ಕೇಳ್ರಪ್ಪೋ ಕೇಳಿ - ಹೊಸ ವರ್ಷಕ್ಕೆ ನನ್ ರೆಸಲ್ಯೂಶನ್ನು!

ಕೇಳ್ರಪ್ಪೋ ಕೇಳಿ - ಹೊಸ ವರ್ಷಕ್ಕೆ ನನ್ ರೆಸಲ್ಯೂಶನ್ನು!

ಬೆಳಿಗ್ಗೆ ಎದ್ದೆ ... ನಾನು, ನಾನು, ನಾನು ಅಷ್ಟೇ ಮನೆಯಲ್ಲಿ ... ಮಿಕ್ಕವರೆಲ್ಲ ರಜೆಗಾಗಿ ಹೊರಗೆ ಹೋಗಿದ್ದರು ... ಬಚ್ಚಲಿಗೆ ನೆಡೆದೆ ...

"ಬೇರೆ ಯಾವುದೇ ಟೂಥ್ ಬ್ರಷ್ ನಿಮ್ಮ ಹಲ್ಲುಗಳ ಸಂದುಗೊಂದಿನ ನಡುವೆ ಇರುವ ಕೀಟಾಣುಗಳನ್ನು ಸ್ವಚ್ಚಗೊಳಿಸದು. ಇಗೋ ಬಂದಿದೆ ಹೊಸ " ಇದು ಯಾವುದೇ ಟೂತ್ ಬ್ರಷ್’ಗೆ ಅನ್ವಯಿಸುತ್ತದೆ .... aquafresh flexible, ಗುಂಡಿ ಒತ್ತಿದರೆ ತಾನೇ ಅಲ್ಲಾಡೋ ಬ್ಯಾಟರಿ ಚಾಲಿತ ಸೋನಿಕೇರ್ ಬ್ರಷ್, ಕೊರಳಿನಾಲಕ್ಕೆ ಇಳಿದು ಶುದ್ದ ಮಾಡುವ ರೀಚ್, ಓರಲ್-ಬಿ, ಕೋಲ್ಗೇಟ್ ಹೀಗೆ ... ಒಮ್ಮೊಮ್ಮೆ ಅನ್ನಿಸುತ್ತೆ, ಈ ರೀಚ್ ಟೂತ್ ಬ್ರಶ್ ಹೇಗಿದ್ರೂ ಅಲ್ಲೀ ತನಕ ಹೋಗಿರುತ್ತಲ್ಲಾ, ಕೀಟಾಣುಗಳನ್ನು ಕೆಳಕ್ಕೆ ದಬ್ಬುತ್ತೋ ಇಲ್ಲಾ ಮೇಲಕ್ಕೆ ಎಳೆದುಕೊಂಡು ಬರುತ್ತೋ ಅಂತ ...

ಕೊನೆಗೆ ಬ್ಯಾಟರಿ ಚಾಲಿತವನ್ನೇ ಕೈಯಲ್ಲಿ ಪಿಡಿದೆ .... ಈಗ ಪೇಸ್ಟಿನ ಸರದಿ.

ಹಲ್ಲನ್ನು ಸ್ವಚ್ಚಗೊಳಿಸುವ, ಬಾಯಿನ ದುರ್ವಾಸನೆಯನ್ನು ದೂರಗೊಳಿಸುವ, ಹಲ್ಲುಗಳನ್ನು ಫಳ ಫಳನೆ ಹೊಳೆಯುವಂತೆ ಮಾಡಿ, ಬಾಯಿ ಮುಚ್ಚಿ ನಗುವುದನ್ನು ಬಿಟ್ಟು ಬಾಯ್ತೆರೆದು ನಗುವಂತೆ ಮಾಡುವ, ಪೋಲೋರೈಡ್’ಯುಕ್ತ ಯಾವ ಟೂಥ್ ಪೇಸ್ಟನ್ನು ಉಪಯೋಗಿಸಲಿ? ಕೋಲ್ಗೇಟ್, ಪ್ರಾಮಿಸ್, ಕ್ಲೋಸ್-ಅಪ್, ಆಕ್ವಾಫ್ರೆಶ್? ಅಥವಾ ಹಲ್ಲು ಝುಮ್ಮೆನ್ನುವುದನ್ನು ತಡೆಗಟ್ಟುವ ಸೆನ್ಸೋಡೈನ್ ಬಳಸಲೇ? ಆದ್ರೆ, ನನ್ ಹಲ್ಲುಗಳು ಝುಂ ಅಂತಿಲ್ವೇ? ಕೊನೆಗೆ ಈ ಎಲ್ಲ ಟೂಥ್ ಪೇಸ್ಟ್’ಗಳನ್ನೂ ಕ್ರೆಸ್ಟ್’ನಲ್ಲಿ ಆವಾಹನೆ ಮಾಡಿ, ಪೇಸ್ಟನ್ನು ಬ್ರಷ್’ನ ಮೇಲೆ ಅಂಗಾತ ಮಲಗಿಸಿದೆ, ಟ್ಯೂಬಿನ ಮೂತಿಯಿಂದ ಒಮ್ಮೆ ಹಾಗೇ ಮೈದಡವಿ, ಬಳುಕುವ ಟ್ಯೂಬಿನ ಬಾಯಿ ಮುಚ್ಚಿದೆ. ಟ್ಯೂಬ್ ಇನ್ನು ರಾತ್ರಿವರೆಗೂ ನಿದ್ದೆ ಮಾಡಬಹುದು.

