ತಬ್ಬಲಿ

ತಬ್ಬಲಿ

ಒಲವೆಂಬ ಕಡಲುಕ್ಕಿ
ಎದೆ ದಡವ ಬಡಿವಾಗ
ನೆನಪೆಲ್ಲ ಮರುಕಳಿಸಿ
ನಿನ್ನ ಜೊತೆಗೆ ನಡೆವಾಗ
ನೋವೆಲ್ಲ ಕೀವಾಗಿ
ಉಮ್ಮಳಿಸಿ ಬರುವಾಗ
ಯಾರನ್ನು ನಾ ತಬ್ಬಲಿ?


ದಿನ ಪೂರ್ತಿ ದಿನಕರನ
ಸಾಯ್ ಎಂದು ಶಪಿಸುತ್ತ
ಸಾರಾಯಿ ಸಂಜೆಯಲಿ
ಶಾಯರಿಯ ಹಾಡುತ್ತ
ನಕ್ಷತ್ರಗಳ ನಡುವೆ
ನಂಟೊಂದನರಸುತ್ತ
ಬದುಕುತ್ತಿರೋ ತಬ್ಬಲಿ!


ಸತ್ತ ಪ್ರೀತಿಯ ಹೆಣವ
ಹೊತ್ತು ನಡೆಯುವ ಕೂಲಿ
ಎಷ್ಟು ದಿನ ನಾ ಮಾಡಲಿ?
ಅತ್ತತ್ತು ಬೇಸತ್ತು
ಸ್ವರಸತ್ತ ಮೌನದಲಿ
ನಾ ಹೇಗೆ ಬಿಕ್ಕಳಿಸಲಿ?

Rating
No votes yet