ಭಾರತೀಯ ಸಮಾಜಕ್ಕೆ ’ಕವಲು’ ಕಾದಂಬರಿಯ ಅವಶ್ಯಕತೆ
(ನನ್ನ ಈ ಲೇಖನ ಆಗಸ್ಟ್ ೮, ೨೦೧೦ರ ’ಕರ್ಮವೀರ’ದಲ್ಲಿ ಪ್ರಕಟವಾಗಿದೆ.)
ಎಸ್.ಎಲ್. ಭೈರಪ್ಪನವರು ಮತ್ತೊಮ್ಮೆ ನಮ್ಮ ಮನ-ಮಸ್ತಿಷ್ಕಗಳಿಗೆ ಚುರುಕು ಮುಟ್ಟಿಸಿದ್ದಾರೆ. ’ಕವಲು’ ಕಾದಂಬರಿಯನ್ನು ಕೊಟಿದ್ದಾರೆ.
’ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು’ ಎಂಬ ಪೂರ್ವನುಡಿ ಹೊಂದಿರುವ ಈ ಕಾದಂಬರಿಯು ತನ್ನೀ ಹಾದಿಯಲ್ಲಿ, ದಾಂಪತ್ಯಜೀವನವೇ ಮೊದಲಾಗಿ ಭಾರತೀಯ ಕುಟುಂಬಪದ್ಧತಿಯು ಹಿಡಿಯುತ್ತಿರುವ ಕವಲುದಾರಿಯನ್ನು ಬೆಟ್ಟುಮಾಡಿ ತೋರಿಸುತ್ತದಲ್ಲದೆ ಆಧುನಿಕ ಸ್ತ್ರೀವಿಮೋಚನಾ ಸಿದ್ಧಾಂತವು ಭಾರತೀಯ ಕುಟುಂಬಗಳಲ್ಲಿ ತಂದಿಕ್ಕುವ ತುಮುಲಗಳನ್ನು, ಹುಟ್ಟುಹಾಕುವ ಘರ್ಷಣೆಗಳನ್ನು ಅನಾವರಣಗೊಳಿಸುತ್ತ, ಇದರಿಂದಾಗಿ ಭಾರತೀಯ ಸಾಮಾಜಿಕ ಮೌಲ್ಯಗಳು ಹಾಗೂ ಭಾರತೀಯ ಸಾಮಾಜಿಕ ಪರಂಪರೆ ಮೂಲೆಗುಂಪಾಗುವುದನ್ನು ಸೂಚಿಸುತ್ತ, ಭಾರತೀಯ ಸಮಾಜದ ಸ್ವಾಸ್ಥ್ಯಕ್ಕಿದು ಕಂಟಕಪ್ರಾಯ ಎಂಬ ಸಂದೇಶವನ್ನು ಸಾರಲೆತ್ನಿಸುತ್ತದೆ.
ಕಾನಿಸ್ಟೇಬಲ್ ಮತ್ತು ಇನ್ಸ್‌ಪೇಟರುಗಳ ರೂಪದಲ್ಲಿ ಜಯಕುಮಾರನ ಎದುರಿಗೆ ಮತ್ತು ಆತನ ಎರಡನೇ ಹೆಂಡತಿ ಮಂಗಳೆಯ ರೂಪದಲ್ಲಿ ಹಿನ್ನೆಲೆಯಲ್ಲಿ, ಹೀಗೆ ಕಾದಂಬರಿಯ ಆರಂಭದಲ್ಲೇ ಹೆಣ್ಣು ಶೋಷಕಳಾಗಿ ಅವತರಿಸುತ್ತಾಳೆ. ಅಪಘಾತದಿಂದಾಗಿ ಬುದ್ಧಿ ಕುಂಠಿತಗೊಂಡ ಮಲಮಗಳು ವತ್ಸಲೆಯಮೇಲೆ ಮಂಗಳೆಗೆ ಎಳ್ಳಷ್ಟೂ ವಾತ್ಸಲ್ಯವಿಲ್ಲ. ತನ್ನ ಗುರು ಇಳಾ ಮೇಡಂ ಪ್ರಭಾವದಿಂದಾಗಿ ಸ್ತ್ರೀವಿಮೋಚನೆಯ ಗುಂಗು ಹತ್ತಿಸಿಕೊಂಡವಳು ಮಂಗಳೆ.
’ವಿಮೋಚನೆಯೆಂಬ ನಶೆ ಏರಿಸಿಕೊಂಡವರು ಶೋಷಕರಾದಾರೇ ಹೊರತು ಹೆಂಗಸರೆಲ್ಲಾ ಶೋಷಕರಲ್ಲ, ಭಾರತೀಯ ಪರಂಪರೆಗನುಗುಣವಾಗಿ ಸಾಗುವ ಹೆಣ್ಣು ಸಾಮಾನ್ಯವಾಗಿ ಹೊಂದಾಣಿಕೆ ಮಾಡಿಕೊಂಡು ಸಾಗುತ್ತದೆ’ ಎಂಬುದು ಭೈರಪ್ಪನವರ ಅಭಿಪ್ರಾಯವೆಂಬಂತೆ ಜಯಕುಮಾರನ ಮೊದಲ ಪತ್ನಿ, ಜಯಕುಮಾರನ ತಾಯಿ, ಕೆಲಸದಾಳು ದ್ಯಾವಕ್ಕ ಮುಂತಾದ ಸದ್ಗುಣಿ-ವಿವೇಕಿ ಸ್ತ್ರೀ ಪಾತ್ರಗಳು ಕಾದಂಬರಿಯಲ್ಲಿವೆ. ತನಗೇನೂ ಸಮಗ್ರ ಹೆಣ್ಣುಕುಲದಮೇಲೇ ಅಸಮಾಧಾನ ಅಲ್ಲ, ಸ್ತ್ರೀವಿಮೋಚನೆಯ ಭ್ರಮೆಯಲ್ಲಿ ಮತಿಗೆಡಿಸಿಕೊಳ್ಳುವ ಮತ್ತು ಸ್ತ್ರೀಸಮಾನತೆ-ಸ್ತ್ರೀಸ್ವಾತಂತ್ರ್ಯಗಳ ಹುಚ್ಚು ಹಂಬಲದಲ್ಲಿ ಹಾಗೂ ತಜ್ಜನ್ಯ ಅನಿಯಂತ್ರಿತ ಕಾಮದಲ್ಲಿ-ಸ್ವೇಚ್ಛಾಚಾರದಲ್ಲಿ ಕುಟುಂಬಮೌಲ್ಯಯುತ ನೆಮ್ಮದಿ-ಸುಖ-ಪ್ರೀತಿಗಳಿಂದ ತಾನೂ ವಂಚಿತಳಾಗಿ ತನ್ನ ಸುತ್ತಲಿನವರ ಬದುಕನ್ನೂ ದುರಂತಮಯವನ್ನಾಗಿಸುವ ಆಧುನಿಕ-ವಿದ್ಯಾವಂತ ಭಾರತೀಯ ನಾರಿಯರು ಹಲವರೇನಿದ್ದಾರೆ ಅಂಥವರ ಬಗ್ಗೆ ಮಾತ್ರ ತನಗೆ ಅಸಮಾಧಾನ ಎಂದು ಭೈರಪ್ಪನವರು ಈ ಕಾದಂಬರಿಯ ಮೂಲಕ ಹೇಳಲೆತ್ನಿಸಿದ್ದಾರೆ. ಇಂಥ ದುರಂತವು ಭಾರತೀಯ ಸಮಾಜದಲ್ಲಿ ಮುಂದುವರಿಯದಿರಲಿ ಎಂಬ ಪ್ರಾಮಾಣಿಕ ಕಳಕಳಿ ಭೈರಪ್ಪನವರಿಗಿರುವುದು ಅವರ ವ್ಯಕ್ತಿತ್ವದಿಂದಲೂ ಮತ್ತು ಈ ಕಾದಂಬರಿಯು ವ್ಯಕ್ತಪಡಿಸುವ ಆಶಯದಿಂದಲೂ ಸ್ಪಷ್ಟ. ಆದ್ದರಿಂದ ಈ ಕಾದಂಬರಿಯನ್ನು ಮಹಿಳಾವಿರೋಧಿಯೆಂದು ಪರಿಗಣಿಸುವುದು ತರವಲ್ಲವೆಂಬುದು ನನ್ನ ಅಭಿಪ್ರಾಯ.
ಹೆಣ್ಣಿನಂತೆ ಗಂಡಿನ ಅವಗುಣಗಳನ್ನೂ ಭೈರಪ್ಪನವರು ಕಾದಂಬರಿಯಲ್ಲಿ ತೋರಿಸಿದ್ದಾರೆ. ದ್ಯಾವಕ್ಕನ ಗಂಡ ’ಕೇಡಿಗ ಮುಂಡೇಮಗ’; ಜಯಕುಮಾರನ ಅತ್ತಿಗೆಯೊಡನೆ ಅವಳ ಗುಲಾಮ ಪತಿ ಕೇಶವನೂ ದೋಷಿ; ಮಂತ್ರಿ ದೊರೆರಾಜ ವಂಚಕ; ಪ್ರಭಾಕರನ ನಡತೆಯೂ ಒಪ್ಪಿಕೊಳ್ಳತಕ್ಕಂತಹದಲ್ಲ; ಇಳಾಳ ಪತಿ ವಿನಯಚಂದ್ರ ಒಂದು ರೀತಿಯ ಸ್ವಾರ್ಥಿ, ಹೀಗೆ, ಹಲವು ಪುರುಷ ಪಾತ್ರಗಳನ್ನೂ ಅವಗುಣಯುತವನ್ನಾಗಿ ಚಿತ್ರಿಸಿದ್ದಾರೆ ಭೈರಪ್ಪನವರು. ಆದರೆ, ಮಂಗಳೆ-ಇಳಾರು ಸೇವಿಸಿದ ಸ್ತ್ರೀವಿಮೋಚನೆಯೆಂಬ ಅಫೀಮು ಸದೃಶ ಮುಖ್ಯವಸ್ತುವಿನೆದುರು ಈ ಅವಗುಣಿಗಳೆಲ್ಲ ಓದುಗನ ಚರ್ಚೆಯ ಪ್ರಾಮುಖ್ಯ ಕಳೆದುಕೊಳ್ಳುತ್ತಾರೆ ಅಷ್ಟೆ.
