ಅಲ್ಕೆಮಿಸ್ಟನೂ, ಗುರಿ ಸಾಧನೆಯ ಹಾದಿಯೂ...

ಅಲ್ಕೆಮಿಸ್ಟನೂ, ಗುರಿ ಸಾಧನೆಯ ಹಾದಿಯೂ...

ಪುಸ್ತಕದ ಲೇಖಕ/ಕವಿಯ ಹೆಸರು
ಪೌಲೋ ಕೊಯ್ಲೋ
ಪ್ರಕಾಶಕರು
ಹಾರ್ಪರ್ ಟಾರ್ಚ್

ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ ಶಕುನಗಳನ್ನು ಗ್ರಹಿಸುತ್ತಾರೆ. ತಮ್ಮ ಎದೆಯಾಳದ ಧ್ವನಿಯನ್ನು ಯಾವಾಗಲೂ ಕೇಳುತ್ತಾರೆ, ಅದರಂತೆ ನಡೆಯುತ್ತಾರೆ. ತಮ್ಮ ಹತ್ತಿರ ಭವಿಷ್ಯದೊಳಗೆ ಇಣುಕುವ ಯಂತ್ರವಿದ್ದರೂ ಅದರ ನೆರವನ್ನು ಪಡೆಯುವದಿಲ್ಲ ಬದಲಿಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಗುಣಗಳಿಗೆ ದೇಶ ಕಾಲಗಳ ಎಲ್ಲೆ ಇಲ್ಲ. ಇವುಗಳಲ್ಲಿ ಕೆಲವು ಅಲ್ಕೆಮಿಸ್ಟಿನ ಸಾಂಟಿಯಾಗೋಗೆ ಸ್ವಾಭಾವಿಕವಾಗಿ ಬಂದಿರುತ್ತವೆ, ಇನ್ನು ಕೆಲವನ್ನು ಕಲಿಯುತ್ತಾನೆ ಹಾಗೂ ಅನುಭವಿಸುತ್ತಾನೆ. ಕನಸಿನಲ್ಲಿ ಕಂಡ ನಿಧಿಗಾಗಿ ಅವನು ಮರುಭೂಮಿಯನ್ನು ದಾಟಿ, ಈಜಿಪ್ತಿನ ಪಿರಮಿಡ್ಡುಗಳನ್ನು ಹುಡುಕಿಕೊಂಡು ಹೋಗಬೇಕು. ಅವನು ನಿಜವಾಗಿಯೂ ಏನನ್ನಾದರೂ ಬಯಸಿದರೆ ಅದನ್ನು ದೊರಕಿಸಿಕೊಡಲು ಇಡೀ ವಿಶ್ವವೇ ಸಂಚು ಹೂಡುತ್ತದೆ ಎನ್ನುವದನ್ನು ಬೇರೆ ಬೇರೆಯವರಿಂದ ಕೇಳಿದ್ದಾನೆ, ಅವನ ದಾರಿಯಲ್ಲಿನ ಶಕುನಗಳೂ ಅವನಿಗೆ ಅದನ್ನೇ ಹೇಳುವಂತಿವೆ (ಆ ಶಕುನಗಳನ್ನೂ ಅದಕ್ಕೋಸ್ಕರವೇ ಆ ದೇವರು ಇಟ್ಟಿದ್ದಾನೆ ಎಂದೂ ಅನಿಸಿದೆ ಅವನಿಗೆ). ತನ್ನ ನಿಜವಾದ ನೆಲೆಯನ್ನು ಅವನು ಹುಡುಕಬೇಕು. ಆ ದಾರಿಯಲ್ಲಿ ಅವನನ್ನು ನಡೆಸುವ ಕೈ ಎಲ್ಲವನ್ನೂ ಬರೆದ ಕೈ. ಅವನು ಹಾಕುವ ಪ್ರತಿ ಹೆಜ್ಜೆ ಹಾಗೂ ಪ್ರತಿ ಹೆಜ್ಜೆಯ ಅನುಭವ ಅವನವೆ.

