ಹಾಗೆ ನೋಡಿದರೆ ಸರಕಾರ ಮತ್ತದರ ಇಲಾಖೆಗಳು ಅಂತರ್ಜಾಲದ ಮೂಲಕ ಮಾಹಿತಿ ಹಕ್ಕಿನ ಮೂಲಕ ನೀಡಬಹುದಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದು.ಸದ್ಯ ಮಾಹಿತಿ ಹಕ್ಕಿನ ಪ್ರಕಾರ ಜನರು ತಮಗೆ ಬೇಕಾದ ಮಾಹಿತಿಯನ್ನು ಕೋರಿ,ಸರಕಾರದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ,ಮಾಹಿತಿ ಪಡೆಯಬಹುದು.ಇಂತಹ ಮಾಹಿತಿ ಪ್ರಭಾವಶಾಲಿ ವ್ಯಕ್ತಿ ಇಲ್ಲವೇ ಸಂಸ್ಥೆಗಳಿಗೆ ಸಂಬಂಧಿಸಿದ,ಭ್ರಷ್ಟಾಚಾರ ಪ್ರಕರಣವನ್ನೋ,ಅಕ್ರಮ ವ್ಯವಹಾರಕ್ಕೋ ಸಂಬಂಧಿಸಿದ್ದಾದರೆ,ಮಾಹಿತಿ ಕೋರಿದವನ ಜೀವಕ್ಕೆ ಅಪಾಯ ಬರುವುದೂ ಇದೆ.ಸರಕಾರ ಹೊಸ ಕಾನೂನು ರೂಪಿಸಿ,ಮಾಹಿತಿ ಕೋರಿದ ವ್ಯಕ್ತಿಯ ಗೌಪ್ಯವಾಗಿರಿಸುವುದನ್ನು ಕಡ್ಡಾಯವಾಗಿಸುವ ಬಗ್ಗೆ ಕಾನೂನು ರೂಪಿಸುವ ಬಗ್ಗೆ ಯೋಚಿಸುತ್ತಿದೆ.ಆದರೆ ಮಾಹಿತಿ ಹಕ್ಕಿನ ಮೂಲಕ ನೀಡಬಹುದಾದ ಮಾಹಿತಿಯನ್ನು ಅಂತರ್ಜಾಲ ಮೂಲಕ ಸಾರ್ವಜನಿಕಗೊಳಿಸಿದರೆ,ಬೇಕಾದವರು ಅದನ್ನು ಉಪಯೋಗಿಸಬಹುದು.ಅರ್ಜಿ ಸಲ್ಲಿಸಿ ಕಾಯುವ,ಯಾರದೋ ಆಗ್ರಹಕ್ಕೆ ತುತ್ತಾಗುವ ಸಂಭಾವ್ಯತೆಯನ್ನು ತಡೆಯಬಹುದು.
ನಮ್ಮಲ್ಲಿ ಅನೇಕ ಕಾಮಗಾರಿಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಲೋಕೋಪಯೋಗಿ ಇಲಾಖೆಗಳು ನಡೆಸುತ್ತಿರುತ್ತವೆ.ಎಷ್ಟೋ ವೇಳೆ ಈ ಕಾಮಗಾರಿಗಳು ಕಳಪೆಯಾಗಿರುವುದೂ ಇದೆ.ಕೆಲವೊಮ್ಮೆ,ಕಾಮಗಾರಿಗಳು ನಡೆಯದೇ ಅವುಗಳಿಗೆ ಹಣ ಪಾವತಿಯಾಗಿರುವುದೂ ಇದೆ.ಜನರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ.ಇಂತಲ್ಲಿಯೂ ಅಂತರ್ಜಾಲ ಹೆಚ್ಚು ಉಪಯುಕ್ತವಾಗಬಹುದು.ಸ್ಥಳೀಯಾಡಳಿತ ಸಂಸ್ಥೆಗಳು,ಲೋಕೋಪಯೋಗಿ ಇಲಾಖೆಗಳು ಹಮ್ಮಿಕೊಂಡಿರುವ ಕಾಮಗಾರಿಗಳ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದರೆ,ಜನರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಮನ ನೀಡಬಹುದು.ಕಾಮಗಾರಿಗಳು ನಡೆಯದ್ದರೆ ಜನರ ಗಮನಕ್ಕೆ ಬರುತ್ತದೆ.
