ಚಳಿಗಾಲದ ರಾತ್ರಿ ....

ಚಳಿಗಾಲದ ರಾತ್ರಿ ....

ಕವನ

 ಮನಸು ..ದೇಹ... ..ಮಂಜುಗಡ್ಡೆ
ನೀನು ಎದ್ದು   ಹೋದ  ಜಾಗದಲ್ಲಿ 
ಇನ್ನೂ  ಬಿಸಿಯಿತ್ತು 

ಅದೇ ಜಾಗ ... . 
ನೀನು ಕಾಲು ಮುದುಡಿ ಕುಳಿತ ಜಾಗ 
ಇನ್ನೂ ಬೆಚ್ಚಗಿತ್ತು ..
ರಾತ್ರಿ  ಅಲ್ಲೇ   ಪಡಿಯಚ್ಚಾ ಗಲು  ಹವಣಿಸಿತ್ತು

ನಿನ್ನ ಬೆಚ್ಚನೆಯ ಉಸಿರು  ಅಲ್ಲೇ ಹಿತವಾಗಿ ಸುಳಿದಾಡುತ್ತಿತ್ತು 
ರಾತ್ರಿಯ  ಚಳಿಗಾಳಿ ಒಳಗೆ ನುಸುಳಿ 
ನಿನ್ನ ಬೆಚ್ಚನೆಯ ಉಸಿರನ್ನು ಕದಿಯುವಾಗ 
ರಾತ್ರಿ ನಡುಗುತ್ತಿತ್ತು 

ನೀನು ಹೋಗುವ ಮುನ್ನ 
ಹೊತ್ತೊಯ್ಯಲಾಗದೆ 
ಭಾರವಾಗಿ ಇಲ್ಲೇ ಬಿಟ್ಟುಹೋದ 
ನಿನ್ನ ಮನಸಿನ ಭಾವಗಳ ಒಂದೊಂದು ತುಣುಕೂ  
ರಾತ್ರಿ ಚಳಿಯಲ್ಲಿ ನಡುಗಿ
ಒಂಟಿಯಾಗಿ    ಮುಲುಗುಡುವಾಗ  
ಬೊಗಸೆಯಲ್ಲಿ ಹಿಡಿದು
ಮೆಲ್ಲಗೆ   ಚುಂಬಿಸುವ ಮನಸು 

ಅಲೆ  ಅಲೆಯಾಗಿ ತೇಲಿದ್ದ 
ನನ್ನ -ನಿನ್ನ ನಗು 
ರಾತ್ರಿ    ಚಳಿಯಲ್ಲಿ ..ಮೆಲ್ಲನೆ ತೆವಳುತ್ತ
ಚಂದಿರನ  ಕಿರಣಗಳಿಗೆ ಎಳೆ ಎಳೆಯಾಗಿ ಜೋತು ಬೀಳುವ 
ಮುನ್ನ  ರಾತ್ರಿಗೆ ಹೆಕ್ಕಿಡುವ  ಮನಸು  

ನಿನ್ನ ಕಣ್ಣಿನ ಹೊಳಪು
ಕಪ್ಪು ಕತ್ತಲೆಯ ಆಳದಲ್ಲೆಲ್ಲೋ 
ಮಿಂಚುಹುಳಗಳೆಲ್ಲ  ಹಿಮದ ಮೌನ ಕಣಿವೆಯಲ್ಲಿ ಜಾರಿದಂತೆ
ಆರಿ ಹೋಗುವಾಗ 
ಕೋಣೆಯ  ತುಂಬಾ .ಬೆಳಕಿನ ದೀಪಗಳಂತೆ ಹಚ್ಚಿಡುವ ಮನಸು 
 
ಸು೦ಯ್ಗುಡುವ ಚಳಿಗಾಳಿಯ   ಕತ್ತಲಲ್ಲಿ
ನಿನ್ನ ಅಣು ಅಣುವನ್ನು    ಸುತ್ತಿಕೊಳ್ಳುವ ಮುನ್ನ  ..
ನಿನ್ನ ಬಿಸುಪು   ಚಳಿಯಲ್ಲಿ  ತೆವಳುತ್ತ ಹೊರಟಿತ್ತು 
ರಾತ್ರಿ ..ಜಡವಾಗಿ..ಮುದುಡಿ  ಮಲಗಿತ್ತು .

  supta                                    photo source:      alifeofsaturdays.wordpress.com                                      

Comments