ಊರೊಳಗೊಂದು ಧನ್ವಂತರಿ ವನ
ಅದೊಂದು ದಿನ ಮೇಡಂ ನಮಗೆ ದಾರಿ ಹುಡುಕಿ ಹೇಳಲು ಮೊಬೈಲಿನಲ್ಲಿ ಮ್ಯಾಪ್ ನೋಡುತ್ತಿರುವಾಗ ಬೆಂಗಳೂರಿನೊಳಗೊಂದು "ಧನ್ವಂತರಿ ವನ" ಎಂದು ಓದಿ ಹೇಳಿದ್ದರು. ಈ ಕಾಂಕ್ರೀಟ್ ಕಾಡಿನಲ್ಲೆಂಥದ್ದು "ವನ"? ಅದೂ ಔಷಧವನ? ಎಂದು ಆಶ್ಚರ್ಯದಿಂದ ಮೊಬೈಲನ್ನು ಆ ಕ್ಷಣವೇ ಕೈಗೆ ತೆಗೆದುಕೊಂಡು ಮತ್ತೆ ಮತ್ತೆ zoom ಮಾಡಿ ನೋಡಿದ್ದೆವು. ಅಲ್ಲಿ ಧನ್ವಂತರಿ ವನ ಎಂದು ಯಾರೋ ಗುರುತು ಮಾಡಿದ್ದಂತು ಖರೆ.
ಒಮ್ಮೆ ಧನ್ವಂತರಿ ವನ ಎಂದು ಗುರುತು ಮಾಡಿದ್ದ ಜಾಗದ ಪಕ್ಕದ ರೋಡಿನಲ್ಲಿ ಹೋಗುತ್ತಿರುವಾಗ ಸುಮ್ಮನೆ ಹಾಗೇ ತರಾತುರಿಯಲ್ಲೇ ಸಣ್ಣ ಸಣ್ಣ ರೋಡುಗಳಲ್ಲಿ ತಿರುಗಿ ಇದಕ್ಕಾಗಿ ಹುಡುಕಿದ್ದೆವು. ಧನ್ವಂತರಿ ವನ ಸಿಗಲೇ ಇಲ್ಲ. ಇನ್ನು ಲೇಟಾಯ್ತು ಎಂದು ಹುಡುಕುವ ಸಾಹಸ ಅಷ್ಟಕ್ಕೇ ನಿಲ್ಲಿಸಿ ಹೊರಟಾಗ ಏನೋ ನಿರಾಸೆ. ಬೆಂಗಳೂರಿನ ನಕ್ಷೆಯಲ್ಲಿ "ನವಿಲು ಅಭಯಾರಣ್ಯ" ಎಂದು ಕಂಡರೂ ಅಲ್ಲಿ ನವಿಲುಗಳು ಈಗಲೂ ಎಷ್ಟರಮಟ್ಟಿಗೆ ಉಳಿದಿರಬಹುದು ಎಂದನಿಸಿಬಿಡುತ್ತದೆ. ಹಾಗೆಯೇ ಹಸಿರು ತುಂಬಿದ ಔಷಧವನವೂ ನಾಮಕೇ ವಾಸ್ತೇ ಇದ್ದೀತು ಎಂದುಕೊಂಡು ಸುಮ್ಮನಾದೆವು.
ಇಂದು ಮತ್ತೊಮ್ಮೆ ಜ್ಞಾನಭಾರತಿ ಕ್ಯಾಂಪಸ್ ಸುತ್ತಿಕೊಂಡು ಹೋಗುತ್ತಿರುವಾಗ ಮತ್ತೊಮ್ಮೆ "ಧನ್ವಂತರಿ ವನ" ಎಂದು ಮ್ಯಾಪಿನಲ್ಲಿ ಗುರುತು ಮಾಡಿರುವುದು ಕಣ್ಣಿಗೆ ಬಿತ್ತು. ಸ್ವಲ್ಪ ಲೇಟಾದರೂ ಚಿಂತಿಲ್ಲ, ಹುಡುಕೋಣ ಎಂದುಕೊಂಡು ಕ್ಯಾಂಪಸ್ ಸುತ್ತ ಹುಡುಕಿದೆವು. ಕೊನೆಗೂ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪ್ಸ್ ಕಡೆಯಿಂದ ಬರುತ್ತಿರುವಂತೆ ಡಾಂಬರ್ ಕಿತ್ತು ಹೋಗಿರುವಲ್ಲೆಲ್ಲ ಭಾರೀ ಕಲ್ಲುಗಳಿಂದ ತುಂಬಿರುವ ಮರಿಯಪ್ಪನ ಪಾಳ್ಯದ ಚಿಕ್ಕ ರಸ್ತೆಯೊಂದರಲ್ಲಿ "ಧನ್ವಂತರಿ ವನ" ಎಂಬ ಬೋರ್ಡು ಕಾಣಿಸಿತು. ಅಲ್ಲೇ ರೋಡಿನಲ್ಲಿ ಕಾರು ನಿಲ್ಲಿಸಿ ಸ್ವಲ್ಪ ದೂರ ನಡೆದೆವು. ಗೇಟು ಲಾಕ್ ಆದಂತಿತ್ತು. ಒಳಗಿನಿಂದ ಯಾರೋ ಬರುತ್ತಿದ್ದುದು ಕಂಡು ಒಮ್ಮೆ ವಿಚಾರಿಸಿ ನೋಡೋಣವೆಂದು ಕಾದೆವು. ಒಳಗಿನಿಂದ ಬರುತ್ತಿದ್ದವರು ಗೇಟು ಹತ್ತಿರ ಬರುತ್ತಲೇ ತಗಲು ಹಾಕಿದ್ದ ಚೈನನ್ನು ಹಾಗೇ ಪಕ್ಕಕ್ಕೆ ತಳ್ಳಿ ಗೇಟು ತೆರೆದು ಹೊರಬಂದರು!
ಬಂದವನು "ಇಲ್ಲಿ ಕಾಲೇಜು ಹುಡುಗರನ್ನು ಒಳಗೆ ಬಿಡುವುದಿಲ್ಲ ಸಾರ್" ಎಂದುಬಿಟ್ಟ. "ನಾವು ಕಾಲೇಜಿನವರಲ್ಲಪ್ಪ" ಎಂದು ಅವನಿಗೆ ತಿಳಿಸಿದಾಗ "ಎಲ್ಲರೂ ಇವತ್ತು ರಜ ಹಾಕಿದ್ದಾರೆ ಸಾರ್. ಆಗಲೇ ಟೈಮೂ ಆಯ್ತು. ಬೆಳಿಗ್ಗೆ ಹೊತ್ತು ಬನ್ನಿ" ಎಂದು ನಮ್ಮನ್ನು ಹೊರಗಿಡಲು ಪ್ರಯತ್ನಿಸಿದ. ನಾವುಗಳು ಕ್ಯಾಮೆರ ಹೊತ್ತು "ಹತ್ತು ನಿಮಿಷ, ಒಂದು ರೌಂಡು ನೋಡಿಕೊಂಡು ಬರುತ್ತೇವೆ" ಎಂದು ಹೇಳಿ ಹೊರಟೆವು.
"ಧನ್ವಂತರಿ ವನ"ದಲ್ಲಿ ಸಾಕಷ್ಟು ಔಷಧ ಗಿಡಗಳನ್ನು ಬೆಳೆಸಿದ್ದಾರೆ. "ವನ" ಎಂದಾಕ್ಷಣ ಮನಸ್ಸಿಗೆ ಬರುವ ದಟ್ಟ ಹಸಿರೇನೂ ಅಲ್ಲಿಲ್ಲ. ಪುಟ್ಟ ಪುಟ್ಟ ಕವರುಗಳಲ್ಲೇ ಗಿಡಗಳನ್ನು ಬೆಳೆಸಿದ್ದಾರೆ. ಮನೆಯಂಗಳದಲ್ಲಿ ಬೆಳಸಬಹುದಾದ ಹಲವು ಔಷಧ ಸಸ್ಯಗಳು ಇಲ್ಲಿ ಸಿಗುತ್ತವೆ. ಇದಲ್ಲದೆ ಕಡಿಮೆ ಬೆಲೆಯಲ್ಲಿ ಮಾರುತ್ತಾರಂತೆ. ನಾವು ಅಲ್ಲಿಗೆ ಹೋಗುವಷ್ಟರಲ್ಲಿ ತೀರ ಲೇಟಾಗಿದ್ದರಿಂದ ಗಿಡಗಳನ್ನು ಕೊಳ್ಳಲಾಗಲಿಲ್ಲ. ಕ್ಯಾಮೆರ ಬ್ಯಾಟರಿ ಕೈಕೊಟ್ಟದ್ದರಿಂದ ನನಗೆ ಫೋಟೋಗಳನ್ನೂ ತೆಗೆಯಲಾಗಲಿಲ್ಲ. ಎಲ್ಲೆಲ್ಲೂ ಸಿಮೆಂಟಿನ ಕಟ್ಟಡಗಳು, ಗಲೀಜು, ಟ್ರಾಫಿಕ್ಕು ಕಾಣುವ ಬೆಂಗಳೂರಿನಲ್ಲಿ ಔಷಧ ಸಸ್ಯಗಳನ್ನು ಬೆಳೆಸುವ ಸಾಹಸ ಮಾಡುತ್ತಿರುವ ಈ ವನವನ್ನು ಹುಟ್ಟುಹಾಕಿದವರು ಯಾರು ಎಂಬುದು ಗೊತ್ತಿಲ್ಲದಿದ್ದರೂ ಅವರನ್ನು ಮನಸಾರೆ ಕೊಂಡಾಡಿದೆವು.
Comments
ಉ: ಊರೊಳಗೊಂದು ಧನ್ವಂತರಿ ವನ
In reply to ಉ: ಊರೊಳಗೊಂದು ಧನ್ವಂತರಿ ವನ by kavinagaraj
ಉ: ಊರೊಳಗೊಂದು ಧನ್ವಂತರಿ ವನ
In reply to ಉ: ಊರೊಳಗೊಂದು ಧನ್ವಂತರಿ ವನ by sasi.hebbar
ಉ: ಊರೊಳಗೊಂದು ಧನ್ವಂತರಿ ವನ
ಉ: ಊರೊಳಗೊಂದು ಧನ್ವಂತರಿ ವನ
In reply to ಉ: ಊರೊಳಗೊಂದು ಧನ್ವಂತರಿ ವನ by partha1059
ಉ: ಊರೊಳಗೊಂದು ಧನ್ವಂತರಿ ವನ
In reply to ಉ: ಊರೊಳಗೊಂದು ಧನ್ವಂತರಿ ವನ by hpn
ಉ: ಊರೊಳಗೊಂದು ಧನ್ವಂತರಿ ವನ
ಉ: ಊರೊಳಗೊಂದು ಧನ್ವಂತರಿ ವನ