ಕನ್ನಡ ಪ್ರಜ್ಞೆ ಮತ್ತು ಪರಿಸರ

ಕನ್ನಡ ಪ್ರಜ್ಞೆ ಮತ್ತು ಪರಿಸರ

ಬರಹ

ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ, ಪರಂಪರೆಯನ್ನು ಕೆಲವು ಛಿದ್ರ ಛಿದ್ರ ದಾಖಲೆಗಳ ಮುಖಾಂತರ ಕನ್ನಡ ಪ್ರಜ್ಞೆಯನ್ನು ಕಟ್ಟುವ ಭಾವನಾತ್ಮಕ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳು ಹುಟ್ಟಾಕುವ ಚರ್ಚೆಗಳು ಎಷ್ಟರಮಟ್ಟಿಗೆ ಕನ್ನಡದ ನಿಜದ ನೆಲೆಗಳನ್ನು ಸಮರ್ಥಿಸುತ್ತವೆ ಎನ್ನುವುದು ಪ್ರಶ್ನಾರ್ಹವಾದಂತಹ ವಾದ. ಆದರೆ, ನಾನು ಇಲ್ಲಿ ಚರ್ಚಿಸಲಿಚ್ಛಿಸುವ ವಿಷಯಗಳು ಡಾ. ಕೆ. ವಿ. ನಾರಯಣರವರು ಇಂತಹ ಭಾವನಾತ್ಮಕ ಪ್ರಯತ್ನಗಳನ್ನು ಹೇಗೆ ವಸ್ತುನಿಷ್ಠವಾಗಿ ವಿಶ್ಲೇಷಿಸಿದ್ದಾರೆ ಎನ್ನುವುದನ್ನು.

ಈ ಪುಸ್ತಕವು ಪ್ರಮುಖವಾಗಿ ನಾಲ್ಕು ಭಾಗಗಳಲ್ಲಿ ಕನ್ನಡ ಭಾಷೆಯು ಸ್ವಾತಂತ್ರೋತ್ತರ ಐವತ್ತು ವರ್ಷಗಳಲ್ಲಿ ರೂಪುಗೊಂಡ ಬಗೆಯನ್ನು ಕುರಿತ ವಿಶ್ಲೇಷಣೆಗಳಿವೆ. ಈ ಎಲ್ಲ ವಿಶ್ಲೇಷಣೆಗಳು ಹೆಚ್ಚಾಗಿ ಸಮಾಜಭಾಷಾತತ್ವಶಾಸ್ತ್ರೀಯ ನೆಲೆಯಲ್ಲಿ ಚರ್ಚಿಸಲಾಗಿದೆ. ಕನ್ನಡ ಭಾಷಾ ರಚನೆ, ಬಳಕೆ, ಪದಕೋಶ, ಭಾಷಾ ನೀತಿ, ಹೋರಾಟ, ಏಕೀಕರಣ ಮತ್ತು ಕಾಳಜಿಗಳನ್ನು ಕುರಿತ ವಿಶ್ಲೇಷಣೆಗಳಿವೆ. ಈ ವಿಶ್ಲೇಷಣೆಗಳು ಒಂದು ಭಾಷಾ ನೀತಿ, ಹೋರಾಟ, ಏಕೀಕರಣ ಮತ್ತು ಬಳಕೆಗಳ ಹಿಂದಿರುವ ಪ್ರಭಾವ, ಪ್ರೇರಣೆ, ಒತ್ತಡ ಹಾಗೂ ತಾತ್ತ್ವಿಕ ನಿಲುವುಗಳನ್ನು ಬಹಿರಂಗಪಡಿಸುವವು. ಈ ಎಲ್ಲ ಆಲೋಚನೆಗಳು / ಗೃಹಿಕೆಗಳು ಜನ ಸಮುದಾಯದ ಹಿತಾಶಕ್ತಿಯನ್ನು ಕಾಪಾಡುವ ಮತ್ತು ಸಾಮನ್ಯ ಜನಪರವಾಗಿ ರೂಪಗೊಂಡ ನಿಲುವುಗಳಾಗಿವೆ. ಉದಾ: ಒಂದು ಭಾಷಾ ನೀತಿ ಅಥವಾ ಯೋಜನೆಯಿಂದ ಜನರಿಗೆ ಆಗುವ ಲಾಭ-ನಷ್ಟಗಳನ್ನು ಪ್ರತಿಶತದಲ್ಲಿ ಅರ್ಥೈಸುವ ಇವತ್ತೀನ ಸಂಶೋಧನೆಗಳಿಗಿಂತ ತೀರಾ ಭಿನ್ನವಾದಂತಹ ತಾತ್ತ್ವಿಕ ನಿಲುವುಗಳಿಂದ ಕೂಡಿರುವವು. ಆದ್ದರಿಂದ, ಇವರ ಈ ವಿಶ್ಲೇಷಣೆಗಳು ಒಂದು ಭಾಷಾ ಯೋಜನೆ / ನೀತಿ ಹಿಂದಿರುವ ಸಾಂಸ್ಕೃತಿಕ-ರಾಜಕೀಯ ಬಿಕ್ಕಟ್ಟುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವವು. ಹಾಗೇನೆ ಅವುಗಳ ಹಿಂದಿರುವ ಯಜಮಾನ್ಯಿಕೆ ಮತ್ತು ಸಾಂಸ್ಕೃತಿಕ ಹುನ್ನಾರವನ್ನು ಸ್ಪಷ್ಟವಾಗಿ ಪ್ರಕಟಿಸುವವು. ಈ ಪುಸ್ತಕದ ಚರ್ಚೆಗಳು (ಇವತ್ತನ) ಕನ್ನಡ ಪ್ರಜ್ಞೆ ಮತ್ತು ಸಮಕಾಲೀನ ಸವಾಲುಗಳನ್ನು ಮುಖಾಮುಖಿಯಾಗಿಸುವ ಹಾಗೂ ಅನುಸಂಧಾನಗೊಳಿಸುವ ಕ್ರಮವನ್ನು ಕುರುತಾದವುಗಳಾಗಿವೆ. ಇವರು ಎತ್ತುವ ಪ್ರಶ್ನೆಗಳು / ತಕರಾರುಗಳು ಸರ್ವಸಮ್ಮತವಲ್ಲದಿರಬಹುದು, ಇರುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ಹೌದು ಎನ್ನುವುದಕ್ಕೆ ಇರಬಹುದಾದ ಸಮರ್ಥನೆಗಳು ಇಲ್ಲಾ ಎನ್ನುವುದಕ್ಕೂ ಸಾಧ್ಯ. ಹಾಗಾಗಿ, ಈ ಸಮರ್ಥನೆಗಳು ಎಷ್ಟರ ಮಟ್ಟಿಗೆ ಜನಪರವಾಗಿವೆ ಮತ್ತು ಸಮಾಜಮುಖಿಯಾಗಿವೆ ಎನ್ನುವುದರ ಅಧಾರದ ಮೇಲೆ ಈ ವಿಶ್ಲೇಷಣೆಗಳ ಮಹತ್ವ ನಿರೂಪಿತವಾಗುವುದು.

