ಗಣೇಶ್ ಜಿ ಸಿಕ್ಕಿದ್ರಾ..?

ಗಣೇಶ್ ಜಿ ಸಿಕ್ಕಿದ್ರಾ..?

ಮೊನ್ನೆ ಹೀಗೆ ಹಿರಣಯ್ಯ ಬೆಳ್ ಬೆಳಿಗ್ಗೆನೆ ಎದ್ದು ಟೀ ವಿ ಹಾಕಂಡು ಠೀವಿಲಿ ನೋಡ್ತಾ ಕುಂತ್ತಿದ್ರು, ಬೆಳಿಗ್ಗೆ ಅಲ್ವಾ ಹಾಗಾಗಿ ಟೀವಿನೋರು ಕೂಡ ದೇವರುಗಳ ಷೋ ತೋರಿಸ್ತಿದ್ರು.

ಏನು ಧಾರಾಕಾರವಾಗಿ ದೇವರ ವಿಗ್ರಹದಮೇಲೆ ಇಳಿಯುವ ಹಾಲು, ತುಪ್ಪ, ಅರಿಶಿನ ಮತ್ತು ಕುಂಕುಮದ ನೀರು, ಮಧ್ಯ ಮಧ್ಯ ಮಂಗಳಾರತಿ, ಹೀಗೆ ವೈಭವನ್ನು ನೋಡಿ ಪುಳಕಿತರಾಗಿದ್ರು ಹಿರಣ್ಣಾಯ್ಯನೋರು. ಆ ಮಧ್ಯೆ ತುಪ್ಪದ ಅಭಿಷೇಕ ನೋಡಿದಾಗಲಂತು ಅವರ ಮನಸ್ಸಿಗೆ ಬಂದಿದ್ದು ಶ್ಯಾಮಣ್ಣನ ಹೋಟೆಲಿನ ತುಪ್ಪದ ದೋಸೆಯ ಗಮ್ಮೆನ್ನುವ ವಾಸ್ನೆ.
ನೆನಪಾದುದ್ದೆ ತಡ ಬಾಯಲ್ಲಿ ಲಾವಾರಸದಂತೆ ಉತ್ಪತ್ತಿಯಾಯ್ತು ಲಾಲಾರಸ. ಇನ್ನೇನು ಕೆಳಗೆ ಬಿಳ್ಬೇಕು, ಅಷ್ಟರಲ್ಲಿ ಹಿರಣ್ಣಯ್ಯನೋರ ಕಣ್ಣಿಗೆ ಮಿಂಚು ಹೊಡ್ದಂಗಾಯ್ತು. ಎತ್ತಲೋ ಓಡಿತ್ತಿದ್ದ ಮನಸನ್ನು ಜಗ್ಗನೆ ನಿಲ್ಲಿಸಿ ಅತ್ತ ಗಮನಿಸಿದರು. ಮಲ್ಲೇಶ್ವರಂನ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿಷೇಕದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರ ಸಮೂಹವನ್ನು ತೋರಿಸುತ್ತಿದ್ದಾರೆ.

ಅದರಲ್ಲಿ ಒಬ್ಬ ವ್ಯಕ್ತಿಯ ದರ್ಶನ ಮಾಡಲು ಹಿಡಿಸಾಹಸ ಮಾಡಿ ಸೋತು ಬಿಟ್ಟರು ಹಿರಣ್ಣಯ್ಯ. ಇನ್ನೇನು ಕ್ಯಾಮರ ಆ ವ್ಯಕ್ತಿಯ ಬಳಿ ಬಂತು ಆಗ ಆತ ಸುತ್ತು ಹಾಕಿ ಸಾಸ್ಟಾಂಗ ನಮಸ್ಕಾರ ಮಾಡುತ್ತಿದ್ದಾರೆ. ಹಾಗೆ ನಮಸ್ಕಾರ ಮಾಡುವಾಗ ಹೊಟ್ಟೆಯನ್ನು ಮಧ್ಯದ ಲಿವರೇಜ್ ಪಡೆವ ದೇಹ ಕೈ ನೆಲ ಮುಟ್ಟಿದರೆ ಕಾಲು ಮೇಲಕ್ಕೆತ್ತುತ್ತಿದೆ, ಕಾಲು ನೆಲ ಮುಟ್ಟಿದರೆ ಎದೆಯ ಭಾಗ ಮೇಲಕ್ಕೇಳುತ್ತಿದೆ. ಮತ್ತೆ ಸುತ್ತು ಹಾಕಿ ಕ್ಯಾಮರ ಆ ವ್ಯಕ್ತಿಯನ್ನು ತೋರಿಸಬೇಕು, ಹ್ಞಾ..... ಈಗ ಸಿಕ್ಕಿ ಹಾಕೊತ್ತಾರೆ ಅನ್ನೊ ಹೊತ್ಗೆ ಆತ ನಮಸ್ಕಾರ ಹಾಕಿ ಮೇಲೆದ್ದು ಮತ್ತೆ ಸುತ್ತು ಹಾಕುತ್ತ ಅತ್ತ ತಿರುಗಿದ್ದಾರೆ. ಛೆ... ಛೆಛೆಛೆ.... ತಿರ್ಗಾ ಯಡ್ವಟ್ಟಾಯ್ತು.
ಕ್ಯಾಮರ ಇನ್ನೊಂದು ಸುತ್ತು ಬಂತು ಈ ಸಾರ್ತಿ ಮಿಸ್ ಆಗೋಲ್ಲ ಅನ್ಕೊಂಡ್ರು ಅಷ್ಟರಲ್ಲಿ ಇಬ್ಬರು ಹೆಂಗಸರು ಆ ವ್ಯಕ್ತಿಯನ್ನು ಕವರ್ ಮಾಡಿ ಮಾತಾಡ್ತಾ ನಿಂತಿದ್ದಾರೆ. ಅಷ್ಟೆ ಕ್ಯಾಮರ ಮುಂದೆ ಹೊರಟು ಹೋಯ್ತು. ದೇವರ ಷೋ ಮುಗಿದು, ಮಾಮೂಲಿ ಷೋಗಳು ಪ್ರಾರಂಭವಾಯ್ತು. ಇನ್ನು ಈ ಷೋಗಳನ್ನು ನೋಡ್ತಾ ಕೂತಿದ್ರೆ ಮನೆಯಾಕೆ ಗರಂ ಆಗ್ತಾಳೆ ಅಂತ ಟೀವಿ ನ ಬಂದ್ ಮಾಡಿ ಮೇಲೆದ್ರು ಹಿರಣ್ಣಯ್ಯ.

ಅಂದಹಾಗೆ ಆ ವ್ಯಕ್ತಿಯ ಬಗ್ಗೆ ಈ ವಯ್ಯಂಗೇನು ಕುತೂಹಲ ಅನ್ಕೊಂಡ್ರಾ...? ಅಲ್ಲಿದೆ ವಿಷ್ಯ.
ಅದೇನಪ್ಪ ಅಂದ್ರೆ ಈ ಹಿರಣ್ಣಯ್ಯ ಇದಾರಲ್ಲ ಅವರ ಮನೆಯ ಆ ಕೊನೆಲಿರೋದೆ ಆ ರಾಮಮೋಹನ್ ಮನೆ. ಅದೆ ಎಲ್ಲ ಮಲ್ಲೇಶ್ವರ ಅಂದ್ರೆ ಆತ ಮಾತ್ರ ಮಲ್ಲೇಶ್ವ`ರಂ` ಅಂತಿರ್ತರಲ್ಲ ಅವ್ರುದ್ದು. ಈ ಹಿರಣ್ಣಯ್ಯನೋರ್ಗೂ ಆ ರಂ ನೋರ್ಗು ಸ್ವಲ್ಪ ಗಳಸ್ಯ ಅದಕ್ಕೆ ಕಾರ್ಣ... ಬೇಡ ಬಿಡಿ ಅದೆಲ್ಲ ಯಾಕೆ ಈಗ.. ವಿಷ್ಯಕ್ಕೆ ಬರೋಣ.

ಏನೊ ಹೇಳ್ತಿದ್ದೆ... ಹ್ಞಾ... ಅದೆ ಆ ರಾಂಮೋಹನ ಸಂಪದದಲ್ಲಿ ಸ್ವಲ್ಪ ಬರ್ಯೊ ಹುಚ್ಚು ಇಟ್ಕೊಂಡಿರೋದು, ಕಂಟಸ್ಯ (ಆಗ್ಲೆ ಗಳಸ್ಯ ಹೇಳಿದನಲ್ಲ) ಆಗಿರೋ ಹಿರಣ್ಣಯ್ಯನೋರ್ಗೂ ಗೊತ್ತು, ಮತ್ತು ಸಂಪದದ ಬಹಳಷ್ಟು ಮಂದಿಗೆ ಚಳ್ಳೆ ಹಣ್ಣು ತಿನ್ನಿಸಿ  ದರ್ಶನ ಕೊಡದೆ ಆಟ ಆಡಿಸ್ತಿರೊ ಮಲ್ಲೇಶ್ವರಂ  ಗಣೇಶ್ ಜಿ ಬಗ್ಗೆ ಹಿರಣ್ಣಯ್ಯನೋರ ಕೈಲಿ ಮಾತಾಡ್ತಾ ಮಾತಾಡ್ತ ಹೇಳಿದ್ರು ರಾಮಮೋಹನ. ಆ ಗಣೆಶ್ ಜಿಯನ್ನು ಕಂಡು ಹಿಡಿದು ತಮ್ಮ ಗಳಸ್ಯ ಕಂಟಸ್ಯ ಗೆ ಸರ್ಪ್ರೈಸ್ ಕೊಡೋಕ್ಕೆ ಕಾಯ್ತಿದ್ರು ಹಿರಣಯ್ಯ. ವಿಷ್ಯ ಹೀಗಿರುವಾಗ ಬೆಳಿಗ್ಗೆ ತಾವು ನೋಡುತ್ತಿದ್ದ ಟೀವಿಯಲ್ಲಿನ ದೇವರ ಷೋನಲ್ಲಿ ನಮಸ್ಕಾರ ಮಾಡ್ತಿದ್ದ ಆ ದೊಡ್ಡ ಹೊಟ್ಟೆಯ ಮನುಷ್ಯ ಗಣೇಶ್ ಇರ್ಬೇಕು ಅಂತ ಅನುಮಾನ ಹಿರಣ್ಣಯ್ಯ್ನೋರ್ಗೆ. ಏಕೆಂದ್ರೆ ಅದೆಂತದೊ ಚಲೊ ಮಲ್ಲೇಶ್ವರ ಅಂತ ಬರೆದು ಹಾಕಿದ್ರು, ಜೊತೆಗೆ ಅವರು ಮಲ್ಲೇಶ್ವರದ ದೇವಸ್ಥಾನದ ಬಗ್ಗೆ ಬರಿತಾ ಇರ್ತಾರೆ  ಹಾಗಾಗಿ ಆ ಗಣೆಶ್ ಅಲ್ಲೆ ಎಲ್ಲೊ ಹತ್ರದಲ್ಲೆ ಇರ್ಬೇಕು, ಹೇಗೂ ಇವತ್ತು ಬೇರೆ ಏನೂ ಕೆಲ್ಸ ಇಲ್ಲ, ಮಲ್ಲೇಶ್ವರಕ್ಕೆ ಹೋಗಿ ಆ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪುರೋಹಿತರನ್ನು ವಿಚಾರಿಸಿದ್ರೆ, ದೇವಸ್ಥಾನಕ್ಕೆ ರೆಗ್ಯುಲರ್ ಬರೋರ್ದು ಪರಿಚಯ ಇರುತ್ತೆ, ಆ ಗಣೇಶ್ ಜಿಯನ್ನು ಹ್ಯಾಗಾದ್ರೂ ಪತ್ತೆ ಮಾಡಿ ನಮ್ಮ ರಾಂಮೋಹನ್ಗೆ ಆಶ್ಚರ್ಯ ಉಂಟು ಮಾಡೋಣ ಅಂತ ನಿರ್ಧರಿಸಿಬಿಟ್ಟಿದ್ರು ಹಿರಣ್ಣಯ್ಯ.