--------------------------------------------------
ಚಾಲನೆ ವೇಳೆ ಸೆಲ್‌ಫೋನ್ ಬೇಡ
ವಾಹನ ಚಲಾಯಿಸುವ ವೇಳೆ ಸೆಲ್‌ಪೋನ್ ಕರೆಗಳನ್ನು ಮಾಡುವುದು ಅಥವಾ ಸ್ವೀಕರಿಸುವುದು ಅಪಘಾತಗಳಿಗೆ ಕಾರಣವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ.ಸೆಲ್‌ಫೋನ್ ಅನ್ನು ಕೈಗಳಿಂದ ಮುಟ್ಟದೆ,ಕರೆಗಳನ್ನು ಮಾಡುವ ಮತ್ತು ಸ್ವೀಕರಿಸುವ ವ್ಯವಸ್ಥೆಗಳೂ ಈಗ ಲಭ್ಯ.ಆದರೆ ಇವುಗಳೂ ಅಪಾಯಕಾರಿಯೆ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ.ಕರಮುಕ್ತ ವ್ಯವಸ್ಥೆಗಳ ಮೂಲಕ ಸೆಲ್‌ಫೋನು ಕರೆ ಉತ್ತರಿಸಿದಾಗಲೂ ಜನರ ಗಮನ ಮಾತಿನ ಕಡೆಗೆ ಇರುತ್ತದೆ-ರಸ್ತೆಯ ಕಡೆಗಲ್ಲ.ಹೀಗಾಗಿ,ಅಪಾಯ ಸಂಭವಿಸಬಹುದು ಎನ್ನುವುದು ಹಲವಾರು ಘಟನೆಗಳಲ್ಲೂ ಕಂಡು ಬಂದಿದೆ.
ಯಾರ ಜತೆಯಾದರೂ ಮಾತನಾಡುವಾಗ,ನಮ್ಮ ಮಿದುಳು ಮಾತನ್ನು ಆಲಿಸುವುದು,ಮಾತನ್ನು ವಿಶ್ಲೇಷಿಸುವುದು ಮತ್ತು ಆ ಬಗ್ಗೆ ಯೋಚಿಸುತ್ತಿರುತ್ತದಾದ್ದರಿಂದ ರಸ್ತೆಯ ಕಡೆಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ ಎನ್ನುವುದು ಸ್ಪಷ್ಟ.ಸೆಲ್‌ಪೋನಿನಲ್ಲಿ ಮಾತನಾಡುವ ವೇಳೆ ಇತರ ಸಮಯಕ್ಕಿಂತ ಅಪಘಾತ ಭಯ ನಾಲ್ಕು ಪಟ್ಟು ಹೆಚ್ಚುತ್ತದೆ ಎನ್ನುವುದು ವ್ಯಕ್ತವಾದ ಅಂಶವಾಗಿದೆ.ಸ್ವೀಡನ್‌ನಲ್ಲಿ ನಡೆದ ಅಧ್ಯಯನವೂ ಸೆಲ್‌ಫೋನ್ ಕೈಯಲ್ಲಿ ಹಿಡಿದು ಮಾತನಾಡುವುದು ಅಥವಾ ಅವನ್ನು ಮುಟ್ಟದೆ,ಕರಮುಕ್ತ ವ್ಯವಸ್ಥೆಗಳ ಮೂಲಕ ಕರೆ ಮಾಡುವುದೂ ಎರಡೂ ಅಪಾಯಕಾರಿ ಎಂದು ಸ್ಪಷ್ಟವಾಗಿದೆ.
