ಒಂದು ಮಳೆಗಾಲದ ದಿವಸ
ಮತ್ತೊಂದು ಮಳೆ ಬಂದು ಹಳುವಾಗಿದೆ
ಮನೆಯ ಸುತ್ತಾ ಸಣ್ಣ ಹಳು ಬೆಳೆದಿದೆ
ಕಳೆ ಕಿತ್ತು,ಹಿಂತಿರುಗಿದ ಅಮ್ಮ ಹಳೆಯ ಅಲ್ಯುಮಿನಿಯಮ್ ಪಾತ್ರೆಯಲ್ಲಿ
ತೊಳೇ ಮೀನು ಹುರಿಯುತ್ತಿದ್ದಾಳೆ
ಹುರುಳಿಕಟ್ಟಿನ ಸಾರಿಗೆ ಹೊತ್ತಿದ ಮೀನಿಗೆ
ಹೊಳ್ಳೆ ಹಸಿದು ತೊಳ್ಳೆ ಕುಣಿಯುತ್ತಿದೆ
ಅಂಗಳದ ಸಣ್ಣ ಕುಣಿಯಿಂದ ಮಳೆಹುಳುಗಳು ಮೆಲೇರಿ
ಅತಿಯಾಗಿ ಹಾರಾಡಿ ರೆಕ್ಕೆ ಮುರಿದು ತೆವಳುತ್ತಿವೆ
ಹಿಂಗಾಲಿಗೆ ಹತ್ತಿದ್ದ ಇಂಬಳ
ಹಂಡೆಯ ಒಲೆಯೊಂದಿಗೆ ಉರಿಯುತ್ತಿದೆ
ಒಡ್ಡಿಯೊಳಗೆ ನುಗ್ಗಿ ಕದ್ದು ಕೋಳಿ ಮೊಟ್ಟೆ ತಿಂದ
ಒಳ್ಳೆಯ ಹಾವು ಸೌದೆ ಕೊಟ್ಟಿಗೆಯೆಡೆಗೆ ನಿಧಾನವಾಗಿ ಸರಿದಿದೆ
ಹೊಳೆ ತನ್ನ ಹಳೆ ಚಾಳಿಯಂತೆ
ಗಡಿ ಮೀರಿ ಗದ್ದೆಗೆ ನುಗ್ಗಿ
ನೆನ್ನೆ ನೆಟ್ಟ ಸಸಿಯ ಇವತ್ತೇ ತಲೆಕೆಳಗಾಗಿಸಿ
ನೆರೆ ಬಂದು ಅಪ್ಪನ ಶ್ರಮವೆಲ್ಲ ನೀರೊಳಗೆ ಮುಳುಗಿದೆ
ಹರಿದ ಕಂಬಳಿ ಹೊಲೆಯುತ್ತಿದ್ದಾನೆ ಆಪ್ಪ
ಬ್ಯಾಟರಿ ಶೆಲ್ಲು ವೀಕಾಗಿದೆ
ಮೀನು ಕಡಿಯಲು ಹೊರಡುವ ಹೊತ್ತು
ಅದು ಪಿಂಟುವಿನ ಬಾಲಕ್ಕೂ ಗೊತ್ತಾಗಿದೆ!
ಹಲವು ಬಣ್ಣಗಳ ಆಕಾಶ ಎನು ಹೆಳುತ್ತದೆ?
ಅಪ್ಪ ಹೇಳುವ ಪ್ರಕಾರ ಅಡಿಕೆ ಸಸಿಗೆ ಕೊಳೆ ಬರಲೆಂದೇ
ಮಳೆ ಬರುತ್ತದೆ!
Comments
ಉ: ಒಂದು ಮಳೆಗಾಲದ ದಿವಸ
ಉ: ಒಂದು ಮಳೆಗಾಲದ ದಿವಸ
ಉ: ಒಂದು ಮಳೆಗಾಲದ ದಿವಸ
In reply to ಉ: ಒಂದು ಮಳೆಗಾಲದ ದಿವಸ by makara
ಉ: ಒಂದು ಮಳೆಗಾಲದ ದಿವಸ
ಉ: ಒಂದು ಮಳೆಗಾಲದ ದಿವಸ
ಉ: ಒಂದು ಮಳೆಗಾಲದ ದಿವಸ