ಉರಿಯ ನಾಲಗೆಯ ಕುರ್ತುಕೋಟಿ

ಉರಿಯ ನಾಲಗೆಯ ಕುರ್ತುಕೋಟಿ

ಬರಹ

ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು.

ಬೇಂದ್ರೆ ಪದ್ಯವೊಂದರ ಮೊದಲ ಸಾಲುಗಳು ಇವು. ಇವನ್ನು ನಾನು ಓದಿದ್ದು ಕೀರ್ತಿನಾಥ ಕುರ್ತುಕೋಟಿಯರ ಪ್ರಬಂಧವೊ೦ದರಲ್ಲಿ. ತೊಗಲ ನಾಲಗೆ ಹಾಗು ಉರಿಯ ನಾಲಗೆ ಕುರಿತ ಅವರ ವ್ಯಾಖ್ಯಾನ ನನ್ನ ಮನಸ್ಸನ್ನು ಸೂರೆಗೊ೦ಡಿತ್ತು. ಈಗ ಹೋದ ವಾರವಷ್ಟೇ ಕುರ್ತುಕೋಟಿಯವರು ನಿಧನರಾಗಿದ್ದಾರೆ. ಆ ಸುದ್ದಿ ತಂದ ಎದೆಯ ಭಾರದಲ್ಲಿ ಅವರ ಉರಿಯನಾಲಗೆ ಟಿಪ್ಪಣಿಗಳ ಪುಸ್ತಕ ತೆಗೆದು ಮತ್ತೆ ಓದತೊಡಗಿದೆ. ಅವರ ಬೇರೆ ಬೇರೆ ಪ್ರಬಂಧ ಟಿಪ್ಪಣಿಗಳು ಮತ್ತೆ ನನ್ನ ಮನಸ್ಸನ್ನು ಆವರಿಸಿತು-ಓದುತ್ತಾ ಹೋದಂತೆ ಬೇಂದ್ರೆಯವರ ಪದ್ಯದ ಸಾಲುಗಳು ಹೇಗೆ ಕುರ್ತುಕೋಟಿಯವರಿಗೇ ಸಲ್ಲುತ್ತದೆ ಅನ್ನಿಸಿತು. ಧರ್ಮದ ಹೆಸರಿನಲ್ಲಿ ನಡೆದಿರುವ ಹಿಂಸೆಯನ್ನು ಅವರು ತಣ್ಣಗೆ ಖಂಡಿಸುವ ರೀತಿ ನೋಡಿದರೆ ಈ ಮಾತು ಅರ್ಥವಾಗುತ್ತದೆ.
ತಮ್ಮ ಪ್ರಬಂಧವೊಂದರಲ್ಲಿ "ಪುರಾಣಕತೆಗಳನ್ನು ಭಾವನಾವಿಫುಲತೆಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಮಾಡಿದರೆ ಅವು ಮರೆತು ಹೋಗುತ್ತವೆ ಅಥವಾ ಮರೆತುಹೋದಷ್ಟೂ ಒಳ್ಳೆಯದೇ. ನಮ್ಮ ನಂಬಿಕೆಗೆ ಕುತ್ತು ಬಂದರೆ ಅದರಿಂದುಂಟಾಗುವ ದಿಗ್ಭ್ರಮೆಯಲ್ಲಿ ನಾವು ಇನ್ನೊಬ್ಬರ ಪ್ರಾಣವನ್ನು ತೆಗೆಯಲು ಹಿಂದುಮುಂದು ನೋಡುವುದಿಲ್ಲ. ನಮ್ಮ ಪುರಾಣಗಳಿಗೆ ವೀರಾವೇಶದ ರಕ್ಷಣೆ ಬೇಕಾಗಿಲ್ಲ... ಅವುಗಳನ್ನು ಇತಿಹಾಸಗಳೆಂದು ಭ್ರಮಿಸಿದರೆ ಮತ್ತೊಂದು ರಕ್ತಪಾತಕ್ಕೆ ಎಡೆಮಾಡಿಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಹೀಗೆನ್ನುವ ಕುರ್ತುಕೋಟಿಯವರು ನಿಜವಾಗಿಯೂ -ನೀರಿನೊಲು ತಣ್ಣಗಿದ್ದವರು-ನಿಜವನ್ನು ಉರಿಯ ನಾಲಗೆಯಿ೦ದ ನುಡಿದವರು. ನೀರು-ಉರಿಯನ್ನು ಒಟ್ಟಿಗೆ ದಕ್ಕಿಸಿಕೊಂಡವರು. ತಾನು ದಕ್ಕಿಸಿಕೊಂಡದ್ದನ್ನು ನಿರಾಳದಿಂದ ಹಂಚಿಕೊಂಡವರು.

