೭೫ ವರ್ಷ ತುಂಬಿದ ಸೇತುವೆ
ಹೋದ ಭಾನುವಾರ (ಮಾರ್ಚ್ ೧೮) ಸಿಡ್ನಿ ಹಾರ್ಬರ್ ಬ್ರಿಡ್ಜ್‌ಗೆ ೭೫ ವರ್ಷ ತುಂಬಿದೆ. ಅದರ ನಿಮಿತ್ತ ಎಲ್ಲರಿಗೂ ಆ ದಿನ ಸೇತುವೆ ಹಾಯಲು ಅವಕಾಶವಿತ್ತು. ಮೊದಲೇ ನೋಂದಾಯಿಸಿಕೊಂಡು ೧೧ ಗಂಟೆಗೆ ನಾವೂ ಹಾಯ್ದೆವು.
ಆಸ್ಟ್ರೇಲಿಯಾದಲ್ಲಿ ಒಂದು ಪರಂಪರೆಯಿದೆ. ಯಾವುದೇ ಹೊಸ ಸೇತುವೆಯೋ, ಕಟ್ಟಡವೋ ಕಟ್ಟಿದರೆ ಅದರ ಉದ್ಘಾಟನೆಯ ದಿನ 'ಜನ ಸಾಮಾನ್ಯ'ರಿಗೆ ಅದನ್ನು ಹೊಗುವ, ಸುತ್ತುವ, ಹಾಯುವ ಅವಕಾಶ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿರುತ್ತದೆ. ನನಗೆ ಗೊತ್ತಿರುವ ಹಾಗೆ, ಸಿಡ್ನಿಯ ಆನ್‌ಝಾಕ್ ಸೇತುವೆ, ಹಾರ್ಬರಿನಡಿಯ ಸುರಂಗದಾರಿ, ಒಲಂಪಿಕ್ ಸ್ಟೇಡಿಯಂ ಉದ್ಘಾಟಿಸಿದಾಗ ಇದನ್ನು ಮಾಡಿದ್ದರು. ನಾನೂ ಒಲಂಪಿಕ್ ಸ್ಟೇಡಿಯಂ ಜನರಿಗೆ ತೆರೆದಾಗ ಹೋಗಿ ಸುತ್ತಿ ಬಂದಿದ್ದೆ.
೧೯೩೦ರ ಅತೀವ ಡಿಪ್ರೆಷನ್ ಸಮಯದಲ್ಲಿ ಕಟ್ಟಲಾದ ಈ ಸೇತುವೆಗೆ ಆಗ ತೀವ್ರ ವಿರೋಧವಿತ್ತಂತೆ. ಆದರೆ ನ್ಯೂ ಸೌತ್ ವೇಲ್ಸ್ ಸರ್ಕಾರ ಹಟ ಬಿಡದೆ ಸಾಲ ಮಾಡಿ ಕಟ್ಟುವುದನ್ನು ಪೂರೈಸಿತಂತೆ. ಅದರ ಮೇಲಿನ ಸಾಲ ೧೯೮೬ರಲ್ಲಿ ಪೂರ್ಣವಾಗಿ ತೀರಿಸಿತಂತೆ!
ಸೇತುವೆ ಕಟ್ಟುವಾಗ ಪ್ರಾಣತೆತ್ತ ೧೬ಮಂದಿಯ ಸ್ಮರಣಾರ್ಥ ಒಂದು ಫಲಕವನ್ನು ಈ ಸಲ ಅನಾವರಣಗೊಳಿಸಲಾಯಿತು. ಇಷ್ಟು ವರ್ಷ ಅದು ಆಗದೇ ಇದ್ದದ್ದು ನಿಜವಾಗಲೂ ಆಶ್ಚರ್ಯವೇ! ಸೇತುವೆ ಕಟ್ಟುವಾಗ ಪ್ರಾಣ ತೆತ್ತವರ, ಕೆಲಸ ಮಾಡಿದವರ ಮೊಮಕ್ಕಳು ಹೆಮ್ಮೆಯಿಂದ ತಮ್ಮ ಮಕ್ಕಳೊಂದಿಗೆ ಸೇತುವೆ ಹಾಯ್ದರು.
ಸಿಡ್ನಿಯ ಉತ್ತರಭಾಗ ಮತ್ತು ದಕ್ಷಿಣ ಭಾಗವನ್ನು ಕೂಡಿಸುವ ಕನಸು ಹೊತ್ತು ನಿರ್ಮಿತವಾದ ಈ ಸೇತುವೆ, ಶ್ರೀಮಂತ ಉತ್ತರವನ್ನು, ಅಷ್ಟು ಶ್ರೀಮಂತವಲ್ಲದ ದಕ್ಷಿಣವನ್ನು ಒಂದುಗೂಡಿಸಿತೆ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸುಮಾರು ೨೦೦ ಸಾವಿರ ಜನ ಸೇತುವೆ ದಾಟಿದ ಈ ದಿನ, ವರ್ಷ ೨೦೦೦ದ ಸಾರಿ ಡೇ (ಕ್ಷಮೆ ಕೋರುವ ದಿನ) ನೆನಪಿಗೆ ತಂದಿತು. ಆಸ್ಟ್ರೇಲಿಯಾ ತನ್ನ ಮೂಲನಿವಾಸಿಗಳನ್ನು ನಡೆಸಿಕೊಂಡ ರೀತಿಗೆ ಕ್ಷಮೆಯಾಚಿಸುವುದಕ್ಕಾಗಿ ಮಕ್ಕಳು ಮರಿಗಳ ಸಮೇತ, ವಯೋವೃದ್ಧರೂ ಸೇರಿ 'ಸಾಮಾನ್ಯ' ಜನರು ಅಸಮಾನ್ಯ ಕಾಳಜಿ ತೋರಿಸಿದ ದಿನವದು. ಅಂದು ಇದೇ ಸೇತುವೆಯನ್ನು ಸುಮಾರು ೨೫೦ ಸಾವಿರ ಜನರು ದಾಟಿದ್ದರೆ, ಆಸ್ಟ್ರೇಲಿಯಾದ ಉದ್ದಗಲಕ್ಕೂ ೫೦೦ ಸಾವಿರ ಜನ ತಮ್ಮ ಊರು ನಗರದ ಸೇತುವೆಗಳನ್ನು ದಾಟುವುದರ ಮೂಲಕ ತಮ್ಮ ಪರವಾಗಿ ಸರ್ಕಾರ ಕ್ಷಮೆಯಾಚಿಸಬೇಕೆಂದು ಕೋರಿತು. ನೋವಿನ ಸಂಗತಿಯೆಂದರೆ, ಇದೇ ಸರ್ಕಾರ ಆ ಕಾರ್ಯಕ್ರಮವನ್ನು "ಸಾಂಕೇತಿಕ ಸೋಗಲಾಡಿತನ" ಎಂಬಂಥ ನಿಲುವು ತಾಳಿ ತಿರಸ್ಕರಿಸಿತು!
Comments
Re: ೭೫ ವರ್ಷ ತುಂಬಿದ ಸೇತುವೆ
In reply to Re: ೭೫ ವರ್ಷ ತುಂಬಿದ ಸೇತುವೆ by ismail
Re: ೭೫ ವರ್ಷ ತುಂಬಿದ ಸೇತುವೆ