ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?

ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?

ಒಬ್ಬಾತ ಬ್ಲಾಗ್ ಯಾಕೆ ಬರೀತಾನೆ ಅಂತ ನಾನು ಅನೇಕ ಬಾರಿ ಯೋಚಿಸಿದ್ದೆ. ಉದ್ದುದ್ದದ ಹೆಸರುಗಳಿರುವ ಬ್ಲಾಗ್ ನೆನಪಿಡುವುದೂ ಕಷ್ಟ. ಇನ್ನು ಅಂತರ್ಜಾಲದಲ್ಲಿ ಈಗಾಗಲೇ ಇರುವ ಮಾಹಿತಿಯ ಕೆನೆಯಲ್ಲಿ ಮಾತ್ರ ತೇಲಾಡುತ್ತಿರುವ ನಾವು ಇನ್ನಷ್ಟು ಮಾಹಿತಿಯನ್ನು ಬರೆದು ಅದಕ್ಕೆ ಹಾಕಿ ನಮ್ಮನ್ನು ನಾವೇ ಬಿಚ್ಚಿಕೊಳ್ಳುವುದು ಬೇಕು ಬೇಡದ್ದೆಲ್ಲವನ್ನೂ ಪ್ರಪಂಚಕ್ಕೆ ತಿಳಿಸಿ ಹೇಳುವುದು ಇದರಿಂದ ನಾವೇ ಅಲ್ಲದ ಒಂದು ನಾವು ರೂಪುಗೊಳ್ಳುವುದು ಇತ್ಯಾದಿ ನನಗೆ ಬ್ಲಾಗ್ ಎಂಬ ಕಾನ್ಸೆಪ್ಟ್ ಕೇಳಿದ ದಿನದಿಂದ ಕಾಡುತ್ತಿದೆ. ಮೊಬೈಲ್ ಫೋನ್ ಬಂದ ನಂತರ ನಮ್ಮ ಜೀವನದಲ್ಲಿ ಆದ ದೊಡ್ಡದೊಂದು ಬದಲಾವಣೆ ಎಂದರೆ ಜನ ಎಲ್ಲೆಂದರಲ್ಲಿ ದೊಡ್ಡದಾಗಿ ತಮ್ಮ ಮನೆಯ ವಿಷಯವನ್ನು ತೀರಾ ಮುಜುಗರದ ವಿಷಯಗಳನ್ನು ದಾರಿ ಮಧ್ಯೆ ತಮಗೇ ಗೊತ್ತಿಲ್ಲದಂತೆ ದೊಡ್ಡದಾಗಿ ಮಾತನಾಡುತ್ತಾ ನಡೆದಾಡುವುದು.

ಈ ಬಾರಿಯ ಹೋಳಿ ಹಬ್ಬದ ದಿನ ರಾತ್ರಿ ನಾನು ಪಟ್ನಾ ವಿಮಾನ ನಿಲ್ದಾಣದಲ್ಲಿ ಕೂತು ಕಾಯುತ್ತಿದ್ದೆ. ಅಕಸ್ಮತ್ತಾಗಿ ``ರಂಗ್ ಬರಸೇ... ಭೀಗೇ...'' ಎಂದು ಹಾಡುತ್ತಾ ಒಬ್ಬ ನಡುವಯಸ್ಸಿನ ವ್ಯಕ್ತಿ ತೂರಾಡುತ್ತಾ ಬಂದು ನನ್ನ ಪಕ್ಕದಲ್ಲಿ ಕುಳಿತ. ಭಾಂಗ್ ಆತನ ನೆತ್ತಿಯೇರಿತ್ತು. ಕೈಯಲ್ಲಿದ್ದ ಮೊಬೈಲಿನಲ್ಲಿ ಮಾತನಾಡುತ್ತಿದ್ದ. ಖಾಲಿ ಇದ್ದ ವಿಮಾನ ನಿಲ್ದಾಣದಲ್ಲಿ ಈತನೊಬ್ಬನದೇ ಸ್ವರ ಉಳಿದ ಕೆಲವೇ ನಾವು ಶ್ರೋತೃಗಳು! ಮುಂದಿನ ಐದೇ ನಿಮಿಷದಲ್ಲಿ ಆತನ ಹೆಸರು (ಅದು ಇಲ್ಲಿ ಬೇಡ ಬಿಡಿ) ಆತನಿಗೆ ಇಬ್ಬರು ತಂಗಿಯರು ಇರುವುದು, ಆತನಿಗೆ ಮದುವೆಯಾಗಿರುವುದು, ಮಗ ಈ ಬಾರಿ ೧೨ನೇಯಲ್ಲಿ ಇರುವುದು, ಅಜ್ಜಿಗೆ ಅನಾರೋಗ್ಯ ಇರುವುದರಿಂದಾಗಿ ಅವರಿಗೆ ಹೋಳಿ ತಪ್ಪಿದ್ದು ಇತ್ಯಾದಿ ನಮಗೆ ತಿಳಿಯಿತು!

ನಮ್ಮ ಬ್ಲಾಗ್ ಕೂಡಾ ಅಂಥಾ ಒಂದು ಹವ್ಯಾಸ ಎಂದು ನನ್ನ ಅನಿಸಿಕೆ. ಅಕಸ್ಮತ್ತಾಗಿ ಅಂತರ್ಜಾಲ ಜಾಲಾಡುವವರಿಗೆ ಸಿಗುವ ಬ್ಲಾಗ್‍ಗಳು ಅಥವಾ ನಮ್ಮ ಪರಿಚಿತರೇ ಮತ್ತೆ ಮತ್ತೆ ಓದಿ ಬೋರಾಗುವ ಬ್ಲಾಗ್‍ಗಳು, ನಮ್ಮನ್ನು ನಾವೇ ಬಿಚ್ಚಿಟ್ಟು ಹೊಗಳಿಸಿಕೊಳ್ಳುವ ಅಥವಾ ಕೀಳಾಗಿಸಿಕೊಳ್ಳುವ ಬ್ಲಾಗ್‍ಗಳು ಇವನ್ನು ನಾನ್ಯಾಕೆ ಬರೆಯುತ್ತೇನೆ ಎಂಬ ಸಂಶಯದಲ್ಲಿ ನಾನಿದ್ದೇನೆ. ನೀವ್ಯಾಕೆ ಬ್ಲಾಗ್ ಬರೆಯುತ್ತೀರೆಂದು ಟಿಪ್ಪಣಿ ಸೇರಿಸುತ್ತೀರಾ...?

Rating
No votes yet

Comments