ಚಳಿಗಾಲ
ಡಿಸೆಂಬರ್ ೨೧ರಂದು so called ’ಚಳಿಗಾಲದ ಮೊದಲ ದಿನ’ - ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ ಉತ್ತರಾಯಣದ ಮೊದಲ ದಿನ ಅಂತ ಬೇಕಾದರೂ ಅನ್ನೋಣ.
ಈ ದಿನಕ್ಕೆ ಹೊಂದುವಂತೆ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆಗೆಂದು ಬರೆದ ಒಂದು (ಸ್ವಂತ) ಪದ್ಯ, ಅನುವಾದವಲ್ಲ :) - ಛಂದಸ್ಸಿಗೆ ತಕ್ಕಂತೆ ಯೋಚಿಸಿ, ಯೋಜಿಸಿ ಬರೆದಂತಹ ಒಂದು ಪ್ರಯತ್ನ ಇಲ್ಲಿದೆ:
ಮಳಲುದಂಡೆಯ ಹೊಳೆಯ
ಕುಳಿರುಗಾಳಿಯ ಮೊರೆತ
ಬೆಳಗುತಿಹ ತಾರೆಗಳ ಬಾನ ಚೆಲುವು |
ಸುಳಿವ ಮರೆಸಿದ ರವಿಯು
ಕೆಳೆಯ ಬಯಸುವ ಇರುಳು
ಚಳಿಗಾಲದೊಳಗೆನಿತು ಮುದ ತರುವುವು ||
-ಹಂಸಾನಂದಿ
ಕೊ: ಇದು ಕುಸುಮ ಎಂಬ ಹೆಸರಿನ ಷಟ್ಪದಿಯಲ್ಲಿದೆ. ಇನ್ನೂ ಹೆಚ್ಚಿನ ಕನ್ನಡ ಛಂದಸ್ಸುಗಳ ತಿಳುವಳಿಕೆಗೆ ಯುಟ್ಯೂಬ್ ನಲ್ಲಿ ಪದ್ಯಪಾನದ ರಾ.ಗಣೇಶ್ ಅವರ ವಿಡಿಯೋಗಳನ್ನ ನೋಡಿ.
ಕೊ.ಕೊ: ಈ ದಿವಸವನ್ನು ಅಮೆರಿಕೆಯಲ್ಲಿ "The first day of winter" ಎಂದು ಕರೆಯುವ ರೂಢಿ ಇದೆ. ಹಾಗಾಗಿ ಚಳಿಗಾಲದ ಮೊದಲ ದಿನ ಎಂದಿದ್ದೇನೆ. ಮೇಲಿರುವ ಕೊಂಡಿಗಳಲ್ಲಿ ಅದರ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ಇದೆ
ಕೊ.ಕೊ.ಕೊ: ನಾನು ಇರುವಲ್ಲಿ ಚಳಿಗಾಲವೇ ಮಳೆಗಾಲವೂ ಆದ್ದರಿಂದ, ಈ ಕಾಲದಲ್ಲು ”ಬೆಳಗುತಿಹ ತಾರೆಗಳ ಬಾನ ಚೆಲುವು’ ಸಿಕ್ಕೋದು ಸ್ವಲ್ಪ ಕಷ್ಟವೇ! ಹಾಗಾಗಿ, ಭೂಮಿಯ ಮೇಲಿನ ನೋಟಗಳನ್ನೇ ಹೆಚ್ಚು ನೋಡ್ಬೇಕಾಗುತ್ತೆ. ಆದರೆ ಕರ್ನಾಟಕದಲ್ಲಿ ಆಕಾಶದ ನೋಟಗಳನ್ನು ನೋಡೋಕೆ ಇದು ಬಹಳ ಒಳ್ಳೇ ಕಾಲ. ತಡ ಯಾಕೆ? ಹೊರಡಿ ಹೊರಕ್ಕೆ!
Rating