ಆವರಣದ ಬಗ್ಗೆ ಒಂದು ಅನೌಪಚಾರಿಕ ಪತ್ರ
ನನ್ನ ತಂದೆ ಜಿ.ಎನ್. ಅಶೋಕ ವರ್ಧನ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ಮಾಲಿಕ. ಭೈರಪ್ಪನವರ ಆವರಣ ಪುಸ್ತಕ ಬಿಡುಗಡೆಯಾಗಿ ಭಾರೀ ವ್ಯಾಪಾರ ನಡೆಸುತ್ತಿರುವ ಸಮಯದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಅವನ್ನು ಈ ಮೂಲಕ ನಿಮ್ಮೆಲ್ಲರ ಓದಿಗಾಗಿ ಸಂಪದಕ್ಕೆ ಸೇರಿಸುತ್ತಿದ್ದೇನೆ.
- ಅಭಯ ಸಿಂಹ.
ಪ್ರಿಯರೆ ನನಗೆ ಹೊಳೆದ ಕೆಲವು ಈಚಿನ ವಿಚಾರಗಳನ್ನು ಹೀಗೇ ಇನ್ನಷ್ಟು ಮಂದಿಯೊಂದಿಗೆ ಹಂಚಿಕೊಳ್ಳಬೇಕೆಂದು ತುಡಿತ ತೀವ್ರವಾದುದರಿಂದ ಎಂದಿನಂತೆ ಯಾವ ಔಪಚಾರಿಕ ಚೌಕಟ್ಟು, ಅಂತಿಮ ತೀರ್ಮಾನಗಳನ್ನು ಹೇರದೆ ನಿರೂಪಿಸುತ್ತೇನೆ. ಆದರೆ ಅವಶ್ಯ ನಿಮ್ಮ ಪ್ರತಿಕ್ರಿಯೆಗಳನ್ನು ಕಾದಿರುತ್ತೇನೆ. ಸಾಹಿತ್ಯಭಂಡಾರದಿಂದ ಆವರಣದ ಇಪ್ಪತ್ತೈದು ಪ್ರತಿ ಕೇಳಿದ್ದೆ. ಕನ್ನಡದಲ್ಲಿ ಎಂದೂ ಇಲ್ಲದ ಬಿಡುಗಡೆಯ ದಿನದ ಒತ್ತಡದಲ್ಲಿ ಐದನೇ ತಾರೀಕಿನಂದು ಬಂದ ಪ್ರತಿಗಳು ಮಾರಿಹೋಗುವುದನ್ನು ಕಂಡು ಆರರಂದು ಮತ್ತೆ ಐವತ್ತು ಪ್ರತಿಗಳಿಗೆ ಬೇಡಿಕೆ ಮಂಡಿಸಿದೆ. ಎಲ್ಲರಿಗೂ ತಿಳಿದಂತೆ `ಭಂಡಾರಿಗಳು' ಎರಡನೇ ಮುದ್ರಣವನ್ನು ಒಂಬತ್ತಕ್ಕೆ ಮುಗಿಸಿಕೊಟ್ಟರು.
ನನ್ನಲ್ಲಿ ಹಲವರು ಈರ್ಷ್ಯೆಯಿಂದಲೇ ಎಂಬಂತೆ ಹೇಳುವುದಿದೆ, "ನಿಮಗೇನಪ್ಪಾ ಬೇಕಾದ್ದು, ಧರ್ಮಕ್ಕೆ ಓದಬಹುದು." ಆದರೆ ನಾನು ವಾಸ್ತವವನ್ನು ತಮಾಷೆಯಲ್ಲೆ ನೀವೇದಿಸುವುದಿದೆ - ಇಲ್ಲಾ. ನಾನು ಓದುವುದು ಕ್ಯಾಟ್ಲಾಗು, ಬಿಲ್ಲು! ಬರೆಯುವುದೂ ಅಷ್ಟೇ ಆದೇಶಪತ್ರ, ಬಿಲ್ಲು ಮತ್ತೆ ತೀರಾ ಕ್ವಚಿತ್ತಾಗಿ ಜಗಳಗಂಟೀ ಪತ್ರ!! ಆದರೂ ಆವರಣದ ಜನಮನ್ನಣೆಯ ಮಹಾಪೂರದಲ್ಲಿ ವ್ಯಾಪಾರೀ ಸ್ಥಿತಪ್ರಜ್ಞೆಯನ್ನು (ಸೋಮಾರೀತನ?) ಕಳಚಿಕೊಂಡು ಎಲ್ಲ ವಹಿವಾಟುಗಳ ನಡುವೆ ಎರಡೇ ದಿನಗಳಲ್ಲಿ ಓದಿ ಮುಗಿಸಿದೆ. ಮತ್ತೆ ಹಿಡಿದಿಟ್ಟುಕೊಳ್ಳಲಾಗದೆ ಸೂಚ್ಯವಾಗಿ (ಪಾವತಿ ಚೆಕ್ಕಿನೊಡನೆ) ಭಂಡಾರಿಗಳಿಗೆ ನನ್ನ ಅಭಿಪ್ರಾಯದ ಎರಡು ಸಾಲು ಗೀಚಿದೆ. ಅದನ್ನೇ ಸ್ವಲ್ಪ ಪರಿಷ್ಕರಿಸಿ, ವಿಸ್ತರಿಸುವುದಾದರೇ ಮೊದಲು ಕಾಣುವುದು ಭೈರಪ್ಪನವರ ಅಗಾಧ ಓದು. ಮತ್ತದನ್ನು ತಮ್ಮ ವಾದಕ್ಕೆ ಬಳಸಿಕೊಳ್ಳುವ ಅಸಾಮಾನ್ಯ ತಾಕತ್ತು. ಮುಂದುವರಿದು ಅದನ್ನು ಕೃತಿರೂಪಕ್ಕೆ ಇಳಿಸುವ ಜಾಣ್ಮೆ. ಆದರೆ ಇವರ ಅದ್ವಿತೀಯ ಲೋಕಾನುಭವದ ಫಲವಾಗಿ ಕಾಣಬೇಕಿದ್ದ ಕಥಾ ಹಂದರ ಉದ್ದೇಶಪೂರ್ವಕವೋ ಎಂಬಂತೆ ತೀರಾ ಬಡಕಲಾಗಿದೆ. ಲಕ್ಷ್ಮಿ ಅಥವಾ ರಜಿಯಾ ಹೆಸರಿನಲ್ಲಿ ಇಸ್ಲಾಂ ಧರ್ಮದ ಕೊರತೆಗಳನ್ನು ಮತ್ತು ಭಾರತೀಯ ಇತಿಹಾಸದಲ್ಲಿ ಮುಸ್ಲಿಂ ಆಡಳಿತದಿಂದಾದ ಅನಾಚಾರಗಳನ್ನು ಸ್ವತಃ ಭೈರಪ್ಪನವರೇ ಬಲವಾದ ವಾದದ ರೂಪದಲ್ಲಿ ಹೆಣೆದಿದ್ದಾರೆ. ಸಹಜವಾಗಿ ಎಲ್ಲಾ ಪಾತ್ರಗಳು ಕೇವಲ ಅಣಕದ ಮಟ್ಟದಿಂದ ಮೇಲೆ ಬರುವುದೇ ಇಲ್ಲ. ಈ ಕೃತಿ ಮೊದಲಲ್ಲಿ ಇತಿಹಾಸದ ಓದುಗರಲ್ಲದವರನ್ನು ಅಂದರೆ ಕಾದಂಬರಿ ಓದುಗರ ವಿಶಾಲಪ್ರಪಂಚವನ್ನು ಆವರಿಸುತ್ತದೆ. ಅದಕ್ಕೂ ಅಪಾಯಕರವಾಗಿ ಮೂಲಭೂತವಾದಿಗಳನ್ನು ಆಕರ್ಷಿಸುತ್ತದೆ. ಕೆಲವರಿಗೆ ಇದೊಂದು ಅಸ್ತ್ರವಾದರೆ ಇನ್ನೊಂದು ಬಳಗಕ್ಕೆ ನಿವಾರಿಸಲೇಬೇಕಾದ ಹೊಲಸಾಗಿಯೂ ಕಾಣಿಸಿದರೆ ಆಶ್ಚರ್ಯವಿಲ್ಲ. ಒಟ್ಟಾರೆ ಇತಿಹಾಸದ ಅನಾಚಾರಗಳು ವರ್ತಮಾನದ ಜೀವನವನ್ನು ಕಲಕಲು ಇದು ಬಲು ದೊಡ್ಡ ಪ್ರೇರಣೆ ಕೊಟ್ಟೀತು ಎನ್ನುವುದು ನನ್ನ ಹೆದರಿಕೆ. ಇದು ಸರಿ ಎನ್ನುವುದಾದರೆ ಅನ್ವಯವನ್ನು ಕಾದಂಬರಿ ಸೂಚಿಸುವ ಬರಿಯ ಹಿಂದೂ-ಮುಸ್ಲಿಂ ಮತಕ್ಕೆ ಸಿಮಿತಗೊಳಿಸಿದರೆ ಸಾಕೇ? ಬೌದ್ಧ-ಹಿಂದೂ (ಕದ್ರಿಯ ಅವಲೋಕಿತೇಶ್ವರ- ಮಂಜುನಾಥೇಶ್ವರ ದೇವಸ್ಥಾನ), ಶೈವ-ವೈಷ್ಣವ (ಉಡುಪಿಯ ಅನಂತೇಶ್ವರ-ಕೃಷ್ಣ ಮಠ), ಶ್ರೀರಂಗದ ತೆಂಕಲೈ-ಬಡಗಲೈ ಅಥವಾ ಮುಸ್ಲಿಮರದೇ ಶಿಯಾ ಸುನ್ನಿ ಸಂಪ್ರದಾಯಗಳಿಗೂ (ಇತ್ಯಾದಿ) ವಿಸ್ತರಿಸುತ್ತಾ ಹೋದರೆ (ಅಶಾಂತಿ, ರಕ್ತಪಾತಕ್ಕೆ ಕೊನೆಯಿಲ್ಲ) ಎಲ್ಲಾ ಶಿಷ್ಟ ಆರಾಧನೆಗಳೂ ಮತಾಚಾರಗಳೂ ಜನಪದದಲ್ಲಿ ಕೊನೆಗೊಳ್ಳುವುದು ನಿಶ್ಚಯ; ಇದು ಸ್ವೀಕಾರಾರ್ಹವಾಗುವುದುಂಟೇ? ನನ್ನೀ ಅಭಿಪ್ರಾಯಗಳಿಗೆ ಪೂರಕವಾಗಿ ಮೊದಲ ಮುದ್ರಣದ ಪ್ರತಿಗಳ ಮಾರಾಟ ಭರಾಟೆಯಲ್ಲಿ `ಹಿಂದೂ ಪರಿವಾರದ' ಪಾತ್ರ ಸ್ಪಷ್ಟವಾಗಿದ್ದುದು ತಿಳಿದುಬಂತು. ಎರಡನೇ ಮುದ್ರಣ ಬರುವ ಕಾಲಕ್ಕೆ (ನಾಲ್ಕೇ ದಿನಗಳಲ್ಲಿ) ಮತ್ತೆ ಆ ಬಳಗದ್ದೇ ನಿಂದಾಸ್ತುತಿಯ ಆಶಯವೋ ಎಂಬಂತೆ `ಆವರಣ ಬ್ಯಾನ್ ಆಗುತ್ತೆ' ಎನ್ನುವ ಗುಸುಗುಸು ದಟ್ಟವಾಗಿ ಹರಡಿತು.
