’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ
’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ ಒಂದು ಕಾಲದ ಇತಿಹಾಸವನ್ನು ತಿಳಿಯಲು ಆ ಕಾಲಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಆ ತಿಳುವಳಿಕೆ ಅಪೂರ್ಣ ಮತ್ತು ಸೀಮಿತವಾದುದಾಗಿರುತ್ತದೆ. ಆ ಕಾಲದಲ್ಲಿ ಆಳಿದ್ದವರ ಮತ್ತು ಹೆಚ್ಚೆಂದರೆ, ಅವರ ವಿರುದ್ಧ ಪಾಳೆಯದವರ ದೃಷ್ಟಿಕೋನಗಳ ಮೂಲಕ ಅಥವಾ ಅವೆರಡರ ನಡುವಿನ ಸಂಘರ್ಷದಲ್ಲಿ ಮೂಡುವ ಬದುಕಿನ ಸ್ಥೂಲ ಚಿತ್ರವಷ್ಟೇ ಅಲ್ಲಿ ದೊರಕಬಹುದು. ಈಚಿನ ದಿನಗಳಲ್ಲಿ ಇತಿಹಾಸವೆಂಬುದು ಸಾಹಿತ್ಯ, ಸಂಸ್ಕೃತಿ, ಸಮಾಜಶಾಸ್ತ್ರ ಇತ್ಯಾದಿ ನೆಲೆಗಳ ಒಂದು ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿರುವುದಾದರೂ, ಅದಕ್ಕಿನ್ನೂ ತಾನು ದಾಖಲಿಸುವ ಕಾಲಾವಧಿಯ ಮಾನವ ಸ್ಪಂದನೆಯ ಜೀವಂತ ಚಿತ್ರವನ್ನು ಕೊಡುವ ಶಕ್ತಿ ಸಂಪನ್ನವಾಗಿಲ್ಲ. ಬಹುಶಃ ಅದು ಅದರ ಉದ್ದೇಶವೂ ಆಗಿರಲಿಕ್ಕಿಲ್ಲ. ಅದರ ನಿಯೋಗಗಳೇ ಬೇರೆ ಇರಬಹುದು. ಆದರೆ ಒಂದು ಕಾಲಾವಧಿಯ ಔಪಚಾರಿಕ ಇತಿಹಾಸಕ್ಕೆ ಸಮಾನಂತರವಾಗಿ, ಆ ಕಾಲಾವಧಿಯ ದಾಖಲೆಯನ್ನು ಅನೌಪಚಾರಿಕವಾಗಿ ನಿರ್ಮಿಸುವ ಮನುಷ್ಯನ ಪ್ರಯತ್ನ ಅನಾದಿಯಾದದ್ದು. ಇದು ಅಧಿಕೃತವೆನ್ನಿಸುವ ಇತಿಹಾಸವನ್ನು ಧಿಕ್ಕರಿಸಬೇಕೆಂಬ ಸಾಮಾನ್ಯ ಮನುಷ್ಯನ ಆದಿಮ ತುಡಿತವೂ ಇರಬಹುದು. ಮುಖ್ಯವಾಗಿ ಈ ಧಿಕ್ಕಾರ ದಂತಕಥೆ, ಐತಿಹ್ಯ ಮತ್ತು ವಿವಿಧ ಜಾನಪದ ರೂಪಗಳಲ್ಲಿ ಅಭಿವ್ಯಕ್ತ್ತಗೊಂಡಿದೆ. ಆಧುನಿಕ ಕಾಲದಲ್ಲಿ ಈ ಅಭಿವ್ಯಕ್ತಿ ನಾಟಕ, ಕಥೆ, ಕಾದಂಬರಿಗಳ ಮೂಲಕ ಕಾಣಿಸಿಕೊಂಡಿದೆ. ಒಂದು ಕಾಲಾವಧಿಯ ಬದುಕಿನ ಕಥೆಯನ್ನು ಆ ಕಾಲದ ಜನವೇ ಸಾಹಿತ್ಯವಾಗಿ ಸೃಷ್ಟಿಸುವುದು ಬೇರೆ. ಆದರೆ ಆ ಕಾಲಾವಧಿಯಾಚೆ ನಿಂತು ಒಂದು