ಸಾಂಟಿಯಾಗೋ ಒಬ್ಬ ಅಲ್ಕೆಮಿಸ್ಟ್, ಅವನಿಗೆ ತನ್ನನ್ನು ತಾನು ಗಾಳಿಯನ್ನಾಗಿ ಪರಿವರ್ತಿಸಿಕೊಳ್ಳಲು ಬರುತ್ತದೆ ಎಂದು ನಿಜವಾದ ಅಲ್ಕೆಮಿಸ್ಟ್ ಹೇಳಿದಾಗ ಸಾಂಟಿಯಾಗೋನ ಎದೆಯಲ್ಲಿ ತಲ್ಲಣ. ಮತ್ತೊಂದು ಪರೀಕ್ಷೆಯ ಗಳಿಗೆ. ಅಲ್ಕೆಮಿಸ್ಟನ ಮಾತನ್ನು ಅನುಸರಿಸಿ ಕಳೆದ ಏಳೆಂಟು ದಿನಗಳಲ್ಲಿ ತನ್ನ ಎದೆಯಾಳದ ಮಾತುಗಳನ್ನು ಕೇಳುವದನ್ನು ಕಲಿತಿದ್ದಾನೆ. ತನ್ನ ಹೃದಯದ ತುಡಿತವನ್ನು ಅರಿತಿದ್ದಾನೆ. ತಾನು ಬಯಸುವದಕ್ಕೂ ತನ್ನ ಹೃದಯ ಬಯಸುವದಕ್ಕೂ ನಡುವೆ ಕಂದರಗಳಿಲ್ಲ. ಅವೆರಡೂ ಒಂದೇ ಆದಂತಿವೆ. ಆದರೂ ಅವನಿಗೆ ಮನುಷ್ಯನಿಂದ ಗಾಳಿ ಹೇಗಾಗಬೇಕು ಎಂದು ಗೊತ್ತಿಲ್ಲ. ೩ ದಿನಗಳ ಅವಕಾಶದಲ್ಲಿ ಗಾಳಿಯಾಗಿ ತೋರಿಸದಿದ್ದರೆ, ಈ ಮರುಭೂಮಿಯಲ್ಲಿ ತಮ್ಮನ್ನು ಹಿಡಿದು ಹಾಕಿದವರು ಕೊಂದು ಬಿಡುತ್ತಾರೆ! ಜೊತೆಗೆ ಆ ಅಲ್ಕೆಮಿಸ್ಟ್ ಬೇರೆ ಹೇಳಿದ್ದಾನೆ ಯಾರಾದರೂ ಸಾಯುವುದಿದ್ದರೆ ಅದು ನೀನು ಮಾತ್ರ, ನನಗಾಗಲೇ ಗೊತ್ತು ಹೇಗೆ ಗಾಳಿಯಾಗಬೇಕು ಎಂದು.

ಕಡೆಗೆ ಮೂರನೇ ದಿನ ಬಂದಾಗ ಎಲ್ಲರೆದುರು ಅವನೊಂದು ಮರಳು ದಿನ್ನೆ ಏರುತ್ತಾನೆ. ನಿಧಾನವಾಗಿ ತನ್ನ ಹೃದಯದ ಜೊತೆಗೆ ಬೆಳೆಸಿಕೊಂಡ ಅವಿನಾಭಾವ ಸಂಬಂಧವನ್ನುಪಯೋಗಿಸಿ, ವಿಶ್ವದ ಆತ್ಮವನ್ನು ತಲುಪ ಬಯಸುತ್ತಾನೆ. ಅದೇ ಅಲ್ಕೆಮಿಸ್ಟ್ ಹೇಳಿದ, "ಒಂದು ಮರಳಿನ ಕಣವನ್ನು ಕುರಿತು ಧ್ಯಾನಿಸಿ ಅದನ್ನರಿತರೂ ನೀನು ವಿಶ್ವ ರಹಸ್ಯವನ್ನೇ ಅರಿಯುವೆ" ಎನ್ನುವ ಮಾತಿನಿಂದ ಪ್ರಭಾವಿತನಾದಂತೆ ಅನನ್ಯವಾಗಿ ಆ ಮರುಭೂಮಿಯ ಮರಳಿನೊಡನೆ ’ಮಾತನಾಡುತ್ತಾನೆ’. ನನಗೆ ಗಾಳಿಯಾಗುವದನ್ನ ಹೇಳಿಕೊಡು ಎಂದು ಕೇಳುತ್ತಾನೆ. ಮರಳು ತಿರುಗಿ ಮಾತನಾಡುತ್ತದೆ! ನನಗೆ ಗೊತ್ತಿಲ್ಲ ಮನುಷ್ಯನನ್ನು ಹೇಗೆ ಗಾಳಿಯನ್ನಾಗಿ ಮಾಡಬಹುದು ಎಂದು, ಬೇಕಿದ್ದರೆ ಗಾಳಿಯನ್ನೇ ಕೇಳು ಅದು ನನ್ನನ್ನೂ ಹಾರಿಸಿಕೊಂಡು ಹೋಗುತ್ತದೆ ಎನ್ನುತ್ತದೆ. ಹುಡುಗ ಈಗ ಗಾಳಿಯೊಡನೆ ಮಾತನಾಡುತ್ತಾನೆ. ಗಾಳಿಯೂ ಹೇಳುತ್ತದೆ ನನಗೆ ಗೊತ್ತಿಲ್ಲ ಮನುಷ್ಯನನ್ನು ಗಾಳಿಯನ್ನಾಗಿಸುವದು. ನಾನು ಗಾಳಿ ಅಷ್ಟೆ. ನನಗೂ ಮೇಲಿನವನು ಸೂರ್ಯ ಬೇಕಿದ್ದರೆ ಅವನನ್ನೇ ಕೇಳು. ಹುಡುಗನ ಧ್ಯಾನ ಹೆಚ್ಚಿದಂತೆ, ಹುಡುಗ ಸೂರ್ಯನನ್ನು ಹುಡುಕಿಕೊಂಡು ಹೋದಂತೆ, ಸೂರ್ಯನನ್ನು ಮತ್ತೆ ಮತ್ತೆ ಕೇಳಿದಂತೆ ಗಾಳಿ ಜೋರಾಗಿ ಬೀಸುತ್ತದೆ. ಮರಳ ಕಣಗಳನ್ನು ತೂರುತ್ತದೆ. ಹುಡುಗ ಸೂರ್ಯನೆಡೆಗೆ ನೇರವಾಗಿ ನೋಡಲು ಅನುಕೂಲವಾಗಲಿ, ಅವನ ಕಣ್ಣುಗಳಿಗೆ ಕಷ್ಟವಾಗದಿರಲಿ ಎಂದು ಮತ್ತಷ್ಟು ಮರಳಿನ ಕಣಗಳನ್ನು ತೂರುತ್ತದೆ. ಬೀಸು ಗಾಳಿಯಲ್ಲಿ, ತೂರುವ ಮರಳು ಕಣಗಳಲ್ಲಿ, ಸಾಂಟಿಯಾಗೋನ ಅನನ್ಯ ಹುಡುಕಾಟದಲ್ಲಿ ನಮ್ಮನ್ನು ತನ್ಮಯರನ್ನಾಗಿಸಿಬಿಡುವ ಭಾಗ ಇದು. ಇದನ್ನ ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಅನುರಣಿಸಿದ್ದು ಈಶಾವಾಸ್ಯದ ಈ ಶ್ಲೋಕ,

ಪೂಷನ್ ಏಕರ್ಷೇ ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜೋ ಯತ್ತೇ
ರೂಪಮ್ ಕಲ್ಯಾಣತಮಮ್ ತತ್ತೇ ಪಶ್ಯಾಮಿ
ಯೋಸಾವಸೌ ಪುರುಷಃ ಸೋsಹಮಸ್ಮಿ