ಕ್ಲೋಸ್-ಅಪ್ ಬಳಸೋಣ ಅಂದುಕೊಂಡೆ ... ನನ್ನ ಬಾಯಿಂದ ಹೊರಹೊಮ್ಮುವ ಘಮ್ಮನೆಯ ವಾಸನೆಯು, ಒಂದು ಹುಡುಗಿ ತೊಟ್ಟ ಬಟ್ಟೆಯ ದುರ್ಗಂಧವನ್ನು ಹೊರಹಾಕಬೇಕಾದರೆ, ನಾನು ಖಾಲೀ ಬಸ್’ನ ಮುಂದುಗಡೆ ನಿಂತಿರಬೇಕು, ಹುಡುಗಿ ಹಿಂದಿನ ಬಾಗಿಲಿನಿಂದ ಹತ್ತಬೇಕು, ಡ್ರೈವರ್ ಬ್ರೇಕ್ ಹಾಕಬೇಕು ... ಇದೆಲ್ಲವೂ ಸಾಲದಂತೆ ಹಿಂದಿನ ಬಾಗಿಲಿನಿಂದ ಹಾರಿಬಿದ್ದ ಹುಡುಗಿ ನನ್ನ ಮೈ ಮೇಲೇ ಬೀಳಬೇಕು ... ಅಪ್ಪಪ್ಪ, ಭಯಂಕರ requirements ಕಣ್ರೀ ! ತಮಿಳು ನಟ ಸೂರ್ಯ’ನ್ನೇ ಕೇಳಬೇಕು ...

ಉಸಿರಿನ ದುರ್ವಾಸನೆಯನ್ನು ದೂರಗೊಳಿಸಿ, ದಂತ ಕ್ಷಯವನ್ನು ಹೋಗಲಾಡಿಸಿ, ಕಛೇರಿಯ ಬಾಗಿಲ ಬಳಿಯೇ ’ಈಗಾಗಲೇ ನಿಮ್ಮ ಹಲ್ಲುಗಳಲ್ಲಿ ಕೀಟಾಣುಗಳು ಸೇರಿರುವುದು ನಿಮಗೆ ಗೊತ್ತೇ" ಎಂದು ಕೇಳಿಸಿಕೊಳ್ಳದೇ,  ನನ್ನನ್ನು ಇಡೀ ದಿನ ಚೇತೋಹಾರಿಯಾಗಿರಿಸಲು, ಹಲ್ಲುಜ್ಜಲು ತೊಡಗಿದ್ದೆ !!! ಹಾಗೂ ಒಂದು ವೇಳೆ ಬಾಗಿಲಲ್ಲೇ ತಡೆದು ಕೇಳಿದರೆ "ಹೌದಾ ಅಣ್ಣಾವ್ರೇ? ನಾನು ಮೊನ್ನೇಯೇ ಹಲ್ಲು ಉಜ್ಜಿದ್ದೆನಲ್ಲ?" ಎಂದು ಹೇಳಬೇಕೆಂದಿದ್ದೇನೆ !!!

ಹಲ್ಲುಜ್ಜುವ ಕೆಲಸ ಮುಗಿಸಿ ಬಾಯಿಗೆ ಹಸ್ತವನ್ನು ಅಡ್ಡ ಹಿಡಿದು ಒಮ್ಮೆ ಗಾಳಿ ಹೊರಹಾಕಿದೆ ... ’ಘಂ’ ಅಂತೇನೂ ವಾಸನೆ ಬಾರದೆ ’ಗಬ್’ ಎಂದೇ ಬಂದಿತ್ತು ! ಹಲ್ಲು-ವಸಡುಗಳು ಕೀಟಾನುಮುಕ್ತ ಆಗಿರಬಹುದು ಆದರೆ ಉಸುರಿನ ದುರ್ವಾಸನೆ? ಅದು ಉಸಿರು ಇರೋ ತನಕ್ ಇದ್ದೇ ಇರುತ್ತಲ್ಲ?

ಉಸಿರು ಹೋದ ಮೇಲೆ, ಹೇಗೆ ಶಿವಾ? ಹೋದ್ ಮೇಲೆ ಹೇಳಿಕಳಿಸ್ತೀನಿ, ಮೂಸಿ ನೋಡು ಮಗಾ .....


ಉಸಿರಿನ ದುರ್ವಾಸನೆ ಹೋಗಲಾಡಿಸಲು ಮೌಥ್-ವಾಶ್’ ಸುರಿದುಕೊಂಡೆ. "ಇಡೀ ದಿನ ಬಾಯಿ ಮುಕ್ಕಳಿಸುವುದೇ ನಿಮ್ಮ ಕೆಲಸವೇ? ಹಾಗಿದ್ರೆ ಇದನ್ನು ಬಳಸಿ" ಎಂದು ಹೇಳಿದ್ದರಿಂದ ಕೋಲ್ಗೇಟ್-ಪ್ಲಾಕ್ಸ್ ತಂದಿದ್ದೆ. ಬೇರಾವುದೇ ಮೌಥ್-ವಾಶ್ ಕೊಂಡಲ್ಲಿ ನನಗೆ ಉಗಿಸಿಕೊಳ್ಳಲಿಕ್ಕೆ ಟೈಮ್ ಇರೋಲ್ಲ ನೋಡಿ ... ಮುಖವನ್ನು ನಾಲ್ಕೂ ದಿಕ್ಕಿನಲ್ಲಿ ವಕ್ರವಕ್ರವಾಗಿ ತಿರುಗಿಸಿ ಸುರಿದುಕೊಂಡ ದ್ರವ ಎಲ್ಲೆಲ್ಲೂ ಓಡಾಡುವಂತೆ ಮಾಡಿ ಉಗಿದೆ ... ಸಿಂಕಿನಲ್ಲಿ ... ನಿರಾಳವಾಯಿತು ... ದ್ರವಕ್ಕೆ ... ಸದ್ಯ ಬಿಟ್ನಲ್ಲ ಅಂತ !

ಅಂತೂ ಇಂತೂ ಹಲ್ಲುಜ್ಜುವ ಕಾರ್ಯ ಆಯ್ತು .... ಬರೀ ಬಾಯಿಗೇ ಅರ್ಧ ಘಂಟೆ ಹಿಡಿದಿತ್ತು !!!

ಹಲ್ಲುಜ್ಜುವಾಗ ಕೀಟಾಣುಗಳು ದಕ್ಷಿಣಕ್ಕೆ ಧಾವಿಸಿತ್ತೋ ಏನೋ, ಒಟ್ಟಿನಲ್ಲಿ ಟಾಯ್ಲೆಟ್’ಗೆ ಅರ್ಜಂಟ್ ಆಯ್ತು ... ಬಾಗಿಲ ಬಳಿಯೇ ಅಬ್ಬಾಸ್ ಸಿಗಬೇಕೇ? "ದಿನಕ್ಕೆ ಮೂರು ಬಾರಿ ಹಾರ್ಪಿಕ್ ಬಳಸಿ" ಅಂದ. ಆಯ್ತಪ್ಪ ಕೆಲಸಕ್ಕೆ ನನ್ನ ಬದಲು ನೀನು ಹೋಗ್ತೀಯಾ ಅಂದೆ? ಅವನು ಮೂಗು ಮುಚ್ಚಿಕೊಂಡೆ ಆಚೆ ಬಂದ. ನೆಮ್ಮದಿಯಾಗಿ ನನ್ನ ಕೆಲಸ ಮುಗಿಸಿ ಆಚೆ ಬಂದೆ ಅನ್ನಿ ! ಇದರ ಬಗ್ಗೆ ಹೆಚ್ಚು ಸ್ಥೂಲವಾಗಿ ಬರೆಯೋದಿಲ್ಲ ...

ಕೈ ತೊಳೆವ ಕಾರ್ಯದಲ್ಲಿ ತೊಡಗಿದ್ದೆ. ಸಾಬೂನು ಹಚ್ಚಿ ಪೂರ್ತಿ ಒಂದು ನಿಮಿಷ ಕೈ ತೊಳೆಯೋಣ ಅಂದರೆ "ನಿನ್ನ ಸಾಬೂನು ಅಷ್ಟು ಸ್ಲೋ’ನಾ?" ಅಂತ ಯಾರಾದರೂ ಪುಟಾಣಿಗಳು ಅಣುಕಿಸಿಯಾರು ಎಂದುಕೊಂಡು ’ಕೇವಲ ೧೫ ಸೆಕೆಂಡ್’ಗಳಲ್ಲಿ ಕೀಟಾಣುಗಳನ್ನು ಕೊಲ್ಲುವ ಲೈಫ್ ಬಾಯ್ ಹ್ಯಾಂಡ್ ವಾಷ್’ ಬಳಸಿದೆ ! ಅಂಗೈ ಸ್ವಚ್ಚವಾದರೂ ಬಣ್ಣ ಏನೂ ಬದಲಾಗಲಿಲ್ಲ ಬಿಡಿ ! ಪರವಾಗಿಲ್ಲ ಬಿಡಿ ... ಸದ್ಯ ಹ್ಯಾಂಡೇ ವಾಶ್-ಔಟ್ ಆಗಲಿಲ್ಲವಲ್ಲ ... ಹದಿನೈದು ಸೆಕೆಂಡ್ ಕೈ ತೊಳೆದ ಮೇಲೆ ಕೈ ಒರೆಸಿಕೊಳ್ಳಲು ಹೋದಾಗ ಬರೀ ಮೂಳೆಮಾತ್ರ ಇದ್ದರೆ ಹೇಗಿರುತ್ತೆ? ಊಹಿಸಿಕೊಳ್ಳಿ!!!

ಮುಂದ? ಅಂದ್ರಾ? ಸದ್ಯಕ್ಕೆ ತಂಪಾದ ನೀರಿನಲ್ಲಿ ಮುಖ ತೊಳೆದೆ ...

ಮೊದಲು ಒಂದು ಬಟ್ಟಲು ಕಾಫೀ ಹೀರಿ ನಂತರ ಸ್ನಾನಕ್ಕೆ ಇಳಿಯೋಣ ಎನ್ನಿಸಿ ಅಡುಗೆ ಮನೆಯತ್ತ ನೆಡೆದೆ. ಹಾಗೇ ಗಕ್ಕನೆ ಒಮ್ಮೆ ನಿಂತು ಸ್ಟೋವ್ ಬಳಿಗೆ ಓಡಿ, ನಿಂತು "ಬೂಸ್ಟ್ ಈಸ್ ಥೆ ಸೀಕ್ರೆಟ್ ಆಫ್ ಮೈ ಎನೆರ್ಜಿ" ಎಂದೆ. "ಅವರ್ ಎನೆರ್ಜಿ" ಎನ್ನಲು ಯಾರೂ ಇರಲಿಲ್ಲ ... ನನಗೆ ಈ ’ಅವರ್’ ಇನ್ನೂ ಅರ್ಥವಾಗಿಲ್ಲ ... ’ಅವರ್’ ಎಂದರೆ ಆಂಗ್ಲದ "ನಮ್ಮ" ಅಂತೆಲೋ ಅಥವಾ ಕನ್ನಡದ "ಬೇರೆಯವರ" ಅಂತಲೋ?