ಮಾನಸಿಕ-ಇದರಲ್ಲಿ ರಾಜಕೀಯ, ಸಾಂಸ್ಕೃತಿಕವೂ ಸೇರಿರುತ್ತದೆ-ದೂರದಲ್ಲಿ ನಿಂತು, ಅದನ್ನು ಪುರ್ನಸೃಷ್ಟಿಸುವುದು ಬೇರೆ. ಮೊದಲನೆಯದರಲ್ಲಿ ಆ ಕಾಲದ ಪೂರ್ವಾಗ್ರಹಗಳು ಸೇರಿದ್ದರೆ, ಎರಡನೆಯದರಲ್ಲಿ ಈ ಕಾಲದ ಅನೇಕ ನೆಲೆಗಳ ಒತ್ತಾಯಗಳು ಸಮಾವೇಶಗೊಂಡಿರುತ್ತವೆ. ಆ ಕಾಲದ ಸತ್ಯದ ರೂಪಗಳನ್ನು ನಾವು ಬಹುಶಃ ಇವೆರಡರ ನಡುವೆ ಹುಡುಕಬೇಕಾಗುತ್ತದೆ. ಮನುಷ್ಯ ತನ್ನ ಇಂದಿನ ಬದುಕನ್ನು, ನಿನ್ನೆಯ ಸತ್ಯಗಳ ವಿಮರ್ಶೆ ಮಾಡುತ್ತಲೇ ಕಟ್ಟಿಕೊಳ್ಳುತ್ತಿರುತ್ತಾನೆ. ಆ ಮೂಲಕ ನಾಳೆಯ ಬದುಕಿನ ಅಸ್ತಿವಾರಗಳನ್ನೂ ಹಾಕಿಕೊಳ್ಳುತ್ತಿರುತ್ತಾನೆ. ಈ ಕಾರಣಕ್ಕಾಗಿ ಅವನಿಗೆ ಇತಿಹಾಸ ಮುಖ್ಯವೆನಿಸಿದೆ. ಹಾಗಾಗಿಯೇ ಇತಿಹಾಸವನ್ನು ಅರಿಯುವ ಅವನ ಪ್ರಯತ್ನಗಳೂ ಹೆಚ್ಚೆಚ್ಚು ವೈವಿಧ್ಯಮಯವೂ, ಸೃಜನಶೀಲವೂ ಆಗತೊಡಗಿವೆ. ಉದಾಹರಣೆಗೆ ಕನ್ನಡ ನಾಡಿನ ಚರಿತ್ರೆಯ ವಿಶಿಷ್ಟ ಘಟ್ಟವೆನಿಸಿರುವ ೧೨ನೇ ಶತಮಾನದ ಶರಣ ಚಳುವಳಿಯ ಬಗ್ಗೆ ಆ ಕಾಲದಿಂದ ಹಿಡಿದು ಈ ಕಾಲದವರೆಗೆ ಅದೆಷ್ಟು ಸಾಹಿತ್ಯ ಸೃಷ್ಟಿಯಾಗಿಲ್ಲ? ಪಾರಂಪರಿಕ ಸಾಹಿತ್ಯವಿರಲಿ, ನಮ್ಮದೇ ಕಾಲದಲ್ಲಿ ಅದೆಷ್ಟು ಕಾದಂಬರಿಗಳು, ನಾಟಕಗಳು ಆ ಕಾಲದ ಆ ಬೆಳವಣಿಗೆಗಳನ್ನು ಈ ಕಾಲಕ್ಕೆ ತೋರುಗೈಗಳನ್ನಾಗಿ ಕಟ್ಟಿಕೊಡಲು ಯತ್ನಿಸಿಲ್ಲ? ಒಂದೊಂದರದೂ ಒಂದೊಂದು ಹೊಸ ಒಳನೋಟ. ಮುಖ್ಯವಾಗಿ, ಬಿ. ಪುಟ್ಟಸ್ವಾಮಯ್ಯ, ಎಚ್.ತಿಪ್ಪೇರುದ್ರ ಸ್ವಾಮಿ, ಲಂಕೇಶ್, ಕಾರ್ನಾಡ್, ಶಿವಪ್ರಕಾಶ್ ಎಲ್ಲ ಸೇರಿ ೧೨ನೇ ಶತಮಾನದ ಆ ಮಹಾನ್ ಘಟನೆಯನ್ನು ನಮ್ಮ ಪಾಲಿಗೆ ಅರ್ಥಪೂರ್ಣಗೊಳಿಸಿಕೊಳ್ಳಲು, ಪ್ರಸ್ತುತಗೊಳಿಸಿಕೊಳ್ಳಲು ಪ್ರಯತ್ನಿಸಿರುವುದಾದರೂ ಏಕೆ? ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಶ್ರೀನಿವಾಸ ವೈದ್ಯರ ’ಹಳ್ಳ ಬಂತು ಹಳ್ಳ’ ಕಾದಂಬರಿಯನ್ನು ಇತ್ತೀಚೆಗೆ (ಎರಡನೇ ಬಾರಿಗೆ) ಓದಿದಾಗ ನನ್ನ ಮನಸ್ಸಿನಲ್ಲಿ ಹಾದು ಹೋದ ಆಲೋಚನೆಗಳಿವು. ’ಹಳ್ಳ ಬಂತು ಹಳ್ಳ’ ಕೂಡ ಒಂದು ಕಾಲಾವಧಿಯ ಇತಿಹಾಸವನ್ನು ತನ್ನದೇ ರೀತಿಯಲ್ಲಿ ಹೇಳುವ ಕಾದಂಬರಿ. ಈ ಕಾಲಾವಧಿ ನಮ್ಮ ಪಾಲಿಗೆ ೧೨ನೇ ಶತಮಾನದಷ್ಟೇ ಮುಖ್ಯವಾದ ಮತ್ತು ಒಂದು ರೀತಿಯಲ್ಲಿ ನಿರ್ಣಾಯಕವಾದ ಕಾಲಾವಧಿ. ಅದು ೧೯ನೇ ಶತಮಾನದ ಮಧ್ಯ ಭಾಗದಿಂದ ೨೦ನೇ ಶತಮಾನದ ಮಧ್ಯಭಾಗದವರೆಗೆ ಚಾಚಿಕೊಂಡಿರುವ ವಸಾಹತುಶಾಹಿ ವಿರೋಧಿ ರಾಷ್ಟೀಯ-ಸ್ವಾತಂತ್ರ್ಯ-ಹೋರಾಟದ ಕಾಲಾವಧಿ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಮೊದಲನೇ ಸ್ವಾತಂತ್ರ್ಯ ಹೋರಾಟವೆಂದು ಹೇಳಲಾಗುವ ೧೮೫೭ರ ಸಿಪಾಯಿ ದಂಗೆಯ ಪ್ರತಿಧ್ವನಿಗಳೊಂದಿಗೆ ಆರಂಭವಾಗುವ ಈ ಕಥನ, ಆ ಹೋರಾಟದ ಕೊನೆಯ ಘಟ್ಟವೆಂದು ಹೇಳಬಹುದಾದ ’ಭಾರತ ಬಿಟ್ಟು ತೊಲಗಿ’ ಚಳುವಳಿಯ ಪ್ರತಿಧ್ವನಿಗಳೊಂದಿಗೆ-ಸ್ವಾತಂತ್ರ್ಯ ಘೋಷಣೆಯ ಅಲ್ಲೋಲ ಕಲ್ಲೋಲಗಳೊಂದಿಗೆ-ಮುಗಿಯುತ್ತದೆ. ಈ ಕಾಲಾವಧಿಯಲ್ಲಿ ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬವೊಂದು ಹಾದು ಹೋಗುವ ವಿವಿಧ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ ಏಳುಬೀಳುಗಳು, ಅವು ಸೃಷ್ಟಿಸುವ ವೈವಿಧ್ಯಮಯ ಮಾನವೀಯ ಸಂದರ್ಭಗಳು; ಮತ್ತೆ ಅವೆಲ್ಲ ಸೇರಿ ಕಟ್ಟಿಕೊಡುವ ಆ ಕಾಲಾವಧಿಯ ಮತ್ತೊಂದು-ಶ್ರೀಸಾಮಾನ್ಯನ-ನೆಲೆಯ ಇತಿಹಾಸ, ಈ ಕಾದಂಬರಿಗೊಂದು ವಿಶೇಷ ಬೆಡಗನ್ನು ಪ್ರದಾನ ಮಾಡುತ್ತದೆ. ಶ್ರೀಸಾಮಾನ್ಯ ಎನ್ನುವುದೇ ಆಧುನಿಕ ಕಾಲದ ಒಂದು ಸಾಮಾಜಿಕ ದೃಷ್ಟಿಕೋನವಲ್ಲವೆ? ಹಾಗಾಗಿ ಈ ಕಾದಂಬರಿ ಆಧುನಿಕತೆ ಎಂಬುದು ನಮ್ಮ ಸಮಾಜದೊಳಕ್ಕೆ ಕಾಲಿಡತೊಡಗಿದ ಹೆಜ್ಜೆಯ ಸದ್ದುಗಳನ್ನು ದಾಖಲು ಮಾಡುವ ಮೂಲಕ ನಮ್ಮ ನವೋದಯ ಕಾಲದ ತಲ್ಲಣಗಳನ್ನು ಅದರೆಲ್ಲ ಸಾಮಾಜಿಕ-ಸಾಂಸ್ಕೃತಿಕ ದಟ್ಟ ವಿವರಗಳಲ್ಲಿ ಮರುಸೃಷ್ಟಿಸುತ್ತದೆ. ಆದರೆ ಇದೊಂದು ನವೋದಯ ಕಾಲದ ಕಾದಂಬರಿಯಂತೆ ನಮ್ಮ ಮುಂದೆ ಪ್ರಸ್ತುತಗೊಳ್ಳುವುದಿಲ್ಲ. ಇದೇ ಇದರ ನಿಜವಾದ ಹೆಚ್ಚುಗಾರಿಕೆಯಾಗಿದೆ. ಇದು ೨೧ನೇ ಶತಮಾನದ ಕಾದಂಬರಿ. ಈ ಕೃತಿ ಕಳೆದೊಂದು ಶತಮಾನದಲ್ಲಿ ಕನ್ನಡ ಕಾದಂಬರಿ ಸಾಧಿಸಿದ್ದನ್ನೆಲ್ಲ ಅರಗಿಸಿಕೊಂಡಂತೆ-ಆದರೆ, ಅದರ ಘನ ಗಂಭೀರ ಎತ್ತರಗಳಿಂದ ಕಿಂಚಿತ್ತೂ ವಿಚಲಿತವಾಗದೆ-ತನ್ನದೇ ಒಂದು ಹೊಸ ನಿರೂಪಣಾ ಶೈಲಿಯನ್ನು ಆವಿಷ್ಕರಿಸಿಕೊಂಡು, ಒಂದು ಲೋಕಾಭಿರಾಮಿ ಲಘು ನಾಟ್ಯ ಶೈಲಿಯಲ್ಲಿ ಒಂದು ಅತಿ ಗಂಭೀರ ಕಥನವನ್ನು ನಮ್ಮ ಮುಂದಿಡುತ್ತದೆ. ಇದು ಬರವಣಿಗೆಗೆ ಹೊಸಬರೆನಿಸಿರುವ ಶ್ರೀನಿವಾಸ ವೈದ್ಯರ ವಿಶಿಷ್ಟ ಸಾಧನೆ ಎಂದೇ ಹೇಳಬೇಕು. ’ಹಳ್ಳ ಬಂತು ಹಳ್ಳ’ ಅವರ ಮೊದಲ ಕಾದಂಬರಿ ಮತ್ತು ಎರಡನೇ ಕೃತಿಯಷ್ಟೇ! ಈ ಕಾದಂಬರಿ, ೧೮೫೭ರ ಸಿಪಾಯಿ ದಂಗೆಯ ಪ್ರತಿಧ್ವನಿಯಂತೆ ಎದ್ದಿದ್ದ ನರಗುಂದ ಬಂಡಾಯದ ಸಂದರ್ಭದಲ್ಲಿ ಕಾಶಿಯ ಬ್ರಾಹ್ಮಣ ತರುಣರಿಬ್ಬರು ನಾನಾ ಸಾಹೇಬನ ಸಂದೇಶವೊಂದನ್ನು ನರಗುಂದದ ದೇಸಾಯಿ ಬಾಬಾ ಸಾಹೇಬನಿಗೆ ತಲುಪಿಸುವ ಹಾದಿಯ ಕೊನೆಯಲ್ಲಿ ನವಲಗುಂದದ ಸರದಾರ ಅಪ್ಪಾ ಸಾಹೇಬನ ಬೇಹಿನವರ ಬಂಧನಕ್ಕೆ ಒಳಗಾಗುವ ಕುತೂಹಲಕರ ಸನ್ನಿವೇಶದೊಂದಿಗೆ ಆರಂಭವಾಗುತ್ತದೆ. ಈ ತರುಣರಲ್ಲಿ ಒಬ್ಬನಾದ ಕಮಲ ಪಂತ ಅಂದಿನ ಸಂದರ್ಭದ ಅನಿವಾರ್ಯತೆಗೆ ಸಿಕ್ಕಿ ಕಮಲಯ್ಯನಾಗಿ ನವಲಗುಂದದಲ್ಲೇ ವಿವಾಹಿತನಾಗಿ ನೆಲೆಸಬೇಕಾಗುತ್ತದೆ. ಈತನ ಕುಟುಂಬ ತನ್ನ ನಂತರದ ಎರಡು ತಲೆಮಾರುಗಳಲ್ಲಿ ಕನ್ನಡ ಸಮಾಜ-ಸಂಸ್ಕೃತಿಗಳಲ್ಲಿ ಲೀನವಾಗಿ; ಭಾರತದ ನವೋದಯದ ಭಾಗವಾಗಿ ಮೂಡಿದ ಕನ್ನಡ ಸಮಾಜದ ನವೋದಯದಲ್ಲಿ ಹೇಗೆ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ ಎಂಬುದನ್ನು ಈ ಕಾದಂಬರಿ ಕಥನ ಕಲೆಯ ಎಲ್ಲ ಕೌಶಲ್ಯಗಳೊಂದಿಗೆ ಪ್ರಸ್ತುತ ಪಡಿಸುತ್ತದೆ. ಈ ಕೃತಿ ಮೇಲ್ನೋಟಕ್ಕೆ ಬೇರು ಕಿತ್ತುಕೊಂಡು ಬಂದ ವ್ಯಕ್ತಿಯೊಬ್ಬನ ಕುಟುಂಬ ಮತ್ತೆ ಹೊಸ ನೆಲದಲ್ಲಿ ಬೇರಿಳಿಸಿ, ಹಲವು ಕೊಂಬೆಗಳ ವೃಕ್ಷವಾಗಿ ತನ್ನ ಆರ್ಥಿಕ ಭದ್ರತೆಯನ್ನೂ, ಸಾಮಾಜಿಕ ಸಮತೋಲನವನ್ನೂ ಕಂಡುಕೊಳ್ಳುವ ಕೌಟುಂಬಿಕ ಕಥೆಯಂತೆ ಕಂಡರೂ; ಆ ಕಥೆ ಕಟ್ಟಿಕೊಳ್ಳುವ ಕಾಲದ ಮಹಿಮೆಯಿಂದಾಗಿ, ಅದು ತನ್ನ ಕಥನದ ನೇಪಥ್ಯದಲ್ಲ್ಲಿ ನಮ್ಮ ರಾಷ್ಟ್ರೀಯ ಹೋರಾಟದ ಕಥೆಯೂ ಆಗಿ ಬೆಳೆಯುತ್ತದೆ. ಈ ಕಾಲಾವಧಿಯ ಇತಿಹಾಸ, ಗಾಂಧಿ-ನೆಹರೂ-ಪಟೇಲ್-ಟಿಳಕ್-ಸುಭಾಷರಂತಹ ’ನಾಯಕ’ರ ನೆಲೆಯಿಂದ ರಾಷ್ಟ್ರೀಯ ಹೋರಾಟದ ಕಥೆಯನ್ನು ಹೇಳುತ್ತದೆ. ಆದರೆ ಈ ಕಾದಂಬರಿ, ಈ ಮಹಾನಾಯಕರು ಸೃಷ್ಟಿಸಿದ ಈ ಇತಿಹಾಸದ ಹೆಬ್ಬಲೆಗಳಿಗೆ ಸಿಕ್ಕ ಕಮಲ ಪಂತ, ಅಪ್ಪಾ ಸಾಹೇಬ, ಶಿವಬಸಯ್ಯ, ವಾಸುದೇವಾಚಾರ್‍ಯ, ಹಳ್ಳದ ಮಠದ ಅಪ್ಪನೋರು, ಆದೋನಿ ಕೃಷ್ಟಪ್ಪ, ಚೌಘಡದ ಮುಗುದುಮ, ಶಿವರುದ್ರ, ಫಾಲಾಕ್ಷಿ, ರಜಬಿಲ್ಲಿ, ವೆಂಕಣ್ಣ, ತುಳಸಕ್ಕ, ಅಂಬಕ್ಕ, ರುಕುಮಾ, ನಾರಾಯಣ, ಬೋಧ, ರಾಮ, ಕೇಶವ ಮುಂತಾದ ಎರಡು-ಮೂರು ತಲೆಮಾರುಗಳ ಹಲವು ಸಾಮಾಜಿಕ-ಆರ್ಥಿಕ ಹಿನ್ನೆಲೆಗಳ ಸಾಮಾನ್ಯ ಜನ ಎದುರಿಸಿದ ಬದುಕಿನ ಸಂಕಟ, ಸವಾಲುಗಳ ಕಥೆ ಹೇಳುವ ಮೂಲಕ ರಾಷ್ಟ್ರೀಯ ಹೋರಾಟದ ಕಥೆಯನ್ನು ಒಂದು ಮಾನವ ಕುತೂಹಲದ ಕಥೆಯನ್ನಾಗಿ ಮಾರ್ಪಡಿಸುತ್ತದೆ. ಆ ಮೂಲಕ ಇತಿಹಾಸಕ್ಕೆ ಒಂದು ಸ್ಪಂದನಶೀಲತೆಯನ್ನು ಒದಗಿಸಿ, ಅದನ್ನು ನಮ್ಮ ಕಾಲಕ್ಕೆ ಮತ್ತೆ ಮತ್ತೆ ಪರಿಶೋಧಿಸಿಕೊಳ್ಳುವ ಸಾಧ್ಯತೆಗಳನ್ನು ತೆರೆದಿಡುತ್ತದೆ. ’ಹಳ್ಳ ಬಂತು ಹಳ್ಳ’ ನಮಗಿಂದು ಮುಖ್ಯವಾಗುವುದು ಇಲ್ಲಿ. ಇಂದು ಕುಟುಂಬ ಪ್ರಜ್ಞೆ ಮತ್ತು ರಾಷ್ಟ್ರೀಯತೆಗಳು ತಮ್ಮದೇ ಸಮರ್ಥನೆಗಳೊಂದಿಗೆ ಮುಕ್ಕಾಗಿ, ವಿಕ್ಷಿಪ್ತಗೊಂಡಿವೆ. ಹೀಗಾಗಿ ಅತಿ ಲೌಕಿಕವಾದಿಯಾದ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಸಾಮಾನ್ಯ ಭಾರತೀಯ ತನ್ನ ಆಧ್ಯಾತ್ಮಿಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಹಲವು ಸಂದಿಗ್ಧಗಳನ್ನು ಎದುರಿಸುತ್ತಿದ್ದಾನೆ. ಅದಕ್ಕೆ ಸುಲಭ ಪರಿಹಾರವಾಗಿ ಅವನು ಧರ್ಮದ ಹೆಸರಿನಲ್ಲಿ ಮತೀಯ ಮೂಲಭೂತವಾದದೆಡೆಗೆ ಸರಿಯುತ್ತಿರುವಂತೆ ತೋರುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಹೋರಾಟದ ರಾಜಕೀಯ ದರ್ಶನದ ಹಿಂದಿದ್ದ ಸಾಮಾಜಿಕ ಅನುಸಂಧಾನದ ಮಾದರಿಯನ್ನು ಮತ್ತೊಮ್ಮೆ ವಿವರವಾಗಿ ಪರಿಶೋಧಿಸುವ ಅಗತ್ಯ ಕಂಡುಬರುತ್ತಿದೆ. ಇಂತಹ ಪರಿಶೋಧನೆಯ ಒಂದು ಸೃಜನಶೀಲ ಮಾದರಿಯೆಂಬಂತೆ ಈ ಕಾದಂಬರಿ ನಮ್ಮ ಗಮನ ಸೆಳೆಯುತ್ತದೆ. ಈ ಅರ್ಥದಲ್ಲೇ ನಾನು ಇದನ್ನು ೨೧ನೇ ಶತಮಾನದ ಕಾದಂಬರಿ ಎಂದದ್ದು. ಈ ಕಾದಂಬರಿಯ ಹಿಂದಿರುವ ಕಣ್ಣು, ೧೯ ಮತ್ತು ೨೦ನೇ ಶತಮಾನವನ್ನು ನೋಡಿ ತನ್ನ ದೃಷ್ಟಿ ದಿಗಂತಗಳನ್ನು ವಿಸ್ತರಿಸಿಕೊಂಡಿರುವ ೨೧ನೇ ಶತಮಾನದ್ದು. ಈ ಕಾದಂಬರಿ ಒಂದು ಪಾರಂಪರಿಕ ನೆಲೆಯ ಕುಟುಂಬವನ್ನು ಹೊಸ ನೆಲೆಯಲ್ಲಿ-ಇಂಗ್ಲಿಷ್ ಶಿಕ್ಷಣದ ಮೂಲಕ-ಕಟ್ಟುವ ವಾಸುದೇವಾಚಾರರ ಸಾಹಸದ ಜೊತೆಗೇ, ಅವರ ಮಗ ರಾಮು ಹೊಸ ಆದರ್ಶಗಳ ಸೆಳೆತಕ್ಕೆ ಸಿಕ್ಕಿ ಪಾಲ್ಗೊಳ್ಳುವ ಹೊಸ ರಾಷ್ಟ್ರ ಕಟ್ಟುವ ಸಾಹಸವನ್ನೂ ಚಿತ್ರಿಸುತ್ತದೆ. ಇವೆರಡೂ ಕಾದಂಬರಿಯ ಹೊರ ವಿವರಗಳಲ್ಲಿ ಒಂದಕ್ಕೊಂದು ಸಂಬಂಧವಿಲ್ಲದಂತೆ(ವಾಸ್ತವವಾಗಿ ಮಗನ ಸಾಹಸ ತಂದೆಯಲ್ಲಿ ಕಿರಿಕಿರಿಯನ್ನುಂಟುಮಾಡುತ್ತದೆ) ನಡೆದರೂ, ಕಾದಂಬರಿಯಲ್ಲಿ ಹುಟ್ಟುವ ಒಳಧ್ವನಿ ಇವೆರಡೂ ಒಂದಕ್ಕೊಂದು ಸಂಬಂಧಪಟ್ಟಂತೇ ನಡೆದಿವೆ ಎಂಬುದನ್ನೇ ಸೂಚಿಸುತ್ತದೆ. ಈ ಕೃತಿಯಲ್ಲಿ ಹಲವು ಜಾತಿಗಳ, ಧರ್ಮಗಳ ಜನರಿದ್ದಾರೆ. ಅವರು ಅವರವರ ಜಾತಿ-ಧರ್ಮಗಳ ಮಿತಿಗಳಲ್ಲೇ ಪರಸ್ಪರ ಹೊಂದಾಣಿಕೆಯ, ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಜೊತೆಗೆ ಈ ಜಾತಿ-ಧರ್ಮಗಳ ಕಟ್ಟುಗಳು ದೈಹಿಕ, ಮಾನಸಿಕ ಹಾಗೂ ಪ್ರಾಕೃತಿಕ ಒತ್ತಾಯ-ಒತ್ತಡಗಳಿಗೆ ಸಿಕ್ಕಿ ಕಡಿದು ಬೀಳತೊಡಗಿರುವ ಸೂಚನೆಗಳೂ ಇಲ್ಲಿವೆ. ಇದರ ಪರಿಣಾಮವಾಗಿ, ಈ ಕಟ್ಟುಗಳಿಗೆ ದೈವಿಕ ಅಥವಾ ವೈಚಾರಿಕ ಆಧಾರಗಳೇನೂ ಇಲ್ಲವೆಂಬ ಒಂದು ಸ್ತರದ ಅರಿವು ಮೂಡಿಸುವ ಸಾಮಾಜಿಕ ಚಿತ್ರಣವೂ ಇಲ್ಲಿದೆ. ಇಂತಹ ಅರಿವಿನ ಹಾಸು-ಬೀಸುಗಳಲ್ಲೇ ಹೊಸ ರಾಷ್ಟ್ರದ ಅಮೂರ್ತ ಅಸ್ತಿವಾರ ಮೂಡುತ್ತದೆ. ಅದು ಬ್ರಾಹ್ಮಣ ವಿಧವೆ ಅಂಬಕ್ಕ ಕಾಣುವ ನರಕ ಸದೃಶ ಸಾವು, ಸ್ವಾತಂತ್ರ್ಯ ಹೋರಾಟಗಾರ ರಾಮುವಿನ ವೀರ ಮರಣ ಹಾಗೂ ಮುಸಲ್ಮಾನನಾಗಿ ಹುಟ್ಟಿದ ಕಾರಣಕ್ಕೇ ಮುಗುದಮ ಎದುರಿಸಬೇಕಾದ ಮತೀಯ ಹುಚ್ಚಾಚಾರದ ಕೊಲೆ-ಹೀಗೆ ಪರಸ್ಪರ ಸಂಬಂಧವಿಲ್ಲದ ನೆಲೆಗಳಲ್ಲಿ ಬಲಿಯನ್ನು ಬೇಡುತ್ತದೆ. ಇದರ ಹಿಂದೆ ಮನುಷ್ಯನ ಮನಸ್ಸನ್ನು ಮಂಕುಗೊಳಿಸುವ ಅಸಂಬದ್ಧ ಮತೀಯ ಆಚರಣೆಗಳ ಆಟವಿದೆ. ಇವೆಲ್ಲವನ್ನೂ ಅಪಾರ ಚಿತ್ರಕ ಶಕ್ತಿಯಿರುವ ತಮ್ಮ ಭಾಷೆಯಲ್ಲಿ ವರ್ಣಿಸುವ ಶ್ರೀನಿವಾಸ ವೈದ್ಯರು, ಔಚಿತ್ಯಪೂರ್ಣ ಮೌನ ಭಾಷ್ಯಗಳೊಂದಿಗೆ ಸಂಕಲಿಸಿ ನಿರೂಪಿಸಿರುವ ಪ್ರಬುದ್ಧ ರೀತಿ, ಕಾದಂಬರಿಗೊಂದು ರಚನಾತ್ಮಕ ಐಕ್ಯತೆ ಮತ್ತು ಉದಾರವಾದಿ ದೃಷ್ಟಿದೂರವನ್ನು ಒದಗಿಸಿದೆ. ಇಂತಹ ಐಕ್ಯತೆ ಮತ್ತು ದೃಷ್ಟಿದೂರಗಳಿಂದಾಗಿಯೇ ಕಾದಂಬರಿ ಈ ಊರನ್ನು ’ದ್ವೀಪ’ವಾಗಿಸಿದ್ದ ಹಳ್ಳದ ಮೇಲೆ ಸೇತುವೆಯೊಂದು ನಿರ್ಮಾಣವಾಗಿರುವ-ಆಧುನಿಕತೆಗೆ ತೆರೆದುಕೊಳ್ಳುವ-ಹೊಸ ಭರವಸೆಯ ಸೂಚನೆಯೊಂದಿಗೆ ಮುಕ್ತಾಯವಾಗುತ್ತದೆ. ಆದರೆ ಈ ಆಧುನಿಕತೆಯಾದರೂ ಎಂತಹುದು? ಕಾದಂಬರಿಯ ಆರಂಭದಲ್ಲಿ ನಾಯಕನ ಯಾವ ಗುಣವೂ ಇಲ್ಲದೆ ಊರಲ್ಲಿ ಹತ್ತರಲ್ಲಿ ಒಬ್ಬರಾಗಿದ್ದ ವಾಸುದೇವಾಚಾರ್‍ಯ, ಕಾದಂಬರಿಯ ಕೊನೆಯ ಹೊತ್ತಿಗೆ ತನ್ನ ಹಾಗೂ ತನ್ನ ಕುಟುಂಬದ ಬದುಕು ಕಟ್ಟಿಕೊಳ್ಳುವ ಸಂಕೀರ್ಣ ಸವಾಲಿನೆದುರಲ್ಲಿ, ತನ್ನ ವ್ಯಕ್ತಿತ್ವದ ಮೂಲ ಮಾತೃಕೆಗಳನ್ನು ಕಳೆದುಕೊಳ್ಳದ ಎಚ್ಚರದಲ್ಲಿ ಬದಲಾವಣೆಗಳನ್ನು ಆಳದ ಮೌನದಲ್ಲಿ ಸ್ವೀಕರಿಸುತ್ತಾ ಮಾಗುವ ಮೂಲಕ; ಇಡೀ ಊರಿನ ಗೌರವಕ್ಕೆ ಪಾತ್ರನಾಗುವ ಹಿರಿಯನಾಗಿ ಮೂಡಿ, ಕಾದಂಬರಿಯಲ್ಲಿ ತಾನೇ ತಾನಾಗಿ ವಿಕಾಸಗೊಳ್ಳುತ್ತಾ ಹೋಗುವ ಆಧುನಿಕತೆಗೆ ಪ್ರತೀಕವಾಗಿ ನಿಲ್ಲುತ್ತಾರೆ. ಈ ಪಾತ್ರದ ಹಿಂದೆ ತುಳಸಕ್ಕಳೆಂಬ ಅನಕ್ಷರಸ್ಥ, ಅದರೆ ಅಪಾರ ಪಾರಂಪರಿಕ ವಿವೇಕದ ಮಹಿಳೆಯಿದ್ದಾಳೆ ಎಂಬುದನ್ನೂ ನಾವು ಗಮನಿಸಬೇಕು. ಬಹುಶಃ ಈ ಕಾದಂಬರಿಗೆ ಕಂಡೂ ಕಾಣದಂತಹ ಒಂದು ಆಂತರಿಕ ಸಮತೋಲವನ್ನು ಒದಗಿಸಿರುವುದು, ಕಾದಂಬರಿಯುದ್ದಕ್ಕೂ ಸಹಜ ತಾಯ್ತನದ ಪ್ರತೀಕದಂತೆ ಮೂಡುವ ಈ ತುಳಸಕ್ಕನೇ. ಹಾಗಾದರೆ, ನಿಜವಾದ ಆಧುನಿಕತೆ ಎಂದರೆ ತಾಯ್ತನದೊಂದಿಗೆ ನಡೆಸುವ ಸೀಮೋಲ್ಲಂಘನೆಯೇ? ಇಂತಹ ಮುಖ್ಯ ಪ್ರಶ್ನೆಗಳನ್ನೆತ್ತುವ ಮೂಲಕವೇ ಸಾಹಿತ್ಯ ಕೃತಿಯೊಂದು ಇತಿಹಾಸವನ್ನು ಕಾಲದ ಹೊಸ ಸವಾಲುಗಳೆದುರಲ್ಲಿ ಕೆಣಕುತ್ತಾ, ಅದರಿಂದ ಹೊಸ ಅರ್ಥಗಳನ್ನೂ, ಸೂಚನೆಗಳನ್ನೂ ಹೊರಡಿಸುವ ಪ್ರಯತ್ನ ಮಾಡಬಲ್ಲುದು. ಹೀಗಾಗಿ ’ಹಳ್ಳ ಬಂತು ಹಳ್ಳ’ ಇತಿಹಾಸಕ್ಕೆ ಒಂದು ಹೊಸ ವಿಸ್ತರಣೆಯನ್ನು ನೀಡುವಂತಹ ಒಂದು ಸಮರ್ಥ, ಸಮೃದ್ಧ ಕೃತಿ ಎಂದು ಹೇಳಬಹುದು. ಬಹುಶಃ ಇದು ಎಚ್.ನಾಗವೇಣಿಯವರ ’ಗಾಂಧಿ ಬಂದ’ ನಂತರ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಕಾದಂಬರಿ ಕೂಡಾ. ’ಗಾಂಧಿ ಬಂದ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರಲಿಲ್ಲ. ಆದರೆ ಈ ವರ್ಷ ಅಕಾಡೆಮಿ ಅದನ್ನು ’ಹಳ್ಳ ಬಂತು ಹಳ್ಳ’ಕ್ಕೆ ನೀಡಿ ತನ್ನ ಪ್ರಶಸ್ತಿಯ ಘನತೆಯನ್ನು ಮರಳಿ ಪಡೆದಿದೆ ಎಂದು ಹೇಳಬಹುದು.