'ಯೇಗ್ದಾಗೆಲ್ಲಾ ಐತೆ' --ನೆಚ್ಚು ಮೂಡಿದ ಬಗೆ

'ಯೇಗ್ದಾಗೆಲ್ಲಾ ಐತೆ' --ನೆಚ್ಚು ಮೂಡಿದ ಬಗೆ

ಬರಹ

'ಬೆಳಗೆರೆ ಕೃಷ್ಣಶಾಸ್ತ್ರಿ'ಗಳು ಬರೆದಿರುವ ಅವರ ಸ್ವಾನುಭವದ ಒಂದು ಕಥನ- 'ಯೇಗ್ದಾಗೆಲ್ಲಾ ಐತೆ'. 'ಮುಕುಂದೂರು ಸ್ವಾಮಿ'ಗಳ ನಿತ್ಯ ಜೀವನದ ತಂತುಗಳನ್ನು ತಮ್ಮ ಅನುಭವಗಳೊಂದಿಗೆ ಹೇಳುತ್ತಾ ಹೋಗುವ ರೀತಿ ನಿಜಕ್ಕೂ ಅಪ್ಯಾಯಮಾನವಾದುದು. ಕನ್ನಡ ಆಧ್ಯಾತ್ಮಿಕ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿರುವ ಕೃಷ್ಣಶಾಸ್ತ್ರಿಗಳು ಪ್ರಸ್ತುತ ಬರಹದಲ್ಲಿ ಯಾವುದೋ ಒಂದು ಅರಿಯದ ಲೋಕಕ್ಕೆ ನಮ್ಮನ್ನು ಕರೆದುಕೊಂಡುಹೋಗುತ್ತಾರೆ. ಈ ಅನುಭವವನ್ನು ಪಡೆಯಲೋಸುಗವಾದರೂ ಪ್ರತಿಯೊಬ್ಬರೂ ಇದನ್ನು ಓದಲೇಬೇಕಿದೆ. ನಾನು 'ಅಶಿಸ್ತಿನಿಂದ ಬದುಕಿರಿ ಆರೋಗ್ಯವಾಗಿರಿ' ಎಂಬ ಪುಸ್ತಕವನ್ನು ಓದುವಾಗ ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಬಗೆಗೆ ಉಲ್ಲೇಖವಿದುದ್ದನು ಕಂಡು ಮನೆಯಲ್ಲಿಯೇ ಇದ್ದೂ ನಾನಿನ್ನು ಓದದಿದ್ದ ಪುಸ್ತಕದ ಬಗೆಗೆ ಗಮನ ಹರಿಯಿತು.ಮುಂಜಾನೆ ಓದಲು ಕುಳಿತವಳಿಗೆ ಅದನ್ನು ಓದಿ ಮುಗಿಸುವವರೆಗೂ ಯಾವುದೇ ವಿಷಯದ ಮೇಲೂ ಗಮನವಿಲ್ಲದ್ದಂತು ನಿಜ. ನನ್ನ ಕೈಲಿದ್ದದ್ದು 2007ರಲ್ಲಿ 7ನೆಯ ಮುದ್ರಣವನ್ನು ಕಂಡಿದ್ದ ಪುಸ್ತಕ. 1994ರಿಂದ 2007ರ ಅಂತರದಲ್ಲಿ 7 ಮುದ್ರಣಗಳನ್ನು ಕಂಡಿರುವ ಇದರ ಪ್ರಾಮುಖ್ಯವನ್ನು ನಾವು ಓದಿಯೇ ಅರಿಯಬೇಕು.

