ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’
ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು ಅಂಥ ಉತ್ಸಾಹದ ಜೊತೆಗೇ ಹೇಳುವ ರೀತಿಯಲ್ಲಿ ಬಳಸಬೇಕಾದ ಮಾರ್ಗದ ಅನುಸೂಚಿ.
ಕವಿಯೂ ಒಬ್ಬ ಸಾಮಾಜಿಕನೇ ಆಗಿರುವುದರಿಂದ ಅವನಿಗೂ ಎಲ್ಲರ ಹಾಗೇ ಬದುಕಿನ ಪರಿಕರಗಳು, ಅದಕ್ಕಾಗಿ ಮಾಡಬೇಕಿರುವ ತ್ಯಾಗ ಮತ್ತು ಸವಾಲುಗಳು ಹಾಗೇ ಬದುಕಿನ ಆಸೆ-ವಿಷಾದಗಳು,ಆಕರ್ಷಣ-ವಿಕರ್ಷಣಗಳು, ಭೋಗ ಭಾಗ್ಯಗಳು ಕಾಡಿಯೇ ಕಾಡುತ್ತವೆ. ಒಬ್ಬ ಸಹಜ ಕವಿ ಅಂಥ ಸವಾಲುಗಳನ್ನೆದುರಿಸುತ್ತಲೇ ಸಮಾಜಕ್ಕೆ ಮುಖಾಮುಖಿಯಾಗುತ್ತಾನೆ ಮತ್ತು ತನ್ನ ಅನುಭವದ ಮೂಲಕವೇ ನಗ್ನ ಸತ್ಯಗಳಲ್ಲಿ ಅಡಗಿರುವ ಉತ್ತರಗಳನ್ನು ಪಡೆಯುತ್ತಾನೆ. ತನ್ನ ಅನುಭವಗಳನ್ನು ಅವನು ಹೇಗೆ ಮತ್ತು ಯಾವ ನೆಲೆಗಳಲ್ಲಿ ಅಭಿವ್ಯಕ್ತಿಸುತ್ತಾನೆ ಎನ್ನುವುದರ ಮೇಲೆ ಅವನ ಕವಿತೆಗಳ ಅಳಿವು-ಉಳಿವುಗಳು ನಿಂತಿರುತ್ತವೆ.
ವೀರಣ್ಣ ಮಡಿವಾಳರ ಕಾವ್ಯ ನಿಜ ಬದುಕಿನ ಅಗ್ನಿದಿವ್ಯದಿಂದೆದ್ದು ಬಂದಿರುವುದರಿಂದ ಈ ಸಂಕಲನದ ಬಹುತೇಕ ಕವಿತೆಗಳು ಬರಿಯ ಕವಿತೆಗಳಾಗದೇ ಅನುಭವದ ಪಾರಮ್ಯವನ್ನು ಚಿತ್ರಿಸಿದ ಕುರುಹುಗಳಾಗಿವೆ, ದಮನಿತನೊಬ್ಬನ ಆತ್ಮಕತೆಯ ನೆಲೆಯಾಗಿವೆ, ಮತ್ತು ಯಾವ ಘೋಷಣೆ, ಸಿದ್ಧಾಂತಗಳ ನೆರವಿಲ್ಲದ ವಿನಮ್ರ ಹೇಳಿಕೆಗಳ ಬಿಕ್ಕುಗಳಾಗಿವೆ.
‘ನವಿಲು ನಲಿವ ನೆಲವ ತೊರೆದು, ಇಲ್ಲೇ ಎಲ್ಲೋ ಹಾಳಾಗಿ ಹೋಗಿರುವ ವಸಂತನನ್ನು ಹುಡುಕಲು ಹೊರಟ ನನ್ನ ಮೊದ ಮೊದಲ ತಪ್ಪು ಹೆಜ್ಜೆಗಳಿವು......’ ಎಂದು ಮೊದಲಲ್ಲೇ ಆತಂಕ ಮತ್ತು ಸಹಜ ಆಕ್ರೋಶದಿಂದ ಈ ಸಮಾಜದ ಕ್ರೌರ್ಯವನ್ನು ಪ್ರಶ್ನಿಸುತ್ತಾರಾದರೂ ಎಲ್ಲೂ ಅವರು ಸಾಮಾಜಿಕ ತಪ್ಪುಗಳಿಗೆ ಘೊರ ಶಿಕ್ಷೆಯ ತೀರ್ಪು ನೀಡುವುದಿಲ್ಲ. ಈ ಕವಿಗೆ ಅವನ ನಿಲುವುಗಳಲ್ಲಿ ಜಗಳವಿದೆ, ದುಃಖದ ಹನಿಗಳಾಗಿ ಮಡುಗಟ್ಟಿರುವ ಕವಿತೆಗಳ ಬಗ್ಗೆ ಒಲವಿದೆ, ಸಂಕಟವೇ ಸ್ಥಾಯಿಯಾಗಿ ನಿಂತ ಎದೆಯಾಳದ ಮಾತುಗಳ ನಿಜ ದರುಶನವೂ ಇದೆ.
