ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ
ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗಳನ್ನು ಬದಲಾಯಿಸಲು ಒಪ್ಪುವದಿಲ್ಲ .ಪವಾಡಗಳನ್ನು ಸಹಜ ಸಂಗತಿಗಳನ್ನಾಗಿ ಇವರು ಮಾರ್ಪಡಿಸಿ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಜನರಿಗೆ ರುಚಿಸಿತೇ ತಾವು ಧನ್ಯ; ರುಚಿಸಲಿಲ್ಲ , ದೈವ ತಮಗೆ ಅನುಗ್ರಹಿಸಿದ ಭಾಗ್ಯ ಇಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.
ಇಲ್ಲಿ ಇರುವ ಮುದ್ರಣದೋಷಗಳನ್ನು ಕುರಿತು ಹೀಗೆ ಹೇಳುತ್ತಾರೆ- 'ಸಹೃದಯರಾದ ವಾಚಕರು ಇವನ್ನು ಕಂಡಾಗ ಇದು ಏನು ಎಂದು ಯೋಚಿಸಿ ಒಗಟು ಬಿಡಿಸುವಂತೆ ತಪ್ಪನ್ನು ಕಂಡುಹಿಡಿದು ತಿದ್ದಿಕೊಳ್ಳಬೇಕು . ಇದು ಶ್ರಮ; ಆದರೆ ಬುದ್ದಿಗೆ ಒಂದು ರೀತಿಯ ವ್ಯಾಯಾಮ ; ನಾನೂ ಅಚ್ಚಿನ ಮನೆಯ ನನ್ನ ಗೆಳೆಯರೂ ಉದ್ದೇಶಿಸದೆ ಒದಗಿಸಿರುವದು. ಈ ವಿಷಯದಲ್ಲಿ ಓದುಗರ ಕ್ಷಮೆಯನ್ನು ಬೇಡುತ್ತೇನೆ'.
ಇಲ್ಲಿವೆ ಕೆಲವು ನನ್ನ ಮೆಚ್ಚಿನ ಅವತರಣಿಕೆಗಳು,
ಪಟ್ಟ ಇಲ್ಲವೆ, ಬೇಡ, ಎಂದಿರಲು ಆ ಅಣ್ಣ , ( ಶ್ರೀ ರಾಮ)
ಪಟ್ಟ ಕಟ್ಟುವಿರ ? ನಾ ಒಲ್ಲೆ ಎಂದನು ಈತ ( ಭರತ)
ನುಡಿದ ಮಾತಿನ ಅರ್ಥ ಎಳೆಬಿಡದೆ ನಡೆಯಬೇಕೆಂಬುದು ಮಹಾವ್ರತ
ಸತ್ಯ ಧರ್ಮ ಪರಾಕ್ರಮದ ನಮ್ಮ ಅರಸರದು ( ಶ್ರೀ ರಾಮನದು)
ತಾವು ಅದ ಮುರಿಯರು . ಹೆರರು ಅದ ಮುರಿವುದಕೆ
ಸಮ್ಮತಿಯನೀಯರು.
ರಾಜ್ಯ ತಮ್ಮನಿಗಿರಲಿ ನಿನಗಲ್ಲ ಎಂದಿರಲು ,
ಬೇಡವೆಂಬಿರ , ಒಳಿತು , ಬೇಡ ಬಿಡಿ, ಎಂದರು
ಶ್ರೀರಾಮ . ರಾಜ್ಯ ನಿನಗಿರಲಿ , ಅಣ್ಣನಿಗಲ್ಲ ,
ಎಂದಿರಲು ಈ ತಮ್ಮ , ಅಣ್ಣನಿಗೆ ತಪ್ಪಿಸಿದ
ರಾಜ್ಯವನು ನಾ ಕೊಳ್ಳಲೇ , ಭ್ರಷ್ಟನಾಗಲೇ ,
ಎಂದು ತೊರೆದರೇ ! ಇವರ ಹಿರಿಮೆಯನು ಏನೆಂಬ?
ಜಾರಿ ಹೋದುದು ಹೋಗಲೆಂದವರು ಬಿಟ್ಟಿರಲು ,
ಸೇರಿ ಬಂದುದನೊಲ್ಲೆನೆಂದಿವರು ತೊರೆದರು.
ವನವಾಸ ಬೇಡ, ಹಿಂದಿರುಗು , ಬಾ ಅರಸಾಗು
ಎಂದು ಬೇಡಲು ಭರತ " ತಂದೆ ಆಡಿದ ಮಾತ
ದಿಟ ಮಾಡುವದು ನಮ್ಮ ಇಬ್ಬರ ಕರ್‍ತವ್ಯ ;
ನಮಗೆ ಯಾವುದು ರುಚಿಯೊ ಅದನು ಮಾಡುವುದಲ್ಲ "
( ಎಂದನು ಶ್ರೀರಾಮ )
ಯಾವ ಹೊತ್ತಿಗೆ ಯಾವ
ಯಾರ ಒಂದಿಗೆ ಯಾವ , ಯಾವ ಮಾತನು ಯಾವ,
ದನಿಯಿಂದ ಎಂತೆಂತು ಉಲಿದು ಮನವನು ಗೆಲಿದು
ನಡೆಸುವದು , ಇದರ ಚದುರಲಿ ರಾಮಚಂದ್ರನಿಗೆ
ಎಡೆಯುಂಟೆ?
ಅಭಿಷೇಕ
ನಡೆಯತಕ್ಕದು ಎಂದು ನಿಯಮಿಸಿದ ಆ ದಿವಸ
ನಡೆದ ನಡೆ , ನುಡಿದ ನುಡಿ , ಎಲ್ಲವನು ಕೇಳಿದಿರೆ,
ನಿಮ್ಮ ಸಖ ರಾಮಚಂದ್ರ ಪ್ರಭುವನ ಆಮೇಲೆ
ನರನೆಂದು ನೆನೆಯಲಾರಿರಿ ನೀವು . ನರಜಂತು ,
ಎನಿತೆ ಹಿರಿದಿರಲಿ , ಈ ತೆರನ ಹಿರಿಮೆಯನೆಂತು
ಪಡೆದೀತು ಎನ್ನುವಿರಿ . ಈ ನಮ್ಮ ಪ್ರಭು ರಾಮ
ನರಮಾತ್ರ ಅಲ್ಲ, ದೇವರೆ ಭೂಮಿಗಿಳಿತಂದು
ಈ ಆಟವನು ಆಡುತಿಹನು, ದಿಟ ಎನ್ನುವಿರಿ .
ಅಂತಪ್ಪ ನಡೆ ಅದು ; ಅಂತಪ್ಪ ನುಡಿ ಅದು .
( ಕೈಕೇಯಿ ವರಗಳ ವಿಷಯ ಶ್ರೀರಾಮನಿಗೆ ಹೇಳುವಾಗ)
"ದೊರೆ ನನ್ನ ಪರವಾಗಿ ನಿನಗೊಂದು ಸಂಗತಿಯ
ಅರುಹ ಬಯಸಿಹರು. ಅದು ನಿನಗೆ ಒರೆಯುವ ಬಗೆಗೆ
ಸಂಕೋಚ ಪಡುತಿಹರು . ತಂದೆಯವರಿಚ್ಛೆಯನು
ನಡೆಸುವೆನು ಎಂದು ನೀ ಆಶ್ವಾಸನವ ನೀಡು ,
ಅದ ನಾನು ತಿಳಿಸುವೆನು " , ಎಂದರು . ಇದ ಕೇಳಿ
ರಾಮಚಂದ್ರನಿಗೆ ಬೇಸರು . "ತಂದೆ ಬಯಸುವುದ
ನಾನು ನಡೆಸುವೆನೆಂದು ಆಶ್ವಾಸನವೆ ? ಏಕೆ
ಬೇಕು ಆಶ್ವಾಸನ? ಅವರಿಚ್ಛೆಯನು ಮೀರಿ
ಈವರೆಗೆ ಎಂದಿರಲಿ ನಡೆದ ಮಗನಲ್ಲ ನಾ.
ಇಂದು ಅದ ಮೀರಿ ನಡೆಯುವನಲ್ಲ ಎಂಬುದನು
ತಂದೆ ಬಲ್ಲರು ; ನೀವು ಬಲ್ಲಿರಿ ; ಎಲ್ಲರೂ
ಬಲ್ಲರಿದ . ಆ ಇಚ್ಛೆ ಏನು , ಅದ ತಿಳಿಸಿರಿ .
ಅಗ್ನಿಯನು ಹೊಗು ಎನಲು ನಗುತ ಹೊಗುವೆನು ; ವಿಷವ
ಉಣು ಎನಲು ಸಂತೋಷದಿಂದ ಉಣುವೆನು ; ಒಂದು
ಕ್ಷಣ ಯೋಚಿಸುವೆನಿಲ್ಲ . ತಡ ಮಾಡುವವನಲ್ಲ ,
ಈ ನಾನು ಎಂದಿರಲಿ ಎರಡು ನುಡಿದವನಲ್ಲ "
ಕೈಕೇಯಿ ಶ್ರೀರಾಮನಿಗೆ 'ತಂದೆಯ ಅಪ್ಪಣೆಯ ಬಯಸಿ
ತಡಮಾಡುವದು ಬೇಡ ' ಎಂದರೆ
ಆತ ಎಂದರು : ತಾಯಿ ನನಗೆ ದೊರೆಪಟ್ಟ
ಬೇಡವೆಂದರೆ ಬೇಡ. ವನಕೆ ನಡೆ ಎಂದಿಹಿರಿ .
ನಡೆಯುವೆನು , ಇನಿತೆ , ಹೋಗುವೆನೆಂಬ ಹದನಿದನು
ದೇವಿ ತಾಯಿಗೆ ತಿಳಿಸಬೇಕು . ಅನುಮತಿ ಪಡೆದು
ನಿಮ್ಮ ಸೊಸೆ ಸೀತೆಗೂ ತಿಳಿಸಿ ಒಪ್ಪಿಗೆ ಪಡೆದು
ನಗರವನು ಬಿಡಬೇಕು . ಇದಗೆಯ್ವುದಕೆ ಎನಿತು
ವೇಳೆ ಅನಿವಾರ್ಯ ಅನಿತೇ ನಾನು ನಗರದಲಿ
ಇರುವವನು "
ಈ ಪ್ರಸಂಗದಲಿ ಅರಮನೆ ಹಿರಿಯರ ಮಾತು
ಎಷ್ಟು ಬಾರಿಯೊ ವಿಕಟ ಅರ್ಥದಲಿ ಮುಗಿದುದು
"ರಾಮನಾಣೆಗೆ ನಿನ್ನ ಇಚ್ಚೆಯನು ನಡೆಸುವೆನು
ಏನಿಚ್ಛೆ ಹೇಳು " ಎಂದರು ಕಿರಿಯರಾಣಿ(ಕೈಕೇಯಿ)ಗೆ
(ದಶರಥ) ಚಕ್ರವರ್ತಿಗಳು. ಕಾಡಿಗೆ ಹೋಗು ಎಂದಪ್ಪ
ಆಜ್ಞೆ ಮಾಡಿದುದು ತಿಳಿಯದೆ ತಾಯಿ ಮಗನಿಗೆ ,
ತಂದೆಯನು ಸತ್ಯ ಪ್ರತಿಜ್ಞನೆನಿಸೆಂದರು.
ತಾಯಿ ಕೌಸಲ್ಯೆ ರಾಮನಿಗೆ ಕಾಡಿಗೆ ಹೋಗಬೇಡ ಎಂದು ಹೇಳುತ್ತಾಳೆ. "ಯುವರಾಜ ಆಗೆಂದಿರಲು ಆಗುವೆನು ಎಂದೆನು . ಕಾಡು ಹೊಗು ಎನುತಿಹರು; ಹೋಗುವೆನು ಎನಬೇಕು. ಬೇರೆಯ ಮಾತು ಸಲ್ಲದು .ತಂದೆಯ ಮಾತನ್ನು ಮೀರಿ ತಾಯಿಯ ಮಾತನ್ನು ನಡೆಸುವದೆ ? ನನ್ನಂತೆಯೇ ನೀನೂ ತಂದೆಯ ಆಜ್ಞೆಗೆ ಅಧೀನ " ಎನ್ನುತ್ತಾನೆ ಶ್ರೀರಾಮ.
ತಮ್ಮ ಲಕ್ಷ್ಮಣನಿಗೆ ಹೀಗೆನ್ನುತ್ತಾನೆ - "
ಪದವಿ ತಪ್ಪಿತು,ಪದವಿ ಮಾತ್ರ ತಪ್ಪಿತು, ಧರ್ಮ ತಪ್ಪಿತೇ , ಸದ್ಗತಿಯೇ ಕೈಯಿಂದ ಜಾರಿತು. ಅಪ್ಪಾಜಿಯವರಿತ್ತಿರುವ ವಚನವನು ಅವರ ಮಕ್ಕಳು ನಡೆಸಲೊಲ್ಲೆವು ಎನಲು ಅದನು ನಡೆಸುವ ಭಾರ ಬೇರೆ ಯಾರದು ?
ನರರು ಒಬ್ಬರಿಗೆ ಒಬ್ಬರು ನಾವು ಕೆಟ್ಟುದನು ಬಯಸುವೆವು. ದೈವ ಯಾರಿಗೆ ಇರಲಿ ಆ ರೀತಿ ಕೇಡ ಬಯಸುವದಿಲ್ಲ ; ಒಳ್ಳಿತನೇ ಬಯಸುವದು ; ಒಳ್ಳಿತನೇ ಎಸಗುವದು . ಇದನ್ನು ತಿಳಿ , ತಮ್ಮಾಜಿ. ತಿಳಿದು ಮನಸಿಗೆ ಸಮಾಧಾನವನು ತಂದುಕೋ" .
ಸೀತೆಗೆ ಜತೆಗೆ ಬರುವದು ಬೇಡ ಎಂದೇ ಅವನು ಹೇಳುತ್ತಾನೆ . ಅವಳು ತನ್ನೊಡನೆ ಬರುವದು ಅವಳ ಧರ್ಮ . ಆದರೆ ಅದನ್ನು ಅವಳಿಗೆ ತಾನು ಕಲಿಸುವದು ಸಲ್ಲ .ಇದು ಅವನ ವಿಚಾರ. ಸೀತೆ ಅವನ ಅವನ ಜತೆಗೆ ವನವಾಸಕ್ಕೆ ಬರುವದಾಗಿ ಹಟ ಹಿಡಿಯುತ್ತಾಳೆ . ಅವನು ಒಪ್ಪುತ್ತಾನೆ .
ಸ್ವತಃ ತಂದೆ ದಶರಥನೇ ಮಗನಿಗೆ ವನವಾಸಕ್ಕೆ ಹೋಗಬೇಡ ಎಂದು ಬೇಡುತ್ತಾನೆ. - " ನಾನು ಮೋಸಕ್ಕೆ ಸಿಲುಕಿ ಕೊಟ್ಟ ವಚನ ವಚನವಾಗದು . ನನ್ನ ಇಚ್ಛೆಯ ಮೀರಿ ನೀನು ನನ್ನ ಬರಿಯ ಮಾತು ನಡೆಸಬೇಕಿಲ್ಲ; ನನ್ನ ನಿಗ್ರಹಿಸಿಯಾದರೂ ಊರಲ್ಲಿ ನಿಲ್ಲು " ಅದಕ್ಕೆ ರಾಮನ ಉತ್ತರ ಹೀಗೆ- "ಬೇಡಿದುದ ನೀಡುವೆನೆಂದು ಒಪ್ಪಿದಿರಿ. ಏನೇ ಬೇಡಿದರು ಅದನ್ನು ನೀಡುವದು ನಿಮ್ಮ ಧರ್ಮ. ಅಪ್ಪಾಜಿ ನೀವು ಧರ್ಮದಲಿ , ನಿಲುವಂತೆ ನಡೆವುದು ನಿಮ್ಮ ಮಕ್ಕಳಾದ ನಮ್ಮ ಧರ್ಮ . ನಾವು ನಿಮ್ಮ ಮಾತು ಕಿರಿದಿರಲಿ . ಹಿರಿದಿರಲಿ . ಒಂದನೂ ಬಿಡದೆ ನಡೆಸುವೆವು ."
ತಂದೆ ದಶರಥ "ಇವತ್ತು ಹೋಗಬೇಡ ; ನಿನ್ನ ಸಹವಾಸ ಸುಖವನು ನನಗೆ ನೀಡಿ ನಾಳೆ ಬೆಳಿಗ್ಗೆ ಹೊರಡುವಿಯಂತೆ " ಎಂದರೆ "ನೀವು ಬೇಸರ ಮಾಡಿಕೊಳ್ಳಬೇಡಿ. ಈಗ ಧರ್ಮವ ಬಿಡದೆ ನಡೆಯುವ ಈ ಬುದ್ದಿ ನಾಳೆ ಇರುವದೋ ಇಲ್ಲವೋ ? ಇರಲಿಲ್ಲ, ನಾನು ಕೆಟ್ಟೆ , ಹೆತ್ತವರ ಕೀರ್ತಿಯನ್ನೂ ಕೆಡಿಸಿದಂತೆ ಆದೀತು; ನನಗೆ ಅಪ್ಪಣೆ ಕೊಡಿ " ಎಂದು ಬೇಡಿ ತಂದೆಯ ಅನುಜ್ಞೆ ಪಡೆಯುತ್ತಾನೆ. ಹೊರಡುವಾಗ " ಸ್ವಲ್ಪ ತಡೆ ; ಮಕ್ಕಳನ್ನು ಇನ್ನಷ್ಟು ನೋಡಬೇಕು . " ಎಂದರೆ "ವನವಾಸಕ್ಕೆ ಹೊರಟಿರುವದೇ ನಿಜ . ಅವರು ಇನ್ನೆಷ್ಟು
ಕಾಲ ನೋಡಲಿಕ್ಕೆ ಸಾಧ್ಯ; ಅವರಿಗೆ ಹೆಚ್ಚು ಕಷ್ಟವೂ ಆದೀತು " ಎಂದು ತಡಮಾಡದೆ ನಡೆಯುವರು.
ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ರಥವನ್ನು ನಿರಾಕರಿಸುತ್ತಾ " ನಾವು ವನವಾಸಿಗಳು. ರಥದ ಮಾತು ಇನ್ನೇನು" ಎಂದು ನಡೆಯತೊಡಗುತ್ತಾರೆ .
ಹಿಂಬಾಲಿಸುವ ಊರಜನರಿಗೆ " ಸುಮ್ಮನೆ ದು:ಖ ಪಡಬೇಡಿ . ಬೇಗನೆ ನಾವು ಹಿಂದಿರುಗಿ ಬರುವೆವು . ಮನೆಗಳಿಗೆ ಹೋಗಿ. ವಾಡಿಕೆಯ ಬದುಕನು ಸಮಾಧಾನದಲಿ ಬದುಕಿ ; ನಾವು ಬರುವವರೆಗೆ ಸುಖವಾಗಿ ಬಾಳಿ" ಎಂದು ಹೇಳುತ್ತಾನೆ.
ಯಾರ ವಿಷಯದಲು ಕರುಣೆಯಿಂದಲೆ ನಡೆದುಕೊಳ್ಳಬೇಕು. ತಪ್ಪು ಮಾಡದವರೊಬ್ಬರು ಇಲ್ಲ ಲೋಕದಲಿ , ಶ್ರೀ ರಾಮನಿಗೆ ಪತ್ನಿಯಾಗಿರಲು ತಕ್ಕ ಕರುಣಾಳು ಚೇತನ ಸೀತೆಯ ಮಾತಿದು .
ಮನ ನೇರ ಇರಲಿ ; ನಡೆ ನುಡಿ ನೇರ ಆಗುವವು .
ಮನ ನೇರ, ನಡೆ ನೇರ , ನುಡಿ ನೇರ ಆದವೋ
ಲೋಕವನು ನಡೆಸುತ್ತಿರುವ ಶಕ್ತಿ ನಿನ್ನ ತನ್ನೊಂದು
ಮಗುವಂತೆ ಕಾಪಾಡಿಕೊಳುವುದು . ನೆನೆಯದಿಹ
ರೀತಿಯಲಿ ಎಡರಿನಲಿ ತೊಡರಿನಲಿ ಯಾವುದೋ
ನೆರವು ಬಂದೊದಗುವದು .
ಏನೆ ಬಂದರೂ ಇದ ಮರೆಯದಿರು . ನನ್ನ ಮನ
ನೇರ ಇದೆ , ಆ ಶಕ್ತಿ ನನ್ನ ಕಾಪಾಡುವದು,
ಎಂದು ಹೇಳಿಕೊ
- ಇದು ಜಾನಕಿಗೆ ಋಷಿ ಪತ್ನಿಯೊಬ್ಬಳು ಹೇಳಿದ್ದು
ಬಾಳನು ಅರಿಯಬಯಸುವರು
ಕೆಲಕಾಲ ವನವಾಸ ನಡೆಸುವದು ಒಳ್ಳೆಯದು .
- ಇದು ಲಕ್ಷ್ಮಣನ ಅಭಿಪ್ರಾಯ.
ಶ್ರೀ ರಾಮನ ಕುರಿತು ಜನ ಏನನ್ನುವರು ?
- ರಾಮನ ಚೇತನಕೆ ಅಸೂಯೆಯ ಲೇಪ ಎಳ್ಳಷ್ಟೂ ಇಲ್ಲ . ಅದು ಎಲ್ಲ ಹೊತ್ತಿನಲೂ ಶಾಂತ.
-ಶ್ರೀ ರಾಮನಿಗೆ ಕೆಡು ನುಡಿಯ ನುಡಿದವರು ಮರು ನುಡಿಯ ಕೇಳರು
-ಎಂತೊ ಎಲ್ಲಿಯೊ ಕಿರಿದು ಉಪಕಾರ ಮಾಡಿರಲು ಅವನು ಅದನ್ನು ಮರೆಯದೆ ಉಪಕಾರಿಯನ್ನು ಕಂಡ ಪ್ರತಿಸಲವೂ ನೆನೆದು ಸಂತೋಷ ತೋರುವನು . ಹಿರಿಯ ಅಪರಾಧ ನೂರು ಮಾಡಿದರೂ ಅವನು ಲೆಕ್ಕಿಸನು , ಅಂತ ಆತ್ಮವಂತನು
- ಹುಸಿ ಮೋಸ ವಂಚನೆಗೆ ಶ್ರೀ ರಾಮನಲಿ ಎಡೆಯಿಲ್ಲ.
- ದೀನರಲಿ ಕರುಣೆ , ಹಿರಿಯರ ಕುರಿತು ಮರ್ಯಾದೆ , ತನ್ನ ಧರ್ಮದಲಿ ಶೃದ್ಧೆ; ಶುಭದಲ್ಲಿ ಮಾತ್ರ ಆಸಕ್ತಿ ; ಎಲ್ಲ ಅಶ್ರೇಯಸ್ಕರವಾದದ್ದರಲ್ಲಿ ವೈಮುಖ್ಯ ; ಉಚಿತ ಸಂದರ್ಭದಲಿ ಮೃದು ಮಧುರ ಪ್ರಿಯ ಭಾಷೆ ; ಮಿತ ಭಾಷೆ ; ಉಳಿದಂತೆ ಮೌನ;
-ಶ್ರೀ ರಾಮನನು ಯಾರು ನೋಡುವರೋ , ಅವರು ಧನ್ಯರು; ಯಾರನ್ನು ಶ್ರೀ ರಾಮನು ನೋಡುವನೋ , ಅವರು ಧನ್ಯರು;
ಪುಸ್ತಕ ಕಾವ್ಯರೂಪದಲ್ಲಿದ್ದರೂ ನೀವೇ ನೋಡುವಂತೆ ಶೈಲಿ ಸರಳವಾಗಿದ್ದು , ಸಹೃದಯರಿಗೆ ಸಂತೋಷವನ್ನುಂಟು ಮಾಡುವಂತಹದಿದ್ದು ಸಂಗ್ರಾಹ್ಯವೂ ಇದೆ.