ಕಾರ್ಖಾನೆಯ ಕೆಲಸ
ಕವನ
ದಿನವೂ ಹನ್ನೆರಡು ನಿಮಿಷಗಳ ನಡುಗೆ
ಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆ
ಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳು
ಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\
ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತ
ಸಮಸ್ಯೆಗಳ ಗಂಟು ಬಿಡಿಸುವ ಗಣಿತ
ಲೆಕ್ಕಾಚಾರ,ಪರಿಹಾರ ತಲೆಕೆಳಗಾಗುವುದು ಗಣಕ
ಬಿಡದೇ ತ್ರಿವಿಕ್ರಮನಂತೆ ಪ್ರಯತ್ನಿಸುವುದೇ ನಮ್ಮ ಕಾಯಕ\\
ಸಮಯ ಹೋಗುವುದೇ ತಿಳಿಯುವುದಿಲ್ಲ
ನಗುನಗುತ್ತಾ ಎಲ್ಲಕ್ಕೂ ಸಿದ್ಧರಿದ್ದೇವೆ ಸೈನಿಕರಂತೆ
ಎಲ್ಲರ ಸಮಸ್ಯೆಗಳಿಗೂ ಹುಡುಕುವೆವು ಪರಿಹಾರ
ನಮ್ಮ ಸಮಸ್ಯೆಗಳು ನೂರಾರು ಯಾರೂ ನೀಡರು ಸಹಕಾರ\\
ಜಾಡುಹೊಡಿ,ಎಣ್ಣೆಹಾಕು,ಯಂತ್ರಗಳ ಸಪ್ಪಳ
ಕತ್ತೆಯ ದುಡಿತ, ಯಂತ್ರಗಳೇ ನಮ್ಮ ಜೀವಾಳ
ಓಡಬೇಕು,ಓಡುತ್ತಲ್ಲೇ ಇರಬೇಕು ನಿಲ್ಲದ ಕುದುರೆ
ನಿಂತರೆ ಎಲ್ಲರ ಬೈಗಳೂ,ಕೈಗಳೂ ನಮ್ಮ ಕಡೆಗೆ\\
ಉತ್ಪಾದನೆಯೇ ಪ್ರಗತಿ,ಸಮಯದ ಕೊರತೆಯಿದೆ
ಹಬ್ಬ-ಹರಿದಿನಗಳು ನಡೆಯುವುದು ನಾವಿಲ್ಲದೆ
’ಜನ ಮೊದಲು ಹೃದಯ ಮುಟ್ಟು’ಘೋಷಣೆ
ಬೂಟಾಟಿಕೆಯ ಬೆಣ್ಣೆಮಾತುಗಳ ಶೋಷಣೆ\\