆಲ್ಲಿ, ನಂತರ ನಿಧಾನವಾಗಿ ಹೊರಟಿತು ಆ ರೈಲು. ಸಕಲೇಶಪುರಕ್ಕೆ ಬರುವಾಗ ರಾತ್ರಿ ೯ ಗಂಟೆ. ಈ ವಿಳಂಬದಿಂದಾಗಿ, ಘಾಟಿ ರಸ್ತೆಯ ಆ ರೈಲು ಪ್ರಯಾಣದಲ್ಲಿ ನಿತ್ಯಹರಿದ್ವರ್ಣ ಕಾಡನ್ನು ನೋಡಬೇಕೆಂಬ ನಮ್ಮ ಆಸೆಗೆ ತಣ್ಣಿರೆರಚಿದಂತಾಯಿತು. ಅಲ್ಲಿಂದಾಚೆ, ಅದೇ ದಿನ ಬೇಲೂರಿನತ್ತ ಪಯಣಿಸಬೇಕೆಂಬ ನಮ್ಮ ಯೋಜನೆಗೂ ಕತ್ತರಿ ಬಿತ್ತು. ಸಕಲೇಶಪುರದಲ್ಲಿ ಆ ರಾತ್ರಿ ತಂಗಿ, ಮರುದಿನ ಬೇಲೂರು - ಹಳೆಬೀಡು ನೋಡಲು ಹೊರಟೆವು. ಅಂದು ನಾವು ಸಂಚರಿಸಿದ ಉಗಿ ಬಂಡಿಯು, ಭಾರತದ ಕೊನೆಕೊನೆಯ ಮೀಟರ್ ಗೇಜ್ ಉಗಿ ಬಂಡಿಗಳಲ್ಲಿ ಒಂದು - ನಂತರದ ವರ್ಷಗಳಲ್ಲಿ ಡೀಸಲ್ ಯಂತ್ರಗಳ ಬಳಕೆ ಜಾಸ್ತಿಯಾಯ್ತು.
ಹಳೆಕಾಲದ ಉಗಿಬಂಡಿ ಪ್ರಯಾಣಗಳನ್ನು ಹಿಂದಿನ ತಲೆಮಾರಿನ ಜನರು ನೆನಪಿಸಿಕೊಳ್ಳುವ ಪರಿಯೇ ಒಂದು ರೀತಿಯ ಸಂಭ್ರಮ! ರೈಲುಗಳಲ್ಲಿ ಸಂಚರಿಸುವಾಗ ನೀರನ್ನು ಹಿಡಿದುಕೊಂಡು ಹೋಗಲು "ರೈಲು ತಂಬಿಗೆ" ಎಂಬ ದೊಡ್ಡ ಒಂದು ತಂಬಿಗೆಯೇ ಇರುತ್ತಿತ್ತು. ಸಣ್ಣ ಕೊಡದಷ್ಟು ಗಾತ್ರ ಇರಬಹುದಾದ ಅದಕ್ಕೆ ಒಂದು ತಿರುಗಣೆಯ ಮುಚ್ಚಳ, ಮತ್ತು ಆ ಮುಚ್ಚಳಕ್ಕೆ ಬೆಸೆದುಕೊಂಡಿರುವ ಒಂದು ಹಿಡಿ! ಈಗಲೂ ಕೆಲವರ ಮನೆಯ ಅಟ್ಟಗಳಲ್ಲಿ ಆ ರೀತಿಯ ಹಿತ್ತಾಳೆಯ ರೈಲು ತಂಬಿಗೆ ಇದ್ದೀತು! ಅಂದಿನ ಕಾಲದಲ್ಲಿ ಹಲವು ಬಾರಿ ರೈಲುಗಳಲ್ಲಿ ದೂರದೂರಿಗೆ ಸಂಚರಿಸಿದ ನಮ್ಮ ಅಮ್ಮಮ್ಮನ ಅನುಭವ ವಿಶಿಷ್ಟ. ಅವರು ರೈಲುಗಳಲ್ಲಿ ಕಂಡ ಹೊಸ ಹೊಸ ವಿಚಾರಗಳನ್ನು ಬೇರೆಯವರೊಡನೆ ಹಂಚಿಕೊಳ್ಳುತ್ತಿದ್ದ ಪರಿಯೇ ಅನನ್ಯ. ಭಾರತದ ದಕ್ಷಿಣತುದಿಯಲ್ಲಿರುವ ರಾಮೇಶ್ವರದ ತನಕ ರೈಲಿನಲ್ಲಿ ಹೋಗಿಬಂದಿದ್ದರು. ಆಂಧ್ರ ಪ್ರದೇಶಕ್ಕೂ ಏಕಾಂಗಿಯಾಗಿ ಸಂಚರಿಸಿದ ಅವರ ಅನುಭವ ಮತ್ತು ಧೈರ್ಯ ಇಂದಿಗೂ ನಮಗೆ ಅಚ್ಚರಿ ತರುತ್ತದೆ.
