"ಜಿಲೇಬಿ"ಯ ಮೆಲುಕು
ಒಟ್ಟೂ ಮೂವತ್ತೈದು ’ಜಿಲೇಬಿ’ಗಳಿರುವ ಪೊಟ್ಟಣ, ಕವಿ ಶ್ರೀ ಜಯಂತ ಕಾಯ್ಕಿಣಿಯವರ ಕವನ ಸಂಕಲನ ’ಒಂದು ಜಿಲೇಬಿ’. ಇದರಲ್ಲಿರುವ ’ಜಿಲೇಬಿ’ಗಳು ಒದ್ದಕ್ಕಿಂತ ಒಂದು ಸ್ವಾದಿಷ್ಟ. ಸೂಕ್ಷ್ಮಾತಿಸೂಕ್ಷ್ಮ, ಸಾಮಾನ್ಯ ಅಥವಾ ಕ್ಷುಲ್ಲಕ ಎನಿಸಬಹುದಾದ ವಸ್ತು, ವಿಷಯಗಳೂ ಒಂದು ಪ್ರಬುದ್ಧ ಸಂವೇದನಶೀಲ ಕವಿಮನಸ್ಸನ್ನು ತಟ್ಟಿದಾಗ ಹೇಗೆ ಆಕಾರ, ಸ್ವಾದವನ್ನು ಪಡೆಯಬಲ್ಲದು ಎಂಬುದನ್ನು ’ಜಿಲೇಬಿ’ಯ ತುಂಬ ಕಾಣಬಹುದು. ಇಲ್ಲಿನ ಕೆಲವು ಪಂಕ್ತಿಗಳು ನಾವು ಎಂದೋ ನೋಡಿದ ದೃಶ್ಯವನ್ನು ಕಣ್ಣಮುಂದೆ ಮೂಡಿಸುತ್ತವೆ, ಇನ್ನು ಕೆಲವು ಬಾಲ್ಯದ ಯಾವುದೋ ನೆನಪನ್ನು ನೆನಪಿಸುತ್ತವೆ, ಮತ್ತೆ ಕೆಲವು ಬವಿಷ್ಯದ ಕನಸನ್ನು ಸ್ಫುರಿಸುತ್ತವೆ, ಇನ್ನು ಕೆಲವು ಸಾಲುಗಳು ನಮ್ಮೊಳಗಿನ ಮುಗ್ಧತೆಯನ್ನು ಜಾಗ್ರತಗೊಳಿಸುತ್ತವೆ, ಒಂದು ತರಹದ ಅವ್ಯಕ್ತ ಆನಂದದಿಂದ, ಸಣ್ಣ ನೋವಿನಿಂದ ಕಣ್ಣುಗಳನ್ನು ತೇವಗೊಳಿಸುತ್ತವೆ, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಬೆಸೆಯುವ ಸ್ನೇಹವನ್ನು ಎದೆಯಲ್ಲಿ ಚಿಮ್ಮಿಸುತ್ತವೆ.
ಉದಾಹರಣೆಗಾಗಿ ಒಂದೆರಡು ಪಂಕ್ತಿಗಳನ್ನು ನೋಡುವುದಾದರೆ...
’ಸುಂಕ’ ಎಂಬ ಕವನದ ಸಾಲುಗಳು
ಹಳೇ ಸಂಕ ಲಡ್ಡಾಗಿದೆ
ಅದರ ಮೇಲೆ ಬರೇ ತಂಗಾಳಿಯ ಪದಯಾತ್ರೆ
ಪಕ್ಕದಲ್ಲೇ ಹೊಸ ಸೇತುವೆ ವಾಹನಗಳಿಗೆ
ಈ ಸಾಲುಗಳು ಕಟ್ಟಿಕೊಡುವ ಚಿತ್ರವನ್ನು ನೋಡೋಣ, ಒಂದು ಹಳೆಯ ಸಂಕ; (ಸಂಕ ಅಂದರೆ ಸಣ್ಣ ಹೊಳೆಗೆ ಕಟ್ಟಿರುವ ಸೇತುವೆ, ಮರದ ದಿಮ್ಮಿಯನ್ನೋ, ಅಡಿಕೆ ಮರವನ್ನೋ ಅಡ್ಡಹಾಕಿ ಮಾಡಿರುತ್ತಾರೆ, ಕರಾವಳಿ/ಮಲೆನಾಡಿನ ಕಡೆ ಕಾಣಬಹುದು), ಅದರ ಪಕ್ಕದಲ್ಲಿ ಹೊಸದಾಗಿ ವಾಹನ ಸಂಚಾರಕ್ಕಾಗಿ ನಿರ್ಮಿಸಿರುವ ಹೊಸ ಸೇತುವೆ, ಹೊಸ ಸೇತುವೆ ತೆರೆದಿದ್ದರೂ ಹಳೆಯ ಸಂಕ ಇನ್ನೂ ಇದೆ, ಅದನ್ನು ಈಗ ಯಾರೂ ಬಳಸುತ್ತಿಲ್ಲ, ಅದರ ಮೇಲೆ ತಂಗಾಳಿ ಮಾತ್ರ ಬೀಸುತ್ತದೆ. ಮುಂದುವರಿಯುತ್ತ....
ಹಳೇ ಸಂಕದ ಕಂಬಗಳು ಇನ್ನೂ ಮಜಬೂತು
ಹೊಳೆ ಪೂರ್ತಿ ದಾಟಲು ಮನಸ್ಸಿಲ್ಲದೆ
ಅರ್ಧಕ್ಕೆ ನಿಂತು ನಗುವ ಅಜ್ಜನ
ಉಬ್ಬು ಧಮನಿಯ ಕಾಲುಗಳಂತೆ
ಇಲ್ಲಿ ನರಗಳು ಉಬ್ಬಿಕೊಂಡಿರುವ ಅಜ್ಜನ ಕಾಲುಗಳನ್ನು ಗಮನಿಸಿರುವ ಸೂಕ್ಷ್ಮತೆಯನ್ನು ಕಾಣಬಹುದು, ಹಾಗೆಯೇ ಸಂಕದ ಕಂಬಗಳನ್ನು ಅಜ್ಜನ ಸದೃಢ ಕಾಲುಗಳಿಗೆ ಹೋಲಿಸಿರುವುದು ತುಂಬ ಸ್ವಾರಸ್ಯಕರವಾಗಿದೆ.
’ಸಣ್ಣಸೊಲ್ಲು’ ಎಂಬ ಕವನ ನಮ್ಮ ದಿನನಿತ್ಯದ (ಹೆಚ್ಚಾಗಿ ಋಣಾತ್ಮಕ ವಿಚಾರ ಉಳ್ಳವರ)ಬದುಕಿನಲ್ಲಿ ಆಗಾಗ ಘಟಿಸುವ ’ತಾನೊಂದು ಬಗೆದರೆ.....’ ಎಂಬಂತಹ ವಿಷಯಗಳ ಸುತ್ತಮುತ್ತ ಸುತ್ತಿಕೊಂಡಿದೆ. ಉದಾಹರಣೆಗೆ ಅಂಗಿ ಅಂಗಡಿಯಲ್ಲಿ ಅಳತೆಗಳ ರಗಳೆ
ಸರಿ ಸೈಜು ಸಿಕ್ಕಿದರೆ ಅಡ್ನಾಡಿ ಬಣ್ಣ
ಆದರೂ ಕೊಂಡು ನಡೆದರೆ ಅದಕೆ
ಮುಂದಿನಂಗಡಿಯಲ್ಲಿ ಅರ್ಧ ಬೆಲೆಯಣ್ಣ
ಈ ಸಾಲುಗಳಲ್ಲಿರುವ ತಿಳಿಹಾಸ್ಯವನ್ನು ಗಮನಿಸಬಹುದು.
’ಪೋರ’ ಎಂಬ ಕವನದ ಒಂದು ಸಾಲು
’ಶಾಲೆ ಬೇಗ ಬಿಡಿಸಿಕೊಂಡು ಬಂದವನಂತೆ ಚಿಮ್ಮಿ ಬರುವ...’
ನಮ್ಮ ಶಾಲದಿನಗಳಲ್ಲಿ ಅವಧಿಗೆ ಮೊದಲೇ ಹೊಟ್ಟೆನೋವು ಅಂತಲೋ, ಮನೆಗೆ ನೆಂಟರು ಬಂದಿದ್ದಾರೆ ಅಂತಲೋ ಅಥವಾ ಇನ್ಯಾವುದೋ ನೆವ ಹೇಳಿ ಮಾಸ್ತರರು/ಅಕ್ಕೋರು(ಸರ್/ಮ್ಯಾಡಮ್)ಗಳಿಂದ ಅನುಮತಿ ಪಡೆದು ಭತ್ತದ ಗದ್ದೆಬಯಲಿನ ಹಾಳಿಕಂಟ(ಬದು)ದ ಮೇಲೆ ಓಡಿ ಮನೆಗೆ ಬರುವ ಮಜ ಇತ್ತಲ್ಲ, ಈ ಮೇಲಿನ ಸಾಲು ಮತ್ತೊಮ್ಮೆ ನಮ್ಮನ್ನು ಆ ಉತ್ಸಾಹಪೂರ್ಣ ಬಾಲ್ಯಕ್ಕೆ ಎಳೆದುಕೊಂಡುಹೊಗಿಬಿಡುತ್ತದೆ. ಹಳ್ಳಿಯ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರು ಇದನ್ನು ಅನುಭವಿಸಬಲ್ಲರು.
ಓದುವ ಮುನ್ನ.....
ಇಲ್ಲಿನ ಕವನಗಳಲ್ಲಿ ಕರಾವಳಿಯ ಪರಿಮಳ ಯಥೇಚ್ಛವಾಗಿದೆ, ಕೆಲವೆಡೆ ಕಾಮಾಟಿಪುರದ ಹುಡುಗಿಯ ಮನದ ಕಮಟಿದೆ, ನಗರದ ಬದುಕಿನ ವಾಸನೆಯಿದೆ. ಅನೇಕ ವಿಷಯಗಳು, ಶಬ್ದಗಳು(ಅಡ್ನಾಡಿ, ಪೋರ, ಶಾಲೆ ಬಿಡಿಸಿಕೊಂಡು... ಇತ್ಯಾದಿ) ಕರಾವಳಿಯ ಬದುಕಿನಲ್ಲಿ ಚಿರಪರಿಚಿತವಾದವು. ಕವಿಯ ಬದುಕಿನ ಹಾಗೂ ಕರಾವಳಿಯ ಪರಿಸರದ, ಜೀವನದ ಪರಿಚಯ ಉಳ್ಳವರು ಇಲ್ಲಿನ ಸಾಲುಗಳನ್ನು ಇನ್ನೂ ಆನಂದಿಸಬಲ್ಲರು. ಜಯಂತ ಗೋಕರ್ಣದ ಕಡಲ ಕಿನಾರೆಯ ಗಾಳಿ ಸೇವಿಸುತ್ತ ಬೆಳೆದವರು, ಮುಂಬಯಿ ಮಹಾನಗರದಲ್ಲಿ ಊಳಿಗ ಮಾಡಿದವರು, ಅನೇಕ ಊರುಗಳನ್ನು ಸುತ್ತಿದವರು. ಅವರ ಕವನಗಳನ್ನು ಆಸ್ವಾದಿಸುವ ಮೊದಲು, ಅವರದೇ ಆದ ಉತ್ಕೃಷ್ಟ ಬರಹಗಳ ಸಂಕಲನ ’ಬೊಗಸೆಯಲ್ಲಿ ಮಳೆ’ ಮತ್ತು ’ಶಬ್ದ ತೀರ’ಗಳನ್ನು ಓದಬಹುದು. ಕವನದಲ್ಲಿರುವ ಸಂಕೀರ್ಣತೆ ಮತ್ತು ಪ್ರತಿಮೆಗಳ ಬಳಕೆ ಗದ್ಯದಲ್ಲಿ ಕಡಿಮೆ ಇರುವುದರಿಂದ ಸುಲಭವಾಗಿ ಆನಂದಿಸಬಹುದು, ಹಾಗೆಯೇ ಕವನದ ಕೆಲ ಸಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಬಲ್ಲದು. ಉದಾಹರಣೆಗೆ ಕೀರ್ತಿಶೇಷರಾದ ಶ್ರೀ ಶಿವರಾಮ ಕಾರಂತರ ಮರಣದ ಸಂದರ್ಭದಲ್ಲಿ ಹುಟ್ಟಿದ ’ತೀರದ ಭಾರ್ಗವ’ ಎಂಬ ಕವನದ ಭಾವವನ್ನು ’ಬೊಗಸೆಯಲ್ಲಿ ಮಳೆ’ ಸಂಕಲನದ ’ಬಾಲವನದ ಒಂಟಿ ಜೋಕಾಲಿ’ ಎಂಬ ಲೇಖನದಲ್ಲಿ ಸ್ಪಷ್ಟವಾಗಿ ಕಾಣಬಹುದು.
’ಒಂದು ಜಿಲೇಬಿ’ ಕವನ ಸಂಕಲನ ಚಿತ್ರಾನ್ನ ತಿಂದಹಾಗೆ ಗಬಗಬನೆ ತಿಂದು, ಓದಿ ಮುಗಿಸುವ ಗ್ರಂಥವಲ್ಲ. ಜಿಲೇಬಿಯ ಒಂದೊಂದು ಕಾಲನ್ನು ಬಾಯಲ್ಲಿಟ್ಟು ಮೆಲ್ಲನೆ ಮೆಲುಕುತ್ತ ಅಸ್ವಾದಿಸುವಂಥದ್ದು.