ಕುರ್ತುಕೋಟಿಯವರು ವಿಮರ್ಶಕರು, ನಾಟಕಕಾರರು, ಪ್ರಬಂಧಕಾರರು ಎಲ್ಲಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಟೀಕಾಕಾರರು. ಅವರ ನಾನಾ ಪುಸ್ತಕಗಳಲ್ಲಿ ನಾನು ಓದಿರುವುದು ಕೆಲವೇ ಕೆಲವು. ನಾಟಕಗಳ ಬಗೆಗಿನ ಅವರ ಪುಸ್ತಕ - ವಿಮರ್ಶೆಯ ವಿನಯ. ಅವರ ಪ್ರಬಂಧಗಳ ಪುಸ್ತಕ ರಾಜಸ್ಪರ್ಶ ಹಾಗು ನನಗೆ ಪ್ರಿಯವಾದ ಉರಿಯ ನಾಲಗೆ. ಐತಿಹ್ಯ ಮಾಲೆಯ ಕತೆಗಳು ಎ೦ಬ ಪುಸ್ತಕಕ್ಕೆ ಅವರು ಬರೆದಿರುವ ಹಿನ್ನುಡಿ. ಅದರಲ್ಲಿ ಇತಿಹಾಸ-ಪುರಾಣ-ಐತಿಹ್ಯಗಳ ಸಂಬಂಧ, ವ್ಯತ್ಯಾಸ ಹಾಗು ಕೊಡುಕೊಳ್ಳುವಿಕೆಯನ್ನು ಮನದಟ್ಟಾಗುವಂತೆ ನಮ್ಮ ಮುಂದಿಡುತ್ತಾರೆ. ತಮ್ಮ ಸಂಸ್ಕೃತ ಪಾಂಡಿತ್ಯವನ್ನು ಮೆರೆಯದೆ, ಅದರ ಪೂರ್ಣ ಪ್ರಯೋಜನವನ್ನು ಪಡಕೊಂಡು, ತಮ್ಮ ಜಾಣ್ಮೆಯ ಮೂಲಕ ಪಾಕವಿಳಿಸಿ ನಿರಾಡಂಬರವಾಗಿ, ಗೆಳೆತನದ ಉತ್ಸಾಹದಲ್ಲಿ ತಮ್ಮ ಆಳವಾದ ಚಿಂತನೆಯನ್ನು ಹಂಚಿಬಿಡುತ್ತಾರೆ ಕುರ್ತುಕೋಟಿಯವರು. `ವೊ ಘರ್` ಎಂಬ ಹಿಂದಿ ಚಿತ್ರವಾದ `ಆ ಮನಿ` ಎ೦ಬ ದೀರ್ಘನಾಟಕವನ್ನು ಬಹಳ ಹಿಂದೆ ಕೈಗೆತ್ತಿಕೊಂಡು ಪೂರ್ತಿ ಓದಲಾರದೆ ಕೈಬಿಟ್ಟಿದ್ದೆ. ನನಗೆ ಆಗ ವ್ಯವಧಾನ ಇಲ್ಲದಿದ್ದುದರ ಬಗ್ಗೆ ಈಗ ಮನಸ್ಸು ಕಸಿವಿಸಿಗೊಳ್ಳುತ್ತದೆ.
ಅಬಾರಿಜಿನಿಗಳು ಭೂಮಿಯನ್ನು, ತಮ್ಮ ಭೂತವನ್ನು ಪರಿಭಾವಿಸುವುದರ ಬಗೆಗಿನ ಆಸ್ಟ್ರೇಲಿಯಾದ ಜೇಮ್ಸ್ ಕೋವನ್‌ನ ಪ್ರಬಂಧವೊಂದನ್ನು ಕುರ್ತುಕೋಟಿ ಅವಲೋಕನ ಮಾಡಿದ್ದಾರೆ. ಅಬಾರಿಜಿನಿಗಳ ಕಾಲ, ಭೂಮಿ, ಪೂರ್ವಿಕರ ಬಗ್ಗೆಗಿನ ನಂಬಿಕೆಗಳನ್ನು ಅರ್ಥಮಾಡಿಕೊಳ್ಳುತ್ತಲೇ ಅದರ ಬಗೆಗಿನ ಆಳವಾದ ಹೊಳಹುಗಳನ್ನು ನಮಗೆ ಕೊಡುತ್ತಾರೆ. ಆನ್ಸೆಸ್ಟರ್ಸ್‌ರನ್ನು ದೇವತೆಗಳು ಎಂದು ಕುರ್ತುಕೋಟಿಯವರು ಅರ್ಥೈಸುವುದು, ಡ್ರೀಮ್‌ಟೈಮ್ - ದೇವತೆಗಳ ಕನಸು - ಎಂಬ ಅವರ ಅನುವಾದ ಎಷ್ಟು ಸಮಂಜಸ ಎ೦ಬ ಪ್ರಶ್ನೆ ಕೇಳಬಹುದಾದರೂ, ಆ ವಿಷಯದಲ್ಲಿ ಅವರು ತೋರಿರುವ ಆಸ್ಥೆ ಮಾತ್ರ ಅದ್ವಿತೀಯವಾದುದು.
ಮತ್ತೊಂದು ಕಡೆ - ನಾವು ಉಪಯೋಗಿಸುವ ಪದಗಳಿಗೂ ಅವುಗಳ ಅರ್ಥಕ್ಕೂ ಇರುವ ನಂಟನ್ನು ಕುರ್ತುಕೋಟಿಯವರು ಚರ್ಚಿಸುತ್ತಾ ಕೆಲವು ಪದಗಳ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. ಅವರು ಪದಗಳ ಮೂಲಕ, ಪದಗಳ ಅರ್ಥಾರೋಪದ ಮೂಲಕ ಸಮಾಜವನ್ನು, ಜನ ಜೀವನವನ್ನು ಅವಲೋಕಿಸುವ ಪರಿಯಂತೂ ತುಂಬಾ ಪರಿಣಾಮಕಾರಿ. ಪದಗಳಿಗೆ ನಾವು ಆರೋಪಿಸುವ ಅರ್ಥ ಕಾಲಾನುಕಾಲಕ್ಕೆ ಬದಲಾಗುವುದನ್ನು ಗಮನಿಸುವ ಮೂಲಕ ಸಮಾಜದ ಪ್ರಗತಿಗೋ, ಪುರೋಗಾಮಿತ್ವಕ್ಕೋ ಕನ್ನಡಿ ಹಿಡಿಯುತ್ತಾರೆ. ಅವರ ಒ೦ದು ಟಿಪ್ಪಣಿಯಲ್ಲಿ `ಸ್ವಾತಂತ್ರ್ಯ` ಎ೦ಬ ಪದಕ್ಕೆ ಬದಲಾಗುತ್ತಾ ಬಂದ ಅರ್ಥವನ್ನು ವಿಶ್ಲೇಷಿಸುತ್ತಾರೆ. ಬ್ರಿಟೀಶರಿಂದ, ಬಡತನದಿಂದ, ಹಸಿವಿನಿಂದ ಹೀಗೆ ಬೇರೆ ಬೇರೆ ವಿಷಯಕ್ಕೆ ಅನ್ವಯಿಸುತ್ತಾ `ಸ್ವಾತಂತ್ರ್ಯ` ಪದಕ್ಕೆ ಅರ್ಥ ನಿಜವಾಗುವುದು ಬಿಟ್ಟು ಸಾಂಕೇತಿಕವಾಗುವುದನ್ನು ಅವರು ನಿಚ್ಚಳವಾಗಿ ಗುರುತಿಸುತ್ತಾರೆ.
ಕಾಲವನ್ನು ಕೂಡ ಅವರು ಸಾಕಷ್ಟು ಸಲ ವ್ಯಖ್ಯಾನಿಸಿದ್ದಾರೆ. ರಾಮಾಯಣದ ಶಬರಿಯ ಬಗ್ಗೆ ಬರೆಯುತ್ತಾ, ಸಮಕಾಲೀನ ದೃಷ್ಟಿಯಲ್ಲಿ ಕಾಯುವಿಕೆಯನ್ನು ನಿರರ್ಥಕ ಎಂದು ಕಾಣುವುದಕ್ಕೂ, ಶಬರಿ ರಾಮನನ್ನು ಕಂಡಾಗ ತನ್ನ ಬದುಕು ಸಾರ್ಥಕವಾಯಿತು ಎಂದುಕೊಂಡರೂ ಕಾಯುವುದು ನಿರರ್ಥಕ ಎಂ ಭಾವ ಇಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತಾರೆ. ಅದಕ್ಕೆ ಅವರು ಸಾಮ್ಯುಯಲ್ ಬೆಕೆಟ್‌ನ `ವೈಟಿಂಗ ಫಾರ್ ಗಾಡೋ` ದಲ್ಲಿ ಕಾಲದ ಚಿತ್ರಣವನ್ನು ಪಕ್ಕದಲ್ಲಿಟ್ಟು ತೂಗಿನೋಡುತ್ತಾರೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಕುರ್ತುಕೋಟಿಯವರು ಅದು ಲೀಲಾಜಾಲವಾಗಿ ಮಾಡಬಹುದಾಗಿದ್ದ ಕೆಲಸ. ಅದು ಅವರ ಪಾಂಡಿತ್ಯದ ಹರಹನ್ನು ಜಾಹೀರುಮಾಡುತ್ತದೆ.