'ಮುಕುಂದೂರು ಸ್ವಾಮಿ'ಗಳು ಜಗತ್ತಿನ ಯಾವುದೇ ಆದರ್ಶವನ್ನು ಮೀರಿದ ಒಂದು ಚೇತನ. ಸಣ್ಣವರಲ್ಲಿ ಸಣ್ಣವರಾಗಿದ್ದುಕೊಂಡು ತಮ್ಮನ್ನು ತಾವು ಎಂದೂ ನಾನು-ತಾನು ಎಂದು ಕರೆದುಕೊಳ್ಳದೇ ಅವನು ಇವನು ಎಂತಲೇ ಕರೆದುಕೊಳ್ಳುತ್ತಾ, ಪ್ರಾಣಿ-ಪಕ್ಷಿ, ಹೂವು, ಗಾಳಿ ಮೋಡ ಎಲ್ಲವನ್ನೂ ಮಾತನಾಡಿಸುತ್ತಾ ವಿಶೇಷವಾದ ಶಕ್ತಿಯುಳ್ಳವರಾಗಿದ್ದೂ, ಏನೂ ತಿಳಿಯದ ಪಾಮರರಂತೆ ಉಳಿದುಬಿಡುವ ಬಗೆ ನಿಜಕ್ಕೂ ಸೋಜಿಗವೇ ಸರಿ. ಅವರ ಸಾಮಾನ್ಯವಾದ ನುಡಿಗಳು, ಮಾತಿನ ನಡುವೆ ಉದಾಹರಿಸುವ ವಸ್ತುಗಳು ಇವೆಲ್ಲಾ ಏನೇನು ವಿಶೇಷವಿಲ್ಲದವೆನಿಸುವಂಥವು. ಆದರೆ ಅಪಾರವಾದ ಜೀವನಾನುಭವದ ನುಡಿಮುತ್ತುಗಳವು. ದಿನಕ್ಕೆ ಐದು ಬಾರಿ ಸ್ನಾನ ಮಾಡುವ ಜನರನ್ನು ಕಂಡು ದಿನಕ್ಕೆ ಐದು ಸಲ ಮೈಲಿಗೆ ಯಾಕಾಗುತ್ತಾರಂತೆ ಎಂದು ಕೇಳುವ ಅವರ ಮಾತುಗಳಲ್ಲಿ ಎಷ್ಟು ಸತ್ಯವಿದೆಯಲ್ಲವೇ. ಕೈಯಲ್ಲಿ ಸಿಗರೇಟ್ ಹಿಡಿದು ಬರುವ ಮಠಾಧಿಪತಿಗಳೊಬ್ಬರನ್ನು ತಮಗಿಂತಲೂ ಕಿರಿಯರಾದವರನ್ನು ಯಾವುದೇ ಮುಜುಗರವಿಲ್ಲದೇ ಪಾದಪೂಜೆ ಮಾಡುವ ಅವರ ಹಿರಿಯತನದ ಮುಂದೆ ಆ ಮಠಾಧಿಪತಿಗಳು ತೀರ ಸಣ್ಣವರಾಗಿ ಕಂಡುಬಿಡುತ್ತಾರೆ. ತಮಗೆ ಅವಮಾನ ಮಾಡಲೆಂದೇ ಕೆಲವು ಜನ ತುಂಬಿದ ಸಭೆಯಲ್ಲಿ ಭಗವದ್ಗೀತೆಯ ಸಾರವನ್ನು ಹೇಳಿ ಎಂದು ಕೇಳಿದಾಗ, ಇಡೀ ದಿನ ಜನರನ್ನು ಮಂತ್ರ ಮುಗ್ಧರಾಗುವಂತೆ ಅದರ ಸಾರವನ್ನು ಹೇಳಿ ಓಡಿಹೋಗುವ ಅವರ ನಡವಳಿಕೆ ಆಶ್ಚರ್ಯವನ್ನುಂಟುಮಾಡುತ್ತದೆ. ಕೃಷ್ಣಶಾಸ್ತ್ರಿಗಳು ಯಾವುದೇ ಉತ್ಪ್ಸ್ರೇಕ್ಷೆಯಿಲ್ಲದೇ ಮುಕುಂದೂರು ಸ್ವಾಮಿಗಳ ಬಗ್ಗೆ ತಾವು ದಿನನಿತ್ಯ ಕಂಡ ಘಟನೆಗಳನ್ನು ವಿವರಿಸುತ್ತಾ ಹೋಗುವುದರಿಂದ ನಾವು ಅದರ ಪ್ರಭಾವಲಯಕ್ಕೆ ಸಿಲುಕಿಬಿಡುತ್ತೇವೆ. ಖಂಡಿತವಾಗಿಯೂ ಎಲ್ಲರೂ ಓದಲೇಬೇಕಾದ ಪುಸ್ತಕವಿದು. ಅಪಾರವಾದ ಜೀವನಪಾಠವನ್ನು ಒಳಗೊಂಡಿರುವ ಸಾಮಾನ್ಯ ವ್ಯಕ್ತಿಯೊಬ್ಬರ ಅಸಾಮಾನ್ಯ ಕಥೆಯಿದು.