(ಚಿನ್ನದ ತಳಿಕೆಯಲ್ಲಡಗಿಸಿದ ಸತ್ಯವನ್ನು ಕಾಣಬೇಕು,
ನಿನ್ನ ತೇಜೋರಾಶಿಯನ್ನು ತಗ್ಗಿಸು, ನಿನ್ನ ಕಲ್ಯಾಣಮಯ ರೂಪವನ್ನು ಕಾಣಬೇಕು.
ನನ್ನಲ್ಲಿರುವ ರೂಪಗಳೂ ಅವೇ)

ಸಾಂಟಿಯಾಗೋನ ಅನನ್ಯ ಪ್ರಾರ್ಥನೆ ಫಲಿಸುತ್ತದೆ. ವಿಶ್ವದ ಆತ್ಮವನ್ನು ಕಾಣುತ್ತಾನೆ. ತಾನೂ ಅದರಿಂದಲೇ ಬಂದದ್ದರ ಅರಿವಾಗುತ್ತದೆ. ಜೊತೆಗೆ ತನಗೂ ಪವಾಡಗಳನ್ನು ಮಾಡಲು ಬರುವದೂ ತಿಳಿಯುತ್ತದೆ!

ಅವನನ್ನು ಪಿರಮಿಡ್ಡುಗಳ ತನಕ ಬಿಡಲು ಬಂದ ಅಲ್ಕೆಮಿಸ್ಟ್ ಹೇಳುತ್ತಾನೆ, "ನಿನ್ನ ಗಮ್ಯ ಇನ್ನೇನೂ ದೂರವಿಲ್ಲ. ಆದರೆ ನೆನಪಿರಲಿ ವ್ಯಕ್ತಿಯೊಬ್ಬ ಅವನ ನಿಜವಾದ ನೆಲೆಯನ್ನು ತಲುಪುವ ಹಾದಿಯಲ್ಲಿ ಹಲವಾರು ಪರೀಕ್ಷೆಗಳೆನ್ನುದುರಿಸಬೇಕಾಗುತ್ತದೆ. ಗುರಿ ಹತ್ತಿರವಾದಂತೆ ಪರೀಕ್ಷೇಗಳೂ ತೀಕ್ಷ್ಣವಾಗುತ್ತವೆ." ಇಲ್ಲಿಯವರೆಗೂ ಸಾಂಟಿಯಾಗೋನ ಕತೆಯನ್ನು ಓದುತ್ತ ಬರುತ್ತಿದ್ದಂತೆ ಇಲ್ಲಿ ಒಮ್ಮಿಂದೊಮ್ಮೆಲೆ ದೇವುಡು ಅವರ ಮಹಾಬ್ರಾಹ್ಮಣ ವಿಶ್ವಾಮಿತ್ರನನ್ನು ಕಂಡಂತಾಯಿತು. ಒಂದರ ಮೇಲೊಂದು ಪರೀಕ್ಷೆಗಳನ್ನೆದುರಿಸಿಯೂ ಗೆದ್ದ ಕೌಶಿಕ ವಿಶ್ವಾಮಿತ್ರನಾಗುತ್ತಾನೆ. ಅವನ ಪರೀಕ್ಷೆಗಳು ಹಾಗೇ, ಗುರಿ ಹತ್ತಿರವಾದಂತೆಲ್ಲ ಹೆಚ್ಚು ಕಠಿಣವಾದಂತಹವು. ಇಲ್ಲಿ ವಿಶ್ವಾಮಿತ್ರನೇಕೆ ನೆನಪಾಗಬೇಕು ? ಸಾಂಟಿಯಾಗೋ ಹುಡುಕುತ್ತಿದ್ದದ್ದು ಒಂದು ನಿಧಿ ಅಷ್ಟೆ. ವಿಶ್ವಾಮಿತ್ರನೋ ಬ್ರಹ್ಮ ಋಷಿ ಆಗಬೇಕು, ಇನ್ನೊಬ್ಬ ವಸಿಷ್ಠ ಆಗಬೇಕು ಎಂದು ಹೊರಟವ. ’ಗಾಯತ್ರಿ ಮಂತ್ರ ದೃಷ್ಟಾರ’ ಎನ್ನುವ ವಿಶ್ವಾಮಿತ್ರನ ಹಿರಿಮೆಯನ್ನು ಕೇಳುತ್ತ ಬಂದ ನನಗೆ ಸಾಂಟಿಯಾಗೋನ ನಿಧಿಯ ಹುಡುಕಾಟ ಕ್ಷುಲ್ಲಕ ಅನಿಸಬೇಕಲ್ಲವೆ? ಆದರೂ ನೆನಪಾಯಿತೆಂದರೆ ಇದು ಸಾಧಿಸಿದ ಗುರಿಯಿಂದಾಗಿ ನೆನಪಾದದ್ದಲ್ಲ. ಗುರಿ ಸಾಧಿಸುವವರ ಪಯಣದ ಅರಿವಿನಿಂದ ನೆನಪಾದದ್ದು. ಇಬ್ಬರ ಕತೆಯೂ ಹೇಳುವದು ಗುರಿ ತಲುಪಲು ಶ್ರಮಿಸುವ ವ್ಯಕ್ತಿಯ ಬಗ್ಗೆ. ಅವರ ದಾರಿಯ ಬಗ್ಗೆ, ಆ ದಾರಿಯಲ್ಲಿ ನಡೆಯುವಾಗ ಅವರು ತೋರುವ ಸ್ಥೈರ್ಯದ ಬಗ್ಗೆ. ಅವರ ಗುರಿ ಸಾಧನೆ ಆಗಲು ವಿಶ್ವ ಹೂಡುವ ಸಂಚಿನ ಬಗ್ಗೆ. ಆಷ್ಟೇ ಅಲ್ಲ, ನಿಧಿಯ ಅನ್ವೇಷಣೆಗೆ ಹೊರಟ ಹುಡುಗನಿಗೆ ಅಲ್ಕೆಮಿಯೂ ಒಲಿಯಿತಲ್ಲ, ಅವನೂ ಒಂದು ರೀತಿಯಲ್ಲಿ ವಿಶ್ವಾಮಿತ್ರನೇ ಆಗಿಬಿಟ್ಟ ಹಾಗಾದರೆ! ವಿಶ್ವಾಮಿತ್ರ ನೆನಪಾದದ್ದರಲ್ಲೇನೂ ಆಶ್ಚರ್ಯವಿಲ್ಲ ಅಲ್ಲವೆ ?