ಕ್ಷಮಿಸಿ, ಇಲ್ಲಿ ನನ್ನ ಆತ್ಮಕಥೆಯ ಕವಲು ದಾರಿಯಲ್ಲಿ ಸ್ವಲ್ಪ ಬನ್ನಿ. ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ಬಡ(ಕಲು) ಉಪಾಧ್ಯಾಯ ಮೂಲಿಕಾಪುರದಲ್ಲಿ ನೆಲೆಸಿದ್ದ. ಈತ ತನ್ನೊಂದು ಕೃತಿರತ್ನವನ್ನು ಅಚ್ಚಿಸಿ ಹೊರ ಊರಿನಲ್ಲೆಲ್ಲೋ ಲೋಕಾರ್ಪಣದ ಕೆಲಸ ನಡೆಸಿದ. ಸಣ್ಣ ಸುದ್ದಿಯಾಯ್ತು, ಜನ ಮರೆತರು. ಆದರದು ಸಾಲದನ್ನಿಸಿ, ಪೆಟ್ಟು ತಿಂದಾದರೂ ಪೇಪರಿನಲ್ಲಿ ಕಾಣಿಸಬೇಕೆನ್ನುವ ಹುಂಬನಂತೆ ಬಡ(ಕಲು) ಉಪಾಧ್ಯಾಯ ಮೂಲಿಕಾಪುರದಲ್ಲೇ ಇನ್ನೊಂದು ನಾಟಕ ವ್ಯವಸ್ಥೆ ಮಾಡಿಸಿದ. ಅಲ್ಲಿ ಸ್ವತಃ ಲೇಖಕನೇ ಕೃತಿಯ `ಅವಗುಣ'ವನ್ನು ಎತ್ತಿ ಹಾಡಿದ. ಸಹಜವಾಗಿ ಮತೀಯ ಭಾವನೆಯನ್ನು ಕೆರಳಿಸುತ್ತದೆಂಬ ಹೆಸರಿನಲ್ಲಿ ಸಣ್ಣ ಪ್ರತಿಭಟನೆಯೊಡನೆ ಪ್ರಚಾರವೇನೋ ದೊಡ್ಡದಾಗಿಯೇ ಗಿಟ್ಟಿತು. ಆದರೆ ಯಾರೋ ಬುದ್ದಿವಂತರು ನ್ಯಾಯಾಲಯದ ಕಟ್ಟೆಗೇ ಈ ಕೃತಿಯನ್ನೇರಿಸಿ ಎಲ್ಲಾ ಪ್ರತಿಗಳ ವಶೀಕರಣ ಆಜ್ಞೆಯನ್ನೂ ಪಡೆದದ್ದು ನನಗೆ ತಿಳಿಯುವಾಗ ತಡವಾಯ್ತು. ಆ ಒಂದು ದಿನ ನಾನು ಅಂಗಡಿ ಬಾಗಿಲು ತೆಗೆಯುವಾಗ ಎಂದಿನಂತಲ್ಲದೆ ಪೋಲೀಸು ಜೀಪೊಂದು ಕಾದು ನಿಂತಿತ್ತು. ಎರಡು ಪೇದೆಗಳೊಡನೆ ಬಂದ ಅಧಿಕಾರಿ ಮೃದುಮಾತಿನಲ್ಲೇ ತಾವು ಹಿಂದಿನ ರಾತ್ರಿಯೇ ನನ್ನ ಮನೆಯ ವಿಳಾಸ, ದೂರವಾಣಿ ಹುಡುಕಿ ವಿಫಲವಾದ್ದನ್ನು ಹೇಳಿಕೊಂಡರು. ಮತ್ತೆ ನ್ಯಾಯಾಲಯದ ಆದೇಶ ತೋರಿಸಿ ಬಡ(ಕಲು) ಉಪಾಧ್ಯಾಯನ ಪುಸ್ತಕದ ಪ್ರತಿಗಳನ್ನೆಲ್ಲಾ ತಮಗೆ ಒಪ್ಪಿಸುವಂತೆ ಕೇಳಿಕೊಂಡರು. ನಾನು ಕೊಂಡಿದ್ದ ಹತ್ತೋ ಹದಿನೈದೋ ಪ್ರತಿಗಳಲ್ಲಿ ಒಂದೆರಡು ಮಾರಿಹೋದ್ದನ್ನು ಬಿಟ್ಟು ಉಳಿದೆಲ್ಲವನ್ನೂ ಒಪ್ಪಿಸಿ ರಸೀದಿ ಪಡೆದೆ. [ಆ ಅಧಿಕಾರಿ ಕೊಡವ, ನನ್ನ ತಂದೆಯ ಹಳೆಯ ವಿದ್ಯಾರ್ಥಿಯಂತೆ. ತಂದೆ ಮಡಿಕೇರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಗೌರವ ಕಾರ್ಯದರ್ಶಿಯಾಗಿ ನಡೆಸಿದ ಸಹಕಾರಿ ಸಂಘದ ಕಥೆಯನ್ನು ಈ ಅಧಿಕಾರಿ ಜ್ಞಾಪಿಸಿಕೊಂಡರು. "ನಾನೊಂದು