ಹಸಿವೆಂದು ಊರಿಗೇ ಬೊಬ್ಬಿಟ್ಟರೂ/ಕಾಳು ಹಾಕುವ ಅಜ್ಜ ಮಲಗಿದ್ದಾನೆ/ರೊಟ್ಟಿ ನೀಡುವ ಹುಡುಗ ಹಸಿದಿದ್ದಾನೆ.. ..(ನೆಲದ ಕರುಣೆಯ ದನಿ) ಹೀಗೆ ಗಂಭೀರವಾಗಿ ನೆಲದ ಕರುಣೆಯ ದನಿಯನ್ನೂ, ಅದರ ಕರುಣಾಜನಕ ದನಿಯನ್ನೂ ಒಟ್ಟೊಟ್ಟಿಗೇ ವ್ಯಂಗ್ಯ ಮತ್ತು ವಿಷಾದಗಳೆರಡರಲ್ಲೂ ಸಮರ್ಥವಾಗಿ ಚಿತ್ರಿಸುವ ವೀರಣ್ಣ, ‘ಭೀತ ನಿರ್ಭೀತಗಳಿಲ್ಲದ ಅನವರತ ಏಕಾಂತ/ ವಿಶಾಲ ಬಯಲ ದಟ್ಟ ಕತ್ತಲಲಿ ಏಕಾಂಗಿ ಹಣತೆಯ ಮೈ ಬಸಿತ’ ಎನ್ನುವ ಚಿತ್ರಾತ್ಮಕ ನಿಲುವಿನಲ್ಲಿ ನಿಲ್ಲಿಸಿ, ‘ಏರುತ್ತಿರುವ ನಿಮ್ಮ ದನಿ/ನನ್ನದು ನನ್ನದು ನನ್ನದೇ’ ಎನ್ನುವಲ್ಲಿ ಸಮುದಾಯದ ಒಗ್ಗಟ್ಟನ್ನು ಬಯಸುತ್ತಲೇ ಶೋಷಣೆಯ ವಿರುದ್ಧ ಒಂದಾಗಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಾರೆ.
ಊರ ದೇವರ ದಿಬ್ಬಣ/ಬೀದಿಯಲಿ ಬರುವಾಗ/ ನಾವೇ ಹಡದಿ ಹಾಸಿಗೆಯಾಗಿ ಬಿದ್ದುಕೊಂಡೆವು
ಮಣ್ಣನಪ್ಪಿದ ಮಡಿಬಟ್ಟೆಯನು/ ಪಲ್ಲಕ್ಕಿ ಹೊತ್ತ ನೀವು ತುಳಿದಿರಿ/
ನಾವು ಎಷ್ಟೇ ನಲುಗಿದರೂ/ದೇವರು ನಮ್ಮನ್ನು ಮುಟ್ಟಲೇ ಇಲ್ಲ. (ಹಡದಿ ಹಾಸುವವರ ಹಾಡು)
ವ್ಯವಸ್ಥೆಯ ಕರಾಳ ಮುಖವನ್ನು ಸೂಕ್ಷ್ಮಗ್ರಾಹೀ ಕವಿಯೊಬ್ಬ ನೋವಿನ ದನಿಯಲ್ಲೇ ವ್ಯಂಗ್ಯ ಮತ್ತು ವಿಷಾದಗಳ ಮೂಲಕ ಸಾರ್ಥಕವಾಗಿ ಚಿತ್ರಿಸಬಲ್ಲ ಎಂದು ಪುರಾವೆ ನೀಡುವ ಸಾಲುಗಳಿವು.
ಕೊಕ್ಕನ್ನೇ ಕತ್ತಿಯಾಗಿಸಿ ವಚನ ಬಂಡಾಯದ ಕವಲು ಕಾದ ಹಕ್ಕಿ/ ಅಲ್ಲಮನ ಬಯಲಲಿ ಬಿದ್ದಿದೆ/
ತುತ್ತು ಕೂಳಿಗೂ ತತ್ವಾರ/ .. .. ದೇಹಿ ಎನ್ನಲು ಮನಸಿಲ್ಲದ ಸ್ವಾಭಿಮಾನಿ ಹಕ್ಕಿ (ಮಡಿವಾಳ ಹಕ್ಕಿ)
ತಾನು ಹೇಳಬೇಕಿರುವುದೆಲ್ಲಿ ಓದುಗನಿಗೆ ತಲುಪುವುದಿಲ್ಲವೋ ಎಂದು ಸಂಕಟವನ್ನು ಒತ್ತಿ ಹೇಳಬೇಕೆಂದು ಕವಿ ಈ ಸಾಲುಗಳನ್ನು ಬರೆದರೂ ‘ದೇಹಿ ಎನ್ನಲು ಮನಸಿಲ್ಲದ’ ಅಂದಮೇಲೆ ‘ಸ್ವಾಭಿಮಾನಿ ಹಕ್ಕಿ’ ಅಂತ ಕರೆಯುವುದು ದ್ವಿರುಕ್ತಿಯಾಗಿ ಬದಲಾಗಿ ಇಡೀ ಪದ್ಯ ಏರುತ್ತಿದ್ದ ಎತ್ತರದಿಂದ ಗಕ್ಕನೇ ಇಳಿಯತೊಡಗಿಬಿಡುತ್ತದೆ.
ಗಿಡುಗನ ಸುಳಿವು ಕಂಡರೂ ಹಕ್ಕಿ/ ಜತನದಿಂದ ಹೊರಬರಲೇ ಬೇಕು/ ಮರಿಗಳ ಹಸಿವ ನೀಗುವ ಸವಾಲಿದೆ (ಸವಾಲು)
ಎನ್ನುವಲ್ಲಿಈ ಕವಿ, ಬದುಕಿನ ಆತಂಕಗಳನ್ನೇ ಸವಾಲಾಗಿ ಸ್ವೀಕರಿಸಿದ ಮನಸ್ಥಿತಿಯನ್ನು ಬಿಚ್ಚಿಡುತ್ತಾರೆ.
ಅಡವಿಯಲಿ ನೀರಡಿಸಿ ನಡೆವಾಗ/ ಕಂಡ ಬಾವಿಯ ಇಣುಕಿದರೆ/ ಬಾವಿ ಮಣ್ಣು ಹೊತ್ತ/ ಅವ್ವನ ಋಣದ ಚಿತ್ರ ಬಾವಿ ತುಂಬ
ದಾಹ ನಾಪತ್ತೆ ( ಹರಕು ಅಂಗಿಯ ರೇಖಾ ಚಿತ್ರ) ಸರಳವಾಗಿ, ನೇರವಾಗಿ ಎದೆಗಿಳಿವ ಪ್ರತಿಮೆಗಳಲ್ಲಿ ಇಡೀ ಪದ್ಯವೇ ಮಾತನಾಡುತ್ತದೆ.
ನಲವತ್ತೇಳು ಕವಿತೆಗಳ ಜೊತೆಗೆ ಇಪ್ಪತ್ತನಾಲ್ಕು ಬಿಡಿ ಬಿಡಿ ಪದ್ಯಗಳನ್ನೂ ಸಂಕಲನದಲ್ಲಿ ಅಡಕಿರಿಸಿದ ಕಾರಣ ದೀರ್ಘ ಪದ್ಯಗಳಲ್ಲಿರುವ ವಿಷಾದ, ಆತಂಕ ಮತ್ತು ಉದ್ವಿಗ್ನತೆಯ ಬಿಸಿಗಳು ಬಿಡಿ ಬಿಡಿ ಪದ್ಯಗಳಲ್ಲಿರುವ, ಸಹಜ ಪ್ರೀತಿಯನ್ನು ಓದಿಗೆ ದಕ್ಕಿಸಲು ಅನನುಕೂಲವಾಗಿದೆ. ಉದಾಹರಣೆಗೆ
ನನ್ನ ಈ ಕಾಲು ಶತಮಾನದ/ ಬದುಕಿನ ಮೇಲಾಣೆ/ ಇದುವರೆಗೂ ಕಂಡಿರದ/ ನವ ನವೀನ ವಿಸ್ಮಯಗಳನ್ನು/ ನೀನು ಸೃಷ್ಟಿಸುತ್ತಿರುವೆ ಎಂದು ಓದಿಕೊಂಡಾಗ ಸಹಜವಾಗಿ ಆಗಬೇಕಾದ ರೋಮಾಂಚನ ಹುಟ್ಟದೇ ಬರಿಯ ನಿಸೂರು ಸ್ವರವೊಂದೇ ಉಳಿದುಬಿಡುತ್ತದೆ.
ಹೊಸ ಹೊಸ ಅನಿಭವಗಳನ್ನು ಓದುಗನಿಗೆ ಯಶಸ್ವಿಯಾಗಿ ದಾಟಿಸಬಲ್ಲ ವೀರಣ್ಣ ಮಡಿವಾಳರ, ತಮ್ಮ ಹೆಗಲ ಮೇಲೆ ಯಾತನೆಯ ಭಾರವನ್ನೇ ಹೊತ್ತಿದ್ದಾರೆ. ಈ ಕವಿತೆಗಳನ್ನು ಬರೆದಾದ ಮೇಲೆ ಅವರ ಭಾರದ ಅರಿವು ಓದುಗನಿಗೂ ದಾಟಿದೆ. ಸಂಕಲನದ ತುಂಬ ಅಸಹಾಯಕತೆಯ ಗಟ್ಟಿ ಬಿಕ್ಕುಗಳು ಕೇಳಿಸುತ್ತಿದ್ದರೂ, ಅದೆಲ್ಲೂ ವೃಥಾ ಕರುಣೆಯನ್ನು ಹಂಬಲಿಸುವ ದನಿಯಾಗದೇ, ಒಡಲಾಳವನ್ನು ಸಮರ್ಥವಾಗಿ ತೆರೆದಿಟ್ಟ ಅಳುವಿನ ಸೆಲೆಯೇ ಆಗಿದೆ. ಅವರು ತಮ್ಮ ಮಿತಿಯನ್ನೂ ಬಲ್ಲವರಾದ್ದರಿಂದಲೇ ಇಲ್ಲಿನೆಲ್ಲ ಕವಿತೆಗಳೂ ಕವಿತೆಗಳಾಗೇ ಅರಳಿವೆ, ಕವಿತೆಯಾಗದೇ ಉಳಿದವು ಅವರ ಸ್ವಗತವಾಗಿಯೂ ಓದುಗನನ್ನು ಕಾಡಿದೆ.
ಯಾರು ಬುದ್ಧಿ ಹೇಳಬೇಕು ಈ ಹುಂಬ ಹುಡುಗನಿಗೆ/ ಕೋಟಿ ವರುಷ ಬಾಳಿದ ಹೆಮ್ಮರದ ತುದಿಯನೇರಿ/
ಸಕಲ ಜೀವಕೂ ಕೇಳಿಸುವ ಹಾಗೆ/ ಮನುಕುಲದ ಉದ್ಧಾರ ಸೂತ್ರ ಪಠಿಸುತ್ತಾನಂತೆ (ಈ ಮಣ್ಣ ಚರಿತ್ರೆ)
ಕೃತಿ: ನೆಲದ ಕರುಣೆಯ ದನಿ (ಕವನ ಸಂಕಲನ) ಕವಿ: ವೀರಣ್ಣ ಮಡಿವಾಳರ
ಪ್ರಕಾಶಕರು: ಕೆಂಗುಲಾಬಿ ಪ್ರಕಾಶನ, ಕೂಡ್ಲಿಗಿ ವರ್ಷ: ೨೦೧೦ ಪುಟಗಳು ೧೧೬ ಬೆಲೆ: ರೂ. ೫೦/-
(ಕನ್ನಡಪ್ರಭದ ಇಂದಿನ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿರುವ ಲೇಖನ)