ಸಾಂಟಿಯಾಗೋನ ಕತೆ ನೆನಪಿನಲ್ಲುಳಿಯಬೇಕು. ಅದರಲ್ಲಿಯ ಗಾಜಿನ ಸಾಮಾನುಗಳ ಅಂಗಡಿಯವನ ಪ್ರವೃತ್ತಿಯ ಕಡೆಗೆ ಹೋಗದೆ ಗುರಿ ಮುಟ್ಟಲು ನಿರಂತರ ಪರಿಶ್ರಮ ಪಡುವ ಕಡೆ ಹೋಗಬೇಕು. ಕತೆಯ ಆರಂಭದಲ್ಲೇ ಬರುವ ಕತೆಯೊಳಗಿನ ಕತೆ ಹೇಳುವಂತೆ ಜೀವನದಲ್ಲಿ ನಿಜವಾದ ಸುಖ ಸಿಗುವದು ವಿಲಾಸಗಳತ್ತ ಮನಸ್ಸು ಹೋಗಿ ಅವನ್ನು ಅನುಭವಿಸುವಾಗಲೂ ನಮ್ಮ ಜವಾಬ್ದಾರಿಗಳ ಬಗ್ಗೆ ಎಚ್ಚರವಿದ್ದಾಗ. ನಮ್ಮ ಜೀವನದ ನಿಜವಾದ ಗುರಿಯ ಸಾಧನೆಯೆ ದೊಡ್ಡ ಜವಾಬ್ದಾರಿ!