ನೋಟ್ ಬುಕ್ಕಿಗೆ ಹಣ ಕೊಟ್ಟರೆ ಮಾಸ್ಟ್ರು, ಪುಸ್ತಕ ಕೊಟ್ಟು ಮತ್ತೆ `ಬರೆಯಲು ಸುಂದರ ನಟರಾಜ ಪೆನ್ಸಿಲ್, ತಪ್ಪುಗಳನ್ನು ಅಳಿಸಲು ಉತ್ತಮ ರಬ್ಬರ್, ಬಾಯಿ ಸಿಹಿ ಮಾಡಲು ಆಹ್! ಪ್ಯಾರೀಸ್ ಸ್ವೀಟ್ಸ್' ಎಂದು ಎಲ್ಲಾ ಬಿಲ್ಲು ಮಾಡಿ ಚಿಲ್ಲರೆಯನ್ನೂ ಕೊಟ್ಟು ಕಳಿಸಿಬಿಡುತ್ತಿದ್ದರು. ಅಂಥಾ ಮಾಸ್ಟ್ರ ಮಗನಾಗಿ ನೀವು ಇಷ್ಟು ಸುದ್ದಿಯಲ್ಲಿರುವ ಈ ಪುಸ್ತಕವನ್ನು ಇಷ್ಟು ಕಮ್ಮಿ ಮಾರಿದ್ದಾ" ಎಂದು ತಮಾಷೆ ಮಾಡಿದ್ದನ್ನು ಹೇಳದಿರಲೆಂತು!] ಆ ವ್ಯಾಜ್ಯ ಬಗೆಹರಿದದ್ದು, ಪ್ರತಿಗಳು ಮರಳಿ ಬಂದದ್ದು ನಾನಂತೂ ಕಾಣಲಿಲ್ಲ. ಆದರೆ ವಶೀಕೃತ ಪ್ರತಿಗಳ ಲೆಕ್ಕದಲ್ಲಿ ನನಗೆ ನಷ್ಟವಾಗದಂತೆ ಆ ಕೃತಿಯ ಪ್ರಕಾಶಕರು ಹಣ ತುಂಬಿದರು.
ಈಗ ಇನ್ನೂ ಒಂದು ಸಾಧ್ಯತೆಗೆ ಕಿರುದಾರಿ ಬಿಟ್ಟು ಒಂದು ಅನಧಿಕೃತ ಗಲ್ಲಿಗೂ ಒಮ್ಮೆ ಕಾಲಾಡಿಸಲು ಹೀಗೆ ಬನ್ನಿ. ಅರುಣ್ ಶೌರಿ ಅಂಬೇಡ್ಕರ್ ಬಗ್ಗೆ (ವಿವಾದಾತ್ಮಕವಾದ) ಒಂದು ದೊಡ್ಡ ಪುಸ್ತಕ ಪ್ರಕಟಿಸಿದರು (ಬೆಲೆ ರೂ ಐದುನೂರರ ಮೇಲೆ). ಅದರ ಕುರಿತು ಅಲ್ಲಿ ಇಲ್ಲಿ ಅಪಸ್ವರಗಳು ಕೇಳುತ್ತಿದ್ದಂತೆ ಒಂದು ದಿನ ಬೆಂಗಳೂರಿನ ಖ್ಯಾತ ಪುಸ್ತಕ ಮಳಿಗೆ ಒಂದಕ್ಕೆ ಜನಸಮ್ಮರ್ದದ ನಡುವೆ ಒಬ್ಬ ಗಿರಾಕಿ ಇದನ್ನು ಕೇಳಿ ಬಂದ. ಒಂದು ಪ್ರತಿ ಕೊಟ್ಟರು. ಆತ ಹೆಚ್ಚು ಬೇಕೆಂದ. ಸರಿ, ಇವರು ಮಳಿಗೆಯ ಖ್ಯಾತಿಗೆ ತಕ್ಕಂತೆ ದಾಸ್ತಾನಿರಿಸಿದ್ದ ಹತ್ತಿಪ್ಪತ್ತು ಪ್ರತಿಗಳನ್ನು ಮುಂದೊಡ್ಡಿದರಂತೆ. ಒಮ್ಮೆಗೆ ಗಿರಾಕಿ ಶೌರಿ ವಿರುದ್ಧ ಬೊಬ್ಬೆ ಹಾಕುತ್ತಾ ಮಳಿಗೆಯ ಹೊರಗೆ ಹೊಂಚು ಹಾಕಿದ್ದ ತನ್ನ ತಂಡಕ್ಕೆ ಸೂಚನೆ ಕೊಟ್ಟ. ಕೂಡಲೇ ಆರೆಂಟು ಮಂದಿ ಒಳ ನುಗ್ಗಿ ಪ್ರಸ್ತುತ ಪುಸ್ತಕಕ್ಕೆ ಬೆಂಕಿ ಹಚ್ಚಲು ಮುಂದಾದರಂತೆ. ಮಳಿಗೆಯ ಯಜಮಾನ ಸಮಯಪ್ರಜ್ಞೆ ಪ್ರದರ್ಶಿಸಿ ಆ ಪುಸ್ತಕದ ಅಷ್ಟೂ ಪ್ರತಿಗಳನ್ನು ಹೊರಗೊಯ್ದು ಏನು ಬೇಕಾದರೂ ಮಾಡಿಕೊಳ್ಳಿ ಎಂದು ವಿನಂತಿಸಿ ಯಶಸ್ವಿಯಾದ. ಎದುರು ದಾರಿಯಲ್ಲೇ ಅವನ್ನು ಸುಟ್ಟು, ತಂಡ ಚದುರಿತಂತೆ.
