Magic of thinking BIG - ಮಾಯೆ ಮಾಡುವ ಚಿಂತನೆ

Magic of thinking BIG - ಮಾಯೆ ಮಾಡುವ ಚಿಂತನೆ

ಪುಸ್ತಕದ ಲೇಖಕ/ಕವಿಯ ಹೆಸರು
ಡೇವಿಡ್ ಜೆ ಶ್ವಾರ್ಜ್

ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್ನಡದಲ್ಲಿ ಇಂತಹ ಪುಸ್ತಕಗಳು ಬಹಳ ಕಡಿಮೆ. ಯಂಡಮೂರಿಯವರ ವಿಜಯಕ್ಕೆ ಐದು ಮೆಟ್ಟಿಲುಗಳು ಅಥವಾ ಶಿವ್ ಖೇರಾ ಅವರ "ನೀವೂ ಗೆಲ್ಲಬಲ್ಲಿರಿ" ಪುಸ್ತಕಗಳ ಅನುವಾದ ಬಿಟ್ಟರೆ ಅಂತಹ ಪ್ರಯತ್ನ ಬಂದಿದ್ದು ರವಿ ಬೆಳಗೆರೆ ಅವರಿಂದ.

ಆದರೆ ಕನ್ನಡ ಕಾದಂಬರಿಗಳಲ್ಲಿ ತರಾಸು ಚಿತ್ರಿಸುವ ವ್ಯಕ್ತಿ ಚಿತ್ರಗಳಿಂದ ಪರ್ಸನಾಲಿಟಿ ಡೆವಲಪ್ ಮೆಂಟ್ ಕಲಿಯುವುದಾದರೆ ಅದರ ಸೊಬಗೇ ಬೇರೆ. ಪೂಚಂತೆ ಸೃಷ್ಟಿಸಿದ ಜುಗಾರಿ ಕ್ರಾಸ್ ನ ಸುರೇಶನ ವ್ಯಕ್ತಿತ್ವವಾಗಲೀ ,ಕುವೆಂಪುರವರ ರಕ್ತಾಕ್ಷಿಯ ಬಸವಣ್ಣನಾಗಲಿ, ಬಿ ಎಂ ಶ್ರೀಯವರ ಅಶ್ವಥಾಮನ್ ಆಗಲೀ ಅದ್ವಿತೀಯರಷ್ಟೇ. ಈ ಸಂಚಿಕೆಯಲ್ಲಿ ನಾ ಹೇಳಬೇಕೆಂದಿರುವುದು ಈ ಪುಸ್ತಕದ ಬಗ್ಗೆ ಮಾತ್ರ. ಯೋಗವೂ ಯೋಗ್ಯತೆಯೂ ಕೈಗೂಡಿ ಬಂದರೆ ಇನ್ನಷ್ಟು ಹೇಳಬಹುದೇನೋ

"ಮಾಯೆ ಮಾಡುವ ಚಿಂತನೆ" Magic of thinking big ನಮ್ಮ ಚಿಂತನೆಗಳು ಇರಬೇಕಾದ ರೀತಿಯನ್ನು ಹೇಳಿಕೊಡುವ ಪ್ರಯತ್ನ ಮಾಡುತ್ತದೆ. ನಮ್ಮ ಚಿಂತನೆಗಳು ಹಿರಿಯವಾದಷ್ಟೂ ನಮ್ಮ ಸಾಧನೆ ದೊಡ್ಡದಾಗುತ್ತದೆನ್ನುವುದು ಈ ಪುಸ್ತಕದ ಸಾರಾಂಶ.



ನಂಬಿಕೆಯಿಂದ ಪರ್ವತವೇ ಚಲಿಸಬಲ್ಲುದು ಎನ್ನುತ್ತಾನೆ ಬೈಬಲ್ಲಿನ ಡೇವಿಡ್. ಇಂತಹ ನಂಬಿಕೆ ಬೆಳೆಸಿಕೊಳ್ಳಲು ನಮ್ಮ ಚಿಂತನೆಗಳೂ, ಯೋಚನೆಗಳೂ, ಯೋಜನೆಗಳೂ ಹೇಗಿರಬೇಕೆಂದು ತಿಳಿಸಿಕೊಡುವ ಒಂದು ಸುಂದರ ಪುಸ್ತಕ ಇದು. ನಾನಿಲ್ಲಿ ಇದರಲ್ಲಿನ ಕೆಲವು ಅಂಶಗಳನ್ನು ಹಿಡಿದುಕೊಡಲು ಯತ್ನಿಸಿದ್ದೇನೆ. ನಿಮಗೆ ಅವು ಸರಿ ಎನಿಸಿದರೆ ಆ ಪುಸ್ತಕವನ್ನು ಓದಿ ನೋಡಿ. ಕನ್ನಡದಲ್ಲಿ ಸದ್ಯಕ್ಕೆ ಈ ಪುಸ್ತಕ ದೊರಕುವುದೇ ಎನ್ನುವ ಮಾಹಿತಿ ಇಲ್ಲ.

ಡೇವಿಡ್ ಶ್ವಾರ್ಝ್ ಹೇಳುವ ಮೊದಲ ಅಂಶ
೧. ಕಾರ್ಯ-ಭಯವನ್ನು ನೀಗುತ್ತದೆ.
ಏನಾದರೂ ಮಾಡಲು ಭಯವಿದ್ದಲ್ಲಿ, ಆ ಕೆಲಸ ಮಾಡಲು ಪ್ರಾರಂಭಿಸಿ . ನಿಮ್ಮ ಭಯ ತಂತಾನೇ ಮಾಯವಾಗುತ್ತದೆ. ಈಜು ಬರದವನು, ಈಜಲು ಶುರುಮಾಡಿದರೆ ಅವನ ನೀರಿನ ಭಯ ನೀಗುತ್ತದೆ.
೨. ನೆನಪಿನ ಬ್ಯಾಂಕಿನಲ್ಲಿ ಮಧುರ ಯೋಚನೆಗಳಿರಲಿ.
ಮನಸ್ಸಿಗೆ ದುಃಖ ಕೊಡುವ ವಿಷಯಗಳನ್ನು ಆದಷ್ಟು ಮರೆತು ಬಿಡಬೇಕು. ಧನಾತ್ಮಕ ಮತ್ತು ಮುದ ನೀಡುವ ನೆನಪುಗಳು ಇನ್ನಷ್ಟು ಕಾರ್ಯ ಮಾಡಲು ಪ್ರೋತ್ಸಾಹಿಸುತ್ತವೆ . ಅದೇ ನೋವಿನ ವಿಷಯಗಳು ನಮ್ಮ ಉತ್ಸಾಹವನ್ನು ಕುಂದಿಸುತ್ತವೆ.
೩. ನಿಮ್ಮ ದೃಷ್ಟಿಕೋನ ಜನರಿಗನುಗುಣವಾಗಿರಲಿ.
ಎಲ್ಲರೂ ನಿಮ್ಮಂತೆಯೇ, ಆದರೆ ಅವರ ವಿಚಾರಧಾರೆಗಳು, ಅರ್ಥ ಮಾಡಿಕೊಳ್ಳುವ ಶಕ್ತಿಯೂ ಬೇರೆ ಬೇರೆ. ನಾವು ಆಡಿದ ಮಾತನ್ನು ಇತರರು ಅರ್ಥ ಮಾಡಿಕೊಳ್ಳುವಲ್ಲಿ ತಪ್ಪಿರಬಹುದು. ಅಥವಾ ಅವರ ನಿಲುವನ್ನು ನಾವು ಅರ್ಥ ಮಾಡಿಕೊಂಡಿಲ್ಲದಿರಬಹುದು. ಅವರ ದೃಷ್ಠಿಕೋನ ದ ಆಯಾಮಗಳೇ ಬೇರೆ ಇರಬಹುದು. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಸುತ್ತಲಿನ ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಮತ್ತು ನಿಮ್ಮ ಮಾತು ಅವರಿಗೆ ಸರಿಯಾಗಿ ಅರ್ಥವಾಗಿದೆಯೇ ಎಂದು ವಿಚಾರಿಸಿ.
೪. ನಿಮ್ಮ ಆತ್ಮಸಾಕ್ಷ್ಹಿ ಸರಿ ಎಂದು ಹೇಳುವುದನ್ನೇ ಮಾಡಲು ಶುರು ಮಾಡಿರಿ. ಒಮ್ಮೆ ನಿಮಗೆ ಇದು ಅಭ್ಯಾಸವಾಯಿತೆಂದರೆ ನೀವು ಮುಂದೆ ಯಾರ ಮುಂದೂ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿಲ್ಲ. ತತ್ ಕ್ಷ್ಹಣದ ಅನಾನುಕೂಲಗಳು ಇದರಿಂದ ಕಂಡರೂ, ದೀರ್ಘಕಾಲೀನ ಪರಿಣಾಮಗಳು ನಿಮ್ಮ ಆತ್ಮಸಾಕ್ಷ್ಹಿಗೆ ಧಕ್ಕೆಯನ್ನುಂಟು ಮಾಡುವುದಿಲ್ಲ.
೫. ನಿಮ್ಮ ನಡೆ,ನುಡಿ,ನೋಟಗಳಲ್ಲಿ ಆತ್ಮವಿಶ್ವಾಸ ತುಂಬಿರಲಿ. ನೀವು ಧರಿಸಿದ ಬಟ್ಟೆ, ನೀವು ನೋಡುವ ನೋಟ, ನಿಮ್ಮ ಮಾತು , ನಿಮ್ಮ ನಡಿಗೆ ಮತ್ತು ನೀವು ಮಾಡುವ ಎಲ್ಲ ಕೆಲಸಗಳಲ್ಲೂ ಆತ್ಮವಿಶ್ವಾಸವಿರಲಿ. ನಾನು ಮಾಡಬಲ್ಲೆ ಎಂಬ ನಂಬಿಕೆ ನಿಮಗಿದ್ದರೆ ನಿಮಗೆ ಖಂಡಿತವಾಗಿಯೂ ಅದನ್ನು ಸಾಧಿಸಲು ಸಾಧ್ಯ.


ಕೆಲವು ಸಣ್ಣ ಸಂಗತಿಗಳು ನಿಮ್ಮ ನಿಮಗೆ ಈ ಗುಣಗಳನ್ನು ತಂದುಕೊಡಬಲ್ಲುವು.
ಅ. ಮುಂದಿನ ಕುರ್ಚಿಯಲ್ಲೇ ಕೂಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಆ. ಮಾತಾಡುವಾಗ ಕಣ್ಣೋಟ ಕೂಡಿಸಿ.
ಇ. ಉಳಿದವರಿಗಿಂತ ಶೇ.೨೫ ರಷ್ಟು ವೇಗವಾಗಿ ನಡೆಯಿರಿ.
ಈ. ಮಾತಾಡಿ.
ಉ. ನಗುನಗುತ್ತಿರಿ.

ಇವನ್ನು ನೀವು ಅಭ್ಯಾಸ ಮಾಡುತ್ತಿದ್ದರೆ ನಿಮಗೆ ಅವು ಉಳಿದ ಗುಣಗಳು ನಿಮ್ಮಲ್ಲಿ ತುಂಬಲು ದಾರಿ ಮಾಡುತ್ತವೆ.


ಹಿರಿದಾಗಿ ಯೋಚಿಸುವುದು ನೀವು ಅನುಸರಿಸಬೇಕಾದ ಅತೀ ಮುಖ್ಯ ಗುಣ. ಅದಕ್ಕೆ ನೀವು
೧. ನಿಮ್ಮನ್ನು ನೀವೇ ಕೀಳರಿಮೆಯಿಂದ ಕಾಣಬೇಡಿ.
೨. ಹಿರಿಯ ಚಿಂತಕರು/ವ್ಯಕ್ತಿಗಳು ಬಳಸುವ ಶಬ್ದಗಳನ್ನೇ ಬಳಸಲು ಪ್ರಯತ್ನ ಪಡಿ
೩. ನಿಮ್ಮ ಕಾಣ್ಕೆಯನ್ನೂ / ದರ್ಶನವನ್ನೂ ಹಿಗ್ಗಿಸಿಕೊಳ್ಳಿ. ದೂರದವರೆಗೆ ಆಲೋಚಿಸಲು ಪ್ರಯತ್ನಿಸಿ.
೪. ನೀವು ಮಾಡುತ್ತಿರುವ ಕೆಲಸದ ಹಿರಿದಾದ ಚಿತ್ರಣವನ್ನು ತಂದುಕೊಳ್ಳಿ. (ದೇಗುಲ ಕಟ್ಟುವ ಕೂಲಿಗಳ ಕತೆ ನೆನಪಿದೆಯೇ? ಒಬ್ಬ ನನ್ನ ಹೊಟ್ಟೆಪಾಡು ಎಂದ, ಇನ್ನೊಬ್ಬ ಕೂಲಿ ಕೆಲಸ ಎಂದ. ಮತ್ತೊಬ್ಬ ಸಾವಿರಾರು ಜನಕ್ಕೆ ಭಗವದ್ದರ್ಶನ ಮಾಡಿಸುವ ಕೆಲಸ ಎಂದ.. ನಿಮ್ಮ ದೃಷ್ಠಿಕೋನ ಯಾವುದು?)
೫. ಸಣ್ಣ-ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಮಾಡಬೇಡಿ, ಹಿರಿದಾಗಿ ಯೋಚಿಸಿ.


ಹಿರಿದಾಗಿ ಯೋಚಿಸುವುದರಿಂದ ನಿಮ್ಮ ಸೃಜನಶೀಲತೆ ಹೆಚ್ಚಬೇಕು. ಸೃಜನಶೀಲರಾಗಿ ಯೋಚಿಸುವತ್ತ ಮುಂದಿನ ಹೆಜ್ಜೆ ಇಡಬೇಕು. ಇದಕ್ಕೆ.
೧. ಮೊದಲನೆಯದಾಗಿ ಯಾವುದೇ ಕೆಲಸವಿರಲಿ ಅದು ಸಾಧ್ಯ ಎಂದು ನಂಬಿ.
೨. ಸಂಪ್ರದಾಯ ನಿಮ್ಮನ್ನು ವಿಕಲಚೇತನರನ್ನಾಗಿಸಲು ಬಿಡಬೇಡಿ. ಇದುವರೆಗೂ ಯಾರು ಮಾಡಿಲ್ಲದಿದ್ದರೆ ನೀವೇಕೆ ಮಾಡಬಾರದು ಎಂದು ಕೇಳಿಕೊಳ್ಳಿ. ನೀವು ಹಿರಿದಾಗಿ ಯೋಚಿಸುತ್ತಿದ್ದರೆ ನೀವು ತಪ್ಪು ಮಾಡುವ ಸಾಧ್ಯತೆ ಕಡಿಮೆ.
೩. ಪ್ರತಿದಿನವೂ " ನಾನು ಇನ್ನಷ್ಟು ಚೆನ್ನಾಗಿ ಈ ಕೆಲಸವನ್ನು ಮಾಡಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿಕೊಳ್ಳಿ.
೪. ಪ್ರತಿದಿನವೂ " ನಾನು ಈ ಕೆಲಸವನ್ನು ಇನ್ನಷ್ಟು ಮಾಡಬಹುದೇ?" ಎಂದು ಪ್ರಶ್ನಿಸಿಕೊಳ್ಳಿ.
೫. ಪ್ರಶ್ನೆ ಕೇಳುವುದನ್ನೂ, ಬೇರೆಯವರ ಚಿಂತನೆಗಳನ್ನು ಆಲಿಸುವುದನ್ನೂ ಅಭ್ಯಾಸ ಮಾಡಿಕೊಳ್ಳಿ.
೬. ನಿಮ್ಮ ಭಾವನೆಗಳನ್ನೂ, ಚಿಂತನೆಗಳನ್ನು ಹಿಗ್ಗಿಸಿ. ಒಟ್ಟಾರೆಯಾಗಿ ಹೇಳುವುದಾದರೆ ಮಿದುಳಿಗೆ ಇನ್ನಷ್ಟು ಕೆಲಸ ಕೊಡಿ. ಕೆಲಸ ಹೆಚ್ಚಾದಷ್ಟೂ ಮಿದುಳು ಚುರುಕಾಗುತ್ತದೆ. (ನಿದ್ದೆ, ಜ್ಞಾನ , ಹಸಿವು ಇವು ತೃಪ್ತಿ ಪಡಿಸಿದಷ್ಟೂ ಹೆಚ್ಚಾಗುತ್ತದೆಂಬುದೊಂದು ಸಂಸ್ಕೃತ ಸುಭಾಷಿತ)

ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಮೊದಲು ನೀವು ಪ್ರಮುಖ ವ್ಯಕ್ತಿಯೆಂಬ ಭಾವನೆ ನಿಮಗೇ ಬರಬೇಕು. ಅದಕ್ಕೆ
೧. ಪ್ರಮುಖ ವ್ಯಕ್ತಿ ನೀವೆಂದುಕೊಳ್ಳಿ. ಮತ್ತು ಹಾಗೇ ವರ್ತಿಸಿ
೨. ನಿಮ್ಮ ಕೆಲಸ ಮುಖ್ಯವಾದುದು ಎಂಬುದು ಸದಾ ನಿಮ್ಮ ಅರಿವಿನಲ್ಲಿರಲಿ.
೩. ದಿನದಲ್ಲಿ ಹಲವಾರು ಬಾರಿ ನಿಮ್ಮನ್ನು ನೀವೇ ಹೊಗಳಿಕೊಳ್ಳಿ.
೪. ನಿಮ್ಮನ್ನು ನೀವೇ "ಇದು ಮುಖ್ಯ /ಪ್ರಮುಖ ವ್ಯಕ್ತಿಗಳು ಯೋಚಿಸುವ ರೀತಿಯೇ?" ಎಂದು ಕೇಳಿಕೊಳ್ಳಿ. ಉತ್ತರ "ಇಲ್ಲ"ವೆಂದಾದರೆ ಪ್ರಮುಖ ವ್ಯಕ್ತಿಗಳು ಯೋಚಿಸುವ ರೀತಿ ಯೋಚಿಸಲು ಪ್ರಾರಂಭಿಸಿ.