ಉದಾ: ಭಾಷಾ ಸಂಕರ ಅಥವಾ ಕಲಬೆರಕೆಯನ್ನು ಪಾಪವೆನ್ನುವಂತೆ ನೋಡುವ ಈ ಸಂದರ್ಭದಲ್ಲಿ, ಅದೊಂದು ಸಹಜ ಅಥವಾ ಸ್ವಾಭಾವಿಕ ಭಾಷಿಕ ಕ್ರೀಯೆ ಮತ್ತು ಬೆಳವಣಿಗೆ ಎನ್ನುವುದು ಇವರ ಅಭಿಮತ. ಆಧುನಿಕತೆಯ ಪ್ರಭಾವದಿಂದ ನಡೆಯುವ ಭಾಷಿಕ ವಾಗ್ವಾದಗಳು ಹಾಗೂ ಅವುಗಳಿಂದ ದೇಶಿ ಭಾಷೆಯಲ್ಲಿ ಸಂಭವಿಸುವ ಸ್ಥಿತ್ಯಂತರ ಅಥವಾ ಪಲ್ಲಟಗಳು ಪರಿಣಾಮಕಾರಿಯಾಗಿವೆ. ಯಾಕೆಂದರೆ, ಗ್ರಹಿಕೆಯ ಪದಕೋಶವು ಬೆಳೆಯುವುದು ಕನ್ನಡ ಪದಗಳಿಂದಲ್ಲ ಅದು ಬೇರೆ ಭಾಷೆಯ ಪದಗಳಿಂದ ಎನ್ನುವದನ್ನು ಮುಖ್ಯವಾಗಿ ಗಮನಿಸಬೇಕು. ಗ್ರಹಿಕೆಯ ಮತ್ತು ಬಳಕೆಯ ಪದಕೋಶಗಳ ನಡುವೆ ನಡೆಯುವ ಮುಖಾಮುಖಿ ಮತ್ತು ತಾಕಲಾಟಕ್ಕೆ ಬದಲಾಗುತ್ತಿರುವ ಸಮಾಜವೇ ಕಾರಣ ಎನ್ನುವುದು ಮಹತ್ವದ ವಾದವಾಗುವುದು. ಕನ್ನಡ ಪದಕೋಶದಲ್ಲಿರುವ ಮತ್ತೊಂದು ಸಮಸ್ಯಯ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ ನಾರಾಯಣ್. ಅದೆಂದರೆ, ಒಂದು ಭಾಷೆಯಲ್ಲಿರಬಹುದಾದ ರೂಪ ವೈವಿಧ್ಯತೆ ಮತ್ತು ಕಾಗುಣಿತದ ಪರ್ಯಾಯಗಳು (ಉದಾ: ನಿನ್ನೆ-ನೆನ್ನೆ ಮತ್ತು ಕತೆ-ಕಥೆ) ಸಂವಹನಕ್ಕೆ ಅಡ್ಡಿಯಾಗುತ್ತವೆ. ಅಂತಹ ಎರಡು ವಲಯಗಳು ತಂತ್ರಜ್ಙಾನ ಮತ್ತು ಭಾಷಾ ಕಲಿಕೆ. ಇಲ್ಲಿ ಸ್ಪಷ್ಟವಾಗಿ ಗುರುತಿಸಬೇಕಾದ ಅಂಶವೆನಂದರೆ, ಒಂದು ಭಾಷೆ ಹೇಗೆ ತನ್ನಲ್ಲಿಯೇ ಹಲವಾರು ವೈರುಧ್ಯಗಳನ್ನು ಅಂತರ್ಗತ ಮಾಡಿಕೊಂಡಿರತ್ತದೆ ಎನ್ನುವುದನ್ನು. ಯಾಕೆಂದರೆ, ಭಾಷೆ-ಉಪಭಾಷೆಯ ವೈವಿಧ್ಯತೆ/ಭಿನ್ನತೆಯನ್ನು ಕುರಿತು ಮಾತನಾಡುವಾಗ ಅವುಗಳ ಮಹತ್ವವನ್ನು ಹೆಚ್ಚಿಸುವ ಆಲೋಚನೆಗಳು ಇಲ್ಲಿ ಭಾಷಾ ತೊಡಕು/ಗೊಂದಲಗಳಾಗಿ ಪರಿಣಮಿಸುತ್ತವೆ. ಈ ತೊಡಕು/ಗೊಂದಲಗಳ ನಿರ್ವಹಣೆಗೆ ಇವರು ಸೂಚಿಸುವ ಉಪಾಯಗಳನಂದರೆ, ಈ ರೂಪ ವೈವಿಧ್ಯತೆ ಮತ್ತು ಕಾಗುಣಿತದ ಪರ್ಯಾಯಗಳಲ್ಲಿ ಒಂದನ್ನು ಸಾಧು ರೂಪವೆಂದು