ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದ ....
ನೋಡ ನೋಡುತ್ತಿದ್ದಂತೆಯೇ
ಸಿದ್ರಾಮ ಮ್ಯಾರಥಾನ್ ಓಟದಲ್ಲಿ ಫರ್ಸ್ಟ ಬಂದುಬಿಟ್ಟಾ
ಹಂಗ ನೋಡಿದ್ರ ಅವ ಮ್ಯಾರಥಾನ್ ನೋಡಾಕ್ ಬಂದಿದ್ದ
ಓಡುದು ಅವನ ತಲಿಯೊಳಗ ಇರಲೇ ಇಲ್ಲ
ಅಷ್ಟ ಯಾಕ ಜೀವಮಾನದೊಳಗ ಅವ ಓಡಿಲ್ಲ
ಓಡಿ ಹೋಗುವವರ ಬಗ್ಗೆ ಕೇಳಿದ್ರ ಅವಗ ನಗು ಬರ್ತಿತ್ತು, ಅದೂ ಪ್ರೇಮಿಗಳ ಸುದ್ದಿ "ಲೇ ಸಿದ್ರಾಮ ಆ ಮೇಲಿನ ಮನಿ ಸುಂದ್ರಿ ಬಾಜೂ ಮನಿ ಕಲ್ಲನ ಜೊತಿ ಓಡಿ ಹೋಗ್ಯಾಳ" ಅನ್ನು ಸುದ್ದಿ ಕೇಳಿದಾಗ ಬಿದ್ದು-ಬಿದ್ದು ನಕ್ಕಿದ್ದ ನಮ್ಮ ಸಿದ್ರಾಮ. "ಅಲ್ಲಪಾ ಇದ್ದು ಬಾಳೇ ಮಾಡಲಾರದವರು, ಓಡಿ ಹೋಗಿ ಏನರ ಮಾಡ್ತಾರು" ಅಂತ ನಗಾಡ್ತಿದ್ದಾ...
ಅದು ಏನರ ಇರಲಿ
ಇವತ್ತಿನ ಮಟ್ಟಿಗೆ ಸಿದ್ರಾಮ ಮ್ಯಾರಥಾನ್ ಓಟದೊಳಗ ಫರ್ಸ್ಟ ಬಂದ ಬಿಟ್ಟಾ...
ಮುಂದ ಏನ ಆತಂದ್ರ...
ಎಲ್ಲಾ ಟಿ.ವಿ ಚಾನಲ್ ನವರು ಸಿದ್ರಾಮನ ಇಂಟರ್ ವ್ಯೂ ತಗೋಳಾಕ ಕ್ಯೂ ನಿಂತ್ರು...
ಸರ್ ಎಂದೂ ಓಡಲಾರದ ನೀವು ಈ ಮ್ಯಾರಥಾನ್ ಓಟದೊಳಗ ಮೊದಲ ಸ್ಥಾನ ಪಡೆದಿರುವ ಗುಟ್ಟು ಏನು ?
ಸಿದ್ರಾಮ : ಹೌದು ಇದು ನನಗೂ ಆಶ್ಚರ್ಯವೇ !!! ಆದರ ಇದರ ನಿಜವಾದ ಶ್ರೇಯಸ್ಸು ಮಲ್ಲೇಶಿಗೆ ಸೇರಬೇಕು
ಸಂದರ್ಶಕಿ : ಓಹ್ ಹೌದಾ !!! ಮಲ್ಲೇಶಿ ಅಂದ್ರ ನಿಮ್ಮ ಕೋಚ್ ಇರಬೇಕು ಅಲ್ವಾ..
ಸಿದ್ರಾಮ : ಅಯ್ಯೋ ಕೋಚೂ ಇಲ್ಲ ಸುಡುಗಾಡೂ ಇಲ್ಲ...
ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದೆ ಸ್ತ್ರೀ ಒಬ್ಬಳು ಇರ್ತಾಳೆ ಅಂತ ನೀವೆಲ್ಲಾ ಕೇಳಿದ್ದೀರಿ ಅಲ್ವಾ...
ಸಂದರ್ಶಕಿ : ಓಹೋ ಇಂದಿನ ನಿಮ್ಮ ಯಶಸ್ಸಿಗೆ ನಿಮ್ಮ ಶ್ರೀಮತಿ ಪ್ರೇರಣೆಯೇ !!!
ಸಿದ್ರಾಮ : ಅಯ್ಯೋ ಯಾವ ಮತೀನೂ ಇಲ್ಲ, ನನಗಿನ್ನೂ ಮದುವೆಯೇ ಆಗಿಲ್ಲ..
ಸಂದರ್ಶಕಿ : ಈಗ ಬಿಡಿ ಸಾರ್ ನಿಮ್ಮ ಯಶಸ್ಸು ಕಂಡು ಮಹಿಳೆಯರೆಲ್ಲಾ ನಿಮ್ಮ ಹಿಂದೆ ಬೀಳ್ತಾರೆ...
ಸಿದ್ರಾಮ : ಮೇಡಂ ನೀವು ಇಂಟರ್ ವ್ಯೂ ಬೇಗ ಮುಗಿಸದಿದ್ರೆ !!! ಮಹಿಳೆಯರ ದಂಡೇ ನನ್ನ ಬೆಂಬತ್ತಿ ಬೆನ್ನೆಲುಬು ಮುರಿಯೋ ಹಾಗೆ ಬಡೀತಾರೆ...
ಸಂದರ್ಶಕಿ : ಹೌದಾ ಅದಕ್ಕೂ ಇದಕ್ಕೂ ಏನು ಸಂಬಂಧ, ಸ್ವಲ್ಪ ವಿವರಿಸಿ ಹೇಳ್ತೀರಾ...
ಸಿದ್ರಾಮ : ಬೇಗ ನನ್ನ ಓಟದ ಕಥೆ ಕೇಳಿ, ಜಾಗ ಖಾಲಿ ಮಾಡಿ...
ನಾನೂ ಮಲ್ಲೇಶಿ ಮತ್ತಿತರ ಸ್ನೇಹಿತರು ಈ ಮ್ಯಾರಥಾನ್ ನೋಡೋದಿಕ್ಕೆ ಬಂದಿದ್ವೀ..
ಅಕ್ಕ-ಪಕ್ಕದಲ್ಲಿ ನಿಂತಿರುವ ಸುಂದರವಾದ ಹುಡುಗಿರ ಕಂಡು ನಮ್ಮ ಗೆಳೆಯರು ಮಂಗ್ಯಾಗ ಸೆರೆ ಕುಡದಂಗ ಮಾಡಾಕ ಹತ್ತದ್ರು... ಏನೇನೋ ಮಾತಾಡಿ ಕೀಟಲೆ ಮಾಡಿ, ರೇಗಸಿದ್ರು...
ಸಂದರ್ಶಕಿ : ಮುಂದ....
ಸಿದ್ರಾಮ : ಮುಂದ ಹೇಳ್ತೇನಿ ಕೇಳ್ರೀ..
ಇನ್ನೇನು ಓಟ ಸುರು ಆಗಬೇಕು ಅನ್ನೂವಷ್ಟರಲ್ಲಿ ತಳ್ಳಾಟದೊಳಗ ನಮ್ಮ ಮಲ್ಲೇಶಿ ನನ್ನ ಮ್ಯಾಲೆ ಬಿದ್ದ, ಜೋಲಿ ಹೋಗಿ ನಾನು ಮಹಿಳೆಯ ಮ್ಯಾಲೆ ಬಿದ್ಯಾ...
ಸಂದರ್ಶಕಿ : ಮುಂದ....
ಸಿದ್ರಾಮ : ಮುಂದೇನು
ಎಲ್ಲಾ ಹೆಂಗಸರೂ ನಮ್ಮ ಪೋಲಿ-ಪಟಾಲಂಗೆ ಅಟ್ಟಾಡಿಸಿ ಹೊಡೆಯೋದಿಕ್ಕೆ ಶುರು ಮಾಡಿದ್ರು...
ಸಂದರ್ಶಕಿ : ಮುಂದ...
ಮುಂದೇನು... ನಿಮ್ಮ ಮುಂದ ಅದೇನಲ್ಲ !!! ಸತ್ತೆನೋ-ಬದುಕಿದೆನೋ ಅಂತ ತಪ್ಪಿಸಿಕೊಳ್ಳೋ ದಾರಿ ಕಾಣದ ಒಂದ ಉಸಿರಿನೊಳಗ ಮ್ಯಾರಥಾನ್ ಓಡುವವರ ಜೊತೆಗೆ ನಾನೂ ಓಡಿದೆ....
ಪ್ರತಿಯೊಬ್ಬ ಯಶಶ್ವೀ ವ್ಯಕ್ತಿಯ ಹಿಂದ ಒಬ್ಬಳೇ ಸ್ತ್ರೀ ಇದ್ರ...
ನನ್ನ ಹಿಂದ ಇಡೀ ಮಹಿಳೆಯರ ದಂಡೇ ಬೆನ್ನು ಹತ್ತಿತ್ತು...
ಹಿಂಗಾಗಿ ನಾನ...... ಫರ್ಸ್ಟ ಬಂದಿದ್ದು...
ಮುಗೀತಲ್ಲ ನಿಮ್ಮ ರಾಮಾಯಣ...
ಸೈಡು ಸರೀರಿ ಇನ್ನ.... ದೂರದಾಗ ಅವರೆಲ್ಲಾ ಬರೂದು ಕಾಣಸಾಕ ಹತ್ತೇತಿ....
Comments
ಉ: ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದ ....
ಉ: ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದ ....
ಉ: ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದ ....
In reply to ಉ: ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದ .... by kavinagaraj
ಉ: ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದ ....