’ಭೈರಪ್ಪಾಭಿನಂದನಾ’ ಗ್ರಂಥ : ಒಂದು ಮೌಲಿಕ ಕೃತಿ
ಈಚೆಗೆ ನನ್ನ ಕೈಗೊಂದು ಮೌಲಿಕ ಕೃತಿ ಸಿಕ್ಕಿತು. ಕೊಂಡಜ್ಜಿ ಕೆ. ವೆಂಕಟೇಶ್ ಸಂಪಾದಿಸಿರುವ ’ಭೈರಪ್ಪಾಭಿನಂದನಾ’ ಗ್ರಂಥ ಅದು. ೧೯೯೩ರಲ್ಲಿ ಪ್ರಥಮ ಮುದ್ರಣವಾಗಿ ಹೊರಬಂದು ೨೦೦೫ರಲ್ಲಿ ದ್ವಿತೀಯ ಮತ್ತು ವಿಸ್ತೃತ ಮುದ್ರಣ ಕಂಡಿರುವ ಈ ಪುಸ್ತಕ ಅದುಹೇಗೋ ಇದುವರೆಗೆ ನನ್ನ ದೃಷ್ಟಿಯಿಂದ ತಪ್ಪಿಸಿಕೊಂಡುಬಿಟ್ಟಿತ್ತು! ಓದುತ್ತಹೋದಂತೆ ಈ ಕೃತಿಯು ನನ್ನನ್ನು ಹಿಡಿದಿಟ್ಟು ಕುಳ್ಳಿರಿಸಿ ಓದಿಸಿಕೊಂಡಿತು.
ನಮ್ಮ ನಡುವಿನ ಶ್ರೇಷ್ಠ ಸಾಹಿತಿ ಎಸ್.ಎಲ್. ಭೈರಪ್ಪನವರ ಬಗ್ಗೆ ಮತ್ತು ಅವರ ಅನೇಕ ಕೃತಿಗಳ ಬಗ್ಗೆ ವಿದ್ವತ್ಪೂರ್ಣ ಹಾಗೂ ಚಿಂತನಶೀಲ ಲೇಖನಗಳು ಈ ಪುಸ್ತಕದಲ್ಲಿವೆ. ವಿವಿಧೆಡೆ ಪ್ರಕಟಗೊಂಡಿದ್ದ ಲೇಖನಗಳು ಮತ್ತು ಈ ಪುಸ್ತಕಕ್ಕಾಗಿಯೇ ಬರೆದಿರುವ ಬರಹಗಳು ಹೀಗೆ ಒಟ್ಟು ಅರವತ್ತಕ್ಕೂ ಹೆಚ್ಚು ಲೇಖನಗಳನ್ನು ಪುಸ್ತಕವು ಒಳಗೊಂಡಿದೆ. ಶಿವರಾಮ ಕಾರಂತ, ರಂ.ಶ್ರೀ.ಮುಗಳಿ, ಹಾ.ಮಾ.ನಾಯಕ, ಪ್ರಧಾನ್ ಗುರುದತ್, ಶ್ರೀನಿವಾಸ ತೋಫಖಾನೆ, ಚದುರಂಗ, ಖಾದ್ರಿ ಶಾಮಣ್ಣ ಮಂತಾದ ಪ್ರಸಿದ್ಧರ ಅನಿಸಿಕೆಗಳು ಮತ್ತು ವ್ಯಾಸರಾಯ ಬಲ್ಲಾಳ, ಮಲ್ಲೇಪುರಂ ಜಿ.ವೆಂಕಟೇಶ, ಕ.ವೆಂ.ರಾಜಗೋಪಾಲ, ಎಚ್.ಎಸ್.ಗೋಪಾಲರಾವ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಸಿ.ಎನ್.ರಾಮಚಂದ್ರನ್, ಎನ್ಕೆ, ವಿಜಯಾ ಸುಬ್ಬರಾಜ್, ದೇಶ ಕುಲಕರ್ಣಿ ಮೊದಲಾದ ವಿದ್ವಾಂಸರ ವಿಮರ್ಶಾತ್ಮಕ ಬರಹಗಳು ಈ ಪುಸ್ತಕದಲ್ಲಿವೆ. ಪ್ರತಿಯೊಂದು ಬರಹವೂ ಮತ್ತೆ ಮತ್ತೆ ಓದಿ ಮನನ ಮಾಡುವಂತಿದೆ.
ಈ ಎಲ್ಲ ಬರಹಗಳಿಗೂ ಕಿರೀಟವಿಟ್ಟಂತೆ, ಎಂ.ಎಸ್.ಕೆ.ಪ್ರಭು, ವೀರಭದ್ರ, ಎನ್.ಎಸ್.ತಾರಾನಾಥ್, ಎಂ.ಎಚ್.ಕೃಷ್ಣಯ್ಯ ಮೊದಲಾದ ಚಿಂತಕರು ನಾನಾ ಸಂದರ್ಭಗಳಲ್ಲಿ ಭೈರಪ್ಪನವರೊಡನೆ ನಡೆಸಿದ ಸಂದರ್ಶನಗಳು ಈ ಪುಸ್ತಕದಲ್ಲಿವೆ. ಭೈರಪ್ಪನವರ ಅಂತರಾಳವನ್ನು ಓದುಗನು ಈ ಸಂದರ್ಶನಬರಹಗಳಿಂದ ಅರಿಯಬಹುದು. ಯು.ಆರ್.ಅನಂತಮೂರ್ತಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಘಟನೆಯೂ ಸೇರಿದಂತೆ ಹಲವು ಸಾಹಿತ್ಯಿಕ ಸಂದರ್ಭಗಳ ಹೂರಣವನ್ನೂ ಓದುಗ ತಿಳಿದುಕೊಳ್ಳಬಹುದು. ಅಖಿಲ ಭಾರತ ೬೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಭೈರಪ್ಪನವರು ಮಾಡಿದ ಭಾಷಣದ ಪೂರ್ಣಪಾಠ ಈ ಪುಸ್ತಕದ ಇನ್ನೊಂದು ಹೈಲೈಟ್.
ಇವಿಷ್ಟಲ್ಲದೆ, ಪುಸ್ತಕದಲ್ಲಿ ಅಲ್ಲಲ್ಲಿ ಭೈರಪ್ಪನವರ ಕಿರುಬರಹಗಳು, ಅವರ ಕೃತಿಗಳಿಂದಾಯ್ದ ತುಣುಕುಗಳು ಹಾಗೂ ಓದುಗರ ಅಭಿಪ್ರಾಯಗಳು ಪ್ರಕಟಗೊಂಡಿದ್ದು ಅವೆಲ್ಲವೂ ಗಮನ ಸೆಳೆಯುತ್ತವೆ. ಭೈರಪ್ಪನವರ ಕಿರುಪರಿಚಯ, ಸಾಧನೆ ಮತ್ತು ಕೃತಿಗಳ ವಿವರಗಳನ್ನೂ ಪುಸ್ತಕವು ಒಳಗೊಂಡಿದೆ.
’ಭೈರಪ್ಪನವರ ಸಾಹಿತ್ಯಾಧ್ಯಯನದಲ್ಲಿ ಆಸಕ್ತರಾದವರಿಗೆ, ಅವರ ಅನೇಕ ಕೃತಿಗಳ ಪರಿಚಯ-ವಿಮರ್ಶೆ ಇಲ್ಲಿ ದೊರೆಯುತ್ತದೆ’ ಎಂದು ಈ ಪುಸ್ತಕದ ಬಗ್ಗೆ ಹಾ.ಮಾ.ನಾಯಕರು ಹೇಳಿರುವ ಮಾತು ಅಕ್ಷರಶಃ ನಿಜ. ಭೈರಪ್ಪನವರ ಕೃತಿ ಓದಿರದವರನ್ನು ಈ ಪುಸ್ತಕವು ಅವರ ಕೃತಿಗಳನ್ನೋದುವಂತೆ ಪ್ರೇರೇಪಿಸುತ್ತದೆ ಕೂಡ.