ಒಪ್ಪಿಕೊಂಡು ಮಿಕ್ಕೆಲ್ಲವನ್ನು ವಿಕಲ್ಪಗಳೆಂದು ಪರಿಗಣಿಸಬೇಕು. ಈ ವಾದ ಸರಿ ಎಂದು ತೋರಿದರೂ ಇಲ್ಲಿ ಮತ್ತೆ ಸಾಮಾಜಿಕ ಅಸಮಾನತೆಗೆ ಅವಕಾಶ ಕಲ್ಪಿಸಿ ಕೊಡುವ ಸಾಧ್ಯತೆ ಇದೆ. ಹಾಗೂ ಒಂದು ವರ್ಗದ ಭಾಷಾ ರೂಪಗಳು ಸಾಧು ರೂಪಗಳೆಂದು ಪರಿಗಣಿಸಿ ತಮ್ಮತನವನ್ನು ಮೆರೆಯುವ ಸಾಧ್ಯತೆ ಇರುವುದು. ವ್ಯತರಿಕ್ತವಾಗಿ ಕನ್ನಡ ಭಾಷೆಯ ಮಾತು ಮತ್ತು ಬರಹಗಳ ಮಧ್ಯೆ ಒಂದು ಸಂಘರ್ಷವನ್ನು ಅನುಭವಿಸುತ್ತದೆ. ಅಂದರೆ, ಕನ್ನಡದ ಹಲವಾರು ಪ್ರಭೇದಗಳು ಬಳಕೆಯಲ್ಲಿವೆ ಆದರೆ ಅವುಗಳು ಕೇವಲ ಕೇಳವ ನೆಲೆಯಲ್ಲಿ ಮಾತ್ರ ಬಳಕೆಯಲ್ಲಿವೆ ಎನ್ನುವುದು ನಿಜವಾದರೂ ಕಣ್ಣೋದಿನ ಹಾಗೂ ಕಿವಿ ಓದಿನ ಬಳಕೆಯಲ್ಲಿ ಎದುರಿಸಬೇಕಾಗಿಲ್ಲ. ಈ ಸಂಘರ್ಷದಂತೆ ಮಾತು ವೈವಿಧ್ಯಗಳಿಂದ ಕೂಡಿರುವುದು, ವೈವಿಧ್ಯ ಅದರ ಜೀವಾಳವಾಗಿರುವಂತೆ ಅದರ ಮಿತಿಯೂ ಹೌದು. ಏಕಂದರೆ ವೈವಿಧ್ಯವು ತನಗೆ ತಾನೆ ಆಕರ್ಷಕವಾದ ವಿಷಯ. ಸಿನಿಮಾ ಮತ್ತು ನಾಟಕ ಮಾಧ್ಯಮಗಳಲ್ಲಿ ಪ್ರಭೇದಗಳ ಬಳಕೆ ಯಾವುದೆ ಅದಿಕೃತತೆಯನ್ನು ಒದಗಿಸಿಕೊಡಲಾರದು ಯಾಕಂದರೆ ಅದು ಕೇವಲ ಮಧ್ಯವರ್ತಿಯಾಗಿ ಬಳಕೆಯಾಗುವುದೆ ಹೊರತು ಅಂತೀಮ ಗುರಿಯಾಗಲಾರದು. ಕಾರಣ ಚಲನಚಿತ್ರವನ್ನು ಯಾರು ಒಂದು ಗ್ರಂಥವನ್ನಾಗಿ ಓದಲಾರರು. ಆದರೆ ರೇಡಿಯೋದಂತಹ ಮಾಧ್ಯಮಗಳು ಲಿಖಿತ ರೂಪಗಳನ್ನು ಮೌಖಿಕವಾಗಿ ಪರಿವರ್ತಿಸಿಕೊಂಡು ಸಾಮಾಜಿಕ ಸ್ಥಾನವನ್ನು ಗಳಿಸಿಕೊಂಡು, ಕಳಕೊಂಡು ಈಗ ಮತ್ತೆ ಪಡೆದುಕೊಳ್ಳುವ ನೆಲೆಯಲ್ಲಿದೆ. ನುಡಿ ಬೆರಕೆಯಂತಹ ಪ್ರಕ್ರಿಯೆಯನ್ನು ಕುರಿತು ಯೋಚಿಸುವಾಗ ಹಲವಾರು ವೈರುಧ್ಯಗಳನ್ನು ಕಾಣಬಹುದು. ನುಡಿ ಬೆರಕೆ ಮತ್ತು ಮಿಶ್ರಣಕ್ಕೆ ಮುಖ್ಯ ಪ್ರೇರಣೆ ಮತ್ತು ಕಾರಣಗಳು ಯಾವುದೆ ಒಂದು ಭಾಷೆಯಾಗುವುದಕ್ಕೆ ಸಾದ್ಯವಿಲ್ಲ. ಅದನ್ನು ಬಳಸುವ ಜನ ಮತ್ತು ಸಾಮಾಜಿಕ-ಸಾಂಸ್ಕೃತಿಕ ನೆಲೆಗಳೇ ಕಾರಣ ಎನ್ನವುದು ಗಂಭೀರವಾಗಿ ಪರಿಗಣಿಸಬೇಕಾದ ವಾದ. ಕನ್ನಡ ಭಾಷೆ ತನ್ನ ಬರವಣಿಗೆಯ ಚಹರೆಯನ್ನು ಕಾಯ್ದುಕೊಳ್ಳಲು ಮಾಡಿದ ಯತ್ನ ಈಗ ಪರೋಕ್ಷವಾಗಿ ಒಂದು ತೊಡಕಾಗಿದೆ ಅಂದರೆ ಸಂಸ್ಕೃತ ಪದಗಳನ್ನು ಕನ್ನಡಕ್ಕೆ ಪಡೆದುಕೊಂಡಾಗ ಅವುಗಳನ್ನು ಉಚ್ಛರಿಸುವ ರೀತಿಯಲ್ಲಿ ಸಹಜವಾಗಿಯೇ ಹಲವಾರು ಬದಲಾಣೆಗಳಾದವು ಉದಾ: ಅಕಾರಂತವು ಎಕಾರಂತವು , ಲ ಧ್ವನಿ ಳ ಧ್ವನಿಯಾಗಿ ಪರಿವರ್ತಿಸಿದ್ದು , ವಿಜಾತಿ ದ್ವಿತ್ವಗಳ ನಡುವೆ ಉಕಾರವನ್ನು ಸ್ವರಭಕ್ತಿ ಮಾಡಿದ್ದು ಮುಂತಾದವು. ಶಿಕ್ಷಣ ಮಾಧ್ಯಮ ಮತ್ತು ತ್ರೀಭಾಷಾ ಸೂತ್ರಗಳಂತಹ ನಿಲುವುಗಳು ಉಂಟುಮಾಡುವ ಗೊಂದಲಗಳು ಮತ್ತು ಬಹುಭಾಷಿಕ ಸಂದರ್ಭದಲ್ಲಿ ಯಾವುದೆ ಒಂದು ಭಾಷೆ ಮಹತ್ವ ಪಡೆದುಕೊಳ್ಳುವ ಬಗೆ ಎಂತಹ ಭಾಷಿಕ-ಸಾಮಾಜಿಕ ಅಪಾಯವನ್ನುಂಟುಮಾಡುವುದು ಎನ್ನುವ ವಿಶ್ಲೇಷಣೆಗಳು ಬಹಳ ಸೂಕ್ಷ್ಮ ಹೊಳವುಗಳನ್ನು ಒದಗಿಸುವವು. ಅಂದರೆ, ಭಾಷಾ ನೀತಿಯ ಹಿಂದೆ ಒಂದು ತರ್ಕ ಕೆಲಸ ಮಾಡುವಂತಿದೆ ನಮ್ಮ ಸಾಮಾಜಿಕ ವಿನ್ಯಾಸಗಳು ಹುಟ್ಟು ಹಾಕುವ ಭಾಷಿಕ ಸವಾಲುಗಳು ಅವಕಾಶಗಳ ಸಮಾನತೆಯ ಪ್ರಾಯೋಗಿಕ ನೆಲೆಯಲ್ಲಿ ಸೋಲುವಂತೆ ಮಾಡಲು ತಾರತಮ್ಯದ ನೆಲೆಗಳನ್ನು ರೂಢಿಸಲಾಗುತ್ತದೆ. ಇವುಗಳು ಯಶಸ್ವಿಯಾಗದಂತೆ ಒಳಗಿನ ಒಂದು ತಾರತಮ್ಯವನ್ನು ಸೃಷ್ಟಿಸಬೇಕಾಗುತ್ತದೆ. ಇಲ್ಲಿಯೇ ಇಂಗ್ಲಿಶ್ ಭಾಷಾ ಮಾಧ್ಯಮದ ಪ್ರವೇಶವಾಗುತ್ತದೆ . ಕನ್ನಡ ಮತ್ತು ಇಂಗ್ಲಿಷ್ ಎಂಬ ಎರಡು ಆಯ್ಕೆಗಳನ್ನು ಸೃಷ್ಟಿಸಿ ಕನ್ನಡದ ಆಯ್ಕೆಯ ಯಥಾಸ್ಥಿತಿಯ ಮುಂದುವರಿಕೆಗೂ ಇಂಗ್ಲಿಶ್ ಆಯ್ಕೆಯ ಸಾಮಾಜಿಕ ಚಲನಶೀಲತೆಗೆ ನೀಡಿದ ಅವಾಕಾಶ ಎಂದು ತೋರತೊಡಗಿದ ಕೂಡಲೆ ಒಂದು ಅಂತಸ್ಥ ತಾರತಮ್ಯ ರೂಢಿಸಿಕೊಳ್ಳುವಂತಾಯಿತು. ಸಹಜವಾಗಿಯೇ ಇಂತಹ ಪರಿಸ್ಥಿತಿಯಲ್ಲಿ ಜನರು ಚಲನಶೀಲತೆ ಮತ್ತು ಬದಲಾಣೆಗಳ ಪರವಾಗಿರುತ್ತಾರೆ .