ಐತಿಹ್ಯಮಾಲೆಯ ಕತೆಗಳು ಪುಸ್ತಕದ ಹಿನ್ನುಡಿಯಲ್ಲಿ, ಪುರಾಣಕ್ಕೂ, ಇತಿಹಾಸಕ್ಕೂ, ಐತಿಹ್ಯಕ್ಕೂ ವ್ಯತ್ಯಾಸಗಳನ್ನು ಸೊಗಸಾಗಿ ವಿವರಿಸುತ್ತಾರೆ. ಹೇಗೆ ಗುರು-ಶಿಷ್ಯ ಪರಂಪರೆಯಲ್ಲಿ ವಿದ್ಯಾಭಾಸ ಮಾತು-ಕತೆಯಲ್ಲೇ ನಡೆದುದರಿಂದ ವಿದ್ಯೆ ಗುಪ್ತವಾಗಿ ಉಳಿಯಿತು, ಸಾರ್ವಜನಿಕವಾಗಲಿಲ್ಲ ಎಂದು ತೋರಿಸಿಕೊಡುತ್ತಾರೆ. ಐತಿಹ್ಯಗಳು ಆ ಪರಿಸ್ಥಿತಿ ಬದಲಾದ ಬಗೆಯನ್ನು ಹೇಗೆ ದಾಖಲಿಸುತ್ತದೆ ಎಂದು ಕತೆಗಳ ಮೂಲಕ ವಿವರಿಸುತ್ತಾರೆ. ಗುಪ್ತವಾಗಿದ್ದ ವಿದ್ಯೆಗಳನ್ನು ಅವೈದಿಕರು, ಬ್ರಾಹ್ಮಣೇತರರು ಬರೆದಿಟ್ಟು, ಪ್ರಚಾರ ಮಾಡಿ, ಸಾರ್ವಜನಿಕ ಮಾಡಿದ್ದರಿಂದ ಅದನ್ನು ಯಾರೂ ಬೇಕಾದರೂ ಓದಬಹುದಾದ, ಅರಗಿಸಿಕೊಳ್ಳಬಹುದಾದ ಪರಿಸ್ಥಿತಿ ಹುಟ್ಟಿಕೊಂಡಿದ್ದನ್ನು ಎತ್ತಿ ತೋರಿಸುತ್ತಾರೆ.
ನಾಟಕದ ಬಗ್ಗೆಗಿನ ಅವರ ಆಳವಾದ ಚಿ೦ತನೆಯ ಹೊಳಹು ನನ್ನನ್ನು ಸ್ವತಃ ತಟ್ಟಿದ್ದು ಮೈಸೂರಿನ ನಾಟಕೋತ್ಸವವೊಂದರಲ್ಲಿ. ಸಂಸ್ಕೃತ ನಾಟಕವೊಂದರ ಮಲೆಯಾಳಿ ಅವತರಣಿಕೆಯನ್ನು, ನಾಟಕದ ನಂತರದ ಚರ್ಚೆಯಲ್ಲಿ ಕುರ್ತುಕೋಟಿ ನಮಗಾಗಿ ಅರ್ಥೈಸಿದ್ದು ಈಗಲೂ ಮೈ ಝುಮ್ಮೆನ್ನಿಸುವ ಅನುಭವವಾಗಿ ಉಳಿದಿದೆ.
ಸದಾ ಎಲೆ ಅಡಿಕೆ ಮೆಲ್ಲುತ್ತಾ, ನಗುನಗುತ್ತಲೇ ಇದ್ದವರು ಕುರ್ತುಕೋಟಿಯವರು. ಸದಾ ನಗುಮುಖದ ನಿರಾಡಂಬರ ವ್ಯಕ್ತಿತ್ವದವರು. ಆಗಿಹೋದ ಸಾಹಿತಿಗಳು ಕಲಾಕಾರರನ್ನು ಮರೆತುಬಿಡುವ, ಅಥವಾ ಸಾಂಕೇತಿಕವಾಗಿ ಪೂಜಿಸುವ ನಮ್ಮ ಪ್ರವೃತ್ತಿಯನ್ನ ತಮ್ಮ ನಿಧನದ ಎರಡು ದಿನಗಳ ಮುಂಚೆಯಷ್ಟೆ ಸಾರ್ವಜನಿಕ ಸಭೆಯೊಂದರಲ್ಲಿ ನೆನಪಿಸಿಕೊಟ್ಟು ತೆರಳಿದ್ದಾರೆ ಉರಿಯ ನಾಲಗೆಯ ಕೀರ್ತಿನಾಥ ಕುರ್ತುಕೋಟಿಯವರು.
೦೮-೦೬-೨೦೦೩