ಶಿವಮೊಗ್ಗದ ಮೂಲಕ ಬೆಂಗಳೂರಿಗೆ ಚಲಿಸುವ ರಾತ್ರಿ ರೈಲನ್ನು ಹಿಡಿಯಲು ಅವರು ಸಾಗರಕ್ಕೆ ಹೋಗಿ, ಅಲ್ಲೇ ರೈಲು ಏರುತ್ತಿದ್ದರು. ಏಕೆ ಅಷ್ಟು ದೂರ ಹೋಗಿ ರೈಲು ಹಿಡಿಯುತ್ತೀರಿ ಎಂದು ಕೇಳಿದರೆ, "ಸೀಟು ಸಿಗುತ್ತದೆ!" ಎಂಬ ಉತ್ತರ. ನಮ್ಮ ಊರಿನಿಂದ ಶಿವಮೊಗ್ಗ ಮತ್ತು ಸಾಗರ ಎರಡೂ ಊರುಗಳು ಸಮಾನ ದೂರದಲ್ಲಿದ್ದುದರಿಂದ, ಸಾಗರಕ್ಕೆ ಮುಂದಾಗಿ ಹೋಗಿ ರೈಲಿನಲ್ಲಿ ಒಳ್ಳೆಯ ಜಾಗ ಹಿಡಿದು ಕುಳಿತುಕೊಳ್ಳುತ್ತಿದ್ದರು. (ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಂದೆಯ ಸಲಹೆ ಅದು). ನಮ್ಮ ತಂದೆ ಕೆಲಸ ಮಾಡುತ್ತಿದ್ದ ಊರಿಗೆ ಹೋಗಲು, ರಾತ್ರಿ ರೈಲಿನಲ್ಲಿ ಬೆಂಗಳೂರಿನ ತನಕ ಚಲಿಸಿ, ನಂತರ ಅಲ್ಲಿಂದ ಮತ್ತೊಂದು ರೈಲಿನಲ್ಲಿ ಹೋಗಬೇಕಿತ್ತು. ಇಷ್ಟು ದೂರದ ಪ್ರಯಾಣವನ್ನು ಒಬ್ಬರೇ ಮಾಡುವಷ್ಟು ಧೈರ್ಯ ಅವರಿಗೆಲ್ಲಿಂದ ಬಂತು? "ಅದಕ್ಕೆಂತ ಧೈರ್ಯ ಬೇಕು? ಯಾರನ್ನಾದರೂ ಕೆಳಿದರೆ ಸೈ. ಬಾಯಿ ಇದ್ರೆ ಬೆಲ್ಲ ಬೇಡಿ ತಿನ್ಲಕ್ಕ್" ಎಂದು ಒಂದು ಗಾದೆಯನ್ನು ಉಸುರುತ್ತಿದ್ದರು. ನಮ್ಮ ತಂದೆ ಇದ್ದ ಊರಿಗೆ ನನ್ನನ್ನು ಸಹಾ (ನಾನು ನಾಲ್ಕನೆಯ ತರಗತಿಯಲ್ಲಿದ್ದಾಗ) ರೈಲಿನ ಮೂಲಕ ಒಮ್ಮೆ ಕರೆದುಕೊಂಡು ಹೋಗಿದ್ದರು. ಒಂದು ಮಧ್ಯಾಹ್ನ ಬಸ್ ಏರಿ, ಸಂಜೆ ಸಾಗರ ತಲುಪಿ, ಅಲ್ಲಿ ಹಾಲ್ಟ್ ಆಗಿ ನಿಂತಿದ್ದ ಬೆಂಗಳೂರಿನ ರೈಲು ಏರಿ, ಮರುದಿನ ಬೆಳಿಗ್ಗೆ ಬೆಂಗಳೂರಿನಲ್ಲಿ ಇಳಿದು, ನಂತರ ಆಂಧ್ರಪ್ರದೇಶಕ್ಕೆ ಸಾಗುವ ಸಿಕಂದರಾಬಾದ್ ಎಕ್ಸ್ ಪ್ರೆಸ್ ಹತ್ತಿ, ನಮ್ಮ ತಂದೆ ಇದ್ದ ಊರಿನಲ್ಲಿ ರೈಲಿಳಿಯುವಾಗ ಸಂಜೆ ನಾಲ್ಕು ಗಂಟೆ. ಉಗಿಬಂಡಿಯ ಹೊಗೆ ಕುಡಿದು ಕುಡಿದು, ಬಟ್ಟೆ ಎಲ್ಲಾ ಕಪ್ಪು ಕಪ್ಪು. ಆ ರಾತ್ರಿ ಮಲಗಿದಾಗಲೆಲ್ಲ, ಆ ಉಗಿ ಬಂಡಿ ಕೂಗುತ್ತಿದ "ಕೂ" ಸದ್ದು ಕನಸಿನಲ್ಲೂ ರಿಂಗಣಿಸುತ್ತಿತ್ತು. ಆ ಪ್ರಯಾಸ ಭರಿತ ಪ್ರಯಾಣದಲ್ಲೂ ರಸನಿಮಿಷಗಳನ್ನು ಗುರುತಿಸುತ್ತಿದ್ದರು ನಮ್ಮ ಅಮ್ಮಮ್ಮ. "ಬೆಂಗಳೂರಿನ ಪ್ಲಾಟ್ ಫಾರ್ಮ್ ನಲ್ಲಿ ಬೆಳಿಗ್ಗೆ ರೈಲು ಇಳಿದ ಕೂಡಲೆ, ಓರ್ವ ಮಳೆಯಾಳಿ ಮಾಡಿಕೊಡುತ್ತಿದ್ದ ಕಾಫಿ ಭಾಳ ರುಚಿ ಇತ್. ಆ ಮಳೆಯಾಳಿ ಹಣೆ ತುಂಬಾ ದಪ್ಪ ದಪ್ಪ ವಿಭೂತಿ ಪಟ್ಟೆ" ಎಂದು ನೆನಪಿಸಿಕೊಳ್ಳುತ್ತಿದ್ದರು.
ಚಿತ್ರ ಕೃಪೆ :ಟೂರಿಸಂದವರ್ಲ್ಡ್.ಕಾಂ
Comments
ಉ: ಚುಕು ಬುಕು ಚುಕು ಬುಕು ರೈಲೇ - ಪ್ರಬಂಧ
In reply to ಉ: ಚುಕು ಬುಕು ಚುಕು ಬುಕು ರೈಲೇ - ಪ್ರಬಂಧ by makara
ಉ: ಚುಕು ಬುಕು ಚುಕು ಬುಕು ರೈಲೇ - ಪ್ರಬಂಧ
In reply to ಉ: ಚುಕು ಬುಕು ಚುಕು ಬುಕು ರೈಲೇ - ಪ್ರಬಂಧ by sasi.hebbar
ಉ: ಚುಕು ಬುಕು ಚುಕು ಬುಕು ರೈಲೇ - ಪ್ರಬಂಧ