ಆದರೆ ನಮ್ಮ ಮನೆಯಲ್ಲಿ ಬೂಸ್ಟ್ ಇಲ್ಲ, ಬಿಡಿ. ಅಂದಿನ ದಿನಗಳಲ್ಲಿ ಕಾಂಪ್ಲಾನ್ ಕುಡಿಯುತ್ತಿದ್ದೆ. ಐದಡಿ ಮೇಲೆ ಹೋಗಲೇ ಇಲ್ಲ ನನ್ನ ಹೈಟು ! ಹಾರ್ಲಿಕ್ಸ್ ಕುಡಿಯಲು ನಮ್ಮಮ್ಮ ಬಾಲ್ಯದಲ್ಲೇ ಹೇಳಿಕೊಟ್ಟಿದ್ದರು. ಆದರೆ ನನಗೆ ಬೋರ್ನ್ ವೀಟಾನೇ ಇಷ್ಟ. ಅವೆಲ್ಲ ಅಂದು. ಈಗ ಭಯಂಕರ ಡಯಟ್. ಕೆಟ್ಟ ಮೇಲೆ ಬುದ್ದಿ ಬಂತು ಅಂತಾರಲ್ಲ ಹಂಗೆ. ಏನಿದ್ದರೂ ಶುಗರ್ಲೆಸ್ ಕರಿ ಕಾಫಿ ಅಷ್ಟೇ !

"ಸಕ್ಕರೆ ಕಡಿಮೆ ಅಂತ ಹೇಳಲಿಲ್ಲ ಯಾಕೆ? ... ಸೊಸೆ ಸ್ವೀಟ್ ಇದ್ದಾಳಲ್ಲ ಅಷ್ಟು ಸಾಕು" ಎನ್ನೋ ಬ್ರೂ ಕಾಫಿ ಕುಡಿಯಲೇ? ನೆಸ್ಲೆ ಅವರ ಸನ್ ರೈಸ್ ಕಾಫಿ ಕುಡಿದು ಛಳಿಯಲ್ಲಿ ನಡುಗುವ ಮೊಲದ ಮರಿ’ಯನ್ನು ಎತ್ತಿಕೊಳ್ಳಲೇ? ಅಥವಾ ಪಾಂಡುರಂಗ ಕಾಫಿ ಕುಡಿಯಲೇ? ರುಚಿಯೇ ಖೋತಾ ಆಗಿರೋ ಕೋಥಾಸ್ ಕಾಫಿ ಕುಡಿಯಲೇ? ಅಥವಾ ಲೇಟೆಸ್ಟ್ ಆಗಿ ಕಾಫೀ-ಡೆ ಪುಡಿ ಬಳಸಲೇ?

ಸದ್ಯಕ್ಕೆ ಮನೆಯಲ್ಲಿರೋ, ಮೂಲೆಯ ಕಾಕಾ ಅಂಗಡಿಯ ತುಕ್ಕು ಹಿಡಿದ ಡಬ್ಬದ ಕಾಫಿ ಪುಡಿಯನ್ನೇ ಬಳಸಿ ಫಿಲ್ಟರ್ ಕಾಫಿ ಮಾಡಿಕೊಂಡೆ. ಬಿಸಿ ಜಾಸ್ತಿ ಆಗಿ, ಬಾಯಿ ಸುಟ್ಟುಕೊಂಡೆ. ಕೊನೆಗೆ ಯಾವ ರುಚಿಯೂ ನಾಲಿಗೆಗೆ ಹತ್ತದೇ ಲೋಟದ ಕಾಫಿ ಖಾಲೀ ಮಾಡಿದೆ.

ಸುಟ್ಟ ನಾಲಿಗೆ ಥಣ್ಣಗಾದ ಮೇಲೆ ಬೇಕಿದ್ರೆ ’ಪ್ರಕೃತಿ ಮಡಿಲಲ್ಲಿ ಬೆಳೆದ ಕಣ್ಣನ್ ದೇವನ್’ ಎಲೆಗಳ ಚಹಾ ಕುಡಿದರಾಯ್ತು ... ಅಥವಾ ಜ್ವರವೇ ಬಾರದ ಬ್ರೂಕ್ ಬಾಂಡ್ ಕೆಂಪು ಲೇಬಲ್ ಚಹಾ, ಇಲ್ಲವಾದಲ್ಲಿ ’ತಾಜ್ ಮಹಲ್’ ಚಹಾ ಕುಡಿದು ’ವಾಹ್ ತಾಜ್’ ಎಂದರಾಯ್ತು. ಹಿಂದೊಮ್ಮೆ, ಹೀಗೇ ತಾಜ್ ಮಹಲ್ ಚಾಯ ಕುಡಿದು, ಜೋರಾಗಿ ತಲೆಯನ್ನು ಆಡಿಸುತ್ತ, ತಬಲ ಬಾರಿಸಿ ಎರಡು ದಿನ ಕುತ್ತಿಗೆ ಉಳುಕಿತ್ತು !

ಕಾಫೀ ಹೀರಿದ ಕಪ್ ಅನ್ನು ಸಿಂಕ್’ಗೆ ಹಾಕಲು ಹೋದೆ ... ನೆನ್ನೆ ರಾತ್ರಿಯಿಂದ ಬಿದ್ದಿದ್ದ ಪಾತ್ರೆಗಳು ನನ್ನನ್ನು ಅಣಗಿಸುತ್ತಿತ್ತು. ಅಂಗೈನ ಚರ್ಮ ಕಿತ್ತು ಬರದಂತೆ ಹೂವಿನ ಹಾಗೆ ಕಾಪಾಡುವ ವಿಮ್ ಬಾರ್ ಬಳಸಿ ಪಾತ್ರೆಗಳನ್ನೆಲ್ಲ ಥಳ ಥಳ ಹೊಳೆವಂತೆ ಮಾಡಿದೆ. ಹಿಂದೊಮ್ಮೆ ಹೀಗೆ ಪಾತ್ರೆ ತೊಳೆದಿದ್ದಕ್ಕೆ ನನ್ ಹೆಂಡತಿ ’ಇನ್ನು ಮುಂದೆ ನೀವೇ ಯಾಕೆ ಪಾತ್ರೆ ತೊಳೀಬಾರದು?" ಅಂತ ಕೇಳಿದ್ದಳು !!!

ಮೌಥ್-ವಾಶ್ ಅಯ್ತು, ಹ್ಯಾಂಡ್ ವಾಶ್ ನಂತರ ಈಗ ಫೇಸ್ ಅಂಡ್ ಬಾಡಿ ವಾಶ್ ...

ಸ್ನಾನಕ್ಕೆ ಬಚ್ಚಲಮನೆಯತ್ತ ಹೊರಟೆ. ಕನ್ನಡಿಯಲ್ಲಿ ನೋಡಿಕೊಂಡೆ. ಶೇವಿಂಗ್ ಅಗತ್ಯ ಅನ್ನಿಸಿತು. ಹಿಂದೊಮ್ಮೆ ಹೀಗಾಗಿತ್ತು. ಪಾಮೋಲೀವ್’ನವರ ಶೇವಿಂಗ್ ಕ್ರೀಮ್’ಅನ್ನು ಟೂಥ್ಪೇಸ್ಟ್ ಅಂದುಕೊಂಡು ಹಲ್ಲುಜ್ಜಿದ್ದೆ! ಅಂದಿನಿಂದ ಹಲ್ಲು ನುಣುಪಾಗಿತ್ತು ಅಂತೇನಲ್ಲ ... ಅಂದಿನಿಂದ ಯಾವುದೇ ಕಂಪನಿಯರ ಎರಡನೇ ದಾಸ್ತಾನು ನಮ್ಮ ಮನೆಗೆ ತರೋಲ್ಲ ಅಂತ ಮನಸ್ಸು ಮಾಡಿದ್ದೆ.  ಅಂದುಕೊಂಡಿದ್ದೆಲ್ಲಾ ಕಾರ್ಯಗತಗೊಳಿಸಲು ಆಗೋಲ್ಲ, ಅನ್ನೋದೂ ಸತ್ಯ !

ಶೇವಿಂಗ್ ಬ್ರಶ್ ಹಿಡಿದು "ನನಗೂ ಒಂದು ಡ್ರಾಪ್ ಕೊಡೋ" ಎಂದು ಹೇಳುತ್ತ ಒಂದು ಹನಿ ನಾನೇ ಹಾಕಿಕೊಂಡೆ. ಸೊಗಸಾದ ಬಿಳೀ ಕುರುಚಲು ಗಡ್ಡದ ಮೇಲೆ ನೊರೆಯುಕ್ತ ಶೇವಿಂಗ್ ಕ್ರೀಮ್ ಹಚ್ಚಿಕೊಂಡೆ. ಆಗಲೇ ನೆನಪಾದದ್ದು ನನ್ನ ಬಳಿ ಜಿಲೆಟ್’ನ ಎಲೆಕ್ಟ್ರಿಕ್ ಶೇವರ್ ಇರೋದು, ಅದಕ್ಕೆ ಸೋಪು ಬೇಡ, ಏನೂ ಬೇಡ ... ಬರೀ ಮುಖ ಒಂದಿದ್ದರೆ ಸಾಕು ಅಂತ. ಪ್ರತಿ ಸಾರಿ ಹೀಗೇ ಆಗುತ್ತೆ. ವಾರಾಂತ್ಯ ಉಳಿದುಕೊಳ್ಳುವ ಅತಿಥಿಗಳಿಗೆ ಎಂದು ತಂದಿಟ್ಟಿರೋ ಶೇವಿಂಗ್ ಕ್ರೀಮ್ ನಾನೇ ಬಳಿದುಕೊಂಡು, ದಂಡ ಮಾಡಿ ಖಾಲೀ ಮಾಡ್ತಿದ್ದೀನಿ. 

ಮುಖ ತೊಳೆದು, ಒರೆಸಿಕೊಂಡು ಕ್ರೀಮ್ಲೆಸ್ ಗಡ್ಡಕ್ಕೆ ಕಾರ್ಡ್ ಲೆಸ್ ರೇಜರನ್ನು ಒಯ್ದೆ ... ನುಣುಪಾದ ಕೆನ್ನೆಯನ್ನು ಯಾವುದಾದರೂ ಸುಂದರಿ ಬಂದು ದಡವಿ ಒರಗಿ ನಿಲ್ಲುತ್ತಾಳೇನೋ ಎಂದು ಕಾದೆ. ಎಷ್ಟೊ ಹೊತ್ತಿನ ಮೇಲೆ ಒಂದು ಸೊಳ್ಳೇ ಬಂತು!

ಕೆನ್ನೆ ಎಷ್ಟು ನುಣುಪಾಗಿತ್ತು ಅಂದರೆ ಕೆನ್ನೆ ಮೇಲೆ ನಿಂತ ಸೊಳ್ಳೆ ಕಾಲು ಜಾರಿ ಬಿದ್ದು, ಕಾಲು ಉಳುಕಿ, ಒಂದು ಕಾಲು ಮಡಿಸಿಕೊಂಡು ಹಾರಿ ಹೋಗಿತ್ತು !

ಕೆರೆದುಕೊಂಡ ಗಡ್ಡ ಹಾಗೇ ಬಿಡಲಾಗುತ್ತದೆಯೇ? ನಾನು young’ಆಗಿ ಇದ್ದಾಗಲಿಂದಲೂ ’ಓಲ್ಡ್ ಸ್ಪೈಸ್’ ಹಚ್ಚಿಯೇ ಅಭ್ಯಾಸ. ಒಮ್ಮೆ ಮುಖಕ್ಕೆ ಸವರಿಕೊಂಡ ತಕ್ಷಣವೇ, ಸಮುದ್ರದ ಅಲೆಗಳ ಮೇಲೆ ಯಾನ ಮಾಡಿದ ಅನುಭವ!

ಅನುಭವ ಥಣ್ಣಗಾದ ಮೇಲೆ ಸ್ನಾನಕ್ಕೆ ಅಣಿಯಾದೆ ... ಕನ್ನಡಿಯಲ್ಲಿ ಸೂಪರ್ ಬಾಡಿ ನೋಡಿಕೊಂಡೆ "ನೀವು ನಿಶಕ್ತಿಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ನ್ಯೂಟ್ರಿಗೈನ್ ತೆಗೆದುಕೊಳ್ಳಿರಿ. ಆರೇ ವಾರಗಳಲ್ಲಿ ಸದ್ರುಢ ಶರೀರ ನಿಮ್ಮದಾಗುವುದು" ಎಂದಿದ್ದರು ಅಂತ ಅಂಗಡಿಗೆ ಹೋಗಿ ಕೊಂಡು ತಂದಿದ್ದೆ. ಕೊಡೋ ಅರ್ಜಂಟ್’ನಲ್ಲಿ ಅವನು ನ್ಯೂಟ್ರಿಸ್ಲಿಮ್ ಕೊಟ್ಟಿದ್ದ. ನಾನೂ ನೋಡಲಿಲ್ಲ. ಒಂದು ದಿನ ಕುಡಿದಿದ್ದಕ್ಕೆ, ಮೊದಲೇ ಸಣ್ಣ ಇದ್ದ ನಾನು ಇನ್ನೂ ಸಣ್ಣಗಾಗಿದ್ದೆ !

"ಆರೇ ವಾರಗಳಲ್ಲಿ ಸದ್ರುಢ ಶರೀರ ನಿಮ್ಮದಾಗುವುದು" ಎಂದು ಜಾಹೀರಾತು ನೋಡಿ ನನ್ನ ಗೆಳೆಯನೊಬ್ಬ ತನ್ನ ಮದುವೆಗೆ ಆರು ವಾರಗಳ ಮುನ್ನ ತೆಗೆದುಕೊಂಡಿದ್ದ. ಅವನಿಗೆ ಸದ್ರುಢವಾದ ಹೆಂಡತಿ ಖಂಡಿತ ಸಿಕ್ಕಿದ್ದಳೆ ಕಣ್ರೀ !!

ಇನ್ನು ಮಹಾಮಜ್ಜನ ....

"ನನ್ನ ತಲೇ ಮೇಲೆ ಆಣೆ ಮಾಡಿ ಹೇಳ್ತೇನೆ. ನನಗೆ ಡ್ಯಾಂಡ್ರಫ್ ಇಲ್ಲ" ... ಯಾವ ಶ್ಯಾಂಪೂ ಬಳಸಲಿ ... ಸಧ್ರುಡ ಕೂದಲನ್ನು ಹೊಂದಿದಲ್ಲಿ, ಕೆಟ್ಟು ಹೋದ ಬಸ್ಸನ್ನೂ ಎಳೆದುಕೊಂಡು  ರಿಪೇರಿಗೆ ಒಯ್ಯಬಹುದು ... ಎಣ್ಣೆ ಜಿಡ್ಡು ಇರುವ ಕೈಯನ್ನು ರೇಲಿಂಗ್ಸ್ ಹಿಡಿದು ಹುಡುಗಿಯ ಮುಂದೆ ಜಾರಬೇಕಿಲ್ಲ ... ಸುಮ್ಮನೆ ಹಾಗೇ ಥಣ್ಣನೆ ಗಾಳಿಗೆ ನವಿರಾಗಿ ಹಾರುವ ಕೂದಲನ್ನು ಹೊಂದಲು, ಡ್ಯಾಂಡ್ರಫ್’ನಿಂದ ಮುಕ್ತಿ ಹೊಂದಲು, ಹೆಗಲ ಮೇಲ್ ತಲೆ ಇಲ್ಲದೇ ಇದ್ದರೂ ’ಹೆಡ್ ಅಂಡ್ ಶೋಲ್ಡರ್ಸ್’ ಬಳಸಿದೆ ...

ಈಗ ಅತ್ಯಂತ ಕ್ಲಿಷ್ಟಕರ ಸಮಸ್ಯೆ ....

ಶವರ್’ನಿಂದ ನೀರು ಬೀಳುವುದು ಮುಂದುವರೆಯುತ್ತಲೇ, ನನ್ನ ಮನಸ್ಸು ಸಂಧಿಗ್ದಕ್ಕೆ ಸಿಲುಕಿತು ... ಕಾಡಿನ ಮಧ್ಯೆ ಸಣ್ಣ ಜಲಪಾತಕ್ಕೆ ಹೋಗಿ "ಲಾ ಲಲಲಲಾಅ ಲಾ ಲಾ ಲಾ" ಎನ್ನುತ್ತ ಲಿರಿಲ್ ಹಚ್ಚಿಕೊಂಡು ಸ್ನಾನ ಮಾಡಲೇ? ದೊಡ್ಡ ಬಚ್ಚಲ ಮನೆಯ ಜಕ್ಕೂಜಿಯಲ್ಲಿ ಕುಳಿತು ಹದವಾಗಿ ಕೈಗಳ ಮೇಲೆ ಬೆಳಕನ್ನೇ ಹಿಡಿದಿಟ್ಟಿರುವ ಪಾರದರ್ಶಕ ಪಿಯರ್ಸ್ ಓಡಿಸಲೇ? ಕ್ರಿಮಿ ಕೀಟಾಣುಗಳನ್ನು ಕೊಲ್ಲುವ ಡೆಟಾಲ್ ಹಚ್ಚಲೇ? ದುರ್ನಾತ ತೊಲಗಿಸಲು ಲೈಫ್ ಬಾಯ್ ಹಚ್ಚಲೇ? ಸಿನಿಮಾ ತಾರೆಯರ ಸಾಬೂನು ಲಕ್ಸ್ ಬಳಸಲೇ?

ಸಿನಿಮಾ ತಾರೆಯರ ಸಾಬೂನು ಲಕ್ಸ್ ಬಳಸೋದಕ್ಕೆ ನನ್ನ ಮನ ಒಪ್ಪೋಲ್ಲ ... ನನಗೆ ಇನ್ನೊಬ್ಬರ ಸೋಪ್ ಬಳಸಿ ಅಭ್ಯಾಸವಿಲ್ಲ !

ಎಷ್ಟೇ ನೀರು ಬಿದ್ದರೂ ಕರಗದ, ಘಮ್ಮನೆ ಸುವಾಸನೆ ಬೀರುವ, ಮೈಮೇಲಿದ್ದರೆ ಅಲ್ಲೇ ಆರೋಗ್ಯ ಕಾಪಾಡುವ ಸಾಬೂನಿನ ಹಾಡು "ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯ" ಹೇಳಿಕೊಂಡು ಸ್ನಾನ ಮುಗಿಸಿದೆ ಅನ್ನಿ ... ’ಲೈಫ್ ಬಾಯ್’ ಒಂದು ಗಂಡು ಸಾಬೂನು !

ಹಿಂದೊಮ್ಮೆ, ’ಸಂತೂರ್’ ಅನ್ನೇ ಬಳಸಿದ್ದೆ. ಸ್ನಾನ ಮಾಡಿ ಹೊರಬಂದವನನ್ನು ’ಪಪ್ಪಾ’ ಎಂದು ಓಡಿ ಬಂದ ಮಗನನ್ನು ಅನಾಮತ್ತಾಗಿ ಎತ್ತಿಕೊಂಡು, ಅವನ ಭಾರ ತಡೆಯಲಾರದೆ ಬಿದ್ದಿದ್ದೆ !! ’ಸಂತೂರ್’ ಹಚ್ಚಿಕೊಂಡರೆ ನೋಡಲಿಕ್ಕೆ ಚಿಕ್ಕವರ ಹಾಗೆ ಕಾಣಬಹುದು ಆದರೆ ವಯಸ್ಸು ಕಡಿಮೆ ಆಗುತ್ತೆ ಅಂತ ಅವರೇನೂ ಹೇಳಲಿಲ್ಲ ನೋಡಿ !!

ಲೈಫ್ ಬಾಯ್’ನಿಂದ ತೊಳೆದ ಮುಖಕ್ಕೆ ಈಗ ಯಾವ ಫೇಸ್ ಕ್ರೀಮ್ ಬಳಸಲಿ ... ಕರೀನಾ ಹಚ್ಚುವ ಬೋರೋಪ್ಲಸ್ ಹಚ್ಚಲೇ? ಅದು ಕರೀನಾಗೆ ಸರಿ .. ಒಮ್ಮೆ ನಾನು ಹಚ್ಚಿದ್ದೆ, ಕೆರೆತ ಶುರುವಾಗಿತ್ತು. ಪರ ಪರ ಕೆರೆದುಕೊಂಡ ಮೇಲೆ ಮುಖವೆಲ್ಲ ಕೆಂಪಾಗಿತ್ತು. ಅರ್ರೇ, ಹೌದಲ್ವೇ, ಅದೇ ಅವರೂ ಹೇಳಿದ್ದು ... "ಮೊಡವೆ ಕಳೆದುಕೊಳ್ಳಲು, ವರನ ಗೆಳೆಯರೇ ನೀವು, ಬೋರೋಪ್ಲಸ್ ಹಚ್ಚಿಕೊಳ್ಳಿ" ಅಂತ! ಕೆರೆದುಕೊಂಡ ಮೇಲೆ ಮೊಡವೆ ಎಲ್ಲ ಹೋದಂತೇ ಆಯ್ತಲ್ಲ?

ಗಂಡಿಗೇ ಮಾಡಿರುವ ’ಫೈರ್ ಅಂಡ್ ಲವ್ಲಿ ಫಾರ್ ಗಂಡ್ಸ್’ ಹಚ್ಚಿಕೊಂಡು ಅಲ್ಪ ಮಟ್ಟಿಗೆ ಬೆಳ್ಳಗಾದೆ. ಬಾಹ್ಯ ಸೌಂದರ್ಯ ಮುಖ್ಯ ಅಲ್ಲಾ, ಆಂತರಿಕ ಸೌಂದರ್ಯ ಮುಖ್ಯ ಅಂತ ಯಾರಿಗೋ ಹೇಳಿದ್ದೆ. ಅವರೆಂದರು "ಮುಖ್ಯ ಅಲ್ಲ ಅಂದ ಮೇಲೆ ಕ್ರೀಮ್ ಯಾಕೆ ಹಚ್ಚಿಕೊಳ್ಳಬೇಕು"?

