'ಪರ್ವ' -ಕುತೂಹಲಗಳಿಗೊಂದು ಆಶಾದಾಯಕ ಉತ್ತರ

'ಪರ್ವ' -ಕುತೂಹಲಗಳಿಗೊಂದು ಆಶಾದಾಯಕ ಉತ್ತರ

ಬರಹ

ನಾನು ಈ ಮುಂಚೆ ಭೈರಪ್ಪನವರ ಕಾದಂಬರಿಗಳನ್ನು ಯಾಕೋ ಹೆಚ್ಚು ಓದಿಯೇ ಇಲ್ಲ. ಅದರಿಂದ ನಾನು ಎಂತಹ ತಪ್ಪು ಮಾಡಿದ್ದೆನೆಂದು ನನಗೆ ಇತ್ತೀಚೆಗೆ ತಿಳಿಯಹತ್ತಿತ್ತು. ಅವರ ಆವರಣ,ದಾಟು,ಗೃಹಭಂಗ ಕಾದಂಬರಿಗಳನ್ನು ಅವು ದೊರೆತಾಗಿನಿಂದ ಒಂದೇ ಉಸಿರಿಗೆ ಓದಿ ಮುಗಿಸಿದ್ದೆ. ಆದರೆ ಭೈರಪ್ಪನವರ 'ಪರ್ವ' ಕಾದಂಬರಿ ಮನೆಯಲ್ಲೆ ಇದ್ದರೂ ಆಮೇಲೆ ಓದಿದರಾಯ್ತೆಂಬ ಉದಾಸೀನ. ಅವರ ಕಾದಂಬರಿಗಳ ಮೇಲೆ ಒಲವು ಬೆಳೆದಿದ್ದರೂ,ಇದು ಮಹಾಭಾರತದ ಕಥೆಯಲ್ಲವೇ ಓದೋಣ ಎಂಬ ಮುಂದೂಡುವಿಕೆಯ ನಂತರ ಕಳೆದ ವಾರ ಅದನ್ನು ಕೈಗೆ ತೆಗೆದುಕೊಂಡೆ. ಕಾದಂಬರಿಯ ಆರಂಭ ಶಲ್ಯ ಮತ್ತು ಆತನ ಮೊಮ್ಮಗಳ ಮಾತಿನೊಂದಿಗೆ ಆಗುವುದರೊಂದಿಗೆ ನಾನೂ ಅಲ್ಲೇ ಕುಳಿತು ಕುತೂಹಲದಿಂದ ಆಲಿಸುತ್ತಿರುವವಳ ಹಾಗೆ ನಾನೂ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಸಮಾಧಾನಗೊಂಡು ಮುಂದುವರೆದಂತೆ ಓದತೊಡಗಿದೆ. ನಾನು ಮಹಾಭಾರತದ ಬಗ್ಗೆ ತಕ್ಕಮಟ್ಟಿಗೆ ತಿಳುವಳಿಕೆ ಹೊಂದಿದವಳಾದರೂ, ಭೈರಪ್ಪನವರು ಹೊಸ ಭಾರತವನ್ನೇ ನನ್ನ ಮುಂದೆ ತೆರೆದಿಟ್ಟಿದ್ದರು. ನಾನೆಂದಿಗೂ ಸರಿಯಾಗಿ ತಿಳಿದಿರಲಿಲ್ಲ ಎಂದು ನನಗೆ ಆಗ ಅನಿಸಿತ್ತು. ಭೀಷ್ಮನ ವಯಸ್ಸು ಕುರುಕ್ಷೇತ್ರದ ಸಮಯದಲ್ಲಿ 120 ವರ್ಷ ನಡೆಯುತ್ತಿತ್ತೆಂದು ನನ್ನ ಮನಸ್ಸಿನಲ್ಲಿ ಬಂದೇ ಇರಲಿಲ್ಲ. ಓದುತ್ತಾ ,ಓದುತ್ತಾ ಹೌದಲ್ವಾ, ಹೀಗೇ ನಡೆದಿರಬಹುದಲ್ವಾ ಎಂದು ಪ್ರತಿಯೊಂದು ಪಾತ್ರದ ಬಗೆಗೂ ಅನ್ನಿಸತೊಡಗಿತು. ಐದು ಜನ ಗಂಡಂದಿರನ್ನು ಪಡೆದು ಯಾರೊಬ್ಬರಿಂದಲೂ ನಿಜವಾದ ಪ್ರೀತಿಯನ್ನು ಪಡೆಯಲಾಗದೇ ನರಳುವ ದ್ರೌಪದಿ, ತನ್ನ ಮಕ್ಕಳು ಅಶ್ವತ್ಥಾಮನಿಂದ ಹತರಾದಾಗ ಐದು ಜನ ಗಂಡಂದಿರ ಸಂತೈಕೆಯಿಲ್ಲದೇ ಸಿಡಿದೇಳುವ ರೀತಿಯಲ್ಲಿ ನಮಗೆ ಭಾರತದ ವಾಸ್ತವತೆ ಕಾಣುತ್ತದೆ. ಕುರುಕ್ಷೇತ್ರದ ಸಲುವಾಗಿ ಘಟೋತ್ಕಚನ ಬಳಿ ಸಹಾಯ ಕೇಳಲು ಬರುವ ಭೀಮ ತಾನು ಹಿಡಿಂಬೆಗೆ ಮಾಡಿದ ಮೋಸದ ಸಲುವಾಗಿ ಹಿಂಜರಿಯುವಾಗ ನಮಗೆ ಮಹಾಭಾರತದ ಅರಿವು ಮೂಡುತ್ತದೆ. ಇಲ್ಲಿ ಎಲ್ಲರ ಮನಸ್ಸು ಮಾತನಾಡುತ್ತವೆ. ಕೃಷ್ಣ,ಅತಿಶಯ ಬುದ್ಧಿಯುಳ್ಳ ಸಾಮಾನ್ಯ. ಅದರಿಂದಲೇ ನಮಗೆ ಹತ್ತಿರ. ಸಾತ್ಯಕಿಯಂತೂ ಸಮುದ್ರ ದಡದ ಊರಾದ ದ್ವಾರಕೆಯ ಬೇಸಿಗೆಯ ಝಳವನ್ನು ನಮಗೂ ಮುಟ್ಟಿಸಿಬಿಡುತ್ತಾನೆ. ಹದಿನೆಂಟು ದಿವಸದ ಕುರುಕ್ಷೇತ್ರ ಯುದ್ಧದ ಬಗ್ಗೆ ನನಗೆ ಒಂದು ಅಸಾಮಾನ್ಯವಾದ ಕಲ್ಪನೆಯೇ ಹೆಚ್ಚಿತ್ತು. ಆದರೆ ಭೈರಪ್ಪನವರು ಅದನ್ನು ನನ್ನಿಂದ ಹೋಗಲಾಡಿಸಿದರು. ಯಾಕೆಂದರೆ ಇಲ್ಲಿ ಪ್ರತಿ ದಿನದ ಯುದ್ಧದ ನಂತರ ಬಂದು ಸೇರುವ ರಣಹದ್ದುಗಳು,ನರಿ,ತೋಳಗಳು,ಸಾಮ್ರಾಟ,ಸಾಮಾನ್ಯನೆನ್ನದೇ ಎಲ್ಲರ ಮುಖ,ಮೈಗಳನ್ನು ಕಿತ್ತುತಿನ್ನುವ ವಾಸ್ತವ ನಮ್ಮನ್ನು ಕಲ್ಪನಾ ಲೋಕದಿಂದ ಹೊರತರುತ್ತದೆ. ರಾಜನಿಗೆ ಹುಟ್ಟಿದರೂ ಸೂತರೆಂದೆನಿಸಿಕೊಳ್ಳುವ ಜನ, ಅಳಿದುಳಿದ ಜನ ಯುದ್ಧಾನಂತರ ಸತ್ತ ತಮ್ಮ ಬಂಧುಗಳನ್ನು ತೊರೆದು ಯುದ್ಧಭೂಮಿಯಲ್ಲಿ ಆಭರಣ,ರಥಗಳನ್ನು ಲೂಟಿ ಮಾಡುವಾಗ ನಮಗೆ ಪ್ರಸ್ತುತತೆಯ ಅರಿವು ಮೂಡುವುದಂತೂ ಸತ್ಯ. ಅಗಾಧವಾದ ಮಾಹಿತಿದಾಯಕವಾದ 'ಪರ್ವ' ನನ್ನಲ್ಲಿ ಮೂಡಿಸಿದ ಸಾಕಷ್ಟು ಅರಿವುಗಳಲ್ಲಿ ಇವು ಕೆಲವು ಮಾತ್ರ. ಅದನ್ನು ಮತ್ತೊಮ್ಮೆ,ಮಗದೊಮ್ಮೆ ಓದಿ ನನ್ನ ಕುತೂಹಲವನ್ನು ತಣಿಸಿಕೊಳ್ಳಬೇಕಿದೆ.