ಇನ್ನು ಈ ಹಿರಣ್ಣಯ್ಯ್ನೋರ ಬಗ್ಗೆ ಸ್ವಲ್ಪ ಹೇಳ್ಲೇಬೇಕು. ಈತ ರಿಟೈರ್ಡ್ ಮಾಸ್ಟರ್. ಸ್ವಲ್ಪ ಪೆನ್ಷನ್ ಬರುತ್ತೆ. ತಿಂಗಳ ಕೊನೆ ಆದ್ರೆ ಮಾಮೂಲಿ ಅವರಿವರ ಹತ್ರ ೧೦೦ - ೨೦೦ ಸಾಲ ಮಾಡೋದು. ಆಮೇಲೆ ಬೇರೆಯವರ ಬಳಿ ಸಾಲ ಮಾಡಿ ಅದನ್ನು ತೀರಿಸೋದು, ಮಧ್ಯದಲ್ಲಿ ಹೇಗೋ ಸ್ವಲ್ಪ ತೂಗಿಸಿ ಬಿಡೋದು. ಇವರ ಪೂರ್ತಿ ಹೆಸರು ಬಂದು `ಹಿರಣ್ಣಯ್ಯ ಕಶ್ಯಪ್`, ಆದ್ರೆ ಇವರ ಸಾಲದ ಚಮಕ್ ವ್ಯವಹಾರ ಗೊತ್ತಿದ್ದ ಬೀದಿ ಜನರೆಲ್ಲ, ಇವರ ಹಿಂದೆ ಕರೀತಾ ಇದ್ದದ್ದು `ಹಿರಣ್ಣಯ್ಯ ಭಿಕ್ಷುಕ್`. ಇದು ಇವರ ಸಣ್ಣ ಪರಿಚಯ.

ರಾಮಮೋಹನ್ ಡ್ಯುಟಿಗೆ ಹೊರ್ಡೋಕ್ಕೆ ಸಿದ್ದವಾಗಿ ಹೊರಬರುವುದನ್ನೆ ಕಾಯ್ದಿದ್ದ ಭಿಕ್ಷುಕ್ರು, ಅಟ್ಯಾಕ್ ಪ್ರಾಜೆಕ್ಟ್ ಪ್ರಾರಂಭಿಸಿದ್ರು.

- ನಮಸ್ಕಾರ ಡ್ಯುಟಿಗೆ ಹೊರ್ಟ್ರಾ -

- ಓ.. ನಮಸ್ಕಾರ, ಹೋಗ್ಲೇ ಬೇಕಲ್ಲ ಮೇಷ್ಟ್ರೆ, ನಿಮ್ಮಷ್ಟು ಸುಖ ಜೀವಿ ನಾವಲ್ವಲ್ಲ, ಏನ್ಮಾಡೋದು ಹೇಳಿ.-

- ಅಯ್ಯೋ ಅದೇನ್ ಸುಖ ಬಿಡಿ -

ಅನ್ನುತ್ತಾ ಹತ್ತಿರ ಹೋದ ಹಿರಣ್ಣಯ್ಯನೋರನ್ನು ನೋಡೆ ಅರ್ಥವಾಯ್ತು ರಾಮಮೋಹನ್ಗೆ, ಏನೋ ಸ್ಕೀಂ
ಹಾಕ್ಕೊಂಡೆ ಬೆಳಿಗ್ಗೇನೆ ಹಿಡ್ಕೊಂಡಿದ್ದಾರೆ ನನ್ನನ್ನು ಅಂತ.

ಎಡಗೈಯನ್ನು ಮುಷ್ಠಿ ಮಾಡಿ ಅದರ ಮೇಲೆ ಬಲಗೈ ಬೆರಳಿನಿಂದ ತಬಲ ಬಾರಿಸುತ್ತ ಕೇಳಿಯೆ ಬಿಟ್ರು ಮಿಸ್ಟರ್ ಭಿಕ್ಷುಕ್,

- ಒಂದು ೨೦೦ ರೂಪಾಯಿ ಇಟ್ಟಿದ್ದೀರಾ...? -

ಬಾಯನ್ನು ಮೋರ್ಚಿಂಗ್ ಬಾರ್ಸೊ ಸ್ಟೈಲ್ಗೆ ತಂದು ಕೇಳಿದ್ರು ರಾಮಮೋಹನ್

- ಯ್ಯಾಕೆ ಮೇಷ್ಟ್ರೆ ಏನ್ ಸಮಾಚಾರ.? -

- ಏನಿಲ್ರಪ್ಪ ಸ್ವಲ್ಪ ಅರ್ಜೆಂಟ್, ಅದರಲ್ಲಿ ನಿಮ್ಮ ವಿಚಾರನೂ ಇದೆ, ಆಮೇಲೆ ಹೇಳ್ತೀನಿ -

ಐ.. ಥೂ... ಥುಥುಥೂ..... ಬಾಯ್ತಪ್ಪಿ ಹೇಳ್ಬಿಟ್ಟ್ನಲ್ಲ. ಸರ್ಪ್ರೈಸ್ ಆಗಿ ಇಡೋಣ ಅನ್ಕೊಂಡಿದ್ದೆ. ಅದಕ್ಕೆ ನಮ್ಮನೆಯೋರು ನನ್ನ ಬೈಯ್ಯೋದೊ, ಈ ವಿಷ್ಯದಲ್ಲಿ ನಂದು ಹೆಣ್ಣಿಗ ಬುದ್ಧಿ ಅಂತ, ಮನಸ್ಸಿನಲ್ಲೆ ಅನ್ಕೊಂಡ್ರು ಹಿರಣ್ಣಯ್ಯ.

- ಏನು ನನ್ನ ವಿಷ್ಯನಾ...?  ಏನದು ಹೇಳಿ ಮೇಷ್ಟ್ರೆ -

- ಹೇಳಿದ್ನಲ್ಲ ಬಿಡಿ ಆಮೇಲೆ ಹೇಳೋದು ಇದ್ದೇ ಇದೆ. ಈಗ ದುಡ್ಡು ಕೊಡಿ, ಹಾಗೇನೆ ನನ್ನ ಬಿಟ್ಬಿಡಿ -

ಸರಿ ೨೦೦ ರೂ ಪಡೆದ ಹಿರಣ್ಣಯ್ಯ ಭಿಕ್ಷುಕ್ ಅಲ್ಲ ಕಶ್ಯಪ್ ತಮ್ಮ ಮನೆ ಕಡೆ ಜಾರ್ಕೊಂಡ್ರು.
ಏನೋ ನನ್ನ ವಿಷ್ಯ ಅಂದ್ರಲ್ಲ ಏನದು ಅನ್ನೊ ಹುಳ ರಾಮಮೋಹನ್ ತಲೆ ಸೇರ್ತು. ಏನಿರ್ಬಹ್ದು..?
ಇರ್ಲಿ ನೋಡೋಣ ಅನ್ಕೊಂಡು ಸುಮ್ಮನಾದರು ರಾಮಮೋಹನ್.

ಮಲ್ಲೇಶ್ವರಂ ಸರ್ಕಲ್ನಲ್ಲಿ ಇಳಿದ ಹಿರಣಯ್ಯ, ಹಾಗೆ ನಡಿತಾ ಅತ್ತ ಇತ್ತ ಗಮನಿಸುತ್ತಾ, ಸಂಪಿಗೆ ರಸ್ತೆಯ ಕೊನೆಯಲ್ಲಿದ್ದ ದೇವಸ್ಥಾನಕ್ಕೆ ಬಂದು ಸೇರಿದ್ರು. ಒಳಗೆ ನಡೆದು ಇನ್ನೇನು ಆಗಲೆ ಬಾಗಿಲು ಹಾಕುವ ತುರಾತುರಿಯಲ್ಲಿದ್ದ ಅರ್ಚಕರನ್ನು ಕಂಡು,

- `ಸ್ವಾಮಿ ನಮಸ್ಕಾರ ನಾನು ಹಿರಣಯ್ಯ ಅಂತ ಬಸವನಗುಡಿ ಕಡೆಯಿಂದ ಬಂದಿದ್ದೇನೆ, ಇಲ್ಲಿ ಬೆಳಿಗ್ಗೆ ಪೂಜೆ ಕಾರ್ಯಕ್ರಮ ಟೀ ವೀ ನಲ್ಲಿ ತೋರ್ಸ್ತಿದ್ರಲ್ಲ... ಅದರಲ್ಲಿ ಆ ದಪ್ಪಗೆ.... ` -

ಇನ್ನು ವಾಕ್ಯ ಪೂರ್ತಿ ಮಾಡೇ ಇರ್ಲಿಲ್ಲ ಆಗಲೆ ಪುರೋಹಿತರು ಪ್ರಾರಂಭಿಸಿದ್ರು.

``ನಮಸ್ಕಾರ, ನಾನು ಶೇಷಗಿರಿ ಭಟ್ಟ, ನಾವು ಇಲ್ಲಿ ಮಹಾರಾಜರ ಕಾಲದಿಂದ ಸೇವೆ ಸಲ್ಲಿಸಿಕೊಂಡು ಬಂದಿರುತ್ತೇವೆ. ನಮ್ಮ ಮುತ್ತಾತನ ತಂದೆ ವೆಂಕಟಗಿರಿ ಭಟ್ಟ ರಾಜ ಸಂಸ್ಥಾನದಲ್ಲಿ ವೈಧೀಕ ವೃತ್ತಿಕರಾಗಿದ್ದರು. ಅದಾದ ನಂತರ, ನಮ್ಮ ತಾತನ ಕಾಲದಿಂದ ಈ ದೇವಸ್ಥಾನದ ಪೌರೋಹಿತ್ಯ ಮಾಡುತ್ತಿದ್ದೇವೆ. ಇಲ್ಲಿನ ಸ್ವಾಮಿ ಮಂಗಳಕರ ಮೂರ್ತಿ, ಅತ್ಯಂತ ಮಹಿಮೆ ಉಳ್ಳದ್ದು, ಬೇಕಾದಷ್ಟು ಜನ ಇಲ್ಲಿಗೆ ಹರಕೆ ಹೊತ್ತು ಬರುತ್ತಾರೆ ಮತ್ತು ೧೯೩೫ ರಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರವಾಯ್ತು. ಅದಾದ ನಂತರ ಸರ್ಕಾರದ ವತಿಯಿಂದ...........

ಇನ್ನು ಉದ್ದಕ್ಕೆ ಹೇಳ್ತಾನೆ ಇದ್ರು

ಹಿರಣಯ್ಯನೋರು ತಲೆ ಕೆರ್ಕೊಂಡು, ಇದೊಳ್ಳೆ ಕಥೆ ಆಯ್ತಲ್ಲ, ನಾನು ಆ ದಪ್ಪಗಿರೊ ಮನುಷ್ಯನ ಬಗ್ಗೆ ಇವರಿಗೇನಾದ್ರು ಗೊತ್ತೇನೋ ಕೇಳೋಣ ಅನ್ಕೊಂಡ್ರೆ, ಈ ಮನುಷ್ಯ ಒಳ್ಳೆ ಟೇಪ್ ರೆಕಾರ್ಡರ್ ಆನ್ ಮಾಡಿ ಕಣ್ಣು ಮುಚ್ಚಿ ನಿಂತಿದ್ದಾನೆ, ಅಂತ ಯೋಚಿಸ್ತಿದ್ದಾಗ, ಹಿಂದಿನಿಂದ ಹೆಗಲ ಮೇಲೆ ಏನೊ ದಪ್ಪ ಕೊರಡು ಬಿದ್ದ ಹಾಗಾಯ್ತು. ಗಾಬರಿಯಾಗಿ - ಅಯ್ಯೊ ಗ್ರಾಚಾರ್ವೆ, ಗರುಡಗಂಭ ಏನಾದ್ರು ಕಳಚಿ ಹೆಗಲ ಮೇಲೆ ಬಿತ್ತೇನಪ್ಪ ಅನ್ಕೋತಾ ಹಿಂದೆ ತಿರುಗಿ ನೋಡಿದ್ರು ಹಿರಣಯ್ಯ.

ಅವರ ಹಿಂದೆ ದುಂಡು ಮುಖದ, ಆಜಾನುಬಾಹು, ದೊಡ್ಡ ಗಣಪತಿ ಹೊಟ್ಟೆ ಇರುವ ವ್ಯಕ್ತಿಯೊಬ್ಬ, ತನ್ನ ದಂತ ಪಂಕ್ತಿಯನ್ನು ತೋರಿಸುವುದರ ಜೊತೆ, ಹಾಕಿರುವ ಸೋಡ ಕನ್ನಡಕದ ಒಳಗಿಂದ ಪಿಳಿ ಪಿಳಿ ಕಣ್ಣಬಿಡುತ್ತಾ ನಿಂತಿದ್ದಾರೆ. ಹೆಗಲ ಮೇಲೆ ಬಿದ್ದಿರುವುದು ಆತನ ಕೈಯೆ ಹೊರತು, ಗರುಡಗಂಭವಲ್ಲ ಎಂಬುದು ತಿಳಿದಾಗ ಸ್ವಲ್ಪ ಸಮಾಧಾನವಾಯ್ತು ಹಿರಣ್ಣಯ್ಯನೋರ್ಗೆ.

ಆ ವ್ಯಕ್ತಿ ಏನೂ ಮಾತಾನಾಡದೆ, ಕತ್ತನ್ನು ಅಲ್ಲಾಡಿಸುತ್ತಾ ನನ್ನ ಹಿಂದೆ ಬನ್ನಿ ಅಂತ ಸೂಚನೆ ಕೊಟ್ಟು ಮುಂದೆ ನಡೆದಾಗ, ಇನ್ನೂ ಮಾತು ಮುಗಿಸದೆ ಕಣ್ಣು ಮುಚ್ಚಿದ್ದ ಪುರೋಹಿತರನ್ನು ಅಲ್ಲೆ ಬಿಟ್ಟು ನಿಧಾನ ಹೆಜ್ಜೆಗಳನ್ನಿಡುತ್ತಾ ಆ ಆಜಾನುಬಾಹುವಿನ ಹಿಂದೆ ಹೊರಟರು ಹಿರಣಯ್ಯ.

ದೇವಸ್ಥಾನದ ಪಕ್ಕದಿಂದ ಹಾಯ್ದು ಪ್ರದಕ್ಷಿಣೆ ಮುಗಿಸಿ ಬಂದರೂ ಪುರೋಹಿತರು ಇನ್ನೂ ಕಣ್ಣು ಬಿಟ್ಟಿರಲಿಲ್ಲ, ಜೊತೆಗೆ ಮಾತೂ ನಿಂತಿರಲಿಲ್ಲ. ಆಜಾನುಬಾಹುವಿನ ಹಿಂದೆಯೆ ದೇವಸ್ಥಾನದ ಹೊರಬಂದ ಹಿರಣ್ಣಯ್ಯನೋರು,

- ಛೆ... ಬಂದ ಕೆಲ್ಸವಾಗಲಿಲ್ಲ ಏನ್ಮಾಡೋದು..? ಅನ್ಕೋತಿರುವಾಗ, ಆ ದಡೂತಿ ಮನುಷ್ಯ ಇವರನ್ನು ನೋಡಿ, ಗಣೇಶ್ ಜಿನ ಹುಡುಕ್ತಿದ್ದೀರಾ.....? ಅಂತ ಕೇಳಿದಾಗ, ಹಿರಣ್ಣಯ್ಯನೋರ್ಗೆ ಸ್ವರ್ಗ - ಸಂತೋಷ ಮೂರೇ ಗೇಣು. ಅರೆರೆ... ಇವ್ರೆ ಗಣೇಶ್ ಇರ್ಬೇಕು..., ನನ್ನ ದಡ್ಡ ಬುದ್ದಿಗೆ ಹೊಳೀಲೇ ಇಲ್ವಲ್ಲ. ಅಲ್ಲ ಆ ಟೀವೀ ಕ್ಯಾಮರದಲ್ಲಿ ಮುಖ ಕಂಡಿರ್ಲಿಲ್ಲ ಆದ್ರೆ ಶರೀರ ಹೆಚ್ಚು ಕಡ್ಮೆ ಇದೆ ಅಲ್ವೆ. ಸ್ವಲ್ಪ ಮಿಸ್ ಆಗಿದ್ರು ಯಡವಟ್ಟಾಗಿ ಬಿಡೋದು. ಅಂತು ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು, ಅನಾಯಾಸವಾಗಿ ಗಣೇಶ್ ಸಿಕಿಬಿಟ್ರು ಹುರ್ರೆರ್ರೆರ್ರೆ............ ಅಂತ ಕೂಗ್ಬೇಕು ಅನ್ಸಿದ್ರೂ ಬೇಡ ಬೇಡ ಕನ್ಫ಼ರ್ಮ್ ಆಗ್ಲಿ, ಆಮೇಲೆ ಇವ್ರ ಫ಼ೋಟೊ ಮೊಬೈಲ್ನಲ್ಲಿ ತೆಗೆಯೋಣ ಅನ್ಕೊಳೋಹೊತ್ಗೆ, ಆ ಮನುಷ್ಯ, - `ಬನ್ನಿ` ಅಂತ ಹೇಳಿ, ಮುಂದೆ ಹೊರಟು ಬಿಟ್ಟ.

ಸರಿ ಹಿರಣ್ಣಯ್ಯ ಕೂಡ ವಿಶಲ್ ಹೊಡ್ಕೊಂಡು ಅವರನ್ನು ಹಿಂಬಾಲಿಸಿದರು. ಆತ ನಡೆದು, ನಡೆದು ಮಲ್ಲೇಶ್ವರಂ ೮ ನೇ ಕ್ರಾಸ್ಗೆ ಬರೋಹೊತ್ಗೆ ಬರೊಬರ್ರಿ ೧ ಗಂಟೆ ೩೦ ನಿಮಿಷ ಆಯ್ತು.
ಹಿರಣ್ಣಯ್ಯನೋರ್ಗೆ ವೇಗವಾಗಿ ನಡೆದು ಅಭ್ಯಾಸ. ಆನೆ ನಡುಗೆ ನಡ್ಯೋ ಹೊತ್ಗೆ, - `ಸ್ಟೆರ್ ಕೇಸ್ನಿಂದ ಕೆಳಗೆ ಇಳಿಯುವಾಗ ಮುಂದಿದ್ದ ಮುದುಕರ ಹಿಂದೆ ಇಳಿಯಬೇಕಾದ ಪರಿಸ್ಥಿತಿಯಲ್ಲಿದ್ದ ಮಿಸ್ಟರ್ ಬೀನ್ ನಂತಾಗಿತ್ತು` - ಹಿರಣ್ಣಯ್ಯನೋರ್ದು.

ಸೀದಾ ೮ ನೆ ಕ್ರಾಸ್ನ ಜನತಾ ಹೋಟೆಲ್ ಪ್ರವೇಶ ಮಾಡಿದ ಆ ವ್ಯಕ್ತಿ ಖಾಲಿ ಇದ್ದ ಕುರ್ಚಿಯ ಮತ್ತು ಟೇಬಲ್ ಮದ್ಯೆ ಇದ್ದ ಸಂದಿಯಷ್ಟು ಜಾಗದಲ್ಲಿ ದೇಹವನ್ನು ಕಷ್ಟಪಟ್ಟು ತೂರಿಸಿ ಆಸೀನನಾಗಿ, ಮತ್ತೊಂದು ಕುರ್ಚಿಯ ಕಡೆ ಕಣ್ಣು ತೋರಿಸಿ, ಕುಳಿತು ಕೊಳ್ಳುವಂತೆ ಸೌಜ್ಞೆ ಮಾಡಿತು.

ಇವರು ಬಂದು ಕುಳಿತ ಸ್ವಲ್ಪ ಹೊತ್ತಿಗೆ, ೩ ಮಸಾಲೆ ದೋಸೆ ಪ್ಲೇಟ್ ತಂದಿಟ್ಟ ಮಾಣಿಯನ್ನು ನೋಡಿದ ಹಿರಣ್ಣಯ್ಯ, - `ಅರೆ ನಾವೇನು ಆರ್ಡರ್ ಮಾಡೇ ಇಲ್ವಲಪ್ಪ, ಜೊತೆಗೆ ನಾವಿರೋದು ಇಬ್ರು ಮೂರು ದೋಸೆ ಯಾಕ್ತಂದೆ ` - ಅಂದ್ರು

ಮಾಣಿ ಏನೂ ಮಾತನಾಡದೆ, ಆಜಾನು ಬಾಹುವಿನ ಕಡೆ ನೋಡ್ದ. ದಪ್ಪನೆಯ ಮನುಷ್ಯ, ಮಾಣಿಯನ್ನು ನೋಡಿ ತನ್ನ ತೋರು ಬೆರ್‍ಅಳನ್ನು ತೋರಿಸುತ್ತಾ, -`ಇನ್ನೊಂದು ಕೊಡಪ್ಪ`- ಅಂದ್ರು.

ಹಿರಣ್ಣಯ್ಯ ಏನಾಗ್ತಿದೆ ಅಂತ ನೋಡೊ ಹೊತ್ಗೆ ಆ ದಪ್ಪನೆ ಮನುಷ್ಯ ೧ ಪ್ಲೇಟ್ ದೋಸೆಯನ್ನು ಹಿರಣ್ಣಯ್ಯನ ಮುಂದೆ ತಳ್ಳಿ ಹಲ್ಲು ಕಿರಿಯುತ್ತಾ ತಗೋಳ್ಳಿ ಅಂತ ಸನ್ನೆ ಮಾಡ್ದ ಕಣ್ಣಲ್ಲೆ.

ಮಾಣಿ ೩ ನೆ ದೋಸೆ ತರೊಹೊತ್ಗೆ ೨ ಪ್ಲೇಟ್ ಖಾಲಿ ಮಾಡಿದ್ದ ಆ ವ್ಯಕ್ತಿ ಅದನ್ನು ಪಕ್ಕಕೆ ತಳ್ಳಿ ಮೂರನೆ ಪ್ಲೇಟನ್ನು ಮುಂದಕ್ಕೆ ಎಳೆದುಕೊಂಡು, ಸೋಡಗ್ಲಾಸ್ನಿಂದ ಕಣ್ಣು ಬಿಡುತ್ತಾ ಹಿರಣ್ಣಯ್ಯನೋರ್ಗೆ ಗಾಬ್ರಿ ಆಗ್ಬೇಡಿ ಅಂತ ಹೇಳೋತರ ಹಲ್ಲು ಕಿರಿದ.

ಕಾಫ಼ಿ ಸಮಾರಾಧನೇನೂ ಆದಮೇಲೆ, ಕೈ ತೊಳೆದು ಮುಂದೆ ಹೊರಟ ಆ ಮನುಷ್ಯನನ್ನು ಹಿಂಬಾಲಿಸುತ್ತಿದ್ದ ಹಿರಣ್ಣಯ್ಯನೋರ್ನ ಹೋಟೆಲ್ ಮಾಣಿ ತಡೆದು ೧೨೫ ರೂಪಾಯಿ ಬಿಲ್ ಕೈಗಿಟ್ಟು ಅವರನ್ನೆ ದೃಷ್ಟಿಸಿ ನೋಡುತ್ತಾ, ತನ್ನ ಬಲಗೈ ಹೆಬ್ಬೆರಳು ಮತ್ತು ಇತರ ನಾಲ್ಕು ಬೆರಳುಗಳನ್ನು ಪ್ರತ್ಯೇಕಿಸಿ, ಗಲ್ಲದ ಮೇಲಿಟ್ಟು, ಗಡ್ಡ ಕೆರೆಯ ತೊಡಗಿದ.

ಹಿರಣ್ಣಯ್ಯ ಆ ಕಡೆ ನೋಡಿದ್ರೆ ಆಗ್ಲೆ ಆ ವ್ಯಕ್ತಿ ಹೊರಗೆ ನಡೆದು ಹೋಗುತ್ತಿತ್ತು. ಬಿಟ್ರೆ ಕೆಟ್ಟೆ ಅನ್ಕೊಂಡು ಬಿಲ್ಲ್ ಪಾವತಿ ಮಾಡಿ ಹೊರಗೆ ಓಡಿ ಅವರ ಜೊತೆ ಸೇರ್ಕೊಂಡ್ರು. ಮತ್ತಷ್ಟು ದೂರ ನಡುಗೆಯ ಪ್ರಯಾಣ.

ಕೊನೆಗೆ ಒಂದು ಮನೆಯಮುಂದೆ ನಿಂತ ಆ ವ್ಯಕ್ತಿ ಹಿರಣ್ಣಯ್ಯನವರನ್ನು ನೋಡಿ,

-`ತಾವಿನ್ನು ಹೊರಡಿ` - ಅಂದ್ರು.

-`ತಾವು ಗಣೆಶ್ ಜಿ ಅಲ್ವಾ`-

ಆ ಮನುಷ್ಯ ತನ್ನ ಕತ್ತನ್ನು ಬಲಕ್ಕೆ ವಾಲಿಸಿ, ಸ್ವಲ್ಪ ನಾಲಿಗೆಯನ್ನು ಹೊರತಂದು, ಸೋಡಾ ಕನ್ನಡಕದ ಮೇಲಿಂದ ದೃಷ್ಠಿ ಹಾಯಿಸಿ ಬಲಗಾಲನ್ನು ನೆಲಕ್ಕೆ ಕುಟ್ಟುತ್ತಾ, ಬಲಗೈ ತೋರು ಬೆರಳಿನಿಂದ ಕಾಂಪೌಂಡ್ಗೆ ಹಾಕಿದ್ದ ನೇಮ್ ಬೋರ್‍ಡನ್ನು ತೋರಿಸಿದ್ರು.

ಆ ಬೋರ್ಡ್ ಮೇಲೆ `ಏಕದಂತ - ಅನುಗ್ರಹ ನಿವಾಸ` ಅಂತ ಬರೆದಿತ್ತು.

ಅಂದ್ರೆ ನೀವು ಗಣೇಶ್ ಜಿ ಅಲ್ವಾ...? - ಹಿರಣ್ಣಯ್ಯ ಕೇಳಿದ್ರು

-`ಗಣೇಶ ನ್ನ ಏಕದಂತ ಅಂತಾನೂ ಹೇಳ್ತಾರಲ್ವ...?` -  ಅವರ ಉತ್ತರ.

ಹಿರಣ್ಣಯ್ಯನೋರ್ಗೆ ಬೇಜಾರ್ ಆಗೋಯ್ತು. ಆದ್ರೆ ಜೊತೆಗೆ ಸ್ವಲ್ಪ ಸಿಟ್ಟೂ ಬಂತು.

-`ಗಣೇಶ್ ಜಿನ ಹುಡುಕ್ತಿದ್ದೀರ ಅಂತ ಕೇಳಿದ್ರಲ್ಲ ನಿಮಗೆ ಹೇಗೆ ಗೊತ್ತು..? ನಾನು ಗಣೇಶ್ ಜಿನ ಹುಡುಕ್ತಿದ್ದೀನಿ ಅಂತ.` -

-`ಆ ಗಣೇಶ್ ಜಿನ ಹುಡ್ಕೊಂಬಂದಿರೋರು ನೀವು ನಾಲ್ಕನೆಯವರು. ಈ ಮೊದ್ಲು ತುಂಕೂರಿಂದ ಸತೀಶ್ ಅನ್ನೋರು ಆಮೇಲೆ ಅವ್ರ್ಯಾರೋ ರಂಮೋಹನ್ ಮತ್ತೆ ಪಾರ್ಥಸಾರಥಿ ಅನ್ನೋರು ಬೇರ್ಬೇರೆ ದಿನ ಬಂದಿದ್ರು, ಅವ್ರು ನಿಮ್ಮ ಹಾಗೆ ಅದೆ ಪುರೋಹಿತ್ರನ್ನ, ಮತ್ತೆ ಬೇರೆಯೋರ್ನೆಲ್ಲ ಕೇಳ್ತಿದ್ರು. ನೀವೂ ಅದೇ ಗಣೆಶ್ನೇ ಹುಡುಕ್ತಿದಿರೇನೋ, ಹಾಗೆ ಸ್ವಲ್ಪ ತಮಾಷೆ ಮಾಡೋಣ ಅಂತ ಎಳ್ದಾಡ್ದೆ ಅಷ್ಟೆ` -

ಹಿರಣ್ಣಯ್ಯನೋರ್ಗೆ ರೇಗಿಹೋಯ್ತು.

-`ದೊಡ್ಡದಾಗಿ `ಗಣೇಶ್ ಜಿನ ಹುಡ್ಕ್ತಿದ್ದೀರಾ...? ` ಅಂತ ಕೇಳಿ ಏನೋ ಮಹಾ ಅನ್ನೋಹಾಗೆ ಕರ್ಕಂಬಂದು, ಹೊಟ್ಟೆ ಬಿರ್ಯ ದೋಸೇನೂ ತಿಂದು, ಬಿಲ್ನ ನನ್ನ ತಲೆಗೆ ಕಟ್ಟಿ ಈಗ ನಾನು ಏಕದಂತ, ಹಾಗಂದ್ರೂ ಗಣೇಶ ಅಲ್ವಾ ಅಂತ ಕೇಳ್ತಿದ್ದೀರಲ್ಲ..? ಆ...ಹಾಹಾ.... ಏನ್ ಜಾನ ಸ್ವಾಮಿ ನೀವು` - ಅಂದ್ರು.

-`ಏನಯ್ಯ ಹಿರಣ್ಣಯ್ಯ ನೀನು ಇನ್ನೂ ಬದ್ಲಾಗೇ ಇಲ್ವಾ. ಆಗ ಓದ್ತಿದ್ದಾಗ ಹೇಗೆ ಮಾತು ಮಾತಿಗೂ ಕೋಪ ಇತ್ತೊ ಇಗ್ಲೂ ಹಾಗೇನಾ.`-

-`ಅರೆ ನನ್ನ ಹೆಸ್ರು ಹೇಗ್ರಿ ಗೊತ್ತು ನಿಮಗೆ`-

-`ಅಯ್ಯೊ ನಿನ್ನ, ನಾನು ಕಣಯ್ಯ ಡೊಳ್ಳಣ್ಣ, ಶಾಮ ಮತ್ತು ನಾನು ಸೇರ್ಕೊಂಡು ನಿನ್ನ ಕೋಪ ನೋಡಿ ಹಿರಣ್ಯಕಷ್ಯಪ  ಅಂತ ನಿನ್ನ ಕೂಗ್ತಿದಿದ್ದು ಮರ್ತೋಯ್ತಾ....?.

-`ಅರೆರೆ ನೀನು ಡೊಳ್ಳಣ್ಣನಾ...? ಇದೇನೋ ಸೋಡಾಗ್ಲಾಸ್ ಬೇರೆ ಬಂದ್ಬಿಟ್ಟಿದೆ ಗುರ್ತೆ ಸಿಗೋಲ್ಲ,  ಅಂತು ಯಾರ್ನೊ ಹುಡ್ಕಕ್ಕೆ ಹೋಗಿ ಮತ್ಯಾರೊ ಸಿಕ್ಕಂಗಾಯ್ತು. ಸಂತೋಷ ಕಣಯ್ಯ.`- ಅಂದ್ರು ಹಿರಣ್ಣಯ್ಯ.

-`ಯಾರಪ್ಪ ಅದು `ಗಣೇಶ` ಎಲ್ಲ ಸೇರ್ಕೊಂಡು ಅಷ್ಟೊಂದು ತಲಾಷ್ ಮಾಡ್ತಿದ್ದೀರ.....?`-

-`ಮನೆ ಒಳಕ್ಕೆ ನಡ್ಯಯ್ಯ ಡೊಳ್ಳಣ್ಣ, ಅಲ್ಲಿ ಎಲ್ಲ ಹೇಳ್ತಿನಂತೆ`-

-`ಹೌದಲ್ವೆ ಬಾ ಬಾ ಒಳ್ಗೆ ನಡಿ`-

ಸ್ನೇಹಿತರಿಬ್ಬರೂ ನಗುತ್ತ ಒಳಗೆ ನಡೆದರು. ಅವರ ಸ್ನೇಹಿತ ಸಿಕ್ಕ ಸಂತೋಷದಲ್ಲಿ ಹಿರಣ್ಣಯ್ಯ ಬೇರೆ ಎಲ್ಲ ವಿಷ್ಯವನ್ನು ಪೂರ್ತಿ ಮರೆತಿದ್ದರು.

ನೋಡೋಣ ಎಲ್ಲಿ ಹೇಗೆ ಸಿಗ್ತರೊ `ಗಣೇಶ್ ಜಿ`

-ರಾಮಮೋಹನ.



 

Rating
No votes yet

Comments