ಸಾಹಸಿ ಪಯಣಿಗರ ನೂರೆಂಟು ಗಂಟುಗಳು

ಸಾಹಸಿ ಪಯಣಿಗರ ನೂರೆಂಟು ಗಂಟುಗಳು

ಬರಹ

ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ. ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್. ವಿದ್ಯಾರಣ್ಯರವರು. ಈ ಬೃಹತ್ ಪುಸ್ತಕದಲ್ಲಿ ಯೂರೋಪಿನ ಲೇಖಕರು ಬರೆದಿರುವ ಮೂರು ವಿಭಿನ್ನ ರೀತಿಯ ಪ್ರಯಾಣದ ಕಾದಂಬರಿಗಳಿವೆ. ಮೂಲ ಕಾದಂಬರಿಯನ್ನು ಓದಿದಷ್ಟೇ ಆಪ್ತವೆನಿಸುವ ಇಲ್ಲಿಯ ಕಾದಂಬರಿಗಳೆಲ್ಲಾ ಬೇರೆ ಬೇರೆ ಭೌಗೋಳಿಕ ಹಿನ್ನಲೆಯಿರುವ ಜನರ, ಸಮಾಜದ, ಸಂಸ್ಕೃತಿಯ ಮತ್ತು ಅಲ್ಲಿನ ಮೌಲ್ಯಗಳನ್ನು ಎದುರಿಸುವ ಮತ್ತು ಅಲ್ಲಿ ತನ್ನ ಸರ್ವಾಧಿಕಾರ ಸಾಧಿಸಲು ಪ್ರಯತ್ನಿಸುವ ಅಧಿಕಾರ ಶಾಹಿ ವರ್ಗವನ್ನು ವಿಢಂಬನಾತ್ಮಕವಾಗಿ ತೆರೆದಿಡುವುದಲ್ಲದೆ ಮುಂದೆ ನಡೆಯಬಹುದಾದ ಸರ್ವಾಧಿಕಾರ ಧೋರಣೆಗಳನ್ನು ಸೂಕ್ಷ್ಮವಾಗಿ ಪರಿಚಯಿಸುತ್ತವೆ. ಈ ಪುಸ್ತಕದಲ್ಲಿ ಕಾದಂಬರಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಜೋನಥಾನ್ ಸ್ವಿಫ್ಟ್‍ನ `ಗಲಿವರಾಯಣ', ಎರಡನೆ ವಿಭಾಗದಲ್ಲಿ ಡೇನಿಯಲ್ ಡೀಫೋನ `ರಾಬಿನ್‍ಸನ್ ಕ್ರುಸೋ' ಮತ್ತು ಮೂರನೆ ವಿಭಾಗದಲ್ಲಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂಪ್ರದಕ್ಷಿಣೆ' ಕಾದಂಬರಿಗಳಿವೆ. ಗಲಿವರಾಯಣದಲ್ಲಿ ಮೂರು ಕಾದಂಬರಿಗಳಿವೆ. ನಮಗೆಲ್ಲಾ ಗೊತ್ತಿರುವ ಗಲಿವರಾಯಣದ ಕಥೆ ಲಿಲಿಪುಟ್‍ಗಳ ದೇಶದ ಕಥೆ. ಸಾಧಾರಣವಾಗಿ ಪ್ರಾಥಮಿಕ ಶಾಲೆಯಿಂದಲೇ ಈ ಕಥೆಯನ್ನು ಓದಿರುತ್ತೇವಾದರೂ ಇಡೀ ಕಥೆಯನ್ನು ಆಸ್ವಾಧಿಸಬೇಕಾದರೆ ಗಲಿವರಾಯಣದ ಮೊದಲ ಕಾದಂಬರಿ `ಲಿಲಿಪುಟ್‍ಗಳ ನಾಡಿನಲ್ಲಿ' ಅನ್ನು ಓದಲೇಬೇಕು. ಗಲಿವರ್ ಒಬ್ಬ ವೈದ್ಯನಾಗಿ ನಾವಿಕನಾಗುವ ಕನಸು ಕಾಣುತ್ತಾನೆ. ಅವನು ಹಡಗಿನಲ್ಲಿ ವೈದ್ಯನಾಗಿಯೂ ಸೇರುತ್ತಾನೆ. ಅಲ್ಲಿಂದ ಅವನ ಸಮುದ್ರಯಾನ ಆರಂಭವಾಗುತ್ತದೆ. ಅವನ ಹಡಗು ಅಲೆಗಳ ಹೊಡೆತಕ್ಕೆ ಸಿಕ್ಕಿ ಅಪಘಾತವಾಗುತ್ತದೆ. ಅಲ್ಲಿಂದ ಬದುಕುಳಿದ ತನ್ನ ಸಹಪ್ರಯಾಣಿಕರ ಜೊತೆಗೆ ದೋಣಿಯಲ್ಲಿ ಕುಳಿತು ದಡ ತಲುಪುವ ಪ್ರಯತ್ನ ಮಾಡುತ್ತಾನೆ. ದೋಣಿ ಕೂಡ ದುರಂತಕ್ಕೀಡಾಗಿ ಅವನೊಬ್ಬನೇ ಅಪರಿಚಿತ ನಾಡಿಗೆ ಬರುತ್ತಾನೆ. ಅವನಿಗೆ ಬೆಳಿಗ್ಗೆ ಎಚ್ಚರವಾದಾಗ ಇರುವೆಯಂತ ಪುಟಾಣಿ ವೀರರು ಅವನನ್ನು ಬಂಧಿಸಿರುತ್ತಾರೆ. ಆ ಲಿಲಿಪುಟ್‍ಗಳ ಭಾಷೆ ಅರ್ಥವಾಗದೆ ಸನ್ನೆಯಲ್ಲಿ ತನ್ನ ಬಾಯಾರಿಕೆ, ಹಸಿವುಗಳನ್ನು ತಿಳಿಸುತ್ತಾನೆ. ಅವನ ಸನ್ನೆಯನ್ನು ಅರ್ಥೈಸಿಕೊಂಡು ಅವನಿಗೆ ಬೇಕಾದ ಆಹಾರ, ಪಾನೀಯಗಳನ್ನು ಒದಗಿಸುತ್ತಾರೆ. ಆ ದೇಶದ ರಾಜನ ವಿಶ್ವಾಸ ಗೆದ್ದು ಅವರಲ್ಲಿಯೇ ಒಬ್ಬನಾಗುತ್ತಾನೆ ಗಲಿವರ್. ಆದರೂ ಅಲ್ಲಿಯ ಅರಸನಿಗೆ ಗಲಿವರನ ಮೇಲೆ ಸಂಶಯವಿರುತ್ತದೆ. ಇದಕ್ಕೆ ಕಾರಣ ಆತ ಒಮ್ಮೆ ಲಿಲಿಪುಟ್ ಜನರಿಂದ ತಪ್ಪಿಸಿಕೊಂಡು ಬ್ಲೆಫೆಸ್ಕೋದ ಜನರನ್ನು ಭೇಟಿಯಾಗಿರುತ್ತಾನೆ. ಬ್ಲೆಫೆಸ್ಕೋ ಅರಸನ ವಿರೋಧಿಯಾಗಿರುವ ಲಿಲಿಪುಟ್ ಅರಸ ಮುಂದೆ ಗಲಿವರನ ಸಹಾಯದಿಂದ ಅವನನ್ನು ಎದುರಿಸಲು ಸಿದ್ಧವಾಗುತ್ತಾನೆ. ಆದರೆ ಆ ಎರಡು ದೇಶಗಳ ನಡುವೆ ಶಾಂತಿ, ಸಂಧಾನಕ್ಕೆ ನೆರವಾಗುತ್ತಾನೆ ಗಲಿವರ್. ಕೊನೆಗೆ ತನ್ನ ದೇಶಕ್ಕೆ ಹಿಂತಿರುಗಬೇಕೆನ್ನುವ ಅವನ ತುಡಿತದಂತೆ ಗಲಿವರ ಬ್ಲೆಫೆಸ್ಕೋದ ಅರಸನ ಸಹಾಯದಿಂದ ತನ್ನ ದೇಶಕ್ಕೆ ಮರಳುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಹಿರಿ ಕಿರಿಯರಿಂದ ಎಲ್ಲರಿಗೂ ಆಪ್ತವೆನಿಸುತ್ತದೆ ಈ ಕಾದಂಬರಿ. ಗಲಿವರನ ಮುಂದಿನ ಪಯಣ ಬ್ರಾಬ್ಡಿಂಗ್‍ನ್ಯಾಗ್ ನಾಡಿನ ಪ್ರವಾಸ. ಅಲ್ಲಿ ಲಿಲಿಪುಟ್‍ಗಳ ಹಾಗೇ ಆದರೆ ವ್ಯತಿರಿಕ್ತವಾಗಿರುವ ದೈತ್ಯ ಜನರ ದರ್ಶನವಾಗುತ್ತದೆ. ಒಬ್ಬ ರೈತನ ಕೈಗೆ ಸಿಕ್ಕಿ, ಅವನ ಕೈಗೊಂಬೆಯಾಗುತ್ತಾನೆ. ಆ ರೈತ ಅವನನ್ನು ಒಬ್ಬ ಜೋಕರ್‍‍ನ ಹಾಗೆ ನಡೆಸಿಕೊಳ್ಳುತ್ತಾನೆ. ಮಾತ್ರವಲ್ಲ, ಅವನನ್ನು ಪ್ರದರ್ಶನಕ್ಕಿಟ್ಟು ಹಣಗಳಿಸುತ್ತಾನೆ. ಇದರಿಂದ ಅವನಿಗೆ ತುಂಬಾ ಬೇಸರವಾಗುತ್ತದೆ. ಬಂಧನದಿಂದ ಮುಕ್ತಿ ಹೊಂದಬೇಕೆನ್ನುವ ಅದಮ್ಯ ಬಯಕೆಯಿರುತ್ತದೆ. ಆದರೆ ಆ ರೈತ, ತನಗೆ ಅವನು ಇನ್ನು ಉಪಯೋಗವಿಲ್ಲವೆನ್ನುವ ನಿರ್ಧಾರಕ್ಕೆ ಬಂದು ಅವನನ್ನು ಆ ನಾಡಿನ ರಾಜನಿಗೆ ಮಾರುತ್ತಾನೆ. ಇವನ ಮೋಜನ್ನು ಮೆಚ್ಚಿಕೊಳ್ಳುವ ರಾಜನ ಪರಿವಾರ ಅವನೊಂದಿಗೆ ಅನ್ಯೋನ್ಯವಾಗಿರುತ್ತದೆ. ಅಲ್ಲಿಯ ಭಾಷೆಯನ್ನು ಕಲಿತು ರಾಣಿಯ ಮನಸ್ಸನ್ನೂ ಗೆದ್ದು ಅರಮನೆಯಲ್ಲಿ ಉಳಿಯುತ್ತಾನೆ. ಕೊನೆಗೆ ತಾನು ಸ್ವತಂತ್ರವಾಗಿ ಜೀವಿಸಲು ಹಾತೊರೆದು ಅಲ್ಲಿಂದ ಹೊರಗೆ ಬರುತ್ತಾನೆ. ಬಲಶಾಲಿಗಳ ಮುಂದೆ ಬಲಹೀನರ ಪಾಡನ್ನು ತೆರೆದಿಡುತ್ತದೆ ಈ ಕಾದಂಬರಿ. ಇನ್ನು ಮೂರನೆಯ ಕಾದಂಬರಿ `ಹ್ವಿನಿಮ್ ನಾಡಿನ ಪ್ರವಾಸ'; ಬಹಳ ಕುತೂಹಲಕರವಾಗಿಯೂ, ವಿಚಿತ್ರವಾದ ಅನುಭವಕ್ಕೂ ಒದಗುವ ಕಥೆ. ಹ್ವಿನಿಮ್‍ಗಳ ನಾಡಿನಲ್ಲಿ ಮನುಷ್ಯರೇ ಇಲ್ಲ! (ಈ ಕಲ್ಪನೆಯೇ ವಿಚಿತ್ರವಾಗಿದೆ) ಬದಲಾಗಿ ಅಲ್ಲಿ ಹ್ವಿನಿಮ್ (ಕುದುರೆ)ಗಳದ್ದೇ ಕಾರುಬಾರು. ಬುದ್ಧಿಜೀವಿಗಳೆಂದು ತಮ್ಮನ್ನು ತಾವು ಗುರುತಿಸಿರುವ ಆ ಹ್ವಿನಿಮ್‍ಗಳು ಯಾಹು (ಗೋರಿಲ್ಲಗಳನ್ನು ನೆನಪಿಸುವಂತ ಪ್ರಾಣಿ) ಗಳನ್ನು ತಮ್ಮ ಅಡಿಯಾಳನ್ನಾಗಿ ಮಾಡಿಕೊಂಡಿರುತ್ತವೆ. ಆ ಯಾಹುಗಳು ಎಷ್ಟು ಗಲೀಜಾಗಿರುತ್ತವೆಯೆಂದರೆ ಯಾರೂ ಅವುಗಳ ಹತ್ತಿರ ಸುಳಿಯುವುದಿಲ್ಲ! ಇಲ್ಲಿ ಶೋಷಿತ ವರ್ಗವನ್ನು ನೆನಪಿಸುವ ಯಾಹುಗಳು ಮತ್ತು ಅಧಿಕಾರಿ ವರ್ಗದ ಹ್ವಿನಿಮ್‍ಗಳು ಅಲ್ಲಿಗೆ ಬರುವ ನಾಯಕ ಗಲಿವರನನ್ನು ವಿಚಿತ್ರವಾಗಿ ಕಾಣುತ್ತವೆ. ಯಾಹುಗಳಂತೆ ಕಾಣುವ ಅವನನ್ನು ಹ್ವಿನಿಮ್‍ಗಳು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಅವನ ಬುದ್ಧಿವಂತಿಕೆಯನ್ನು ಕಂಡು ಅವನಿಗೆ ಬೇಕಾಗುವ ಎಲ್ಲಾ ಸಹಾಯವನ್ನೂ ಮಾಡುತ್ತವೆ. ಮುಂದೆ ನಾಯಕ ಅವನು ಅಲ್ಲಿಯ ಭಾಷೆಯನ್ನು ಕಲಿತು, ಅಲ್ಲಿನ ರೀತಿ ನೀತಿಗಳನ್ನು ತನಗರಿವಿಲ್ಲದಂತೆ ತನ್ನ ಬದುಕಿನಲ್ಲೂ ಒಗ್ಗಿಸಿಕೊಂಡಿರುತ್ತಾನೆ. ಅವನ ಈ ಬದಲಾವಣೆ ಅವನಿಗೆ ಹಡಗಿನಲ್ಲಿ ಮರಳಿ ತನ್ನ ನಾಡಿಗೆ ಬರುವಾಗ ಅನುಭವಕ್ಕೆ ಬರುತ್ತದೆ. ಈ ಮೂರು ಕಾದಂಬರಿಗಳಲ್ಲಿಯೂ ಕಾಣುವ ಸಾಮಾನ್ಯ ವಿಷಯವೆಂದರೆ ಬಲಶಾಲಿಯಾದ ಮನುಷ್ಯ ತನ್ನ ಅಧಿಕಾರದಿಂದ ಬಲಹೀನರನ್ನು ಶೋಷಣೆ ಮಾಡುತ್ತಾ ಅವರನ್ನು ತನ್ನ ಸ್ವಾಧೀನಕ್ಕೆ ಒಳಪಡಿಸುತ್ತಾನೆ. ಅಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಾನೆ. ಡೇನಿಯಲ್ ಡೀಫೋನ ಕಾದಂಬರಿ ರಾಬಿನ್ ಕ್ರೂಸೋದಲ್ಲಿ ಪಾಶ್ಚಿಮಾತ್ಯರ ಸಾಹಸಗಾಥೆಯನ್ನು ತೆರೆದಿಡುತ್ತದೆ. ರಾಬಿನ್ ಕ್ರೂಸೋ ತನ್ನ ಅನ್ವೇಷಣಾ ಬುದ್ಧಿಯಿಂದ ತಾನು ಪ್ರಯಾಣಿಸುತ್ತಿರುವ ಹಡಗು ಅಪಘಾತವಾದಾಗ ಒಬ್ಬಂಟಿಯಾಗಿ ದ್ವೀಪಕ್ಕೆ ಬಂದು ಅಲ್ಲಿ ತನಗೆ ಬೇಕಾದ ಹಾಗೆ ಬದುಕುತ್ತಾನೆ. ಮೇಲ್ನೋಟಕ್ಕೆ ಮನುಷ್ಯನ ಏಕಮುಖವನ್ನು ಪರಿಚಯಿಸಿದರೂ ಇಲ್ಲಿ ಮನುಷ್ಯ ಹೇಗೆ ಒಂದು ಕಡೆ ನೆಲೆ ನಿಂತು ತನಗೆ ಬೇಕಿದ್ದವುಗಳನ್ನು ತನ್ನ ಸುತ್ತಮುತ್ತಲಿಂದ ಗಳಿಸಿಕೊಳ್ಳುತ್ತಾನೆ ಅನ್ನುವುದನ್ನು ಚಿತ್ರಿಸಿದೆ ಈ ಕಾದಂಬರಿ. ಮಾತ್ರವಲ್ಲ, ಅಲ್ಲಿ ಎದುರಾಗುವ ಭೌಗೋಳಿಕ ಅನಾಹುತಗಳು, ಸಮಸ್ಯೆಗಳು, ತೊಂದರೆಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಎದುರಿಸಿ ಭದ್ರವಾಗಿ ನೆಲೆಯೂರುತ್ತಾನೆನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇನ್ನು ಮೂರನೆಯ ವಿಭಾಗದಲ್ಲಿರುವ ಕಾದಂಬರಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂ ಪ್ರದಕ್ಷಿಣೆ' ಕುತೂಹಲ ಭರಿತ ಕಾದಂಬರಿ. ಶ್ರೀಮಂತ, ಪ್ರಾಮಾಣಿಕ ಮತ್ತು ಗಂಭೀರ ವ್ಯಕ್ತಿತ್ವದ ಒಬ್ಬಂಟಿ ಫಿಲಿಯಾಸ್ ಫಾಗ್ ತನ್ನ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿ ಭೂ ಪ್ರದಕ್ಷಿಣೆ ಮಾಡಿಕೊಂಡು ಬರುವ ಕಥಾ ವಸ್ತುವಿರುವ ಈ ಕಾದಂಬರಿ ಕೊನೆಯವರೆಗೂ ಉಸಿರು ಬಿಗಿ ಹಿಡಿದು ಓದುವಂತೆ ಪ್ರೇರೆಪಿಸುತ್ತದೆ. ಆಗಿನ ಕಾಲದಲ್ಲಿ ಹಡುಗು ಮತ್ತು ರೈಲುಗಳ್ಳಲ್ಲಿಯೇ ಭೂ ಪ್ರದಕ್ಷಿಣೆ ಮಾಡುವುದೆಂದರೆ ಊಹೆಗೂ ನಿಲುಕದ ವಿಷಯ. ಫಾಗ್ ತನ್ನ ಹೊಸ ಕೆಲಸದಾಳು ಪಾಸ್ ಪರೋತನ ಜೊತೆಗೆ ಲಂಡನ್‍ನಿಂದ ತಮ್ಮ ಪ್ರಯಾಣ ಆರಂಭಿಸುತ್ತಾರೆ. ಆ ಸಮಯದಲ್ಲಿ ಲಂಡನ್‍ನ ಬ್ಯಾಂಕೊಂದರಲ್ಲಿ ದರೋಡೆಯಾಗಿರುತ್ತದೆ. ಫಾಗ್ ಭೂ ಪ್ರದಕ್ಷಿಣೆ ಹೊರಡುವುದನ್ನು ತಿಳಿದಿರುವ ಪತ್ತೇದಾರ ಫಿಕ್ಸ್, ಅಷ್ಟೊಂದು ಹಣವನ್ನು ಖರ್ಚು ಮಾಡಿಕೊಂಡು ಭೂ ಪ್ರದಕ್ಷಿಣೆ ಹೊರಟ ಫಾಗೇ ಬ್ಯಾಂಕ್‍ನ ಹಣ ಕದ್ದಿರುವ ವ್ಯಕ್ತಿಯೆಂದು ಅವರನ್ನು ಹಿಂಬಾಲಿಸಿ ಬರುತ್ತಾನೆ. ಅವರನ್ನು ಬಂಧಿಸುವಲ್ಲಿ ವಾರಂಟ್ ಬರದೆ ಪ್ರತೀ ಪ್ರಯಾಣದಲ್ಲಿಊ ವಿಳಂಭವಾಗುತ್ತದೆ. ಬ್ರಿಟಿಷರ ವಸಹಾತಿನಲ್ಲೇ ಅವರನ್ನು ಬಂಧಿಸಬೇಕೆಂದು ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ ವಾರೆಂಟ್ ಅವನ ಕೈ ಸೇರುವಲ್ಲಿ ವಿಳಂಭವಾಗಿರುತ್ತದೆ. ತಮ್ಮ ನಿಗಧಿತ ಸಮಯದಂತೆ ಪ್ರಯಾಣ ಮುಂದುವರಿಸುವಲ್ಲಿ ಫಾಗ್‍ರವರಿಗೆ ಅಡೆತಡೆಗಳಾಗುತ್ತವೆ. ಭಾರತದಲ್ಲಿ ಸತಿಗೆ ಹೋಗಬೇಕಿರುವ ಹೆಣ್ಣು ಔದಾಳನ್ನು ರಕ್ಷಿಸಲು ಹೋಗಿ ತಾವೇ ಆಪತ್ತಿನಲ್ಲಿ ಸಿಲುಕುತ್ತಾರೆ. ನಂಬಿಕಸ್ಥ ಆಳು ಪಾಸ್ ಪರೋತನ ಚಾಣಾಕ್ಷ ಬುದ್ಧಿಯಿಂದ ಪ್ರತಿಯೊಂದು ಸಂಕಂಟದಿಂದಲೂ ಪಾರಾಗುತ್ತಾರೆ. ಆಯಾ ದೇಶಗಳಿಗನುಗುಣವಾಗಿ ತಮ್ಮ ಕೈ ಗಡಿಯಾರದ ಸಮಯವನ್ನು ಬದಲಾಯಿಸುವ ಫಾಗ್ ಮತ್ತು ತಾನು ಹೊರಟಲ್ಲಿಂದ ಸಮಯವನ್ನು ಸರಿಹೊಂದಿಸದ ಪಾಸ್ ಪರೋತ, ಸತಿಯ ಹೆಣ್ಣು ಔದಾ, ಪತ್ತೇದಾರ ಫಿಕ್ಸ್ ಎಲ್ಲರೂ ತಮ್ಮ ತಮ್ಮ ಗುರಿ ತಲುಪುದನ್ನೇ ಕಾಯುತ್ತಿರುತ್ತಾರೆ. ಕೊನೆಗೂ ಬ್ರಿಟನ್ ತಲುಪುವ ಮೊದಲೇ ಪತ್ತೇದಾರ ಫಿಕ್ಸ್ ಅವರನ್ನು ಬಂಧಿಸುತ್ತಾನೆ. ಆದರೆ ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ. ಇದರಿಂದಾಗಿ ಎರಡು ದಿವಸಗಳಷ್ಟು ತಡವಾಗಿ ತಮ್ಮ ಗಮ್ಯ ತಲುಪುತ್ತಾರೆ ಫಾಗ್. ನೊಂದ ಅವರು ತನ್ನನ್ನು ನಂಬಿ ಬಂದ ಔದಾಳಿಗೂ ಏನಾದರೊಂದು ದಾರಿ ಮಾಡಿಕೊಡುವುದೆಂದು ನಿರ್ಧರಿಸುವಾಗ ಅವಳು ತನ್ನ ಮನಸ್ಸಿನಲ್ಲಿರುವುದನ್ನು ಹೇಳುತ್ತಾಳೆ. ಅವಳನ್ನು ಮದುವೆಯಾಗಲು ಮುಂದಾಗುವ ಫಾಗ್ ಮದುವೆಯ ದಿನವನ್ನು ನಿರ್ಧರಿಸಲು ಪಾಸ್ ಪರೋತನನ್ನು ಚರ್ಚಿಗೆ ಕಳುಹಿಸುತ್ತಾರೆ. ಆಗ ಶನಿವಾರದಂದು ಮದುವೆ ಸಾಧ್ಯವಿಲ್ಲವೆಂದು ಹಿಂದಕ್ಕೆ ಬರುತ್ತಾನೆ ಪಾಸ್ ಪರೋತ. ಸತ್ಯದ ಅರಿವಾಗುವುದು ಆಗ. ಸಮಯ ಬದಲಾಯಿಸದ ಪಾಸ್ ಪರೋತನ ಗಡಿಯಾರ ಸತ್ಯವನ್ನು ಬಿಚ್ಚಿಡುತ್ತದೆ. ಅವರಿಗೆ ಆಶ್ಚರ್ಯವಾಗಿ ದಿನಗಳನ್ನು ಲೆಕ್ಕ ಹಾಕುತ್ತಾರೆ. ಪಂದ್ಯ ಮುಗಿಯಲು ಇನ್ನೂ ಕೆಲವೇ ಕ್ಷಣಗಳಿದ್ದಾಗ ಫಾಗ್ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಅಲ್ಲಿಗೆ ಹೋಗುತ್ತಾರೆ. ಪಂದ್ಯದಲ್ಲಿ ಗೆದ್ದ ಅವರನ್ನು ಸ್ನೇಹಿತರೆಲ್ಲಾ ಅಭಿನಂದಿಸುತ್ತಾರೆ. ಈ ಬೃಹತ್ ಪುಸ್ತಕದ ಐದು ಕಾದಂಬರಿಗಳಲ್ಲಿಯೂ ತುಂಬಾ ಆಪ್ತವೆನಿಸುವ ಕಾದಂಬರಿ ಇದು. ಅದಕ್ಕೆ ಕಾರಣ ಫಾಗ್‍ರವರ ಪ್ರಯಾಣ ಭಾರತದ ಮೂಲಕ ನಡೆಯುವುದು ಆಗಿರಬಹುದು. ಇಲ್ಲಿನ ಭೌಗೋಳಿಕ ಹಿನ್ನಲೆ, ಪದ್ಧತಿಗಳು, ಆಚಾರ ವಿಚಾರಗಳು ಈ ಕಾದಂಬರಿಯಲ್ಲಿ ಕಾಣಸಿಗುತ್ತದೆ. ಹೀಗೆ ಈ ಮೂರು ವಿಭಾಗಳಲ್ಲಿಯೂ ವಿಭಿನ್ನ ಕಾದಂಬರಿಗಳಿದ್ದು ಎಲ್ಲವೂ ಒಂದೊಂದು ರೀತಿಯ ಪ್ರಯಾಣದ ಅನುಭವವನ್ನು ನೀಡುತ್ತವೆ. ಇಲ್ಲಿ ಆಪ್ಯವೆನಿಸುವುದು ವಿದ್ಯಾರಣ್ಯರ ಭಾಷಾ ಹಿಡಿತ. ಮೂಲ ಕಾದಂಬರಿಯನ್ನು ಓದಿದಷ್ಟೇ ಸುಖ ಇಲ್ಲಿದೆ. ನಿಜವಾಗಿಯೂ ಕನ್ನಡಕ್ಕೆ ಈ ಕಾದಂಬರಿಗಳನ್ನು ತುರ್ಜುಮೆ ಮಾಡಿರುವ ಲೇಖಕರು ಅಭಿನಂದನಾರ್ಹರು. ಈ ಕಾದಂಬರಿ ಚಾರುಮತಿ ಪ್ರಕಾಶನ, 12, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು - 560 050; ಫೋ.ಸಂ. 94428 35553 ಇವರು ಪ್ರಕಟಿಸಿದ್ದಾರೆ. ಪುಸ್ತಕದ ಬೆಲೆ ರೂ. 280/- ಮಾತ್ರ. ಪುಟಗಳು - 552