ಮಲ್ಲಿಗೆಯ ಘಮಘಮ, ಬ್ಯಾಡಗಿ ಮೆಣಸಿನ ಘಾಟು!

ಮಲ್ಲಿಗೆಯ ಘಮಘಮ, ಬ್ಯಾಡಗಿ ಮೆಣಸಿನ ಘಾಟು!

ಬರಹ

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ)

ಭಾಸ್ಕರ ಹೆಗಡೆ

ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019

ಪುಟಗಳು:105+6

ಬೆಲೆ:ರೂ.100

ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ ನುಂಗುತ್ತಿರುವ ಅವನ ಸ್ಮೃತಿಗಳು, ಭ್ರಷ್ಟನಾಗುತ್ತಿರುವ ಅವನ ಹಪಹಪಿ ಎಲ್ಲವೂ ಕಣ್ಣೆದುರು ಬರುತ್ತದೆ. ಹೀಗೆ ಬದುಕನ್ನು ಅದರ ವಿಶಿಷ್ಟತೆಯಲ್ಲಿ ಮತ್ತು ಸಮಗ್ರತೆಯಲ್ಲಿ ಒಟ್ಟಿಗೇ ಹಿಡಿಯಲು ಭಾಸ್ಕರ ಹೆಗಡೆಯವರು ಪ್ರಯತ್ನಿಸುತ್ತಾರೆ. ಹಾಗಾಗಿ ಒಂದೇ ಸಂಕಲನದಲ್ಲಿ ತೀರ ಭಿನ್ನವೆನಿಸುವ ಬಗೆಯ ರಚನೆಗಳನ್ನು ಅವರು ನಮ್ಮೆದುರು ಇಡುತ್ತಾರೆ. ಮೊದಲ ಸಂಕಲನದಲ್ಲೇ ಸಾಕಷ್ಟು ಭರವಸೆ ಹುಟ್ಟಿಸುವ ಕಥೆಗಳನ್ನು ನೀಡಿರುವ ಭಾಸ್ಕರ ಹೆಗಡೆ ತಮ್ಮ ಹತ್ತೂ ಕಥೆಗಳಲ್ಲಿ ಹಂಚಿಹೋದಂತಿರುವ ಹಲವಾರು ಉತ್ತಮ ಅಂಶಗಳನ್ನು ಮುಂದಿನ ಪ್ರತಿಯೊಂದು ಕಥೆಯಲ್ಲೂ ಮೈಗೂಡಿಸಿಕೊಂಡು ಬರುವ ಸಾವಧಾನ, ಪೋಷಣೆ, ಶ್ರಮ ವಹಿಸಿದರೆ ಕನ್ನಡಕ್ಕೆ ಕೆಲವು ಅತ್ಯುತ್ತಮವಾದ ಕಥೆಗಳನ್ನು ನೀಡಬಲ್ಲರು ಎನ್ನುವುದರಲ್ಲಿ ಸಂಶಯವಿಲ್ಲ.