ಸ್ತ್ರೀವಿಮೋಚನೆ-ಸಮಾನತೆಗಳ ಉದ್ದೇಶ ಹೊಂದಿರುವ ಭಾರತೀಯ ಕಾನೂನಿನ ಪರಿಪಾಲನೆಯ ಆದೇಶಗಳಲ್ಲಿ ಸಾಮಾನ್ಯವಾಗಿ ಸ್ತ್ರೀಪಕ್ಷಪಾತ ನುಸುಳುತ್ತದೆಂಬ ಅಸಮಾಧಾನವೂ ಭೈರಪ್ಪನವರಿಗಿದೆ.
ಸ್ತ್ರೀಸ್ವಾತಂತ್ರ್ಯವೆಂಬ ಅಫೀಮಿನ ಅಮಲಿಗೊಳಗಾಗಿ ಜಯಕುಮಾರನೊಡನೆ ಕೂಡುವ ಮಂಗಳೆಯು ಬಸಿರಾದನಂತರ ಭಾರತೀಯ ಧರ್ಮದನುಸಾರ ತನ್ನನ್ನು ಮದುವೆಯಾಗುವಂತೆ ಅವನನ್ನು ಒತ್ತಾಯಿಸುವುದು ಅವಳ ಸ್ವಾರ್ಥಸಾಧನೆಯ ಬುದ್ಧಿವಂತಿಕೆಯ ನಿದರ್ಶನ. ’ಗರ್ಭವನ್ನು ಇಟ್ಟುಕೊಳ್ಳೂದೋ ತೆಗೆಸೂದೋ ಅನ್ನೂದು ಸಂಪೂರ್ಣವಾಗಿ ಮಹಿಳೆಯ ತೀರ್ಮಾನಕ್ಕೆ ಬಿಡಬೇಕಾದ ವಿಷಯ’ ಎಂದು ಮಂಗಳೆಯು ಹೇಳುವಲ್ಲಿ ವಿಮೋಚನೆಯ ಹೆಸರಿನಲ್ಲಿ ಹೆಣ್ಣಿನ ಆಕ್ರಮಣ ಗೋಚರಿಸುತ್ತದೆ. ನಿರೋಧಕದ ಅವಶ್ಯಕತೆ ಇಲ್ಲವೆಂದು ಅವಳೇ ಹೇಳಿ ನಂತರ ಮದುವೆಗೆ ಒತ್ತಾಯಿಸುವ ಅನ್ಯಾಯಕ್ಕೆ ಆಕೆ ಇಳಿಯುವುದು ಕೋರ್ಟು ಹೆಣ್ಣಿನ ಪರವಾಗಿರುವುದೆಂಬ ಧೈರ್ಯದಿಂದ. ಇದು ತಥಾಕಥಿತ ಸ್ತ್ರೀವಿಮೋಚನೆಯ ಕರಾಳಮುಖವೊಂದರ ದರ್ಶನ.
’ಮೌನವಾಗಿಯೇ ಮನೆಯೊಳಗೆ ನುಸುಳಿದ ವಿಷದ ಹಾವು’ ಆಗಿ ಕಾದಂಬರಿಯುದ್ದಕ್ಕೂ ಮಂಗಳೆ ಮುಂದುವರಿಯುತ್ತಾಳೆ. ’ದೇಹಸುಖವು ಪರಸ್ಪರರ ಹಕ್ಕು’ ಎಂಬ ಧೋರಣೆಯ ಮಂಗಳೆ ಮತ್ತು ಮಾರ್ದವದ ನಡಾವಳಿ ಇಲ್ಲದಿದ್ದರೆ ಅಂತಹವಳೊಡನೆ ದೇಹಸುಖವನ್ನು ಮನಸ್ಸು ಬಯಸುವುದಿಲ್ಲವೆನ್ನುವ ಜಯಕುಮಾರ ಇವರ ತುಮುಲಗಳು ವಿವಿಧ ರೂಪು ಪಡೆಯುತ್ತ ಸಾಗುತ್ತವೆ. ಮಂಗಳೆ-ಜಯಕುಮಾರ ಮತ್ತು ಇಳಾ-ವಿನಯಚಂದ್ರ ಈ ಎರಡು ಜೋಡಿಗಳು ಕಥೆಯ ಕೇಂದ್ರಸ್ಥಾನದಲ್ಲಿದ್ದು, ಉಳಿದ ಪಾತ್ರಗಳು ಭಾರತೀಯ ನಾರಿಪರಂಪರೆಯ ಮತ್ತು ಸ್ತ್ರೀವಿಮೋಚನಾತತ್ತ್ವದ ನಡುವಣ ಸಂಘರ್ಷದ ಮುಖ್ಯ ಕಥೆಗೆ ಪೂರಕವಾಗಿ ಕಾಣಿಸಿಕೊಳ್ಳುತ್ತವೆ. ’ವಿಮೋಚನೆ’ ಎಂಬ ಭ್ರಮೆಯನ್ನಂಟಿಸಿಕೊಂಡ ಸ್ತ್ರೀಗೆ ಸುಖವಿಲ್ಲ; ಆಕೆಯೂ ಸೇರಿದಂತೆ ಇಡೀ ಸಂಸಾರಕ್ಕೆ ಅರ್ಥಪೂರ್ಣ, ಅನುಬಂಧಪೂರ್ಣ ಮತ್ತು ಪ್ರಕೃತಿಸಹಜ ನೇಮಗಳನ್ನೊಳಗೊಂಡ ಪರಂಪರೆಯ ಲಾಭವೂ ಇಲ್ಲ, ಹೀಗಾಗಿದೆ ಆಧುನಿಕ ಭಾರತದ ಸ್ತ್ರೀವಿಮೋಚನಾ ಚಳವಳಿಯ ಫಲ ಎಂಬುದು ಭೈರಪ್ಪನವರ ವೇದನೆಯೆಂಬುದು ಕಾದಂಬರಿಯಿಂದ ಅರ್ಥವಾಗುತ್ತದೆ.
’ಕುಂಕುಮ, ತುರುಬಿನ ಹೂವುಗಳು ದಾಸ್ಯದ ಸಂಕೇತ; ದೇಹಸುಖವು ಹಕ್ಕು’ ಇಂತಹ (ದಾಸ್ಯ-ಹಕ್ಕಿನ) ಯೋಚನೆಗಳು ಹೃದಯದ ಭಾವನೆಗಳಮೇಲೆ ಸವಾರಿಮಾಡುವ ಸಾಮಾಜಿಕ ದುಃಸ್ಥಿತಿಯನ್ನು ಕಾದಂಬರಿಯು ಓದುಗರ ಅರಿವಿಗೆ ತರುತ್ತದೆ.
ಸ್ತ್ರೀ ಪರ ವಾದಿಸುವ ವಕೀಲೆ ಚಿತ್ರಾ ಹೊಸೂರಳು ಇಳಾ ಬಳಿ ಐದು ಸಾವಿರ ರೂಪಾಯಿ ಪೀಕುವುದು, ಸ್ತ್ರೀವಿಮೋಚನಾ ಚಳವಳಿಯ ಪ್ರಮುಖರಲ್ಲೊಬ್ಬಳಾದ ಸರಾಫ಼ಳ ಸಲಿಂಗಕಾಮ ಇವೆಲ್ಲ ಆಧುನಿಕ ಸ್ತ್ರೀವಾದಿಗಳನೇಕರ ಕರಾಳಮುಖಗಳಾಗಿ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹ ಕರಾಳ ಮುಖಗಳು ಇಂದಿನ ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿರುವ ಆತಂಕ ಭೈರಪ್ಪನವರಿಗಿದೆಯೆಂಬುದನ್ನು ಕಾದಂಬರಿಯ ಕಥೆ ಮತ್ತು ಕಥನ ಶೈಲಿಗಳಿಂದ ಅರಿತುಕೊಳ್ಳಬಹುದು. ಎಂದೇ ಈ ಕಾದಂಬರಿಯನ್ನು ಮಹಿಳಾದ್ವೇಷಿಯನ್ನಾಗಿ ಪರಿಗಣಿಸುವುದು ತರವಲ್ಲ.
ಹೃದಯದ ಪ್ರೀತಿಯೆಂಬ ನಿಷ್ಕಲಂಕ ಭಾವವನ್ನು ಫ್ರಾಯ್ಡ್-ಸೈಕಾಲಜಿಗಳು ದಾರಿತಪ್ಪಿಸಬಾರದೆಂಬ ಕಳಕಳಿ ಭೈರಪ್ಪನವರಿಗಿರುವುದನ್ನೂ ಕಾದಂಬರಿಯಲ್ಲಿ ಕಾಣಬಹುದು. ’ಹೆಣ್ಣುಹುಡುಗಿ, ಹೀಗೆಲ್ಲ ಆಡಬಾರದು’; ’ತಪ್ಪು ಬರೆಯಲೇಬೇಕಾದ ಹುಡುಗಿಯು ಸರಿ ಬರೆದಿರುವುದು ವಿಶೇಷ’; ’ಹೆಣ್ಣುಹುಡುಗಿ ಒಬ್ಬಳನ್ನೇ ಹಾಸ್ಟೆಲಿನಲ್ಲಿ ಬಿಡುಕ್ಕೆ ನಾನು ಒಪ್ಪುಲ್ಲ’, ಈ ಮಾತುಗಳು ಹೆಣ್ಣಿನ ಕುರಿತಾದ ಅಸಮಾನತೆ-ತಪ್ಪು ಕಲ್ಪನೆ-ಭಯ ಇವುಗಳ ಉದಾಹರಣೆಗಳಾಗಿ ಮೂಡಿದ್ದರೂ ’ಇದು ಪ್ರಕೃತಿಯ ತೀರ್ಮಾನ’ ಎಂಬ ಅಭಿಪ್ರಾಯವಿಲ್ಲಿ ಅಡಕವಾಗಿರುವಂತಿದೆ.