ಈಗ ವಾಪಾಸು ಬನ್ನಿ, ಹಾಗೇ ಎಲ್ಲಾದರೂ ಆವರಣಕ್ಕೂ ನಿಷೇಧ ಬಂದರೆ ಐವತ್ತನ್ನೂ ಒಂದೇ ಗಂಟಿನಲ್ಲಿ ಕಳೆದುಕೊಳ್ಳುವಂತಾಗಬಾರದು ಎಂಬ ಎಚ್ಚರ ನನ್ನಲ್ಲಿ ಮೂಡಿತು! ಕೆಲವೇ ಪ್ರತಿಗಳನ್ನು ಅಂಗಡಿಯಲ್ಲಿ ಅದೂ ಸಹಜಸ್ಥಾನ ತಪ್ಪಿಸಿ ಉಳಿಸಿಕೊಂಡೆ. ದೊಡ್ಡ ಕಟ್ಟನ್ನು ಮನೆಗೆ ಸಾಗಿಸಿ ಅಲ್ಲೂ ಕಳ್ಳಹಣ ಮುಚ್ಚಿಡುವವನಂತೆ ದಾಸ್ತಾನಿಟ್ಟೆ. ಅಂಗಡಿಯದ್ದು ಮಾರಿಹೋದಂತೆಲ್ಲಾ ಬೆಳಿಗ್ಗೆ, ಮಧ್ಯಾಹ್ನ, ಸಂಜೆಯೆಂದು ಆಚೀಚೆ ಓಡಾಡುವಾಗ ಪ್ರತಿಗಳನ್ನು ಸಾಗಿಸಿಕೊಂಡು ಸುಧಾರಿಸಿದೆ. ಇಲ್ಲಿ ನನ್ನನ್ನು ಕಾಡುವ ದ್ವಂದ್ವ ಇಷ್ಟೇ - ಅನಧಿಕೃತವಾಗಿ ನ್ಯಾಯವನ್ನು ಕೈಗೆತ್ತಿಕೊಳ್ಳುವವರನ್ನು ನಾನು ವಂಚಿಸಿ ಆವರಣ ಮಾರಬಹುದು. ಕಾನೂನು ಕ್ರಮವೇ ಬಂದರೆ ವಂಚಿಸುವುದು ಸರಿಯಾದೀತೇ? ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಸರಿತಪ್ಪುಗಳೇನೇ ಇರಲಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ (ಸಾಮಾನ್ಯರು ಬಿಡಿ) ಪ್ರಜಾಪ್ರತಿನಿಧಿಗಳು, ವಿಚಾರವಂತರನ್ನು ನೋಡಿದರೆ `ಆವರಣ ಬ್ಯಾನ್ ಆದರೂ (ನಿಜದಲ್ಲಿ ಆಗಿಲ್ಲ, ಆಗುವುದೂ ಬೇಡ) ಮಾರುವುದು ತಪ್ಪಲ್ಲ' ಎಂದನ್ನಿಸತೊಡಗಿದೆ!
ಜಿ.ಎನ್.ಅಶೋಕ ವರ್ಧನ, ಅತ್ರಿ ಬುಕ್ ಸೆಂಟರ್, ೪ ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು ೫೭೫೦೦೧