ಸ್ಕಲ್ ಮಂತ್ರ ಮತ್ತು ಜುಗಾರಿ ಕ್ರಾಸ್
ಇತ್ತೀಚೆಗೆ ಎರಡು ಪುಸ್ತಕ ಓದಿದೆ .
ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ [:http://thatskannada.indiainfo.com/sahitya/book/211103sudarshan.html|(ದಟ್ಸ್ ಕನ್ನಡ ಸಂಪರ್ಕ)]) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ ನಮ್ಮ ಓದು ಎಡವುತ್ತದೆ ) 'ರಸ್ತೆಯನ್ನು ಅಗಲಿಸಿದ್ದಾರೆ' ಎಂಬುದು ಆ ವಾಕ್ಯ. ಅಗಲಿಸು ಎನ್ನುವದು ಅಗಲು ಶಬ್ದದ ರೂಪ. ಅಗಲ ಎಂಬುದರದ್ದಲ್ಲ . ವಾಕ್ಯದ ಉದ್ದೇಶ ಅಗಲ ಮಾಡಿದ್ದಾರೆ ಎಂಬುವದು.
ಅನುವಾದ ಸುಲಲಿತವಾಗಿ ಚೆನ್ನಾಗಿದೆ. ಆದರೆ ಕಥೆ ಸರಳವಾಗಿ ಇಲ್ಲ. ಘಟನೆಗಳು, ಪಾತ್ರಗಳನ್ನು ಅನುಸರಿಸಲು ಆಗುವದಿಲ್ಲ. ಟಿಬೆಟ್ಟಿನ ಬೌದ್ಧ ಧರ್ಮ, ಸಿದ್ಧಾಂತ, ಜೀವನ ರೀತಿಗಳ ಪರಿಚಯ ಆಗುತ್ತದೆ. ಒಂದಿಷ್ಟು ವಿಚಾರಯೋಗ್ಯ/ಉದ್ಧರಣಯೋಗ್ಯ ವಾಕ್ಯ ಸಮೂಹಗಳು ಸಿಗುತ್ತವೆ. ಕೊನೆಯಲ್ಲಿ . ಇಂಗ್ಲೀಷ್ ಭಾಷೆ ತಿಳಿಯದವನು ಇಂಗ್ಲೀಷ್ ಸಿನಿಮ ನೋಡಿದ ಹಾಗೆ ಆಗುತ್ತದೆ. ಸರಿಯಾಗಿ ತಿಳಿದುಕೊಳ್ಳಲು ಮತ್ತೆ ಪುಟ ತಿರುಗಿಸುವ ಆಕರ್ಷಣೆ ಏನೂ ಇಲ್ಲ .
ನಂತರ ಶ್ರೀ ಕೆ.ಪಿ.ಪೂರ್‍ಣಚಂದ್ರತೇಜಸ್ವಿಯವರ ಜುಗಾರಿ ಕ್ರಾಸ್ ಓದಿದೆ. ನಾಲ್ಕು ರಸ್ತೆ ಕೂಡುವಲ್ಲಿ ೨೪ ಗಂಟೆಗಳಲ್ಲಿ ನಡೆವ ಘಟನೆಗಳ ಬಗ್ಗೆ ಇದೆ. ಸಾಹಿತ್ಯಕ ಮೌಲ್ಯಗಳೇನೋ ಇರಬಹುದು ( ನಾನು ಅದನ್ನು ಅರಿಯೆ) . ಆದರೆ ಒಂದು ಥ್ರಿಲ್ಲರ್ ಆಗಿ ಶ್ರೇಷ್ಠವಾಗಿದೆ. ಒಂದು ಹಳ್ಳಿಯ ಸಾಂಸ್ಕೃತಿಕ ಆರ್ಥಿಕ ಅವಸಾನ , ಊರಿಗೆ ಫೋನು ಬರುವದರಿಂದ ಊರಿನಲ್ಲಿ ಆಗುವ ಬದಲಾವಣೆಗಳು , ಏನೇನೋ ಚಟುವಟಿಕೆಗಳು , ಅದನ್ನು ಯಾರೋ ಎಲ್ಲಿಂದಲೋ ನಿಯಂತ್ರಿಸುವವರು ( 'ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ') ಹೀಗೇ ಅನೇಕ ಆಯಾಮಗಳನ್ನೊಳಗೊಂಡಿದೆ. ನಿಗೂಢಮಯ ಸುಂದರ ನಿಸರ್ಗ, ಅನಿರೀಕ್ಷಿತ ಘಟನೆಗಳು , ಹಳೆಯ ಕಾವ್ಯದಲ್ಲಿ ರಹಸ್ಯ ಹೀಗೆ ಇನ್ನೂ ಏನೇನೋ, ಕಾದಂಬರಿ ಚಿಕ್ಕದಾಗಿದ್ದರೂ ಅದ್ಭುತವಾಗಿದೆ. ಎಲ್ಲರೂ ಓದತಕ್ಕುದಾಗಿದೆ.
ಸ್ಕಲ್ ಮಂತ್ರಕ್ಕೆ ಹೋಲಿಸಿದರೆ ತಲೆಮೇಲೆ ಇಟ್ಟುಕೊಂಡು ಕುಣಿಯುವ ಹಾಗೆ ಇದೆ. ಕನ್ನಡದಲ್ಲೇ ಎಂಥೆಂಥ ಕೃತಿಗಳು ಇರುವಾಗ ನಾವು ಅವನ್ನು ಗಮನಿಸದೆ ಇಂಗ್ಲೀಷಿಗೆ ಮೊರೆ ಹೋಗುತ್ತೇವೆ. .
ಅಂದ ಹಾಗೆ ಜುಗಾರಿ ಕ್ರಾಸ್ ಇಂಗ್ಲೀಷಿಗೆ ಅನುವಾದ ಆಗಿದೆಯೆ ? ಅಂದರೆ ಹೆಚ್ಚು ಜನ ಓದಿ ಸಂತೋಷಪಡಬಹುದು.