ಕಟ್ಟುಕಟ್ಟಳೆಗಳಿಗೆ ಬೆಲೆಕೊಡದ ’ಮಹಿಳಾವಾದಿ’ ಇಳಾ ಮೇಡಂ ಅಭಿಪ್ರಾಯದಲ್ಲಿ ಹುಡುಗ ಹುಡುಗಿಯರು ಅವಿವೇಕ ಮಾಡಿಕೊಳ್ಳುವುದು ಅಪರಾಧವಲ್ಲ. ಪತಿ-ಪತ್ನಿ ಎಂಬ ಹೃದಯಗಳ ಬೆಸುಗೆಯನ್ನೇ ನಿರಾಕರಿಸುವ ಶಾರನ್ ಮತ್ತವಳ ಬಾಯ್‌ಫ್ರೆಂಡ್ ಇಬ್ಬರೂ ಇಳಾಗೆ ಸ್ವಾತಂತ್ರ್ಯಪ್ರೇಮಿಗಳಾಗಿ ಮೆಚ್ಚುಗೆಯಾಗುತ್ತಾರೆ. ಹೀಗೆ ’ಸ್ತ್ರೀವಿಮೋಚನೆ’ಯ ಪ್ರಭಾವಕ್ಕೆ ತಾನೂ ಒಳಗಾಗುವುದಲ್ಲದೆ ತನ್ನ ಶಿಷ್ಯೆ ಮಂಗಳೆಯನ್ನೂ ಒಳಪಡಿಸುತ್ತಾಳೆ ಇಳಾ. ಆದರೆ, ಅತ್ತ ಮಂಗಳೆಯ ಬಾಳೂ ಮೂರಾಬಟ್ಟೆ, ಇತ್ತ ಸ್ವಯಂ ಇಳಾ ಮೇಡಮ್ಮೇ ಮಂತ್ರಿ ದೊರೆರಾಜ ತೋಡಿದ ವಂಚನೆಯ ಹಳ್ಳಕ್ಕೆ ತನ್ನ ಶಿಷ್ಯ ಪ್ರಭಾಕರನಿಂದಲೇ ತಳ್ಳಿಸಿಕೊಂಡು ಬೀಳುವಂತಹ ಪರಿಸ್ಥಿತಿ ಬಂದೊದಗುತ್ತದೆ. ’ಪಾಶ್ಚಾತ್ಯ ದೇಶದ ಅನುಕರಣೆಯಾದ ’ಸ್ತ್ರೀಸ್ವಾತಂತ್ರ್ಯ’ವೆಂಬ ಈ ಆಧುನಿಕ ಅತಿರೇಕ ನಮಗೆ ಬೇಕೇ?’ ಎಂಬ ಪ್ರಶ್ನೆಯನ್ನು ಈ ಕಥಾನಕದ ಮೂಲಕ ನಮ್ಮೆದುರಿಡುತ್ತಾರೆ ಭೈರಪ್ಪ. ಹೃದಯಸಂಬಂಧಗಳಿಗೆ ಸ್ಥಾನವುಳ್ಳ ನಮ್ಮ ಸಮಾಜವು ಈ ಆಧುನಿಕ ಅತಿರೇಕದಿಂದಾಗಿ ಜೀವನದ ಸೊಗಸೆಂಬ ಹೃದಯವನ್ನೇ ಕಳೆದುಕೊಂಡುಬಿಡಬಾರದೆನ್ನುವ ಕಳಕಳಿ ಭೈರಪ್ಪನವರದೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅರ್ಥಮಾಡಿಕೊಂಡು, ಈ ಕಾದಂಬರಿಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕಾದುದು ಇಂದಿನ ಭಾರತೀಯ ಸಮಾಜಕ್ಕೆ ಹಿತಕರವೆಂಬುದು ನನ್ನ ಅಭಿಪ್ರಾಯ.
’ನೀನು ಮಾಡ್ಕಂಡಿರೂದು ರಿಜಿಸ್ಟ್ರೇಷನ್. ಅದೊಂದು ಕಾಂಟ್ರ್ಯಾಕ್ಟ್. ಈ ಕಾಂಟ್ರ್ಯಾಕ್ಟಿನಲ್ಲಿ ಧರ್ಮೇಚ ಅರ್ಥೇಚಗಳು ಒಳಗೊಂಡಿಲ್ಲ’, ಎಂದು ವಿನಯನು ಪತ್ನಿ ಇಳಾಗೆ ಅಸಹನೆಯಿಂದ ಹೇಳುವಲ್ಲಿ ಅವರಿಬ್ಬರ ನಡುವೆ ಕಾದಂಬರಿಯಲ್ಲಿ ಮುಂದುವರಿಯುವ ತಾಕಲಾಟಗಳ ಸೂಚನೆಯಿದೆ ಮಾತ್ರವಲ್ಲ, ’ಭಾರತೀಯ ಧರ್ಮಪರಂಪರೆ ಮತ್ತು ಪಾಶ್ಚಾತ್ಯ ಕಾಂಟ್ರ್ಯಾಕ್ಟ್ ಇವುಗಳ ಪೈಕಿ ಯಾವುದು ಉತ್ತಮ, ಹೇಳಿ?’ ಎಂದು ಭೈರಪ್ಪನವರು ಓದುಗರೆದುರಿಡಬಯಸುವ ಪ್ರಶ್ನೆಯೂ ಅಡಕವಾಗಿದೆ. ಈ ಪ್ರಶ್ನೆಗೆ ಉತ್ತರವಾಗಿಯೇ ಮುಂದಿನ ಅವರಿಬ್ಬರ ಜೀವನ ಓದುಗರೆದುರು ಪ್ರಸ್ತುತವಾಗುತ್ತದೆ. ಹೀಗೆ, ಮುಖ್ಯವೂ ಸಾಮಯಿಕವೂ ಆಗಿರುವ ಸಾಮಾಜಿಕ ವಿಷಯವೊಂದರ ಜಿಜ್ಞಾಸೆಯಾಗಿ ಕಾದಂಬರಿ ಮುಂದುವರಿಯುತ್ತದೆ. ಕೆಲವು ಮಹಿಳಾ ಚಿಂತಕರು ಅನುಮಾನ ಪಡುತ್ತಿರುವಂತೆ ಸ್ತ್ರೀವಿರೋಧಿಯೇನಲ್ಲ ’ಕವಲು’.
’ಎಗ್ಸಿಸ್ಟೆಂಶಿಯಲಿಸಂ (ಅಸ್ತಿತ್ವ ಸಿದ್ಧಾಂತ) ಇಲ್ಲದಿದ್ದರೆ ಸ್ತ್ರೀವಾದವು ಬಲವತ್ತರವಾಗುತ್ತಿತ್ತೆ?’ ಎಂಬ ತರ್ಕದವಳು ಇಳಾ. ಅವಳು ಮತ್ತು ಅವಳ ಪತಿ ಇಬ್ಬರೂ ತಂತಮ್ಮ ಅನುಕೂಲ ಯೋಚಿಸುವವರು. ಪರಿಣಾಮ, ಅವರವರದು ಅವರವರ ಜವಾಬ್ದಾರಿ ಎನ್ನುವಂತಹ ಸ್ಥಿತಿ. ಇಬ್ಬರೂ ದುಡಿಯುವವರಾದ್ದರಿಂದ ಈ ಪರಿಸ್ಥಿತಿ ಇನ್ನಷ್ಟು ತೀವ್ರ. ಇದೆಲ್ಲದರಿಂದಾಗಿ ಮಗಳು ಸುಜಯಾಳಿಗೆ ಅನ್ಯಾಯ. ಪ್ರೀತಿಯ ಡ್ಯಾಡಿಯಿಂದ ದೂರ. ’ಇಂಥ ಸಂಸಾರ ಬೇಕೇ?’ ಎಂದು ಭೈರಪ್ಪನವರು ಪ್ರಶ್ನಿಸುತ್ತಿರುವಂತಿದೆ ಕಥಾನಕ.
ಸುಜಯಾಳ ಅಜ್ಜಿಮನೆ (ವಿನಯನ ತಾಯಿಯ ಮನೆ) ಪ್ರವಾಸ, ಸತೀಶನ ಒಡನಾಟ, ತಾನು ’ಕಸಿನ್ ಅಲ್ಲ, ಅಣ್ಣ’ ಎಂಬ ಅವನ ಅರ್ಥಗರ್ಭಿತ ಮಾತು, ಅವನು ಮತ್ತು ಅಜ್ಜಿಯೊಡಗೂಡಿ ಸುಜಯಾಳ ದಿಲ್ಲಿ, ಮಸೂರಿ ಪ್ರವಾಸ, ಮಸೂರಿಯಲ್ಲಿ ವಿನಯನಿಗೆ ಆತನ ತಾಯಿ, ’ಆ ಮುಂಡೇನ ಬಿಟ್ಟು ಅತ್ಲಾಗೆ ಬೇರೆ ಮದುವೆ ಮಾಡ್ಕಳೊ. ಇಷ್ಟೆಲ್ಲ ಇದ್ದು ಯಾಕೆ ಒಂಟಿಯಾಗಿದೀಯ’ ಎಂದು ಹೇಳುವುದು, ಇದೆಲ್ಲ, ಭಾರತೀಯ ಪರಂಪರೆಯಲ್ಲಿರುವ ಜೀವನೋಲ್ಲಾಸದ ಪ್ರತಿಪಾದನೆಯಾಗಿ ಮೂಡಿಬಂದಿದೆ.