ಬರೀ ಕ್ರೀಮ್ ಹಚ್ಚಿಕೊಂಡಲ್ಲಿ ಮುಖ ಎಣ್ಣೆ ಕಾಣೋಲ್ವೇ? ಅಂದ ಮೇಲೆ ಅದಕ್ಕೊಂದು ಲೇಯರ್ ಪೌಡರ್ ಬೇಕೂ ಅಂತ ಅರ್ಥ. ದಿನವಿಡೀ ಪರಿಮಳ ಹೊರಹೊಮ್ಮಲು ಪಾಂಡ್ಸ್ ಪೌಡರ್ ಬಳಸಲೇ ... ಬೇಡ, ನಾನೇನು ಹುಡುಗಿಯೇ? ನಾನು ಸಿಕ್ಸ್ ಪ್ಯಾಕ್ ಗಂಡು ... ಮೂರು ಪ್ಯಾಕ್ ಮನೆಯಲ್ಲಿ ಇಟ್ಟಿರ್ತೀನಿ ಅಷ್ಟೇ! ಹಾಗಾಗಿ ಸ್ವಲ್ಪ ಹಚ್ಚಿಕೊಂಡೆ. ಅಷ್ಟರಲ್ಲೇ ಏನೋ ವಾಸನೇ ಬಂತು ... ಓಹೋ! ತಕ್ಷಣವೇ, ಕಂಕುಳಿನ ಸಂದಿನಲ್ಲಿ ಬೆವರಿನ ದುರ್ವಾಸನೆ ಹೊರಹೊಮ್ಮುವುದನ್ನು ತಡೆಗಟ್ಟಲು ಸ್ಪ್ರೇ ಹೊಡೆದುಕೊಂಡೆ. ಡಿಗ್ರೀ, ಓಲ್ಡ್ ಸ್ಪೈಸ್, ಡೋವ್, ಆಕ್ಸ್ ಯಾವುದೇ ಹೊಡೆದುಕೊಂಡರೂ ಸುಂದರಿಯರ ಕಾಟ ಮಾರಾಯ್ರೇ! ಬಂದೂ ಬಂದೂ ವಾಸನೆ ತೆಗೆದುಕೊಂಡು ಹೋಗ್ತಾರೆ! ಯಾರೂ ಹತ್ತಿರ ಬರೋಲ್ಲ !!

ತಲೆಗೂದಲನ್ನು ಬಾಚಿಕೊಳ್ಳುತ್ತ ’ ಈಷ್ಟುದ್ದ .... ಈಷ್ಟುದ್ದ’ ಎನ್ನುತ್ತ ಇದ್ದ ಒಂದಿಂಚು ಕೂದಲನ್ನೇ ನೇವರಿಸಿಕೊಂಡೆ. ಕಳೆದ ವಾರದಲ್ಲಿ ಪ್ಯಾರಾಚೂಟ್ ಎಣ್ಣೆ ಹಚ್ಚಿಕೊಂಡು ಹೊರಗೆ ಹೋದ ಕೂಡಲೆ, ತಲೆ ಮೇಲಿನ ಹಲವಾರು ಕೂದಲು ಪ್ಯಾರಾಚೂಟ್ ತಗಲಿಸಿಕೊಂಡು ಭೂಮಿಗೆ ಹಾರಿ ಕ್ಷೇಮವಾಗಿ ತಲುಪಿ ನನ್ನ ನುಣುಪಾದ ತಲೆಯನ್ನು ನೋಡಿ ನಕ್ಕಿದ್ದವು !!

ಸುಸ್ತಾಯ್ತು ಕಣ್ರೀ !

ಅಲ್ಲಾ, ಇಷ್ಟು ಹೊತ್ತೂ ನೆಡೆದದ್ದು ಒಂದು ಹಗಲಿನ ಕೆಲಸ. ಅಷ್ಟರಲ್ಲಿ ಎಷ್ಟು ಜಾಹೀರಾತುಗಳು ಬಂದು ಹೋದವು. ಎಷ್ಟೆಷ್ಟಕ್ಕೆ ನಾವು ಜೋತು ಬಿದ್ದಿದ್ದೇವೆ ಎಂದರೆ ನಮಗೆ ಒರಿಜಿನಾಲಿಟಿಯೇ ಇಲ್ಲವೇ? ಕಾಡ್ನಲ್ಲಿರೋ ಹುಲಿ ಹಲ್ಲುಜ್ಜುತ್ಯೇ? ಕರಡಿ ಶ್ಯಾಂಪೂ ಹಾಕಿಕೊಳ್ಳುತ್ಯೇ? ನಾಡಿನ ಹೋತ ಗಡ್ಡ ಬೋಳಿಸಿಕೊಳ್ಳುತ್ಯೇ? ನವಿಲು ಸೋಪು ಹಚ್ಚಿಕೊಳ್ಳುತ್ಯೇ? ಆದರೂ ಪ್ರಾಣಿಗಳು ಸುಂದರವಾಗಿಲ್ವೇ?

ಪ್ರಾಣಿಗಳನ್ನು ನೋಡಿ ಕಲಿಯಬೇಕು ಕಣ್ರೀ ... ನಾನು ಹೊಸವರ್ಷಕ್ಕೆ ಒಂದು ಮಹತ್ತರ ಯೋಜನೆ ಹಾಕಿಕೊಂಡಿದ್ದೇನೆ ... ನಾನು "ಹಲ್ಲು ಉಜ್ಜೋಲ್ಲ, ಶ್ಯಾಂಪೂ ಹಚ್ಚೋಲ್ಲ, ಸ್ನಾನ ಮಾಡೋಲ್ಲ, ಪೌಡರ್ ಹಚ್ಚೋಲ್ಲ, ಸೆಂಟ್ ಅಂತೂ ಬಳಸುವುದೇ ಇಲ್ಲ ... ಕೆಮಿಕಲ್ಸ್ ಗೊಡವೆಯೇ ಬೇಡ ... "

ಇದು ನನ್ನ ಹೊಸ ವರ್ಷದ ರೆಸಲ್ಯೂಶನ್ ... ನಿಮ್ಮದು?
 

Comments