ಭಾಗ - ೩: ಅಯ್ಯಪ್ಪ ಸ್ವಾಮಿಯ ದೀಕ್ಷೆಯ ಚಾರಿತ್ರಿಕ ಹಿನ್ನಲೆ
ಸನಾತನ ಹಿಂದೂ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಥವಾ ತಿಳಿದೂ ಸಮಾಜವನ್ನು ಶೋಷಣೆಗೊಳಪಡಿಸಿದ ಕೆಲವು ಜನರ ಆಚಾರ - ವಿಚಾರಗಳಿಂದ ಬೇಸತ್ತ ಜನಸಾಮಾನ್ಯ ಅದರಿಂದ ದೂರವಾಗಿ ಬೌದ್ಧ ಧರ್ಮದ ಕಡೆಗೆ ಸೆಳೆಯಲ್ಪಟ್ಟಿದ್ದ. ಒಂದು ಐತಿಹ್ಯದ ಪ್ರಕಾರ ಕುಮಾರಿಲ ಭಟ್ಟನೆನ್ನುವವನು ಬೌದ್ಧ ಧರ್ಮದ ಜನಪ್ರಿಯತೆಯ ಒಳ ಮರ್ಮವನ್ನು ಅರಿತು ಅದರ ಮೂಲೋತ್ಪಾಟನೆಯನ್ನು ಮಾಡುವ ಉದ್ದೇಶದಿಂದ ಅವನೂ ಬೌದ್ಧ ಧರ್ಮ ಸ್ವೀಕರಿಸುತ್ತಾನೆ. ಅವನ ಈ ಆಲೋಚನೆ ಅದು ಹೇಗೋ ಬೌದ್ಧರಿಗೆ ಗೊತ್ತಾಗಿ ಅವರು ಅವನನ್ನು ತಮ್ಮ ಸಂಘದಿಂದ ಹೊರಹಾಕುತ್ತಾರೆ. ಆಗ ಕುಮಾರಿಲ ಭಟ್ಟ ಬೌದ್ಧರ ಆಚಾರ ವಿಚಾರಗಳನ್ನು ಪಾಠಿಸಿದ್ದರಿಂದ ಅವನು ಜಾತಿ ಭ್ರಷ್ಠನಾಗಿ ಬ್ರಾಹ್ಮಣನಾಗಿಯೂ ಮುಂದುವರಿಯಲಾರದಾದ. ಹೀಗೆ ಅವನು ಉಭಯ ಭ್ರಷ್ಠನಾದ್ದರಿಂದ ಅವನು ತನ್ನನ್ನು ತಾನೇ ಅಗ್ನಿಗೆ ಸಮರ್ಪಿಸಿಕೊಂಡು ಆತ್ಮಾಹುತಿ ಮಾಡಿಕೊಳ್ಳುತ್ತಾನೆ. ಹೀಗಾಗಿ ಬೌದ್ಧ ಧರ್ಮದ ಜನಪ್ರಿಯತೆಯನ್ನು ತಗ್ಗಿಸಲೆತ್ನಿಸುವವರಿಗೆ ತಾತ್ಕಾಲಿಕ ಹಿನ್ನಡೆಯುಂಟಾಗಿತ್ತು.
ತದನಂತರ ಅನತಿ ಕಾಲದಲ್ಲೇ ಬೌದ್ಧ ಧರ್ಮವೂ ಬುದ್ಧನನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಅದೂ ಆಧ್ಯಾತ್ಮಿಕ ಅವನತಿಯ ಹಾದಿಯನ್ನು ಹಿಡಿದಿತ್ತು. ಅದಕ್ಕೆ ಕೆಲವು ಕಾರಣಗಳನ್ನು ಸ್ಥೂಲವಾಗಿ ಕೊಡಬಹುದೆನಿಸುತ್ತದೆ. ಬೌದ್ಧ ಧರ್ಮೀಯರು ವಾಮಾಚಾರ ತಂತ್ರವನ್ನು ತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಅಳವಡಿಸಿಕೊಂಡದ್ದು. ಅದನ್ನು ಸ್ವತಃ ಗೌತಮ ಬುದ್ಧನೇ ಚೀನಾ ದೇಶದಿಂದ ಕಲಿತು ತನ್ನ ಅನುಯಾಯಿಗಳಿಗೆ ಕಲಿಸಿದನೆನ್ನುವ ನಂಬಿಕೆಯಿದೆ. ಈ ವಾಮಾಚಾರ ಪದ್ದತಿಯು ಪಂಚ "ಮ"ಕಾರಗಳಿಂದ ಕೂಡಿದೆ. ಅವೆಂದರೆ ಮತ್ಸ್ಯ, ಮಾಂಸ, ಮದಿರ, ಮೈಥುನ ಮತ್ತು ಮುದ್ರೆ. ಮತ್ಸ್ಯ ಅಂದರೆ ಮೀನು, ಮಾಂಸ ಮತ್ತು ಮದಿರೆ (ಸಾರಾಯಿ) ಸೇವಿಸಿ ನಿರ್ಧಿಷ್ಟವಾದ ಮುದ್ರೆಯಲ್ಲಿ (ಭಂಗಿಯಲ್ಲಿ) ಅಸ್ಖಲಿತ ಮೈಥುನದಲ್ಲಿ ಪಾಲ್ಗೊಂದು ಚಿತ್ತಚಾಂಚಲ್ಯವನ್ನು ಹೋಗಲಾಡಿಸಿಕೊಂಡು ಆಧ್ಯಾತ್ಮದ ಅರಿವನ್ನು ಪಡೆಯುತ್ತಾರೆ. ಇದರಲ್ಲಿ ಹೆಣ್ಣು ಮತ್ತು ಗಂಡು ಕೂಡಿಯೇ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಸಾಮಾನ್ಯ ಜನಕ್ಕೆ ತಮ್ಮ ಚಿತ್ತ ಚಾಂಚಲ್ಯವನ್ನು ಹತ್ತಿಕ್ಕಲಾಗದೇ ಅವರು ವಾಮಾಚಾರ ಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶ್ರದ್ಧಾ ಕೇಂದ್ರಗಳಾಗಿದ್ದ ಬೌದ್ಧ ವಿಹಾರಗಳು ಕಾಮಕೇಳಿಯ ಕೇಂದ್ರಗಳಾದವು. ಬೌದ್ಧ ಸಂನ್ಯಾಸಿಯಾದವನು ಮೈಮುರಿದು ದುಡಿಯದೇ ಭಿಕ್ಷೆ ಬೇಡಿ ತಿನ್ನಲು ಅವಕಾಶವಿದ್ದುದರಿಂದ ಬೌದ್ಧ ಮಠಗಳು ಸೋಮಾರಿಗಳ ಆಶ್ರಯ ತಾಣಗಳಾದವು.
ಈ ಚಾರಿತ್ರಿಕ ಹಿನ್ನಲೆಯಲ್ಲಿ ಹಿಂದೂಗಳನ್ನು ಒಗ್ಗೂಡಿಸುವುದು ಮತ್ತು ಬೌದ್ಧ ಧರ್ಮದ ವಿಕೃತ ಆಚರಣೆಯ ಆಕರ್ಷಣೆಗಳಿಗೆ ಒಳಗಾಗಿದ್ದ ಜನಸಾಮಾನ್ಯರಿಗೆ ಒಂದು ನಿಜವಾದ ಆಧ್ಯಾತ್ಮಿಕ ಮುಕ್ತಿ ಮಾರ್ಗವನ್ನು ತೋರಿಸಬೇಕಾಗಿತ್ತು ಆಗ ಪ್ರಚಲಿತಕ್ಕೆ ಬಂದದ್ದೇ ಈ ಅಯ್ಯಪ್ಪ ಸ್ವಾಮಿಯ ದೀಕ್ಷೆ. ಅಯ್ಯಪ್ಪ ಸ್ವಾಮಿಯ ವಿಶಿಷ್ಟವಾದ ಆಚರಣೆಗಳು ಜನಸಾಮಾನ್ಯರನ್ನು ಆಕರ್ಷಿಸಿದ್ದಲ್ಲದೆ ತಮ್ಮ ತಮ್ಮಲ್ಲೇ ಕಿತ್ತಾಡುತ್ತಿದ್ದ ಹಿಂದೂ ಧರ್ಮದ ವಿವಿಧ ಮತಾನುಯಾಯುಗಳನ್ನು ಒಗ್ಗೂಡಿಸುವ ಸಾಧನವಾಯಿತು. ಆದರೆ ಅದು ಮೂಲತಃ ಕೇರಳ ಮತ್ತು ತಮಿಳುನಾಡುಗಳಿಗೆ ಪರಿಮಿತಗೊಂಡಿದ್ದು ಬಹುಶಃ ಕರುನಾಡಿನಲ್ಲಾಗಲೇ ವಿಶ್ವಧರ್ಮದ ಸ್ಥಾಪಕರಾದ ಜಗಜ್ಯೋತಿ ಬಸವೇಶ್ವರರ ವೀರಶೈವ ಧರ್ಮ ಪ್ರಚಲಿತದಲ್ಲಿ ಬಂದಿರಬೇಕು ಹಾಗೂ ರಾಮಾನುಜಾಚಾರ್ಯರ ದಲಿತರನ್ನೂ ಇತರ ಸವರ್ಣೀಯರಂತೆ ಸಮಾನವಾಗಿ ಕಾಣುವ ಶ್ರೀವೈಷ್ಣವ ಧರ್ಮ ಆಚರಣೆಗೆ ಬಂದಿರಬೇಕು. ಹಾಗಾಗಿ ಚರಿತ್ರೆಯ ಕಾಲದಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಇದರ ಪ್ರಭಾವ ಹೆಚ್ಚು ಕಂಡು ಬರಲಿಲ್ಲವೇನೋ?
ಮುಂದುವರೆಯುವುದು.....
---------------------------------------------------------------------------------------------------------------------------------------
ವಿ.ಸೂ.: ಈ ಲೇಖನ ಮಾಲೆಯನ್ನು ಒಂದೇ ಕಂತಿನಲ್ಲಿ ಕೊಡೋಣವೆಂದಿದ್ದೆ; ಆದರೆ ಲೇಖನ ಬಹಳ ದೀರ್ಘವೆನಿಸಿದ್ದರಿಂದ ಅದನ್ನು ಐದು ಭಾಗಗಳಾಗಿ ವಿಭಜಿಸಿ ಪ್ರತ್ಯೇಕ ಶೀರ್ಷಿಕೆಗಳನ್ನು ಕೊಟ್ಟಿದ್ದೇನೆ. ಅವುಗಳು ಈ ರೀತಿ ಇವೆ:
ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ಚಿಂತನೆ (ಭಾಗ - ೧) http://sampada.net/%E0%B2%B6%E0%B2%AC%E0%B2%B0%E0%B2%BF%E0%B2%AE%E0%B2%B2%E0%B3%86-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%B5%E0%B3%8D%E0%B2%B0%E0%B2%A4%E0%B2%A6-%E0%B2%B9%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%86-%E0%B2%92%E0%B2%82%E0%B2%A6%E0%B3%81-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86-%E0%B2%AD%E0%B2%BE%E0%B2%97-%E0%B3%A7
ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ http://sampada.net/%E0%B2%AD%E0%B2%BE%E0%B2%97-%E0%B3%A8-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%AE%E0%B2%BE%E0%B2%B2%E0%B2%BE-%E0%B2%A7%E0%B2%BE%E0%B2%B0%E0%B2%A3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86
ಭಾಗ - ೩: ಅಯ್ಯಪ್ಪ ಸ್ವಾಮಿಯ ದೀಕ್ಷೆಯ ಚಾರಿತ್ರಿಕ ಹಿನ್ನಲೆ
ಭಾಗ - ೪: ಅಯ್ಯಪ್ಪ ಮತ್ತು ಅಯ್ಯಪ್ಪ ದೀಕ್ಷೆಯ ವಿಶೇಷಗಳು http://sampada.net/%E0%B2%AD%E0%B2%BE%E0%B2%97-%E0%B3%AA-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%B5%E0%B2%BF%E0%B2%B6%E0%B3%87%E0%B2%B7%E0%B2%97%E0%B2%B3%E0%B3%81
ಭಾಗ - ೫: ಅಯ್ಯಪ್ಪ ದೀಕ್ಷೆಯ ನಿಜವಾದ ಅರ್ಥ http://sampada.net/%E0%B2%AD%E0%B2%BE%E0%B2%97-%E0%B3%AB-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%A8%E0%B2%BF%E0%B2%9C%E0%B2%B5%E0%B2%BE%E0%B2%A6-%E0%B2%85%E0%B2%B0%E0%B3%8D%E0%B2%A5