ತನ್ನ ಪತಿ ಜಯಕುಮಾರ ಅವನ ಬುದ್ಧಿಕುಂಠಿತ ಷೋಡಶಿ ಮಗಳಮೇಲೇ ಕಾಮಿಯಾಗಿದ್ದಾನೆಂದು ಮಂಗಳೆ ಅನುಮಾನಿಸುವ ಸನ್ನಿವೇಶವು ಆಧುನಿಕತೆ ಮತ್ತು ತಥಾಕಥಿತ ಸ್ತ್ರೀಸ್ವಾತಂತ್ರ್ಯಗಳು ನೀಡಿರುವ ಕಾಮದ ಸ್ವೇಚ್ಛೆಯು ಹೆಂಗಸಿನ ತಲೆಯನ್ನು ಎಷ್ಟರಮಟ್ಟಿಗೆ ಕೆಡಿಸಬಲ್ಲವು ಎಂಬುದಕ್ಕೆ ಉದಾಹರಣೆಯಾಗಿ ಮೂಡಿಬಂದಿದೆ. ಸ್ತ್ರೀವಿಮೋಚನಾ ಚಳವಳಿಯ ದುರಂತವೊಂದರ ಅರಿವೂ ನಮಗಿಲ್ಲಿ ಆಗುತ್ತದೆ.
ಮಂಗಳೆಯ ಸ್ತ್ರೀವಿಮೋಚನಾ ಸಿದ್ಧಾಂತ, ಮತ್ತು ತತ್ಫಲವೆನ್ನಬಹುದಾದ, ಪತಿ-ದಿವಂಗತ ಸವತಿ-ಮಲಮಗಳು ಈ ಮೂವರ ಮೇಲಣ ಅಸಹನೆ ಇವು, ಅವಳಲ್ಲಿ ಇವರೆಡೆಗೆ ಪ್ರೀತಿ-ವಾತ್ಸಲ್ಯ-ಆದರ ಈ ಭಾವನೆಗಳೇ ಹುಟ್ಟದಂತೆ ಅವಳನ್ನು ಆಕ್ರಮಿಸಿಕೊಂಡುಬಿಡುತ್ತವೆ. ದುರಂತ ಎಲ್ಲಿಗೆ ಬಂದು ತಲುಪುತ್ತದೆಂದರೆ, ಜಯಕುಮಾರನಿಗೆ ಪತ್ನಿಯೊಡನೆ ಕೂಡಲು ದೇಹಪ್ರಚೋದನೆಯೇ ನಾಸ್ತಿಯಾಗುತ್ತದೆ. ಮಂಗಳೆಗೂ ಇದು ನಷ್ಟವೇ ತಾನೆ. ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ-ಆದರಗಳು ಬಲುಮುಖ್ಯವೆಂಬ ಸಂದೇಶವಿಲ್ಲಿ ಸ್ಪಷ್ಟ. ಸಮಾನತೆ-ಮಹಿಳಾ ಜಾಗೃತಿಗಳ ಅಮಲಿನಲ್ಲಿ ತಾನೇ ಅತಿರೇಕಗಳನ್ನೆಸಗಿ ಮಂಗಳೆಯು ತಾನೇ ಕೌನ್ಸೆಲರ್ ಬಳಿ ಹೋಗುವ ಮನಸ್ಸುಮಾಡುವುದು ತಥಾಕಥಿತ ಮಹಿಳಾ ಜಾಗೃತಿಯ ವ್ಯಂಗ್ಯವಾಗಿ, ಅದೇ ಕಾಲಕ್ಕೆ ವ್ಯಾಖ್ಯೆಯಾಗಿಯೂ ಕಂಡುಬರುತ್ತದೆ. ಇಂಥ ಅನೇಕ ಮಹಿಳೆಯರನ್ನು ಭಾರತೀಯ ಸಮಾಜದಲ್ಲಿ ನಾವಿಂದು ಕಾಣಬಹುದು.
ಈ ನಡುವೆ ಕಾದಂಬರಿಯಲ್ಲಿ ’ಲಿವಿಂಗ್ ಟುಗೆದರ್’, ’ಪ್ರಿನಪ್ಷಲ್ ಅಗ್ರಿಮೆಂಟ್’ ಇವುಗಳ ನಿರರ್ಥಕತೆಯ ಕಥೆಯೂ ಬಂದುಹೋಗುತ್ತದೆ. ಅಮೆರಿಕದಲ್ಲಿ ಈ ಸುಳಿಗಳಿಗೆ ಸಿಕ್ಕು ನಚಿಕೇತ ಪಡುವ ಪಾಡುಗಳ ಅನಾವರಣದ ಮೂಲಕ ಭೈರಪ್ಪನವರು ಭಾರತೀಯನ ಜೀವನೋಲ್ಲಾಸಕ್ಕೆ ಪಾಶ್ಚಾತ್ಯ ಮನೋಭಾವದ, ಪಾಶ್ಚಾತ್ಯ ಸಂಸ್ಕೃತಿಯ ಮತ್ತು ಪಾಶ್ಚಾತ್ಯ ಕಾನೂನಿನ ಕಬಂಧಬಾಹುಗಳು ಹೇಗೆ ಧಕ್ಕೆ ತಂದವು ಮತ್ತು ಅವನ ಜೀವನ ನಿವರ್ಹಣೆಯನ್ನು ಹೇಗೆ ಕಷ್ಟಕರವನ್ನಾಗಿಸಿದವು ಎಂಬುದನ್ನು ನಿರೂಪಿಸುವುದರ ಜೊತೆಗೆ ಭಾರತೀಯ ಕುಟುಂಬ ಪದ್ಧತಿಯೇ ಉತ್ತಮವೆಂಬ ಸಂದೇಶವನ್ನೂ ಪರೋಕ್ಷವಾಗಿ ಸಾರುತ್ತಾರೆ. ಇತ್ತ, ಭಾರತದ ಸ್ತ್ರೀಯ ಶೋಷಣೆ ಕುರಿತು ಉದ್‌ಗ್ರಂಥ ಬರೆಯಲಿರುವ ಇಳಾಳ ಹಳಿತಪ್ಪಿದ ಬಾಳು, ಹಳಿತಪ್ಪುವಿಕೆಯಲ್ಲಿ ಅವಳ ಪಾತ್ರ, ನಂತರದ ಅವಳ ವಾಂಛೆಗಳ ತುಡಿತ, ಇದೆಲ್ಲ, ಪಾಶ್ಚಾತ್ಯ ಜೀವನಪದ್ಧತಿಗೆ ಮಾರುಹೋದವಳ ಮೌಲ್ಯಹೀನಬಾಳಿನ ಕುರುಹಾಗಿ ಮತ್ತು ಸ್ತ್ರೀವಿಮೋಚನೆಯ ಅಣಕವಾಗಿ ಪ್ರಸ್ತುತವಾಗುತ್ತದೆ. ಹೀಗೆ, ಕಾದಂಬರಿಗೊಂದು ಉನ್ನತ ಚಿಂತನೆಯ ಆಯಾಮವಿದೆ. ಆದರೆ, ಕಾದಂಬರಿಯಲ್ಲಿ ಸ್ತ್ರೀವಿಮೋಚನೆಯೆನ್ನುವುದು ಹೆಚ್ಚಾಗಿ ದೇಹಕಾಮನೆಯ ಸುತ್ತಲೇ ಸುತ್ತುವುದು ಮಾತ್ರ ನನಗೆ ಅಷ್ಟೇನೂ ಸಮಂಜಸವೆನ್ನಿಸಲಿಲ್ಲ. ದೇಹಕಾಮನೆಯಲ್ಲದೆ ಇನ್ನೂ ಹಲವು ವಿಷಯಗಳೂ ಸ್ತ್ರೀವಿಮೋಚನೆಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಇವೆ.
’ಗಂಡಸಿನ ಪಾಲುದಾರಿಕೆ ಸ್ವಲ್ಪವೂ ಇಲ್ಲದೆ ಹೆಣ್ಣು ತಾಯಿಯಾಗುವಂತಿದ್ದರೆ ಅದೀಗ ಸಂಪೂರ್ಣ ಸ್ವಾತಂತ್ರ್ಯ’ ಎಂದು ಮಂಗಳೆಯಲ್ಲಿ ಯೋಚನೆ ಮೂಡಿಸುವ ಮೂಲಕ ಭೈರಪ್ಪನವರು ಸ್ತ್ರೀಸ್ವಾತಂತ್ರ್ಯವನ್ನು ಲೇವಡಿಮಾಡಿದ್ದಾರಲ್ಲದೆ ಅದರ ವಿಪರ್ಯಾಸೋತ್ತುಂಗವನ್ನೂ ಸಾರಿದ್ದಾರೆ. ತನ್ನದು ಏಕಪಕ್ಷೀಯ ವಾದವಲ್ಲವೆಂದು ತೋರಿಸಿಕೊಳ್ಳಲೋ ಎಂಬಂತೆ ಭೈರಪ್ಪನವರು ಮಂಗಳೆಯ ವಿರುದ್ಧ ನೆಲೆಯಲ್ಲಿ ನಿಂತ ಸುಕನ್ಯಾ ಹೆಗಡೆಯ ವಿಷಾದದ ಕಥೆಯನ್ನು ಒಂದು ಚಿಕ್ಕ ಪ್ಯಾರಗ್ರಾಫ್ನಲ್ಲಿ ತಂದು ತೂರಿಸಿದ್ದಾರೆ.