ಆದರೆ ಸುಮಾರು ಆರು ಸಾವಿರ ಚಾಲಕರನ್ನು ಈ ಬಗ್ಗೆ ಪ್ರಶ್ನಿಸಿದಾಗ,ಆವರುಗಳು ಕರಮುಕ್ತ ಸೆಲ್‌ಪೋನುಗಳನ್ನು ಬಳಸುವುದೂ ಅಪಾಯಕಾರಿ ಎನ್ನುವುದನ್ನು ಒಪ್ಪಲು ತಯಾರಿಲ್ಲ.ಸೆಲ್‌ಫೋನುಗಳನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸುವುದು ಅಪಾಯಕಾರಿ ಎನ್ನುವುದರ ಬಗ್ಗೆ ಹೆಚ್ಚು ಸಹಮತವಿದೆ.ವಾಹನ ಚಲಾವಣೆಯನ್ನು ಸಿಮ್ಯುಲೇಟರ್ ಮೂಲಕ ಮಾಡುವವರಲ್ಲಿ,ಅವರ ಮಿದುಳಿನ ಸಂಕೇತಗಳನ್ನು ಎಂ ಆರ್ ಐ ಮೂಲಕ ವಿಶ್ಲೇಷಣೆಗೊಳಪಡಿಸಿದಾಗ,ಹೆಡ್‌ಪೋನಿನಲ್ಲಿ ಧ್ವನಿಯನ್ನು ಆಲಿಸುವ ವ್ಯಕ್ತಿಯು ಧ್ವನಿಯನ್ನು ಆಲಿಸದ ವ್ಯಕ್ತಿಗಿಂತ ಶೇಕಡಾ ಮೂವತ್ತೇಳು ಕಡಿಮೆ ಗಮನ ಚಾಲನೆಯ ಕಡೆ ನೀಡುವುದು ವ್ಯಕ್ತವಾಯಿತು.
-------------------------------------------------
ಬಿಸಿಲಿಗೊಡ್ಡಿದರೆ ಸರಿ:ಬಟ್ಟೆ ಕ್ಲೀನ್
ಬಟ್ಟೆಯು ಸ್ವತ: ಸ್ವಚ್ಛವಾಗುವಂತೆ ಮಾಡುವ ಬಗ್ಗೆ ಸಂಶೋಧನೆ ಪ್ರಗತಿಯಲ್ಲಿದೆ.ಚೀನಾದ ಎರಡು ವಿಶ್ವವಿದ್ಯಾಲಯಗಳ ಸಂಶೋಧಕರು ಬಿಸಿಲಿಗೆ ಹರಡಿದಾಗ ಕಲೆ ನಿವಾರಿಸಿಕೊಂಡು ಸ್ವಚ್ಛವಾಗುವ ಬಟ್ಟೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.ಬಟ್ಟೆಗೆ ನೀಡಿದ ಟೈಟಾನಿಯಂ ಡಯಾಕ್ಸೈಡ್ ಲೇಪನ ಈ ಪವಾಡ ಮಾಡುತ್ತದೆ.ನಾಲ್ಕು ಸಲ ಬಟ್ಟೆಯನ್ನು ಬಿಸಿಲಿಗೆ ಹರಡಿದಾಗಲೂ,ಅದು ಸ್ವಚ್ಛವಾದುದರಿಂದ,ಈ ಲೇಪನ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎನ್ನುವುದು ವ್ಯಕ್ತವಾಗಿದೆ.ಜಪಾನಿನಲ್ಲಿ ಉನಿಕ್ಲೋ ಎನ್ನುವ ಮಾರಾಟ ಮಳಿಗೆಯೂ,ಸೆಕೆಯೆನಿಸಿದ ಮತ್ತು ದುರ್ಗಂಧ ಬೀರದ ವಸ್ತ್ರವನ್ನು ಮಾರಾಟ ಮಾಡತೊಡಗಿದೆ.ಇನ್ನು ಧರಿಸಿದಾಗ ಬೆಚ್ಚನೆ ಅನುಭವ ಕೊಡುವ ಬಟ್ಟೆಗಳೂ ಇವೆ.ಟೈಟಾನಿಯಮ್ ಡಯಾಕ್ಸೈಡ್ ಕೋಟಿಂಗ್ ಅಗ್ಗ,ವಿಷರಹಿತ ಮತ್ತು ಪರಿಸರ ಪ್ರಿಯ ಎನ್ನುವುದು ಮತ್ತೊಂದು ಪ್ಲಸ್‌ಪಾಯಿಂಟ್.
----------------------------------------
ಸೆಕೆಂಡಿಗೆ ಟ್ರಿಲಿಯನ್ ಫ್ರೇಮ್ ಹಿಡಿಯುವ ಕ್ಯಾಮರಾ
ಮಸಾಚ್ಯುಸೆಟ್ಸ್‌ನ ಎಂಐಟಿ ವಿದ್ಯಾಲಯವು ಸೆಕೆಂಡಿಗೆ ಟ್ರಿಲಿಯನ್ ಬಾರಿ ಫೋಟೋ ಹಿಡಿಯಬಲ್ಲ ಕ್ಯಾಮರಾವನ್ನು ಅಭಿವೃದ್ಧಿ ಪಡಿಸಿದೆ.ಅಂದರೆ ಇದು ಮಾಮೂಲಿ ಟೆಲಿವಿಷನ್ ಕ್ಯಾಮರಾಕ್ಕಿಂತ ನಲುವತ್ತು ಬಿಲಿಯನ್ ವೇಗವಾಗಿದೆ.ಭಾರೀ ವೇಗದಲ್ಲಿ ನಡೆವ ಪ್ರಕ್ರಿಯೆಗಳನ್ನು ಚಿತ್ರೀಕರಿಸಲಿದನ್ನು ಬಳಸಬಹುದು.ಇದಕ್ಕೆ ಫೆಂಟೋ ಛಾಯಾಚಿತ್ರೀಕರಣ ಎಂದು ಹೆಸರಿಸಲಾಗಿದೆ.
--------------------------------------------
ಚಾಲಕರಹಿತ ಕಾರು;ಗೂಗಲ್‌ಗೆ ಪೇಟೆಂಟ್
ಚಾಲಕರಹಿತ ಮತ್ತು ಚಾಲಕಸಹಿತವಾಗಿ ಹೀಗೆ ಎರಡು ವಿಧದಲ್ಲಿ ಚಲಿಸಬಲ್ಲ ಕಾರಿನ ಹಕ್ಕುಸ್ವಾಮ್ಯವೀಗ ಗೂಗಲ್ ಕಂಪೆನಿಗೆ ಲಭ್ಯವಾಗಿದೆ.ಕಾರನ್ನು ನಿಲ್ಲಿಸಿದ ಸ್ಥಳವು ಕಾರಿನ ಚಾಲನ ವ್ಯವಸ್ಥೆಗೆ ಸ್ಪಷ್ಟವಾಗಿ ಗೊತ್ತಾದಾಗಲದು,ಚಾಲಕರಹಿತ ಸ್ಥಿತಿಗೆ ಹೋಗುತ್ತದೆ.ಸ್ಥಾನವು ಜಿಪಿಎಸ್ ಮೂಲಕ ಕಾರಿಗೆ ಗೊತ್ತಾಗಬಹುದು.ನಂತರ ಹೋಗ ಬೇಕಾದ ಸ್ಥಳದ ಮಾಹಿತಿಯಿದ್ದರೆ,ಕಾರಿನ ಚಾಲನ ವ್ಯವಸ್ಥೆ,ಸ್ವತ: ಕಾರು ಚಲಾಯಿಸಿಕೊಂಡು ಗಮ್ಯವನ್ನು ತಲುಪಬಹುದು.ಗ್ಯಾರೇಜಿಗೆ ಕಾರನ್ನುತಲುಪಿಸ ಬೇಕಾದಾಗ,ಅಥವಾಕಾರು ಬಾಡಿಗೆ ನೀಡುವ ಕಂಪೆನಿಗಳಿಗೆ ಇಂತಹ ಕಾರು ಉಪಯುಕ್ತವಾಗಬಹುದು.
UDAYAVANI
ಅಶೋಕ್‌ಕುಮಾರ್ ಎ