ನಿಮ್ಮ ಯಶಸ್ಸಿಗೆ ನಿಮ್ಮ ಸುತ್ತಲಿನ ಪರಿಸರದ ಕೊಡುಗೆ ಬಹು ಮುಖ್ಯ. ಅದನ್ನು ಸರಿಯಾದ ರೀತಿಯಲ್ಲಿ ಕಾಯ್ದಿಟ್ಟುಕೊಳ್ಳಿ. ನಿಮ್ಮ ಯಶಸ್ಸನ್ನು ನಿಮ್ಮ ಪರಿಸರ ರೂಪಿಸುವಂತೆ ಮಾಡಿ. ಅದಕ್ಕೆ.

೧. ನಿಮ್ಮ ಸುತ್ತಲಿನ ಪರಿಸರದ ಬಗ್ಗೆ ಸದಾ ನಿಗಾ ಇರಲಿ.
೨. ನಿಮ್ಮ ಪರಿಸರ ನಿಮ್ಮಲ್ಲಿ ಉಲ್ಲಾಸ ತುಂಬುವಂತಿರಲಿ. ಅದನ್ನು ನೀವೇ ಹಾಗೆ ಮಾಡಿಕೊಳ್ಳಬೇಕು. ನಿಮ್ಮ ಪರಿಸರ ನಿಮ್ಮ ವಿರುದ್ದವಿದ್ದರೆ ಗೆಲುವು ಕಷ್ಟ.
೩. ಸಣ್ಣದಾಗಿ ಯೋಚಿಸುವ ವ್ಯಕ್ತಿಗಳು ನಿಮ್ಮ ಕಾಲೆಳೆಯಲು ಬಿಡಬೇಡಿ. ಅವರನ್ನು ದೂರ ಇಡಿ.
೪. ನಿಮಗೆ ಸಲಹೆ ಬೇಕಾದಾಗ ಯಶಸ್ವಿ ವ್ಯಕ್ತಿಗಳಿಂದ ಪಡೆಯಿರಿ, ಯಾರಿಗೆ ಯಶಸ್ಸಿನ ಅನುಭವ ಇರುವುದಿಲ್ಲವೋ ಅವರು ಯಶಸ್ವಿಯಾಗುವ ಸಲಹೆ ನೀಡುವುದಿಲ್ಲ. ಯಶಸ್ವಿಯೆಂದರೆ ಬರೀ ಹಣವಲ್ಲ.
೫. ಮಾನಸಿಕವಾಗಿ ಸದಾ ಪ್ರಪುಲ್ಲಿತರಾಗಿರಿ.
೬. ಥಾಟ್- ಪಾಯಿಸನ್ ಹಿಂಜರಿಕೆಯನ್ನು ನಿಮ್ಮ ಪರಿಸರದಿಂದ ದೂರವಿಡಿ.
೭. ನೀವು ಮಾಡುವ ಕೆಲಸಗಳಲ್ಲಿ ಅದು ಯಾವುದೇ ಇರಲಿ ಮೊದಲನೇ ದರ್ಜೆಯ ಕೆಲಸವಾಗಿರುವಂತೆ ನೋಡಿಕೊಳ್ಳಿ.
೮. ಮೊದಲು ಸೇವೆ ಆಮೇಲೆ ಲಾಭ. ನೀವು ಮಾಡುವ ಕೆಲಸದ ತಕ್ಷಣದ ಪ್ರತಿಫಲಾಪೇಕ್ಷೆ ಧೀರ್ಘಕಾಲೀನವಾಗಿ ದುಷ್ಪರಿಣಾಮ ಬೀರಬಹುದು. ಮೊದಲು ನೀವೆ ಹೇಗೆ ಕೆಲಸ ಮಾಡಿಕೊಡಬಹುದೆಂದು ಯೋಚಿಸ್. ಲಾಭ ನಷ್ಟಗಳ ಗಣನೆ ನಂತರದ್ದು.
೯. ನಾಳೆ ಮಾಡುವ ಕೆಲಸ ಇಂದೇ ಮಾಡಿ (ಇದನ್ನು ನಮ್ಮ ದಾಸರೇ ಹೇಳಿದ್ದಾರಲ್ಲವೇ .. ಹೌದು. ಹಿರಿಯ ಚೇತನಗಳು ಒಂದೇ ತೆರನಾಗಿ ಚಿಂತಿಸುತ್ತಾರೆ.. Great people think alike)
೧೦. ನೀವು ಎಲ್ಲಿಗೆ ತಲುಪಬೇಕು ಎನ್ನುವುದು ನಿಮಗೆ ಧೃಡವಾಗಿರಲಿ. ಹತ್ತು ವರುಷಗಳ ನಂತರ ನೀವು ಏನಾಗಿರಬೇಕೆನ್ನುವುದು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿರಲಿ.
೧೧. ಈ ಹತ್ತು ವರುಷಗಳಲ್ಲಿ ನೀವು ಮಾಡಬೇಕೆಂದುಕೊಂಡ ವಿಷಯಗಳ ಪಟ್ಟಿ ಮಾಡಿ ಮತ್ತು ಅದನ್ನು ಮಾಡಲು ಏನು ಮಾಡಬೇಕೆಂದು ಚಿಂತಿಸಿ.
೧೨. ನಿಮ್ಮ ಆಸೆಗಳಿಗೆ ನೀವೇ ಶರಣಾಗಿ.
೧೩. ತಿಂಗಳು-ತಿಂಗಳಿಗೊಂದು ಗುರಿ ನಿಗದಿಪಡಿಸಿ. ಅದನ್ನು ಸಾಕಾರಗೊಳಿಸಲು ಪ್ರತಿದಿನ ಕೆಲಸ ಮಾಡಿ.
೧೪. ಸೋಲುಗಳನ್ನು ಮರೆತು ಮತ್ತೆ ಕೆಲಸ ಮಾಡಲು ಮುನ್ನಡೆಯಿರಿ
೧೫. ನಿಮ್ಮ ಮೇಲೇ ಬಂಡವಾಳ ಹೂಡಿ. ಅಂದರೆ ನಿಮಗೆ ಬೇಕಾದ ತರಬೇತಿ, ಪುಸ್ತಕ, ಜ್ಞಾನ ಇವುಗಳಿಗೆ ಅಗತ್ಯವಿದ್ದರೆ ಖರ್ಚು ಮಾಡಲು ಹಿಂಜರಿಯಬೇಡಿ.

ಇವು ನಿಮ್ಮನ್ನು ನಿಸ್ಸಂದೇಹವಾಗಿ ಒಬ್ಬ ನಾಯಕನನ್ನಾಗಿ ಮಾಡುತ್ತವೆ. ನಿಮ್ಮ ನಾಯಕತ್ವ ಮತ್ತಷ್ಟು ಪರಿಣಾಮಕಾರಿಯಾಗಬೇಕಾದರೆ..
೧. ನಿಮ್ಮ ಸುತ್ತಲಿನ ಜನರೊಡನೆ, ನಿಮ್ಮ ಪ್ರಭೆಯ ಪರಿಧಿಯಲ್ಲಿ ಬರುವ ಜನರೊಡನೆ ಚಿಂತನೆಗಳನ್ನು ಹಂಚಿಕೊಳ್ಳಿ.
೨. ಎಲ್ಲರೊಳಗೊಂದಾಗಿ.
೩. ಪ್ರಗತಿಯ ಬಗ್ಗೆ ಯೋಚಿಸುತ್ತಿರಿ
೪. ಪ್ರತಿ ದಿನವೂ ಸ್ವಲ್ಪ ಸಮಯ ಒಂಟಿಯಾಗಿರಿ,

ಸುತ್ತಲಿನ ಸಣ್ಣ ಜನ ನಿಮ್ಮ ಕಾಲೆಳೆದರೆ... ಹಿರಿದಾಗಿ ಚಿಂತಿಸಿ

"ಬುದ್ದಿವಂತ ಮನದ ಒಡೆಯನಾದರೆ, ಮೂರ್ಖ ಮನದ ಗುಲಾಮ " ಮರೆಯದಿರಿ.