ತನಗಾಗಿ ಮಂತ್ರಿ ದೊರೆರಾಜ ಅವನ ಹೆಂಡತಿಯನ್ನು ಬಿಡಲಾರನೆಂದು ಇಳಾಗೆ ಗೊತ್ತಾದಾಗ ಅವಳು, ’ಕುಟುಂಬ ಎನ್ನುವ ವ್ಯವಸ್ಥೆಯು ಹುಡಿಗುಟ್ಟಿಹೋಗುವ ತನಕ ಅನಿರ್ಬಂಧಿತ ಮುಕ್ತ ಪ್ರೇಮ ಸಾಧ್ಯವಿಲ್ಲ’ ಎಂದು ಯೋಚಿಸುವುದು ’ಮುಕ್ತ ಪ್ರೇಮ, ’ವಿಮೋಚನೆ’ ಇವು ಎಂಥ ಘೋರದೆಡೆಗೆ ಮಾನವಮಿದುಳನ್ನು ಕೊಂಡೊಯ್ಯಬಹುದು ಎಂಬುದನ್ನು ಓದುಗರ ಅರಿವಿಗೆ ತರುತ್ತದೆ.
’ಒಳ್ಳೆ ಹೆಂಡತಿ ಇದ್ದಿದ್ರೆ ಗಂಡಸು ಯಾಕೆ ಸೂಳೇರ ಹುಡಿಕ್ಕಂಡು ಹೋಗ್ತಾನೆ?’ ಎಂದು ಜಯಕುಮಾರನ ತಾಯಿಯ ಬಾಯಿಯಿಂದ ಭೈರಪ್ಪ ಹೇಳಿಸಿದ್ದು ಮಾತ್ರ ನನಗೆ ಕೊಂಚ ಪುರುಷಪಕ್ಷಪಾತದಂತೆ ಕಂಡುಬಂದಿತು. ಒಳ್ಳೆಯ ಹೆಂಡತಿ ಇಲ್ಲದಿರುವುದರಿಂದ ಸೂಳೆಯ ಬಳಿ ಹೋಗುವವರಿರುವಂತೆಯೇ, ಒಳ್ಳೆಯ ಹೆಂಡತಿ ಇದ್ದೂ ಸೂಳೆಯನ್ನು ಹುಡಿಕ್ಕಂಡು ಹೋಗುವವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅತಿಕಾಮ, ಮತ್ತು, ಭಾರತೀಯ ಪರಂಪರೆಯ ಕೊಡುಗೆಯಾದ ಯಾಜಮಾನ್ಯದ ಕವಚ ಇವು ಈ ಪುರುಷರನ್ನು ಒಳ್ಳೆಯ ಹೆಂಡತಿ ಇದ್ದೂ ಸೂಳೇರ ಹುಡಿಕ್ಕಂಡು ಹೋಗುವಂತೆ ಮಾಡುತ್ತವೆ. ಈ ಕಾದಂಬರಿಯಲ್ಲೇ ಅಂತಹ ವ್ಯಕ್ತಿ ದೊರೆರಾಜ ಇದ್ದಾನೆ.
’ಮಹಿಳಾಜಾಗೃತಿ, ವಿಮೋಚನೆ, ಸ್ವಾತಂತ್ರ್ಯ,’ ಎಂದೆಲ್ಲ ಹಾರಾಡುತ್ತಿದ್ದ, ಉಪನ್ಯಾಸ ನೀಡುತ್ತಿದ್ದ ಮಂಗಳೆ ಕೊನೆಯಲ್ಲಿ ಮನೆಗೆಲಸದಾಕೆಯನ್ನೂ ಉಳಿಸಿಕೊಳ್ಳಲಾರದಂತಹ ದೈನೇಸಿ ಸ್ಥಿತಿಯನ್ನು ತಲುಪುವುದು ಕಥಾ ವಿಷಯಕ್ಕೆ ನೀಡಿದ ತಾರ್ಕಿಕ ಅಂತ್ಯವಾಗಿ ಕಂಡುಬರದೆ ಸಿನಿಮೀಯ ಅಂತ್ಯವಾಗಿ ಕಂಡುಬರುತ್ತದೆ. (ಕೆಲಸದಾಕೆಗಿಲ್ಲಿ ಸ್ವಾತಂತ್ರ್ಯಸಿದ್ಧಿ!)
ಮಗನಿಗೆ ನ್ಯಾಯ ದೊರಕಿಸಿಕೊಡಲು ತನ್ನ ಮಾಜಿ ಪತಿ ಜಯಕುಮಾರನ ಬಳಿ ಯತ್ನಿಸಿ ಮಂಗಳೆ ಆ ಯತ್ನದಲ್ಲಿ ಸೋಲುವುದನ್ನು ಚಿತ್ರಿಸುವ ಮೂಲಕ ಭೈರಪ್ಪನವರು, ’ಸ್ತ್ರೀವಿಮೋಚನೆ’ಯ ಬೆನ್ನುಹತ್ತಿ ಹೊರಟವರ ಪಾಡು ಇಷ್ಟೇ’ ಎಂದು ಸಾರಿದಂತಿದೆ. ಇಳಾಳ ಬಾಳು ಮೂರಾಬಟ್ಟೆಯಾಗುವುದೂ ಇದೇ ಸಂದೇಶವನ್ನೇ ಸಾರುತ್ತದೆ. ಈ ಹಿನ್ನೆಲೆಯಲ್ಲಿ, ’ಆಧುನಿಕತೆ, ಮಹಿಳಾ ವಿಮೋಚನೆ, ಭಾರತೀಯ ಪರಂಪರೆ’ ಇತ್ಯಾದಿ ಸಂಗತಿಗಳ ಬಗ್ಗೆ ನಮ್ಮ ಸಮಾಜದಲ್ಲಿಂದು ಚರ್ಚೆಯಾಗಬೇಕೇ ಹೊರತು ಸ್ತ್ರೀದ್ವೇಷಿಯೆಂದು ಭೈರಪ್ಪನವರನ್ನು ಸಾರಾಸಗಟಾಗಿ ತಿರಸ್ಕರಿಸುವುದು ಸರಿಯಲ್ಲ.
ಕಾದಂಬರಿಯ ಕೊನೆಯಲ್ಲಿ, ಇಳಾಳ ಮಗಳು ಸುಜಯಾ, ಸುಜಯಾಳ ಅಣ್ಣಯ್ಯ ಸತೀಶ, ಜಯಕುಮಾರನ ಮಗಳು ವತ್ಸಲೆ, ವತ್ಸಲೆಯನ್ನು ಪತ್ನಿಯಾಗಿ ಸ್ವೀಕರಿಸುವ ನಚಿಕೇತ, ಹೀಗೆ, ಯುವಪೀಳಿಗೆಯು ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ತಮ್ಮದಾಗಿಸಿಕೊಳ್ಳುವುದನ್ನು ಬಿಂಬಿಸುವ ಮೂಲಕ ಆಶಾದಾಯಕವಾಗಿ ಕಾದಂಬರಿಯನ್ನು ಮುಗಿಸುತ್ತಾರೆ ಭೈರಪ್ಪ. ಈ ಯುವಕ-ಯುವತಿಯರೆಲ್ಲರೂ ಒಂದೊಂದು ರೀತಿಯಲ್ಲಿ ಬದುಕಿನ ಪಾಠ ಕಲಿತವರೆಂಬುದಿಲ್ಲಿ ಗಮನಾರ್ಹ. (ಈ ಪೀಳಿಗೆ ಆಧುನಿಕ ಪೀಳಿಗೆ ಎಂಬುದರ ಸಂಕೇತವಾಗಿ ಇ-ಮೇಲ್ ಅನ್ನು ತರಲಾಗಿದೆ.) ’ಈ ಕಾಲದ ಗಂಡುಗಳಿಗೆ ಪೂರ್ಣನಿಷ್ಠೆ ಇರೂದು ಅಪರೂಪ......ಹುಡುಗಿಯರೂ ಕಮ್ಮಿ ಇಲ್ಲ.......’ ಎಂಬ ಸಮತೂಕದ ಮಾತನ್ನು ಇ-ಮೇಲ್‌ನಲ್ಲಿ ಹೇಳಿಸಿ ಭೈರಪ್ಪನವರು ಕಾದಂಬರಿಯಲ್ಲಿ ತಾನು ವಸ್ತುನಿಷ್ಠನೂ ಪಕ್ಷಪಾತರಹಿತನೂ ಆಗಿದ್ದೇನೆ ಎಂದು ತನ್ನನ್ನು ಸಮರ್ಥಿಸಿಕೊಳ್ಳುವ ಜಾಣ್ಮೆ ತೋರಿದ್ದಾರೆ.
ಕಾದಂಬರಿಯಲ್ಲಿ ಭೈರಪ್ಪನವರು ಸ್ತ್ರೀವಿರೋಧಿಯಂತೆಯೂ ಪುರುಷಪಕ್ಷಪಾತಿಯಂತೆಯೂ ಕಂಡುಬಂದರೂ ಇಂದಿನ ಭಾರತೀಯ ಸಮಾಜದಲ್ಲಿನ ಕಟು ವಾಸ್ತವವೊಂದರಮೇಲೆ ಬೆಳಕು ಚೆಲ್ಲಿದ್ದಾರೆಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಸಮಾಜದಲ್ಲಿ ಇಳಾ-ಮಂಗಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಮತ್ತು ಚಿತ್ರಾ ಹೊಸೂರ್-ಸರಾಫ್ಗಳೂ ಸಾಕಷ್ಟು ಸಂಖ್ಯೆಯಲ್ಲಿರುವುದನ್ನು ನಾವು ಗಮನಿಸಿ, ಈ ದುಃಸ್ಥಿತಿಯು ನಿವಾರಣೆಗೊಳ್ಳಬೇಕೆಂಬ ಮನಸ್ಸು ಹೊಂದಿ ಸಮಚಿತ್ತದಿಂದ ಕಾದಂಬರಿಯನ್ನು ಓದಬೇಕಾಗುತ್ತದೆ.
ಕಾದಂಬರಿ ಓದಿದಮೇಲೆ ನಮಗೆದುರಾಗುವುದು, ’ಸ್ತ್ರೀವಿಮೋಚನಾ ಚಳವಳಿ’ ಭಾರತಕ್ಕೆ ಅವಶ್ಯವೆ? ಭಾರತೀಯ ಕುಟುಂಬದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ತರವೆ? ಭಾರತೀಯ ಪರಂಪರೆಯೇ ಎಲ್ಲಕ್ಕಿಂತ ಉತ್ತಮವಲ್ಲವೆ?’ ಎಂಬ ಪ್ರಶ್ನೆಗಳು. ಕಾದಂಬರಿಯಲ್ಲೇ ಈ ಪ್ರಶ್ನೆಗಳಿಗೆ ಉತ್ತರವಿದೆಯಾದರೂ ಕಾದಂಬರಿಯು ಸ್ತ್ರೀವಿಮೋಚನಾ ಚಳವಳಿಯ ಎಲ್ಲ ಆಯಾಮಗಳ ಚರ್ಚೆಯನ್ನೂ ಒಳಗೊಂಡಿಲ್ಲವಾದ್ದರಿಂದ ಸಂಪೂರ್ಣ ಉತ್ತರ ನಮಗೆ ಈ ಕಾದಂಬರಿಯಿಂದ ಸಿಗುವುದಿಲ್ಲ. ಮೇಲಾಗಿ, ’ಸ್ತ್ರೀವಿಮೋಚನೆ’ಯೆಂದರೆ ಸ್ವೇಚ್ಛೆ ಮತ್ತು ಮುಕ್ತ ಲೈಂಗಿಕ ಸ್ವಾತಂತ್ರ್ಯ ಎಂದಷ್ಟೇ ಅರ್ಥಯಿಸುವುದೂ ತಪ್ಪಾಗುತ್ತದೆ. ಭಿನ್ನಾಭಿಪ್ರಾಯಕ್ಕೆ ಎಡೆನೀಡದಂತಹ ವಿವಾದಾತೀತ ಕಥೆಯೂ ಈ ಕಾದಂಬರಿಯದಲ್ಲ.
ಆದರೆ, ಓದುಗರಲ್ಲಿ ಜಿಜ್ಞಾಸೆಯನ್ನಂತೂ ಈ ಕಾದಂಬರಿ ಹುಟ್ಟುಹಾಕುತ್ತದೆ. ಭೈರಪ್ಪನವರ ಈ ಉದ್ದೇಶದಮಟ್ಟಿಗೆ, ಅರ್ಥಾತ್, ಓದುಗರನ್ನು ವಿಚಾರಮಥನಕ್ಕೆಳೆಯುವಮಟ್ಟಿಗೆ ಕಾದಂಬರಿಯು ಸಂಪೂರ್ಣ ಯಶಸ್ವಿ. ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳು, ಅದರಲ್ಲಿ ಮುಖ್ಯವಾಗಿ ಕವಲುಹಾದಿಯಲ್ಲಿ ನಿಂತಿರುವ ಆಧುನಿಕ ಭಾರತೀಯ ಸ್ತ್ರೀ-ಪುರುಷ ಸಂಬಂಧ, ಕುಟುಂಬ ಪದ್ಧತಿ, ಕವಲುಹಾದಿಯಲ್ಲಿ ಸಾಗಿರುವ ಒಂದು ಸ್ತ್ರೀವರ್ಗ, ಈ ವಿಷಯಗಳ ಜಿಜ್ಞಾಸೆಗೆ ಕಾದಂಬರಿಯು ನಿಷ್ಠವಾಗಿದೆ. ಸಮಾನತೆಗಾಗಿ ನಡೆವ ಘರ್ಷಣೆಯಿಂದಾಗಿ ಮತ್ತು ಈ ಘರ್ಷಣೆಗೆ ಸಾಥ್ ಕೊಡುವ ’ಅಹಂ’ನಿಂದಾಗಿ ಹೃದಯಸಂಬಂಧಗಳು ಸಡಿಲಾಗುತ್ತಿರುವ, ಕ್ಷೀಣಿಸುತ್ತಿರುವ, ಬಂಧುರಬಾಂಧವ್ಯವೆಂಬುದು ನಶಿಸುತ್ತಿರುವ ಸಂದರ್ಭದ ಸೊಗಸಾದ ಚಿತ್ರಣ ಈ ಕಾದಂಬರಿಯಲ್ಲಿದೆ. ’ಭಾರತೀಯ ಪರಂಪರೆಯಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ಗಂಡು-ಹೆಣ್ಣಿನ ನಡುವೆ ಅಸಮಾನತೆ ಇದ್ದಂತೆ ಕಂಡುಬಂದರೂ ಅದು ಅಸಮಾನತೆಯಲ್ಲ, ಪ್ರಕೃತಿಸಹಜ ಹೊಂದಾಣಿಕೆ ಹಾಗೂ ಹೃದಯಗಳನ್ನು ಪರಸ್ಪರ ಕೂಡಿಸಿಟ್ಟಿರುವ ಬೆಸುಗೆ’ ಎಂಬ ಸಂದೇಶ ಕಾದಂಬರಿಯಲ್ಲಿ ಅಂತಃಪ್ರವಾಹವಾಗಿ ಪ್ರಸ್ತುತವಾಗಿದೆ.
ಕಲೆ-ಸೌಂದರ್ಯ
ಕಲಾಕೃತಿಯಾಗಿ ’ಕವಲು’ ಭೈರಪ್ಪನವರ ಬರವಣಿಗೆಯ ವಿಶಿಷ್ಟ ಸೌಂದರ್ಯವನ್ನು ಹೊಂದಿದೆ. ಎಚ್ಚರಿಕೆಯಿಂದ ನಿರ್ಮಿಸಿದ ಕಥಾಹಂದರದಮೇಲೆ ಕಥೆಯ ಬಳ್ಳಿಯನ್ನು ತೊಡಕಿಲ್ಲದಂತೆ ನಾಜೂಕಾಗಿ ಹಬ್ಬಿಸಲಾಗಿದೆ. ತಾವು ಹೇಳಬೇಕೆಂದಿರುವ ವಿಷಯದ ಪ್ರಸ್ತುತಿಗಾಗಿ ಒಂದು ಕಥೆಯನ್ನು ಹೆಣೆಯುವುದು, ಆ ಕಥೆಯು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳಿಗಿಂತ ಭಿನ್ನವಾಗಿರದಂತೆ ನೈಜತೆಯನ್ನು ಕಾಪಾಡಿಕೊಳ್ಳುವುದು, ಕಥೆಗೆ ಸಹಜವೆಂಬಂತೆ ಪಾತ್ರಗಳ ನಡೆ-ನುಡಿ-ಸಂಭಾಷಣೆಗಳ ಮೂಲಕ ತಮ್ಮ ಹೇಳಿಕೆಗಳನ್ನು ದಾಖಲಿಸುವುದು ಮತ್ತು ವಿಷಯವನ್ನು ಸಮಗ್ರವಾಗಿ ಪ್ರಸ್ತುತಪಡಿಸುವ ಉದ್ದೇಶದಿಂದ ಮುಖ್ಯ ಕಥೆಯೊಡನೆ ಹಾಸುಹೊಕ್ಕಾಗಿರುವಂತೆ ಉಪಕಥೆಗಳನ್ನು ಸೇರಿಸುವುದು ಈ ಕಲಾವಂತಿಕೆಯಲ್ಲಿ ಭೈರಪ್ಪನವರು ಸಿದ್ಧಹಸ್ತರು. ಅವರ ಈ ಕಲಾವಂತಿಕೆ ಈ ಕಾದಂಬರಿಯಲ್ಲೂ ಸ್ಪಷ್ಟಗೋಚರ.
ಕಾದಂಬರಿಯ ಪ್ರತಿಯೊಂದು ವಾಕ್ಯವನ್ನೂ ಕಾದಂಬರಿಯ ಉದ್ದೇಶಕ್ಕೆ ನೆರವಾಗುವಂತೆ ಮತ್ತು ಕಥೆಯ ಓಘಕ್ಕೆ ಪೂರಕವಾಗುವಂತೆ ಜತನದಿಂದ ರಚಿಸಲಾಗಿದೆ. ಈ ರಚನಾಕೌಶಲ ಭೈರಪ್ಪನಂತಹ ಪ್ರಬುದ್ಧ ಹಾಗೂ ಶಿಸ್ತುಬದ್ಧ ಬರಹಗಾರರಿಗೆ ಮಾತ್ರ ಸಾಧ್ಯ. ಬರೆದಿದ್ದನ್ನು ಆಚೆ ಎತ್ತಿಟ್ಟು, ಸ್ವಲ್ಪಕಾಲಾನಂತರ ಮತ್ತೆ ಓದಿ, ತಿದ್ದಿ ಅಂತಿಮ ಪ್ರತಿ ಸಿದ್ಧಪಡಿಸುವ ತಾಳ್ಮೆ ಮತ್ತು ಪರಿಶ್ರಮದ ವ್ಯಕ್ತಿ ಭೈರಪ್ಪನವರಾದ್ದರಿಂದ ಅವರ ಕಾದಂಬರಿಗಳಲ್ಲಿ ಅನವಶ್ಯ ವಾಕ್ಯವೆಂಬುದೇ ಇರುವುದಿಲ್ಲ. ’ಕವಲು’ ಕೂಡ ಅಂತೆಯೇ ಇದೆ.
ಹೇಳಿಕೆ, ಕಥೆಗಾರಿಕೆ, ಸಂಭಾಷಣೆ, ಮತ್ತು, ತನ್ಮೂಲಕ ವಿಷಯಮಂಡನೆಯ ಉದ್ದೇಶಸಾಧನೆ ಈ ವಿಷಯಗಳಲ್ಲಿ ಭೈರಪ್ಪನವರ ಎಂದಿನ ಕೌಶಲಕ್ಕೆ ಉದಾಹರಣೆಯಾಗಿ ’ಕವಲು’ ಕಾದಂಬರಿಯ ಈ ಕೆಳಗಿನ ಕೆಲವು ಭಾಗಗಳನ್ನು ಗಮನಿಸಬಹುದು:
* ಉಪಸಂಹಾರವಾಗಿ ತುಸು ವಿಶ್ರಮಿಸಿಕೊಳ್ಳುವಾಗ ಅವಳು ಕೇಳಿದಳು: ’ಹ್ಯಾಗನ್ನಿಸಿತು?’
’ಚನ್ನಾಗಿತ್ತು.’ ನಾನಂದೆ.
’ನೀನು ಏನೋ ಮುಚ್ಚಿಟ್ಟುಕೊತ್ತಿದೀಯ. ದಾಕ್ಷಿಣ್ಯವೆ? ಈ ವಿಷಯದಲ್ಲಿ ಗಂಡು ಹೆಣ್ಣುಗಳು ಮುಚ್ಚುಮರೆ ಮಾಡಿದರೆ ಸಂತೋಷಕ್ಕೆ ಊನವಾಗುತ್ತೆ.’
’ನೀನು ಕೇಳಿದ್ದು ಒಳ್ಳೇದೇ ಆಯಿತು. ನೀನು ಮಧ್ಯ ನನ್ನನ್ನ ಏಕವಚನದಲ್ಲಿ ಮಾತಾಡಿಸಿದ್ದು ರಸಭಂಗವಾದ ಹಾಗಾಯ್ತು. ಈಗಲೂ ಅಷ್ಟೆ.’
’ಹಾಗಿದ್ದರೆ ನೀವೂ ನನ್ನನ್ನ ಬಹುವಚನದಲ್ಲೇ ಅನ್ನಬೇಕಿತ್ತು.’
’ಭಾವನೆ ಉಕ್ಕಿ ಬಂದಾಗ.....’
’ನನಗೂ ಭಾವನೆ ಉಕ್ಕಿ ಬಂದಾಗ.....’ ಎಂದು ಅವಳು ಎದುರು ಹಾಕಿದಳು.
* ಕುರ್ಚಿಯಮೇಲೆ ತೂಕಡಿಸುತ್ತಾ ಕೂತಿದ್ದ ಮಗುವನ್ನು ಎಬ್ಬಿಸಿ ಹೊರಡುತ್ತಿರುವಾಗ ವಕೀಲೆಯ ಕಾರ್ಯದರ್ಶಿನಿ, ’ಇಳಾ ಮೇಡಂ’ ಎಂದು ಕರೆದಳು. ಇವಳು ಹತ್ತಿರ ಹೋದಾಗ ಅವಳು ನಯವಿನಯದಿಂದ, ’ಫೈವ್ ಥೌಸಂಡ್’ ಎಂದಳು. ಇವಳಿಗೆ ಮುಖಕ್ಕೆ ಪೆಟ್ಟು ಬಿದ್ದಂತಾಯಿತು.
* (ಮೊಮ್ಮಗುವಿಗೆ ಅಭ್ಯಂಗನ ಮಾಡಿಸಿ ನಂತರ ಮಲಗಿಸಿ ಅಳಿಯ ಜಯಕುಮಾರನ ಬಳಿ ಬಂದ ನಾಗಮ್ಮ ಅಳಿಯನಿಗೊಂದಷ್ಟು ಲೋಭಾನ ಹಾಕಿ, ಅರ್ಥಾತ್, ಬ್ರೈನ್ ವಾಷ್ ಮಾಡಲೆತ್ನಿಸಿ, ನಂತರ), ’ಬತ್ತೀನಿ. ಮಗೂಗೆ ಲೋಭಾನ ಹಾಕಬೇಕು’ ಎಂದು ಹೇಳಿ ಎದ್ದು ಹೋದರು.
* ಭಾರತ ದೇಶದ ಮುದುಕಿಯರಿಗೆ ಇದೇ ಕುಸುಬು (ಕಸುಬು). ತಮಗೆ ಗೊತ್ತಿರುವ ಹುಡುಗಿಯರಿಗೆಲ್ಲ ಹುಡುಗರನ್ನು ಗುರುತಿಸಿ ಶಿಫಾರಸು ಮಾಡುವುದು, ಹುಡುಗರಿಗೆ ಹುಡುಗಿಯರನ್ನು ಪತ್ತೆ ಮಾಡಿ ಜಾತಕ ಹೊಂದಿಸಿ ಗಂಟುಹಾಕುವುದು. ಮುದುಕಿಯರ ಮೂಲಕ ನಡೆಯುವ ವಿವಾಹದಲ್ಲಿ ಯಾವ ಬಿಸಿ ಇರುತ್ತೆ? ಯಾವ ಸಮರಸ ಇರುತ್ತೆ? ಅಜ್ಜಿ ಅಂತ ಈ ಫ್ಲ್ಯಾಟಿಗೆ ಇನ್ನು ಬರಕೂಡದು, ಎಂದು ನಿಶ್ಚಯಿಸಿದ. (ಅನುಭವಿ ಹಿರಿಯರು ಹೊಂದಿಸಿದ ಅಂತಹ ವಿವಾಹದಲ್ಲಿ ಬಿಸಿ, ಸಮರಸ ಎರಡೂ ಇರುತ್ತೆ ಎಂಬುದಿಲ್ಲಿ ಭೈರಪ್ಪನವರ ಅಭಿಪ್ರಾಯ.)
* ’ನನ್ನ ಫ್ಯಾಕ್ಟರಿಯ ಗೇಟಿನ ಹತ್ತಿರಕ್ಕೆ ನೂರು ಜನ ಮುಗ್ಧ ಹುಡುಗೀರನ್ನ ಕರೆಕೊಂಡು ಬಂದಿದ್ದರಲ್ಲ, ನಿಮ್ಮ ವಕೀಲೆ ಮಾಲಾಕೆರೂರ್, (ಇದು ಕಾದಂಬರಿಯ ಆರಂಭದ ಹಂತದಲ್ಲಿ ಆದದ್ದು), ಅವರ ಆಫೀಸಿನ ಮುಂದೆ ನೂರು ಜನ ಪ್ರಬುದ್ಧ ಗಂಡಸರನ್ನ ಕರೆತರ್ತೀನಿ ಅಂತ ಅವರಿಗೆ ಹೇಳಿ.’ (ಇದು ಕಾದಂಬರಿಯ ಕೊನೆಯಲ್ಲಿ ಬಂದ ಮಾತು.)
ಭೈರಪ್ಪನವರ ಕೌಶಲಕ್ಕೆ ಇನ್ನೊಂದು ಉದಾಹರಣೆಯೆಂದರೆ, ಇಳಾಳ ಮಗಳು ಸುಜಯಾಳನ್ನು ತಾಯಿಯ ಸ್ವೇಚ್ಛಾಚಾರ ವಿರೋಧಿಸಿ ಹೊರನಡೆಯುವಂತೆ ಮಾಡುವ ಮೂಲಕ ಭೈರಪ್ಪನವರು ಅದು ಸುಜಯಾಳ ’ಸ್ತ್ರೀವಿಮೋಚನೆ’ ಎಂಬುದನ್ನು ಸಾರುತ್ತಾರೆ. ಇಲ್ಲಿ ತಾಯಿ-ಮಗಳ ’ಸ್ತ್ರೀವಿಮೋಚನೆ’ಗಳೇ ಪರಸ್ಪರ ಘರ್ಷಿಸುವ ಸಂದರ್ಭ ’ಹೀಗೂ ಆಗುತ್ತದಲ್ಲ!’ ಎನ್ನುವಂತಿದೆ. ಭಾರತೀಯ ಪರಂಪರೆಯಲ್ಲಿ ಇಂಥ ವಿಚಿತ್ರ ಘರ್ಷಣೆಗೆ ಆಸ್ಪದವಿಲ್ಲ ಎಂಬ ಸಂದೇಶವಿಲ್ಲಿ ವ್ಯಕ್ತ.
ಬುದ್ಧಿಕುಂಠಿತ ಪುಟ್ಟಕ್ಕನಲ್ಲಿ (ವತ್ಸಲೆಯಲ್ಲಿ) ಉಂಟಾಗುವ ಬದಲಾವಣೆಯು ಓದುಗರಿಗೆ ಇಡೀ ಕಾದಂಬರಿಯಲ್ಲಿ ಅತ್ಯಂತ ಸಂತೋಷ ಕೊಡುವ ವಿಷಯ. ಕಾದಂಬರಿಯಲ್ಲಿ ಪುಟ್ಟಕ್ಕನ ಪಾತ್ರವನ್ನು ಓದುಗರಿಗೆ ಆಕೆಯಮೇಲೆ ಪ್ರೀತಿ-ಅನುಕಂಪ ಮೂಡುವಂತೆ ಅಚ್ಚುಕಟ್ಟಾಗಿ ಕಟ್ಟಿರುವುದರಿಂದ ಈ ಸಂತೋಷ ಲಭ್ಯ.