ಇಂತಹ ಬದಲಾವಣೆಗಳು ಬಯಕೆಯ ನೆಲೆಗಳನ್ನು ಉದ್ಧಿಪಿಸುವದಲ್ಲದೆ ಕನ್ನಡದಂತಹ ಭಾಷಾ ಮಾಧ್ಯಮಗಳು ಅಲಕ್ಷ್ಯಕ್ಕೆ ಒಳಗಾಗುತ್ತವೆ. ಇನ್ನೂ ಕುತೂಹಲದ ವಿಷಯವೆನಂದರೆ, ಕರ್ನಾಟಕದಂತಹ ಬಹುಭಾಷಿಕ ಸಂದರ್ಭದಲ್ಲಿ ಕನ್ನಡ-ಇಂಗ್ಲಿಶ್ ಭಾಷೆಗಳ ಆಯ್ಕೆಯ ಸಂದರ್ಭದಲ್ಲಿ ಮತ್ತು ಅವುಗಳು ಪಡೆದುಕೊಳ್ಳು ಶೈಕ್ಷಣಿಕ-ಸಾಮಾಜಿಕ ಮಹತ್ವವು ಉರ್ದು, ಕೊಂಕಣಿ, ಕೊಡಗು, ತುಳು ಮುಂತಾದ ಭಾಷೆವುಗಳು ಸಮಸ್ಯೆಯಲ್ಲಿ ಸಿಲುಕಿಕೊಳ್ಳುವವು. ಆದ್ದರಿಂದ, ಭಾಷಾ ನೀತಿ ಎನ್ನುವದು ಕೇವಲ ಸಾಂಸ್ಥಿಕ ಪರಿಕಲ್ಪನೆಯಾಗಿರದೆ ಸಾಮಾಜಿಕರಣಗೊಂಡರೆ ಬಹುಭಾಷಿಕತೆಯನ್ನು ನಿರ್ವಹಿಸುವುದು ಸಾಧ್ಯವಾಗಬಹುದು ಎನ್ನುವುದು ಸ್ಪಷ್ಟ. ಡಾ. ಕೆ. ವಿ. ನಾರಾಯಣವರು ಇಂತಹ ಹಲವಾರು ವೈರುಧ್ಯಗಳನ್ನು ಸೂಕ್ಷ್ಮವಾಗಿ ವಿಶ್ಳೇಷಿಸಿದ್ದಾರೆ. ಅಂದರೆ ಇತರ ಭಾಷೆಗಳ ಜೊತೆಗಿನ ಸಂಬಂಧವನ್ನು ಅರ್ಥೈಸಿಕೊಳ್ಳುವ ಸಂದರ್ಭದಲ್ಲಿ ಭಾಷಾ ಆಯ್ಕೆಯ ವಿನ್ಯಾಸ ಹೇಗಿರುತ್ತದೆ ಎನ್ನುವುದು ಬಹಳ ಪ್ರಮುಖವಾದ ಒಳನೋಟಗಳನ್ನು ಬಹಿರಂಗಪಡಿಸುವದು ಹಾಗೂ ಹೇಗೆ ಕನ್ನಡ ಭಾಷೆ ಒಂದು ದ್ವೀಪವಾಗುವ ಅಪಾಯವನ್ನು ತಂದುಕೊಳ್ಳುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಇಂತಹ ವೈರುಧ್ಯಗಳನ್ನು ಬಗೆಹರಿಸುವ ಮಾನದಂಡಗಳನ್ನು ರೂಪಿಸುವ ಕ್ರಮ ಮತ್ತೆ ಭಾಷಿಕ ಯಜಮಾನ್ಯಿಕೆಯನ್ನು ಹುಟ್ಟು ಹಾಕುವುದು ಎನ್ನುವುದು ಪ್ರಮುಖ ವಿಷಯ. ಒಂದು ಭಾಷೆಯನ್ನು ಪರಿಣಾಮಕಾರಿಯಾಗಿ ಬೋಧಿಸುವ/ಕಲಿಯುವ ಪ್ರಕ್ರಿಯೆಯಲ್ಲಿ ಉಂಟಾಗುವ ಏರುಪೇರುಗಳಿಗೆ ಪಠ್ಯಕ್ರಮ ಮತ್ತು ಶಿಕ್ಷಣಕ್ರಮಗಳೆ ಜವಾಬ್ದಾರಿ ಎನ್ನುವುದು ಸ್ಪಷ್ಟ. ಉದಾ: ಬರೆಯುವ ಮತ್ತು ಓದುವ ಕೌಶಲಗಳು ಕ್ರಿಯಾಶೀಲವಾಗಿ ಮಾತನಾಡುವ ಮತ್ತು ಆಲಿಸುವ ಕ್ರಿಯೆಗಳು ಪರಿಣಾಮಕಾರಿಯಾಗುವುದಿಲ್ಲ. ಇವುಗಳಿಗೆ ಮುಖ್ಯ ಕಾರಣ ಭಾಷಾ ನೀತಿ, ಶಿಕ್ಷಣಕ್ರಮ ಮತ್ತು ಪಠ್ಯಕ್ರಮಗಳಾಗಿವೆ.