ಈ ಪುಸ್ತಕದಲ್ಲೊಂದು ಕಡೆ ಒಂದು ತಮಾಷೆಯ ಘಟನೆಯ ಪ್ರಸ್ತಾಪವಿದೆ. ೩೮ ವರ್ಷಗಳ ಹಿಂದೆ ನಡೆದ ಆ ಘಟನೆ ಇಂತಿದೆ: ಲೇಖಕರ ಮೇಳದಂತಿದ್ದ ಬೃಹತ್ ವಿಚಾರ ಸಂಕಿರಣವೊಂದರಲ್ಲಿ ವಿದ್ಯಾರ್ಥಿಯೊಬ್ಬ ಭೈರಪ್ಪನವರನ್ನು, ’ಸಾರ್, ನೀವು ಭೈರಪ್ಪನವರಲ್ಲವೇ?’ ಎಂದು ಪ್ರಶ್ನಿಸಿದ. ’ಅಲ್ಲ’, ಎಂದು ಉತ್ತರಿಸಿದರು ಭೈರಪ್ಪ! ಅದಕ್ಕೆ ಆ ಹುಡುಗ, ’ಸಾರ್, ನಾನೇನೂ ನಿಮ್ಮ ಆಟೋಗ್ರಾಫ್ ಕೇಳೋಲ್ಲ. ನಿಮ್ಮನ್ನು ಮಾತನಾಡಿಸೋ ಆಸೆ ಅಷ್ಟೆ’, ಅಂದ. ಆಗಲೂ ಭೈರಪ್ಪನವರು, ’ಅಲ್ರೀ, ನಾನು ಭೈರಪ್ಪ ಅಲ್ಲ’, ಅಂತಲೇ ಅಂದುಬಿಡಬೇಕೇ! ಜನಸಾಮಾನ್ಯರಿಗೆ ತಮ್ಮ ಗುರುತು ಹತ್ತಿದರೆ ಅವರ ಬದುಕನ್ನು ಸಮೀಪದಿಂದ ಯಥಾವತ್ತಾಗಿ ಗಮನಿಸುವ ಅವಕಾಶ ಹೋಗುತ್ತೆ; ಸಾಹಿತಿ ಇದರಿಂದ ವಂಚಿತನಾಗಬಾರದು ಎಂದು ಭೈರಪ್ಪನವರು ಆ ರೀತಿ ಸುಳ್ಳುಹೇಳಿದ್ದಂತೆ. ಒಪ್ಪತಕ್ಕದ್ದೇ.
ಈ ಘಟನೆ ಓದಿದಾಗ, ಕೆಲ ವರ್ಷಗಳ ಕೆಳಗೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ನನಗೆ ನೆನಪಿಗೆ ಬಂತು. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯುತ್ತಿದ್ದ ಸಮ್ಮೇಳನವೊಂದಕ್ಕೆ ನಾನು ಹೋಗಿದ್ದೆ. ಪ್ರವೇಶದ್ವಾರದಿಂದ ಕೊಂಚ ಒಳಕ್ಕೆ ನಾನು ನಡೆದುಹೋಗುತ್ತಿದ್ದೆ. ಆಗ ಅನಿರೀಕ್ಷಿತವಾಗಿ ಭೈರಪ್ಪನವರು ಧುತ್ತನೆ ನನ್ನೆದುರು ಕಾಣಿಸಿಕೊಂಡರು. ’ಓಹ್! ಎಸ್.ಎಲ್. ಭೈರಪ್ಪ!’ ಎಂಬ ಉದ್ಗಾರ ತಂತಾನೇ ನನ್ನ ಬಾಯಿಯಿಂದ ಹೊರಹೊಮ್ಮಿತು. ಕೂಡಲೇ ಭೈರಪ್ಪನವರು, ’ಹೌದು’ ಎಂದು ಹೇಳಿ ನನ್ನ ಮುಖ ದಿಟ್ಟಿಸುತ್ತ ನಿಂತುಬಿಟ್ಟರು! ನಾನು ಅವರೊಡನೆ ಏನೋ ಮಾತಾಡುವವನಿದ್ದೇನೆಂದು ಅವರು ಅಂದುಕೊಂಡಿರಬೇಕು. ಏನು ಮಾತಾಡಲಿ? ಮಾತಾಡಲೇನೋ ಸಾಗರದಷ್ಟು ವಿಷಯಗಳಿವೆ. ಆದರೆ ಭೈರಪ್ಪನವರಿಗಾಗಿ ಅಲ್ಲಿ ಜನಸಾಗರ ಕಾದಿದೆ. ’ನಮಸ್ಕಾರ’ ಎಂದು ಕೈಮುಗಿದೆ. ’ನಮಸ್ಕಾರ’ ಎಂದು ಅವರೂ ಪ್ರತಿನಮಸ್ಕಾರ ಸಲ್ಲಿಸಿದರು. ಇಬ್ಬರೂ ನಮ್ಮ ನಮ್ಮ ದಾರಿಯಲ್ಲಿ ಮುಂದುವರಿದೆವು.
’ಹೌದು’ ಎಂದು ಆ ದಿನ ಅವರು ಕಣ್ಣಗಲಿಸಿ ನನ್ನೆದುರು ನಿಂತ ಚಿತ್ರ ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದಂತಿದೆ. ಅವರ ಆ ಕಣ್ಣುಗಳಲ್ಲಿ ಸೌಜನ್ಯ, ಪ್ರಾಮಾಣಿಕತೆ ಮತ್ತು ಕಳಕಳಿಗಳು ಢಾಳವಾಗಿ ಗೋಚರಿಸುತ್ತಿದ್ದವು.