ವಿವೇಕ ಶಾನಭಾಗರ `ಒಂದು ಬದಿ ಕಡಲು'
"ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ "
ದಿನಕರ ದೇಸಾಯಿಯವರ ಈ ಚುಟುಕದಿಂದಲೇ ವಿವೇಕ ತಮ್ಮ ಕಾದಂಬರಿಗೆ ಒಂದು ಬದಿ ಕಡಲು ಎನ್ನುವ ಹೆಸರನ್ನು ಆಯ್ದಿದ್ದಾರೆ. ಒಂದು ಊರು ನಮಗೆ ನಮ್ಮ ಬಾಲ್ಯದಲ್ಲಿ ಕಂಡಂತೆಯೇ ನಮ್ಮ ತಾರುಣ್ಯದಲ್ಲಿ, ಯೌವನದಲ್ಲಿ, ನಡುವಯಸ್ಸಿನಲ್ಲಿ ಮತ್ತು ಮುದಿತನದಲ್ಲಿ ಕಾಣುವುದಿಲ್ಲ. ಊರು ಕಾಲಮಾನಕ್ಕೆ ತಕ್ಕಂತೆ ಬದಲಾಗುವುದು ಸಹಜ ವಿದ್ಯಮಾನವೇ. ಆದರೆ ಅದು ಬದಲಾಗುವ ಪ್ರಕ್ರಿಯೆ ತುಂಬ ಕುತೂಹಲಕರ. ಪೇಟೆ ಆಧುನಿಕ ಸ್ವರೂಪ ಪಡೆದುಕೊಳ್ಳುವುದು, ಕಟ್ಟಡಗಳೇಳುವುದು ಇತ್ಯಾದಿ ಕಣ್ಣಿಗೆ ಹೊಡೆದು ಕಾಣಿಸುತ್ತದೆ, ಅದರಲ್ಲೇನೂ ವಿಶೇಷವಿಲ್ಲ. ಆದರೆ ಊರು ಬದಲಾಗುವುದೆಂದರೆ ಊರಿನ ಮಂದಿ ಕೂಡ ತಲೆಮಾರಿನಿಂದ ತಲೆಮಾರಿಗೆ, ಒಂದೇ ತಲೆಮಾರು ತನ್ನ ವಯಸ್ಸಿನ ವಿಭಿನ್ನ ಘಟ್ಟಗಳಲ್ಲಿ, ತನ್ನ ಬದುಕಿನ ವಿವಿಧ ಸ್ತರಗಳಲ್ಲಿ ಬದಲಾಗುವುದು. ಆದರೆ ಇದೆಲ್ಲ ಅಷ್ಟು ಢಾಳಾಗಿ ಒಡೆದು ಕಾಣುವುದಿಲ್ಲ. ಅದನ್ನು ಕಾಣಲು ಸೂಕ್ಷ್ಮ ದೃಷ್ಟಿಯ ಅವಲೋಕನ, ವೈಚಾರಿಕತೆ ಮತ್ತು ಕಾರ್ಯ ಕಾರಣ ವಿವೇಚನೆಗೆ ಅಗತ್ಯವಾದ ಮನಶ್ಶುದ್ಧಿ ಬೇಕು. ಇಲ್ಲವಾದರೆ ಎಲ್ಲವನ್ನೂ ಕಾಲದ ಮಹಿಮೆ ಎನ್ನುವ ಅರುಳು ಮರುಳಿನ ಸಿನಿಕತನದ ಅನಿಸಿಕೆಗಳು ನುಸುಳುತ್ತವೆ. ಬದುಕಿನ ಪುಟ್ಟ ಪುಟ್ಟ ಘಟನೆಗಳಲ್ಲಿ, ತನ್ನ ಅನುಭವಕ್ಕೆ ಬರುವ ಚಿತ್ರ ವಿಚಿತ್ರ ವಿದ್ಯಮಾನಗಳಿಗೆ ಒಬ್ಬ ವ್ಯಕ್ತಿ ಸ್ಪಂದಿಸುವ, ಪ್ರತಿಕ್ರಿಯಿಸುವ, ಆನಂತರ ಅದನ್ನು ತಾನೇ ಕಂಡು ವಿವೇಚಿಸುವ ಸೂಕ್ಷ್ಮಗಳನ್ನು ಗ್ರಹಿಸಿ ಅದರಲ್ಲಿ ವ್ಯಕ್ತಿ ಮತ್ತು ಬದುಕು ಒಟ್ಟಾರೆಯಾಗಿ ಕಾಲದ ಒತ್ತಡಗಳೊಂದಿಗೆ ನಡೆಸುವ ಸಂಘರ್ಷವನ್ನು ಎಚ್ಚರದಿಂದ ಗುರುತಿಸಿ, ಗ್ರಹಿಸಿ ಅದನ್ನು ದಾಖಲಿಸುವ ಕೆಲಸ ಸುಲಭದ್ದಲ್ಲ. ಇದೊಂದು ತಲೆಮಾರಿನ ಸವಾಲು. ಇದನ್ನು ಕೈಗೆತ್ತಿಕೊಂಡಿದ್ದಾರೆ ವಿವೇಕ್, ತಮ್ಮ ಕಾದಂಬರಿ `ಒಂದು ಬದಿ ಕಡಲು' ಕೃತಿಯಲ್ಲಿ.
ಅಕ್ಷರ ಪ್ರಕಾಶನ, ಸಾಗರ, ಹೆಗ್ಗೋಡು - 577417
ಪುಟ : 212.
ಬೆಲೆ: ನೂರ ಮುವ್ವತ್ತೈದು ರೂಪಾಯಿ.