ಪಾತ್ರಗಳ ಹೆಸರುಗಳ ಆಯ್ಕೆಯಲ್ಲೂ ಭೈರಪ್ಪನವರು ಜಾಣತನ ತೋರಿದ್ದಾರೆ. ಜಯಕುಮಾರನಿಗೆ ಮೇಲಿಂದಮೇಲೆ ಸೋಲು; ಮಂಗಳೆ ಅವನಿಗೆ ಅಮಂಗಳೆ; ವಿನಯಚಂದ್ರ ವಿನಯರಹಿತ ಹಠವಾದಿ; ಭಾರತೀಯ ಪರಂಪರೆಗೆ ತಕ್ಕ ವ್ಯಕ್ತಿಗಳಾದ ವೈಜಯಂತಿ, ವತ್ಸಲೆ, ಸುಜಯಾ ಇವರದು ಅನ್ವರ್ಥ ನಾಮಗಳು.
ಭೈರಪ್ಪನವರು ಪ್ರಸ್ತುತ ವಿಷಯಮಂಡನೆಗೆ ಕಾದಂಬರಿಯ ಮಾಧ್ಯಮವನ್ನು ಆಯ್ದುಕೊಂಡಿರುವ ಬಗ್ಗೆ ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಅವರು ಹೀಗೆ ಹೇಳಿದ್ದಾರೆ: ’ನೇರ ಸಿದ್ಧಾಂತ ಮಂಡನೆಗೆ ಅವಶ್ಯವಿದ್ದ ಸಿದ್ಧತೆ, ಸ್ವೋಪಜ್ಞತೆಗಳ ಅಭಾವದಿಂದಾಗಿ, ಅನುಭವದ ಮೂಲಕವೇ ವಿಚಾರಗಳ ಅಭಿವ್ಯಕ್ತಿಯ ಮಾರ್ಗ ಹೆಚ್ಚು ಸೂಕ್ತವಾಗಿದೆಯೆಂದು ಭೈರಪ್ಪನವರಿಗೆ ಅನಿಸಿದ್ದರಿಂದಲೇ ಅವರು ಕಾದಂಬರಿಯ ಮಾಧ್ಯಮವನ್ನು ಆಯ್ದುಕೊಂಡಿದ್ದಾರೆ.’
ಆಮೂರರ ಈ ಮಾತನ್ನು ನಾನು ಒಪ್ಪುವುದಿಲ್ಲ. ನೇರ ಸಿದ್ಧಾಂತ ಮಂಡನೆ ಮಾಡಲೂ ಭೈರಪ್ಪನವರು ಸಮರ್ಥರು. ಆ ಭಾಷೆಯೂ ಅವರಿಗೆ ಸಿದ್ಧಿಸಿದೆ. ಅವರ ಸಾಹಿತ್ಯ ಚಿಂತನ ಗ್ರಂಥಗಳು ಇದಕ್ಕೆ ಸಾಕ್ಷಿ. ಸಿದ್ಧಾಂತವನ್ನು ನೇರವಾಗಿ ಹೇಳುವುದಕ್ಕಿಂತ ಮತ್ತು ನೇರವಾಗಿ ಹೇಳುತ್ತ ಉಪದೇಶ ಮಾಡುವುದಕ್ಕಿಂತ ಕಥೆಯಾಗಿ ಎದುರಿಟ್ಟಾಗ ಅದು ಓದುಗನ ಮನಸ್ಸಿನಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಸಾಮಾನ್ಯ ಓದುಗನಿಗೂ ಸರಳವಾಗಿ ಅರ್ಥವಾಗುತ್ತದೆ ಮತ್ತು ಹೆಚ್ಚು ಜನರನ್ನು ಆಕರ್ಷಿಸುತ್ತದೆ (ತಲುಪುತ್ತದೆ) ಎಂಬ ಉದ್ದೇಶದಿಂದ ಭೈರಪ್ಪನವರಿಲ್ಲಿ (’ಆವರಣ’ದಂತೆಯೇ) ಕಾದಂಬರಿಯ ಮಾಧ್ಯಮವನ್ನು ಆಯ್ದುಕೊಂಡಿದ್ದಾರೆಂದು ನನಗನ್ನಿಸುತ್ತಿದೆ. ನನ್ನ ಅನ್ನಿಸಿಕೆ ಹೌದಾಗಿದ್ದಲ್ಲಿ ಭೈರಪ್ಪನವರು ಸೂಕ್ತ ನಿರ್ಧಾರವನ್ನೇ ಕೈಗೊಂಡಿದ್ದಾರೆ.
ಭಾರತೀಯ ಪರಂಪರೆಗೆ ಅನುಗುಣವಾಗಿ ಸಾಗಿ ನೆಮ್ಮದಿಯ ಜೀವನ ನಡೆಸುವ ದಂಪತಿ ಜೋಡಿಯೊಂದರ ಕಥೆಯೂ ಮಂಗಳೆ-ಜಯಕುಮಾರ ಮತ್ತು ಇಳಾ-ವಿನಯ ಇವರ ಕಥೆಗೆ ಸಮಾನಾಂತರವಾಗಿ ಕಾದಂಬರಿಯುದ್ದಕ್ಕೂ ಬಂದಿದ್ದಲ್ಲಿ ಕಾದಂಬರಿಯು ಇನ್ನಷ್ಟು ಪ್ರಭಾವಶಾಲಿಯಾಗಿರುತ್ತಿತ್ತೇನೋ ಎಂದು ಒಂದು ಸಂದರ್ಭದಲ್ಲಿ ನನಗನ್ನಿಸಿತು. ಆದರೆ, ಹಾಗೆ ಮಾಡುವುದರಿಂದ ಈ ಎರಡು ಜೋಡಿಯ ಸುತ್ತ ಹೆಣೆದಿರುವ ಮುಖ್ಯ ಕಥೆ ಓದುಗನ ಮನದಲ್ಲಿ ಡೈಲ್ಯೂಟ್ ಆದೀತೆಂಬ (ಸತ್ತ್ವಗುಂದೀತೆಂಬ) ಯೋಚನೆಯಿಂದ ಭೈರಪ್ಪನವರು ಸಮಾನಾಂತರ ಜೋಡಿಯನ್ನು ಸೃಷ್ಟಿಸಿಲ್ಲದಿರಬಹುದು ಎಂದು ನನಗೆ ನಾನೇ ಸಮಾಧಾನಹೇಳಿಕೊಂಡೆ. ವೈಜಯಂತಿ-(ವೈಜಯಂತಿಯ ಸಂದರ್ಭದಲ್ಲಿ) ಜಯಕುಮಾರ ಈ ಜೋಡಿಯ ಚಿತ್ರಣವೇ ಸಾಕೆಂದು ಭೈರಪ್ಪನವರು ಇನ್ನೊಂದು ಅಂತಹ ಜೋಡಿಯ ಯೋಚನೆಯನ್ನು ಕೈಬಿಟ್ಟಿರಬಹುದು.
ಕೊನೆಯಲ್ಲೊಂದು ಲಘುನೋಟ: ಜಯಕುಮಾರನ ಫ್ಯಾಮಿಲಿ ವಿಷಯ ಡಿಸ್‌ಕಸ್ ಮಾಡಲು ಬಂದ ವಕೀಲೆ ಚಿತ್ರಾ ಹೊಸೂರಳನ್ನು ನೋಡಿದಾಗ ಜಯಕುಮಾರನಲ್ಲಿ, ’ಇವಳಿಗೆ ಮದುವೆಯಾಗಿದೆಯೆ? ಇವಳು ಸಂಸಾರದ ಕಷ್ಟಸುಖ, ಒತ್ತಡ, ಜಂಜಾಟ ಮತ್ತು ಪರಿಹಾರ ಮಾರ್ಗಗಳನ್ನು ಅನುಭವಿಸಿದ್ದಾಳೆಯೆ?’ ಎಂಬ ಪ್ರಶ್ನೆಗಳು ಹುಟ್ಟಿ ಅವಳನ್ನಾತ ನೋಡುವ ರೀತಿಯನ್ನೇ ಬದಲಿಸುತ್ತವೆ. ಪ್ರಕಟಣೆಗೆ ಮುನ್ನ ಈ ಕಾದಂಬರಿಯ ಮೊದಲ ಪರಿಜನ್ನು ಓದಿ ಚರ್ಚಿಸಿ, ಎರಡನೆಯ ಸ್ವರೂಪವನ್ನು ಓದಿ ವಿಶ್ಲೇಷಿಸಿ ಭೈರಪ್ಪನವರ ಉಪಕಾರಸ್ಮರಣೆಗೆ ಪಾತ್ರರಾಗಿರುವ ಶತಾವಧಾನಿ ಗಣೇಶರು ಬ್ರಹ್ಮಚಾರಿ!
ಈ ಲೇಖನವನ್ನು ಮುಗಿಸುವ ಮುನ್ನ ಓದುಗರಲ್ಲಿ ಒಂದು ವಿನಂತಿ. ’ಕವಲು’ ಕಾದಂಬರಿಯನ್ನು ಓದಿರದೆಯೇ ಈ ಲೇಖನ ಓದಿದವರು ಕಾದಂಬರಿಯನ್ನೊಮ್ಮೆ ಓದಿರಿ ಮತ್ತು ಓದಿದನಂತರ ಇನ್ನೊಮ್ಮೆ ಈ ಲೇಖನ ಓದಿರಿ. ನಿಮ್ಮ ಯೋಚನೆಗಾಗ ಇನ್ನಷ್ಟು ಸಾಮಗ್ರಿ ಸಿಕ್ಕೀತು. ಅಂತಹದೊಂದು ಯೋಚನೆಯಲ್ಲಿ ತೊಡಗಿಕೊಳ್ಳಬೇಕಾದ ಅವಶ್ಯಕತೆ ನಮಗಿಂದು ಆಧುನಿಕತೆಯ ಈ ಪರ್ವಕಾಲದಲ್ಲಿ (ಸಂಕ್ರಮಣ ಕಾಲದಲ್ಲಿ) ಇದೆಯೆಂಬುದು ನನ್ನ ಅಭಿಪ್ರಾಯ.