ಮಕ್ಕಳು ತಮ್ಮದಲ್ಲದ ಭಾಷಾ ಮಾಧ್ಯಮದಿಂದ ಶಿಕ್ಷಣ ಪಡೆದರೆ ಅವರು ಅನುಭಿವಿಸುವ ಶೈಕ್ಷಣಿಕ ತೊಂದರೆ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳು ಏನು ಎಂಬುದನ್ನು ಬಹಳ ಸೂಕ್ಷ್ಮವಾಗಿ ಅನಾವರಣಗೊಳಿಸುವರು. ಹಾಗಾಗಿ ಶೈಕ್ಷಣಿಕ ತತ್ವ-ಜೀವನ ಮಾರ್ಗಗಳಿಗಿರುವ ಪರಸ್ಪರ ಸಂಬಂಧಕ್ಕೆ ಅನುಸರಿಸಿ ಭಾಷಾ ಮಾಧ್ಯಮದ ಆಯ್ಕೆಯನ್ನು ಮಾಡಿಕೊಳ್ಳಬೇಕು ಎನ್ನುವುದು ಗಮನಾರ್ಹವಾದ ವಾದ. ಆದರೆ ಶಿಕ್ಷಣ ಮಾಧ್ಯಮಕ್ಕೂ ಸಾಂಸ್ಕೃತಿಕ ಪರಂಪರೆ ಮುಂದುವರಿಕೆಗೂ ನೇರವಾದ ಸಂಬಂಧ ಇದ್ದಿರಲಾರದು ಎನ್ನುವ ಅಂಶ ಮೇಲಿನ ವಾದವನ್ನು ಪುಷ್ಟಿಕರಿಸದೆ ಸರಳಗೊಳಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಣಾಮವಾಗಿ, ಒಂದು ಮಗು ಭಾಷಾ ಕಲಿಕಾ ಪ್ರಕ್ರಿಯೆಯಲ್ಲಿ ಒಟ್ಟು ಅನುಭವಿಸಬೇಕಾದ ತೊಂದರೆ, ಮಾನಸಿಕ ಗೊಂದಲಗಳ ವಿಶ್ಲೇಷಣೆಗಳು ಇವತ್ತೀನ ಶೈಕ್ಷಣಿಕ ಅಗತ್ಯಗಳನ್ನು ಪೊರೈಸುವ ಮಾನದಂಡಗಳಾಗಬಹುದು ಎನ್ನುವುದು ಮುಖ್ಯ. ಇದು ಒಂದು ಮಗುವಿನ ಸಹಜ ಸಂವಹನ ಪ್ರಕ್ರಿಯೆ ಸಾಧ್ಯವಾಗುವುದಕ್ಕೆ ಮನೋ-ಶೈಕ್ಷಣಿಕ-ಭಾಷಾಶಾಸ್ತ್ರದ ನೆಲೆಯಲ್ಲಿ ವಿಶ್ಲೇಷಿಸುವ ವಿಧಾನಗಳು ಅಗತ್ಯವಾಗುವ ಸೂಕ್ಷ್ಮ ಒಳನೋಟಗಳನ್ನು ಕೊಡುತ್ತವೆ. ಉದಾ: ಭಾಷಾ ರಚನೆಯನ್ನು ಕಲಿಸುವ ವಿಧಾನದಲ್ಲೆ ಕೆಲವು ದೋಷಗಳಿವೆ. ಈ ದೋಷಯುಕ್ತ ಕ್ರಮದ ಪರಿಣಾಮವಾಗಿ ಕಲಿತ ಮಕ್ಕಳು ತಮ್ಮ ಭಾಷಾ ಕೌಶಲಗಳಲ್ಲಿ ಕೊರತೆಯನ್ನು ಅನುಭವಿಸುತಿದ್ದಾರೆ. ಆದ್ದರಿಂದ ಭಾಷಾ ಕಲಿಕೆ ವಿಶ್ಲೇಷಣಾತ್ಮಕ ವಿಧಾನಕ್ಕಿಂತ ಸಂಶ್ಲೇಷಣಾತ್ಮಕ ವಿಧಾನದಿಂದ ಪರಿಣಾಮಕಾರಿಯಾಗುವುದು. ಇವತ್ತೀನ ಸಂದರ್ಭದಲ್ಲಿ ಕನ್ನಡ ಭಾಷೆ ತನ್ನ ಅಭಿವ್ಯಕ್ತಿಯ ಎಲ್ಲ ಸಾಧ್ಯತೆಗಳನ್ನು ಹಾಗೂ ಬಳಕೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯಗಳ ಕುರಿತ ಒಳನೋಟಗಳು ಸೂಚಿಸುವ ನಿಲುವುಗಳು ಅನ್ವಯಿಕ-ಭಾಷಾಶಾಸ್ತ್ರೀಯ ತಾತ್ವಿಕತೆಯನ್ನು ಆದರಿಸಿಕೊಂಡಿರುವವು. ಉದಾ: ತಂತ್ರಜ್ಙಾನ ಭಾಷಾ ಬಳಕೆಯ ವಿಶಿಷ್ಟ ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಆದರೆ ತಂತ್ರಜ್ಞಾನ ಮತ್ತು ಆಧುನಿಕತೆಯ ಎಲ್ಲ ಸವಾಲು ಮತ್ತು ನಿರೀಕ್ಷೆಗಳನ್ನು ಈಡೇರಿಸುವ ಮಟ್ಟಿಗೆ ಕನ್ನಡದಂತಹ ಭಾಷೆಗಳು ಸಜ್ಜಾಗಿಲ್ಲ ಅನ್ನುವದನ್ನು ಯಾರು ಅಲ್ಲಗಳೆಯುವಂತಿಲ್ಲ. ತಂತ್ರಜ್ಞಾನ ಸಂವಹನ ಸಾಧ್ಯತೆಯನ್ನು ಹೆಚ್ಚು ಮಾಡಿದೆ ಇದಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಮತ್ತು ಅದರ ಅಗತ್ಯ ಹಾಗೂ ಅವಕಾಶಗಳನ್ನು ಸಮಾನಾಗಿ ನಮ್ಮ ಭಾಷೆಗೆ ದಕ್ಕಿಸಿಕೊಳ್ಳು ಕ್ರಮದ ಚರ್ಚೆಗಳು ಇಂದಿನ ಭಾಷಿಕ ಅಗತ್ಯಗಳನ್ನು ಪೊರೈಸುವವು. ಅಂದರೆ ತಂತ್ರಜ್ಞಾನದ ಬೇರೆ ಬೇರೆ ಸಾಧ್ಯತೆಗಳು ಭಾಷೆಯನ್ನು ವಿಭನ್ನ ಸ್ವರೂಪದಲ್ಲಿ ರೂಪಿಸುವವು. ಹೀಗೆ ಭಾಷಾ ಬಳಕೆಯ ವಲಯಗಳು ಹೆಚ್ಚುತ್ತ ಹೋಗಿರುವುದು ಒಂದು ಪ್ರಕ್ರಿಯೆಯಾದರೆ, ಆ ವಲಯಗಳಲ್ಲಿ ಕನ್ನಡವನ್ನು ನಿರೂಪಿಸುವ ಬಗೆಗಳು ಬದಲಾಗುತ್ತ ಹೋಗುವದು ಇನ್ನೊಂದು ಪ್ರಕ್ರಿಯೆ ಉದಾ: ಮಷಿನ್ ಟ್ರಾನ್ಸಲೇಷನ್ ಮುಂತಾದವು. ಆದರೆ ಕೆಲವು ಸಾಧ್ಯತೆಗಳು ಭಾಷೆಯನ್ನು ಹೃಸ್ವೀಕರಿಸುವ ಮತ್ತು ಸಂಕ್ಷೇಪಗೊಳಿಸುವ ನಿರೂಪಣೆಗಳು ಸಾಧ್ಯ ಉದಾ: ಚಾಟಿಂಗ್, ಎಸ್ ಎಮ್ ಎಸ್ (ಸಂಕ್ಷೇಪ ಸುದ್ಧಿ) ಮುಂತಾದವು. ಇಂತಹ ಹಲವಾರು ಸಾಧ್ಯತೆಗಳಿಗೆ ಕನ್ನಡ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎನ್ನುವುದು ಮುಖ್ಯ. ಕನ್ನಡ ಭಾಷಾಧ್ಯನಕಾರರು ಅನುಸರಿಸಬೇಕಾದ ತಾತ್ವಿಕ ನೆಲೆಗಳು ಮತ್ತು ಭಾಷಿಕ ಆಯಾಮಗಳನ್ನು ಕುರಿತ ಸೂಕ್ಷ್ಮ ಒಳನೋಟಗಳು ಇವತ್ತೀನ ಭಾಷಾಧ್ಯಯನಕಾರರಿಗೆ ಪ್ರೇರಣೆ ನೀಡುವವು. ಒಟ್ಟು ಕನ್ನಡ ಭಾಷಾಧ್ಯಯನಕಾರರು ಅಳವಡಿಸಿಕೊಳ್ಳಬೇಕಾದ ಅಧ್ಯಯನ ಮಾದರಿ ಮತ್ತು ವಿಧಾನಗಳನ್ನು ರೂಪಿಸಿಕೊಳ್ಳುವ ಬಗೆಯಲ್ಲಿ ಸಾಕಷ್ಟು ಅಧ್ಯಯನಗಳ ನಿಲುವುಗಳನ್ನು ವಿಶ್ಲೇಷಿಸುತ್ತ ಇವತ್ತು ಬೇಕಾದ ಮಾದರಿಗಳು ಏನು? ಹೇಗೆ? ಮತ್ತು ಒಂದು ಭಾಷೆ ಮೈಗೂಡಿಸಿಕೊಳ್ಳಬೇಕಾದ ಆಧುನಿಕ ತಾತ್ವಿಕ ನಿಲುವುಗಳುನ್ನು ಗಮನಿಸಿರುವದು ಗಮನಾರ್ಹ. ಒಂದು ಭಾಷೆ ಒಂದು ಸಮುದಾಯದ ಗುರುತಾಗಿ, ಲಾಂಛನವಾಗಿ, ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಅಸ್ತ್ರವಾಗಿ ಪ್ರತಿಪಾದಿಸಲ್ಪಡುತ್ತದೆ ಎನ್ನುವುದು ಗಮನಾರ್ಹವಾದ ವಿಚಾರ. ನೀರು, ಮಣ್ಣು, ಗಾಳಿಯಂತಹ ಸಂಪನ್ಮೂಲಗಳು ಈ ಭಾಷೆಯನ್ನು ಮಾತನಾಡುವರಿಗೆ ಮಾತ್ರ ಸೀಮಿತ ಎನ್ನುವ ನಿಲುವುಗಳು ಹಾಗೂ ಸ್ವ- ಅನ್ಯ ಕಲ್ಪನೆಗಳ ಭ್ರಮಾತ್ಮಕ ಸೃಷ್ಟಿಯೇ ಸಾಂಸ್ಕೃತಿಕ-ರಾಜಕೀಯ ಹುನ್ನಾರಕ್ಕೆ ಪೂರಕವಾಗಿ ಕೆಲಸಮಾಡುವುದು. ಕನ್ನಡಪರ ಚಳವಳಿ ಎನ್ನುವಂತಹವು ಕನ್ನಡ ವಿರೋಧಿ ಧೋರಣೆಗಳನ್ನು ಅಂತರ್ಗತ ಮಾಡಿಕೊಂಡಿರುವುದು ಸ್ಪಷ್ಟವಾಗುವುದು. ಅಂದರೆ ಕನ್ನಡ ಪರವಾಗಿ ಮಾತನಾಡುವ ಸಂದರ್ಭಗಳು ಭಾರತ ಬಹುಭಾಷಿಕ ಸಂದರ್ಭ ಅನ್ನುವದನ್ನು ಮರೆತು ಮಾತಾಡುವಂತೆ ಗೋಚರಿಸುವವು. ಈ ಚಳುವಳಿಗಳ ತಾತ್ವಿಕತೆ, ಕನ್ನಡಪರ ಕಾಳಜಿಗಳು ಮೇಲ್ ನೋಟಕ್ಕೆ ಕನ್ನಡದ ಅಸ್ತಿತ್ತತ್ವವನ್ನು ಗಟ್ಟಿಗೊಳಿಸುವಂತೆ ಕಂಡರೂ ಇನ್ನೊಂದರ ಅಸ್ಥಿತ್ವವನ್ನು ನಿರ್ನಾಮ ಮಾಡುವ ಹುನ್ನಾರವನ್ನು ರೂಪಿಸಿಕೊಂಡಿರುವವು. ಆದ್ದರಿಂದ ಸಮ್ಮೇಳನ ಮತ್ತು ಚಳುವಳಿಗಳ ಕಾಳಜಿಯು ಭಾವನಾತ್ಮಕ ಲೇಪನವನ್ನು ಗಟ್ಟಿಗೊಳಿಸುವ ಮಾನದಂಡವಾಗಿ ಮೂಡಿಬಂದಿರುವುದು ಗಮನಾರ್ಹ. ಈ ಎಲ್ಲ ಕಾರಣಗಳಿಂದ ಕ್ಲಾಸಿಕಲ್ ಪಟ್ಟದ ಭ್ರಮೆ ಹೆಚ್ಚಾಗಿರುವುದು. ನಿಜ, ಶಾಸ್ತ್ರೀಯ ಸ್ಥಾನಮಾನದ ಹಂಬಲ ಹೆಚ್ಚಾಗುವುದಕ್ಕೆ ಕೇಂದ್ರ ಸರಕಾರದ ತಾರತಮ್ಯ ಭಾಷಾ ನೀತಿಯೂ ಇರಬಹುದು. ಅಂದರೆ ಕೇಂದ್ರ ಸರಕಾರ ತನ್ನ ವಾಪ್ತಿಯಲ್ಲಿ ಇಂಗ್ಲಿಶ್ ಮತ್ತು ಹಿಂದಿಯನ್ನು ಪೋಷಿಸುವ ಹೋಣೆಯನ್ನು ಹೊತ್ತಿರುವುದು ಮತ್ತು ರಾಜ್ಯ ಸರಕಾರಗಳು ತಂತಮ್ಮ ಭಾಷೆಗಳ ಸಾರ್ವಭೌಮತ್ವವನ್ನು ಸಾರಸಗಟಾಗಿ ಒಪ್ಪಿಲ್ಲ. ಆದ್ದರಿಂದ ಕಳೆದ ಐವತ್ತು ವರ್ಷಗಳಲ್ಲಿ ಈ ಪರಸ್ಥಿತಿಯಿಂದ ದೇಶಿಯ ಭಾಷೆಗಳಲ್ಲಿ ತಾವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂಬ ಕುದಿತ ಮೂಡಿದರೆ ಅಚ್ಚರಿಯೇನಿಲ್ಲ . ಇವುಗಳ ಹಿಂದಿನ ತಾತ್ವಿಕ ಒತ್ತಡವನ್ನು ಜರೂರಾಗಿ ಪರಿಗಣಿಸಬೇಕು ಎನ್ನುವ ಹಂಬಲ ಸಾಮುದಾಯಿಕವಾಗಿ ಗಟ್ಟಿಗೊಳ್ಳುವವು. ಇತಿಹಾಸವು ನಿರಂತರ ಬದಲಾಣೆ ಅಥವಾ ಸ್ಥಿತ್ಯಂತರದ ಪ್ರಕ್ರಿಯೆ. ಹಾಗಗಿ ಐವತ್ತು ವರ್ಷಗಳ ಈ ಪಲ್ಲಟದಲ್ಲಿ ಕನ್ನಡ ಭಾಷೆ ರೂಪಗೊಂಡ ಬಗೆಯನ್ನು ವಿಶ್ಲೇಷಿಸುವ ಮಾದರಿಗಳು ಭಾಷಿಕ-ಸಾಂಸ್ಕೃತಿಕ ವಿವಿಧ ನೆಲೆಗಳನ್ನು ಗುರುತಿಸುವ ಮತ್ತು ಕನ್ನಡ ಭಾಷೆಗೆ ಬೇಕಾದ ಪ್ರಜ್ಞೆ ಮತ್ತು ಪರಿಸರವನ್ನು ದಕ್ಕಿಸಿಕೊಳ್ಳುವದಕ್ಕೆ ಪೂರಕವಾಗಿವೆ.

ಆದ್ದರಿಂದ, ಡಾ.ಕೆ. ವಿ.ನಾರಾಯಣವರು ಹೇಳಿಕೊಂಡಂತೆ ಮೂದಲ ಓದಿಗೇ ಈ ಬರವಣಿಗೆ ಕನ್ನಡಪರ ಇಲ್ಲವೇ ಕನ್ನಡ ವಿರೋಧಿ ಎಂಬ ತುದಿಯ ಆಯ್ಕೆಗಳನ್ನು ಮಾಡಿಕೊಂಡಿಲ್ಲವೆಂಬುದು ತಿಳಿಯುವಂತಿದೆ. ಈ ಹೊತ್ತಿಗೆಯು ಯಾವುದೆ ಸರಳ ತೀರ್ಮಾನಕ್ಕೆ ಎಡೆಮಾಡಿಕೊಡದೆ ಇಂದಿನ ಕನ್ನಡದ ವಾಸ್ತವ ಮತ್ತು ಅಗತ್ಯಗಳನ್ನು ಕುರಿತಾದುದಾಗಿದೆ. ಪುಸ್ತಕದ ಬಗ್ಗೆ ವಿವರ : ಕನ್ನಡ ಜಗತ್ತು : ಅರ್ಧ ಶತಮಾನ ಡಾ. ಕೆ. ವಿ. ನಾರಾಯಣ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವರ್ಷ 2007 [ಪುಸ್ತಕ ಪರಿಚಯಿಸಿದ ಲೇಖಕರ ವಿಳಾಸ : ಮೇಟಿ ಮಲ್ಲಿಕಾರ್ಜುನ, ಉಪನ್ಯಾಸಕ ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ]