ಸಾರ್ತ್ರ್ ನ ’ಪದಚರಿತ’ - ಓದಿನ ಗೀಳು , ಬರಹದ ಗೋಳು
( ಇಲ್ಲಿ ಬರೆದದ್ದೆಲ್ಲವೂ ನಾನು ಬರೆದಿದ್ದಲ್ಲ ; ನಾನು ಆಯ್ದ ವಾಕ್ಯಗಳೇ ಬಹಳ - ಶ್ರೀಕಾಂತ ಮಿಶ್ರೀಕೋಟಿ) ಪ್ರಸಿದ್ಧ ತತ್ವಶಾಸ್ತ್ರಜ್ಞ , ಚಿಂತಕ, ಕಾದಂಬರಿಕಾರನ ಪ್ರಸಿದ್ಧ ಕೃತಿ ’ಲೆಮೊ’ ದ ಅನುವಾದವೇ ’ಪದಚರಿತ’ . ಇದು ಅವನ ಬಾಲ್ಯದ ’ಆತ್ಮಚರಿತ್ರೆ’ ; ಅವನನ್ನು ಕಾಡಿದ ಬರೆದಿಟ್ಟ ಶಬ್ದಗಳ ಜತೆ ನಡೆಸಿದ ಒಂದು ಸುದೀರ್ಘ ಪ್ರಣಯ ಪ್ರಸಂಗ. ಈ ಪುಸ್ತಕ ಜೀವನಾನುಭವದ ಸಂದರ್ಭದಲ್ಲಿ ಪುಸ್ತಕಗಳ ಮತ್ತು ಭಾಷೆಯ ಉಪಯುಕ್ತತೆ ಮತ್ತು ಉಪಯೋಗದ ಬಗ್ಗೆ ನಡೆಸಿರುವ ವಿಶಿಷ್ಟ ಸಂಶೋಧನೆ ಮತ್ತು ಮೌಲ್ಯಮಾಪನ. ಇದನ್ನು ಅನುವಾದ ಮಾಡಿದವರು ರಾಜಕಾರಣಿ ಕೆ. ಎಚ್. ಶ್ರೀನಿವಾಸರು . ಸುಮಾರು ಮೂರ್ನಾಲ್ಕು ವರ್ಷ ತಮ್ಮ ರಾಜಕಾರಣದ ನಡುವೆ ಶ್ರಮಿಸಿದ್ದಾರೆ . ಪುಸ್ತಕವನ್ನು ಮೂಲದಲ್ಲಿ ಅರ್ಥ ಮಾಡಿಕೊಳ್ಳುವದೇ ಕಷ್ಟ ; ಪುಸ್ತಕ ಅಂತಹದು ; ಅಂಥದ್ದನ್ನು ಕನ್ನಡಕ್ಕೆ ಬಹಳ ಶ್ರಮಪಟ್ಟು ತಂದಿದ್ದಾರೆ . ಸಾರ್ತ್ರ್ ತನ್ನ ಐವತೊಂಭತ್ತನೇ ವಯಸ್ಸಿನಲ್ಲಿ ಪುನರ್ ಗ್ರಹಿಸಿದ ಬಾಲ್ಯದ ಕತೆ ಇದು . ಅವನು ಚಿಕ್ಕಂದಿನಲ್ಲಿದ್ದಾಗ ಅವನಿಗೆ ಜಾಣತನ , ಲೇಖಕತನ , ಒಳ್ಳೆಯತನವನ್ನು ಹೊರಿಸಲಾಯಿತು . ಅದರ ವಿವರಗಳು , ಓದು , ಬರಹದ ಗೀಳು , ಗೋಳು ಇಲ್ಲಿದೆ . ಇಲ್ಲಿನ ವಾಕ್ಯಗಳನ್ನು ಅವಸರದಲ್ಲಿ ಓದಿ ತಿಳಿಯಲಾಗುವದಿಲ್ಲ . ಇಲ್ಲಿನ ವಾಕ್ಯಗಳ ರೀತಿಯೇ ಅದ್ಭುತ. ಕೊನೇಪಕ್ಷ ಅದಕ್ಕಾದರೂ ಇನ್ನೊಮ್ಮೆ ಮತ್ತೊಮ್ಮೆ ಓದಬೇಕೆನಿಸುತ್ತದೆ. ಪುಸ್ತಕದಲ್ಲಿನ ಕೆಲವು ವಾಕ್ಯಗಳನ್ನು ಇಲ್ಲಿ ಸಂಗ್ರಹಿಸಿದ್ದೇನೆ . ಯಾರಾದರೂ ತನ್ನ ಹುಚ್ಚನ್ನು ವಾಸಿ ಮಾಡಿಕೊಳ್ಳಬಹುದು , ಆದರೆ ಯಾರೂ ತನ್ನತನವೆಂಬುದನ್ನು ವಾಸಿ ಮಾಡಿಕೊಳ್ಳಲಾಗುವದಿಲ್ಲ . ತಾನೊಬ್ಬ ಬದಲಿಡಲಾಗದ ವಿಶಿಷ್ಟ ಮಾನವರೂಪಿಯೆಂಬ ನಿಷ್ಕಾರಣ ಮರುಳಿನಿಂದ ಪ್ರತಿಯೊಬ್ಬ ಮನುಷ್ಯನೂ ಬಾಧಿತನಾಗಿದ್ದಾನೆ ಮತ್ತು ತನ್ನ ಅಳಿಸಲಾಗದ ಸ್ವಂತಿಕೆಯನ್ನುಳಿಸಿಕೊಂಡು ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವದೇ ಜೀವನದ ಉದಾತ್ತಧ್ಯೇಯವೆಂಬುದರಿಂದ ಪ್ರೇರಿತನಾಗಿದ್ದಾನೆ. ಮನುಷ್ಯನಂತೆಯೇ ಆತ್ಮಚರಿತ್ರೆ ಕೂಡ ಬದುಕಿನ ಪ್ರಾಮಾಣೀಕ ಶೋಧನೆಯ ಮೂಲಕ ಯಾವುದೋ ಹಂತದ ಆತ್ಮಸಾಕ್ಷಾತ್ಕಾರಕ್ಕೆ ಯತ್ನಿಸುತ್ತದೆ . ತನ್ನ ತಂದೆ ತಾನಿನ್ನೂ ಹಸುಳೆಯಾಗಿದ್ದಾಗಲೇ ಸರಿಯಾದ ಸಮಯಕ್ಕೆ ಸತ್ತು ತನ್ನನ್ನು ಪಿತೃತ್ವದ ಕೊಳಕು ಪಾಶದಿಂದ ಮುಕ್ತನನ್ನಾಗಿಸಿದ್ದಕ್ಕೆ ಸಾರ್ತ್ರ್ ಸಂತೋಷ ವ್ಯಕ್ತಪಡಿಸುತ್ತಾನೆ ( ಅಯ್ಯಯ್ಯೋ !) . ಪ್ರಪಂಚದಲ್ಲಿ ಸಾಹಿತ್ಯವೆಂಬುದರ ಪ್ರಾಮುಖ್ಯತೆಯ ಬಗ್ಗೆ ಏನೇನೂ ನಂಬಿಕೆ ಇಡದಿದ್ದ ಅವನು ಸೃಜನಶೀಲ ಬರವಣಿಗೆ ಎಲ್ಲದಕ್ಕಿಂತ ಅತಿಮುಖ್ಯವೆಂದೂ ಬರವಣಿಗೆಯಿಂದ ತನ್ನ ಜನ್ಮವಾಗಿ , ತಾನು ಅಸ್ತಿತ್ವದಲ್ಲಿರುವುದಾಗಿಯೂ , ನಾನೇನಾದರೂ ’ನಾನು’ ಎಂದು ಹೇಳಿದರೆ ಅದರ ಅರ್ಥ "ಯಾವನು ಬರೆಯುತ್ತಿದ್ದಾನೋ ಆ ನಾನು " ಎಂದು ಹೇಳಿಕೊಂಡಿದ್ದಾನೆ . ಇದು ಒಂದು ವಿಶಿಷ್ಟಧ್ಯಾನಸ್ಥಿತಿಯನ್ನು ಬಯಸುವ ಕೃತಿ. ಕೃತಿಯನ್ನು ಓದಿ ಮುಗಿಸಿದಾಗ ನಮ್ಮ ಈವರೆಗಿನ ವಿಚಾರಧಾರೆಗಳು , ಕಲ್ಪನೆಗಳು, ಮೌಲ್ಯಗಳು, ದೃಷ್ಟಿಕೋನಗಳೆಲ್ಲವೂ ಸೇರಿದಂತೆ ಜೀವನದ ಶ್ರುತಿಯೇ ಬದಲಾದ , ಸ್ವತಃ ನಾವು ಬೇರೆಯದೇ ವ್ಯಕ್ತಿಯಾಗಿ ಮಾರ್ಪಾಡಾದ ಒಂದು ವಶವರ್ತಿ ಸ್ಥಿತಿಗೆ ಒಳಗಾಗುತ್ತೇವೆ . ಒಳೆಯ ಅಪ್ಪ ಎಂಬುವವನೊಬ್ಬ ಜಗತ್ತಿನಲ್ಲಿ ಇಲ್ಲ . ಇದು ನಿಯಮ. ಇನ್ನೇನೂ ಮಾಡಲು ಉತ್ತಮ ಕೆಲಸಗಳಿಲ್ಲದೆ ಮಕ್ಕಳನ್ನು ಮಾಡುವದು ; ಅವುಗಳನ್ನು ತಮ್ಮದಾಗಿಸಿಕೊಂಡು ಬಿಡುವದು ಎಂಥ ಅನ್ಯಾಯ ! ಸದ್ಯ ಅವನು ನನ್ನ ಎಳೆ ವಯಸ್ಸಿನಲ್ಲೇ ತೀರಿಕೊಂಡ. ಅಪ್ಪ ಎಂಬುವವನು ಬರೀ ಸತ್ತು ಹೋದರೆ ಎಲ್ಲ ಆದಂತಲ್ಲ ; ಅವನು ಸರಿಯಾದ ಸಮಯಕ್ಕೆ ಸಾಯಬೇಕು . ನನ್ನ ತಂದೆ ಸತ್ತು ತನ್ನ ಕರ್ತವ್ಯಗಳಿಂದ ನುಣುಚಿಕೊಂಡನೆಂದು ನನ್ನ ಅಜ್ಜಿ ಹೇಳುತ್ತಿದ್ದಳು . ( ಇಲ್ಲಿ ಒಂದು ಶಾಕಿಂಗ್ ಮಾತು ಇದೆ ... ನಾನು ಅದನ್ನು ಬರೆಯುತ್ತಿಲ್ಲ ...) ನಾನು ಒಳ್ಳೆಯ ಮಗು ಆಗಿದ್ದೆ . ನನಗೆ ನನ್ನ ಪಾತ್ರ ಎಷ್ಟು ಸಮಂಜಸವಾಗಿತ್ತೆಂದರೆ ಅದರಿಂದ ನಾನು ಹೊರಬರುತ್ತಿರಲಿಲ್ಲ. ಒಳ್ಳೆಯನಾಗಿರೋ ಆಟಕ್ಕಿಂತ ಹೆಚ್ಚು ಉತ್ಸಾಹಕರವಾದದ್ದು ಯಾವುದೂ ನನಗೆ ಗೊತ್ತಿರಲಿಲ್ಲ. ಲೋಕಾಪವಾದದ ಕೆಲಸಗಳ ಬಗ್ಗೆ ನನಗೆ ಅತಿ ಹೆದರಿಕೆಯಿತ್ತು. ನಾನು ಜನರನ್ನು ದಿಗ್ಭ್ರಮೆಗೊಳಿಸಲು ಬಯಸಿದ್ದೆನಾದರೆ ಅದು ನನ್ನ ಗುಣವಿಶೇಷಗಳ ಮೂಲಕ. ತನ್ನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಹಿಡಿದಿಟ್ಟುಕೊಳ್ಳುತ್ತಲೆ ತನ್ನ ಪಾತ್ರ ನಿರ್ವಹಣೆಯನ್ನು ಮತ್ತಷ್ಟು ಉತ್ತಮಗೊಳಿಸುತ್ತ ಹೋಗುವ ಒಬ್ಬ ನಟನಾಗಿದ್ದೆ ನಾನು. ಮೀಸೆ ಇಲ್ಲದವನ ಮುತ್ತು ಉಪ್ಪಿಲ್ಲದೇ ತಿನ್ನುವ ಮೊಟ್ಟೆಯಂತೆ ಅಂತ ಹೇಳುತ್ತಾರೆ. ಅದಕ್ಕೆ ನಾನು ಸೇರಿಸಿದ್ದು ’ದುಷ್ಟತನವೇ ಇಲ್ಲದ ಒಳ್ಳೆಯತನದಂತೆ’ . ಆದರ್ಶವಾದ ಕಳಚಿಕೊಳ್ಳಲು ಮೂವತ್ತು ವರ್ಷವೇ ಹಿಡಿಯಿತು. ನನಗೆ ನನ್ನ ಧರ್ಮ ಸಿಕ್ಕಿಬಿಟ್ಟಿತ್ತು. ಬೇರೆ ಯಾವುದೂ ಒಂದು ಪುಸ್ತಕಕ್ಕಿಂತ ಮುಖ್ಯವೆಂದು ಕಾಣುತ್ತಿರಲಿಲ್ಲ. ವರಮಾನ ಮೀರಿ ದುಬಾರಿ ಜೀವನ ನಡೆಸುವವರಂತೆ ನಾನು ಉತ್ಸಾಹದಿಂದ, ಆಯಾಸಪಟ್ಟು, ತೋರಿಕೆಗೆ ಭಾರೀ ಬೆಲೆತೆತ್ತು ವಯೋಮಾನ ಮೀರಿ ಓದಿನಲ್ಲಿ ಅನುರಕ್ತನಾಗಿದ್ದೆ. ಅವರು "ನೀನು ಏನು ಓದಿದೆ? ನಿನಗೆ ಏನು ಅರ್ಥವಾಯಿತು?" ಎಂದು ಪ್ರಶ್ನಿಸುತ್ತಿದ್ದರು . ನಾನು ಗರ್ಭಧಾರಣೆ ಮಾಡಿದ್ದೇನೆ . ಮತ್ತು ಒಂದು ಬಾಲಿಶ ವ್ಯಾಖ್ಯಾನಕ್ಕೆ ಜನ್ಮ ನೀಡುತ್ತೇನೆಂದು ನನಗೆ ಗೊತ್ತಿತ್ತು . ನಾನು ಸಂತತನಕ್ಕೆ ಆಹಾರವಾಗಿ ಬಿಡುವ ಅಪಾಯದಲ್ಲಿದ್ದೆ. ... ಎಲ್ಲ ಕನಸುಗಾರರಂತೆ ಭ್ರಮೆಯನ್ನು ಮತ್ತು ಸತ್ಯವನ್ನು ಒಂದನ್ನು ಇನ್ನೊಂದಾಗಿ ತಪ್ಪಾಗಿ ತಿಳಿದುಕೊಂಡೆ . ನನ್ನ ಅಜ್ಜನು ಸಾಹಿತ್ಯಕ್ಕೆ ನನ್ನನ್ನು ದಬ್ಬಿದ್ದ . ನಾನು ಅಷ್ಟೊಂದು ಹಗಲುರಾತ್ರಿಗಳನ್ನು ವ್ಯಯಿಸಿರುವದು , ಅಷ್ಟೊಂದು ಪುಟಗಳನ್ನು ಶಾಯಿಯಿಂದ ಆಚ್ಛಾದಿಸಿರುವದು , ಯಾರೂ ಓದಬಯಸದ ಅಷ್ಟೊಂದು ಪುಸ್ತಕಗಳನು ಮಾರುಕಟ್ಟೆಗೆ ಎಸೆದಿರುವದು , ಇವೆಲ್ಲ ನನ್ನಜ್ಜನನ್ನು ಮೆಚ್ಚಿಸುವ ಹುಚ್ಚು ಆಸೆಯಿಂದಲ್ಲವೇ ಎಂದು ಯೋಚಿಸುತ್ತೇನೆ. ಬಹು ಹಿಂದೆಯೇ ಸತ್ತು ಹೋದ ಮನುಷ್ಯನೊಬ್ಬನ ಇಚ್ಚೆಯನ್ನು ಪೂರೈಸುವದಕ್ಕಾಗಿ ನಾನು ತೊಡಗಿಕೊಂಡಿರುವದನ್ನು ಐವತ್ತನೇ ವಯಸ್ಸಿನ ನಂತರ ನಾನು ಕಂಡುಕೊಂಡೆ. ವಸ್ತುಸ್ಥಿತಿಯೆಂದರೆ ನಾನು ಪಾತ್ರವೊಂದನ್ನು ಹೋಲುತ್ತಿದ್ದೆ. " ಅವನು ನಿಟ್ಟುಸಿರು ಬಿಟ್ಟು ಹೇಳಿದ- ನನಗೆ ಬೇಕಾದ ಥರದವಳಲ್ಲದ ಹೆಣ್ಣೊಬ್ಬಳಿಗಾಗಿ ನಾನು ನನ್ನ ಜೀವನವನ್ನು ಅಸ್ತವ್ಯಸ್ತ ಮಾಡಿಕೊಂಡೆ. " . ---------------------------------------------------------------- ನನ್ನ ಟಿಪ್ಪಣಿ: - ಈ ಪುಸ್ತಕವನ್ನು ಓದುತ್ತಿದ್ದಂತೆ ಅನೇಕ ಭಾಗಗಳು ನನಗೇ ಸಂಬಂಧಿಸಿದೆಯೇನೋ ಅನ್ನಿಸಿತು . :(